ಕೇಂದ್ರ_ಸರ್ಕಾರ_ಮಲೆನಾಡಿಗೆ_ಪ್ರತ್ಯೇಕ_ಪರ್ವತ_ಮಲೆನಾಡು_ಬರ_ನಿಯಮಾವಳಿ_ರೂಪಿಸದಿದ್ದರೆ_ಶಾಶ್ವತ_ಪರಿಹಾರ_ಇಲ್ಲ.
ಮಲೆನಾಡಿನ ತಾಲ್ಲೂಕುಗಳಲ್ಲಿ ಬರಗಾಲ ಇದ್ದರೂ ಸರ್ಕಾರ ಬರಪೀಡಿತ ಎಂದು ಘೋಷಿಸಲು ಸಾಧ್ಯವಿಲ್ಲ.
ಮಲೆನಾಡು ಪ್ರದೇಶದ ಜನಪ್ರತಿನಿದಿಗಳು, ಜನಪರ ಹೋರಾಟಗಾರರು ಈ ಲೇಖನ ಗಮನವಿಟ್ಟು ಓದಿ ಮತ್ತು ಇದನ್ನು ಸಂಬಂದಪಟ್ಟವರಿಗೆ ಶೇರ್ ಮಾಡಿ.
ಮಲೆನಾಡಿನಲ್ಲಿ ಬರಗಾಲ ಬಂದಿದೆ ಆದರೆ ಸರ್ಕಾರ ಬರ ಪೀಡಿತ ತಾಲ್ಲೂಕು ಘೋಷಣೆ ಮಾಡಿಲ್ಲ, ವಿರೋಧ ಪಕ್ಷಗಳು ಮತ್ತು ರೈತ ಸಂಘಟನೆಗಳು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಬರ ಪೀಡಿತ ತಾಲ್ಲೂಕು ಘೋಷಣೆ ಮಾಡಿ ಎಂದು ಪ್ರತಿಭಟನೆ ಮಾಡುತ್ತಿದೆ.
ಆದರೆ ಕೇಂದ್ರ ಸರ್ಕಾರದ ಬರ ಘೋಷಣೆಗೆ ಅಂಗೀಕರಿಸಿದ ಮಾನದಂಡ ಬದಲಾಗದೇ ಇದು ಸಾಧ್ಯವಿಲ್ಲ ಅದಕ್ಕಾಗಿ ಸಂಸದರು ಮತ್ತು ಶಾಸಕರಿಗೆ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸ ಚೇಕಾಗಿದೆ.
ಎಲ್ಲಿಯ ತನಕ ಮಲೆನಾಡಿನ #ಶಾಸಕರು, #ಸಂಸದರು ಮತ್ತು #ರೈತ_ಸಂಘಟನೆಗಳು ಮಲೆನಾಡಿಗೆ ಪ್ರತ್ಯೇಕ ‘ಪರ್ವತ/ಮಲೆನಾಡು ಬರ ನಿಯಮಾವಳಿ’ (#Hilly_Terrain_Drought_Norms) ರೂಪಿಸುವಂತೆ #ಕೇಂದ್ರ_ಸರ್ಕಾರಕ್ಕೆ ನಿಯೋಗದ ಮೂಲಕ ಒತ್ತಡ ತರುವುದಿಲ್ಲವೋ ಅಲ್ಲಿ ತನಕ ಇದಕ್ಕೆ ಶಾಶ್ವತ ಪರಿಹಾರ ಇಲ್ಲ.
ಕರ್ನಾಟಕದಲ್ಲಿ ಒಂದು ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲು ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಬರ ನಿರ್ವಹಣಾ ಕೈಪಿಡಿ’ - 2016/2020 ಮತ್ತು ರಾಜ್ಯ ಸರ್ಕಾರದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.
