ಕಲ್ಲುಕುಟುಕಸ್ವಾಮಿ
ಸೊಪ್ಪುಗುಡ್ಡೆ - ತೀರ್ಥಹಳ್ಳಿ
ಶಿವಮೊಗ್ಗ ಜಿಲ್ಲೆ.
ನೂರಾ ನಲವತ್ತು ವರ್ಷಗಳ ನಮ್ಮ ಕುಟುಂಬದ ಕಥೆ.
ನಮ್ಮ ಕುಟುಂಬದ ಕಲ್ಲುಕುಟಿಕ ಮತ್ತು ವರ್ತೆ ದೈವಸ್ಥಾನ ಮೊನ್ನೆ 2026ರ ಮೇ ತಿಂಗಳ 10ನೇ ತಾರೀಖು ಭಾನುವಾರ #ತೀರ್ಥಹಳ್ಳಿಯ_ಸೊಪ್ಪುಗುಡ್ಡೆಯಲ್ಲಿ ಪುನರ್ ಪ್ರತಿಷ್ಠಾಪನೆ ಆಯಿತು ಇದು ನೂರು ವರ್ಷಗಳಲ್ಲಿ ಮೂರನೆ ಪುನರ್ ಪ್ರತಿಷ್ಠಾಪನೆ ಆಗಿದೆ.
ಅಂದಾಜು 1890 ನೇ ಇಸವಿಯಲ್ಲಿ ಉಡುಪಿ ಜಿಲ್ಲೆಯ #ಬೆಣ್ಣೆಕುದುರಿನಿಂದ ಘಟ್ಟಕ್ಕೆ ಬರುವಾಗ ನನ್ನ ಅಜ್ಜಿ ಅಬ್ಬಕ್ಕ ತನ್ನ ಜೊತೆ ತಂದಿದ್ದು ಕಲ್ಲುಕುಟಿಕ ದೇವರನ್ನ.
ನನ್ನ ಅಜ್ಜಿ ಕಲ್ಲುಕುಟಿಕ ದೇವರ ಆರಾದಿಸುತ್ತಿದ್ದವರು ಮತ್ತು
ಕಲ್ಲುಕುಟಿಕ ದೇವರ ನೇಮ, ರೀತಿ-ನೀತಿಗಳ ಕಟ್ಟುಪಾಡು ಕಡ್ಡಾಯವಾಗಿ ಪಾಲಿಸಿಕೊಂಡು ಬಂದವರು.
ಸುಮಾರು ನೂರು ವರ್ಷಗಳ ಹಿಂದೆ ತಾನು ಘಟ್ಟಕ್ಕೆ ತಂದ ಕಲ್ಲುಕುಟಿಕ ದೇವರನ್ನ ಸರಿಯಾಗಿ ಪೂಜೆ ಪುರಸ್ಕಾರಗಳನ್ನು ನಡೆಸಿಕೊಂಡು ಹೋಗುವ ಭರವಸೆಯನ್ನು ತನ್ನ ಅಕ್ಕನ ಮಗಳು ಶ್ರೀಮತಿ #ಚಿಕ್ಕಮ್ಮರ ಪತಿ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ #ರಾಮಣ್ಣಪಾತ್ರಿಗಳಲ್ಲಿ ನೋಡಿ ಅಲ್ಲಿಗೆ ಕಲ್ಲುಕುಟಿಕ ದೇವರನ್ನ ಸ್ಥಳಾಂತರಿಸುತ್ತಾರೆ.
ಈ ರೀತಿ ಉಡುಪಿ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂನ ಯಡೇಹಳ್ಳಿಯಿಂದ ತೀರ್ಥಹಳ್ಳಿಗೆ ತಲುಪಿದ ನಮ್ಮ ವಂಶದ ಕುಲ ದೈವ ಕಲ್ಲುಕುಟಿಕ ಸ್ವಾಮಿಗೆ ಸುಮಾರು 1968ರಲ್ಲಿ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿ ಹೊಸ ದೇವಾಲಯ ನಿರ್ಮಿಸಿ ಎರಡನೆ ಪುನರ್ ಪ್ರತಿಷ್ಟಾಪನೆ ಮಾಡಿ ಪ್ರತಿ ವರ್ಷ ಕೊಲದ ಸೇವೆ ನಡೆಸುತ್ತಿದ್ದರು ರಾಮಣ್ಣ ಪಾತ್ರಿಗಳು.
