ಮುಹೂರ್ತ_ಮೀರಿದ_ಮದುವೆ_37_ವಸಂತಗಳ
ಸುಂದರ_ಪಯಣ.
ಅಂದು ಶಿವಮೊಗ್ಗದ ಕೋಟೆ ಆಂಜನೇಯನ ಸನ್ನಿಧಿಯಲ್ಲಿ ನಡೆದ ಆ ರೋಚಕ ಕಥೆ!..
ಜೀವನದಲ್ಲಿ ಕೆಲವು ನೆನಪುಗಳು ಕಾಲ ಸರಿದಂತೆ ಮಾಸುವುದಿಲ್ಲ ಬದಲಿಗೆ ಇನ್ನಷ್ಟು ಹಸನಾಗುತ್ತವೆ.
ಇಂದು ನಮ್ಮ ದಾಂಪತ್ಯ ಜೀವನಕ್ಕೆ ಭರ್ತಿ 37 ವರ್ಷ,
ನಮ್ಮದು ಅಂತರ್ಜಾತಿ ಪ್ರೇಮ ವಿವಾಹ.
ಮೊದಲು ಶಿವಮೊಗ್ಗದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಗುಟ್ಟಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದೆವು,ಎರಡು ವರ್ಷಗಳ ಕಾಲ ಕಾದ ನಂತರ ಕೊನೆಗೂ ನಮ್ಮ ತಂದೆಯವರನ್ನು ಒಪ್ಪಿಸಿ 1989ರ ಆಗಸ್ಟ್ 23ರಂದು ಶಿವಮೊಗ್ಗದ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಅಧಿಕೃತವಾಗಿ ಶಾಸ್ತ್ರೋಕ್ತವಾಗಿ ಮದುವೆಯಾಗಲು ದಿನ ನಿಗದಿಯಾಗಿತ್ತು.
ಆದರೆ ಅಂದು ನಡೆದ ಘಟನೆಗಳು ಯಾವುದೋ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯಕ್ಕಿಂತ ಕಡಿಮೆಯಿರಲಿಲ್ಲ!
ಅವತ್ತು ನಮ್ಮೂರಲ್ಲಿ ಧಾರಾಕಾರ ಮಳೆ,ಇನ್ನೇನು ದೇವಸ್ಥಾನಕ್ಕೆ ಹೊರಡಬೇಕು ಅನ್ನುವಾಗಲೇ ನಮ್ಮ ತಂದೆಯವರು "ನಾನು ಮದುವೆಗೆ ಬರುವುದಿಲ್ಲ" ಎಂದು ಹಠ ಹಿಡಿದುಬಿಟ್ಟರು.
ಪರಿಸ್ಥಿತಿ ತೀರಾ ಗಂಭೀರವಾಗಿ ಕೊನೆ ಗಳಿಗೆಯಲ್ಲಿ ಎಲ್ಲರನ್ನೂ ಸಮಾಧಾನಪಡಿಸಿ ಒಪ್ಪಿಸುವಷ್ಟರಲ್ಲಿ ಸಮಯ ಮೀರಿಹೋಗಿತ್ತು.
ಸುರಿಯುವ ಮಳೆಯಲ್ಲೇ ಹೇಗೋ ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯ ತಲುಪಿದೆವು.
ಆದರೆ ಅಷ್ಟರಲ್ಲಾಗಲೇ ವಿವಾಹಕ್ಕೆ ನಿಗದಿಯಾಗಿದ್ದ ಶುಭ ಮುಹೂರ್ತ ಕಳೆದುಹೋಗಿತ್ತು!
ಅಲ್ಲಿ ನಮಗಾಗಿ ಕಾದಿದ್ದ ಪ್ರಧಾನ ಅರ್ಚಕರು ವಿಶ್ವ ಹಿಂದೂ ಪರಿಷತ್ ಪ್ರಮುಖರಾಗಿದ್ದ ನರಸಿಂಹಮೂರ್ತಿ ಅಯ್ಯಂಗಾರರು "ಮುಹೂರ್ತವಿಲ್ಲದ ಈ ಅವೇಳೆಯಲ್ಲಿ ಮದುವೆ ಶಾಸ್ತ್ರ ಮಾಡುವುದು ಶಾಸ್ತ್ರವಿರೋಧ. ನಾನು ಪುರೋಹಿತ್ಯ ವಹಿಸಿದರೆ ನನಗೂ ದೋಷ ಬರುತ್ತದೆ, ಮದುವೆ ಮಾಡಲು ಸಾಧ್ಯವಿಲ್ಲ" ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು.