ಸಾಗರ ಮತ್ತು ಹೊಸನಗರ ತಾಲ್ಲೂಕುಗಳು ಮಲೆನಾಡು ಭಾಗದಲ್ಲಿದ್ದು, ತೀವ್ರ ನೀರಿನ ಕೊರತೆ ಅಥವಾ ಮಳೆ ಕೊರತೆ ಎದುರಾದರೂ ತಾಂತ್ರಿಕವಾಗಿ ಬರ ಪಟ್ಟಿಗೆ ಸೇರದಿರಲು ಪ್ರಮುಖ ಕಾರಣಗಳು.
ಮಳೆಯ ಕೊರತೆಯ ಶೇಕಡಾವಾರು ಮಾನದಂಡ
ಬರ ಘೋಷಣೆಯಾಗಲು ಮೊದಲ ಹಂತದಲ್ಲಿ ವಾಡಿಕೆ ಮಳೆಗಿಂತ ಕನಿಷ್ಠ 60% ಕ್ಕಿಂತ ಹೆಚ್ಚು ಕೊರತೆ ಇರಬೇಕು ಅಥವಾ ಸತತ 3 ರಿಂದ 4 ವಾರಗಳ ಕಾಲ ಮಳೆಯಿಲ್ಲದೆ ಡ್ರೈ ಸ್ಟೆಲ್ ಇರಬೇಕು.
ಸಾಗರ ಮತ್ತು ಹೊಸನಗರ ತಾಲ್ಲೂಕುಗಳ ಸರಾಸರಿ ವಾಡಿಕೆ ಮಳೆಯ ಪ್ರಮಾಣ ಅತ್ಯಂತ ಹೆಚ್ಚು (ಸುಮಾರು 2,000 ಮಿ.ಮೀ ನಿಂದ 3,500 ಮಿ.ಮೀ ವರೆಗೆ).
ಒಂದು ಋತುವಿನಲ್ಲಿ ಇಲ್ಲಿ 500 ರಿಂದ 800 ಮಿ.ಮೀ ಮಳೆ ಕೊರತೆಯಾದರೂ, ಒಟ್ಟಾರೆ ಸುರಿದ ಮಳೆಯ ಪ್ರಮಾಣವು ಅಂಕಿ-ಅಂಶಗಳ ಲೆಕ್ಕದಲ್ಲಿ ರಾಜ್ಯದ ಇತರೆ ಬಯಲುಸೀಮೆ ಭಾಗಗಳಿಗಿಂತ ಹೆಚ್ಚಾಗಿಯೇ ಕಾಣಿಸುತ್ತದೆ.
ಇದರಿಂದಾಗಿ ತಾಂತ್ರಿಕವಾಗಿ ಕೊರತೆಯ ಶೇಕಡಾವಾರು ಪ್ರಮಾಣ ನಿಗದಿತ ಮಾನದಂಡವನ್ನು ಮುಟ್ಟುವುದಿಲ್ಲ.
ಉಪಗ್ರಹ ಆಧಾರಿತ ಹಸಿರು ಸೂಚ್ಯಂಕ,ಬರ ಘೋಷಣೆಗೆ ಕಡ್ಡಾಯವಾಗಿ ಇಸ್ರೋ/ರಿಮೋಟ್ ಸೆನ್ಸಿಂಗ್ ಆಧಾರಿತ NDVI (Normalized Difference Vegetation Index) ಮತ್ತು NDWI (Water Index) ತಪಾಸಣೆ ನಡೆಸಲಾಗುತ್ತದೆ.
ಹೊಸನಗರ ಮತ್ತು ಸಾಗರ ತಾಲ್ಲೂಕುಗಳಲ್ಲಿ ನಿತ್ಯಹರಿದ್ವರ್ಣ ಕಾಡುಗಳು, ಅಡಿಕೆ-ತೆಂಗಿನ ತೋಟಗಳು ಮತ್ತು ದಟ್ಟ ಅರಣ್ಯ ಪ್ರದೇಶ ಹೆಚ್ಚಾಗಿರುವುದರಿಂದ ಉಪಗ್ರಹ ಚಿತ್ರಣಗಳಲ್ಲಿ ಹಸಿರು ಕವಚ (Green Canopy) ಸದಾ ದಟ್ಟವಾಗಿಯೇ ಗೋಚರಿಸುತ್ತದೆ.
