Skip to main content

3540. ಬಿಲಾಲಿ ಬಿಲ್ಲಿ

#ಸಾಕು_ಪ್ರಾಣಿಗಳ_ಒಡನಾಟದ_ಸವಿನೆನಪುಗಳು

#ಅವು_ದೂರವಾದಾಗ_ಆಗುವ_ನೋವು...

#ಇದು_ನಮ್ಮ_ಬೆಕ್ಕು_ಪಾಣಿ_ಬಿಲಾಲಿ_ಬಿಲ್ಲಿಯಾಗಿದ_ಕಥೆ.

#ನಮ್ಮ_ಬೆಕ್ಕು_ನಮ್ಮೂರ_ಭಟ್ಟರ_ಬೋಂಡಾ_ಬಾಂಡ್ಲಿಯಲ್ಲಿ_ಬಿದ್ದು_ಬಂದ_ಕಥೆ.

#ಅದನ್ನೇ_ಬಿಲಾಲಿ_ಬಿಲ್ಲಿ_ಅಭ್ಯಂಜನ_ಎಂಬ_ಹೆಸರಿನ_ಕಥೆಯಾಗಿ_ಬರೆದೆ_ಅದು_ಕೇಳಿದವರಿಗೂ_ಇಷ್ಟವಾಯಿತು.


#petcats #bilalibilliabyanjana #smallstory #kannadabooks #shivamogga #sagar #Anandapuram #aravindchokkadi 

 ಈ ಕಥೆಗೆ ಮುನ್ನುಡಿ ಬರೆದ ಖ್ಯಾತ ಶಿಕ್ಷಣ ತಜ್ಞ - ಲೇಖಕ -ವಿಮರ್ಶಕ ಅರವಿಂದ ಚೊಕ್ಕಾಡಿಯವರು ಕೂಡ ಬಿಲಾಲಿ ಬಿಲ್ಲಿಯನ್ನ ಉಲ್ಲೇಖಿಸಿದರು.

 ನಾನು ನನ್ನ ಕಥಾಸಂಕಲನಕ್ಕೆ ಭಟ್ಟರ ಬೋಂಡಾ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ ಎಂಬ ಹೆಸರು ಇಟ್ಟೆ, ಇದು 28 ಸಣ್ಣ ಕಥೆಗಳ #ಕಥಾಸಂಕಲನ ಆಯಿತು.
 
  ಬಿಲಾಲಿ ಬಿಲ್ಲಿ ಇದು ನಮ್ಮ ಬೆಕ್ಕಿನ ಮೂಲ ಹೆಸರಲ್ಲ ಅದರ ನಿಜ ನಾಮ ಮಗ ನಾಮಕರಣ ಮಾಡಿದ ಹೆಸರು ಪಾಣಿ.

   ಅದರ ಫೈಟಿಂಗ್ ಚಮತ್ಕಾರಗಳು, ಕಿಲಾಡಿತನಗಳನ್ನು ನೋಡಿ ಗೆಳೆಯರಾದ #ಅಮೀರ್_ಸಾಹೇಬರು #ಬಿಲಾಲಿ_ಬಿಲ್ಲಿ ಎಂದು ಕರೆಯುತ್ತಿದ್ದರು.
  
    ನಾನು ಬರೆದ ಕಥಾಸಂಕಲನದಲ್ಲಿ ಅದಕ್ಕೆ ಬಿಲಾಲಿ ಬಿಲ್ಲಿ ಎಂದೆ ಉಚ್ಚರಿಸಿದ್ದೆ.
 
    ಆ ಕಥೆಯ ಕಾರಣದಿಂದಲೇ ಕಥಾ ಸಂಕಲನಕ್ಕೆ ಬಿಲಾಲಿ ಬಿಲ್ಲಿ ಅಭ್ಯಂಜನ ಎಂಬ ಹೆಸರು ಇಡುವಂತೆ ಆಯಿತು.

    ಕಥಾ ಸಂಕಲನದ ಮುಖಪುಟದಲ್ಲೂ ಈ ಬಿಲಾಲಿ ಬಿಲ್ಲಿ ಚಿತ್ರ ಅಚ್ಚಾಗಿದೆ ಅದರ ಪೋಟೋ ತೆಗೆದದ್ದು ನನ್ನ ಮಗಳು.

   ಒಮ್ಮೊಮ್ಮೆ ನನಗೆ ಅನಿಸುವುದು ಬಿಲಾಲಿ ಬಿಲ್ಲಿ ಸೆಲೆಬ್ರಿಟಿ ಆಗಿ ಹೋಯಿತಲ್ಲ ಏನಿರಬಹುದು ಎಂದು ಆಶ್ಚರ್ಯವಾಗುತ್ತದೆ.
 
