ಶಿವಶರಣ_ಹರಳಯ್ಯರಿಗೆ
ಮರಣದಂಡನೆ_ನೀಡಿದ_ಬಿಜ್ಜಳರಿಂದ
ಕಲ್ಯಾಣ_ಕ್ರಾಂತಿಗೆ_ಮತ್ತು_ಶರಣರ_ಚದುರುವಿಕೆಗೆ_ಕಾರಣವಾಯಿತು.
ಬಲ್ಲಿರಾ ನಿಮ್ಮ ಇತಿಹಾಸ?...
ನನ್ನ ಮಾಧ್ಯಮಿಕ ಶಾಲಾ ಸಹಪಾಠಿ ದಾಸಕೊಪ್ಪದ ನಾಗರಾಜ್ ಕೆ.ಎಸ್.ಎಪ್.ಸಿಯಲ್ಲಿ ಸೇವೆ ಮಾಡಿ ನಿವೃತ್ತ ಅಧಿಕಾರಿ ಆಗಿದ್ದಾರೆ ಇವರು ಈಗ #ಮೋಚಿ_ಸಮುದಾಯದ #ಶಿವಮೊಗ್ಗ_ಜಿಲ್ಲಾ_ಅಧ್ಯಕ್ಷರಾಗಿದ್ದಾರೆ.
ಇವರ ಸಮಾಜದ #ವದು_ವರರ ಸಮಾವೇಶ ಮತ್ತು ಅವರ ಸಮಾಜ ಬಂದುಗಳ ಸಭೆಗಾಗಿ ನಮ್ಮ ಶ್ರೀಕೃಷ್ಣ_ಸರಸ_ಕನ್ವೆನ್ಷನ್_ ಹಾಲ್ ಕಲ್ಯಾಣ ಮಂಟಪದ ದಿನಾಂಕ ನಿಗದಿ ಮಾಡಲು ಬಂದಿದ್ದರು.
ಶರಣ ಚಳವಳಿಯ ಪ್ರಮುಖರು, ಕ್ರಾಂತಿಕಾರಿ ಶಿವ ಶರಣ ಹರಳಯ್ಯರ ಬಗ್ಗೆ ಉಲ್ಲೇಖಿಸಿ ನಾವಿಬ್ಬರೂ ಮಾತನ್ನಾಡಿದ್ದನ್ನ ವಿಸ್ತರಿಸಿ ಇಲ್ಲಿ ಬರೆದಿದ್ದೇನೆ.
12ನೇ ಶತಮಾನದ ಬಸವೇಶ್ವರರ ಸಮಕಾಲೀನ ಶರಣ ಚಳವಳಿಯ ಪ್ರಮುಖ ವಚನಕಾರ ಹಾಗೂ ಕ್ರಾಂತಿಕಾರಿ ಶಿವಶರಣ ಹರಳಯ್ಯನವರ ವಚನಗಳ ಅಂಕಿತನಾಮ "ಬಿಜ್ಜಳೇಶ್ವರ" ಅಥವಾ "ಹಮ್ಮೀರ ಬಿಜ್ಜಳೇಶ್ವರ".
ಅವರು ಶ್ರಮ, ಕಾಯಕ ನಿಷ್ಠೆ ಮತ್ತು ಶಿವಭಕ್ತಿಯನ್ನು ಪ್ರತಿಪಾದಿಸುವ ಕೆಲವೇ ವಚನಗಳನ್ನು ರಚಿಸಿದ್ದಾರೆ.
ಅವರ ಒಂದು ಪ್ರಖ್ಯಾತ ವಚನ:
"ಅಂಗದ ಮೇಲಣ ಲಿಂಗಕ್ಕೆ
ಅಂಗವೇ ಪೀಠವಾಯಿತ್ತು.
ಪ್ರಾಣದ ಮೇಲಣ ಲಿಂಗಕ್ಕೆ
ಪ್ರಾಣವೇ ಆಶ್ರಯವಾಯಿತ್ತು.
ಭಾವದ ಮೇಲಣ ಲಿಂಗಕ್ಕೆ
ಭಾವವೇ ಆವಾಸವಾಯಿತ್ತು.