ನೆಲಮಟ್ಟದಲ್ಲಿ ಅಂತರ್ಜಲ ಕುಸಿದಿದ್ದರೂ ಅಥವಾ ಕೃಷಿ ಭೂಮಿಯಲ್ಲಿ ತೇವಾಂಶ ಕೊರತೆಯಾಗಿದ್ದರೂ, ಉಪಗ್ರಹ ಸೂಚ್ಯಂಕವು ‘ಸಾಮಾನ್ಯ’ (Normal) ಎಂದೇ ದಾಖಲಿಸುತ್ತದೆ.
ಕೃಷಿ ಬೆಳೆ ನಷ್ಟದ ಮಾನದಂಡ (Crop Loss vs. Crop Type)
ಸರ್ಕಾರದ ಮಾರ್ಗಸೂಚಿ ಪ್ರಕಾರ ಕನಿಷ್ಠ 33% ಕ್ಕಿಂತ ಹೆಚ್ಚು ಕೃಷಿ ಬೆಳೆ ಹಾನಿ ಸಂಭವಿಸಿರಬೇಕು.
ಈ ಮಾನದಂಡವು ಹೆಚ್ಚಾಗಿ ಭತ್ತ, ರಾಗಿ, ಜೋಳ, ದ್ವಿದಳ ಧಾನ್ಯಗಳಂತಹ ವಾರ್ಷಿಕ/ಋತುಮಾನದ ಆಹಾರ ಬೆಳೆಗಳನ್ನು (Field Crops) ಆಧರಿಸಿ ರೂಪಿಸಲಾಗಿದೆ.
ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಳುಮೆಣಸು, ಶುಂಠಿ, ರಬ್ಬರ್ ಮುಂತಾದ ದೀರ್ಘಾವಧಿ ತೋಟಗಾರಿಕಾ ಬೆಳೆಗಳಿಗೆ ಉಂಟಾಗುವ ನೀರಿನ ಕೊರತೆಯ ಪ್ರಭಾವವನ್ನು ಈ ಸಾಂಪ್ರದಾಯಿಕ ಬೆಳೆ ಸಮೀಕ್ಷೆ (Crop Cutting Experiments) ನಿಖರವಾಗಿ ಅಳೆಯುವುದಿಲ್ಲ.
ಅಂತರ್ಜಲ ಮಟ್ಟ ಮತ್ತು ಜಲಾಶಯಗಳ ನೀರಿನ ಸಂಗ್ರಹ
ಈ ಭಾಗದಲ್ಲಿ ಲಿಂಗನಮಕ್ಕಿ, ಚಕ್ರ, ವಾರಾಹಿ ಮುಂತಾದ ಜಲಾಶಯಗಳ ಜಲಾನಯನ ಪ್ರದೇಶಗಳಿರುವುದರಿಂದ, ಜಲಮೂಲಗಳ ಸೂಚ್ಯಂಕ ಹಾಗೂ ಅಂತರ್ಜಲ ಮಾಪನ ಕೇಂದ್ರಗಳಲ್ಲಿ ನೀರಿನ ಮಟ್ಟ ತಕ್ಷಣಕ್ಕೆ ತೀರಾ ತಳಮಟ್ಟಕ್ಕೆ ಇಳಿದಿರುವುದು ದಾಖಲಾಗುವುದಿಲ್ಲ.
ಕೆರೆಗಳು ಮತ್ತು ತೊರೆಗಳು ಬೇಸಿಗೆಯಲ್ಲಿ ಬತ್ತಿಹೋದರೂ ಜಲಾಶಯಗಳ ಅಂಕಿ-ಅಂಶಗಳು ಒಟ್ಟಾರೆ ಜಲ ಲಭ್ಯತೆಯನ್ನು ಸರಾಸರಿಗಿಂತ ಉತ್ತಮವಾಗಿ ತೋರಿಸುತ್ತವೆ.
