#ದೊಂಡಿಯಾ_ವಾಘ್
ಶಿಕಾರಿಪುರದ ಹುಚ್ಚುರಾಯ ಸ್ವಾಮಿಗೆ ಅರ್ಪಿಸಿದ ವೀರ ಖಡ್ಗದ ಕಥೆ ಕೇಳಿ ಆ ಖಡ್ಗ ಈಗಲೂ ಶಿಕಾರಿಪುರದ ತಾಲ್ಲೂಕು ಖಜಾನೆಯಲ್ಲಿದೆ....
ನಮ್ಮ ಶಿವಮೊಗ್ಗ ಜಿಲ್ಲೆಯ ವೀರ ಸೇನಾನಿಯ 225 ವರ್ಷಗಳ ಹಿಂದಿನ ಕಥೆ.
ಶಿಕಾರಿಪುರದ ಬಂಜಾರ ಸಮಾಜದವರ ಆ ಕಾಲದ ಸಹಾಯ ... ಬ್ರಿಟೀಷರು ಮತ್ತು ಮರಾಠರ ದಾಳಿಯಿಂದ ಕುಮದ್ವತಿ ನದಿಗೆ ಹಾರಿ ತಪ್ಪಿಸಿಕೊಂಡು ಕಾಡು ಸೇರಿದ್ದ ವೀರ ದೊಂಡಿಯಾ ವಾಘ್ ಗೆ ಶಶ್ರೂಸೆ ನೀಡಿ ಸಹಾಯ ಮಾಡುತ್ತಾರೆ.
ಕೆಳದಿ ಸಾಮ್ರಾಜ್ಯದ ವೀರ ದೊಂಡಿಯಾ ವಾಘ್ ಕೆಳದಿ ಸಾಮ್ರಾಜ್ಯದ ಇತಿಹಾಸದ ಜೊತೆಗೆ ಹೈದರಾಲಿ ಸೈನ್ಯ ಸೇರಿ ದೊಡ್ಡ ಸ್ಥಾನ ಮಾನ ಪಡೆದು, ಹೈದರಾಲಿ ನಂತರ ಟಿಪ್ಪುಸುಲ್ತಾನರ ಸೈನ್ಯದಲ್ಲಿ ಸೇವೆ ಸಲ್ಲಿಸಿ ಅಲ್ಲಿಂದ ಸ್ವಂತ ಸೈನ್ಯ ಕಟ್ಟಿ ಅನೇಕ ಮರಾಠರ ಆಡಳಿತ ಪ್ರದೇಶ ವಶ ಪಡೆಯುತ್ತಾರೆ.
ಟಿಪ್ಪು ಸುಲ್ತಾನ್ ರ ಮಂತ್ರಿ ಮೀರ್ ಸಾದಿಕ್ ಕುತಂತ್ರದಿಂದ ಶ್ರೀರಂಗ ಪಟ್ಟಣದ ಜೈಲು ಸೇರುತ್ತಾರೆ, ಟಿಪ್ಪುಸುಲ್ತಾನರನ್ನ ಬ್ರಿಟೀಷರು ಸೋಲಿಸಿದಾಗ
ಅಲ್ಲಿಂದ ಐದು ವರ್ಷದ ಸೆರೆವಾಸದಿಂದ ತಪ್ಪಿಸಿಕೊಂಡು ಹೋಗಿ ಏನು ಮಾಡುತ್ತಾರೆ ಎಂಬ ವಿವರವಾದ ಈ ಲೇಖನ ಓದಿ.
ಚೆನ್ನಗಿರಿ ಮೂಲದ ವೀರ ಸೇನಾನಿ
ಶಿಕಾರಿಪುರದ ಕಾಡಿನಲ್ಲಿ ಸ್ಥಳೀಯ ಬಂಜಾರ ಜನರಿಂದ ಶಶ್ರೂಸೆ ಸಹಕಾರ ಪಡೆದು ಶಿಕಾರಿಪುರದ
ಪುರದೈವ ಹುಚ್ಚರಾಯ ಸ್ವಾಮಿಗೆ ತನ್ನ ವೀರಖಡ್ಗ ಅರ್ಪಿಸುವ ದೊಂಡಿಯಾ ವಾಘ್.
