ಶಂಕರಾಚಾರ್ಯರು_ಬರೆದ_ಸೌಂದರ್ಯ_ಲಹರಿ
ಅಕ್ಷೇಪ_ಮತ್ತು_ಸಮರ್ಥನೆಗಳು.
ಸೌಂದಯ೯ ಲಹರಿ ಕೃತಿಯ ಆರಂಭಿಕ ಶ್ಲೋಕವೇ "ಶಕ್ತಿಯಿಲ್ಲದೆ ಶಿವನೂ ಚಲಿಸಲಾರ" ಎಂಬ ಅದ್ವೈತ ಮತ್ತು ಶಾಕ್ತ ಸಿದ್ಧಾಂತದ ಸಮನ್ವಯವನ್ನು ಸಾರುತ್ತದೆ.
ಇದರಲ್ಲಿರುವ ಪ್ರತಿಯೊಂದು ಶ್ಲೋಕಕ್ಕೂ ಒಂದು ನಿರ್ದಿಷ್ಟ ಯಂತ್ರ, ಬೀಜಾಕ್ಷರ ಮತ್ತು ಸಾಧನಾ ಫಲವಿದೆ ಎಂದು ತಂತ್ರಶಾಸ್ತ್ರದಲ್ಲಿ ನಂಬಲಾಗುತ್ತದೆ.
ಶಿಖರಿಣೀ ವೃತ್ತದಲ್ಲಿ ರಚಿತವಾಗಿರುವ ಈ ಕೃತಿಯು ಉಪಮೆ, ರೂಪಕ ಹಾಗೂ ಶೃಂಗಾರ-ಭಕ್ತಿ ರಸಗಳಿಂದ ಕೂಡಿದ ಅತ್ಯುನ್ನತ ಸಂಸ್ಕೃತ ಕಾವ್ಯವಾಗಿದೆ.
ಸೌಂದರ್ಯ ಲಹರಿಯು ದೇವಿಯ ಅಂತರಂಗದ ಶಕ್ತಿ (ಕುಂಡಲಿನಿ ಯೋಗ) ಮತ್ತು ಬಹಿರಂಗದ ದೈವಿಕ ಸೌಂದರ್ಯವನ್ನು ಏಕಕಾಲದಲ್ಲಿ ಅನಾವರಣಗೊಳಿಸುವ ಆಧ್ಯಾತ್ಮಿಕ ಮಹಾಕಾವ್ಯ.
ಕೆಲವು ಶತಮಾನಗಳ ಹಿಂದಿನ ಈ ಗ್ರಂಥಗಳನ್ನ ಉಲ್ಲೇಖಿಸಿ ಈಗಲೂ ತಮ್ಮ ತಮ್ಮ ಸಿದ್ಧಾಂತ ಶ್ರೇಷ್ಠ ಎಂದು ನಿರೂಪಿಸಲು ಇವರೆಲ್ಲ ಖಂಡನೆ ಮಂಡನೆ ಮಾಡುತ್ತಲೇ ಇದ್ದಾರೆ ಅದನ್ನ ಎಲ್ಲರೂ ತಿಳಿಯಲು ಪ್ರಕಟಿಸಲಾಗಿದೆ.
ನನ್ನ ಹಿಂದಿನ ಲೇಖನ ಶ್ರೀಶಂಕರಾಚಾರ್ಯರು ರಚಿಸಿದ #ಮನೀಷಾ_ಪಂಚಕಂ ನಂತರ ಶ್ರೀಮಧ್ವಾಚಾರ್ಯರ ಶಿಷ್ಯರಾದ ನಾರಾಯಣ ಪಂಡಿತಾಚಾರ್ಯರು ರಚಿಸಿದ ಈ #ಮಣಿಮಂಜರಿ ಬಗ್ಗೆ ಬರೆದದ್ದು ತಾವು ಓದಿದ್ದೀರಿ.
ಈಗ ಶ್ರೀ ಶಂಕರಾಚಾರ್ಯರ ಸೌಂದಯ೯ ಲಹರಿ ಬಗ್ಗೆ ಇಲ್ಲಿ ಪ್ರಕಟ ಮಾಡಿದ್ದೇನೆ ಓದಿ.
ಸೌಂದರ್ಯ ಲಹರಿ ಓದಿದ್ದವರು ಇದ್ದರೆ ನನ್ನ ಈ ಲೇಖನ ಪೂರ್ಣ ಓದಿ ಪ್ರತಿಕ್ರಿಯಿಸಲು ವಿನಂತಿಸುತ್ತೇನೆ.
