#ಗೆಳೆಯ_ಶೃಂಗೇರಿ_ಶ್ರೀನಿವಾಸಮೂರ್ತಿ_ಈಗಿಲ್ಲ.
#ಕೆಲತಿಂಗಳ_ಹಿಂದೆ_ಇಹಲೋಕ_ತ್ಯಜಿಸಿದರು
#ಅವರು_ಬರೆದ_ಆನೆಗಳ_ವಿಶೇಷ_ಲೇಖನ_ಓದಿ.
#ಎರೆಡು_ವರ್ಷದ_ಹಿಂದೆ_ಅವರು_ಬರೆದ_ಲೇಖನ_ಇದು
#ಕಾಡಾನೆ_ಸಂಚಾರದ_ಪ್ರದೇಶದ_ಜನರಿಗೆ_ವಿದ್ಯಾರ್ಥಿಗಳಿಗೆ_ಉಪಯಕ್ತ_ಮಾಹಿತಿ
#ಇದನ್ನು_ಓದಿ_ಹೆಚ್ಚು_ಜನರಿಗೆ_ತಲುಪಿಸಿ.
#elephant #wildlifeconservation #elephantsanctuary #corridor #malenadu #westernghatsofindia #sagar #Anandapuram #ripponpet #shikaripura #Shivamogga #ambligola #byrapura #chanfalkere #gilalgundi #alavalli #arasalu
ನಮ್ಮ ಆನಂದಪುರಂ ಆನೆಗಳ ಕಾರಿಡಾರ್ ಆಗಿ ಹೊಸದಾಗಿ ದಾಖಲಾದ ಸಂದರ್ಭದಲ್ಲಿ ದಿನಾಂಕ 12 - ಡಿಸೆಂಬರ್ -2023 ರಲ್ಲಿ ಅವರು ಈ ಲೇಖನ ಬರೆದಿದ್ದರು.
#ಶೃಂಗೇರಿ_ಶ್ರೀನಿವಾಸಮೂರ್ತಿ ಶ್ರಮಜೀವಿ,ವಿದ್ಯಾವಂತ, ವಿಚಾರವಾದಿ ಮತ್ತು ಅವರ ಅಪಾರ ಓದು,ಅವರ ಜೀವನ ಶೈಲಿ ನನಗೆ ಅತ್ಯಂತ ಇಷ್ಟವಾಗಿತ್ತು.
ಅವರು ನಮ್ಮ ಊರಿನ ಆನೆಗಳ ಸಂಚಾರದ ಸಮಯದಲ್ಲಿ ಬರೆದ ಈ ಲೇಖನ ನಮಗೆಲ್ಲ ಆನೆ ಬಗ್ಗೆ ತಿಳಿದುಕೊಳ್ಳಲು ಉಪಯುಕ್ತವಾಗಿದೆ.
ಈ ಕೆಳಗಿನ ಶೃಂಗೇರಿ ಶ್ರೀನಿವಾಸ ಮೂರ್ತಿ ಬರೆದ ಲೇಖನ ಓದಿ.
#ಆನೆಗಳು
#ಕಾರಿಡಾರ್
ಆನೆಗಳನ್ನು ಮಲೆನಾಡು - ಪಶ್ಚಿಮ ಘಟ್ಟಗಳತ್ತ ನಿಧಾನವಾಗಿ ಹಾಗೂ ಶಾಶ್ವತವಾಗಿ ನೂಕಿ, ಅವುಗಳ ಪುರಾತನ ಅಲೆದಾಟ ಮಾರ್ಗ (ಕಾರಿಡಾರ್) ಗಳನ್ನು ಛಿದ್ರಗೊಳಿಸಿ ದ್ವಂಸ ಮಾಡಿದವರು ಯಾರು?...
ಪೂರ್ವ ಘಟ್ಟ ಪಶ್ಚಿಮ ಘಟ್ಟಗಳ ನಡುವಣ ವಿಶಾಲ ಬಯಲು, ಅಲ್ಲಿನ ಹುಲ್ಲುಗಾವಲು, ನಡುವಿನ ದ್ವಿದಳ ಪೊದೆ, ಕುರುಚಲು ಕಾಡು, ಅಲ್ಲಲ್ಲಿ ದೂರದೂರಕ್ಕೆ ಕಲ್ಲು ಬೆಟ್ಟಗಳು, ಆ ಬೆಟ್ಟಗಳಂಚಿನ ಉದುರೆಲೆ, ಅರೆಉದುರೆಲೆ ಮರಗಳು, ಪಶ್ಚಿಮ ಘಟ್ಟಗಳಿಂದ ಹರಿದು ಬರುವ ವಿಶಾಲ ನದಿಗಳು...
ಅಲೆದಾಟಕ್ಕೆ ಸಮತಟ್ಟಾದ ಭೂ ಪ್ರದೇಶ, ತಿನ್ನಲು ಸಮೃದ್ಧ ಸಮತೋಲನದ ಮೇವು, ಜಲಕ್ರೀಡೆಗೆ ಸಾಕಷ್ಟು ನೀರು ದೊರೆಯುತ್ತಿದ್ದ ದಖನ್ ಪ್ರಸ್ಥಭೂಮಿ ದಕ್ಷಿಣ ಭಾರತದ ಆನೆಗಳ ಮೂಲನೆಲೆಯಾಗಿತ್ತಲ್ಲ. .
ಜೊತೆಗೆ ಆನೆ ನಡೆದದ್ದೇ ದಾರಿ ಎಂಬಂತೆ ಆಗಾಗ ಸಂಭವಿಸುತ್ತಿದ್ದ ನಿಸರ್ಗ ಸಹಜ ಅನಾವೃಷ್ಟಿ ಸಂದರ್ಭದಲ್ಲೊ,ಕಡು ಬೇಸಿಗೆಯಲ್ಲೋ ನೀರನ್ನರಸಿ ಪಶ್ಚಿಮ ಘಟ್ಟಗಳತ್ತ ತಾತ್ಕಾಲಿಕ ವಲಸೆಯೂ ಇತ್ತು.
ಆದರೆ ಅತಿಯಾದ ಏರುತಗ್ಗು ಕೊರಕಲು ಅತಿಮಳೆ,ಕೆಸರು ಜಾಡುಗಳಿಗೆ ಒಗ್ಗದ ಈ ಬೃಹತ್ ದೇಹಿಗಳಿಗೆ ಮಲೆನಾಡು - ಪಶ್ಚಿಮ ಘಟ್ಟಗಳು ಶಾಶ್ವತ ನೆಲೆಗಳೇನೂ ಆಗಿರಲಿಲ್ಲ.
ಸರಿಸುಮಾರು ಮನುಷ್ಯನಷ್ಟೇ ಸೂಕ್ಷ್ಮ ಸಂವೇದನೆ ಗಳಿಸಿಕೊಂಡು ವಿಕಸನದ ಹಾದಿ ಸವೆಸುತ್ತಿರುವ(ವಿಕಸನವೆಂಬುದು ನಿರಂತರ ಪ್ರಕ್ರಿಯೆ) ಈ ಜೀವಿಗಳು ಸಂಘರ್ಷವಾದಿಗಳಲ್ಲ, ಸಹಜೀವಿಗಳ ತಂಟೆಗೆ ಹೋಗದೆ ತಮ್ಮಷ್ಟಕ್ಕೆ ತಾವಿರುವ ಸ್ವಭಾವದವು.
ಹಾಗೆಂದು ತಂಟೆಗೆ ಬರುವ ಪ್ರಾಣಿಗಳನ್ನು ಸುಮ್ಮನೆ ಬಿಡುವ ಜಾಯಮಾನದವೂ ಅಲ್ಲ.
ಆಫ್ರಿಕಾದ ವಿಶಾಲ ಹುಲ್ಲುಗಾಡುಗಳಲ್ಲಿ ಆದಿವಾಸಿ ಜನರ ಹಾಗೂ ಆನೆಗಳ ಸಹಬಾಳ್ವೆ ಈಗಲೂ ನಡೆದೇ ಇದೆ.
ತಮ್ಮ ಗುಂಪಿನೊಂದಿಗೆ ರಕ್ಷಣಾತ್ಮಕವಾಗಿ ಸೇರಿಕೊಳ್ಳುವ ಝೀಬ್ರಾಗಳಂತಹ ದುರ್ಬಲ ಸಹವಾಸಿಗಳನ್ನೂ ಒಪ್ಪಿಕೊಳ್ಳುವ ಸಹನಾಶೀಲತೆ ಇವಕ್ಕಿದೆ.
