ಪಶ್ಚಿಮ_ಘಟ್ಟಗಳ_ಅಳಿವು_ಉಳಿವು.
ಕಸ್ತೂರಿ_ರಂಗನ್_ವರದಿಯ_ಸುತ್ತಲಿನ
ಸುಳ್ಳು_ಮತ್ತು_ಸತ್ಯ'! ...
ಈ ಲೇಖನ #ನಾಗೇಶ_ಹೆಗಡೆ ಬರೆದು ಅವರ ಪೇಸ್ ಬುಕ್ ನಲ್ಲಿ ಪ್ರಕಟಿಸಿದ್ದನ್ನ ಇಲ್ಲಿ ಇನ್ನೊಮ್ಮೆ ಶೇರ್ ಮಾಡಿದ್ದೇನೆ.
ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ಬಗ್ಗೆ ವಿಶೇಷ ಅಧಿವೇಶನ ನಡೆಸುವ ಹಿನ್ನೆಲೆಯಲ್ಲಿ ಎಲ್ಲರೂ ಈ ಲೇಖನ ಓದಬೇಕು ಮತ್ತು ಹೆಚ್ಚು ಜನರಿಗೆ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಲಿ ಎಂಬ ಸದುದ್ದೇಶದಿಂದ.
ನಾಗೇಶ್ ಹೆಗಡೆ ಕನ್ನಡದ ಪ್ರಸಿದ್ಧ ವಿಜ್ಞಾನ ಬರಹಗಾರ, ಹಿರಿಯ ಪತ್ರಕರ್ತ ಮತ್ತು ಪರಿಸರವಾದಿ.
ಅವರ ಹಿನ್ನೆಲೆ ಫೆಬ್ರವರಿ 14, 1948 ರಂದು ಉತ್ತರ ಕನ್ನಡ ಜಿಲ್ಲೆಯ ಬಕ್ಕಮನೆಯಲ್ಲಿ ಜನನ, ಈಗ ಅವರಿಗೆ 78 ರ ಹರಯ.
ಅವರ ವಿದ್ಯಾಭ್ಯಾಸ ಖರಗ್‌ಪುರ ಐಐಟಿ (IIT Kharagpur) ಮತ್ತು ದೆಹಲಿಯ ಜೆಎನ್‌ಯು (JNU) ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿದ್ದಾರೆ.
ನೈನಿತಾಲ್ ವಿಶ್ವವಿದ್ಯಾಲಯದಲ್ಲಿ ಪರಿಸರ ಭೂವಿಜ್ಞಾನದ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
'ಪ್ರಜಾವಾಣಿ' ಹಾಗೂ 'ಸುಧಾ' ಪತ್ರಿಕೆಗಳಲ್ಲಿ ವಿಜ್ಞಾನ ಮತ್ತು ಅಭಿವೃದ್ಧಿ ಪತ್ರಿಕೋದ್ಯಮಿಯಾಗಿ ಕೆಲಸ ಮಾಡಿದ್ದಾರೆ.
ಕ್ಲಿಷ್ಟಕರವಾದ ವಿಜ್ಞಾನ ಮತ್ತು ಪರಿಸರ ಸಂಬಂಧಿ ವಿಷಯಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ಬರೆಯುವುದರಲ್ಲಿ ಇವರು ಹೆಸರುವಾಸಿಯಾಗಿದ್ದಾರೆ.
ಇವರು ಬರೆದ ‘#ಇರುವುದೊಂದೇ_ಭೂಮಿ’ ನೀವು ಓದಿದರೆ ಅದರ ಗಾಡ ಪರಿಣಾಮದಿಂದ ನೀವು ಹೊರಬರಲು ಸಾಧ್ಯವೇ ಇಲ್ಲ.
ಇವರ ‘ನಮ್ಮೊಳಗಿನ ಬ್ರಹ್ಮಾಂಡ’, ‘ಗಗನಸಖಿಯರ ಸೆರಗ ಹಿಡಿದು’, ‘ಬರ್ಗರ್ ಭಾರತ’ ಮುಂತಾದ 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.
