Blog article 962, ಲೇಖಕರೂ ಜೇನು ಕೃಷಿ ತಜ್ಞರೂ ಆದ ಗುರುಪ್ರಸಾದ್ ಕಾನಲೆ ಇವರು 13 - ಸೆಪ್ಟೆಂಬರ್ -2020ರಲ್ಲಿ ನನ್ನ ಕಾದಂಬರಿ ಬಗ್ಗೆ ಬರೆದ ವಿಮರ್ಶೆ
ಛೆ...! ಏನಾಗಿಹೋಯಿತು..!! ಎಂಬ ಭಾವವೊಂದು ಮನಸ್ಸನ್ನು ಆವರಿಸಿತು. ಶ್ರೀಯುತ ಕೆ.ಅರುಣ್ ಪ್ರಸಾದ್ Arun Prasad ಅವರು ಬರೆದ “ ಬೆಸ್ತರರಾಣಿ ಚಂಪಕಾ” ಕಾದಂಬರಿ ಓದುತ್ತಿದ್ದೆ.
ಇದು, ಸುಮಾರು ಕ್ರಿ.ಶ.1586 ರಿಂದ 1629 ರವರೆಗೆ ಕೆಳದಿ ಸಂಸ್ಥಾನವನ್ನು ಆಳಿದ, ಕೆಳದಿಯ ಖ್ಯಾತ ದೊರೆ ರಾಜಾ ವೆಂಕಟಪ್ಪನಾಯಕ ಮತ್ತು ನತದೃಷ್ಟ ಚಂಪಕಾರಾಣಿ ಇವರ ದುರಂತ ಪ್ರೇಮಕಥೆ. ಸರ್ಕಾರಗಳ ನಿರ್ಲಕ್ಷ್ಯಕ್ಕೊಳಗಾದ ಸ್ಮಾರಕವೊಂದನ್ನು ಕುರಿತು ಬಂದ ಪತ್ರಿಕಾವರದಿಗಳಲ್ಲಿ, ಚಂಪಕ ಸರಸ್ಸು ಎಂಬುದು ಕೆಳದಿ ಅರಸರು ವೇಶ್ಯೆಯೊಬ್ಬಳ ಸಲುವಾಗಿ ಕಟ್ಟಿಸಿದ್ದು ಎಂಬ ಉಲ್ಲೇಖವಿದ್ದುದನ್ನು ಕಂಡು ಶ್ರೀ ಅರುಣ್ ಪ್ರಸಾದ್ ಅವರು ಮನನೊಂದು ಬರೆದ ಕಾದಂಬರಿ. ಕೆಳದಿ ಅರಸರ ಮತ್ತು ಚಂಪಕಾರಾಣಿ ಇಬ್ಬರ ಬಗ್ಗೆ ಜನಮನದಲ್ಲಿ ಈಗಲೂ ಉಳಿದಿರುವ ಭಾವನೆಗಳೇನು ಎಂಬುದನ್ನು ಎಲ್ಲರಿಗೂ ತಲುಪಿಸುವ ಯತ್ನ ಇದು ಎಂದರೂ ತಪ್ಪಾಗಲಾರದು. ಇತಿಹಾಸದ ಪುಟಗಳಲ್ಲಿ ದಾಖಲಾಗದೆ ಹೋದರೂ, ಅಥವಾ ತಪ್ಪಾಗಿ ಊಹಿಸಲ್ಪಟ್ಟಿದ್ದರೂ, ಆನಂದಪುರಂ ಸುತ್ತಮುತ್ತಲಿನ ಪ್ರದೇಶದಲ್ಲಿ ಚಂಪಕಾರಾಣಿ ಇನ್ನೂ ಜನಮಾನಸದಲ್ಲಿ ಇದ್ದಾಳೆ ಎಂಬುದನ್ನು ಇಲ್ಲಿ ಲೇಖಕರು ತೆರೆದಿಟ್ಟಿದ್ದಾರೆ.