 ಹಿಂದಿನ ಜನ್ಮದಲ್ಲಿ ಬಿಲಾಲಿ ಬಿಲ್ಲಿ ಪ್ರಸಿದ್ಧ ವ್ಯಕ್ತಿಯೇ ಆಗಿರಬೇಕು.

  ಈ ಬೆಕ್ಕು ಬಂದು ಸೇರಿದ್ದೇ ಒಂದು ಆಶ್ಚರ್ಯ.. ನಮ್ಮ ಮನೆಯಿರುವುದು ನಾಲ್ಕು ರಸ್ತೆ ಬಂದು ಸೇರುವ ನಮ್ಮೂರು ಯಡೇಹಳ್ಳಿ ವೃತ್ತದಲ್ಲಿ.

  ಸುತ್ತ ಮುತ್ತಲಿನ ಹಳ್ಳಿಯವರು ತಮ್ಮಸಾಕು ನಾಯಿ ಮತ್ತು ಬೆಕ್ಕು ಮರಿ ಹಾಕಿದಾಗ ಹೆಣ್ಣು ಮರಿ ಆಗಿದ್ದರೆ ಅವು ಕಣ್ಣು ಬಿಡುವ ಮೊದಲೇ ತಂದು ಬಿಟ್ಟು ಹೋಗುವ ವೃತ್ತ ಈ ಸರ್ಕಲ್.

   ಇಂತಹದೇ ಒಂದು ಪ್ರಸಂಗದಲ್ಲಿ ಈ ಬೆಕ್ಕನ್ನು ನಮ್ಮ ಯಡೇಹಳ್ಳಿಯ ಸರ್ಕಲ್ ನಲ್ಲಿ ಯಾರೋ ತಂದು ಬಿಟ್ಟು ಹೋಗಿದ್ದಾರೆ.

   ನಮ್ಮದೇ ಕಾಂಪ್ಲೆಕ್ಸ್ ನಲ್ಲಿ ಮೀನಿನ ಊಟದ ಹೋಟೆಲ್ ಒಂದು ಶಂಕರ ಎಂಬುವವರು ನಡೆಸುತ್ತಿದ್ದರು.

   ಈ ಬೆಕ್ಕಿನ ಮರಿ ಹೇಗೋ ರಾತ್ರಿ ಅವರ ಹೋಟೆಲ್ ಒಳ ಸೇರಿದೆ.

   ಹೋಟೆಲ್ ನವರಿಗೆ ಗೊತ್ತೇ ಇಲ್ಲದೆ ಅವರು ಹೊರಗಿನಿಂದ ಲಾಕ್ ಮಾಡಿಕೊಂಡು ಹೋಗಿದ್ದಾರೆ.

   ರಾತ್ರಿ ಎಲ್ಲಾ ಮರಿ ಬೆಕ್ಕು ಹೊರಬರಲು ದಾರಿ ಗೊತ್ತಾಗದೆ ಕೂಗುತ್ತಿತ್ತು.

   ಇದು ನನ್ನ ಮಗ ಮತ್ತು ಮಗಳಿಗೆ ಗೊತ್ತಾಗಿ  ಅವರಿಬ್ಬರು ಸಣ್ಣವರಿದ್ದರಿಂದ ಆ ಹೋಟೆಲ್ ಬಾಗಿಲು ಎಷ್ಟು ಹೊತ್ತಿಗೆ ತೆಗೆಯುತ್ತಾರೆ ಅಷ್ಟು ಬೇಗ ಅದನ್ನು ತಂದು ಅದಕ್ಕೆ ಹಾಲು ಕೊಡಬೇಕು ಎಂಬ ತವಕದಲಿದ್ದರು.
 
   ಆದರೆ ಮರುದಿನ ನಿತ್ಯ ಬರುವ ವೇಳೆಗಿಂತ ಕೊಂಚ ತಡವಾಗಿ ಹೋಟೆಲ್ ಮಾಲೀಕ ಶಂಕರ  ಬಂದು ಬಾಗಿಲು ತೆಗೆದಾಗ.