ನಾನು ಇಲ್ಲಿ ಬರೆದ ಲೇಖನ ಅವರ ಗ್ರಂಥವನ್ನ ಆಧರಿಸಿ ಬರೆದಿದ್ದೇನೆ, ಯಾವ ಪಂಥದ ಪರ ಅಥವ ವಿರುದ್ಧವಾಗಿ ಇದನ್ನು ಪ್ರಕಟಿಸಿಲ್ಲ.
ಈ ಲೇಖನ ಮಾಲೆ ಉದ್ದೇಶ ಈ ಪೂಜ್ಯರನ್ನ ಕೋಟ್ಯಾಂತರ ಬ್ರಾಹ್ಮಣೇತರ ಶೂದ್ರ ಮತ್ತು ದಲಿತರು ಪೂಜಿಸುತ್ತಾರೆ ಅವರ ಜ್ಞಾನಕ್ಕಾಗಿ ಇಲ್ಲಿ ಪ್ರಕಟ ಮಾಡಿದ್ದೇನೆ.
#ಸೌಂದರ್ಯ_ಲಹರಿ ರಚನೆಯಾದ ಕಾಲ ಮತ್ತು ಸ್ಥಳದ ಕುರಿತು ನಿಖರವಾದ ಐತಿಹಾಸಿಕ ದಿನಾಂಕಗಳ ಲಿಖಿತ ದಾಖಲೆಗಳಿಲ್ಲದಿದ್ದರೂ ಪರಂಪರೆ, ಶಂಕರ ವಿಜಯಗಳು ಮತ್ತು ಇತಿಹಾಸಕಾರರ ಸಂಶೋಧನೆಗಳ ಆಧಾರದ ಮೇಲೆ,ಸೌಂದರ್ಯ ಲಹರಿಯನ್ನು ಶ್ರೀ ಆದಿ ಶಂಕರಾಚಾರ್ಯರು ರಚಿಸಿದರು ಎಂಬುದು ಬಲವಾದ ನಂಬಿಕೆ.
ಹೀಗಾಗಿ ಇದರ ಕಾಲವು ಶಂಕರಾಚಾರ್ಯರ ಜೀವಿತಾವಧಿಗೆ ಸಂಬಂಧಿಸಿದೆ,ವಿದ್ವಾಂಸರ ಪ್ರಕಾರ ಕ್ರಿ.ಶ. 8ನೇ ಶತಮಾನದ ಅಂತ್ಯ ಅಥವಾ 9ನೇ ಶತಮಾನದ ಆರಂಭ ಎನ್ನಲಾಗಿದೆ,ಸುಮಾರು ಕ್ರಿ.ಶ. 788 – 820.
ಭಾರತೀಯ ಪುರಾಣ ಪರಂಪರೆಯ ಕೆಲವು ಮಠಗಳ ಕಾಲಗಣನೆಯ ಪ್ರಕಾರ ಇದನ್ನು ಇನ್ನೂ ಪ್ರಾಚೀನ ಕಾಲವೆಂದು ಕ್ರಿ.ಪೂ. 5ನೇ ಶತಮಾನ ಎಂದು ಪರಿಗಣಿಸಲಾಗುತ್ತದೆ.
ಸೌಂದರ್ಯ ಲಹರಿ ರಚನೆಯಾದ ಸ್ಥಳದ ಬಗ್ಗೆ ಪರಂಪರೆಯಲ್ಲಿ ಎರಡು ಪ್ರಮುಖ ನಂಬಿಕೆಗಳಿವೆ.
ಜನಪ್ರಿಯ ಐತಿಹ್ಯದ ಪ್ರಕಾರ ಆದಿ ಶಂಕರರು ಹಿಮಾಲಯದ ಕೈಲಾಸಕ್ಕೆ ಭೇಟಿ ನೀಡಿದಾಗ ಶಿವ-ಪಾರ್ವತಿಯರ ದರ್ಶನವಾಯಿತು.
ಅಲ್ಲಿ ಶಿವನು ಸ್ವತಃ ಗೋಡೆಯ ಮೇಲೆ ಬರೆದಿದ್ದ 100 ಶ್ಲೋಕಗಳ ಸ್ತೋತ್ರವನ್ನು ಶಂಕರರು ಓದಿದರು ಅದನ್ನು ಭೂಲೋಕಕ್ಕೆ ತರಲು ಹೊರಟಾಗ ನಂದಿಯು ಅದರ ಕೆಳಗಿನ ಭಾಗವನ್ನು ಅಳಿಸಿಹಾಕಿದನು.
