Blog number 976. ಸಾಗರದ ಸೋಮೇಶ್ವರ ಅವರ ಜೀವನದಲ್ಲಿಯ ಸಾಧನೆಯ ಹಾದಿಯಲ್ಲಿ ಕಲ್ಲು ಮುಳ್ಳಿನ ಹಾದಿ ಸವಿಸಿ, ಪ್ರವಾಹದಲ್ಲಿ ಈಜಿ ದಡ ತಲುಪಿದಂತ ಸಾದಕರು ಅವರ ಜೀವನ ಮಾರ್ಗ ಆದರ್ಶನೀಯ ಅದು ನುಡಿದ೦ತೆ ನಡೆಯುವುದು, ಸಾಹಿತಿ- ಬರಹಗಾರ - ಓದುಗ -ಹಾಡುಗಾರರಾದ ಸೋಮೇಶ್ವರ ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕ ಓದಿ ವಿಮರ್ಷೆ ಮಾಡಿದ್ದಾರೆ
ನಾನು ಸಾಗರದ ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ಗೆ ಡಿಪ್ಲೋಮೋಗೆ ಹೋಗುವಾಗ ಸೋಮೆಶ್ವರ್ ಸಾಗರದ ಎಲ್.ಬಿ. ಕಾಲೇಜಿಗೆ ಬರುತ್ತಿದ್ದರು ನಮಗಿಬ್ಬರಿಗೂ ಸಮಾನ ಸ್ನೇಹ ಬಂದ ಉಂಟು ಮಾಡಿದವರು ನಂಜವಳ್ಳಿ ಮಲ್ಲಿಕಾರ್ಜುನ ಗೌಡರು.
ಆಗಲೇ ಸೋಮೇಶ್ವರ ಬರೆದ ಕಥೆಗಳು ಪ್ರಜಾವಾಣಿ, ಸುದಾಗಳಲ್ಲಿ ಪ್ರಕಟ ಆಗುತ್ತಿತ್ತು ಇವರ ತಂದೆ ಕೂಡ ಕೆಳದಿ ಮಠದಲ್ಲಿ ಸಲಹೆಗಾರರಾಗಿ ಸಹಕರಿಸಿದವರು.
ಸೋಮೇಶ್ವರ್ ಈಗ ಬೆಂಗಳೂರಲ್ಲಿ ಯಶಸ್ವಿ ಉದ್ದಿಮೆದಾರರಾಗಿದ್ದಾರೆ ನನ್ನ ಮೊದಲ ಇತಿಹಾಸ ಆದರಿತ ಕಾಲ್ಪನಿಕ ಕಾದಂಬರಿ ಬೆಸ್ತರ ರಾಣಿ ಚಂಪಕಾ ಓದಿ ಅಭಿಪ್ರಾಯ ದಾಖಲಿಸಿದ್ದಾರೆ.
#ಸೋಮೇಶ್ವರರ ವಿಮಷೆ೯ .
'
ಸಾಧಾರಣ ಮಾನವನಲ್ಲಿರುವ ಅರಿವುರಹಿತತೆ ಎನ್ನುವುದು ಶೇಕಡಾ ೯೦% ರಷ್ಟು ಎನ್ನುವುದನ್ನು ಬದುಕು ಕ್ರಮೇಣ ಅರ್ಥವಾಗಿಸುತ್ತಾ ಹೋದಂತೆ, ವೈಯುಕ್ತಿಕವಾಗಿ, ಯಾವುದೇ ಮನುಷ್ಯರ, ರಾಜರ, ಅಧಿಕಾರಸ್ತರ, ರಾಜಕಾರಣಿಗಳ ಪೂರ್ವೇತಿಹಾಸ (ಚರಿತ್ರೆ), ನನ್ನ ಆಸಕ್ತಿಯ ವಿಷಯವಾಗಿ ಉಳಿದಿಲ್ಲ. ತರಾಸುರವರ ಚಿತ್ರದುರ್ಗದ ಕುರಿತಾದ ಕೃತಿಗಳು, ಕೆ.ವಿ. ಅಯ್ಯರ್ ಅವರ ಶಾಂತಲೆಯನ್ನು ಸಹಾ ಅವುಗಳ ರೋಚಕ ಶೈಲಿಗಾಗಿಯೇ ಓದಿದವನು ನಾನು!! ಆದರೆ....
