ಬನ್ನಿ_ಮರ
ಬನ್ನಿ_ಮುಡಿದು_ಬಂಗಾರವಾಗೋಣ.
ವಿಜಯದಶಮಿಯಂದು_ಬನ್ನಿ_ಎಲೆ_ವಿನಿಮಯದ_ಹಿಂದಿರುವ_ಇತಿಹಾಸ_ಮತ್ತು_ಮಹತ್ವ.
"ಬನ್ನಿ ಮುಡಿಯಿರಿ, ಬಂಗಾರದಂತೆ ಬಾಳಿರಿ..."
ಈ ಲೇಖನ ಓದಿದರೆ ಈ ವರ್ಷ ವಿಜಯ ದಶಮಿ ದಿನ ಬನ್ನಿ ಸ್ವೀಕರಿಸುವಾಗ ಅಥವ ಅದನ್ನು ನೀಡುವಾಗ ಬನ್ನಿಯ ಬಗ್ಗೆ ನಿಮ್ಮ ಭಾವನೆಯೇ ಬದಲಾಗಲಿದೆ.
ವಿಜಯದಶಮಿಯ ಸಂಜೆ ನಾಡಿನ ಹಳ್ಳಿ-ನಗರಗಳಲ್ಲಿ ಪರಸ್ಪರ ಬನ್ನಿ ಎಲೆಗಳನ್ನು ಹಂಚಿಕೊಳ್ಳುತ್ತಾ, ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವ ದೃಶ್ಯ ಅತ್ಯಂತ ಸುಂದರ ಹಾಗೂ ಭಾವನಾತ್ಮಕ.
ಆದರೆ ಇದಕ್ಕೊಂದು #ಇತಿಹಾಸ ಇದೆ ಎನ್ನುವುದು ಹೊಸ ತಲೆಮಾರಿಗೆ ತಿಳಿಸಿ ಹೇಳುವ ಪ್ರಯತ್ನ ಈ ಲೇಖನ ಆಗಿದೆ.
ನವರಾತ್ರಿಯ ಒಂಬತ್ತು ದಿನಗಳ ಸಂಭ್ರಮದ ನಂತರ ಬರುವ ವಿಜಯದಶಮಿಯಂದು ಈ ಸಣ್ಣ ಎಲೆಯನ್ನು ಬಂಗಾರವೆಂದು ಪರಿಗಣಿಸಿ ಪರಸ್ಪರ ವಿನಿಮಯ ಮಾಡಿಕೊಳ್ಳುವ ಪರಂಪರೆ ಹೇಗೆ ಬಂತು? ಇದರ ಹಿಂದಿರುವ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಕಾರಣಗಳ ವಿವರ ಇಲ್ಲಿದೆ.
#ಪಾಂಡವರು ಹನ್ನೆರಡು ವರ್ಷಗಳ ವನವಾಸ ಮುಗಿಸಿ ಒಂದು ವರ್ಷದ ಅಜ್ಞಾತವಾಸವನ್ನು ವಿರಾಟ ನಗರದಲ್ಲಿ ಕಳೆಯಬೇಕಾಗಿ ಬರುತ್ತದೆ.
ತಮ್ಮ ಅಸ್ತ್ರ-ಶಸ್ತ್ರಗಳನ್ನು ವಿಶೇಷವಾಗಿ ಅರ್ಜುನನ ಗಾಂಡೀವವನ್ನು ಹಿಡಿದು ಅಜ್ಞಾತವಾಸಕ್ಕೆ ಹೋದರೆ ಗುರುತು ಸಿಗುವ ಅಪಾಯವಿದ್ದ ಕಾರಣ ಅವೆಲ್ಲವನ್ನೂ ಊರ ಹೊರಗಿದ್ದ ಬೃಹತ್ ಶಮಿ (ಬನ್ನಿ) ವೃಕ್ಷದ ರಂಧ್ರದಲ್ಲಿ ಬಚ್ಚಿಡುತ್ತಾರೆ.
ಒಂದು ವರ್ಷದ ಅಜ್ಞಾತವಾಸ ಯಶಸ್ವಿಯಾಗಿ ಪೂರ್ಣಗೊಂಡ ದಿನವೇ ‘#ವಿಜಯದಶಮಿ’.
ಅಂದು ಪಾಂಡವರು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ತಮ್ಮ ಶಸ್ತ್ರಗಳನ್ನು ಮರಳಿ ಪಡೆದು ಕೌರವರ ಸೈನ್ಯದ ವಿರುದ್ಧ ವಿಜಯ ಸಾಧಿಸುತ್ತಾರೆ.