ಹೀಗಾಗಿ ಮೊದಲ 41 ಶ್ಲೋಕಗಳು (ಆನಂದ ಲಹರಿ) ಕೈಲಾಸದಲ್ಲೇ ದೊರೆತ ದೈವಿಕ ಶ್ಲೋಕಗಳಾಗಿದ್ದು ಉಳಿದ 59 ಶ್ಲೋಕಗಳನ್ನು (ಸೌಂದರ್ಯ ಲಹರಿ) ಶಂಕರಾಚಾರ್ಯರು ಪೂರ್ಣಗೊಳಿಸಿದರು ಎಂಬ ನಂಬಿಕೆಯಿದೆ.
ಶಂಕರಾಚಾರ್ಯರು ಕಾಶಿಯಲ್ಲಿದ್ದಾಗ ಅಥವಾ ಹಿಮಾಲಯದ ತೀರ್ಥಯಾತ್ರೆಯ ಸಂದರ್ಭದಲ್ಲಿ ಇದನ್ನು ಸಂಪೂರ್ಣಗೊಳಿಸಿದರು ಎಂದು ಹಲವು ಪಠ್ಯಗಳು ಉಲ್ಲೇಖಿಸುತ್ತವೆ.
ಇನ್ನು ಕೆಲವರ ಪ್ರಕಾರ ಕರ್ನಾಟಕದ #ಶೃಂಗೇರಿಯಲ್ಲಿ ಶ್ರೀ ಶಾರದಾ ದೇವಿಯ ಪ್ರತಿಷ್ಠಾಪನೆ ಮತ್ತು ಶ್ರೀಚಕ್ರ ಉಪಾಸನೆಯ ಸಂದರ್ಭದಲ್ಲಿ ಈ ಸ್ತೋತ್ರದ ಪ್ರಸಾರವಾಯಿತು ಎಂದು ಹೇಳಲಾಗುತ್ತದೆ.
ಸೌಂದರ್ಯ ಲಹರಿಯು ಸುಮಾರು 8ನೇ– 9ನೇ ಶತಮಾನದಲ್ಲಿ ಶಂಕರಾಚಾರ್ಯರ ಹಿಮಾಲಯ/ಕಾಶೀ ಯಾತ್ರೆಯ ಸಂದರ್ಭದಲ್ಲಿ ರೂಪುಗೊಂಡಿತು ಎಂದು ಐತಿಹಾಸಿಕವಾಗಿ ಮತ್ತು ಪಾರಂಪರಿಕವಾಗಿ ಒಪ್ಪಿಕೊಳ್ಳಲಾಗಿದೆ.
ಆದಿ ಶಂಕರಾಚಾರ್ಯರು ರಚಿಸಿರುವ ಪ್ರತ್ಯೇಕವಾದ ‘ಆನಂದ ಲಹರಿ’ ಎಂಬ ಸುಮಾರು 20 ಶ್ಲೋಕಗಳ ಇನ್ನೊಂದು ಸ್ವತಂತ್ರ ಸ್ತೋತ್ರವೂ ಇದೆ ("ಪುರೇ ತತ್ತ್ವಾಖ್ಯಾತೇ..." ಎಂದು ಆರಂಭವಾಗುವ ಭವಾನಿ ಸ್ತುತಿ).
#ಆನಂದ_ಲಹರಿ'ಯು ಬೃಹತ್ ಸೌಂದರ್ಯ ಲಹರಿ ಗ್ರಂಥದ ಮೊದಲ 41 ಶ್ಲೋಕಗಳ ತತ್ವಭಾಗ.
ಇಡೀ 100 ಶ್ಲೋಕಗಳ ಗ್ರಂಥವನ್ನು ಒಟ್ಟಾಗಿ ‘#ಸೌಂದರ್ಯ_ಲಹರಿ’ ಎಂದೇ ಕರೆಯುವುದು ವಾಡಿಕೆ.
‘ಸೌಂದರ್ಯ ಲಹರಿ’ ಅರ್ಥ ಸೌಂದರ್ಯದ ಮಹಾ ಅಲೆ, ಸಂಸ್ಕೃತ ಸಾಹಿತ್ಯದಲ್ಲಿರುವ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದ ಶಾಕ್ತ ಸ್ತೋತ್ರ ಕಾವ್ಯ.
