ಗಾಯತ್ರಿ_ಮಂತ್ರ
ಭಾಗ_1.
ಮಹರ್ಷಿ ವಿಶ್ವಾಮಿತ್ರರಿಂದ ಬಂದ ಗಾಯಿತ್ರಿ ಮಂತ್ರದ ಅರ್ಥ ಮತ್ತು ಮೂಲ ಗೊತ್ತಾ? ... ಇದನ್ನು ಗಂಡು- ಹೆಣ್ಣು-ತೃತೀಯ ಲಿಂಗಿ- ಶೂದ್ರ ಮತ್ತು ದಲಿತರೂ ಪಠಿಸಬಹುದು, ಉಪನಯನವಾದವರು,ಜನಿವಾರ ಧರಿಸುವವರು ಮಾತ್ರ ನಿತ್ಯ ತಪ್ಪದೆ ಪಠಣ ಮಾಡಲೇ ಬೇಕು.
ಅನೇಕರು ಗಾಯಿತ್ರಿ ಮಂತ್ರ ನಿತ್ಯ ಪಠಿಸುತ್ತಾರೆ ಆದರೆ ಅದರ ಅರ್ಥ,ಅದನ್ನು ರಚಿಸಿದ ಕಾಲ ಮತ್ತು ರಚನೆಕಾರರ ಬಗ್ಗೆ ಸೂಕ್ತ ಮಾಹಿತಿ ಪಡೆದಿರುವವರು ಕಡಿಮೆ ಅಂತವರಿಗಾಗಿ ಈ ಗಾಯಿತ್ರಿ ಮಂತ್ರದ ಸರಣಿ ಲೇಖನದ ಮೊದಲ ಭಾಗ ಇದು.
ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಆಪ್ತರಿಗೆ ಶೇರ್ ಮಾಡಲು ವಿನಂತಿ.
ಗಾಯತ್ರಿ ಮಂತ್ರ ಋಗ್ವೇದದ ಅತ್ಯಂತ ಪ್ರಸಿದ್ಧ ಹಾಗೂ ಪ್ರಮುಖವಾದ ಮಂತ್ರ.
ಇದು ಸೂರ್ಯದೇವನ ಜ್ಞಾನಶಕ್ತಿಯನ್ನು ಆರಾಧಿಸುವ ಪ್ರಾರ್ಥನೆಯಾಗಿದೆ.
#ಗಾಯಿತ್ರಿ_ಮಂತ್ರ.
ಓಂ ಭೂರ್ಭುವಸ್ಸುವಃ
ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೋ ನಃ ಪ್ರಚೋದಯಾತ್ ॥
#ಪ್ರತಿಯೊಂದು_ಪದದ_ಅರ್ಥ:
ಓಂ: ಪರಬ್ರಹ್ಮ ಪರಮಾತ್ಮನ ಪ್ರಣವ ನಾದ
ಭೂಃ: ಭೂಲೋಕ (ಭೌತಿಕ ಜಗತ್ತು)
ಭುವಃ: ಭುವರ್ಲೋಕ (ಅಂತರಿಕ್ಷ)
ಸುವಃ (ಸ್ವಃ): ಸ್ವರ್ಗಲೋಕ (ಆಧ್ಯಾತ್ಮಿಕ ಲೋಕ)
ತತ್: ಆ ಪರಮಾತ್ಮನ
ಸವಿತುಃ: ಸೂರ್ಯದೇವನ / ಸೃಷ್ಟಿಕರ್ತನ
ವರೇಣ್ಯಂ: ಶ್ರೇಷ್ಠವಾದ / ಪೂಜ್ಯವಾದ
ಭರ್ಗಃ: ದಿವ್ಯ ತೇಜಸ್ಸು / ಜ್ಞಾನದ ಪ್ರಕಾಶ
ದೇವಸ್ಯ: ದೈವಿಕ ಶಕ್ತಿಯ
ಧೀಮಹಿ: ನಾವು ಧ್ಯಾನಿಸುತ್ತೇವೆ
ಧಿಯಃ: ಬುದ್ಧಿ / ಜ್ಞಾನ
ಯಃ: ಯಾರು
ನಃ: ನಮ್ಮ
ಪ್ರಚೋದಯಾತ್: ಸನ್ಮಾರ್ಗದಲ್ಲಿ ಪ್ರೇರೇಪಿಸಲಿ.
#ಸರಳ_ಭಾವಾರ್ಥ:
"ಸಮಸ್ತ ಲೋಕಗಳನ್ನು ಬೆಳಗುವ ಆ ಶ್ರೇಷ್ಠ ಸೃಷ್ಟಿಕರ್ತ ದೇವನ ದಿವ್ಯ ತೇಜಸ್ಸನ್ನು ನಾವು ಧ್ಯಾನಿಸುತ್ತೇವೆ ಆ ಪರಮಾತ್ಮನ ಬೆಳಕು ನಮ್ಮ ಬುದ್ಧಿ ಮತ್ತು ಮನಸ್ಸನ್ನು ಜ್ಞಾನ ಹಾಗೂ ಸತ್ಯದ ಮಾರ್ಗದಲ್ಲಿ ಪ್ರೇರೇಪಿಸಲಿ."
