Blog number 1591. ತೀರ್ಥಹಳ್ಳಿಯ ಖ್ಯಾತ ಲಕ್ಷ್ಮೀಶ್ ವಾರ ಪತ್ರಿಕೆ ಸಂಪಾದಕರಾದ ಲಕ್ಷ್ಮೀಷ್ ನನ್ನ ಬಗ್ಗೆ ಬರೆದ ನುಡಿಗಳು.
*ಮಿತ್ರ ಅರುಣ್ ಪ್ರಸಾದ್ ಮತ್ತು ಕೋಳಿ ಕಜ್ಜಾಯ..!?* ಸ್ಮೃತಿ; ಲಕ್ಷ್ಮೀಶಪತ್ರಿಕೆ ತೀರ್ಥಹಳ್ಳಿ 1996 ನೇ ಇಸವಿಯ ಒಂದು ದಿನ ಮತ್ತು ಒಂದು ತಿಂಗಳು, ತೀರಾ ಖಚಿತವಾಗಿ ನೆನಪಿಲ್ಲ ಅನ್ನುವಾಗ ಅರುಣ್ ಪ್ರಸಾದ್ ಎಂಬ ಜಿಲ್ಲಾ ಪಂಚಾಯತಿ ಸದಸ್ಯರ ಬಗ್ಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ, ಕುತೂಹಲಕಾರಿ ಸುದ್ದಿ ಪ್ರಕಟವಾಗಿದ್ದವು. ನಾನು ಪತ್ರಿಕೆ ಆರಂಭಿಸಿ ಎರಡು ವರ್ಷ ಕಳೆದಿತ್ತಷ್ಟೇ. ಸ್ಥಳೀಯ ಲಕ್ಷ್ಮೀ ಮೆಡಿಕಲ್ಸಿನಲ್ಲಿ ಕುಂತು ಲೋಕಾಭಿರಾಮ ಹರಟುತ್ತಾ *ಗುರು ಶಿಷ್ಯ ಛಲಗಾರ ಗಣಪತಿ ಮತ್ತು ನಾನು* ಇರುವಾಗ, ಗುರುಗಳಿಂದ *ಈ ಅರುಣ ಪ್ರಸಾದ್ ನನ್ನ ಶಿಷ್ಯ ಕಣೋ* ಎಂಬ ಉದ್ಗಾರ ಹೊರಬಿತ್ತು. *ಇವನಣ್ಣ ಆನಂದಪುರಂ ನಲ್ಲಿ ನನ್ನ ಪತ್ರಿಕೆ ವರದಿಗಾರ ಮತ್ತು ವಿತರಕನಾಗಿದ್ದ. ಇವನು ಅರುಣ ಬೆಳಿಗ್ಗೆ ಸಾಗರಕ್ಕೆ ಹೋಗುವ ಗಜಾನನ ಬಸ್ಸಿನಲ್ಲಿ ಕಳಿಸುತ್ತಿದ್ದ ಛಲಗಾರವನ್ನು ಇಳಿಸಿ, ಅಲ್ಲಿನ ಚಂದಾದಾರರಿಗೆ ತಲುಪಿಸುವ ಕೆಲಸ ಮಾಡ್ತಿದ್ದ. ಆ ಹುಡುಗನೀಗ ಶಿವಮೊಗ್ಗ ಜಿಲ್ಲಾ ಪಂಚಾಯತಿಗೆ ಆನಂದಪುರಂ ಕ್ಷೇತ್ರದಿಂದ ಸದಸ್ಯ. ಇವತ್ತವನ ಹೆಸರು ತುಂಬಾ ಪತ್ರಿಕೆಗಳಲ್ಲಿ ಬಂದಿದೆ ಓದಿದ್ಯಾ..?* ಅಂದ್ರು.! "ಹೌದು, ನಾನೋದಿದ್ದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ *ಡ್ರಗ್ಸ್ ಮಾಫಿಯಾ* ಬಗ್ಗೆ ವಿವರವಾಗಿ ಮಾಹಿತಿ ಕಲೆ ಹಾಕಿ ಜಿ. ಪಂ. ಸಭೆಯಲ್ಲಿ ಮಾತಾಡಿದ್ದಕ್ಕಾಗಿ ಒಂದು ಖೊಟ್ಟಿ ಅಟ್ರ...