ಭಾಗ_7.
ಘಟ್ಟಕ್ಕೆ_ಕರಾವಳಿ_ಭಾಗದವರ_ವಲಸೆ.
ಆ ಕಾಲದ ನಿರಂತರ ವಲಸೆಯಲ್ಲಿ ಸಂಪಾಜೆ, ಬಿಸಿಲೆ, ಶಿರಾಡಿ, ಚಾರ್ಮಾಡಿ, ಆಗುಂಬೆ, ಬಾಳೆಬರೆ, ಕೊಲ್ಲೂರು, ಕಾರಣಿ, ಕೋಗಾರು, ಗೇರುಸೊಪ್ಪೆ, ದೊಡ್ಮನೆ, ದೇವಿಮನೆ, ಬೇಡ್ತಿ ಘಾಟಿ, ಯಲ್ಲಾಪುರ ಘಾಟಿ, ಗಣೇಶನಗುಡಿ ಘಾಟಿ ಮತ್ತು ಅಣಮೋಡ ಘಾಟಿಗಳು
ಬಹು ಮುಖ್ಯ ಸಂಪರ್ಕ ಕಲ್ಪಿಸುವ ಘಾಟಿ ರಸ್ತೆ ಆಗಿತ್ತು.
ಹಿಂದೆ ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ 20ಕ್ಕೂ ಹೆಚ್ಚು ಘಾಟಿ ಕಾಡುದಾರಿಗಳು ಇದ್ದವಂತೆ ಆದರೆ ನನ್ನ ಮಾಹಿತಿಗೆ ದೊರಕಿದ್ದು 16 ಘಾಟಿ ದಾರಿಗಳು ಮಾತ್ರ.
ಆದರೆ ಇಂದು ನಕ್ಷೆಯಲ್ಲಿ ಅಧಿಕೃತವಾಗಿ ನಾವೆಲ್ಲರೂ ವಾಹನಗಳಲ್ಲಿ ಸಂಚರಿಸುವ ಸುಸಜ್ಜಿತ ಘಾಟಿಗಳ ಸಂಖ್ಯೆ 15 ಮಾತ್ರ.
ಈಗ ಈ ಮಾರ್ಗಗಳು ಸರ್ವ ಋತು ರಸ್ತೆಗಳಾಗಿ ವಾಹನಗಳು ನಿತ್ಯ ಸಂಚರಿಸುತ್ತದೆ.
ಇನ್ನೊಂದು ಘಾಟಿ ರಸ್ತೆ ಆಗಿದ್ದ ಬೈಂದೂರಿನಿಂದ ಸಾಗರ ಪ್ರಾಂತ್ಯಕ್ಕೆ ನೇರ ಮತ್ತು ಅತಿ ಸಮೀಪದ ಘಾಟಿ ರಸ್ತೆ ಆಗಿದ್ದ #ಬೈಂದೂರು_ಕಾರಣಿ ಘಟ್ಟ ರಸ್ತೆ ಮಾತ್ರ ಈಗ ಸಂಪೂರ್ಣ ಅರಣ್ಯದಿಂದ ಮುಚ್ಚಿ ಹೋಗಿ ಬಳಕೆಯಲ್ಲಿಲ್ಲ.
ಹಿಂದಿನ ನನ್ನ ಲೇಖನದಲ್ಲಿ ನಾನು ಘಟ್ಟಕ್ಕೆ ಕರಾವಳಿ ಭಾಗದ ಜನರ ನಿರಂತರ ವಲಸೆಗೆ ಹೆಚ್ಚು ಬಳಕೆ ಮಾಡಿದ್ದ ಶಿರಾಡಿ, ಚಾರ್ಮಾಡಿ, ಆಗುಂಬೆ, ಬಾಳೆಬರೆ ಎಂಬ ವಲಸಿರ ಹೆಬ್ಬಾಗಿಲು ಎಂದು ನಾಲ್ಕು ಘಾಟಿಗಳನ್ನ ಮಾತ್ರ ಉಲ್ಲೇಖಿಸಿ ಲೇಖನ ಬರೆದಿದ್ದೆ.