ಆಗ ನಡೆಯುತ್ತಿದ್ದ ಕೊಲದಲ್ಲಿ #ಪಾಡ್ದಾನದಲ್ಲಿ ನನ್ನ ಅಜ್ಜಿಯ ಉಲ್ಲೇಖ ಮಾಡುತ್ತಿದ್ದರೆಂದು ಹೇಳುತ್ತಿದ್ದರು ಆದರೆ ನಮಗೆಲ್ಲ ತುಳು ಭಾಷೆ ನಮ್ಮ ತಂದೆಗೆ ಕೊನೆಯಾಗಿದ್ದರಿಂದ ಕೊಲಾದ ತುಳು ಪಾಡ್ದಾನ ನುಡಿಗಳು ಅರ್ಥವಾಗುತ್ತಿರಲಿಲ್ಲ, ಆಗ ಕೊಲಾ ನಡೆಸುವ ಕಾಪುವಿನಿಂದ ಬರುವವರಿಗೆ ಕನ್ನಡ ಬರುತ್ತಿರಲಿಲ್ಲ.
ತೀರ್ಥಹಳ್ಳಿ ಸೊಪ್ಪುಗುಡ್ಡೆ ರಾಮಣ್ಣ ಪಾತ್ರಿಗಳ ಗಂಡು ಮಕ್ಕಳಾದ #ವೆಂಕಟರಮಣಣ್ಣ, #ಸುಂದರಣ್ಣ,#ಶ್ರೀನಿವಾಸಣ್ಣ ಮತ್ತು #ಸದಣ್ಣ ಹಾಗೂ ಪಾತ್ರಿಗಳ ಹೆಣ್ಣು ಮಕ್ಕಳಾದ ಶ್ರೀಮತಿ #ರತ್ನಕ್ಕ,#ಪ್ರೇಮಕ್ಕ ಮತ್ತು #ರಾಜೀವಕ್ಕ ಮತ್ತು ಅವರ ಕುಟುಂಬಗಳು ಈ ದೇವತಾ ಕಾರ್ಯಗಳನ್ನ ಶ್ರದ್ದಾ ಭಕ್ತಿಯಿಂದ ನಿರಂತರವಾಗಿ ನಡೆಸಿಕೊಂಡು ಬಂದಿದ್ದರು.
ಪಾತ್ರಿಗಳ ಹಿರಿಯ ಮಗ ವೆಂಕಟರಮಣಣ್ಣ ನಿತ್ಯ ಪೂಜೆ ಮಾಡುತ್ತಿದ್ದರು ಕಾಲಾನಂತರ ಕುಟುಂಬದ ಹಿರಿಯರೆಲ್ಲರೂ ಕಾಲವಾಗಿ ಈಗಿನ ಮೂರನೆ ತಲೆಮಾರಿನ ಕಾಲದಲ್ಲಿ ಈ ವರ್ಷ 2026 ರ ಮೇ ತಿಂಗಳಲ್ಲಿ ಮೂರನೇ ಪುನರ್ ಪ್ರತಿಷ್ಟಾಪನೆ ನಡೆದಿದೆ.
ರಾಮಣ್ಣ ಪಾತ್ರಿಗಳ ಎಲ್ಲಾ ಮೊಮ್ಮಕ್ಕಳೂ ಈ ಪುಣ್ಯಕಾರ್ಯದಲ್ಲಿ ತನು-ಮನ-ಧನದೊಂದಿಗೆ ಭಾಗಿ ಆಗಿದ್ದಾರೆ.
ದೇವರ ಮೂಲ ಕುಟುಂಬದ ನಮ್ಮ ಮನೆಯಿಂದಲೂ ನಮ್ಮ ಪಾಲಿನ ವಂತಿಕೆ ಜೊತೆ ಕುಟುಂಬದ ಹಿರಿಯರು ಭಾಗವಹಿಸಿದ್ದಾರೆ.
( ನನ್ನ ಹಳೆಯ ಲೇಖನ ಇನ್ನೊಮ್ಮೆ👇🏽)
ನಮ್ಮಜ್ಜಿ ಘಟ್ಟಕ್ಕೆ ಬರುವಾಗ ಜೊತೆಯಲ್ಲಿ ತಂದ ಕಲ್ಲುಕುಟಕ ದೇವರುಈಗ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ರಾಮಣ್ಣಪಾತ್ರಿಗಳ ಮನೆಯಲ್ಲಿದೆ.
ನನ್ನ ತಂದೆಯ ತಾಯಿ ಅಂದರೆ ನನ್ನ ಅಜ್ಜಿ ಅಬ್ಬಕ್ಕರ ಮೂಲ ಊರು ಕಾಪು ಅವರ ಮಾತೃ ಭಾಷೆ ತುಳು ನಂತರ ಅವರು ನೆಲೆಸಿದ್ದು ಬಾರ್ಕೂರು ಸಮೀಪದ ಬೆಣ್ಣೆಕುದುರುವಿನ ಮಹಾಸತಿ ದೇವಸ್ಥಾನದ ಪಕ್ಕದಲ್ಲಿ.
ನಂತರ ಇವರು 1800 ಕೊನೆ ದಶಕದಲ್ಲಿ ಅಥವಾ 19ನೇ ಶತಮಾನದ ಮೊದಲ ದಶಕದಲ್ಲಿ ಕರಾವಳಿ ಪ್ರದೇಶದಿಂದ ಘಟ್ಟಕ್ಕೆ ವಲಸೆ ಬಂದವರು.
ಆಗ ನಮ್ಮಜ್ಜಿ ಅಲ್ಲಿಂದ ಬರುವಾಗ ತಮ್ಮ ಜೊತೆ ಕಲ್ಲುಕುಟುಕ ಸ್ವಾಮಿಯನ್ನು ಕರೆತಂದು ದೇವರನ್ನ ಇಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತಿರುತ್ತಾರೆ, ಆಗ ದೈವ ಭಕ್ತೆ ನಮ್ಮಜ್ಜಿ ಕಲ್ಲುಕುಡಕ ದೇವರ ಪಾತ್ರಿಯೂ ಆಗಿದ್ದರಂತೆ ನಂತರ ಅವರಿಗೆ ನಿರಂತರ ಪೂಜೆ ಪುರಸ್ಕಾರ ನಡೆಸಲು ಕಷ್ಟವಾಗಿ ದೇವರನ್ನ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿ ನೆಲೆಸಿದ್ದ ಅವರ ಅಕ್ಕ ತುಂಗಮ್ಮರ ಮಗಳಾದ ಚಿಕ್ಕಮ್ಮ ಮತ್ತು ಅವರ ಪತಿ ರಾಮಣ್ಣ ಪಾತ್ರಿಗಳಿಗೆ ವಹಿಸಿ ಕೊಡುತ್ತಾರೆ,ತೀರ್ಥಹಳ್ಳಿಯಲ್ಲಿ ಪ್ರಸಿದ್ಧ ಮಾರಿಗುಡಿಯ ಪಾತ್ರಿಗಳಾಗಿದ್ದವರು ಸೊಪ್ಪುಗುಡ್ಡೆಯ ರಾಮಣ್ಣಪಾತ್ರಿಗಳು.
ನನ್ನ ಬಾಲ್ಯದಲ್ಲಿ ಅಲ್ಲಿ ಪ್ರತಿ ಸಂವತ್ಸರದಲ್ಲಿ ಕಲ್ಲುಕುಟಿಕ ಕೊಲಾ ಮತ್ತು ಇತರ ಪೂಜಾ ಸೇವೆ ನಡೆಯುತ್ತಿದ್ದಾಗ ನಾನು ನನ್ನ ತಾಯಿ ಜೊತೆ ಅಲ್ಲಿಗೆ ಹೋಗಿ ಭಾಗವಹಿಸುತ್ತಿದ್ದ ನೆನಪು ಸದಾ ಹಸಿರಾಗಿದೆ.
ನಂತರದ ನಮ್ಮ ಕುಟುಂಬಗಳ ತಲೆಮಾರಿನಲ್ಲಿ ಹಿರಿಯರಾದ ಶ್ರೀನಿವಾಸಣ್ಣ-ವೆಂಕಟರಮಣಣ್ಣರು ಇರುವ ತನಕ ಇದು ಮುಂದುವರಿದಿತ್ತು, ಅವರ ಕಾಲಾ ನಂತರ ಕುಟುಂಬದವರು ನಿತ್ಯ ಪೂಜೆ ನಡೆಯುತ್ತಿದ್ದರು, ರಾಮಣ್ಣಪಾತ್ರಿಗಳು ಕಾಲವಾದ ನಂತರ ಕೊಲಾ ಮತ್ತು ವಿಶೇಷ ಪೂಜೆ ಪುರಸ್ಕಾರಗಳು ಕಾರಣಾಂತರಗಳಿಂದ ನಡೆಸಲಾಗಲಿಲ್ಲ.
ಇತ್ತೀಚಿಗೆ ಕುಟುಂಬದ ಹೊಸ ತಲೆಮಾರಿನವರೆಲ್ಲ ಸೇರಿ ಪುನಃ ಕಲ್ಲುಕುಟಿಕ ದೈವ ಆರಾಧನೆ ನಿರಂತರ ನಡೆಸುವ ಯೋಚನೆ ಮಾಡಿ ಕಲ್ಲುಕುಟುಕ ಸ್ವಾಮಿಗೆ ತಂಬಿಲ ಎಂಬ ಕುಟುಂಬ ವರ್ಗದವರ ಪೂಜೆ ಅರ್ಪಿಸಿದ್ದಾರೆ ಮತ್ತು ದರ್ಶನ ಮಾಡಿಸಿದ್ದಾರೆ.
ಶಿಥಿಲವಾಗಿರುವ ಕಲ್ಲುಕುಟುಕ ಸ್ವಾಮಿಯ ದೇವಾಲಯ ಪುನರ್ ನಿರ್ಮಾಣ ಮಾಡಿ ಪುನರ್ ಪ್ರತಿಷ್ಠಾಪನೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಅವತ್ತು ಅಲ್ಲಿ ನನ್ನ ಅಜ್ಜಿ ಅಬ್ಬಕ್ಕರ ನೆನಪುಗಳನ್ನು ಕುಟುಂಬ ವರ್ಗದವರು ಮಾಡಿದ್ದಾರೆ, ಈ ಸಂದರ್ಭದಲ್ಲಿ ಕಲ್ಲುಕುಟುಕ ಸ್ವಾಮಿಯ ಚರಿತ್ರೆ ವಿವಿಧ ಮೂಲಗಳಿಂದ ಮಾಹಿತಿಗಳನ್ನು ಪಡೆದು ಇಲ್ಲಿ ಲೇಖನ ಮಾಡಿದ್ದೇನೆ ಓದಿ.
#ಕಲ್ಕುಡ_ದೇವರ_ಮೂಲ_ಕತೆ
(ಜನಪದದಲ್ಲಿರುವ ಕಥೆ)
ತುಳುನಾಡಿನ ಕಾರ್ಕಳ ಸೀಮೆ ಈಗಿನ ಉಡುಪಿ ಜಿಲ್ಲೆಯ ಕಾರ್ಕಳ ಇಲ್ಲಿ ವಿಶ್ವಕರ್ಮ ಸಮಾಜದ ಬಡ ಕುಟುಂಬದ #ಶಂಭುನಾರಾಯಣ_ಕಲ್ಕುಡ ಮತ್ತು #ಈರಮ್ಮ ದಂಪತಿಗಳಿಗೆ ಆರನೇ ಮಗನಾಗಿ #ಬೀರೆ ಮತ್ತು ಏಳನೆಯ #ಕಾಳಮ್ಮ ಜನಿಸುತ್ತಾರೆ.
ಬೆಳೆದಂತೆ ತಂದೆಯನ್ನು ಕಳೆದುಕೊಂಡು ಕುಟುಂಬ ಸಂಕಷ್ಟಕ್ಕೆ - ಬಡತನಕ್ಕೆ ಗುರಿಯಾಗುತ್ತದೆ.