ಇದು ಕೇವಲ ಭಕ್ತಿಗೀತೆಯಷ್ಟೇ ಅಲ್ಲದೆ, ತಂತ್ರಶಾಸ್ತ್ರ, ಮಂತ್ರಶಾಸ್ತ್ರ ಮತ್ತು ಅದ್ವೈತ ತತ್ವಗಳ ಅಪೂರ್ವ ಸಂಗಮವಾಗಿದೆ.
#ಶ್ಲೋಕಗಳ_ಮುಖ್ಯ_ವಿಷಯ
ಆನಂದ ಲಹರಿ 1ರಿಂದ 41 ತಂತ್ರ, ಯೋಗ ಮತ್ತು ಶ್ರೀವಿದ್ಯಾ ಉಪಾಸನೆ,ಶಿವ ಮತ್ತು ಶಕ್ತಿಯ ಅವಿನಾಭಾವ ಸಂಬಂಧ, ಶ್ರೀಚಕ್ರ ಪೂಜಾವಿಧಾನ ಹಾಗೂ ಮೂಲಾಧಾರದಿಂದ ಸಹಸ್ರಾರದವರೆಗಿನ ಕುಂಡಲಿನಿ ಜಾಗೃತಿಯ ಆಧ್ಯಾತ್ಮಿಕ ವಿವರಣೆಯಿದೆ.
ಇದರಲ್ಲಿ ಎರಡನೇ ಭಾಗವಾದ "ಸೌಂದರ್ಯ ಲಹರಿ" 42 ರಿಂದ 100 ನೇ ಶ್ಲೋಕಗಳು ಹೆಚ್ಚು ಆಕ್ಷೇಪ ಮತ್ತು ಚರ್ಚೆಗಳಿಗೆ ಒಳಗಾಗಿದೆ.
#ವಿಶೇಷವಾಗಿ_ಆಕ್ಷೇಪ ವ್ಯಕ್ತವಾಗುವ ಪ್ರಮುಖ ಶ್ಲೋಕಗಳ ಗುಂಪುಗಳು ಮತ್ತು ವಿವರಗಳು ಇಲ್ಲಿವೆ.
1. ದೇವಿಯ ಶಾರೀರಿಕ ಅಂಗಾಂಗಗಳ ವರ್ಣನೆ (ಶ್ಲೋಕ 62 ರಿಂದ 82) ಈ ಭಾಗದಲ್ಲಿ ದೇವಿಯ ದೇಹದ ನಡು, ಸ್ತನಗಳು, ಹೊಟ್ಟೆಯ ಮಡಿಕೆಗಳು (ತ್ರಿವಳಿ), ನಾಭಿ (ಹೊಕ್ಕುಳು) ಮತ್ತು ನಿತಂಬಗಳನ್ನು ಅತ್ಯಂತ ನಿಕಟವಾಗಿ ಮತ್ತು ಶೃಂಗಾರ ರಸ ಪ್ರಧಾನವಾಗಿ ವರ್ಣಿಸಲಾಗಿದೆ.
ಶ್ಲೋಕ 70 ರಿಂದ 74 ಜಗನ್ಮಾತೆಯ ಸ್ತನಗಳ ಗಾತ್ರ, ಕಾಂತಿ ಮತ್ತು ಆಕಾರವನ್ನು ಲೌಕಿಕ ಕಾವ್ಯದ ನಾಯಕಿಯಂತೆ ವರ್ಣಿಸಿರುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ.
ಶ್ಲೋಕ 78 ರಿಂದ 81 ದೇವಿಯ ಆಳವಾದ ನಾಭಿಯನ್ನು ಮನ್ಮಥನ ಅಗ್ನಿಕುಂಡಕ್ಕೆ ಮತ್ತು ನಡುವನ್ನು ಭಾರದಿಂದ ಮುರಿದುಬೀಳುವಂತೆ ವರ್ಣಿಸಿರುವುದು ಸನ್ಯಾಸಿ ಶಂಕರರ ಬಾಯಲ್ಲಿ ಆಕ್ಷೇಪಾರ್ಹವೆಂದು ಕೆಲವರು ವಾದಿಸುತ್ತಾರೆ.