ಅನೇಕರು ಪಶ್ಚಿಮ ಘಟ್ಟ ಶ್ರೇಣಿಯ ಕಳಸ- ಶೃಂಗೇರಿ ಭಾಗವನ್ನು ಕರಾವಳಿಗೆ ಸಂಪರ್ಕಿಸುವ ಎಸ್. ಕೆ. ಬಾರ್ಡರ್ ಘಾಟಿ, ನಗರ - ಹೊಸನಗರ ಸಂಪರ್ಕ ಕಲ್ಪಿಸುವ ಕೊಲ್ಲೂರು ಘಾಟಿ, ಬೈಂದೂರು ಸಂಪರ್ಕ ಮಾಡುತ್ತಿದ್ದ ಕಾರಣಿ ಘಟ್ಟ, ಭಟ್ಕಳದಿಂದ ಸಾಗರ ಸಂಪರ್ಕಿಸುವ ಕೊಗಾರು ಘಾಟಿ, ಹೊನ್ನಾವರ ಸಾಗರ ಸಿದ್ದಾಪುರ ಸಂಪರ್ಕಿಸುವ ಗೇರುಸೊಪ್ಪೆ ಘಾಟಿ,
ಸಿದ್ಧಾಪುರ ಭಾಗ ಸಂಪರ್ಕ ಮಾಡುವ ದೊಡ್ಮನೆ ಘಾಟಿ, ಸಿರ್ಸಿ ಬಾಗ ಸಂಪರ್ಕ ಕಲ್ಪಿಸುವ ದೇವಿಮನೆ ಘಟ್ಟ, ಸಿರ್ಸಿ - ಅಂಕೋಲ ಸೇರಿಸುವ ಬೇಡ್ತಿಘಟ್ಟ, ಅಂಕೋಲ- ಯಲ್ಲಾಪುರ ಸಂಪರ್ಕ ಕಲ್ಪಿಸುವ ಯಲ್ಲಾಪುರ ಘಟ್ಟ, ಕಾರವಾರ- ಜೋಯಿಡ ಸಂಪರ್ಕ ಕಲ್ಪಿಸುವ ಗಣೇಶನ ಗುಡಿ ಘಾಟಿ ಮತ್ತು ಕಾರವಾರ ಬೆಳಗಾವಿ ಸಂಪರ್ಕಿಸುವ ಅಣಮೋಡ ಘಾಟಿ
ಬಗ್ಗೆ ಉಲ್ಲೇಖಿಸಿದ್ದಾರೆ ಅವರ ಪೂರ್ವಿಕರು ಆ ಮಾರ್ಗದಲ್ಲಿ ಕರಾವಳಿಯಿಂದ ಘಟ್ಟಕ್ಕೆ ವಲಸೆ ಹೋದ ಬಗ್ಗೆ ಬರೆದಿದ್ದಾರೆ.
ಅವರ ಅಭಿಪ್ರಾಯಗಳು ಸರಿಯಾಗಿದೆ ಈ ಘಟ್ಟಗಳನ್ನ ನನ್ನ ಸರಣಿ ಲೇಖನದಲ್ಲಿ ದಾಖಲಿಸದಿದ್ದರೆ ಅದು ಪರಿಪೂರ್ಣ ಆಗುವುದಿಲ್ಲ ಆದ್ದರಿಂದ ಉಳಿದ ಘಾಟಿಗಳನ್ನ ಉಲ್ಲೇಖಿಸಿದ ಈ ಭಾಗ ನಿಮ್ಮ ಮಾಹಿತಿಗಾಗಿ ಇಲ್ಲಿದೆ ಓದಿ.
ಕರಾವಳಿ ಭಾಗದ ಜನರು ಮಲೆನಾಡು ಹಾಗೂ ಘಟ್ಟದ ಮೇಲಿನ ಪ್ರದೇಶಗಳಿಗೆ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡದ ಸಿರಸಿ-ಸಿದ್ಧಾಪುರ ವಲಸೆ ಹೋದ ಇತಿಹಾಸದಲ್ಲಿ ಮತ್ತು ಭೌಗೋಳಿಕ ಉಲ್ಲೇಖಗಳಲ್ಲಿ ಹೆಸರಿಸಿದ ಎಲ್ಲಾ ಘಾಟಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ.
ಕರಾವಳಿಯಿಂದ ಘಟ್ಟದ ಮೇಲಕ್ಕೆ ವಲಸೆ ಹೋಗಲು ಕೇವಲ ಒಂದೇ ದಾರಿ ಇರಲಿಲ್ಲ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಅನೇಕ ಬಳಸು ಘಾಟಿ ದಾರಿಗಳು ಇದ್ದವು ಆದರೆ ಅವೆಲ್ಲ ಈಗಿನಂತೆ ವಾಹನ ಸಂಚಾರಕ್ಕೆ ಇರುವ ಸರ್ವ ಋತು ರಸ್ತೆಗಳಾಗಿರಲಿಲ್ಲ.
ಕಾಲು ನಡಿಗೆಯಿಂದ ಸಂಚಾರ ಮಾಡಬಹುದಾದ ಕಾಲು ದಾರಿಗಳಾಗಿದ್ದವು ಮತ್ತು ಸಮೀಪ ಮಾರ್ಗಗಳು ಆಗಿದ್ದವು.
ಪಶ್ಚಿಮ ಘಟ್ಟದ ದಟ್ಟ ಅರಣ್ಯದ ಈ ರಸ್ತೆಗಳು ಬಿಸಿಲು ಬೀಳದ ರಸ್ತೆಗಳಾಗಿ ಸಂಚರಿಸುವವರಿಗೆ ಆಯಾಸ ಆಗುತ್ತಿರಲಿಲ್ಲ ಆದರೆ ಅಲ್ಲಿ ಸದಾ ಇರುತ್ತಿದ್ದ ಜಿಗಳೆಗಳು ಮತ್ತು ಎದುರಾಗುತ್ತಿದ್ದ ಕ್ರೂರ ವನ್ಯಜೀವಿಗಳಿಂದ ಈ ಪ್ರಯಾಣ ಪ್ರಯಾಸದಾಗಿರುತ್ತಿತ್ತು.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಬೇರೆ ಬೇರೆ ಭಾಗಗಳ ಜನರು ತಮ್ಮ ಹತ್ತಿರದ ಘಾಟಿ ರಸ್ತೆಗಳ ಮೂಲಕವೇ ವಲಸೆ ಹೋದರು.
#ಸಂಪಾಜೆ_ಘಾಟಿ
ಇತಿಹಾಸದಲ್ಲಿ ಕರಾವಳಿಯಿಂದ ಘಟ್ಟದ ಮೇಲಕ್ಕೆ ನಡೆದ ಜನರ ವಲಸೆ ಮತ್ತು ಸಂಪರ್ಕದ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಮತ್ತೊಂದು ಘಾಟಿಯಾಗಿದೆ.
ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ (ಮಂಗಳೂರು, ಪುತ್ತೂರು, ಸುಳ್ಯ) ಜನರು ಕೊಡಗು (Coorg) ಮತ್ತು ಮೈಸೂರು ಭಾಗಗಳಿಗೆ ವಲಸೆ ಹೋಗಲು ಮತ್ತು ವ್ಯಾಪಾರ ಸಂಬಂಧ ಬೆಳೆಸಲು ಈ ಘಾಟಿಯೇ ಮುಖ್ಯ ಹೆದ್ದಾರಿಯಾಗಿತ್ತು.