ಇವರ ಬರಹಗಳು ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯದ ಹಂತದವರೆಗೆ ಪಠ್ಯಪುಸ್ತಕಗಳಾಗಿ ಬಳಕೆಯಾಗಿವೆ.
#ಕೈಗಾ_ಅಣುಸ್ಥಾವರ_ವಿರೋಧಿ_ಹೋರಾಟ ಹಾಗೂ ಕಬ್ಬಿಣದ ಅದಿರಿನ ರಫ್ತಿನ ವಿರುದ್ಧದ ಧ್ವನಿ ಮುಂತಾದವುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಕೆಂಗೇರಿ ಬಳಿ 'ಮೈತ್ರಿ ಫಾರಂ' ಎಂಬ ಪ್ರಯೋಗ ಕ್ಷೇತ್ರವನ್ನು ಹೊಂದಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ಸಾಹಿತ್ಯ ಅಕಾಡೆಮಿ ಕೃತಿ ಪ್ರಶಸ್ತಿ ಹಾಗೂ ಜೀವಮಾನ ಸಾಧನಾ ಗೌರವಪ್ರತಿಷ್ಠಿತ ಟಿ.ಎಸ್.ಆರ್. (TSR) ಪ್ರಶಸ್ತಿ, ಮಕ್ಕಳ ಸಾಹಿತ್ಯಕ್ಕಾಗಿ 2018ರ 'ಬಿಗ್ ಲಿಟ್ಲ್ ಬುಕ್ ಪ್ರಶಸ್ತಿ' (Big Little Book Award) ಪಡೆದಿದ್ದಾರೆ.
#ಕಸ್ತೂರಿ_ರಂಗನ್_ವರದಿ_ಬಗ್ಗೆ_ ಅವರ_ಪೇಸ್_ಬುಕ್_ಲೇಖನ...
ಒಂದು ಸುಳ್ಳನ್ನು ಸಾವಿರಾರು ಜನರ ಕಿವಿಯಲ್ಲಿ ಪದೇ ಪದೇ ತುರುಕಿದರೆ, ಆ ಅಷ್ಟೂ ಜನ ಕೂಗಿದ್ದೇ ಸತ್ಯವಾಗಿಬಿಡುತ್ತದೆ! ಇವತ್ತು ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಸಿದ್ಧವಾದ ‘ಕಸ್ತೂರಿ ರಂಗನ್ ವರದಿ‘ಯ ಗತಿಯೂ ಇದೇ ಆಗಿದೆ.
‘#ವರದಿ_ಬೇಡ‘ ಎಂಬ ಒಕ್ಕೊರಲಿನ ಕೂಗಿನ ಹಿಂದೆ ಅಡಗಿರುವ ಅಸಲಿ ಸತ್ಯವೇನು? ಮಾಧ್ಯಮಗಳು ಮತ್ತು ರಾಜಕಾರಣಿಗಳು ಈ ಸುಳ್ಳಿಗೆ ಲೌಡ್‌ಸ್ಪೀಕರ್ ಆಗಿರುವುದು ಏತಕ್ಕೆ?...
ನಿಜಕ್ಕೂ ಕಸ್ತೂರಿ ರಂಗನ್ ವರದಿಯಲ್ಲೇನಿದೆ? #ಯಾರಿಗೆ_ಸಮಸ್ಯೆ?...
ಗಾಡ್ಗೀಳ್ ವರದಿಯನ್ನು ಮೂಲೆಗುಂಪು ಮಾಡಿ, ಕಸ್ತೂರಿ ರಂಗನ್ ವರದಿಯನ್ನು ಮಂಡಿಸಿದ್ದೇ ಪರಿಸರ ಸಂರಕ್ಷಣೆಯ ವ್ಯಾಪ್ತಿಯನ್ನು ಕಡಿಮೆ ಮಾಡಲು! ಅಚ್ಚರಿಯೆಂದರೆ ಈ ವರದಿ ಹೇಳುತ್ತಿರುವುದು ಕೇವಲ ಈಗಾಗಲೇ ‘ಸಂರಕ್ಷಿತ ಪ್ರದೇಶ’ ಎಂದು ಗುರುತಿಸಲಾದ ಜಾಗವನ್ನು ಮಾತ್ರ ಸಂರಕ್ಷಿಸಬೇಕು ಎಂದು! .
ಇದನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ (ESA) ಎಂದು ಕರೆದು, ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಶಿಫಾರಸು ಮಾಡಿದೆ.
ಅಷ್ಟಕ್ಕೂ ಆ ‘ಕಟ್ಟುನಿಟ್ಟಿನ ಕ್ರಮ’ಗಳಾದರೂ ಏನು?...
ಅವು ಹೊಸವೇನಲ್ಲ, ಹಳೆಯ ನಿಬಂಧನೆಗಳೇ!
⚠️ ಗಣಿಗಾರಿಕೆ, ಮರಳು ಎತ್ತುವುದು, ಗ್ರಾನೈಟ್ ಕ್ವಾರಿಗಳನ್ನು ಸಂಪೂರ್ಣ ನಿಷೇಧಿಸಬೇಕು. ಈಗಾಗಲೇ ನಡೆಯುತ್ತಿದ್ದರೆ 5 ವರ್ಷಗಳಲ್ಲಿ ಬಂದ್ ಮಾಡಬೇಕು. (ಇದರಿಂದ ತೊಂದರೆ ಯಾರಿಗೆ? ಮರಳು ಮತ್ತು ಗಣಿ ಮಾಫಿಯಾಕ್ಕಲ್ಲವೇ?)
🏭 ಉಷ್ಣ ವಿದ್ಯುತ್ ಸ್ಥಾವರಗಳು ಬರುವಂತಿಲ್ಲ. ಭಾರೀ ಅನಾಹುತಕಾರಿ ಕೆಮಿಕಲ್ ಫ್ಯಾಕ್ಟರಿ, ಚರ್ಮಸಂಸ್ಕರಣೆಯಂತಹ ‘ಕೆಂಪು’ ಉದ್ಯಮಗಳಿಗೆ ತಡೆಯೊಡ್ಡಬೇಕು. (ಇದು ಜನಸಾಮಾನ್ಯರಿಗೆ ಒಳ್ಳೆಯದಲ್ಲವೇ?)
🌊 ಅಣೆಕಟ್ಟು ಕಟ್ಟಬಹುದು, ಆದರೆ ಕಣಿವೆ ಒಣಗದಂತೆ 30% ಸಹಜ ನೀರು ಹರಿಯಬಿಡಬೇಕು. ಇಲ್ಲದಿದ್ದರೆ ಜಲಚರಗಳು ಸತ್ತು, ವನ್ಯಜೀವಿಗಳು ನೀರಿಲ್ಲದೆ ಊರುಗಳಿಗೆ ನುಗ್ಗಿ ರೈತರಿಗೆ ಕಷ್ಟ ಕೊಡುತ್ತವೆ.
ಸ್ಥಳೀಯ ಜನರಿಗಾಗುವ #ತೊಂದರೆಯೇನು?...
ವರದಿಯ ಪ್ರಕಾರ, ಅಲ್ಲಿ ವಾಸಿಸುವವರ ಮೂಲ ಅಗತ್ಯಗಳಿಗೆ ಯಾವುದೇ ತೊಂದರೆ ಇಲ್ಲ!
✅ ಸಂಕ, ಸೇತುವೆ, ಬೋರ್‌ವೆಲ್, ರಸ್ತೆ ಇತ್ಯಾದಿಗಳಿಗೆ ನಿರ್ಬಂಧ ಇಲ್ಲ.
✅ ಸ್ವಂತ ಮನೆ ಕಟ್ಟಲು ಮರಳು, ಗ್ರಾನೈಟನ್ನೂ ಬಳಸಬಹುದು. ಆದರೆ ನಗರಕ್ಕೆ ಮಾರಾಟ ಮಾಡುವಂತಿಲ್ಲ.
✅ ಹಳ್ಳಿಗರ ಬದುಕಿಗೆ ಕಂಟಕ ತರುವ ದೊಡ್ಡ ಯೋಜನೆಗಳಿದ್ದರೆ, ಗ್ರಾಮಸಭೆಯ ಒಪ್ಪಿಗೆ ಕಡ್ಡಾಯ!