2. ಮೊದಲ ಭಾಗವಾದ ಆನಂದ ಲಹರಿಯಲ್ಲಿಯೂ ಕೆಲವು ನಿರ್ದಿಷ್ಟ ಶ್ಲೋಕಗಳು ಮತ್ತು ಅವುಗಳ ತಾಂತ್ರಿಕ ಫಲಶ್ರುತಿಗಳ ಮೇಲೆ ಆಕ್ಷೇಪಗಳಿವೆ.
ತಾಂತ್ರಿಕ ವಶೀಕರಣ ಮತ್ತು ಕಾಮಪ್ರಚೋದಕ ಪ್ರಯೋಗಗಳು ಶ್ಲೋಕ 5,18 ಮತ್ತು 19 ರಲ್ಲಿ ದೇವಿಯ ಈ ಶ್ಲೋಕಗಳನ್ನು ಜಪಿಸಿದರೆ ಸುಂದರ ಸ್ತ್ರೀಯರು ಸಾಧಕನ ವಶವಾಗುತ್ತಾರೆ,
#ರಂಭೆ_ಊರ್ವಶಿಯರಂತಹ ಅಪ್ಸರೆಯರೇ ಆಕರ್ಷಿತರಾಗುತ್ತಾರೆ ಎಂಬ ವಿವರಣೆಗಳಿವೆ.
ಮೋಕ್ಷದ ಹಂಬಲವಿರುವ ಆಧ್ಯಾತ್ಮಿಕ ಗ್ರಂಥದಲ್ಲಿ ಇಂತಹ ಭೌತಿಕ/ಲೈಂಗಿಕ ಆಕರ್ಷಣೆಯ ‘ವಶೀಕರಣ’ ಫಲಶ್ರುತಿಗಳು ಇರುವುದು ಆಧ್ಯಾತ್ಮಿಕ ಮೌಲ್ಯಕ್ಕೆ ವಿರುದ್ಧವಾಗಿದೆ ಎಂಬ ವಾದವಿದೆ.
ಈ ಆಕ್ಷೇಪಗಳಿಗೆ ಶಾಕ್ತ ಮತ್ತು ತಂತ್ರ ಪರಂಪರೆ ನೀಡುವ ಉತ್ತರ
ತಂತ್ರಶಾಸ್ತ್ರದಲ್ಲಿ ದೇವಿಯ ಸ್ತನಗಳು ‘ಜ್ಞಾನಾಮೃತ’ ಮತ್ತು ‘ವಾತ್ಸಲ್ಯ’ದ ಸಂಕೇತ, ನಾಭಿಯು ಸೃಷ್ಟಿಯ ಮೂಲ ‘ಮಣಿಪೂರಕ ಚಕ್ರ’ದ ಸಂಕೇತ.
ಪ್ರಾಚೀನ 'ನಖ-ಶಿಖ' ವರ್ಣನಾ ಪರಂಪರೆಯ ಪ್ರಕಾರ ದೈವಿಕ ಸೌಂದರ್ಯವನ್ನು ವರ್ಣಿಸುವಾಗ ಯಾವುದೇ ಅಂಗವನ್ನು ಅಸ್ಪೃಶ್ಯವೆಂದು ಭಾವಿಸದೆ,ಶಾಕ್ತ ಸಂಪೂರ್ಣ ಪ್ರಕೃತಿ ಸ್ವರೂಪವಾಗಿ ಕಾಣಲಾಗುತ್ತದೆ.
ಶ್ರೀ ಆದಿ ಶಂಕರಾಚಾರ್ಯರು ರಚಿಸಿದ್ದಾರೆಂದು ನಂಬಲಾದ ಸೌಂದರ್ಯ ಲಹರಿಯು ಶಾಕ್ತ ಪರಂಪರೆ ಮತ್ತು ಸಂಸ್ಕೃತ ಸಾಹಿತ್ಯದ ಅತ್ಯಂತ ಪ್ರಸಿದ್ಧ ಸ್ತೋತ್ರಗಳಲ್ಲಿ ಒಂದಾಗಿದೆ.
ಆದಾಗ್ಯೂ ಕಾಲಕಾಲಕ್ಕೆ ಸಾಹಿತ್ಯಿಕ, ತಾತ್ವಿಕ ಹಾಗೂ ಸಾಮಾಜಿಕ ನೆಲೆಗಟ್ಟುಗಳಲ್ಲಿ ಕೆಲವು ಚರ್ಚೆಗಳು ಮತ್ತು ಆಕ್ಷೇಪಗಳು ವ್ಯಕ್ತವಾಗಿವೆ.