ಬಿಜ್ಜಳೇಶ್ವರಾ, ನಿಮ್ಮ ಶರಣರ ಪಾದವ ಕಂಡು
ಎನ್ನ ತನು ಮನ ಪ್ರಾಣ ಪರಿಶುದ್ಧವಾಯಿತ್ತು."
ಭಾವಾರ್ಥ:
ದೇಹದ ಮೇಲಿರುವ ಇಷ್ಟಲಿಂಗಕ್ಕೆ ಈ ಶರೀರವೇ ಪೀಠ, ಉಸಿರಿನಲ್ಲಿರುವ ಲಿಂಗಕ್ಕೆ ಪ್ರಾಣವೇ ಆಸರೆ ಮತ್ತು ಅಂತಃಕರಣದಲ್ಲಿರುವ ಲಿಂಗಕ್ಕೆ ನಮ್ಮ ಭಾವವೇ ಮನೆಯಾಗಿದೆ. ಕಾಯಕ ಮತ್ತು ಸದ್ಭಾವನೆಯಿಂದ ಜೀವಿಸುವ ಶರಣರ ಸಂಗ ಹಾಗೂ ಪಾದದರ್ಶನದಿಂದ ಮಾತ್ರ ಮನುಷ್ಯನ ತನು, ಮನ, ಪ್ರಾಣಗಳು ಸಂಪೂರ್ಣ ಪರಿಶುದ್ಧವಾಗುತ್ತವೆ ಎಂಬುದು ಈ ವಚನದ ತಿರುಳು.
ಶ್ರೇಷ್ಠ ಕಾಯಕಯೋಗಿ ಹರಳಯ್ಯನವರ ನಿಷ್ಕಲ್ಮಶ ಭಕ್ತಿಯನ್ನು ಈ ವಚನ ಎತ್ತಿಹಿಡಿಯುತ್ತದೆ.
ಬಸವಣ್ಣನವರಿಗೆ ಹರಳಯ್ಯ ಮತ್ತು ಅವರ ಪತ್ನಿ ತಮ್ಮಿಬ್ಬರ ತೊಡೆಯ ಚರ್ಮದಿಂದ ಪಾದರಕ್ಷೆ (ಚಮ್ಮಾವುಗೆ) ಹೊಲಿದು ಕೊಟ್ಟರೆಂಬ ಪ್ರಸಿದ್ಧ ಐತಿಹ್ಯವಿದೆ.
ಜಾತಿ ರಹಿತ ಸಮಾನತೆಯ ಸಂದೇಶ ಸಾರಲು ಹರಳಯ್ಯನವರ ಮಗ #ಶೀಲವಂತನಿಗೂ ಹಾಗೂ ಮಂತ್ರಿ ಬ್ರಾಹ್ಮಣ ಮೂಲದ ಮಧುವರಸರ ಮಗಳಾದ #ಲಾವಣ್ಯವತಿಗೂ ಕಲ್ಯಾಣದಲ್ಲಿ ಅಂತರ್ಜಾತಿ ವಿವಾಹ ನಿಶ್ಚಯಿಸಲಾಯಿತು.
ಇದು ಕಲ್ಯಾಣ ಕ್ರಾಂತಿಗೆ ಮತ್ತು ಶರಣರ ಚದುರುವಿಕೆಗೆ ಕಾರಣವಾಯಿತು.
ಬಸವಣ್ಣನವರ ಕಲ್ಯಾಣದಲ್ಲಿ #ಅನುಭವ_ಮಂಟಪ ಸ್ಥಾಪನೆಯಾಗಿ ಜಾತಿ, ವರ್ಗ ಭೇದವಿಲ್ಲದೆ ಎಲ್ಲರೂ ಒಂದಾಗಿದ್ದರು ಈ ಸಮಾನತೆಯನ್ನು ಕೇವಲ ಮಾತಿನಲ್ಲಿ ಉಳಿಸದೆ ಆಚರಣೆಗೆ ತರಲು ಶರಣರು ಮುಂದಾದರು.