ಕೇಂದ್ರ ನಿಯಮಾವಳಿಗಳ ಅನ್ವಯಿಕ ಮಿತಿ 2016 ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಕಠಿಣ ಮಾನದಂಡಗಳು ಬಯಲುಸೀಮೆ ಮತ್ತು ಮಳೆಯಾಶ್ರಿತ ಒಣಭೂಮಿ ಪ್ರದೇಶಗಳಿಗೆ ಸರಿಹೊಂದುವಂತೆ ರೂಪಿತವಾಗಿವೆ.
ಮಲೆನಾಡಿನ ಅತಿಯಾದ ಇಳಿಜಾರು ಭೂಮಿ, ನೀರು ಹಿಡಿದಿಟ್ಟುಕೊಳ್ಳದ ಮಣ್ಣಿನ ಸ್ವಭಾವ ಮತ್ತು ತೋಟಗಾರಿಕಾ ಬೆಳೆಗಳ ವಿಶಿಷ್ಟ ಸಮಸ್ಯೆಗಳನ್ನು ಈ ನಿಯಮಾವಳಿಗಳು ಪ್ರತ್ಯೇಕವಾಗಿ ಪರಿಗಣಿಸದಿರುವುದು ಈ ತಾಲ್ಲೂಕುಗಳು ಬರ ಪಟ್ಟಿಯಿಂದ ಹೊರಗುಳಿಯಲು ಮುಖ್ಯ ಕಾರಣವಾಗಿದೆ.
ಮಲೆನಾಡಿನ ವಿಶಿಷ್ಟ ಭೌಗೋಳಿಕತೆ, ಮಣ್ಣಿನ ಗುಣ ಮತ್ತು ಕೃಷಿ ಪದ್ಧತಿಗೆ ತಕ್ಕಂತೆ ಪ್ರಸ್ತುತವಿರುವ ರಾಷ್ಟ್ರೀಯ ಬರ ಕೈಪಿಡಿಯ (Manual for Drought Management) ನಿಯಮಗಳನ್ನು ಮಾರ್ಪಡಿಸಿ, ಈ ಕೆಳಗಿನ ಮಾನದಂಡಗಳನ್ನು ಅಳವಡಿಸಿಕೊಂಡರೆ ಮಾತ್ರ ಮಲೆನಾಡಿನ ರೈತರಿಗೆ ವಾಸ್ತವಿಕ ಪರಿಹಾರ ಸಿಗಲು ಸಾಧ್ಯ.
1. ಮಳೆಯ ಹಂಚಿಕೆ ಮತ್ತು ಬಿಡುವಿನ ಅವಧಿ (Rainfall Distribution & Dry Spells)
ಒಟ್ಟು ಮಳೆಯ ಬದಲಿಗೆ ದಿನಗಳ ಲೆಕ್ಕ,ಒಟ್ಟಾರೆ ಬಿದ್ದ ಮಳೆಯ ಪ್ರಮಾಣವನ್ನು (Rainfall Volume) ಅಳೆಯುವ ಬದಲು, ಮಳೆ ಹಂಚಿಕೆಯಾದ ದಿನಗಳ ಸಂಖ್ಯೆಯನ್ನು (Rainy Days) ಮಾನದಂಡವಾಗಿಸಬೇಕು.
ಡ್ರೈ ಸ್ಪೆಲ್ ಮಿತಿ ಕಡಿತ, ಬಯಲುಸೀಮೆಯಲ್ಲಿ ಸತತ 3 ರಿಂದ 4 ವಾರ ಮಳೆಯಿಲ್ಲದಿದ್ದರೆ ಬರ ಎನ್ನಲಾಗುತ್ತದೆ ಆದರೆ ಮಲೆನಾಡಿನ ಕೆಂಪು ಮತ್ತು ಜಂಬಿಟ್ಟಿಗೆ (Laterite) ಮಣ್ಣು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವುದಿಲ್ಲ ಆದ್ದರಿಂದ ಜೂನ್‌ನಿಂದ ಸೆಪ್ಟೆಂಬರ್ ನಡುವೆ ಸತತ 12 ರಿಂದ 15 ದಿನ ಮಳೆ ಸಂಪೂರ್ಣ ಕೈಕೊಟ್ಟರೆ ಅದನ್ನು ತೀವ್ರ ತೇವಾಂಶ ಕೊರತೆ ಎಂದು ಪರಿಗಣಿಸಬೇಕು.