ಪ್ರತಿ ವರ್ಷವಿಜಯದಶಮಿಯಲ್ಲಿ ಶಿಕಾರಿಪುರ ತಾಲ್ಲೂಕು ದಂಡಾದಿಕಾರಿ ದೊಂಡಿಯಾ ವಾಘ್ ಖಡ್ಗದಿಂದ ಬನ್ನಿಯ ಬಾಳೆಕಂದು ಕಡಿಯುತ್ತಾರೆ.
ಧೊಂಡಿಯಾ ವಾಘ್ ಚೆನ್ನಗಿರಿಯಲ್ಲಿ 18ನೇ ಶತಮಾನದ ಉತ್ತರ ಭಾಗದಲ್ಲಿ ಮರಾಠಿ ಪವಾರ್ ಪಂಗಡದ ಒಂದು ಸಾಮಾನ್ಯ ಪರಿವಾರದಲ್ಲಿ ಅಥವ ಬಂಜಾರ ಸಮಾಜದಲ್ಲಿ ಇವರ ಜನನ.
ಆ ಕಾಲ ಘಟ್ಟದಲ್ಲಿ ಚೆನ್ನಗಿರಿಯು ಕೆಳದಿಯ ಸಂಸ್ಥಾನದ ಅಡಳಿತಕ್ಕೆ ಒಳಪಟ್ಟಿತ್ತು.
ಧೊಂಡಿಯ ಕೆಳದಿಯ ವೀರ ರಾಣಿ ಚೆನ್ನಮ್ಮರ ಕಥೆಗಳನ್ನು ಕೇಳುತ್ತಾ ಬೆಳದವರು.
ಅವರ ಗುರು ಸಿದ್ದಪ್ಪ ಶೆಟ್ಟರ ಗರಡಿಯಲ್ಲಿ ಅಶ್ವಾರೋಹಣ, ಕತ್ತಿ ವರಸೆ, ಮಲ್ಲಯುದ್ಧಗಳ ಅಭ್ಯಾಸವನ್ನು ಮಾಡಿ ಇಡೀ ಚೆನ್ನಗಿರಿ ಸೀಮೆಗೆ ಉದಯೋನ್ಮುಖ ಯೋಧನೆನಿಸಿಕೊಳ್ಳುತ್ತಾರೆ.
ಆ ಸಮಯದಲ್ಲಿಯೇ ಕೆಳದಿಯ ರಾಜಮನೆತನದಲ್ಲಿ ಅಂತಃಕಲಹಗಳು ಏರ್ಪಡುತ್ತದೆ.
ಈ ಸಂದರ್ಭದಲ್ಲಿ ಎತ್ತರದ ನಿಲುವಿನ, ಶಕ್ತಿಶಾಲಿ, ಯುವ ಪ್ರಭಾವಿ ವ್ಯಕ್ತಿತ್ವದ ಧೊಂಡಿಯನಿಗೆ ಕೆಳದಿಯ ಸಂಸ್ಥಾನದ ಸೈನ್ಯ ಸೇರಲು ಊರಿನ ಜನ ಹುರಿದುಂಬಿಸುತ್ತಾರೆ.
ಧೊಂಡಿಯ ಆ ಸಂದರ್ಭದಲ್ಲಿ ಕೆಳದಿಯ ಸಂಸ್ಥಾನದ ಭಾಗವಾಗಿದ್ದ ಶಿಕಾರಿಪುರದಲ್ಲಿ ಒಬ್ಬ ಕರಣಿಕರಿಗೆ ಸಹಾಯಕನಾಗಿ ವೃತ್ತಿ ಆರಂಭಿಸುತ್ತಾರೆ.
ಈ ನಡುವೆ ಹೈದರಾಲಿ ಚಿತ್ರದುರ್ಗದ ರಾಜನಾದ ವೀರ ಮದಕರಿ ನಾಯಕರನ್ನು ಸೋಲಿಸುತ್ತಾರೆ ನಂತರ ಅವರ ದೃಷ್ಟಿ ಕೆಳದಿಯ ಮೇಲೆ ಬೀಳುತ್ತದೆ.