ಮುಖ್ಯವಾಗಿ ಚರ್ಚೆಗೆ ಗ್ರಾಸವಾಗುವ ಪ್ರಮುಖ ಅಂಶಗಳು ದೇವಿಯ ಅಂಗಾಂಗಗಳ ಶೃಂಗಾರಮಯ ವರ್ಣನೆ (ನಖ-ಶಿಖ ವರ್ಣನೆ).
ಸೌಂದರ್ಯ ಲಹರಿಯ ಎರಡನೇ ಭಾಗದಲ್ಲಿ (42 ರಿಂದ 100ನೇ ಶ್ಲೋಕಗಳು) ಪಾರ್ವತೀ ದೇವಿಯ ಸೌಂದರ್ಯವನ್ನು ತಲೆಯಿಂದ ಕಾಲಿನವರೆಗೆ ಅತ್ಯಂತ ನಿಕಟವಾಗಿ ವರ್ಣಿಸಲಾಗಿದೆ.
#ಆಕ್ಷೇಪ: ಸನ್ಯಾಸಿ ಹಾಗೂ ಜ್ಞಾನಮಾರ್ಗದ ಪ್ರತಿಪಾದಕರಾದ ಶಂಕರಾಚಾರ್ಯರು, ಜಗನ್ಮಾತೆಯ ಸ್ತನಗಳು, ನಡುವಿನ ಮಡಿಕೆಗಳು, ನಿತಂಬ ಮುಂತಾದ ಅಂಗಾಂಗಗಳನ್ನು ಶೃಂಗಾರ ರಸ ಪ್ರಧಾನವಾಗಿ ವರ್ಣಿಸುವುದು ಎಷ್ಟು ಸೂಕ್ತ ಎಂಬ ಪ್ರಶ್ನೆಯನ್ನು ಕೆಲವರು ಎತ್ತುತ್ತಾರೆ.
#ಸಮರ್ಥನೆ/ಪರಂಪರೆಯ ದೃಷ್ಟಿಕೋನ:
ಪ್ರಾಚೀನ ಸಂಸ್ಕೃತ ಕಾವ್ಯ ಪರಂಪರೆಯಲ್ಲಿ (ವಿಶೇಷವಾಗಿ ಶಾಕ್ತ ಶಾಸ್ತ್ರದಲ್ಲಿ) ಮಾತೃದೇವತೆಯು ಪ್ರಕೃತಿಯ ಸಂಕೇತ, ಆಕೆಯ ಸೌಂದರ್ಯವು ಸೃಷ್ಟಿಯ ಪೂರ್ಣತೆಯ ಪ್ರತೀಕವೇ ಹೊರತು ಲೌಕಿಕ ಕಾಮವಲ್ಲ.
ಇದನ್ನು ಯೋಗ ಮಾರ್ಗದಲ್ಲಿ ಕುಂಡಲಿನಿ ಶಕ್ತಿಯ ವಿಭಿನ್ನ ಚಕ್ರಗಳ ಜಾಗೃತಿಯ ಸಂಕೇತವೆಂದೂ ವ್ಯಾಖ್ಯಾನಿಸಲಾಗುತ್ತದೆ.
#ಕರ್ತೃತ್ವದ_ವಿವಾದ.
ಅದ್ವೈತ ವೇದಾಂತದ ಮೂಲ ತತ್ವಗಳಿಗೆ ಹಾಗೂ ಸೌಂದರ್ಯ ಲಹರಿಯ ವಿಷಯಕ್ಕೆ ಇರುವ ವ್ಯತ್ಯಾಸಗಳ ಮೇಲೆ ವಿದ್ವಾಂಸರಲ್ಲಿ ವಾದಗಳಿವೆ.
#ಆಕ್ಷೇಪ: ಅದ್ವೈತ ಸಿದ್ಧಾಂತದಲ್ಲಿ 'ನಿರ್ಗುಣ ನಿರಾಕಾರ ಬ್ರಹ್ಮ'ಕ್ಕೆ ಪ್ರಾಧಾನ್ಯವಿದೆ ಆದರೆ ಸೌಂದರ್ಯ ಲಹರಿಯು ತಂತ್ರಶಾಸ್ತ್ರ, ಮಂತ್ರ, ಯಂತ್ರ ಹಾಗೂ ಸಗುಣೋಪಾಸನೆಯಿಂದ ಕೂಡಿದೆ ಹೀಗಾಗಿ ಇದು ಶಂಕರಾಚಾರ್ಯರ ಕೃತಿಯಲ್ಲ, ನಂತರದ ಯಾರೋ ಶಾಕ್ತ ವಿದ್ವಾಂಸರು ರಚಿಸಿರಬಹುದು ಎಂಬುದು ಕೆಲವು ಸಂಶೋಧಕರ ವಾದ.
