Skip to main content

3555. ಬದಲಾದ ಕೋಳಿ ಸಾಕಾಣಿಕೆ

#ಒಂದು_ಕಾಲದ_ನಮ್ಮ_ಹಳ್ಳಿಗಳ_ಕೋಳಿ_ಗೂಡಿನ_ಕೋಳಿಗಳು

#ಈಗ_ಲಕ್ಷಾಂತರ_ಕೋಟಿ_ವಹಿವಾಟಿನ_ಬೃಹತ್_ಉದ್ಯಮ

#ಸಂಪ್ರದಾಯಿಕ_ಗೃಹಬಳಕೆಯ_ಕೋಳಿ_ಸಾಕಾಣಿಕೆ.

#ಒಂದು_ಕಾಲದಲ್ಲಿ_ಕುಟುಂಬದ_ಆರ್ಥಿಕ_ಬದ್ರತೆಗೆ_ಉರುಗೋಲಾಗಿತ್ತು.

#ಕುಟುಂಬದ_ಆರ್ಥಿಕ_ಸಬಲತೆಗೆ_ಆಹಾರ_ಸ್ವಾವಲಂಬನೆಗೆ_ಕಾರಣವಾಗಿತ್ತು.

#ಅದುನಿಕ_ಡೈರಿ_ಪೌಲ್ಟ್ರಿ_ಕೈಗಾರಿಕೆಗಳಾದ್ದರಿಂದ_ಗೃಹ_ಕೋಳಿ_ಸಾಕಾಣಿಕೆ_ನಶಿಸಿದೆ.

#ಸಮ_ಪಾಲಿನ_ಕೋಳಿ_ಹಾವಿನ_ವಿಷ_ನಿವಾರಣೆಯ_ಕಪ್ಪು_ಕೋಳಿ

#ಮಂತ್ರವಾದಿಗಳು_ಕೇಳುವ_ಕೆಂಪು_ಕೋಳಿ_ಹಳ್ಳಿಯ_ದೈವಕ್ಕೆ_ಹರಕೆಯ_ನಾಟಿ_ಕೋಳಿ.


#Foultry #chicken #Magician #snakebite #naatichicken 

 ಆಗೆಲ್ಲ ಹಳ್ಳಿಯ ದೈವ ಬೂತಗಳು ಪಾರಂ ಕೋಳಿ ಬಲಿ ಒಪ್ಪಿಕೊಂಡಿರದ ಕಾಲ.

   ಆಗೆಲ್ಲ ಅಂದರೆ ಬಹಳ ದಿನ ಆಗಿಲ್ಲ, ಕೇವಲ 30 ವರ್ಷದ ಹಿಂದೆ ಈ ಪಾಟಿ ಕೋಳಿ ಮಾಂಸದ ಪೋಲ್ಟ್ರಿ ಉದ್ಯಮ ಬೆಳೆದಿರಲಿಲ್ಲ.

   ಹಳ್ಳಿಗಳ ದೈವಗಳು ಬೂತಗಳು ಪಾರಂ ಕೋಳಿ ಬಲಿ ಒಪ್ಪಿಕೊಂಡಿರದ ಆ ಕಾಲದಲ್ಲಿ ಹಳ್ಳಿಯ (ಮೇಲ್ಜಾತಿ ಹೊರತುಪಡಿಸಿ) ಪ್ರತಿ ಮನೆಯಲ್ಲೂ ಕೋಳಿ ಗೂಡು ಇರುತ್ತಿತ್ತು.

   ಅದರಲ್ಲಿ ಕನಿಷ್ಟ ಹತ್ತಿಪ್ಪತ್ತು ಕೋಳಿಗಳು ಇರುತ್ತಿದ್ದವು.

  ಮನೆಯ ಅತ್ಯಂತ ಕಿರಿಯ ವಯಸ್ಸಿನ ಸದಸ್ಯನಿಗೆ ಬೆಳಿಗ್ಗೆ ಕೋಳಿ ಗೂಡಿನ ಬಾಗಿಲು ತೆಗದು ಕೋಳಿ ಹೊರಬಿಡುವುದು ಅವು ಸೂರ್ಯ ಮುಳುಗುವ ಸಮಯದಲ್ಲಿ ಹೊಟ್ಟೆ ತುಂಬಿಸಿಕೊಂಡು ಗೂಡಿಗೆ ಮರಳುವಾಗ ಗೂಡಿಗೆ ಕೂಡಿ ಬಾಗಿಲು ಭದ್ರ ಮಾಡುವ ಕೆಲಸ.