#ಮಹತ್ವ:
ಇದು ಯಾವುದೇ ಒಂದು ಪಂಥ ಅಥವಾ ವ್ಯಕ್ತಿಗೆ ಸೀಮಿತವಲ್ಲದ ಕೇವಲ ಜ್ಞಾನ ಮತ್ತು ಬುದ್ಧಿಯ ಬೆಳವಣಿಗೆಯನ್ನು ಕೋರುವ ಸಾರ್ವತ್ರಿಕ ಪ್ರಾರ್ಥನೆ.
ಮನಸ್ಸಿನ ಏಕಾಗ್ರತೆ, ಶಾಂತಿ ಮತ್ತು ಬುದ್ಧಿಶಕ್ತಿಯ ವಿಕಾಸಕ್ಕೆ ಈ ಮಂತ್ರದ ಜಪವನ್ನು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ.
ಮಹರ್ಷಿ ವಿಶ್ವಾಮಿತ್ರರು ಗಾಯತ್ರಿ ಮಂತ್ರವನ್ನು ರಚಿಸಿದ ಕಾಲದಲ್ಲಿ ಅಥವಾ ಮೂಲ ವೈದಿಕ ಸಾಹಿತ್ಯದಲ್ಲಿ ಯಾವುದೇ ಜಾತಿ ಅಥವಾ ವರ್ಗಕ್ಕೆ ಮಂತ್ರವನ್ನು ನಿರ್ಬಂಧಿಸಿರಲಿಲ್ಲ.
ಮೂಲ ಋಗ್ವೇದದಲ್ಲಿ ವಿಶ್ವಾಮಿತ್ರರು ಸಾರಿದ ಗಾಯತ್ರಿ ಮಂತ್ರವು ಸೂರ್ಯದೇವನ ಜ್ಞಾನಪ್ರಕಾಶವನ್ನು ಬೇಡುವ ಪ್ರಾರ್ಥನೆಯಾಗಿದ್ದು, ಯಾರೊಬ್ಬರಿಗೂ ಅದನ್ನು ಪಠಿಸದಂತೆ ಅವರು ನಿಷೇಧಿಸಿರಲಿಲ್ಲ.
ಆರಂಭಿಕ ಋಗ್ವೇದ ಕಾಲದಲ್ಲಿ ಜನ್ಮನಾ ವರ್ಣವಿರಲಿಲ್ಲ
ವಿಶ್ವಾಮಿತ್ರರು ಗಾಯತ್ರಿ ಮಂತ್ರವನ್ನು ಕಂಡುಕೊಂಡ (ದರ್ಶನ ಪಡೆದ) ಆರಂಭಿಕ ವೈದಿಕ ಕಾಲದಲ್ಲಿ ಇಂದಿನಂತೆ ಜನ್ಮಧಾರಿತ ಕಟ್ಟುನಿಟ್ಟಾದ 'ಶೂದ್ರ' ಅಥವಾ 'ದಲಿತ' ಎಂಬ ಅಸ್ಪೃಶ್ಯ ವ್ಯವಸ್ಥೆ ಇರಲಿಲ್ಲ,ಆಗ ವರ್ಣಗಳು ಗುಣ ಮತ್ತು ವೃತ್ತಿಯನ್ನು ಆಧರಿಸಿದ್ದವು.
ಸ್ವತಃ ವಿಶ್ವಾಮಿತ್ರರ ಜೀವನವೇ ವರ್ಣಭೇದ ಮತ್ತು ಪುರೋಹಿತಶಾಹಿ ಕಟ್ಟುಪಾಡುಗಳ ವಿರುದ್ಧದ ಬಂಡಾಯವಾಗಿತ್ತು.
ಅವರು ಕ್ಷತ್ರಿಯರಾಗಿದ್ದರೂ ಬ್ರಹ್ಮಜ್ಞಾನಿಯಾಗಿ ಮಂತ್ರದ್ರಷ್ಟಾರರಾದರು,
ಶಾಪಗ್ರಸ್ತನಾಗಿ ಚಂಡಾಲ ಸ್ಥಿತಿಗೆ ಇಳಿದಿದ್ದ ತ್ರಿಶಂಕುವಿಗೆ ಸ್ವರ್ಗ ಪ್ರಾಪ್ತಿಗಾಗಿ ತಾವೇ ನೇತೃತ್ವ ವಹಿಸಿ ಯಜ್ಞ ಮಾಡಿಸಿದರು.
ಬಲಿಪಶುವಾಗಬೇಕಿದ್ದ ಅನಾಥ ಬಾಲಕ ಶುನಶ್ಯೇಫನಿಗೆ ಮಂತ್ರಗಳನ್ನು ಬೋಧಿಸಿ ಆತನ ಜೀವ ಉಳಿಸಿದರು.