#ಸಮರ್ಥನೆ:
ಶಂಕರರು ಕೇವಲ ಜ್ಞಾನಮಾರ್ಗಿಯಷ್ಟೇ ಅಲ್ಲದೆ, ಜನಸಾಮಾನ್ಯರ ಭಕ್ತಿಗಾಗಿ ಪಂಚಾಯತನ ಪೂಜೆ ಹಾಗೂ ಅನೇಕ ಸ್ತೋತ್ರಗಳನ್ನು ರಚಿಸಿದ ಆಚಾರ್ಯರಾಗಿದ್ದರು ಎಂಬ ನಂಬಿಕೆ ಪರಂಪರೆಯಲ್ಲಿದೆ.
ಸೌಂದರ್ಯ ಲಹರಿಯ ಪ್ರತಿಯೊಂದು ಶ್ಲೋಕಕ್ಕೂ ಒಂದೊಂದು ನಿರ್ದಿಷ್ಟ ‘ಯಂತ್ರ’, ‘ಬೀಜಾಕ್ಷರ’ ಮತ್ತು ‘ಪ್ರಯೋಗ’ (ಫಲಶ್ರುತಿ) ಇದೆ ಎಂದು ತಂತ್ರಶಾಸ್ತ್ರ ಹೇಳುತ್ತದೆ.
#ಆಕ್ಷೇಪ:
ಕೆಲವು ಶ್ಲೋಕಗಳ ಫಲಶ್ರುತಿಯಲ್ಲಿ ವಶೀಕರಣ, ಶತ್ರುನಾಶ ಅಥವಾ ಭೌತಿಕ ಸುಖಗಳ ಪ್ರಾಪ್ತಿಯಂತಹ ಅಂಶಗಳು ಉಲ್ಲೇಖವಾಗುವುದರಿಂದ, ಇದು ಆಧ್ಯಾತ್ಮಿಕ ಉನ್ನತಿಗಿಂತ ಮಾಂತ್ರಿಕ/ತಾಮಸಿಕ ಆಚರಣೆಗಳಿಗೆ ಪ್ರೇರಣೆ ನೀಡುತ್ತದೆ ಎಂಬ ಟೀಕೆಯಿದೆ.
#ಸಮರ್ಥನೆ:
ಇವು ತಂತ್ರಶಾಸ್ತ್ರದ 'ಶ್ರೀವಿದ್ಯಾ' ಉಪಾಸನೆಯ ಗೂಢ ಭಾಗಗಳಾಗಿದ್ದು, ಯೋಗ್ಯ ಗುರುವಿನ ಮಾರ್ಗದರ್ಶನವಿಲ್ಲದೆ ಇವುಗಳನ್ನು ಕೇವಲ ಬಾಹ್ಯ ಅರ್ಥದಲ್ಲಿ ನೋಡುವುದು ತಪ್ಪು ಎನ್ನಲಾಗುತ್ತದೆ.
ಸೌಂದರ್ಯ ಲಹರಿಯನ್ನು ಕೇವಲ ಲೌಕಿಕ ದೃಷ್ಟಿಯಿಂದ ನೋಡಿದಾಗ ಶೃಂಗಾರ ವರ್ಣನೆ ಆಕ್ಷೇಪಾರ್ಹವೆನಿಸಿದರೂ ಶಾಕ್ತ ಮತ್ತು ಯೋಗ ಪರಂಪರೆಯ ಪ್ರಕಾರ ಇದು ಅಂತರಂಗದ ಕುಂಡಲಿನಿ ಸಾಧನೆ ಮತ್ತು ದೈವಿಕ ಸೌಂದರ್ಯದ ಸಾಂಕೇತಿಕ ಕಾವ್ಯವಾಗಿದೆ.
#soundaryalahari #anandalahari #shankaracharyaru #sringeri #kashi #kesmdarscx
Comments
Post a Comment