Blog article 962, ಲೇಖಕರೂ ಜೇನು ಕೃಷಿ ತಜ್ಞರೂ ಆದ ಗುರುಪ್ರಸಾದ್ ಕಾನಲೆ ಇವರು 13 - ಸೆಪ್ಟೆಂಬರ್ -2020ರಲ್ಲಿ ನನ್ನ ಕಾದಂಬರಿ ಬಗ್ಗೆ ಬರೆದ ವಿಮರ್ಶೆ
#ಓದಿ_ಓದಿಸಿ ( ಪುಸ್ತಕ ಪರಿಚಯ 17 ) ( ಬೆಸ್ತರರಾಣಿ ಚಂಪಕಾ-ಕಾದಂಬರಿ – ಕೆ.ಅರುಣ್ ಪ್ರಸಾದ್ ) ಛೆ...! ಏನಾಗಿಹೋಯಿತು..!! ಎಂಬ ಭಾವವೊಂದು ಮನಸ್ಸನ್ನು ಆವರಿಸಿತು. ಶ್ರೀಯುತ ಕೆ.ಅರುಣ್ ಪ್ರಸಾದ್ Arun Prasad ಅವರು ಬರೆದ “ ಬೆಸ್ತರರಾಣಿ ಚಂಪಕಾ” ಕಾದಂಬರಿ ಓದುತ್ತಿದ್ದೆ. ಇದು, ಸುಮಾರು ಕ್ರಿ.ಶ.1586 ರಿಂದ 1629 ರವರೆಗೆ ಕೆಳದಿ ಸಂಸ್ಥಾನವನ್ನು ಆಳಿದ, ಕೆಳದಿಯ ಖ್ಯಾತ ದೊರೆ ರಾಜಾ ವೆಂಕಟಪ್ಪನಾಯಕ ಮತ್ತು ನತದೃಷ್ಟ ಚಂಪಕಾರಾಣಿ ಇವರ ದುರಂತ ಪ್ರೇಮಕಥೆ. ಸರ್ಕಾರಗಳ ನಿರ್ಲಕ್ಷ್ಯಕ್ಕೊಳಗಾದ ಸ್ಮಾರಕವೊಂದನ್ನು ಕುರಿತು ಬಂದ ಪತ್ರಿಕಾವರದಿಗಳಲ್ಲಿ, ಚಂಪಕ ಸರಸ್ಸು ಎಂಬುದು ಕೆಳದಿ ಅರಸರು ವೇಶ್ಯೆಯೊಬ್ಬಳ ಸಲುವಾಗಿ ಕಟ್ಟಿಸಿದ್ದು ಎಂಬ ಉಲ್ಲೇಖವಿದ್ದುದನ್ನು ಕಂಡು ಶ್ರೀ ಅರುಣ್ ಪ್ರಸಾದ್ ಅವರು ಮನನೊಂದು ಬರೆದ ಕಾದಂಬರಿ. ಕೆಳದಿ ಅರಸರ ಮತ್ತು ಚಂಪಕಾರಾಣಿ ಇಬ್ಬರ ಬಗ್ಗೆ ಜನಮನದಲ್ಲಿ ಈಗಲೂ ಉಳಿದಿರುವ ಭಾವನೆಗಳೇನು ಎಂಬುದನ್ನು ಎಲ್ಲರಿಗೂ ತಲುಪಿಸುವ ಯತ್ನ ಇದು ಎಂದರೂ ತಪ್ಪಾಗಲಾರದು. ಇತಿಹಾಸದ ಪುಟಗಳಲ್ಲಿ ದಾಖಲಾಗದೆ ಹೋದರೂ, ಅಥವಾ ತಪ್ಪಾಗಿ ಊಹಿಸಲ್ಪಟ್ಟಿದ್ದರೂ, ಆನಂದಪುರಂ ಸುತ್ತಮುತ್ತಲಿನ ಪ್ರದೇಶದಲ್ಲಿ ಚಂಪಕಾರಾಣಿ ಇನ್ನೂ ಜನಮಾನಸದಲ್ಲಿ ಇದ್ದಾಳೆ ಎಂಬುದನ್ನು ಇಲ್ಲಿ ಲೇಖಕರು ತೆರೆದಿಟ್ಟಿದ್ದಾರೆ. ಇತಿಹಾಸದಲ್ಲಿ ಈಗಾಗಲೇ ಉಲ್ಲೇಖವಾಗಿರುವ, ಜನರಲ್ಲಿ ಕಥೆಯಾಗಿ ಉಳಿದಿರುವ ಅಂಶಗಳು ಹ...