ಇತಿಹಾಸದಲ್ಲಿ ಈಗಾಗಲೇ ಉಲ್ಲೇಖವಾಗಿರುವ, ಜನರಲ್ಲಿ ಕಥೆಯಾಗಿ ಉಳಿದಿರುವ ಅಂಶಗಳು ಹಾಗೂ 1624 ರಲ್ಲಿ ಇಕ್ಕೇರಿ ಸಂದರ್ಶಿಸಿದ್ದ ಇಟಲಿಯ ಪ್ರವಾಸಿ ಪಿಯೆತ್ರೊದೆಲ್ಲಾವಲ್ಲೆಯ ಉಲ್ಲೇಖದ ಆಧಾರದಲ್ಲಿ, ಈ ಕಾದಂಬರಿ ಬೆಳೆಯುತ್ತಾ ಹೋಗಿದೆ. ರಂಗೋಲಿ ಎಂಬುದೂ ಒಂದು ಕಲೆ ಮತ್ತು ಅದು ಕೆಳದಿಯ ಪ್ರಸಿದ್ದ ಅರಸ ರಾಜಾ ವೆಂಕಟಪ್ಪನಾಯಕರ ಜೀವನದಲ್ಲಿ ಹೇಗೆ ತಿರುವು ತರುತ್ತದೆ ಎಂಬಲ್ಲಿಂದ ಮೊದಲ್ಗೊಂಡು ರಾಜ್ಯದ ಉಳಿವಿಗಾಗಿ ಚಂಪಕಾಳನ್ನು ಅರಸರು ಮದುವೆಯಾಗುವವರೆಗೆ, ಆನಂತರ ತನ್ನದಲ್ಲದ ತಪ್ಪಿಗಾಗಿ ಎಲ್ಲರೂ ಚಂಪಕಾರಾಣಿಯನ್ನು ದೂಷಿಸುವುದು, ಚಂಪಕಾಳ ಜಾತಿ, ಆಹಾರ ವಿಚಾರವಾಗಿ ತಪ್ಪುತಿಳುವಳಿಕೆಯಿಂದಾಗಿ ಮಹಾರಾಣಿ ಭದ್ರಮ್ಮಾಜಿ ಮನನೊಂದು ಅಸುನೀಗುವುದು, ಎಲ್ಲ ಘಟನೆಗಳೂ ನಿರ್ದೋಶಿ ಚಂಪಕಾರಾಣಿಯನ್ನು ಘಾಸಿಗೊಳಿಸುವುದುಮುತಾದವುಗಳನ್ನು ಇಲ್ಲಿ ಲೇಖಕರು ಅತ್ಯಂತ ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ಇದು ಅರುಣ್ ಪ್ರಸಾದರ ಮೊದಲ ಪುಸ್ತಕ ಎಂದರೆ ನಂಬಲಾಗುವುದಿಲ್ಲ.
ಇದು ಇತಿಹಾಸವನ್ನಾಧರಿಸಿದ ಕಾಲ್ಪನಿಕ ಕಾದಂಬರಿ (Historical Fiction) ಆದರೆ, ಈ ಕಾದಂಬರಿಯನ್ನು ಓದಿದ ನಂತರ ನಾನು ಕೆಳದಿಯ ಇತಿಹಾಸವನ್ನು ತಿಳಿಸುವ ಡಾ|| ಕೆಳದಿ ವೆಂಕಟೇಶ ಜೋಯಿಸ್ ಅವರ ಸಂಶೋಧನಾ ಪುಸ್ತಕ “ ಕೆಳದಿ ಇತಿಹಾಸ ವೈಭವ “ ವನ್ನೂ ಮೊತ್ತೊಮ್ಮೆ ತಿರುವಿಹಾಕಿದೆ. ಶ್ರೀ ಅರುಣ್ ಪ್ರಸಾದ್ ಅವರು ವಸ್ತುನಿಷ್ಠವಾಗಿ ರಾಜಾ ವೆಂಕಟಪ್ಪನಾಯಕರ ಆಡಳಿತ, ಸಾಧನೆಗಳನ್ನು ವಿವರಿಸಿದ್ದಾರೆ. ಎಲ್ಲೂ ಅನಗತ್ಯ ವೈಭವೀಕರಣ ಇಲ್ಲ. ಮತ್ತು ಕಾದಂಬರಿಯನ್ನು ಸಣ್ಣ ಸಣ್ಣ ಅಧ್ಯಾಯಗಳನ್ನಾಗಿ ವಿಂಗಡಿಸಿರುವುದು ಓದುಗನ ಓದಿಗೆ ಚುರುಕುತನವನ್ನು ನೀಡುತ್ತದೆ. ಪುಸ್ತಕ ಓದಲು ಪ್ರಾರಂಭಿಸಿದರೆ ಕೆಳಗಿಡಲು ಮನಸ್ಸಾಗುವುದಿಲ್ಲ. ಕೊನೆಕೊನೆಗೆ ಘಟನೆಗಳು ಮನಸ್ಸನ್ನು ಭಾರವಾಗಿಸುತ್ತವೆ ಎಂಬುದೂ ನಿಜ.