ಬ್ರಾಹ್ಮಣ ಕುಲದಿಂದ ಬಂದಿದ್ದ ಮಂತ್ರಿ #ಮಧುವರಸರು ಹಾಗೂ ಚಮ್ಮಾರ ಕಾಯಕದ ಶರಣ #ಹರಳಯ್ಯ ಇಬ್ಬರೂ ಪರಸ್ಪರ ಬೀಗರಾಗಲು ನಿರ್ಧರಿಸಿದರು.
ಮಧುವರಸರ ಮಗಳು ಕಲಾವತಿ (ಲಾವಣ್ಯವತಿ) ಮತ್ತು ಹರಳಯ್ಯನ ಮಗ ಶೀಲವಂತನ ವಿವಾಹವನ್ನು ಶರಣರ ಸಮ್ಮುಖದಲ್ಲಿ ನಿಶ್ಚಯಿಸಲಾಯಿತು.
ಇದನ್ನು ಸಹಿಸದ ರಾಜಾಸ್ಥಾನದ ಸಂಪ್ರದಾಯವಾದಿ ವೈದಿಕರು ಮತ್ತು ಮಂತ್ರಿಗಳು ಬಿಜ್ಜಳನ ಬಳಿ ಹೋಗಿ #ಇದು_ವರ್ಣಸಂಕರ_ಸನಾತನ_ಧರ್ಮದ_ಉಲ್ಲಂಘನೆ ಮತ್ತು ರಾಜ್ಯಕ್ಕೆ ಬರಬಹುದಾದ ಮಹಾ ಅಪಚಾರ ಇದನ್ನು ತಡೆಯದಿದ್ದರೆ ರಾಜ್ಯ ನಾಶವಾಗುತ್ತದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಿಜ್ಜಳನು ಹರಳಯ್ಯ ಮತ್ತು ಮಧುವರಸರನ್ನು ಆಸ್ಥಾನಕ್ಕೆ ಕರೆಸಿ ಈ ಸಂಬಂಧವನ್ನು ರದ್ದುಪಡಿಸುವಂತೆ ಸೂಚಿಸಿದನು
ಆದರೆ ಇಬ್ಬರೂ ಶರಣರು ತಮ್ಮ ನಿಲುವಿಗೆ ಬದ್ಧರಾಗಿ "ನಾವು ಬಸವತತ್ವದ ಲಿಂಗವಂತರು, ನಮ್ಮಲ್ಲಿ ಯಾವುದೇ ಜಾತಿಭೇದವಿಲ್ಲ" ಎಂದು ವಿವಾಹದಿಂದ ಹಿಂದೆ ಸರಿಯಲು ನಿರಾಕರಿಸಿದರು.
ರಾಜಧರ್ಮ ಮತ್ತು ಅಂದಿನ ಮನುಸ್ಮೃತಿಯ ಕಠಿಣ ನಿಯಮಗಳ ಅನ್ವಯ, ಬಿಜ್ಜಳನು ಇಬ್ಬರಿಗೂ ಮರಣದಂಡನೆ ಘೋಷಿಸಿದನು.
ಮೊದಲಿಗೆ ಹರಳಯ್ಯ ಮತ್ತು ಮಧುವರಸರ ಕಣ್ಣುಗಳನ್ನು ಕೀಳಿಸಲಾಯಿತು, ಅವರ ದೇಹಗಳನ್ನು ಹಗ್ಗದಿಂದ ಕಟ್ಟಿ ಬೀದಿಗಳಲ್ಲಿ ಎಳೆದಾಡಿಸಲಾಯಿತು.
ಅಂತಿಮವಾಗಿ ಇಬ್ಬರನ್ನೂ ಮದವೇರಿದ ಆನೆಯ ಕಾಲಿನ ಕೆಳಗೆ ಹಾಕಿ ತುಳಿಸಿ ಕೊಲ್ಲಲಾಯಿತು.
ಅವರ ಮಕ್ಕಳನ್ನೂ ಇದೇ ರೀತಿ ಶಿಕ್ಷೆಗೆ ಒಳಪಡಿಸಲಾಯಿತು ಎಂದು ಕೆಲವು ಚರಿತ್ರೆಗಳು ದಾಖಲಿಸುತ್ತವೆ.