ಕೆಳದಿ ಸಂಸ್ಥಾನದಲ್ಲಿ ಆ ಸಂದರ್ಭದಲ್ಲಿ ನಡೆಯುತ್ತಿದ್ದ ಒಳ ರಾಜಕೀಯ ಮೇಲಾಟಗಳ ಪ್ರಯೋಜನ ಪಡೆಯಲು ಹವಣಿಸುತ್ತಿರುತ್ತಾರೆ.
ಈ ವಿಚಾರವು ಕೆಳದಿ ಸಂಸ್ಥಾನದಲ್ಲೆಲ್ಲಾ ಹರಡಿ ಪ್ರಜೆಗಳು ಮುಂದಿನ ಪರಿಸ್ಥಿತಿಯ ಬಗ್ಗೆ ಚಂತಿತರಾಗಿರುತ್ತಾರೆ.
ಕೆಲ ಸಮಯದ ನಂತರ ಹೈದರಾಲಿ ಸೈನ್ಯ ಕೆಳದಿ ಸಂಸ್ಥಾನದ ರಾಜಧಾನಿಯಾದ ಬಿದನೂರಿನ ಮೇಲೆ ದಾಳಿ ಮಾಡುತ್ತದೆ.
ಆಗ ಆಡಳಿತ ಮಾಡುತ್ತಿದ್ದ ರಾಣಿ ವೀರಮ್ಮಾಜಿ ವೀರಾವೇಶದಿಂದ ಹೋರಾಡಿದರು ಆದರೆ ಅಲ್ಲಿ ನಡೆದ ಒಳಸಂಚಿನ ಕಾರಣದಿಂದ ಅವರು ಸೋಲುತ್ತಾರೆ.
ಈ ಸಂದರ್ಭದಲ್ಲಿ ಧೊಂಡಿಯ ಹೈದರಾಲಿಯ ಸೈನ್ಯವನ್ನು ಸೇರಿ ಅಲ್ಲಿ ವಿಷ್ಣುಪಂಡಿತ ಎಂಬ ಅಶ್ವದಳಪತಿ ಕೆಳಗೆ ಕೆಲಸ ಪ್ರಾರಂಭಿಸುತ್ತಾರೆ.
ತನ್ನ ಒಡನಾಡಿಗಳೊಡನೆ ಒಳ್ಳೆಯ ಸಂಬಂಧ ಬೆಳೆಸಿಕೊಂಡು ಸತತ ಪರಿಶ್ರಮದ ಕಾರಣದಿಂದ ಕೆಲವೇ ಸಮಯದಲ್ಲಿ ಅವನು ಅಶ್ವದಳದ ನಾಯಕ ಶಿಲ್ಲೆದಾರ್ ಪದವಿ ಪಡೆಯುತ್ತಾರೆ.
ಮೂರನೇ ಮೈಸೂರು ಯುದ್ಧ 1792 ರಲ್ಲಿ ನಡೆಯುವಾಗ ಟಿಪ್ಪು ಸುಲ್ತಾನರು ಆ ಯುದ್ಧದಲ್ಲಿ ತಲ್ಲೀನರಾಗಿದ್ದ ಸಮಯವನ್ನು ಉಪಯೋಗಿಸಿ ಧೊಂಡಿಯ ಟಿಪ್ಪುಸುಲ್ತಾನ್ ರ ಸೈನ್ಯ ತೊರೆದು ಹೋಗಲು ನಿಶ್ಚಯಿಸುತ್ತಾರೆ.
ಈ ಯೋಜನೆಯಲ್ಲಿ ಅವರು ಸಫಲರಾಗುತ್ತಾರೆ ತನ್ನೊಂದಿಗೆ ಇನ್ನು ಕೆಲವು ಸಹಚರರನ್ನು ಸೇರಿಸಿಕೊಂಡು ಈಗಿನ ಗದಗದಲ್ಲಿರುವ ಲಕ್ಷ್ಮೇಶ್ವರದ ದೇಸಾಯಿಯನ್ನು (ಕಂದಾಯ ವಸೂಲಿ ಮಾಡುವ ಹಕ್ಕಿರುವ ಸ್ಥಾನ) ಸೇರುತ್ತಾರೆ.