ಪ್ರಿಯ ಅರುಣ್ ಪ್ರಸಾದ್, ಸಾಗರದ ಕಾಲೇಜಿನ ದಿನಗಳಿಂದ ನನಗೆ ಪರಿಚಿತರೂ ಗೆಳೆಯರೂ ಆದ ನೀವು, ಅಂದಿನಿಂದಲೂ ತುಂಬಾ ವಿಶೇಷ ಹಾಗೂ ಆಸಕ್ತಿದಾಯಕ ವ್ಯಕ್ತಿತ್ವವುಳ್ಳವರು. ಹಾಗಾಗಿ ಮತ್ತು ನಿಮ್ಮ ಹೋರಾಟಗಳು, ಸಾಹಿತ್ಯ-ಪುಸ್ತಕ ಪ್ರೀತಿಯನ್ನು ತಕ್ಕ ಮಟ್ಟಿಗೆ ಬಲ್ಲ ನನಗೆ, ನೀವು ಐತಿಹಾಸಿಕ ಕಾದಂಬರಿ ಬರೆದಿದ್ದೀರಿ ಎಂದಾಗ, ನಿಮ್ಮ ಪ್ರಸ್ತುತಿಯ, ಅಭಿವ್ಯಕ್ತಿಯ, ಕಥನಗಾರಿಕೆಯ ಬಗ್ಗೆಯೇ ಸಹಜವಾಗಿ ಕುತೂಹಲಗಳಿದ್ದವು!!
ಚಂಪಕಾಳ ರಂಗೋಲಿಯ ಕುಸುರಿಯನ್ನು ಗಮನಿಸುವಷ್ಟು ಕೆಳದಿಯ ರಾಜ ವೆಂಕಟಪ್ಪನಾಯಕರು ಸೂಕ್ಷ್ಮಜ್ಞರಾಗಿದ್ದರು ಎನ್ನುವುದು ಖುಷಿ ಕೊಡುತ್ತದೆ. ಮತ್ತು ಇಕ್ಕೇರಿ ಹಾಗೂ ಕೆಳದಿಯ ದೇವಾಲಯಗಳ ನಿರ್ಮಾಣಗಳಲ್ಲಿ ಅವರ ವಂಶಜರ ಅಪ್ರತಿಮ ಕಲಾಭಿರುಚಿಯನ್ನು ಸಾಬೀತುಗೊಳಿಸುತ್ತದೆ ಕೂಡಾ!. ಚಂಪಕಾರಾಣಿಯ ನಿರ್ವ್ಯಾಜ್ಯ ಪ್ರೇಮ, ಮುಗ್ಧತೆ, ಅಸಹಾಯಕತೆ, ಪ್ರಬುದ್ಧತೆ, ಏಕಾಂತ ಹಾಗೂ ದುರಂತಗಳನ್ನು ನಿಮ್ಮ ಹೃದಯಸ್ಪರ್ಶಿ ಬರವಣಿಗೆಯ ಮೂಲಕ ಮೂಡಿಸಿದ ಬಗೆ ಮೃದು ಹೃದಯದವರನ್ನು ಕಾ...ಡುತ್ತದೆ.
ಚಿಕ್ಕ ಚಿಕ್ಕ ಅಧ್ಯಾಯಗಳಲ್ಲಿ ಆಕರ್ಷಕವಾಗಿ ಒತ್ತರಿಸಿದ ಮಾಹಿತಿಗಳು, ಘಟನೆಗಳನ್ನು ನಮೂದಿಸುತ್ತಲೇ, ತಕ್ಷಣವೇ ಸಂಪೂರ್ಣ ವಿವರಗಳನ್ನು ನೀಡದೇ ಓದುಗನ ಕುತೂಹಲವನ್ನು ಹಿಡಿದಿಡುವ ಬಗೆ, ಹಾಗೂ ಮುಂದೆ ಆ ಘಟನೆಗಳ, ಪಾತ್ರಗಳ ಬಗ್ಗೆ ಇತರ ಪಾತ್ರಗಳ ಮೂಲಕ ವ್ಯಕ್ತಪಡಿಸುವ ರೋಚಕ ತಿರುವುಗಳಿಂದಾಗಿ ಆಕರ್ಷಣೀಯವಾಗಿಸುವ ಕಥನತಂತ್ರ... ಎಲ್ಲವೂ ಒಟ್ಟಾಗಿ ಕೃತಿಯನ್ನು ಅತ್ಯುತ್ತಮವಾಗಿಸಿವೆ.