"ಯಾವ ಮರ ನಮ್ಮ ಶಸ್ತ್ರಗಳನ್ನು ರಕ್ಷಿಸಿ ನಮಗೆ ವಿಜಯವನ್ನು ತಂದುಕೊಟ್ಟಿತೋ, ಆ ಶಮಿ ವೃಕ್ಷವು ಸದಾ ಪೂಜನೀಯ" ಎಂದು ಪಾಂಡವರು ನಮಸ್ಕರಿಸುತ್ತಾರೆ.
ಅಂದಿನಿಂದ ದುಷ್ಟ ಶಕ್ತಿಗಳ ಮೇಲೆ ಶಿಷ್ಟರ ವಿಜಯದ ಸಂಕೇತವಾಗಿ ಶಮಿ (ಬನ್ನಿ) ಪೂಜೆ ಆರಂಭವಾಯಿತು.
#ಬನ್ನಿ_ಎಲೆ_ಬಂಗಾರವಾದದ್ದು_ಹೇಗೆ?
#ಕೌತ್ಸನ_ಕಥೆ...
ಪುರಾಣಗಳಲ್ಲಿ ಮತ್ತೊಂದು ರೋಚಕ ಕಥೆಯಿದೆ,ವರತಂತು ಎಂಬ ಋಷಿಯ ಬಳಿ ಶಿಕ್ಷಣ ಮುಗಿಸಿದ ಕೌತ್ಸ ಎಂಬ ಶಿಷ್ಯ, ಗುರುದಕ್ಷಿಣೆ ನೀಡಲು ಬಯಸುತ್ತಾನೆ.
ಶಿಷ್ಯನ ಹಠಕ್ಕೆ ಮಣಿದ ಗುರುಗಳು 14 ಕೋಟಿ ಚಿನ್ನದ ನಾಣ್ಯಗಳನ್ನು ಕೇಳುತ್ತಾರೆ ಅಷ್ಟು ದೊಡ್ಡ ಮೊತ್ತವನ್ನು ತರಲು ಕೌತ್ಸನು #ರಘು_ಮಹಾರಾಜನ (ಶ್ರೀರಾಮನ ಪೂರ್ವಜ) ಬಳಿ ಸಹಾಯ ಕೇಳುತ್ತಾನೆ.
ಆಗಷ್ಟೇ ಮಹಾಯಾಗವೊಂದನ್ನು ಮಾಡಿ ತನ್ನ ಸಂಪತ್ತನ್ನೆಲ್ಲಾ ದಾನ ಮಾಡಿದ್ದ ರಘು ಮಹಾರಾಜನು, ಶಿಷ್ಯನ ಮಾತನ್ನು ಉಳಿಸಲು #ಕುಬೇರನ ಮೇಲೆ ಯುದ್ಧ ಸಾರಲು ಸಿದ್ಧನಾಗುತ್ತಾನೆ.
ಹೆದರಿದ ಕುಬೇರನು ರಾಜನ ನಗರದ ಹೊರಗಿದ್ದ ಬನ್ನಿ ಮರಗಳ ಮೇಲೆ ಚಿನ್ನದ ನಾಣ್ಯಗಳ ಮಳೆಯನ್ನೇ ಸುರಿಸುತ್ತಾನೆ.
ರಘು ಮಹಾರಾಜ ಆ ಬಂಗಾರವನ್ನೆಲ್ಲ ಕೌತ್ಸನಿಗೆ ನೀಡಲು ಮುಂದಾಗುತ್ತಾನೆ.
ಆದರೆ ಕೌತ್ಸ ತನಗೆ ಬೇಕಾದ 14 ಕೋಟಿ ನಾಣ್ಯಗಳನ್ನು ಮಾತ್ರ ತೆಗೆದುಕೊಂಡು ಉಳಿದದ್ದನ್ನು ಊರಿನ ಜನರಿಗೆ ಹಂಚುತ್ತಾನೆ.
ಜನರು ಅತ್ಯಂತ ಸಂತಸದಿಂದ ಆ ಬಂಗಾರವನ್ನು ಪರಸ್ಪರ ಹಂಚಿಕೊಂಡ ದಿನವೇ ವಿಜಯದಶಮಿ.
ಈ ಘಟನೆಯ ನೆನಪಿಗಾಗಿ ಬನ್ನಿ ಎಲೆಯನ್ನು ಬಂಗಾರವೆಂದು ಭಾವಿಸಿ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯ ಬೆಳೆದುಬಂತು.
