# ಇಂತಹ ತೀಮಾ೯ನಕ್ಕೆ ಬರುತ್ತಾನೆ ಬಾಲ್ಯದ ಗೆಳೆಯ ಅಂತ ಗೊತ್ತಿರಲಿಲ್ಲ# ಮಾಚ್೯ 12 ರ ಮಂಗಳವಾರ ಬೆಳಿಗ್ಗೆ ರಿಪ್ಪನ್ ಪೇಟೆಯಿಂದ ಸ್ವಲ್ಪ ದೂರದ ಶಿವಮೊಗ್ಗ ಮಾಗ೯ದಲ್ಲಿ ದೂನ ಎಂಬಲ್ಲಿ ಬಾಲ್ಯದ ಗೆಳೆಯ ಸಿಲ್ವೆಸ್ಟ್ ರ್ ಜೋಸೆಪ್ ಡಿಕಾಸ್ಟಾ (ನಿಕ್ ನೇಮ್ ಪುಪ್ಪಾ) ನ ಬೈಕ್ ಮತ್ತು ಶುOಠಿ ತುಂಬಿ ಬರುತ್ತಿದ್ದ ಕ್ಯಾ೦ಟರಿಗೆ ಬೀಕರ ಅಪಘಾತವಾಗಿ ಮೃತನಾದ ಸುದ್ದಿ ಬಂದಾಗ ನಾನು ವೈಯಕ್ತಿಕ ಕೆಲಸದ ಮೇಲೆ ಗೋವಾ ಪ್ರಯಾಣದಲ್ಲಿದ್ದೆ. ನನಗೆ ಇದು ಅಪಘಾತ ಅನ್ನಿಸಲಿಲ್ಲ ತಾನಾಗೆ ಇಂತಹ ಆತ್ಮಹತ್ಯ ಪ್ರಯತ್ನವಾಯಿತೆ ಅಂತ ಅನುಮಾನ ಪಟ್ಟಿ. ನನಗಿಂತ ಎರಡು ತರಗತಿ ಮುಂದಿದ್ದ ಪುಪ್ಪಾ ನಾವೆಲ್ಲ ಬಾಲ್ಯ ಗೆಳೆಯರು, ಕ್ರಿಕೆಟ್, ಈಜು, ಯೋಗಾಸನ ಮತ್ತು ಕರಾಟೆ ನಮ್ಮ ನಿತ್ಯ ಪ್ರಾಕ್ಟೀಸ್ ಇದರ ಮಧ್ಯ ಪಟ್ಯೇತರ ಪುಸ್ತಕಗಳ ಓದು. ಬೆಳೆಗ್ಗೆ 5ಕ್ಕೆ ಮನೆಯಿಂದ ಬಸವನ ಹೊಂಡದ ಭಂಗಿ ಭೂತಪ್ಪನ ಕೊಳದವರೆಗೆ ಓಡುವುದು, ಅಲ್ಲಿ ಈಜಾಡಿ ಪುನಃ ಓಡುತ್ತಾ ಬಂದು ನಮ್ಮ ಊರಿನ ಪ್ರವಾಸಿ ಮಂದಿರದ ಹೊರ ಕಟಾಂಜನದಲ್ಲಿ ಯೋಗಾಸನ. ಇದರ ಮಧ್ಯ ಹಿಮಾಲಯದ ಸ್ವಾಮಿ ಶಿವಾನಂದರು ಬರೆದ ಪುಸ್ತಕ "ಬ್ರಹ್ಮಚಾಯ೯ವೇ ಜೀವನ ವೀಯ೯ ನಾಶವೆ ಮೃತ್ಯು" ಎ೦ಬ ಪುಸ್ತಕ ನಮ್ಮಿಬ್ಬರನ್ನ ತಲ್ಲಣಗೊಳಿಸಿತ್ತು, ಇಬ್ಬರೂ ಕನ್ಯಾಕುಮಾರಿಗೆ ಹೋಗಿ ಅಲ್ಲಿ ಸಂನ್ಯಾಸ ಸ್ಟೀಕರಿಸುವುದೆಂದು ತೀಮಾ೯ನಿಸಿ ಬಿಟ್ಟಿದ್ದೆವು ಆಗ ನನ್ನ ವಯಸ್ಸು 12 ಇರ ಬಹುದು. ...