ದೇಸಾಯಿಯು ಟಿಪ್ಪು ಸುಲ್ತಾನರಿಗೆ ಕಪ್ಪ ಕಾಣಿಕೆ ಕೊಡುವ ಬದಲು ದೊಂಡಿಯಾ ತನಗೆ ಕಪ್ಪ ಕೊಡಬೇಕು,ತಾನು ಅವರ ರಕ್ಷಣೆಗೆ ಮತ್ತು ಸಹಾಯಕ್ಕೆಇರುವುದಾಗಿ ಅವರನ್ನು ಒಪ್ಪಿಸಿ ಅವರಿಂದ ಕಪ್ಪ ಪಡೆಯುತ್ತಾರೆ.
ಕೆಲವೇ ಸಮಯದಲ್ಲಿ ಅವರು ಬೇರೆ ಬೇರೆ ಪಾಳೆಯಗಾರರನ್ನು ತನ್ನೊಂದಿಗೆ ಸೇರಿಸಿಕೊಳ್ಳುತ್ತಾರೆ.
ಈ ಮಧ್ಯೆ ದೊಂಡಿಯಾ ವಾಘ್ ಉಭಯಲೋಕಾಧೀಶ್ವರನೆಂದು ಘೋಷಿಸಿಕೊಳ್ಳುತ್ತಾರೆ.
ಆ ಸಮಯದಲ್ಲಿ ಅವರ ಸೈನ್ಯದಲ್ಲಿ 80 ಸಾವಿರ ಕಾಲಾಳುಗಳು ಮತ್ತು 90 ಸಾವಿರ ಅಶ್ವಾರೋಹಿಗಳಿದ್ದರೆಂದರೆ ಅರ್ಥವಾದೀತು ಅವರ ಸೈನ್ಯದ ಶಕ್ತಿ.
ದೊಂಡಿಯಾ ವಾಘ್ ರಿಂದ ಸ್ಪೂರ್ತಿ ಪಡೆದ ದಕ್ಷಿಣ ಭಾರತದ ಹಲವು ಸಣ್ಣ ಪಾಳೆಯಗಾರರು ಇವರ ರೀತಿಯಲ್ಲಿಯೇ ಬ್ರಿಟೀಶರ ವಿರುದ್ಧ ಹೋರಾಡಲು ಶುರು ಮಾಡುತ್ತಾರೆ.
ಬ್ರಿಟೀಶರೊಂದಿಗೆ ಯುದ್ಧದಲ್ಲಿ ಟಿಪ್ಪು ಸುಲ್ತಾನರಿಗೆ ಸೋಲಾಗುತ್ತದೆ ಆಗ ಆಂಗ‍್ಲರ ಬಳಿ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಾಗಿ ಇಡುವ ಪರಿಸ್ಥಿತಿ ಅವರಿಗೆ ಬರುತ್ತದೆ.
ಧೊಂಡಿಯ ಟಿಪ್ಪುಸುಲ್ತಾನರ ಈ ಸಂದರ್ಭದ ದೌರ್ಬಲ್ಯದ ಲಾಭ ಪಡೆದು ಮೈಸೂರು ಮತ್ತು ಮರಾಠರ ಗಡಿ ಭಾಗದಲ್ಲಿ ಒಂದೊಂದಾಗಿ ಪ್ರದೇಶಗಳನ್ನು ಗೆಲ್ಲುತ್ತಾ ಹೋಗುತ್ತಾರೆ.
ದೊಂಡಿಯಾ ಧಾರವಾಡ ಸೀಮೆಯ ಪ್ರದೇಶದಲ್ಲಿ ಕಪ್ಪ ಕಾಣಿಕೆಗಳನ್ನ ಪಡೆಯುತ್ತಾ ಹೋಗುತ್ತಾರೆ.
1793 ಜನವರಿಯಲ್ಲಿ ಹಾವೇರಿ ಮತ್ತು ಸವಣೂರನ್ನು ಗೆದ್ದು ತಮ್ಮ ರಾಜ್ಯವನ್ನು ವಿಸ್ತರಿಸುತ್ತಾರೆ.
ಶ್ರೀರಂಗಪಟ್ಟಣದ ಒಪ್ಪಂದದ ಪ್ರಕಾರ ಟಿಪ್ಪು ಸುಲ್ತಾನರು ಮರಾಠರಿಗೆ ಬಿಟ್ಟುಕೊಟ್ಟ ಊರುಗಳನ್ನು ದೊಂಡಿಯಾ ಮುತ್ತಿಗೆ ಹಾಕಿ ಗೆಲ್ಲುತ್ತಾ ಹೋಗುತ್ತಾರೆ.
ಇದರ ಪ್ರಭಾವ ಶಿವಮೊಗ್ಗ, ಬಿದನೂರು, ಶಿಕಾರಿಪುರ ಮುಂತಾದ ಪ್ರದೇಶಗಳ ಮೇಲೂ ಆಗುತ್ತದೆ.
ಧೊಂಡಿಯಾರ ಬೆಳೆಯುತ್ತಿರುವ ಪ್ರಭಾವದಿಂದ ಮರಾಠರು ಚಿಂತಾಕ್ರಾಂತರಾಗುತ್ತಾರೆ, ದೊಂಡಿಯಾರ ಪ್ರಭಾವವನ್ನು ಮೊಳಕೆಯಲ್ಲಿ ಚಿವುಟಬೇಕು ಮತ್ತು ಮರಾಠರ ಸೀಮೆಯಿಂದಲೇ ದೊಂಡಿಯಾ ರನ್ನ ಹೊರದೂಡಲು ತೀರ್ಮಾನಿಸುತ್ತಾರೆ.
ಮರಾಠರ ದಂಡನಾಯಕ ಪರಶುರಾಮ ಭಾವು 1794ರಲ್ಲಿ ಮರಾಠಾ ಸೈನ್ಯವನ್ನು ದೊಂಡೋಪಂತ್ ಗೋಖಲೆ ನೇತೃತ್ವದಲ್ಲಿ ಕಳಿಸುತ್ತಾರೆ.
ದೊಂಡೋಪಂತ್ ಗೋಖಲೆ ತನ್ನ ಸೈನ್ಯದೊಂದಿಗೆ ಸವಣೂರಿನ ಕೋಟೆಗೆ ಮುತ್ತಿಗೆ ಹಾಕಿದ ಧೊಂಡಿಯ ಅವರೊಡನೆ ಸ್ನೇಹ ಬಯಸುತ್ತಾರೆ ಆದರೆ ದೊಂಡೋಪಂತ್ ಒಪ್ಪುವುದಿಲ್ಲ.
ಹಲವು ದಿನಗಳ ಕದನದ ನಂತರ ಧೊಂಡಿಯ ಅಲ್ಲಿಂದ ವಾಪಾಸು ಕದಲಬೇಕಾಗುತ್ತದೆ.
ಧೊಂಡಿಯ ಆಗ ಎಂದಾದರೊಂದು ದಿನ ದೊಂಡೋಪಂತ್ ಗೋಖಲೆಯನ್ನು ಕೊಂದು ಅವನ ರಕ್ತದಲ್ಲಿ ತನ್ನಿ ಮೀಸೆಯನ್ನು ತೋಯ್ದುಕೊಳ್ಳುವೆನೆಂದು ಅಲ್ಲಿ ಶಪಥ ಮಾಡುತ್ತಾರೆ.
ಧೊಂಡಿಯ ಅಲ್ಲಿಂದ ಸೀದಾ ಟಿಪ್ಪುವಿನ ಸಹಾಯ ಕೇಳಲು ಶ್ರೀರಂಗಪಟ್ಟಣಕ್ಕೆ ತೆರಳುತ್ತಾರೆ.