ತಂದೆ ಶಂಬು ನಾರಾಯಣ ಕಲ್ಕುಡ ಅತ್ಯುತ್ತಮ ಶಿಲ್ಪಿಯಾಗಿರುತ್ತಾರೆ ಮಗ ಬೀರೆ ಕಲ್ಕುಡ ತಂದೆಯಿಂದ ಶಿಲ್ಪಕಲೆ ಕಲಿತಿರುತ್ತಾನೆ,ತಂದೆ ಮರಣಾ ನಂತರ ತನ್ನ ಕುಲಕಸುಬು ಮುಂದುವರಿಸುತ್ತಾನೆ.
ಶಿಲ್ಪಿಯಾದ ಬೀರೆ ಕಲ್ಕುಡ ಕಾರ್ಕಳದ ಅರಸನ ಮೂಲಕ ಕಾರ್ಕಳದಲ್ಲಿ ಗೊಮ್ಮಟ ಶಿಲ್ಪ ಕೆತ್ತಲು ಶುರುಮಾಡುತ್ತಾನೆ, ತನ್ನ ಕೌಶಲ್ಯದಿಂದ ಸುಂದರವಾದ ಗೊಮ್ಮಟ ವಿಗ್ರಹ ನಿರ್ಮಿಸುತ್ತಾನೆ ಈ ಗೊಮ್ಮಟ ವಿಗ್ರಹದ ಸೌಂದರ್ಯ ಜನರನ್ನು ಹೆಚ್ಚು ಆಕರ್ಷಿಸುತ್ತದೆ ಇದರಿಂದ ಕಾರ್ಕಳ ಸೀಮೆಗೆ ಹೆಸರಾಗಿ ಹೆಚ್ಚು ಜನಜನಿತವಾಗುತ್ತದೆ.
ಈ ರೀತಿ #ಕಾರ್ಕಳದ_ಗೊಮ್ಮಟ ವಿಗ್ರಹದ ಜನಪ್ರಿಯತೆ - ಕೀರ್ತಿ ಹಬ್ಬುತ್ತಿದ್ದಂತೆ ಕಾರ್ಕಳದ ದೊರೆ #ಬೈಲಸುದ್ದರಸುವಿಗೆ ಒಂದು ದುರಾಲೋಚನೆ ಉಂಟಾಗುತ್ತದೆ, ತನ್ನ ರಾಜ್ಯದಲ್ಲಿ ಇರುವಂತ ಗೊಮ್ಮಟನ ವಿಗ್ರಹ ಬೇರೆಲ್ಲೂ ಯಾರು ಮಾಡಬಾರದೆಂದು ತೀರ್ಮಾನಿಸುತ್ತಾನೆ.
ಒಂದು ದಿನ ಶಿಲ್ಪಿ ಬೀರೆ ಕಲ್ಕುಡನನ್ನು ಕರೆಸಿ ಹೋಗಳಿ ನಮ್ಮ ನಾಡಿಗೆ ಕೀರ್ತಿ ತಂದು ಕೊಟ್ಟ ನಿಮಗೆ ಸನ್ಮಾನವನ್ನು ಮಾಡಲು ಬಯಸುತ್ತಿದ್ದೇನೆ ಎಂದು ಹೇಳುತ್ತಾನೆ.
ಅಂತೆಯೇ ದಿನ ನಿಗದಿ ಮಾಡಿ ಅರಮನೆಗೆ ಆಹ್ವಾನಿಸುತ್ತಾನೆ, ರಾಜನ ಅಪ್ಪಣೆಯಂತೆ ಬೀರೆ ಕಲ್ಲುಡ್ಕ ಅರಮನೆಗೆ ಹೋಗುತ್ತಾನೆ ಅಲ್ಲಿ ರಾಜನು ವೀರಕಲ್ಲುಡ್ಕನ ಒಂದು ಕೈ ಒಂದು ಕಾಲನ್ನು ಕತ್ತರಿಸುತ್ತಾನೆ ಇದಕ್ಕೆ ಕಾರಣ ಬೀರೇ ಈ ರೀತಿ ಅಪೂರ್ವ ಮೂರ್ತಿಯನ್ನು ಬೇರೆಲ್ಲೂ ಮಾಡಬಾರದು ಎಂಬ ದುರುದ್ದೇಶದಿಂದ.