#ಬಿಸಿಲೆ_ಘಾಟಿ
ಕರಾವಳಿಯಿಂದ ಘಟ್ಟದ ಮೇಲಕ್ಕೆ ನಡೆದ ಜನರ ವಲಸೆ,ಇದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕನ್ನು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ (ಸುಬ್ರಹ್ಮಣ್ಯ) ತಾಲೂಕಿಗೆ ಜೋಡಿಸುವ ಅತ್ಯಂತ ಕಡಿದಾದ ಮತ್ತು ದಟ್ಟ ಅರಣ್ಯದ ಮಾರ್ಗವಾಗಿದೆ.
ದಕ್ಷಿಣ ಕನ್ನಡವನ್ನು ಹಾಸನದ ಮಲೆನಾಡಿಗೆ ಜೋಡಿಸಿದ ಮತ್ತು ಕರಾವಳಿಯ ಕೃಷಿಕರನ್ನು ಹಾಸನದ ಕಾಫಿ-ಏಲಕ್ಕಿ ಕಣಿವೆಗಳಿಗೆ ಕರೆದೊಯ್ದ ಐತಿಹಾಸಿಕ ರಸ್ತೆ ಬಿಸಿಲೆ ಘಾಟಿ.
#ಶೃಂಗೇರಿ_SK_ಬಾರ್ಡರ್_ಘಾಟಿ (ಕುದುರೆಮುಖ / ಕಾರ್ಕಳ-ಶೃಂಗೇರಿ)
SK ಬಾರ್ಡರ್ (South Kanara Border) ಘಾಟಿಯು ಮಂಗಳೂರು ಕರಾವಳಿಯನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ ಮತ್ತು ಎನ್.ಆರ್. ಪುರ ಭಾಗಗಳಿಗೆ ಜೋಡಿಸುತ್ತದೆ.
ಕರಾವಳಿಯ ಗೌಡ ಸಾರಸ್ವತ ಬ್ರಾಹ್ಮಣರು , ಕ್ರಿಶ್ಚಿಯನ್ ಸಮುದಾಯದವರು ಮತ್ತು ಇತರ ಕೃಷಿಕರು ಶೃಂಗೇರಿ ಜಗದ್ಗುರುಗಳ ಆಶ್ರಯದಲ್ಲಿ ಅಥವಾ ಮಲೆನಾಡಿನ ಅಡಿಕೆ/ಕಾಫಿ ತೋಟಗಳಲ್ಲಿ ನೆಲೆಸಲು ಈ ಘಾಟಿಯ ಮೂಲಕ ದೊಡ್ಡ ಪ್ರಮಾಣದಲ್ಲಿ ವಲಸೆ ಹೋಗಿದ್ದಾರೆ.
#ಕೊಲ್ಲೂರು_ಘಾಟಿ
ಕುಂದಾಪುರ, ಬೈಂದೂರು ಮತ್ತು ಕೊಲ್ಲೂರು ಪರಿಸರದ ಉಡುಪಿ ಜಿಲ್ಲೆಯ ಕರಾವಳಿ ಭಾಗದ ಜನರು ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ಮತ್ತು ತೀರ್ಥಹಳ್ಳಿ ಭಾಗಗಳಿಗೆ ವಲಸೆ ಹೋಗಲು ಕೊಲ್ಲೂರು ಘಾಟಿ ಪ್ರಮುಖ ಹೆದ್ದಾರಿಯಾಗಿತ್ತು.
ವಿಶೇಷವಾಗಿ ಕೃಷಿ ಕಾರ್ಮಿಕರು, ಅಡಿಕೆ ತೋಟದ ಕೆಲಸಗಾರರು ಮತ್ತು ಸಾಗರ/ಹೊಸನಗರದ ಕಾಡುಗಳನ್ನು ಕಡಿದು ಕೃಷಿ ಭೂಮಿಯನ್ನಾಗಿ ಮಾಡಲು ಹೋದ ರೈತರು ಈ ಘಾಟಿಯನ್ನೇ ಬಳಸಿದ್ದಾರೆ.
#ಬೈಂದೂರು_ಕಾರಣಿ_ಘಾಟಿ.