ಟಿಪ್ಪುವಿನ ಸಹಾಯ ಪಡೆಯಲು ಪ್ರಯತ್ನಿಸುತ್ತಾರೆ ಆದರೆ ಇದು ಕೈಗೂಡದೆ ಟಿಪ್ಪುವಿನ ಸೈನ್ಯವನ್ನು ಮತ್ತೆ ಸೇರುವ ಪ್ರಸ್ತಾಪ ಟಿಪ್ಪು ಸುಲ್ತಾನರಿಂದ ಬರುತ್ತದೆ.
ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನರು ದೊಂಡಿಯಾರಿಗೆ ಇಸ್ಲಾಮ್ ಧರ್ಮಕ್ಕೆ ಮತಾಂತರ ಹೊಂದಲು ಆಮಿಷ ಒಡ್ಡಿದರೆಂದು ಇತಿಹಾಸ ಹೇಳುತ್ತದೆ ಆದರೆ ಇದಕ್ಕೆ ದೊಂಡಿಯಾ ಒಪ್ಪುವುದಿಲ್ಲ.
ಸ್ವಲ್ಪ ಸಮಯದಲ್ಲಿ ಟಿಪ್ಪು ಸುಲ್ತಾರ ಜೊತೆ ವೈಮನಸ್ಯದ ಕಾರಣ ದೊಂಡಿಯಾರನ್ನು ಬಂಧಿಸಿ ಶ್ರೀರಂಗಪಟ್ಟಣದ ಸೆರೆಮನೆಯಲ್ಲಿ ಇಡುತ್ತಾರೆ.
ಇದಕ್ಕೆ ಮಂತ್ರಿ ಮೀರ್ ಸಾದಿಕ್ ಕುತಂತ್ರವೇ ಕಾರಣ ಎಂದು ನಂಬಲಾಗಿದೆ.
ದೊಂಡಿಯಾ ಸೆರೆಮನೆಯಲ್ಲಿಯೇ ಸುಮಾರು ಐದು ವರ್ಷಗಳ ಕಾಲ ಕಳೆಯುತ್ತಾರೆ.
ಬ್ರಿಟೀಶರ ವಿರುದ್ಧ 1799 ರಲ್ಲಿ ನಾಲ್ಕನೆಯ ಮೈಸೂರು ಯುದ್ಧ ಟಿಪ್ಪು ಸೋಲುವವರೆಗೂ ದೊಂಡಿಯ ಸೆರೆಮನೆ ಶಿಕ್ಷೆ ಅನುಭವಿಸುತ್ತಿರುತ್ತಾರೆ.
1799 ರಲ್ಲಿ ನಾಲ್ಕನೆಯ ಮೈಸೂರು ಯುದ್ಧದ ಕಡೆಯ ದಿನ
ಟಿಪ್ಪು ಸುಲ್ತಾನ್ ಬ್ರಿಟೀಶರ ವಿರುದ್ಧ ಸೋಲುವುದರ ಜೊತೆಗೆ ಟಿಪ್ಪು ಸುಲ್ತಾನ್ ವೀರ ಮರಣ ಹೊಂದುತ್ತಾರೆ.
ಇದರಿಂದ ಟಿಪ್ಪು ಸುಲ್ತಾನ್ ಅವರ ಜೊತೆಗೆ ಅವನ ಸೈನ್ಯ ಕೂಡ ಛಿದ್ರಛಿದ್ರವಾಗುತ್ತದೆ.
ಧೊಂಡಿಯ ಅಲ್ಲಿಯವರೆಗೂ ಶ್ರೀರಂಗಪಟ್ಟಣದಲ್ಲಿ ಐದು ವರ್ಷಗಳಿಂದ ಬಂಧನದಲ್ಲಿದ್ದರೂ ತಪ್ಪಿಸಿಕೊಳ್ಳಲು ಸಮಯ ಕಾಯುತ್ತಾ ಇರುತ್ತಾರೆ.