  ಕೋಳಿ ಗೂಡಿನಲ್ಲಿ ಮೊಟ್ಟೆ ಸಂಗ್ರಹಿಸುವುದು, ಮೊಟ್ಟಿ ಮರಿ ಮಾಡಲು ಕಾವು ನೀಡಲು ಕುಳಿತ ಕೋಳಿ ಆರೈಕೆಗಳು ಮಾಡ ಬೇಕಿತ್ತು.

  ಹತ್ತಾರು ಹೆಣ್ಣು ಕೋಳಿಗೆ ಒಂದೆರೆಡು ಗಂಡು ಹುಂಜಾ ಇರುತ್ತಿತ್ತು.

    ಇವುಗಳ ಮಧ್ಯದಲ್ಲಿ ದೈವಗಳಿಗೆ, ಬೂತಗಳಿಗೆ ಮೀಸಲಿಟ್ಟ ಹರಕೆ ಕೋಳಿ ಹುಂಜಗಳು ಇರುತ್ತಿದ್ದವು.

  ಕೋಳಿ ಮೊಟ್ಟೆ ತಿನ್ನಲು ಬರುವ ನಾಗರ ಹಾವು, ಕೋಳಿ ಮರಿ ಎತ್ತಿಕೊಂಡು ಹೋಗುವ ಗಿಡುಗಗಳು, ಇಡೀ ದೊಡ್ಡ ಕೋಳಿಯನ್ನೆ ಕಬಳಿಸುವ ಕಾಡಿನ ನರಿಗಳು ಮತ್ತು ಕೋಳಿ ಮಾಂಸ ಪ್ರಿಯ ಕೋಳಿ ಕಳ್ಳರ ಕಾಟವೂ ಈ ಕೋಳಿಗೂಡಿಗೆ ದಾಳಿ ಇಡುತ್ತಿತ್ತು.

  ಅವಿಭಕ್ತ ಕುಟುಂಬದಲ್ಲಿ ಆಯಾ ಸೊಸೆಯಿಂದರ ಕೋಳಿಗಳೂ ಅವಿಭಕ್ತ ಕೋಳಿ ಗೂಡಿನಲ್ಲಿ ಇರುತ್ತಿದ್ದವು ಮತ್ತು ಅವರವರ ಅಂದು ಬಂದುಗಳು ಬಂದಾಗ ಅವರಿಗೆ ಸೇರಿದ ಕೋಳಿ ಪಲ್ಯ ಆಗುತ್ತಿತ್ತು. 

   ಸಾಕು ಕೋಳಿಗಳಿಂದ ಕುಟುಂಬದಲ್ಲಿ ವ್ಯಾಜ್ಯಗಳು, ಇರುಸು ಮುರುಸುಗಳಾಗಿ ಕುಟುಂಬಗಳಲ್ಲಿ ಹಿಸ್ಸೆಗಳಾದ ಅನೇಕ ಉಧಾಹರಣೆಗಳಿದೆ.

   ಹಾವು ಕಚ್ಚಿದರೆ ವಿಷ ತೆಗೆಯಲು ಬೇಕಾದ ಕಪ್ಪು ಬಣ್ಣದ ಒಂದೆರೆಡು ಕೋಳಿಗಳು, ಮಾಟ ಮಂತ್ರ ತೆಗೆಯಲು ಮಂತ್ರವಾದಿಗಳಿಗೆ ಬೇಕಾದ ಕೆಂಪು ಬಣ್ಣದ ಹುಂಜಾಗಳಿಗೂ ಗೂಡಿನಲ್ಲಿ ವಿಶೇಷ ಸ್ಥಾನವಿರುತ್ತಿತ್ತು.

  ಸಮ ಪಾಲಿನ ಕೋಳಿಗಳದ್ದೆ ಬೇರೆ ಕಥೆ, ವೀಳ್ಯದ ಎಲೆ ಮತ್ತು ಮೀನು ವರ್ಷ ಪೂರ್ತಿ ವಾರ ವಾರ ನೀಡಿ ಅದರ ಬೆಲೆಯ ಬತ್ತ ವರ್ತನೆಗೆ ಪಡೆಯುತ್ತಿದ್ದ ಬಾಯಮ್ಮಗಳು ಹಾಗೂ ಬೂಬಮ್ಮಗಳು ಎಲ್ಲಿಂದಲೋ ಕೋಳಿ ಮರಿ (ವಿಶಿಷ್ಟ ಬಣ್ಣ ಮತ್ತು ಜಾತಿಯದ್ದು ) ಸಾಕಲು ತಂದು ಕೊಡುತ್ತಿದ್ದರು.