ಕರಾವಳಿಯಿಂದ ಘಟ್ಟದ ಮೇಲಕ್ಕೆ, ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ಮತ್ತು ಸಾಗರ ತಾಲೂಕುಗಳಿಗೆ ನಡೆದ ಜನರ ವಲಸೆಯ ಇತಿಹಾಸದಲ್ಲಿ ಅತ್ಯಂತ ಮಹತ್ವದ, ಆದರೆ ಇತ್ತೀಚಿನ ಇತಿಹಾಸದಲ್ಲಿ ಸ್ವಲ್ಪ ಮರೆಯಾಗಿರುವ ಐತಿಹಾಸಿಕ ಮಾರ್ಗವಾಗಿದೆ.
#ಕೊಗಾರ್_ಘಾಟ್.
ಕರಾವಳಿಯಿಂದ ಘಟ್ಟದ ಮೇಲಕ್ಕೆ, ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿಗೆ ನಡೆದ ಜನರ ವಲಸೆ ಮತ್ತು ಸಾರಿಗೆ ಇತಿಹಾಸದಲ್ಲಿ ಅತ್ಯಂತ ವಿಶಿಷ್ಟವಾದ ಹಾಗೂ ರಮಣೀಯವಾದ ಘಾಟಿಯಾಗಿದೆ.
ಇದು ಉತ್ತರ ಕನ್ನಡ ಜಿಲ್ಲೆಯ ಕರಾವಳಿ/ಮಲೆನಾಡು ಗಡಿಯಾದ ಭಟ್ಕಳವನ್ನು ಶಿವಮೊಗ್ಗ ಜಿಲ್ಲೆಯ ಸಾಗರ (ಜೋಗ ಜಲಪಾತದ ಹತ್ತಿರ) ತಾಲೂಕಿಗೆ ಜೋಡಿಸುವ ಪ್ರಮುಖ ರಸ್ತೆಯಾಗಿದೆ.
#ಗೇರುಸೊಪ್ಪೆ_ಘಾಟ್.
ಇದನ್ನು ಇವತ್ತು ಜಗತ್ಪ್ರಸಿದ್ಧ "ಜೋಗ ಘಾಟ್" (Jog Ghat) ಎಂದೂ ಕರೆಯಲಾಗುತ್ತದೆ,
ಕರಾವಳಿಯಿಂದ ಘಟ್ಟದ ಮೇಲಕ್ಕೆ ನಡೆದ ಜನರ ವಲಸೆ, ಜಗತ್ತಿನ ಗಮನ ಸೆಳೆದ ಜಲಪಾತದ ಶೋಧ ಮತ್ತು ಸಾಮ್ರಾಜ್ಯಗಳ ವೈಭವದ ಇತಿಹಾಸದಲ್ಲಿ ಇದು ಅತ್ಯಂತ ಪ್ರಮುಖ ಹಾಗೂ ರೋಚಕವಾದ ಘಾಟಿಯಾಗಿದೆ.
ಇದು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪಟ್ಟಣವಾದ ಹೊನ್ನಾವರವನ್ನು (ಗೇರುಸೊಪ್ಪೆ ಮಾರ್ಗವಾಗಿ) ಶಿವಮೊಗ್ಗ ಜಿಲ್ಲೆಯ ಸಾಗರ (ತಾಳಗುಪ್ಪ/ಜೋಗ) ತಾಲೂಕಿಗೆ ಜೋಡಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಾಗಿದೆ (NH-69).
#ಸಿದ್ದಾಪುರದ_ದೊಡ್ಮನೆ_ಘಾಟಿ
ಹೊನ್ನಾವರ ಮತ್ತು ಕುಮಟಾ ಭಾಗದ ಕರಾವಳಿ ಜನರ ವಲಸೆ
ಸಿದ್ದಾಪುರಕ್ಕೆ ಸಂಪರ್ಕ ಕಲ್ಪಿಸುವ ದೊಡ್ಮನೆ ಘಾಟಿಯು ಅತ್ಯಂತ ಕಡಿದಾದ ಮತ್ತು ಹಳೆಯ ದಾರಿಯಾಗಿದೆ.