ತನ್ನ ಮತ್ತು ತನ್ನ ಸಹಚರರ ಮನ:ಶಕ್ತಿಯನ್ನು ಯಾವಾಗಲೂ ಮೇಲ್ಮಟ್ಟದಲ್ಲಿರುವ ಹಾಗೆ ದೊಂಡಿಯಾ ನೋಡಿಕೊಳ್ಳುತ್ತಿರುತ್ತಾರೆ.
ಆ ಸಮಯದಲ್ಲಿ ಟಿಪ್ಪುವಿನ ಹಲವು ಸೈನಿಕರು ತಪ್ಪಿಸಿಕೊಳ್ಳುತ್ತಿದ್ದದ್ದು ಇವರಿಗೆಲ್ಲಾ ಅನುಕೂಲ ಆಗುತ್ತದೆ.
ಟಿಪ್ಪುವಿನ ಸಾವಿನಿಂದ ಸಿಕ್ಕ ಅವಕಾಶ ಉಪಯೋಗಿಸಿಕೊಂಡು ಟಿಪ್ಪು ಸುಲ್ತಾನರ ಹಲವು ಸಹಚರರೊಡನೆ ದೊಂಡಿಯ ಶ್ರೀರಂಗಪಟ್ಟಣದ ಜೈಲಿನಿಂದ ತಪ್ಪಿಸಿಕೊಳ್ಳುತ್ತಾರೆ.
ಅಲ್ಲಿಂದ ಚೆನ್ನಗಿರಿಗೆ ಹಿಂದಿರುಗಿ ಸೈನಿಕರನ್ನು ಒಟ್ಟುಗೂಡಿಸಿ ಹುರಿದುಂಬಿಸಿ ಒಂದೊಂದಾಗಿ ಕೋಟೆಗಳನ್ನು ಗೆಲ್ಲಲು ಪ್ರಾರಂಭಿಸುತ್ತಾರೆ.
ಶಿವಮೊಗ್ಗ, ಬಿದನೂರು, ಶಿಕಾರಿಪುರ, ತರೀಕೆರೆ, ಚಿತ್ರದುರ್ಗ, ಹರಪನಹಳ್ಳಿ, ರಾಣೇಬೆನ್ನೂರು, ಸವಣೂರು ಮುಂತಾದ ಕೋಟೆಗಳೆಲ್ಲಾ ಅವರ ವಶವಾಗುತ್ತದೆ.
ಬ್ರಿಟೀಶರು ಇವರನ್ನು ಮಟ್ಟ ಹಾಕಲು ಶಿಕಾರಿಪುರದ ಕೋಟೆಗೆ ಮುತ್ತಿಗೆ ಹಾಕುತ್ತಾರೆ ಆದರೆ ಅಲ್ಲಿ ಅವರಿಂದ ತಪ್ಪಿಸಿಕೊಳ್ಳುತ್ತಾರೆ.
ಧೊಂಡಿಯ ವಾಘ್ ರನ್ನು ಬ್ರಿಟೀಷ್ ಸೈನ್ಯಾದಿಕಾರಿಗಳಾದ ಸ್ಟೀವನ್ಸನ್ ಮತ್ತು ಡಾಲ್ರಿಂಪಲ್ ಹಿಂಬಾಲಿಸಿ ಹಿಡಿಯಲು ಹೋದಾಗ ದೊಂಡಿಯಾ ವಾಘ್ ಶಿಕಾರಿಪುರದಲ್ಲಿ ತುಂಬಿ ಹರಿಯುತ್ತಿದ್ದ ಕುಮದ್ವತಿ ನದಿಗೆ ಹಾರಿ ಈಜಿಕೊಂಡು ಇನ್ನೊಂದು ದಡ ಸೇರಿ ಅಲ್ಲಿನ ದಟ್ಟ ಕಾಡಿನಲ್ಲಿ ತಪ್ಪಿಸಿಕೊಳ್ಳುತ್ತಾರೆ.
ಶಿಕಾರಿಪುರದ ಕಾಡಿನಲ್ಲಿ ತಪ್ಪಿಸಿಕೊಂಡ ದೊಂಡಿಯಾ ವಾಘ್ ರನ್ನು ಅಲ್ಲಿಯ ಬಂಜಾರರು ಶೂಶ್ರೂಷೆ ಮಾಡುತ್ತಾರೆ.