ಸುಮಾರು ನಾಲ್ಕು ನೂರು ವರ್ಷಗಳ ಮೊದಲು, ಈಗಿನಂತೆ ಸಂಪರ್ಕ ಸಾಧನ, ವ್ಯವಸ್ಥೆಗಳಿಲ್ಲದ ಕಾಲದಲ್ಲಿ, ಕೇವಲ, ಪ್ರತಿನಿತ್ಯ ಅಂಗಳದಲ್ಲಿನ ರಂಗೋಲಿಯನ್ನು ನೋಡಿ, ಆ ರಂಗೋಲಿಯ ಹಿಂದಿನ ಕರ್ತೃವಿನ ಬಗ್ಗೆ ಆಸಕ್ತಿ ಮೂಡಿ, ಆ ಬಗ್ಗೆ ರಾಜರು ವಿಚಾರಿಸುತ್ತಾರೆ. ಇಲ್ಲಿ ರಂಗೋಲಿ ಎಂಬುದು ಪ್ರೇಮಕ್ಕೂ, ಕೊನೆಗೆ ಪ್ರೇಮದ ಒಪ್ಪಿಗೆಗೂ ರೂಪಕವಾಗಿದೆ. “ಗಂಡಬೇರುಂಡ” ದ ಚಿತ್ರವನ್ನೂ ಸುಲಭದಲ್ಲಿ ಬಿಡಿಸುವ ಚಂಪಕಾಳ ಕಲೆಗೂ ಹಿಡಿದ ಕನ್ನಡಿಯಾಗಿದೆ. ಇದರ ನಡುವೆಯೇ ಹಲವು ತರಹದ ರಾಜಕಾರ್ಯಗಳೂ, ಶತ್ರುನಿಗ್ರಹ ಕಾರ್ಯವೂ, ಸಾಮ್ರಾಜ್ಯ ಬಲಪಡಿಸುವಿಕೆಯೂ ಬರುತ್ತವೆ. ಅವುಗಳಲ್ಲಿ ಮಗ್ನರಾಗಿ ರಾಜರು ಚಂಪಕಾಳನ್ನು ಮರೆತರೆನೋ ಎನ್ನುವಷ್ಟರಲ್ಲಿ ರಾಜರ ವೈಯುಕ್ತಿಕ ಜೀವನದಲ್ಲಿ ನಡೆಯುವ ಆಘಾತಗಳಿಂದ ಅವರು ಜರ್ಜರಿತರಾಗುತ್ತಾರೆ. ಸಾಮ್ರಾಜ್ಯ ಕೈ ತಪ್ಪಬಹುದೇನೋ ಎಂಬ ಆತಂಕದಿಂದ ಮಂತ್ರಿಗಳು, ಸೇನಾಧಿಕಾರಿಗಳು ತರಾತುರಿಯಲ್ಲಿ ಚಂಪಕಾಳೊಂದಿಗೆ ರಾಜರ ವಿವಾಹ ಮಾಡಿಸುತ್ತಾರೆ. ಆದರೆ, ಅದರಿಂದ ಉಂಟಾಗಬಹುದಾದ ಅಡ್ಡಪರಿಣಾಮಗಳ ಬಗ್ಗೆ ಆಗ ಯಾರಿಗೂ ಅರಿವಿರುವುದಿಲ್ಲ.
ಇಲ್ಲಿ ನನಗೆ ಆಶ್ಚರ್ಯವಾಗುವುದು ಅರುಣ್ ಪ್ರಸಾದರಿಗೆ ಇರುವ ಸ್ಥಳೀಯ ಊರುಗಳ, ಪರಿಸರಗಳ, ವಿಸ್ತಾರವಾದ ಮಾಹಿತಿ. ಪಶ್ಚಿಮಘಟ್ಟಗಳಲ್ಲಿ ದೊರಕುವ ಕಾಳುಮೆಣಸು, ಯಾಲಕ್ಕಿ, ಅರಣ್ಯ ಸಂಪನ್ಮೂಲ ಇತ್ಯಾದಿಗಳೊಂದಿಗೆ ಈ ಮಲೆನಾಡು ಭಾಗದಲ್ಲಿ ಮಾತ್ರವೇ ದೊರೆಯಬಹುದಾದ ಜಂಬಿಟ್ಟಿಗೆ ಅಥವಾ ಕೆಂಪುಕಲ್ಲು ಅಥವಾ ಚಿರೆಕಲ್ಲು ಎಂಬ ಕಲ್ಲು, ಇತ್ಯಾದಿಗಳ ಬಗ್ಗೆ ಇರುವ ಮಾಹಿತಿ. ಜಾತಿಪದ್ದತಿಯ ಬಗ್ಗೆ, ಆಯಾಯಾ ಜಾತಿಗಳ ಸಂಪ್ರದಾಯಗಳ ಬಗ್ಗೆಯೂ ಇಲ್ಲಿ ಬಹಳ ವಿವರಗಳಿವೆ.