ಒಂದು ಸಂದರ್ಭದಲ್ಲಿ ರಾಣೀವಾಸದ ದಾಸಿ ನೀಲಮ್ಮ ಚಂಪಕರಾಣಿಯನ್ನು ಕುರಿತು ಹೇಳುವ," *ನೀವೀಗ ರಾಣಿಯವರು. ಗಂಭೀರವಾಗಿ ನಡೆದುಕೊಂಡರೆ ಸಾಕು. ಗೊತ್ತಿದ್ದರೂ ಗೊತ್ತಿಲ್ಲದಂತೆ, ಗೊತ್ತಿಲ್ಲದಿದ್ದರೆ ಗೊತ್ತಿದ್ದಂತೆ ವರ್ತಿಸಿ ಸಾಕು. ಎಲ್ಲವೂ ಸರಾಗವಾಗಿ ನಡೆದುಕೊಂಡು ಹೋಗುತ್ತೆ*" ಎನ್ನುವ ಮಾತುಗಳು ಲೇಖಕರ ಜೀವನಾನುಭವಕ್ಕೆ ಸಾಕ್ಷಿಯಾಗುತ್ತವೆ.
ಐತಿಹಾಸಿಕ ಬರಹಗಾರಿಕೆಯ ವಿಶಿಷ್ಟ ಶೈಲಿಯನ್ನು ಕಾದುಕೊಳ್ಳುತ್ತಲೇ, ಎಲ್ಲ ಐತಿಹ್ಯಗಳ ಬಗ್ಗೆ ವಿವರಗಳನ್ನು ಸೂಕ್ಷ್ಮವಾಗಿ ಜಾಣ್ಮೆಯಿಂದ ದಾಖಲಿಸುತ್ತ ಹೋಗುವ ನಿಮ್ಮ ಬರವಣಿಗೆ ಓದುಗನನ್ನು ಎಲ್ಲಿಯೂ ನಿರಾಸೆಗೊಳಿಸುವುದಿಲ್ಲ. ಅಷ್ಟೇ ಅಲ್ಲದೆ, ಅದು ಮುಂದಿನ ದಿನಗಳಲ್ಲಿ ನಿಮ್ಮನ್ನು ಅತ್ಯಂತ ಸಂವೇದನಾಶೀಲ, ಭರವಸೆಯ ಬರಹಗಾರನನ್ನಾಗಿ ಎದಿರುನೋಡುವಂತೆ ಒತ್ತಾಯಿಸುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ.
ನನಗೆ ವೈಯಕ್ತಿಕವಾಗಿ ಈ ಕಾದಂಬರಿ ಇನ್ನಷ್ಟು ಆಪ್ತವಾಗಲು, ನನ್ನ ಸಾಗರ, ಇಕ್ಕೇರಿ, ಕೆಳದಿ, ಆನಂದಪುರ ಹಾಗೂ ಸುತ್ತಮುತ್ತ ಪ್ರದೇಶದಲ್ಲಿನ ಬಾಲ್ಯದ ಒಡನಾಟದ ದಿನಗಳೂ ಸಹಾ ಕಾರಣ ಎನ್ನುವುದನ್ನು ನಾನಿಲ್ಲಿ ನಮೂದಿಸಲೇಬೇಕು.
ವಂದನೆಗಳು. ಅಭಿನಂದನೆಗಳು!!
ಇಂತಿ,
ಸೋಮೇಶ್ವರ್. ಹೆಚ್
Comments
Post a Comment