ಅಂಗವಿಕಲನಾದ ಬೀರೇ ಕಲ್ಕುಡ ತನ್ನ ಮನೆಗೆ ಹೋಗಲಾಗದೆ ನೋವಿನಿಂದ ಅವಮಾನದಿಂದ ವೇಣೂರಿಗೆ ಹೋಗಿ ಅಲ್ಲಿ ಇನ್ನೊಂದು ಗೊಮ್ಮಟನನ್ನು ಕೆತ್ತಲು ಪ್ರಾರಂಭಿಸುತ್ತಾನೆ.
ತನ್ನ ಅಣ್ಣನನ್ನು ಕಾಣದೆ ಮತ್ತು ದುಸ್ವಪ್ನವನ್ನು ಕಂಡಂತಾಗಿ ಸಹೋದರಿ ಕಾಳಮ್ಮ ಕಲ್ಲರುಟಿ ತನ್ನ ಅಣ್ಣನನ್ನು ಹುಡುಕುತ್ತಾ ಕಾರ್ಕಳಕ್ಕೆ ಹೋದರೆ ಅಲ್ಲಿ ತನ್ನಣ್ಣ ಇಲ್ಲ ಎಂದು ತಿಳಿದು ಮುಂದೆ ಹುಡುಕುತ್ತಾ ವೇಣೂರು ಮಾರ್ಗದಲ್ಲಿ ಹೋಗುವಾಗ ದಟ್ಟಡವಿಯಲ್ಲಿ ಕುಡುಕನೋರ್ವ ಕಾಳಮ್ಮನನ್ನು ತಡೆದು ಅಸಭ್ಯ ವರ್ತನೆ ಮಾಡುತ್ತಾನೆ ಆಗ ಅವಳನ್ನು ನಾಗದೇವತೆಗಳು ಕಾಪಾಡುತ್ತಾರೆ.
ವೇಣೂರು ತಲುಪಿ ಅಲ್ಲಿ ಅಣ್ಣ ಬೀರೆ ಕಲ್ಕುಡನನ್ನು ನೋಡುತ್ತಾಳೆ, ಅವನು ತನ್ನ ಕಾಲು- ಕೈ ಕಳೆದುಕೊಂಡು ಭಯಾನಕವಾಗಿ ಕಾಣುತ್ತಾನೆ ಇದನ್ನು ನೋಡಿ ಕಾಳಮ್ಮ ಮರುಗಿ ಕಣ್ಣೀರಿಟ್ಟು ಅವನನ್ನು ಅಪ್ಪಿ ಅಳುತ್ತಾಳೆ, ಅಣ್ಣನಿಂದ ಎಲ್ಲಾ ವಿಚಾರ ತಿಳಿದು ಇದಕ್ಕೆ ಕಾರಣನಾದ ಅರಸ ಬೈಲಸುದ್ದರಸುವಿನ ವಿರುದ್ಧ ಸೇಡು ತೀರಿಸಿಕೊಳ್ಳಲು ಶಪಥ ಮಾಡುತ್ತಾರೆ.
ಅದೇ ವೇಳೆ ಆಕಾಶದಿಂದ ಅಶರೀರವಾಣಿ ಮೊಳಗುತ್ತದೆ ಮಾಯಾಶಕ್ತಿ ಮೂಲಕ ಬೀರೆ ಮತ್ತು ಕಾಳಮ್ಮನ ಹಿಂದಿನ ಹಿನ್ನೆಲೆ ತಿಳಿಸಿ ಅದೃಶ್ಯವಾಗುತ್ತಾರೆ.
ತಮ್ಮ ಹಿಂದಿನ ಶಾಪ ಮತ್ತು ದೈವಿಶಕ್ತಿಯನ್ನು ಅರಿತ ಬೀರೆಕಲ್ಕುಡ ಮತ್ತು ಕಾಳಮ್ಮ ಕಲ್ಲುರ್ಟಿನೇರವಾಗಿ ಶ್ರೀ ಮಹಾಲಿಂಗೇಶ್ವರನ ಸನ್ನಿಧಿಗೆ ತೆರಳಿ ಅಲ್ಲಿ ಭೂತನಾಥನಾದ ಪರಶಿವನಿಗೆ ಹಲವಾರು ವಿಧದ ಸೇವೆ ಮಾಡುತ್ತಾರೆ.