ನಿಷೇಧ ಇರುವುದು ಕೇವಲ 20 ಸಾವಿರ ಚದರ ಮೀಟರಿಗಿಂತ ದೊಡ್ಡದಾದ (200 ಮೀಟರ್ ಉದ್ದ, 100 ಮೀಟರ್ ಅಗಲದ) ಬೃಹತ್ ಗೋದಾಮು, ಸಭಾಭವನ, ಸ್ಟೇಡಿಯಂ ಇತ್ಯಾದಿ ಕಟ್ಟಡಗಳಿಗೆ ಮಾತ್ರ.
ಹಾಗಾದರೆ #ವಿರೋಧ_ಏತಕ್ಕೆ?
ಕಳೆದ 12 ವರ್ಷಗಳಲ್ಲಿ ಯಾವುದೇ ಸರ್ಕಾರ ಈ ಸರಳ ಸತ್ಯಗಳನ್ನು ಜನರ ಮುಂದಿಡುವಲ್ಲಿ ವಿಫಲವಾಗಿದೆ. ವರದಿಯನ್ನು ಕನ್ನಡಕ್ಕೆ ಅಧಿಕೃತವಾಗಿ ತರ್ಜುಮೆ ಮಾಡಿಸಿಯೇ ಇಲ್ಲ!
ಇದನ್ನೇ ಬಂಡವಾಳ ಮಾಡಿಕೊಂಡ ಸ್ವಾರ್ಥ ಗಣಿಧಣಿಗಳು, ಮರಳು ಮಾಫಿಯಾಗಳು, ಎಸ್ಟೇಟ್ ಮಾಲಿಕರು ಮತ್ತು ಅರಣ್ಯಾಧಿಕಾರಿಗಳು ಹಬ್ಬಿಸಿದ ಊಹಾಪೋಹಗಳನ್ನು ಜನಪ್ರತಿನಿಧಿಗಳೂ ನಂಬಿ, ಮುಗ್ಧ ಜನರ ತಲೆಗೂ ತುಂಬಿದ್ದಾರೆ.
ಅತಿಕ್ರಮಣದಾರರು ಮತ್ತು ಬೇನಾಮಿ ಜಮೀನ್ದಾರರು ‘ಹೋ, ಬೇಡವೇ ಬೇಡ!‘ ಎಂದು ಕೂಗೆಬ್ಬಿಸಿದ್ದಾರೆ.
ಕೇರಳ ಸರ್ಕಾರ ಇಂಗ್ಲಿಷ್ ವರದಿಯನ್ನು ಮಲೆಯಾಳಂಗೆ ತರ್ಜುಮೆ ಮಾಡಿ, ಪ್ರತಿ ತಾಲ್ಲೂಕಿನಲ್ಲೂ ಸಮೀಕ್ಷೆ ನಡೆಸಿ ತಪ್ಪಾಗಿ ಸೇರಿದ ಗ್ರಾಮಗಳನ್ನು ಕೈಬಿಟ್ಟಿದೆ.
ಆದರೆ ಕರ್ನಾಟಕದ ಶಾಸಕರು ವರದಿಯನ್ನು ಓದದೆಯೇ, ದೂರದ ಬೀದರ್‌ನಿಂದ ಕೋಲಾರ್‌ವರೆಗೂ ಒಂದೇ ಸ್ವರದಲ್ಲಿ ಮೂರು ಬಾರಿ ತಿರಸ್ಕರಿಸಿದ್ದಾರೆ!...
ಮುಗ್ಧ ಜನರ ಭಾವನೆಗಳನ್ನು ಕೆರಳಿಸಿದರೆ ಮತ ಬರುತ್ತದೆ ಎಂಬ ರಾಜಕೀಯ ತಂತ್ರವಿದು.
ಸರ್ಕಾರದ ಮುಂದಿರುವ ದಾರಿ...