ಕರಾವಳಿಯಲ್ಲಿ ಜಮೀನು ಇಲ್ಲದ ಅಥವಾ ಕೃಷಿ ಬಿಕ್ಕಟ್ಟಿಗೆ ಸಿಲುಕಿದ ಜನರು ಘಟ್ಟದ ಮೇಲಿನ ಸಿದ್ದಾಪುರ, ಸಾಗರ ಭಾಗದ ದಟ್ಟ ಅರಣ್ಯ ಪ್ರದೇಶಗಳಿಗೆ ಬಂದು ಕಾಡು ಕಡಿದು ನಾಡು ಮಾಡಿದ ಇತಿಹಾಸದಲ್ಲಿ ದೊಡ್ಮನೆ ಘಾಟಿಯ ಉಲ್ಲೇಖ ಬಹಳ ಮುಖ್ಯವಾಗಿದೆ.
#ಸಿರ್ಸಿ_ದೇವಿಮನೆ_ಘಾಟಿ
ಕುಮಟಾ, ಹೊನ್ನಾವರ ಮತ್ತು ಕಾರವಾರ ಭಾಗದ
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಿಂದ ಘಟ್ಟದ ಮೇಲಿರುವ ಸಿರ್ಸಿ, ಸಿದ್ದಾಪುರ ಮತ್ತು ಯಲ್ಲಾಪುರಕ್ಕೆ ಹೋಗಲು ದೇವಿಮನೆ ಘಾಟಿ ಅತ್ಯಂತ ಹಳೆಯ ಮತ್ತು ಪ್ರಮುಖ ಮಾರ್ಗವಾಗಿತ್ತು.
ಬ್ರಿಟಿಷರ ಕಾಲದಲ್ಲೂ ಸಾಂಬಾರ ಪದಾರ್ಥಗಳಾದ ಅಡಿಕೆ, ಕಾಳುಮೆಣಸು ವ್ಯಾಪಾರಕ್ಕೆ ಮತ್ತು ಕರಾವಳಿಯ ನಾಮಧಾರಿ, ಹವ್ಯಕ ಹಾಗೂ ಇತರೆ ಸಮುದಾಯಗಳು ಸಿರ್ಸಿ ಭಾಗದಲ್ಲಿ ನೆಲೆಸಲು ಈ ಘಾಟಿಯ ಉಲ್ಲೇಖ ಇತಿಹಾಸದಲ್ಲಿದೆ.
#ಬೆಡ್ತಿ_ಘಾಟಿ / #ಮಾಗೋಡು_ಘಾಟಿ
ಸಿರ್ಸಿಯಿಂದ ಮಾಗೋಡು ಜಲಪಾತದ ರಸ್ತೆಯ ಮೂಲಕ ಯಲ್ಲಾಪುರ-ಅಂಕೋಲ ಹೆದ್ದಾರಿಯನ್ನು (NH 52) ತಲುಪಲು ಅಮ್ಮಿನಳ್ಳಿ - ಜಡ್ಡಿಗದ್ದೆ ಮಾರ್ಗವಾಗಿ ಹೋಗುವ ಘಾಟಿ ರಸ್ತೆಯನ್ನು ಬಳಸಲಾಗುತ್ತದೆ.
ಇದು ಬೆಡ್ತಿ ನದಿಯ ಕಣಿವೆಯ ಸುಂದರ ನೋಟವನ್ನು ಹೊಂದಿದ್ದು, ಪ್ರಕೃತಿ ಪ್ರೇಮಿಗಳ ನೆಚ್ಚಿನ ಅಡ್ಡದಾರಿ ಮಾರ್ಗವಾಗಿದೆ.
#ಅಂಕೋಲದ_ಯಲ್ಲಾಪುರ_ಘಾಟಿ.