ಅಷ್ಟೇ ಏಕೆ, ಈಗಲೂ ಬಂಡಿಪುರದ ಜೇನುಕುರುಬರದು ಆನೆಗಳ ಸಹವಾಸವೇ.
ಅಪಾಯಕಾರಿಗಳಲ್ಲದ ಪರಿಸರಸ್ನೇಹಿ ಆದಿವಾಸಿಗಳನ್ನು ಗುರುತಿಸುವ ಶಕ್ತಿ ಹಾಗೂ ಸಹಿಸುವ ತಾಳ್ಮೆ ಅವಕ್ಕಿದೆ.
ಅದೆಲ್ಲಾ ಸರಿ, ಸಾವಿರಾರು ವರ್ಷಗಳ ಹಿಂದೆ ಹೀಗೆ ಬದುಕಿದ್ದ ದಖನ್ನಿನ ಆನೆಗಳನ್ನು ಖೆಡ್ಡಾಗಳಿಗೆ ನೂಕಿ, ಹಿಡಿದು ಪಳಗಿಸಿ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾ ಸಾಕುಪ್ರಾಣಿಯನ್ನಾಗಿಸಿಕೊಳ್ಳುವ ವಿಫಲ ಯತ್ನ ಮಾಡುತ್ತಾ ಅಲ್ಪಸಂಖ್ಯಾತಗೊಳಿಸಿ, ಪೂರ್ವ ಘಟ್ಟಗಳ ತಪ್ಪಲಿನಲ್ಲಿ ಒಂದಿಷ್ಟು ಕೂಡಿಹಾಕಿ, ಮತ್ತೊಂದಿಷ್ಟು ಆನೆಗಳನ್ನು ಮಲೆನಾಡು - ಪಶ್ಚಿಮ ಘಟ್ಟಗಳತ್ತ ನಿಧಾನವಾಗಿ ಹಾಗೂ ಶಾಶ್ವತವಾಗಿ ನೂಕಿ, ಅವುಗಳ ಪುರಾತನ ಅಲೆದಾಟ ಮಾರ್ಗ (ಕಾರಿಡಾರ್) ಗಳನ್ನು ಛಿದ್ರಗೊಳಿಸಿ ದ್ವಂಸ ಮಾಡಿದವರು ಯಾರು?
ಏರಿದ ಜನಸಂಖ್ಯೆಗೆ, ಆವರಿಸಿದ ಆಧುನಿಕ ಸುಖ ಭೋಗದ ತೆವಲಿಗೆ ಇಡೀ ದಕ್ಷಿಣಾವರ್ತವನ್ನೇ ವಶಪಡಿಸಿಕೊಂಡು ನಗರ, ಕೈಗಾರಿಕೆ, ಹೆದ್ದಾರಿ, ಅಣೆಕಟ್ಟು, ಕೃಷಿ ಎಂದು ಹಂಚಿಕೊಂಡ ನಾವು ಅವುಗಳ ಪಾಲು ಎಂದು ಉಳಿಸಿದ್ದೆಷ್ಟು?
ಹೀಗಿರುವಾಗ ಇನ್ನೂ ಹಿಡಿ ಹೊಡಿ ಬಡಿ ಎನ್ನುತ್ತಾ ಅರಬ್ಬಿ ಸಮುದ್ರಕ್ಕೆ ನೂಕಬೇಕೆ?....
ವಿಜ್ಞಾನ - ತಂತ್ರಜ್ಞಾನಗಳ ಮದವೇರಿಸಿಕೊಂಡ ನಾವು, ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸಿಕೊಳ್ಳಬಲ್ಲೆವು ಎಂದು ಬೀಗುವ ನಾವು, ಸಹಜೀವಿಗಳ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದೇ ಹೋದೆವೇ?...
ಅದೂ ಕೂಡಾ ನಾವೇ ಸೃಷ್ಟಿಸಿದ ಸಮಸ್ಯೆಗಳೇ ಅಲ್ಲವೇ?...
#ಶ್ರೀನಿವಾಸಮೂರ್ತಿ
12/12/23
Comments
Post a Comment