   ಈ ಬೆಕ್ಕಿನ ಮರಿಗಾಗಿ ಕಾಯುತ್ತಿದ್ದ ನನ್ನ ಮಕ್ಕಳು ಈ ಅತಿ ಸಣ್ಣ ಬೆಕ್ಕಿನ ಮರಿ (ಬಹುಷ್ಯ ಮರಿ ಹಾಕಿದ ಹತ್ತು ದಿನಗಳಲ್ಲಿ ಕಣ್ಣು ಬಿಟ್ಟ ಇದನ್ನ ತಂದು ನಮ್ಮೂರ ಸರ್ಕಲ್ ದಾರಿ ಕಾಣಿಸಿದ ಮಾಲಿಕ ಮಹಾನುಭ ಅನ್ನಿಸುತ್ತೆ) ಮನೆಗೆ ತಂದರು.

    ಅವತ್ತಿನಿಂದ ಈ ಬೆಕ್ಕು ಪಾಣಿ ಎಂಬ ನಾಮಕರಣದಿಂದ ನಮ್ಮ ಮನೆ ಸೇರಿತ್ತು.

   ಅದು ಚಿಕ್ಕಂದಿನಲ್ಲೇ ವಿಶೇಷ ಬೆಕ್ಕು ಅನ್ನಿಸಿತ್ತು ಅದರ ಚಟುವಟಿಕೆಗಳು ಆ ರೀತಿಯೇ ಇತ್ತು.

   ಆಗ ನನ್ನ ವಾಕಿಂಗ್ ನಮ್ಮ ಕಲ್ಯಾಣ ಮಂಟಪದ ಒಳಗಡೆ ಹಾಲಿನಲ್ಲಿ ಆಗುತ್ತಿತ್ತು.

  ಅಲ್ಲಿ ನಿಲ್ಲಿಸುತ್ತಿದ್ದ ಅಂಬಾಸೆಡರ್ ಕಾರು ಮತ್ತು ಮಾರುತಿ ಕಾರುಗಳ ಟಾಪ್ ಮೇಲೆ ಈ ಬೆಕ್ಕಿನ ಮರಿ ಇಟ್ಟು ನಾನು ಅದರ ಸುತ್ತ ವಾಕಿಂಗ್ ಮಾಡುತ್ತಿದ್ದೆ.

  ನನ್ನ ವಾಕಿಂಗ್ ನೋಡುತ್ತಾ ಅದು ಯಾವಾಗಲೂ ಅಲ್ಲೇ ಕುಳಿತಿರುತ್ತಿತ್ತು.

   ಹೀಗೆ ದೊಡ್ಡದಾಗುತ್ತಾ ಬಂತು... ಕಲ್ಯಾಣ್ ಮಂಟಪದಲ್ಲಿ ಸಿದ್ದ ಸಮಾಧಿ ಯೋಗ (ಎಸ್. ಎಸ್. ವೈ ) ತರಬೇತಿ ಕೆಲ ದಿನ ಬೆಳಿಗ್ಗೆ ಐದಕ್ಕೆ ಪ್ರಾರಂಭವಾಗುತ್ತಿತ್ತು.

   ನಾವೆಲ್ಲ ಮನೆಯವರೆಲ್ಲ ಅದರಲ್ಲಿ ಭಾಗವಹಿಸಿದ್ದೆವು ಈ ಬೆಕ್ಕಿನ ಮರಿ ಅಲ್ಲೇ ಬಂದು ಕುಳಿತು ಎಲ್ಲವನ್ನು ವೀಕ್ಷಿಸುತ್ತಿತ್ತು.
 
   ಸ್ವಲ್ಪ ದೊಡ್ಡದಾದಂತೆ ಇದು ಕಾಗೆಗಳನ್ನ ಶಿಕಾರಿ ಮಾಡಲು ಪ್ರಯತ್ನಪಡುತ್ತಿತ್ತು ಇದು ಕಾಗೆಗಳ ಗುಂಪಿಗೆ ಸಿಟ್ಟು ತರಿಸಿತ್ತು.

     ಕಾಗೆಗಳ ಹಿಂಡಿಗೆ ಈ ಬೆಕ್ಕು ಏಕಾಂಗಿಯಾಗಿ ಬಯಲಲ್ಲಿ ಇದ್ದಾಗ ಕಾಗೆಗಳು ಎಲ್ಲವೂ ಸೇರಿ ಅಟ್ಯಾಕ್ ಮಾಡಲು ಬರುತ್ತಿದ್ದವು.

  ಆದರೆ ನಮ್ಮ ಬೆಕ್ಕು ಧೈರ್ಯದಿಂದ ಕಾಗೆಗಳ ಜೊತೆ ಹೋರಾಡುತ್ತಿತ್ತು.

   ಒಮ್ಮೆ ಇದರ ಹೋರಾಟ ಕಷ್ಟಕರವಾಗಿತ್ತು ಅವತ್ತು ಕಾಗೆಗಳ ಸಂಖ್ಯೆ ಮತ್ತು ಶಕ್ತಿ ಜಾಸ್ತಿ ಆಗಿತ್ತು.