ಅಣ್ಣ-ತಂಗಿ ಕಲ್ಕುಡ ಮತ್ತು ಕಲ್ಲುರ್ಟಿ ಶ್ರೀ ಮಹಾಲಿಂಗೇಶ್ವರನ ಸನ್ನಿಧಾನದಲ್ಲಿನ ಪವಿತ್ರ ಬಾವಿಗೆ ದುಮುಕುತ್ತಾರೆ, ಬಾವಿಯಲ್ಲಿ ಮುಮುಕಿದ ಅವರಿಬ್ಬರು ಭಯಂಕರ ದೈವ ರೂಪ ಮೈದಾಳಿ ಬಾವಿಯಿಂದ ಮೇಲೆ ಎದ್ದು ಬರುತ್ತಾರೆ.
ಅಂದಿಗೆ ಅವರ ಶಾಪ ವಿಮೋಚನೆಯಾಗುತ್ತದೆ, ಬೀರೆಯು ಶ್ರೀವೀರಕಲ್ಲುಕುಟುಕನಾಗಿ ಕಪ್ಪು ವರ್ಣದ ಮುಖದ ಮೇಲೆ ಬಿಳಿ ಚುಕ್ಕೆಗಳ ಜೊತೆ, ಒಂದು ಕೈ, ಒಂದು ಕಾಲು ಕಡಿದ ರೀತಿಯಲ್ಲಿ ಒಂದು ಕೈಯಲ್ಲಿ ಒಂದು ದೊಂದಿ ಹಿಡಿದು ಬರುತ್ತಾನೆ.
ಸಹೋದರಿ ಕಾಳಮ್ಮ ಕಪ್ಪು ದೇಹದವಳಾಗಿ ಮಹಾಕಾಳಿಯಂತೆ ಒಂದು ಕೈಯಲ್ಲಿ ದೊಂದಿ ಹಿಡಿದು ಇನ್ನೊಂದು ಕೈಯಲ್ಲಿ ನಾಗರಬೆತ್ತ ಹಿಡಿದು ಮೇಲೆ ಬರುತ್ತಾಳೆ.
ಅಣ್ಣ ತಂಗಿಯರು ಉಗ್ರ ರೂಪದಿಂದ ಎಲ್ಲಾ ಪುಣ್ಯಕ್ಷೇತ್ರಗಳಿಗೆ ತೆರಳಿ ಶಕ್ತಿಶಾಲಿಗಳಾಗಿ ಪುನಃ ಕಾರ್ಕಳ ಸೀಮೆಗೆ ಬರುತ್ತಾರೆ.
ಮೊದಲಿಗೆ ಉಬರ್ ಎನ್ನುವ ಸ್ಥಳಕ್ಕೆ ಬರುತ್ತಾರೆ ನಂತರ ಅಲ್ಲಿಂದ ಬೈಲೂರುವಿಗೆ ತೆರಳುತ್ತಾರೆ, ಅಲ್ಲಿ ಬೈಲಸುದ್ದರಸುವಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡಲು ಪ್ರಾರಂಭಿಸುತ್ತಾರೆ.
ಈ ಹಿಂಸೆಗಳನ್ನು ತಡೆಯಲಾಗದೆ ಇದಕ್ಕೆ ಕಾರಣ ತಿಳಿಯದಿದ್ದಾಗ, ಈ ಬಗ್ಗೆ ಅರಸನಿಗೆ ಏನು ಅರಿವಾಗದಾಗ ಜ್ಯೋತಿಷಿಗಳಲ್ಲಿ ಪ್ರಶ್ನೆ ಇಟ್ಟು ವಿಷಯ ತಿಳಿಯುತ್ತಾನೆ.