ಈ ಅಮಾನುಷ ಕೃತ್ಯ ಶರಣ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು ಬಿಜ್ಜಳನ ಹಿಂಸಾತ್ಮಕ ದಮನಕಾರಿ ನೀತಿಯನ್ನು ಸಹಿಸದ #ಜಗದೇವ,#ಮಲ್ಲಯ್ಯ ಮತ್ತು #ಬೊಮ್ಮಯ್ಯ ಎಂಬ ಶರಣರು ಬಿಜ್ಜಳನ ಅರಮನೆಗೆ ನುಗ್ಗಿ ಅವನನ್ನು ಕೊಂದರು.
#ಜಗದೇವ ಇವರು ಮೂಲತಃ ಕ್ಷತ್ರಿಯ / ರಾಜವಂಶೀಯ ಸೈನಿಕ ಹಿನ್ನೆಲೆಯವರು,ಬಿಜ್ಜಳನ ಆಸ್ಥಾನದಲ್ಲೇ ಅಧಿಕಾರಿಯಾಗಿದ್ದು ತೀವ್ರ ಶರಣ ನಿಷ್ಠೆಯನ್ನು ಬೆಳೆಸಿಕೊಂಡಿದ್ದರು.
#ಮೊಲ್ಲೆ (ಮಲ್ಲಯ್ಯ/ಮೊಲ್ಲ): ಇವರು ಮೂಲತಃ ಬಿಲ್ಲವ / ಬೇಡ (ಶಿಕಾರಿ/ಯೋಧ) ಸಮುದಾಯಕ್ಕೆ ಸೇರಿದವರು.
#ಬೊಮ್ಮಯ್ಯ ಇವರು ಮೂಲತಃ ಗಾಣಿಗ / ಶೂದ್ರ (ಕಾಯಕ ಜೀವಿ) ಹಿನ್ನೆಲೆಗೆ ಸೇರಿದವರು.
ಶರಣ ಧರ್ಮದ ಪ್ರಕಾರ ಇವರೆಲ್ಲರೂ ತಮ್ಮ ಹಿಂದಿನ ಕುಲ-ಜಾತಿಗಳನ್ನು ತ್ಯಜಿಸಿ ಲಿಂಗಧಾರಣೆ ಮಾಡಿಕೊಂಡು ಸಮಾನ ಶರಣರಾಗಿ ಗುರುತಿಸಿಕೊಂಡಿದ್ದರು.
ಕಲ್ಯಾಣ ನಗರ ಹೊತ್ತಿ ಉರಿದು, ಅಪಾರ ರಕ್ತಪಾತವಾಯಿತು, ಬಸವಣ್ಣನವರು ಹಿಂಸೆಯನ್ನು ವಿರೋಧಿಸಿ ಕಲ್ಯಾಣವನ್ನು ತೊರೆದು ಕೂಡಲಸಂಗಮಕ್ಕೆ ತೆರಳಿದರೆ, ಉಳಿದ ಶರಣರು ವಚನಗಳ ತಾಳೆಗರಿಗಳ ರಕ್ಷಣೆಗೆಂದು ಚೆನ್ನಬಸವಣ್ಣನವರ ನೇತೃತ್ವದಲ್ಲಿ ಉಳವಿಯತ್ತ ಚದುರಿ ಹೋದರು.
ಎಂಟು ನೂರು ವರ್ಷಗಳ ಹಿಂದಿನ ಈ ಚರಿತ್ರೆ ಬದಲಾಗಿಲ್ಲ ... ಅದು ಈಗಲೂ ನಮ್ಮ ಸಮಾಜದ ಜಾತಿ ವ್ಯವಸ್ಥೆಯಲ್ಲಿ ಮುಂದುವರಿದಿದೆ ...
ಮುಂದಿನ ಭಾಗದಲ್ಲಿ ನಿರೀಕ್ಷಿಸಿ...
#ಸಂತ_ಭಗತ್_ರವಿದಾಸ್
#sharanachalavali #basavanna #bijjala #haralayya #mochi
#ksfc #shivamogga
#samagara
Comments
Post a Comment