#ಒಂದು_ಕಾಲದ_ಮಲೆನಾಡಿನ_ಜವಾರಿ_ಶುಂಠಿ #ಕಳೆದು_ಹೋಗಿದ್ದ_ತಳಿ_ಬೀಜ_ನೆರೆರಾಜ್ಯದಿಂದ_ಬಂದಿದೆ. ಕೇರಳ ರಾಜ್ಯದ ಕೃಷಿಕರಿಂದ ರಾಜ್ಯಕ್ಕೆ ಪರಿಚಯಸಲ್ಪಟ್ಟ ರಗೋಡಿ ಮತ್ತು ಹಿಮಾಚಲ ಶುಂಠಿ ತಳಿಗಳಿಂದ ನಮ್ಮ ಭಾಗದ ಪುರಾತನ ದೇಸಿ ಶುಂಠಿ ಕ್ರಮೇಣ ನಾಪತ್ತೆ ಆಗಿಬಿಟ್ಟಿತ್ತು. ಹೆಚ್ಚು ರಾಸಾಯನಿಕ ಗೊಬ್ಬರ ಮತ್ತು ತೀಕ್ಷ್ಣ ಕ್ರಿಮಿನಾಶಕದ ಬಳಕೆಯಿಂದ ಹೆಚ್ಚು ಬೆಳೆ ಮತ್ತು ಹೆಚ್ಚು ಆದಾಯ ಈ ಹೊಸ ತಳಿಗಳನ್ನ ಜನಪ್ರಿಯಗೊಳಿಸಿತ್ತು. ಹಸಿ ಶುಂಠಿ ನಿತ್ಯ ತರಕಾರಿ ಮಾರುಕಟ್ಟೆಗೆ ಹೋದರೆ, ಒಣಗಿಸಿ ಗಂದಕದ ಹೊಗೆ ಹಾಕುತ್ತಿದ್ದ ಒಣ ಶುಂಠಿ ಔಷದ ತಯಾರಿಕೆ, ಸಾಂಬಾರ್ ಪುಡಿಗಳಿಗೆ ಮತ್ತು ಸೌದಿ ದೇಶಗಳಿಗೆ ಹೆಚ್ಚು ಹೋಗುತ್ತಿತ್ತು. ರಗೋಡಿ ಮತ್ತು ಹಿಮಾಚಲ ಶುಂಠಿಗಳಲ್ಲಿ ಶುಂಠಿಯ ಹೊರ ಭಾಗ ಮಾತ್ರ ಗಟ್ಟಿ, ಒಳ ತಿರಳು ಮೃದು ಮತ್ತು ಹಾಗೆಯೇ ತಿನ್ನಬಹುದು ಆದರೆ ನಮ್ಮ ನಾಟಿ ತಳಿ ಸಿಪ್ಪೆ ತೆಳು ಒಳ ಭಾಗದ ತಿರುಳು ನಾರು ಮತ್ತು ಬರಿ ಬಾಯಿಯಲ್ಲಿ ತಿನ್ನಲಾರದಷ್ಟು ಖಾರ. ಈಗ ಪುನಃ ಹಳೆಯ ನಾಟಿ ತಳಿ (ಜವಾರಿ) ಗೆ ಮಾರುಕಟ್ಟೆಯಲ್ಲಿ ಬೆಲೆ ಬರುತ್ತಿದೆ, ಇದಕ್ಕೆ ರೋಗ ಕಡಿಮೆ ಆದ್ದರಿಂದ ಕ್ರಿಮಿನಾಶಕ ಬಳಕೆ ಬೇಕಾಗಿಲ್ಲ ಮತ್ತು ರಾಸಾಯನಿಕ ಗೊಬ್ಬರ ಇಲ್ಲದೆ ಹೆಚ್ಚು ಇಳುವರಿ ಸಾಧ್ಯವಿರುವುದರಿಂದ ಮಹಾರಾಷ್ಟ್ರ ಮತ್ತು ಗುಜರಾತಿನ ರೈತರು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ...