Blog number 964. ಸಾಹಿತಿ ಮತ್ತು ಇತಿಹಾಸದ ಪ್ರಾಧ್ಯಾಪಕರಾದ ಡಾ.ರತ್ನಾಕರ್ ಸಿ. ಕುನುಗೋಡುರವರು ಬೆಸ್ತರ ರಾಣಿ ಚಂಪಕಾ ಬಗ್ಗೆ ಬರೆದ ವಿಮರ್ಶೆ
#ಇತಿಹಾಸ_ಓದಿ_ಇತಿಹಾಸ_ಬೋದಿಸುವ #ರತ್ನಾಕರ್_ಸಿ_ಕುನುಗೋಡು ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯ ಸಕಾ೯ರಿ ಪದವಿ ಕಾಲೇಜಿನ ಅಸಿಸ್ಟೆಂಟ್ ಪ್ರೋಪೆಸರ್.
ಇವರು ಸಾಗರ ತಾಲ್ಲೂಕಿನ ತುಮರಿಯವರು ಕೆಲ ಕಾಲ ಆನಂದಪುರಂ ನಲ್ಲಿ ವಿದ್ಯಾಬ್ಯಾಸ ಮಾಡುವಾಗ ಓದಿನ ಏಕಾಂತಕ್ಕೆ ಚಂಪಕ ಸರಸ್ಸುವಿಗೆ ಹೋಗುತ್ತಿದ್ದ ನೆನಪಿಸಿ ಕೊಂಡಿದ್ದಾರೆ.
ಬಿಡುವ ಮಾಡಿ ನನ್ನ ಕಾದಂಬರಿ ಓದಿ ವಸ್ತು ನಿಷ್ಟವಾಗಿ ಅವರು ಮಾಡಿದ ವಿಮಷೆ೯ ಇಲ್ಲಿದೆ.
#ರಂಗೋಲಿಯ_ಹುಡುಗಿ_ಚಂಪಕಾ_ಳದುರಂತ_ಪ್ರೇಮ_ಕಥನ...
ನೆನ್ನೆ ಹಿರಿಯರಾದ 'ಕೆ.ಅರುಣ್ ಪ್ರಸಾದ್' ಅವರ ಇತ್ತೀಚೆಗೆ ಬಿಡುಗಡೆಗೊಂಡ 'ಬೆಸ್ತರರಾಣಿ ಚಂಪಕಾ' ಕಾದಂಬರಿ ಕೈಸೇರಿತು. ಕೈಸೇರಿದ ಒಂದೇ ದಿನದಲ್ಲಿ ಪೂರ್ಣ ಓದಿಸಿಕೊಂಡು, ಮತ್ತೆ ಮತ್ತೆ ಕಾಡುತ್ತಿರುವ ಕಾರಣಕ್ಕಾಗಿ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿರುವೆ.
ಸೌರವ್ಯೂಹದಲ್ಲಿ ಜೀವಿ ಗಳಿರುವ ಏಕೈಕ ಗ್ರಹ ಭೂಮಿ. ಅದಕ್ಕೆ ಕಾರಣ 'ಜಲ'. ಜಲ ಮೂಲದಿಂದಲೇ ಜೀವಾಂಕುರವಾಗಿ ಜೀವಜಗತ್ತು ಅಸ್ತಿತ್ವಕ್ಕೆ ಬಂದಿದ್ದು. ನಾಗರೀಕತೆ ವಿಕಾಸಗೊಂಡಿದ್ದು ನದಿಬಯಲಿನಲ್ಲೇ. ಈ ಜಲಮೂಲ ಪರಂಪರೆಯ ಇಂದಿನ ವಾರಸುದಾರರು 'ಬೆಸ್ತರು'. ನಮ್ಮೆಲ್ಲಾ ಮಹಾ ಪುರಾಣಗಳು ಜಲಪ್ರತೀಕವಾದ ಗಂಗೆಯಿಂದಲೇ ಆರಂಭಗೊಳ್ಳುತ್ತವೆ. ಇಂದಿಗೂ ನಮ್ಮೆಲ್ಲಾ ಆಚರಣೆ ಗಳಲ್ಲಿ ತುಂಬಿದಕೊಡದ ಕಳಸಕ್ಕೆ ಅಗ್ರಸ್ಥಾನ. ಇದು ಸೃಷ್ಟಿಯ ಮೂಲ ಜಲ ಪರಂಪರೆಯ ಸ್ಮರಣೆಯ ಭಾಗವಾಗಿದೆ. ಹೀಗೆ ಜಲಪರಂಪರೆಯೊಂದಿಗೆ ಬೆರತು ಅದನ್ನೇ ತಮ್ಮ ಅಸ್ಮಿತೆಯ ಕುರುಹು ಆಗಿ ಉಳಿಸಿಕೊಂಡು ಬಂದಿರುವ 'ಗಂಗಾಮತಸ್ಥ' ಕುಲದ ಒಬ್ಬ ಮುಗ್ಧ ಹುಡುಗಿ, ತನ್ನ ಜಾತಿಯ ಹಿನ್ನೆಲೆಯಿಂದಾಗಿ ರಾಣಿಯಾದರೂ ನಲುಗಿ ಆತ್ಮಹತ್ಯೆಗೆ ಶರಣಾದ ಕರುಳುಹಿಂಡುವ ಐತಿಹಾಸಿಕ ಕಥನವೇ ಈ ಕಾದಂಬರಿಯ ವಸ್ತು.
ಕೆಳದಿಯ ಅರಸು 'ವೆಂಕಟಪ್ಪನಾಯಕನು' ಚಂದದ ರಂಗವಲ್ಲಿಯ ಬಿಡಿಸುವ ಚೆಂದುಳ್ಳಿ ಚೆಲುವೆಯನ್ನು ಮೆಚ್ಚಿ ಮದುವೆಯಾಗುತ್ತಾನೆ. ಅವಳ ನೆನಪಿಗಾಗಿ ನಿರ್ಮಿಸಿದ ಚಂಪಕಸರಸ್ಸು ನೂರು ಕಥನವನ್ನು ಇಂದಿಗೂ ತನ್ನೆದೆಯಲ್ಲಿ ಬಚ್ಚಿಟ್ಟುಕೊಂಡಿದೆ. ಇದು ಕೆಳದಿ ಪ್ರಭುತ್ವದ ಇತಿಹಾಸದಲ್ಲಿ ದಾಖಲಾಗಿಲ್ಲ. ದಾಖಲಾಗುವುದೂ ಇಲ್ಲ. ಅಧಿಕಾರ ಕೇಂದ್ರದಿಂದ ನಿರೂಪಿತ ವಾಗುವ ಅಧಿಕೃತ ಇತಿಹಾಸದಲ್ಲಿ ಇಂತಹ ಹಲವು ಸಂಗತಿಗಳು ಬೇಕಂತಲೇ ಕಣ್ಮರೆಯಾಗುತ್ತವೆ. ಆದರೆ ಸಮುದಾಯಗಳ ನಡುವಿನಿಂದ ಇಂತಹ ಅಡಗಿಸಿಟ್ಟ ಘಟನೆಗಳು ವಿಭಿನ್ನವಾಗಿ ಒಡಮೂಡಿ ನೆನಪಿನಚರಿತ್ರೆಗಳಾಗಿ ತಲೆಮಾರಿನಿಂದ ತಲೆಮಾರಿಗೆ ಹಸ್ತಾಂತರ ವಾಗುತಿರುತ್ತದೆ. ಇದೇ ಸಾಂಸ್ಕೃತಿಕ ಚರಿತ್ರೆ. ಈ ಆನಂದಪುರಂನ ಚಂಪಕರಾಣಿಯ ಚರಿತ್ರೆಯನ್ನು ಜತನವಾಗಿಟ್ಟುಕೊಂಡವರು; ಅಗಸರ ನೀಲಜ್ಜಿ. ಈ ಅಜ್ಜಿಯ ನೆನಪೇ ಅರುಣ್ ಪ್ರಸಾದರ ಕಾದಂಬರಿಯ ಕೇಂದ್ರ ದಾಖಲೆ. ವಿಶೇಷವೆಂದರೆ ಈ ನೆನಪಿನ ಮೂಟೆ ನೀಲಮ್ಮ ಕಾದಂಬರಿಯೊಳಗೆ ಒಂದು ಸಾಕ್ಷಿಪ್ರಜ್ಞೆಯ ಬಹುಮುಖ್ಯ ಪಾತ್ರವಾಗಿ ಮರುಹುಟ್ಟು ಪಡೆದಿದ್ದಾರೆ.
ನಾನು ಪಿ. ಯು. ಸಿ ಓದುವಾಗ ನನ್ನ ಓದಿನ ಪ್ರಮುಖ ತಾಣವಾಗಿದ್ದು ಮಲಂದೂರಿನ ಈ ಚಂಪಕಸರಸ್ಸು. ಅಲ್ಲಿನ ಪ್ರಶಾಂತ ವಾತಾವರಣದ ಒಡಲೊಳಗೆ ಚರಿತ್ರೆಯ ನಿಗೂಢತೆಯಡಗಿರುವ ಗುಮಾನಿ ನನ್ನ ಮನದೊಳಗೆ ಹಾದುಹೋಗುತಿತ್ತು..... ಇಂದು ಆ ಸ್ಥಳ ಕೇಂದ್ರಿತ ಒಂದು ಕಾದಂಬರಿ ಓದುವಾಗ; ರೋಮಾಂಚನವೆನಿಸಿತು.
ತಾನಿರುವ ನೆಲದೊಂದಿಗಿನ ಆಪ್ತಒಡನಾಟ, ಹೇರಳ ಅನುಭವ, ಅಪಾರ ಓದು, ತನ್ನ ಸಮುದಾಯದೊಂದಿಗಿನ ಭಾವನಾತ್ಮಕ ನಂಟು, ಜೊತೆಗೆ ಮುಗ್ದ ಹೆಣ್ಣೊಬ್ಬಳ ಅಪ್ಪಟಪ್ರೇಮವನ್ನು ಅನೈತಿಕ ಸಂಬಂಧವಾಗಿ ವ್ಯಾಖ್ಯಾನಿಸುವ ರೋಗಗ್ರಸ್ತ ಸಮಾಜದ ಮನಸ್ಥಿತಿ ಯ ಮೇಲಿನ ಆಕ್ರೋಶ.... ಇವೆಲ್ಲವೂ ಮಡುಗಟ್ಟಿದ ಪರಿಣಾಮವಾಗಿ ಕಿರುಕಾದಂಬರಿ ರೂಪದ ಐತಿಹಾಸಿಕ ಸಂಕಥನವೊಂದು, ಅರುಣ್ ಪ್ರಸಾದ್ ಅವರ ಕುಂಚದಿಂದ ವಿಷಾದದಲ್ಲಿ ಅದ್ದಿ ಅರಳಿದೆ...
ಸಾಹಿತ್ಯ ವಿದ್ಯಾರ್ಥಿಯಾದ ನನಗೆ ಸಹಜವಾಗಿ ಇನ್ನಷ್ಟು ಸಾಹಿತ್ಯಿಕ ಕಲಾತ್ಮಕತೆಯ ಸ್ಪರ್ಶ ಬರವಣಿಗೆಗೆ ಬೇಕಿತ್ತು ಎನಿಸುತ್ತಿದೆ. ಕಥೆ ೧೮ನೆಯ ಶತಮಾನದ್ದು. ಓದುವಾಗ ಆ ಕಾಲಕ್ಕೆ ಓದುಗನನ್ನು ಮುಳುಗಿಸದೆ; ವರ್ತಮಾನದಲ್ಲಿ ನಿಂತು ಭೂತವನ್ನು ಕಣ್ಣಾಯಿಸುವ ಶೈಲಿಯಲ್ಲಿ ಕತೆ ಚುಟುಕಾಗಿ ಚುರುಕಾಗಿ ಸಾಗುತ್ತದೆ.
ಕಾದಂಬರಿಯ ಒಡಲೊಳಗೆ ಅಲ್ಲಲ್ಲಿ ಉಲ್ಲೇಖಗೊಂಡ ಕಿರು ವಿವರಗಳು; ಪಶ್ಚಿಮಘಟ್ಟ ಮತ್ತು ಕರಾವಳಿ ಸೀಮೆಯ ಹಲವು ಜಿಜ್ಞಾಸೆಗಳಿಗೆ ತಣ್ಣಗೆ ಪ್ರಚೋದಿಸುತ್ತವೆ. ರಂಗೋಲಿಯ ಚುಕ್ಕಿಯೊಳಗೆ ಗೆರೆಗಳ ಸುಳಿಯಲ್ಲಿ ಸಿಲುಕಿ ನಲುಗಿದ ಚಂಪಕಾ, ಮನದೊಳಗೆ ಓದಿನ ನಂತರವೂ ಕಾಡುತ್ತಾ ಶೋಕ ಭಾವವನ್ನು ಮೂಡಿಸುತ್ತಾಳೆ....
Comments
Post a Comment