ತನ್ನ ಜೀವ ಉಳಿಸಿದ್ದು ಶಿಕಾರಿಪುರದ ಆರಾಧ್ಯ ದೈವವಾದ ಹುಚ್ಚುರಾಯಸ್ವಾಮಿ ಎಂದು ಅವರು ಶಿಕಾರಿಪುರದ ಹುಚ್ಚುರಾಯ ಸ್ವಾಮಿ ದೇವಾಲಯಕ್ಕೆ ಹೋಗಿ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿ ತಮ್ಮ ವೀರ ಖಡ್ಗವನ್ನು ಹುಚ್ಚುರಾಯ ಸ್ವಾಮಿಗೆ ಅರ್ಪಿಸಿತ್ತಾರೆ.
ಈ ಘಟನೆ ನಡೆದು ಸುಮಾರು 225 ವರ್ಷಗಳಾಗಿದೆ ಇಂದಿಗೂ ಈ ದೊಂಡಿಯಾ ವಾಘ್ ಶಿಕಾರಿಪುರದ ಹುಚ್ಚುರಾಯ ಸ್ವಾಮಿಗೆ ಅರ್ಪಿಸಿದ ವೀರ ಖಡ್ಗ ಶಿಕಾರಿಪುರದ
ಕೂಡ ಶಿಕಾರಿಪುರದ ಸರ್ಕಾರಿ ಟ್ರಿಜರಿಯಲ್ಲಿ ಸುರಕ್ಷಿತವಾಗಿ ಕಾಪಾಡಲಾಗಿದೆ.
ಪ್ರತಿ ವಿಜಯದಶಮಿಯ ದಿನ ಶಿಕಾರಿಪುರದ ಪಟ್ಟಣದಲ್ಲಿ ಊರಿನ ಆರಾಧ್ಯ ದೈವ ಹುಚ್ಚುರಾಯ ಸ್ವಾಮಿಯನ್ನು ಒಳಗೊಂಡು ಊರಿನ ಹಲವು ದೇವಾಲಯಗಳ ದೇವರ ಉತ್ಸವ ಮೂರ್ತಿಗಳ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯುತ್ತದೆ.
ಆ ದಿನ ತಾಲೂಕಿನ ದಂಡಾಧಿಕಾರಿ ತಹಸೀಲ್ದಾರರು ಹುಚ್ಚುರಾಯ ಸ್ವಾಮಿಗೆ ಧೊಂಡಿಯ ವಾಘ್ ಸಮರ್ಪಿಸಿದ್ದ ವೀರ ಖಡ್ಗದಿಂದ ದುಷ್ಟ ಸಂಹಾರದ ಸಂಕೇತವಾಗಿ ಬನ್ನಿ ಮುಡಿಯುವ ಆಚರಣೆ ಆಗಿ ಬಾಳೆಯ ಕಂದನ್ನು ಕಡಿಯುತ್ತಾರೆ.
ಶಿವಮೊಗ್ಗ ಜಿಲ್ಲೆಯ ಖ್ಯಾತ ಇತಿಹಾಸ ಸಂಶೋದಕ ತೀರ್ಥಹಳ್ಳಿ ಮೂಲದ ಡಾಕ್ಟರ್ ಶಾಂತಾರಾಮ್ ಸಾಮಖ್ ಶಿಕಾರಿಪುರದ ಸರ್ಕಾರಿ ಖಜಾನೆಯಲ್ಲಿರುವ ದೊಂಡಿಯಾ ವಾಘ್ ಖಡ್ಗ ಪರಿಶೀಲನೆಯ ಚಿತ್ರ ಈ ಲೇಖನದ ಜೊತೆ ಪ್ರಕಟಿಸಿದ್ದೇನೆ.
#shikaripura #banjara #dondiyawagh #temple
#huchurayaswamy #sword #maratha #british
#TAHASILDAR #tressury #historymatters
#drshantharamsamak #shivamogga #tippusulthan #HyderAli
Comments
Post a Comment