  ಆಗ ಬೆಕ್ಕು ನಮ್ಮ ಕೆರೆ ಪಕ್ಕದ ಅಂಟುವಾಳ ಗಿಡದ ಮೇಲೆ ಓಡಿ ಹತ್ತಿದೆ ಆದರೆ ಕಾಗೆಗಳ ತಂಡ ಇದನ್ನು ಬಿಡದೆ ಹಿಂಬಾಲಿಸಿ  ಕುಕ್ಕಲು ಪ್ರಯತ್ನಿಸುತ್ತಿತ್ತು.

   ಆಗ ಚಲಾಕಿ ಬಿಲ್ಲಿ ಅಂಟುವಾಳ ಮರದ ತುದಿಯಿಂದ ನೇರ ಕೆರೆಗೆ ಹಾರಿತ್ತು...

     ಇದನ್ನು ಕಾಗೆಗಳು ನಿರೀಕ್ಷಿಸಿರಲಿಲ್ಲ ಹೀಗೆ ಬೆಕ್ಕು ಕಾಗೆ ಅಕ್ರಮಣದಿಂದ ತಪ್ಪಿಸಿ ಕೊಂಡು ಮನೆ ಸೇರಿತ್ತು.
 
   ಈ ಬೆಕ್ಕಿಗೆ  ಧೈರ್ಯ ಜಾಸ್ತಿ ಆದ್ದರಿಂದ ಇದಕ್ಕೆ ತಿರುಗಾಟದ ಶೋಕಿ ಇತ್ತು.

   ಊರೊಳಗೆ ತಿರುಗಾಟಕ್ಕೆ ಹೋದರೆ ಇದಕ್ಕೆ ಊರ ನಾಯಿಗಳು ಶತ್ರುಗಳು.

   ಕಾರಣ ಅವುಗಳು ನಮ್ಮ ಮನೆಯ ಹತ್ತಿರ ಬಂದಾಗ ಇದು ವಿನಾಕಾರಣ ಜಗಳ ತೆಗೆದು ಹೊಡೆದಾಟ ಮಾಡುತ್ತಿತ್ತು.

 ಈಗ ಊರ ಒಳಗಿನ ತಿರುಗಾಟಕ್ಕೆ ಹೋದಾಗ ಹಳೆಯ ದ್ವೇಷದಿಂದ ಗಡಿ ಸಮಸ್ಯೆ ಉದ್ಭವವಾಗಿ ಊರ ನಾಯಿಗಳು ತಮ್ಮ ಗಡಿ ರಕ್ಷಣೆ ಮಾಡಿಕೊಳ್ಳಲು ಅವುಗಳೆಲ್ಲ ಸೇರಿ ಇದರ ಮೇಲೆ ಅಟ್ಯಾಕ್ ಮಾಡುತ್ತಿದ್ದವು.

 ಇಂತಹ ಸಂದರ್ಭದಲ್ಲಿ ಪಲಾಯಾನ ಮಾಡುತ್ತಿದ್ದ ಬಿಲ್ಲಿ ನಮ್ಮ ಮನೆಯ ತನಕ ಓಡಿ ಬರುತ್ತಿತ್ತು.

  ನಮ್ಮ ಗೇಟು ದಾಟಿದ ತಕ್ಷಣ ತಿರುಗಿ ನಿಲ್ಲುತ್ತಿತ್ತು.. 

   ಊರ ನಾಯಿಗಳು ತನ್ನ ಬೇಟೆ ತನ್ನ ಬಾಯಿಗೆ ಸಿಕ್ಕಿತು ಎನ್ನುವಾಗ ಬಿಲ್ಲಿ ತನ್ನ ಪಂಜಾದಿಂದ ನಾಯಿಯ ಮುಖಕ್ಕೆ ಬಾರಿಸುತ್ತಿತ್ತು.

   ಇದನ್ನು ನಿರೀಕ್ಷೆ ಮಾಡದ ನಾಯಿಗಳು ಈ ಅನಿರೀಕ್ಷಿತ ಹೊಡೆತದಿಂದ ತತ್ತರಿಸಿ
 ಅತ್ಯಂತ ನೋವಿನಿಂದ ಕುಂಯೋ ಎನ್ನುತ್ತಾ ಒಮ್ಮೆಗೆ ಹಿಂದೆ ಸರಿದ ನಾಯಿಗಳು ವಾಪಸ್ ಓಡಿ ಹೋಗುತ್ತಿದ್ದವು.