ಅದೇನೆಂದರೆ ತುಳುವನಾಡಿಗೆ ಎರಡು ಹೊಸ ದೈವ ಬಂದಿದೆ ಎಂದು ಅವುಗಳ ಹೆಸರು ಕಲ್ಕುಡ ಮತ್ತು ಕಲ್ಲುರ್ಟಿ ಎಂದು ಇವರು ನಿನ್ನಿಂದ ಕೈ ಮತ್ತು ಕಾಲು ಕತ್ತರಿಸಿಕೊಂಡ ಬೀರೆ ಕಲ್ಕುಡ ಮತ್ತು ಅವನ ಸಹೋದರಿ, ಇವರಿಬ್ಬರು ದೇವಲೋಕದವರು ಅಲ್ಲಿ ತಮ್ಮ ಶಾಪದಿಂದ ಇಲ್ಲಿ ಜನಿಸಿದ್ದಾರೆ, ಇವರು ಕಾರ್ಣಿಕ ಶಕ್ತಿಗಳಾಗಿ ಮುಂದೆ ತುಳುವ ನಾಡಿನಲ್ಲಿ ನೆಲೆಯಾಗುತ್ತಾರೆ ನೀನು ಈ ದೈವಗಳಿಗೆ ದೇವಸ್ಥಾನ ನಿರ್ಮಾಣ ಮಾಡಿ, ಪ್ರತಿ ಸಂವತ್ಸರದಲ್ಲಿ ಕೋಲಾ ನಡೆಸಿ ಸೇವೆ ನೀಡಿ ಪೂಜೆ ಪುರಸ್ಕಾರ ನಡೆಸಬೇಕು ಎಂಬುದಾಗಿ ತಿಳಿಸುತ್ತಾರೆ.
ನೀನು ಈ ದೈವಗಳನ್ನು ನಂಬಿ ಬರಬೇಕು ಹಾಗಾದರೆ ನಿನಗೆ ಎಲ್ಲಾ ಹಿಂಸೆಗಳಿಂದ ಮುಕ್ತಿ ಸಿಗುತ್ತದೆ ಎನ್ನುತ್ತಾರೆ.
ಬೈಲಸುದ್ದರಸನು ಕಾರಣಿಕರಾದ ಕಲ್ಕುಡ ಮತ್ತು ಕಲ್ಲುರ್ಟಿ ಗೆ ದೇವಸ್ಥಾನ ಕಟ್ಟಿಸಿ, ಕೋಲಾ ನಡೆಸುತ್ತಾನೆ, ದೈವದ ಶಕ್ತಿ ಸ್ವತಃ ತಿಳಿಯಲು ಕೋಲಾದಲ್ಲಿ ಸ್ವತಃ ಭಾಗಿಯಾಗುತ್ತಾನೆ ಅಲ್ಲಿ ದೈವದ ಶಕ್ತಿ ತಿಳಿದು ತಾನು ಮಾಡಿದ ತಪ್ಪಿಗೆ ದೈವದಲ್ಲಿ ಕ್ಷಮೆ ಯಾಚಿಸುತ್ತಾನೆ.
ಬೈಲಸುದ್ದರಸು ಈ ರೀತಿ ದೈವವನ್ನು ನಂಬಿ ನಡೆಯುತ್ತಾನೆ ಈ ಸ್ಥಳವೇ ಮುಂದೆ ಕಾರ್ಕಳದ #ಪಳ್ಳಿ_ಮಂಗಾಳ್ದಿ ಮಠ ಎಂಬುದಾಗಿದೆ.
ಹೀಗೆ ಬೀರೆಕಲ್ಕುಡ ಶ್ರೀವೀರಕಲ್ಲುಕುಟಿಕ - ಕಲ್ಕುಡ- ಪಾಷಣಮೂರ್ತಿಯಾಗಿ ಮತ್ತು ಆತನ ಸಹೋದರಿ ಕಾಳಮ್ಮ ಶ್ರೀಕಲ್ಲರುಟಿ- ಕಲ್ಲುರ್ಟಿ -#ವರ್ತೆ- ಮಂತ್ರದೇವತೆ -ಸತ್ಯದೇವತೆ ಎಂಬ ನಾಮದಿಂದ ತುಳುನಾಡಿನಾದ್ಯಂತ ಪ್ರಸಿದ್ಧರಾಗುತ್ತಾರೆ.
ಈ ದೈವಗಳಿಗೆ ರಕ್ತ ನೈವೇದ್ಯದ ಪೂಜೆ ಸಲ್ಲಿಸುವ ಪದ್ದತಿ ಇದೆ.
#kallurti #kallukuduka #kalludka #vishwakarma #karkala #byalsuddarasu
#thirthahalli #soppugudde #ramannapatri
Comments
Post a Comment