2. ಸೂಕ್ಷ್ಮ ಹವಾಮಾನ ವಲಯ/ಹೋಬಳಿ ಮಟ್ಟದ ಮಾಪನ (Micro-Climatic Unit)
ಗ್ರಾಮ ಪಂಚಾಯಿತಿ/ಹೋಬಳಿ ಮಟ್ಟದ ಘಟಕ, ಇಡೀ ತಾಲ್ಲೂಕನ್ನು ಒಂದೇ ಘಟಕವಾಗಿ (Taluk as a Unit) ತೆಗೆದುಕೊಳ್ಳುವುದನ್ನು ಬಿಟ್ಟು, ಗ್ರಾಮ ಪಂಚಾಯಿತಿ ಅಥವಾ ಹೋಬಳಿ ಮಟ್ಟದ ಮಳೆ ಮಾಪಕಗಳನ್ನು ಅಂತಿಮ ಮಾನದಂಡವಾಗಿಸಬೇಕು.
ಮಲೆನಾಡಿನಲ್ಲಿ 5-10 ಕಿ.ಮೀ ಅಂತರದಲ್ಲೇ ಮಳೆಯ ಪ್ರಮಾಣದಲ್ಲಿ ಭಾರಿ ವ್ಯತ್ಯಾಸವಿರುತ್ತದೆ.
3. ಉಪಗ್ರಹ ಹಸಿರು ಸೂಚ್ಯಂಕದಿಂದ (NDVI) ಅರಣ್ಯ ಹೊರಗಿಡುವುದು,ಕೃಷಿ ಭೂಮಿ ಪ್ರತ್ಯೇಕ ಸಮೀಕ್ಷೆ,ಉಪಗ್ರಹ ಚಿತ್ರಣಗಳಲ್ಲಿ (Satellite Imagery) ನೈಸರ್ಗಿಕ ನಿತ್ಯಹರಿದ್ವರ್ಣ ಕಾಡು ಮತ್ತು ತೋಟಗಳ ಹಸಿರನ್ನು ಬೇರ್ಪಡಿಸಿ ನೋಡುವ ಸುಧಾರಿತ ‘ಕ್ಯಾಡಾಸ್ಟ್ರಲ್-ಆಧಾರಿತ’ (Cadastral-level) ಮ್ಯಾಪಿಂಗ್ ಬಳಸಬೇಕು.
ಅಡಿಕೆ, ಕಾಳುಮೆಣಸು, ಕಾಫಿ ಅಥವಾ ಶುಂಠಿ ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗುತ್ತಿದ್ದರೂ ಪಕ್ಕದ ಕಾಡಿನ ಹಸಿರನ್ನು ಆಧರಿಸಿ ‘ಸಾಮಾನ್ಯ ಪರಿಸ್ಥಿತಿ’ ಎಂದು ವರದಿ ಬರುವುದನ್ನು ತಪ್ಪಿಸಬೇಕು.
4. ದೀರ್ಘಾವಧಿ ತೋಟಗಾರಿಕಾ ಬೆಳೆ ನಷ್ಟದ ಮೌಲ್ಯಮಾಪನ
ಬಹು-ವರ್ಷದ ಹಾನಿ ಲೆಕ್ಕಾಚಾರ.
ಆಹಾರ ಧಾನ್ಯಗಳಂತೆ ತೋಟಗಾರಿಕಾ ಬೆಳೆಗಳು ಒಂದೇ ಋತುವಿಗೆ ಸೀಮಿತವಲ್ಲ, ಒಂದು ವರ್ಷ ತೀವ್ರ ನೀರಿನ ಕೊರತೆಯಾದರೆ ಅಡಿಕೆ ಮರ, ಕಾಳುಮೆಣಸಿನ ಬಳ್ಳಿ ಅಥವಾ ಏಲಕ್ಕಿ ಒಣಗಿ, ಮುಂದಿನ 4-5 ವರ್ಷಗಳ ಇಳುವರಿ ನಾಶವಾಗುತ್ತದೆ.
