ನಿಶಿದಿ ಮಂಟಪದ ಒಳಗೆ ನಿಶಿದಿ ಶಾಸನವನ್ನು ಅಥವಾ ನಿಶಿದಿ ಕಲ್ಲನ್ನು ಇಡುವ ಜಾಗಕ್ಕೆ ಧಾರ್ಮಿಕ ಮತ್ತು ವಾಸ್ತುಶಿಲ್ಪದ ದೃಷ್ಟಿಯಿಂದ ನಿರ್ದಿಷ್ಟವಾದ ಸ್ಥಾನವಿರುತ್ತದೆ. ಸಾಮಾನ್ಯವಾಗಿ ಅದನ್ನು ಮಂಟಪದ ಕೇಂದ್ರಭಾಗದಲ್ಲಿ, ಮಧ್ಯದಲ್ಲಿ, ಹೆಚ್ಚಿನ ನಿಶಿದಿ ಮಂಟಪಗಳಲ್ಲಿ ನಾಲ್ಕು ಕಂಬಗಳ ಮಧ್ಯದಲ್ಲಿ ಒಂದು ಸಣ್ಣ ಪೀಠವನ್ನು ನಿರ್ಮಿಸಿ ಅದರ ಮೇಲೆ ನಿಶಿದಿ ಶಾಸನವನ್ನು ನೇರವಾಗಿ ಎಲ್ಲರಿಗೂ ಕಾಣುವಂತೆ ಮಧ್ಯಭಾಗದಲ್ಲಿ ನಿಲ್ಲಿಸಲಾಗಿರುತ್ತದೆ. ಮಂಟಪಕ್ಕೆ ಪ್ರದಕ್ಷಿಣೆ ಹಾಕುವಾಗ ಅಥವಾ ದರ್ಶನ ಪಡೆಯುವಾಗ ಇದು ಪ್ರಮುಖ ಆಕರ್ಷಣೆಯಾಗಿರುತ್ತದೆ. ಹಿಂಭಾಗದ ಗೋಡೆಗೆ ಅಂಟಿಕೊಂಡಂತೆ ಮಂಟಪವು ಒಂದು ಕಡೆ ಮುಚ್ಚಲ್ಪಟ್ಟಿದ್ದರೆ ಅಥವಾ ಹಿಂಭಾಗದಲ್ಲಿ ಗೋಡೆಯನ್ನು ಹೊಂದಿದ್ದರೆ ಶಾಸನ ಕಲ್ಲನ್ನು ಹಿಂಭಾಗದ ಗೋಡೆಯ ಮಧ್ಯಭಾಗದಲ್ಲಿ ಸ್ಥಾಪಿಸಿ ಅದು ಪೂರ್ವಕ್ಕೆ ಅಥವಾ ಉತ್ತರಕ್ಕೆ ಮುಖ ಮಾಡುವಂತೆ ಇಡಲಾಗುತ್ತದೆ. ಕೆಲವು ವಿಶೇಷ ನಿಶಿದಿ ಮಂಟಪಗಳಲ್ಲಿ ಸಲ್ಲೇಖನ ವ್ರತ ಕೈಗೊಂಡ ಮುನಿಗಳ ಪಾದದ ಗುರುತುಗಳನ್ನು ಅಂದರೆ ಚರಣ ಕಮಲಗಳನ್ನ ನೆಲದ ಮೇಲೆ ಅಥವಾ ಸಣ್ಣ ಪೀಠದ ಮೇಲೆ ಕೆತ್ತಲಾಗಿರುತ್ತದೆ. ಈ ಪಾದದ ಗುರುತುಗಳ ಹಿಂಭಾಗದಲ್ಲಿ ಅಥವಾ ಪೀಠದ ಮೇಲ್ಭಾಗದಲ್ಲಿ ನಿಶಿದಿ ಶಾಸನವನ್ನು ನಿಲ್ಲಿಸಲಾಗುತ್ತದೆ. ಶಾಸನವನ್ನು ಇಡುವ ದಿಕ್ಕಿಗೂ ಮಹತ್ವವಿದೆ,ಜೈನ ಧರ್ಮದ ಸಂಪ್ರದಾಯದ ಪ್ರ...