ಇದನ್ನು ಸಾಮಾನ್ಯವಾಗಿ #ಅರಬೈಲ್_ಘಾಟಿ ಎಂದೂ ಕರೆಯುತ್ತಾರೆ.
ಅಂಕೋಲಾ ಮತ್ತು ಕಾರವಾರ ಭಾಗದ ಕರಾವಳಿ ಜನರ ವಲಸೆ ಯಲ್ಲಾಪುರ ಮತ್ತು ಹುಬ್ಬಳ್ಳಿ ಭಾಗಕ್ಕೆ ಜೋಡಿಸುತ್ತದೆ.
#ಗಣೇಶಗುಡಿ_ಘಾಟಿ / #ಅಣಶಿ_ಘಾಟಿ.
ಉತ್ತರ ಕನ್ನಡದ ಕಾರವಾರ ಜೋಯಿಡಾ (ದಾಂಡೇಲಿ / ಬೆಳಗಾವಿ)ವಲಸೆಯ ಇತಿಹಾಸದ ಈ ಘಾಟಿ ಕಾಳಿ ನದಿಯ ಕಣಿವೆಯಲ್ಲಿ ಬರುವ ಅತ್ಯಂತ ದಟ್ಟ ಅರಣ್ಯದ ಘಾಟಿಯಾಗಿದೆ.
ಕಾರವಾರದ ಕೊಂಕಣಿ ಜನರು ಮತ್ತು ಮರಾಠಾ ಮೂಲದ ಕೃಷಿಕರು ಬೆಳಗಾವಿ ಹಾಗೂ ಖಾನಾಪುರ ಭಾಗಕ್ಕೆ ವಲಸೆ ಹೋಗಲು ಈ ಮಾರ್ಗವನ್ನು ಬಳಸುತ್ತಿದ್ದರು.
#ಅಣಮೋಡ_ಘಾಟಿ ಕಾರವಾರದಿಂದ ಗೋವಾ ಗಡಿಯ ಹತ್ತಿರದ ಲೊಂಡಾ, ರಾಮನಗರ ಮಾರ್ಗವಾಗಿ ಬೆಳಗಾವಿಗೆ ಹೋಗುವ ಮತ್ತೊಂದು ಪ್ರಮುಖ ಘಾಟಿ ರಸ್ತೆ ಇದು.
ಬ್ರಿಟಿಷರ ಕಾಲದಿಂದಲೂ ಸರಕು ಸಾಗಣೆಗೆ ಮತ್ತು ವ್ಯಾಪಾರಕ್ಕೆ ಈ ಮಾರ್ಗ ಬಹಳ ಪ್ರಸಿದ್ಧವಾಗಿದೆ.
ಮಲೆನಾಡಿನ ಇತಿಹಾಸ ಅಥವಾ ವಲಸೆಯ ಕುರಿತಾದ ಅಧ್ಯಯನಗಳು ಮತ್ತು ಹಳೆಯ ದಾಖಲೆಗಳಲ್ಲಿ ಈ ಎಲ್ಲಾ ಘಾಟಿಗಳ ಮೂಲಕ ನಡೆದ ಜನ ಸಂಚಾರ ಮತ್ತು ವ್ಯಾಪಾರದ ಸ್ಪಷ್ಟ ಉಲ್ಲೇಖಗಳಿವೆ.
ನಿಮಗೆ ಈ ಘಾಟಿಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ ಮತ್ತು ಈ ಮಾರ್ಗದಲ್ಲಿ ಆ ಕಾಲದಲ್ಲಿ ಘಟ್ಟಕ್ಕೆ ವಲಸೆ ಅರ್ಥವ ಸಂಚಾರವನ್ನ ಮಾಡಿದ ನಿಮ್ಮ ಪೂರ್ವಿಕರಿಂದ ನಿಮಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ ದಯಮಾಡಿ ತಿಳಿಸಿ.
#westernghats #malenadu #ghatsroaf #passes #karavali #migration #coastal
Comments
Post a Comment