   ಈ ಹಲ್ಲೆಯಿಂದ ಅವುಗಳು ಹೆಚ್ಚಿನ ದ್ವೇಷದಿಂದ ಇದರ ಮೇಲೆ ಮುಂದೆ ಸಿಕ್ಕಾಗ  ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದವು.

   2015 ರಲ್ಲಿ ನಮ್ಮ ತಂದೆಯು ಕಟ್ಟಿಸಿದ್ದ ಹಳೆಯ ಮನೆ ತೆಗೆದು ಹೊಸ ಮನೆ ನಿರ್ಮಾಣ ಶುರು ಮಾಡಿದ್ದೆವು ಆಗ ನಮ್ಮ ವಾಸ್ತವ್ಯ ನಮ್ಮ ಕಾಟೇಜ್ ಗಳಲ್ಲಿ ಆಗ ಬಿಲಾಲಿ ಬಿಲ್ಲಿ ತುಂಬು ಗರ್ಭಿಣಿ.

    ಅವತ್ತು ನಾನು ಅಲ್ಲೇ ಕುರ್ಚಿ ಮೇಲೆ ಕುಳಿತು ಪೇಪರ್ ಓದುತ್ತಿದ್ದೆ ಆಗ ಯಾವುದೋ ಒಂದು ಬೆಕ್ಕು ಅಲ್ಲಿ ಬರುತ್ತಿದ್ದನ್ನ ನೋಡಿದ ನಮ್ಮ ಬಿಲ್ಲಿ ಬೇರೆ ಬೆಕ್ಕು ಇಲ್ಲಿಗೆ ಬರುವುದು ಸಹಿಸದೆ ಅದನ್ನು ಓಡಿಸಿಕೊಂಡು ಹೋಯಿತು.

 ನಂತರ ತುಂಬು ಬಸುರಿ  ಆ ಬೆಕ್ಕಿನ ಮೇಲೆ ಹಲ್ಲೇ ಮಾಡಲು ಹೊರಟಿದ್ದಾಗ ಅದರ ಅತ್ಯಂತ ವೇಗದ ಓಟ-ದ್ವೇಷ- ಕೋಪ ಎಲ್ಲಾ ಸೇರಿ ಅದರ ಹೃದಯ ಸ್ತಂಭನವಾಯಿತು.
 
   ನಂತರ ನಡೆದದ್ದು ಮಕ್ಕಳ ರೋದನೆ ಜೊತೆಗೆ ಮೌನವಾಗಿ ನಮ್ಮ ಕಣ್ಣೀರುಗಳು.

 ಅದನ್ನು ಗೌರವಯುತವಾಗಿ ಸಮಾಧಿ ಮಾಡಬೇಕು ಎಂದು ತೀರ್ಮಾನಿಸಿ ಸಮಾಧಿ ಮಾಡಿದ್ದೇವೆ.

  ಈ ಬೆಕ್ಕಿನದ್ದೇ ನಮ್ಮೂರ ಭಟ್ಟರ ಬೋಂಡಾ ಬಾಂಡ್ಲಿಯಲ್ಲಿ ಬಿದ್ದು ಬಂದ ಕಥೆ ಅದನ್ನೇ
 ಬಿಲಾಲಿ ಬಿಲ್ಲಿ ಅಭ್ಯಂಜನ ಎಂಬ ಹೆಸರಿನ ಕಥೆಯಾಗಿ ಬರೆದೆ ಅದು ಕೇಳಿದವರಿಗೂ ಇಷ್ಟವಾಯಿತು.

 ಈ ಕಥೆಗೆ ಮುನ್ನುಡಿ ಬರೆದ ಖ್ಯಾತ ಶಿಕ್ಷಣ ತಜ್ಞ - ಲೇಖಕ -ವಿಮರ್ಶಕ ಅರವಿಂದ ಚೊಕ್ಕಾಡಿ ಕೂಡ ಬಿಲಾಲಿ ಬಿಲಿಯನ್ನ ಉಲ್ಲೇಖಿಸಿದರು.

 ನಾನು ನನ್ನ ಕಥಾಸಂಕಲನಕ್ಕೆ ಭಟ್ಟರ ಬೋಂಡಾ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ ಎಂಬ ಹೆಸರು ಇಟ್ಟೆ, ಇದು 28 ಸಣ್ಣ ಕಥೆಗಳ ಕಥಾಸಂಕಲನ ಆಯಿತು.

  ಇದು ನಮ್ಮ ಬೆಕ್ಕು ಪಾಣಿ ಬಿಲಾಲಿ ಬಿಲ್ಲಿಯಾಗಿದ ಕಥೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...