ವಿಜಯನಗರ ಹಾಗೂ ಮೈಸೂರು ಅರಸರ ವಿಜಯಯಾತ್ರೆ
ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಬನ್ನಿ ಪೂಜೆಗೆ ರಾಜಮನ್ನಣೆ ದೊರೆಯಿತು.
ರಾಜರು ಯುದ್ಧಕ್ಕೆ ಹೊರಡುವ ಮುನ್ನ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ, ‘ಸೀಮೋಲ್ಲಂಘನ’ (ಗಡಿ ದಾಟಿ ಹೋಗುವುದು) ಮಾಡುತ್ತಿದ್ದರು.
ನಂತರ ಮೈಸೂರು ಒಡೆಯರು ಈ ಪರಂಪರೆಯನ್ನು ಮುಂದುವರಿಸಿದರು.
ಇಂದಿಗೂ ಮೈಸೂರು ದಸರಾದಲ್ಲಿ ಜಂಬೂಸವಾರಿಯ ನಂತರ ಬನ್ನಿಮಂಟಪದಲ್ಲಿ ಶಮಿ ಪೂಜೆ ನಡೆಯುವುದೇ ಈ ವಿಜಯದ ಸಂಕೇತ.
ರಾಜರು ಯುದ್ಧ ಜಯಿಸಿ ಬಂದ ಸಂತೋಷದಲ್ಲಿ ಪ್ರಜೆಗಳಿಗೆ ಕಾಣಿಕೆಗಳನ್ನು, ಬನ್ನಿ ಎಲೆಗಳನ್ನು ಹಂಚುತ್ತಿದ್ದರು.
ಬನ್ನಿ ವಿನಿಮಯ ಕೇವಲ ಒಂದು ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಅದೊಂದು ಸೌಹಾರ್ದತೆಯ ಬೆಸುಗೆ.
ವರ್ಷಪೂರ್ತಿ ಎಷ್ಟೇ ಮನಸ್ತಾಪ, ಸಿಟ್ಟು-ಸೆಡವುಗಳಿದ್ದರೂ, ವಿಜಯದಶಮಿಯಂದು "ಬನ್ನಿ ತಗೋ, ಬಂಗಾರದಂಗ ಇರು" ಎಂದು ಕೈಕುಲುಕಿದಾಗ ಹಳೆಯ ಕಹಿ ಮಾಯವಾಗಿ ಹೊಸ ಸ್ನೇಹ ಚಿಗುರುತ್ತದೆ.
ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರೂ ಒಂದೇ ಎಲೆಯನ್ನು ಬಂಗಾರವೆಂದು ಸ್ವೀಕರಿಸುತ್ತಾರೆ.
ನಿಸರ್ಗದ ಸಣ್ಣ ಎಲೆಯೂ ಪ್ರೀತಿ-ವಿಶ್ವಾಸದಿಂದ ಕೂಡಿದಾಗ ಬಂಗಾರಕ್ಕಿಂತ ಮಿಗಿಲು ಎಂಬ ಸಂದೇಶ ಇದರಲ್ಲಿದೆ.
ಕಿರಿಯರು ಬನ್ನಿ ಎಲೆ ಕೊಟ್ಟು ಹಿರಿಯರ ಕಾಲಿಗೆ ನಮಸ್ಕರಿಸುವುದು ಸಂಸ್ಕಾರ ಮತ್ತು ವಿನಯದ ಪ್ರತೀಕವಾಗಿದೆ.
ಬನ್ನಿ ಎಂದರೆ ಕೇವಲ ಹಸಿರೆಲೆಯಲ್ಲ ಅದು ಶುದ್ಧ ಮನಸ್ಸು, ಶಾಂತಿ, ಹಾಗೂ ಎಲ್ಲರ ಬದುಕು ಬಂಗಾರವಾಗಲಿ ಎಂಬ ಹಾರೈಕೆ.
ಈ ವಿಜಯದಶಮಿಯಂದು ನಾವೂ ಮನಸ್ಸಿನ ಕಲ್ಮಶಗಳನ್ನು ದೂರವಿಟ್ಟು, ಪರಸ್ಪರ ಪ್ರೀತಿ-ವಿಶ್ವಾಸದ ಬಂಗಾರವನ್ನು ಹಂಚೋಣ.
ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು!
#Vijayadashami #BanniPuja #Dasara #KarnatakaTradition #IndianCulture #MysuruDasara
Comments
Post a Comment