ವೈಯುಕ್ತಿಕವಾಗಿ ನನಗೆ ಗಮನ ಸೆಳೆದ ಅಂಶ ಎಂದರೆ, ನಮ್ಮೂರು ಸಾಗರದ ಹುಟ್ಟಿನ ಬಗ್ಗೆ ಇರುವ ಒಂದಷ್ಟು ವಿವರಗಳು. ಕೆಳದಿ ಮತ್ತು ಇಕ್ಕೇರಿ ಎಂಬ ಪುರಾತನ ನಗರಗಳ ನಡುವೆ ಈ ಸಾಗರ ಇದೆ. ವೆಂಕಟಪ್ಪ ನಾಯಕರ ಅಜ್ಜ ಸದಾಶಿವ ನಾಯಕರ ನೆನಪಿಗಾಗಿ ಇಲ್ಲಿ ಸದಾಶಿವ ಸಾಗರ ಎಂಬ ಕೆರೆ ನಿರ್ಮಾಣ ಮಾಡಿದರು ಎಂಬುದಾಗಿ ಡಾ|| ಕೆಳದಿ ವೆಂಕಟೇಶ ಜೋಯಿಸರ “ ಕೆಳದಿ ಇತಿಹಾಸ ವೈಭವ “ ಪುಸ್ತಕದಲ್ಲಿಯೂ ವಿವರಣೆ ಇದೆ. ಸದಾಶಿವ ಸಾಗರದ ಸುತ್ತಮುತ್ತಲಿನ ಜಾಗದಲ್ಲಿ ನಗರ ನಿರ್ಮಾಣ ನಡೆಯುತ್ತದೆ. ಈಗ ಎಲ್ಲ ಕಡೆಯೂ ಸಾಗರ ಪಟ್ಟಣ ವಿಸ್ತರಿಸಿದೆ.
ಕೆಲವು ಕಡೆ, ಅತಿವಿರಳವಾಗಿ, ಮುದ್ರಣದೋಷ ಇದೆಯಾದರೂ, ಈ ಕಾದಂಬರಿಯ ಓದಿನ ಓಟಕ್ಕೆ ಅದು ತಡೆಯಾಗುವುದಿಲ್ಲ. ಓದಲು ಪ್ರಾರಂಭಿಸಿದರೆ ಒಂದೇ ಗುಕ್ಕಿಗೆ ಸರಸರ ಓದಿಸಿಕೊಂಡು ಹೋಗುವಂತೆ ಕಾದಂಬರಿಯನ್ನು ಬರೆಯುವ ಮೂಲಕ ಶ್ರೀಯುತ ಅರುಣ್ ಪ್ರಸಾದ್ ಅವರು ತಾವೊಬ್ಬ ಸಶಕ್ತ ಬರಹಗಾರ ಎಂಬುದನ್ನು ಇಲ್ಲಿ ನಿರೂಪಿಸಿದ್ದಾರೆ. ಲೇಖಕರ ಲೇಖನಿಯಿಂದ ಇನ್ನೂ ಹೆಚ್ಚಿನ ಕೃತಿಗಳು ಮೂಡಿಬರಲಿ ಎಂದು ಹಾರೈಸುತ್ತೇನೆ. ಧನ್ಯವಾದಗಳೊಂದಿಗೆ.
==========================
ಪುಸ್ತಕ : ಬೆಸ್ತರರಾಣಿ ಚಂಪಕಾ
ಲೇಖಕರು : ಶ್ರೀ ಕೆ.ಅರುಣ್ ಪ್ರಸಾದ್
ಪ್ರಕಾಶಕರು : ಪಶ್ಚಿಮಘಟ್ಟದ ಶಿವಮೊಗ್ಗ ಓದುಗ-ವಿಮರ್ಶಕ ಬಳಗ.
ಬೆಲೆ : 100 ರೂಪಾಯಿಗಳು
ಲಭ್ಯತೆ : ಲೇಖಕರು. ಮತ್ತು ಶ್ರೀ ಟ್ರೇಡರ್ಸ್ ಸಾಗರ
==========================
( ಈ ಲೇಖನದಲ್ಲಿ ಅಂತರ್ಜಾಲದ ಕೆಲವು ಚಿತ್ರಗಳನ್ನು, ಡಾ|| ಕೆಳದಿ ವೆಂಕಟೇಶ ಜೋಯಿಸರ “ ಕೆಳದಿ ಇತಿಹಾಸ ವೈಭವ “ ಪುಸ್ತಕದಿಂದ ಕೆಲವು ವಿವರಗಳನ್ನು ಬಳಸಿಕೊಂಡಿದ್ದೇನೆ.)
==========================
ಗೌತಮಾಯನ - Gouthamaayana
13/09/2020
https://www.facebook.com/gouthamaayana/
==========================
ಗುರುಪ್ರಸಾದ್ ಕಾನಲೆ ಅವರು ಬರೆದ ವಿಮರ್ಶೆ
Comments
Post a Comment