ಈ ಸರ್ಕಾರಕ್ಕೆ ಅರಣ್ಯ, ಜಲಮೂಲ, ಮತ್ತು ಮುಂದಿನ ಪೀಳಿಗೆಯ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದರೆ, ಮುಂಬರುವ ವಿಶೇಷ ಅಧಿವೇಶನದಲ್ಲಿ ಈ ನಿಲುವನ್ನು ತಾಳಬೇಕು.
📄 ವರದಿಯ ಸರಳ ಕನ್ನಡ ಭಾಷಾಂತರ (ಗೂಗಲ್ ಭಾಷಾಂತರವಲ್ಲ) ಸಿದ್ಧವಾಗಿ ಎಲ್ಲ ಶಾಸಕರು ಮತ್ತು ಸಾರ್ವಜನಿಕರಿಗೆ ಸಿಗುವಂತಾಗಬೇಕು.
ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಮಹತ್ವದ ಅಂಶಗಳನ್ನು ಜನರಿಗೆ ತಿಳಿಸಬೇಕು.
ಅದು ಸಾಧ್ಯವಾಗುವವರೆಗೆ ಸದನದಲ್ಲಿ ಚರ್ಚೆ ಬೇಡ.
👨🏫 ಸದನದಲ್ಲಿ ಚರ್ಚೆಗೆ ಮುನ್ನ (ಶಾಸಕರಲ್ಲದ) ಪರಿಣತರಾದ ಪದ್ಮಶ್ರೀ ದರ್ಶನ್ ಶಂಕರ್ ಅಥವಾ ಡಾ. ಕೆ.ಎನ್ #ಗಣೇಶಯ್ಯ ಅವರಂತಹವರಿಂದ ಕನ್ನಡ ಉಪನ್ಯಾಸ ಏರ್ಪಡಿಸಬೇಕು.
🔍 ವರದಿ ಜಾರಿಯಿಂದ ಆಗುವ ಅಪಾಯಗಳ ಬಗ್ಗೆ ಅಧ್ಯಯನ ಮಾಡಲು ಸರ್ಕಾರವೇ ಒಬ್ಬ ತಜ್ಞರನ್ನು ನೇಮಿಸಲಿ.
ನಿಜವಾದ ಅಪಾಯ ಇರುವುದು ಜನರಿಗಲ್ಲ, ಬದಲಾಗಿ ಅಸ್ತವ್ಯಸ್ತ ದಾಖಲೆಗಳನ್ನು ಹೊಂದಿರುವ ಅರಣ್ಯ ಇಲಾಖೆಗೆ ಮತ್ತು ಅಕ್ರಮ ನಡೆಸುವ ಪಟ್ಟಭದ್ರ ಹಿತಾಸಕ್ತಿಗಳಿಗೆ!..
ಸ್ಥಳೀಯ ಜನರ ಇಂದಿನ ಪ್ರತಿರೋಧ ಅರಣ್ಯ ಇಲಾಖೆಯ ದಬ್ಬಾಳಿಕೆಯ ವಿರುದ್ಧ ಇದೆಯೇ ವಿನಾ ಕಸ್ತೂರಿ ರಂಗನ್ ವರದಿಯ ವಿರುದ್ಧ ಅಲ್ಲ.
ಪಟ್ಟಭದ್ರರನ್ನು ಹೊರಕ್ಕಿಟ್ಟ ನಂತರವೂ ಜನಸಾಮಾನ್ಯರ ಬದುಕಿಗೆ ತೊಂದರೆ ಇದ್ದರೆ ಅದನ್ನು ಸರಿಪಡಿಸುವ ಬಗ್ಗೆ ಶಾಸಕರು ಚರ್ಚಿಸಲಿ ಅಂಥ ಬೋಲ್ಡ್ ನಿಲುವನ್ನು ಈ ಸರ್ಕಾರ ತಳೆದೀತೆ?...
(ಪರಿಸರ ವಿಜ್ಞಾನಿ #ನಾಗೇಶ್_ಹೆಗಡೆ_ಪೇಸ್_ಬುಕ್ ಲೇಖನ)
#WesternGhats #KasturiranganReport #EnvironmentProtection #KarnatakaPolitics #SaveWesternGhats #GadgilReport #ClimateChange #SustainableDevelopment
Comments
Post a Comment