ನನಗೆ ತಲೆಯ ಮೇಲೆ ಸಿಡಿಲು ಬಡಿದಂತಾಯಿತು,ನಾನು ಅವರ ಬಳಿ "ಸ್ವಾಮಿ ಇದು ಪ್ರೇಮ ಹಾಗೂ ಅಂತರ್ಜಾತಿ ವಿವಾಹ. ಎರಡು ಕುಟುಂಬಗಳನ್ನು ಒಪ್ಪಿಸಿ, ತಂದೆಯವರನ್ನು ಕರೆತರುವಷ್ಟರಲ್ಲಿ ತಡವಾಗಿ ಮುಹೂರ್ತ ತಪ್ಪಿಹೋಯಿತು ಮುಂದೆ ನಮಗೆ ಏನೇ ಕಷ್ಟ ಬಂದರೂ ಪರವಾಗಿಲ್ಲ ದಯವಿಟ್ಟು ಮದುವೆ ಶಾಸ್ತ್ರ ಮುಗಿಸಿಕೊಡಿ ಇಲ್ಲದಿದ್ದರೆ ನಮ್ಮ ಬದುಕು ಅತಂತ್ರವಾಗುತ್ತದೆ" ಎಂದೆ,ನನ್ನ ವಿನಂತಿ ಹಾಗೂ ಸನ್ನಿವೇಶದ ಗಂಭೀರತೆಯನ್ನು ಅರ್ಥಮಾಡಿಕೊಂಡ ಅಯ್ಯಂಗಾರರು ಕೊನೆಗೂ ಮುಹೂರ್ತವಿಲ್ಲದ ಆ ಅವೇಳೆಯಲ್ಲೇ ನಮ್ಮ ವಿವಾಹ ಶಾಸ್ತ್ರವನ್ನು ನೆರವೇರಿಸಿಕೊಟ್ಟರು.
ಅಂದು ಯಾವುದೇ ಆಡಂಬರದ ಲಗ್ನಪತ್ರಿಕೆ ಇರಲಿಲ್ಲ ಅತ್ಯಂತ ಆಪ್ತರಾದ ಕೇವಲ 25 ಜನ ಸಾಕ್ಷಿಗಳಷ್ಟೇ ಇದ್ದರು.
ಮದುವೆಯ ನಂತರ ಶಿವಮೊಗ್ಗದ ಜ್ಯೂವೆಲ್ ರಾಕ್ ಹೋಟೆಲ್‌ನಲ್ಲಿ ಬಂದ ಅತಿಥಿಗಳಿಗೆ ಅವರವರ ಇಷ್ಟದಂತೆ ಊಟೋಪಚಾರ ಮಾಡಿಸಿ ಮನೆ ಸೇರಿದ್ದೆವು.
ಇವತ್ತಿನವರೆಗೂ ನಾನು, ನನ್ನ ಪತ್ನಿ ಮತ್ತು ನಮ್ಮಿಬ್ಬರು ಮಕ್ಕಳು ಹುಟ್ಟುಹಬ್ಬದ ಕೇಕ್ ಕತ್ತರಿಸಿಲ್ಲ, ಅದ್ಧೂರಿ ವಿವಾಹ ವಾರ್ಷಿಕೋತ್ಸವ ಆಚರಿಸಿಲ್ಲ.
ಸಂಭ್ರಮಾಚರಣೆಯ ಅಬ್ಬರವಿಲ್ಲದಿದ್ದರೂ ಅಂದು ಶುಭ ಮುಹೂರ್ತವೇ ಇಲ್ಲದೆ ಆರಂಭವಾದ ನಮ್ಮ ಸರಳ ದಾಂಪತ್ಯ ಬದುಕು ಇಂದು ಯಾವುದೇ ಕೊರತೆಯಿಲ್ಲದೆ ಸುಖ-ಶಾಂತಿಯಿಂದ 37 ವಸಂತಗಳನ್ನು ಪೂರೈಸಿದೆ.
37ನೇ ವಿವಾಹ ವಾರ್ಷಿಕೋತ್ಸವದಲ್ಲಿ ಹೊಸ ಅತಿಥಿ ಮೊಮ್ಮಗನಿಗೆ 7 ತಿಂಗಳು, ನಾವಿಬ್ಬರು ಅಜ್ಜ-ಅಜ್ಜಿ ಆಗಿದ್ದೇವೆ ಇದು ನನ್ನ ಜೀವನದ ಬಂಡಿ.
ಕಾಲ ಎಷ್ಟೇ ಬದಲಾದರೂ, ಅಂದು ಮಳೆಯಲ್ಲಿ ಮಿಂದೆದ್ದು, ಮುಹೂರ್ತ ತಪ್ಪಿ, ಪ್ರೀತಿಯೊಂದನ್ನೇ ನಂಬಿ ಕಟ್ಟಿಕೊಂಡ ಆ ದಿನದ ನೆನಪು ಮಾತ್ರ ಎಂದಿಗೂ ಅಚ್ಚಳಿಯದು.
#WeddingAnniversary #Memories #37YearsOfTogetherness #IntercasteMarriage #LifeJourney #Shivamogga #koteanhaneytemple
Comments
Post a Comment