ಬೆಳೆ ಹಾನಿಯನ್ನು ಕೇವಲ ಆಯಾ ವರ್ಷದ ಇಳುವರಿ (Yield) ಆಧಾರದಲ್ಲಿ ನೋಡದೆ, ಮರ/ಬಳ್ಳಿಗಳ ಶಾಶ್ವತ ನಾಶ ಅಥವಾ ಜೀರ್ಣೋದ್ಧಾರದ ವೆಚ್ಚವನ್ನು (Replantation Cost) ನಷ್ಟದ ಮಾನದಂಡದಲ್ಲಿ ಸೇರಿಸಬೇಕು.
5. ಸ್ಥಳೀಯ ಜಲಮೂಲ ಮತ್ತು ಅಂತರ್ಜಲ ಕುಸಿತ (Surface Runoff & Local Water Bodies) ,ಹಳ್ಳ-ತೊರೆಗಳ ಹರಿವಿನ ಅವಧಿ.
ಮಲೆನಾಡಿನಲ್ಲಿ ನೀರು ಇಳಿಜಾರಿನ ಕಾರಣ ತಕ್ಷಣವೇ ಹರಿದು ಹೋಗುತ್ತದೆ (Runoff). ಆದ್ದರಿಂದ ದೊಡ್ಡ ಜಲಾಶಯಗಳ ನೀರಿನ ಮಟ್ಟ ನೋಡುವ ಬದಲು, ಸ್ಥಳೀಯ ಕೆರೆಗಳು, ಸಣ್ಣ ಹಳ್ಳ-ಕೊಳ್ಳಗಳು (Streams) ಮತ್ತು ತೆರೆದ ಬಾವಿಗಳ ನೀರಿನ ಮಟ್ಟ ನವೆಂಬರ್/ಡಿಸೆಂಬರ್ ವೇಳೆಗೆ ಎಷ್ಟು ಕುಸಿದಿದೆ ಎಂಬುದನ್ನು ಮಾನದಂಡವಾಗಿಸಬೇಕು.
6. ‘ಹಸಿರು ಬರ’ (Green Drought) ಪರಿಕಲ್ಪನೆಗೆ ಮಾನ್ಯತೆ.
ಮೇಲ್ನೋಟಕ್ಕೆ ಪರಿಸರ ಹಸಿರಾಗಿದ್ದರೂ ಕೃಷಿಗೆ ಅಗತ್ಯವಾದ ತೇವಾಂಶ ಮತ್ತು ಕುಡಿಯುವ ನೀರಿನ ಲಭ್ಯತೆ ಇಲ್ಲದಿರುವ ಸ್ಥಿತಿಯನ್ನು ಅಧಿಕೃತವಾಗಿ ‘ಹಸಿರು ಬರ’ ಎಂದು ಗುರುತಿಸಿ ರಾಜ್ಯ ವಿಪತ್ತು ಪರಿಹಾರ ನಿಧಿ (SDRF) ವ್ಯಾಪ್ತಿಗೆ ತರಬೇಕು.
ಮಲೆನಾಡಿನ ಶಾಸಕರು ಮತ್ತು ರೈತ ಸಂಘಟನೆಗಳು ಮಲೆನಾಡಿಗೆ ಪ್ರತ್ಯೇಕ ‘ಪರ್ವತ/ಮಲೆನಾಡು ಬರ ನಿಯಮಾವಳಿ’ (Hilly Terrain Drought Norms) ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿಯೋಗದ ಮೂಲಕ ಒತ್ತಡ ತರುವುದು ಇದಕ್ಕೆ ಶಾಶ್ವತ ಪರಿಹಾರ.
#HillyTerrainDroughtNorms #malenadu #sagar #hosanagara #sirsi #siddapur #mla #mp #farmersassociation #sdrf #GreenDrought
Comments
Post a Comment