ಹೀಗಾಗಿ ಜ್ಞಾನ ಮತ್ತು ಮಂತ್ರ ಎಲ್ಲರಿಗೂ ಮುಕ್ತವಾಗಿರಬೇಕು ಎಂಬುದು ವಿಶ್ವಾಮಿತ್ರರ ನಡವಳಿಕೆಯಿಂದ ಸ್ಪಷ್ಟವಾಗುತ್ತದೆ.
ಗಾಯತ್ರಿ ಮಂತ್ರ ಶೂದ್ರರಿಗೆ ಸಲ್ಲದು ಎಂಬ ನಿರ್ಬಂಧವನ್ನು ವಿಶ್ವಾಮಿತ್ರರು ಹೇರಿದ್ದಲ್ಲ. ವೈದಿಕ ಕಾಲದ ನಂತರ ರಚನೆಯಾದ ಮನುಸ್ಮೃತಿ ಮತ್ತಿತರ ಧರ್ಮಶಾಸ್ತ್ರಗಳ ಕಾಲದಲ್ಲಿ, ಗಾಯತ್ರಿ ಮಂತ್ರವನ್ನು ಕೇವಲ 'ಉಪನಯನ ಸಂಸ್ಕಾರ'ಕ್ಕೆ ಸೀಮಿತಗೊಳಿಸಿ, ಶೂದ್ರರಿಗೆ ಉಪನಯನವನ್ನು ನಿಷೇಧಿಸುವ ಮೂಲಕ ಈ ಮಂತ್ರದಿಂದ ಅವರನ್ನು ದೂರವಿಡಲಾಯಿತು.
ಗಾಯತ್ರಿ ಮಂತ್ರವು ಮೂಲತಃ ಋಗ್ವೇದದ 3ನೇ ಮಂಡಲದ (3.62.10) ಭಾಗವಾಗಿದ್ದು, ಇದರ ಕಾಲಘಟ್ಟವನ್ನು ಎರಡು ನೆಲೆಗಳಲ್ಲಿ ಗುರುತಿಸಲಾಗುತ್ತದೆ.
ಐತಿಹಾಸಿಕ ಹಾಗೂ ಭಾಷಾಶಾಸ್ತ್ರಜ್ಞರ ಪ್ರಕಾರ
ಕ್ರಿ.ಪೂ. 1500 ರಿಂದ 1200 ಅಂದರೆ ಸುಮಾರು 3200 ರಿಂದ 3500ವರ್ಷಗಳ ಹಿಂದೆ ಗಾಯಿತ್ರಿ ಮಂತ್ರ ರಚನೆ ಆಗಿದೆ.
ಋಗ್ವೇದದ 3ನೇ ಮಂಡಲವು ವೇದಗಳ ಅತ್ಯಂತ ಪ್ರಾಚೀನ ಭಾಗಗಳಲ್ಲಿ ಒಂದಾಗಿದ್ದು, ಆರಂಭಿಕ ವೈದಿಕ ಕಾಲಘಟ್ಟದಲ್ಲಿ ರಚನೆಯಾಗಿದೆ ಎಂದು ಮ್ಯಾಕ್ಸ್ ಮುಲ್ಲರ್, ಬಿ. ಕೆ. ಘೋಷ್ ಮುಂತಾದ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.
ಭಾರತೀಯ ಪೌರಾಣಿಕ ಹಾಗೂ ಸಾಂಪ್ರದಾಯಿಕ ನಂಬಿಕೆಯ ಪ್ರಕಾರ ಈ ಮಂತ್ರದ ರಚನಾಕಾರರು ಬ್ರಹ್ಮರ್ಷಿ ವಿಶ್ವಾಮಿತ್ರರು.
ಸಾಂಪ್ರದಾಯಿಕ ನಂಬಿಕೆಯ ಪ್ರಕಾರ ವೇದಗಳು ಮತ್ತು ಮಂತ್ರಗಳು
'ಅಪೌರುಷೇಯ' (ಮಾನವ ನಿರ್ಮಿತವಲ್ಲ) ಅವು ಅನಾದಿ ಕಾಲದಿಂದಲೂ ಸೃಷ್ಟಿಯಲ್ಲಿದ್ದು, ತಪಸ್ಸಿನ ಮೂಲಕ ಋಷಿ ವಿಶ್ವಾಮಿತ್ರರ ಧ್ಯಾನಸ್ಥ ಮನಸ್ಸಿಗೆ ಗೋಚರವಾದವು, ದರ್ಶನವಾಯಿತು ಎನ್ನುತ್ತಾರೆ.
ನೀವು ನಿತ್ಯ ಗಾಯಿತ್ರಿ ಮಂತ್ರ ಪಠಿಸುತ್ತೀರಾ? ... ಈ ಮಂತ್ರದ ಅರ್ಥ ಮತ್ತು ಮೂಲ ನಿಮಗೆ ತಿಳಿದಿತ್ತಾ ತಿಳಿಸಿ ...
#gayitrimantra #vishwamitra #trishanku #iquvaku #suryavamsha
Comments
Post a Comment