    ಅದರ ಮೊಟ್ಟೆಯಿಂದ ಬಂದ ಮರಿಗಳಲ್ಲಿ ಅರ್ಧ ಸಾಕಿದವರಿಗೆ ಉಳಿದ ಅದ೯ ಸಂಖ್ಯೆ ಮರಿ ಬಾಯಮ್ಮ ಅಥವ ಬೂಬಮ್ಮರದ್ದು.

  ಆಗಾಗ ಕಾಡುವ ಕೋಳಿ ಕಾಯಿಲೆಯಿಂದ ಕೋಳಿಯ ಗೂಡು ಗೂಡೇ ಖಾಲಿ ಆಗುತ್ತಿದ್ದಾಗ ಮನೆಯ ಗೃಹಿಣಿಯರ ಪರದಾಟ ನೋಡುವಂತಿರುತ್ತಿರಲಿಲ್ಲ,

 ಆಗಾಗ್ಗೆ ಕೋಳಿ ಹೇನು ಆಗಿ ಅದರಿಂದ ಆಗುತ್ತಿದ್ದ ಪೀಡನೆಗಳು... ಹೀಗೆ ಒಂದೇ ಎರಡೇ? ಸಮಸ್ಯೆಗಳು.

  ಮೊದಲೆಲ್ಲ ಬತ್ತ ಒನಕೆಯ ಒರಳಲ್ಲಿ ಕುಟ್ಟಿ ಅಕ್ಕಿ ಮಾಡಿ ಹಸನು ಮಾಡಿದಾಗ ಉಳಿಯುತ್ತಿದ್ದ ನುಚ್ಚು, ನೆಲ್ಲಕ್ಕಿ ಕೋಳಿ ಮತ್ತು ಎಮ್ಮೆ ದನಗಳಿಗೆ ಆಹಾರ ಆಗುತ್ತಿತ್ತು.

   ಕಾಲ ಬದಲಾದಂತೆ ಅಕ್ಕಿ ಗಿರಣಿಯ ನುಚ್ಚು, ನೆಲ್ಲಕ್ಕಿ ಜೊತೆಗೆ ತೌಡು ಸಾಕಿದ ಕೋಳಿಗಳಿಗೆ ಬಳಕೆ ಆಗಲು ಪ್ರಾರಂಬಿಸಿತು.

  ಕೆಲ ವರ್ಷದ ಹಿಂದೆ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಪಶು ಸಂಗೋಪನಾ ಅಧಿಕಾರಿಯೋರ್ವರು ಎಷ್ಟೋ ಲಕ್ಷ ಕೋಳಿಗಳಿಗೆ ಲಸಿಕೆ ನೀಡಿದ್ದಾಗಿ ನೀಡಿದ ಹೇಳಿಕೆ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಅಲ್ಲೋಲ ಕಲ್ಲೋಲ ಆಗಿತ್ತು (ಸುಳ್ಳು ಲೆಕ್ಕ).

  ಈಗ ಪೌಲ್ಟ್ರಿ ಉದ್ದಿಮೆ ದೊಡ್ಡ ಪ್ರಮಾಣದಲ್ಲಿ ಆಗಿದೆ, ಹಳ್ಳಿಯ ಗಲ್ಲಿಗಲ್ಲಿಗಳಲ್ಲಿ ಕೋಳಿ ಮಾಂಸದ ಅಂಗಡಿಗಳು ಬಂದಿದೆ.

    ಆ ಕಾಲದಂತೆ ಕೋಳಿ ಸಾಕುವ ನಾಜೂಕಿನ ಗೃಹಿಣಿಯರೂ ಈಗಿಲ್ಲ.

    ತಂದೂರಿ ಕೋಳಿ, ಗ್ರಿಲ್ ಕೋಳಿ ಅಂತ ನವ ನವೀನ ಕೋಳಿ ಪದಾರ್ಥಗಳ ಹೊಸ ಹೊಸ ಖಾದ್ಯ ಅಡಿಗೆ ಮನೆ ಸೇರಿಕೊಂಡಿದೆ.

  ಮಲೆನಾಡಿನ ಕೋಳಿ ಕಜ್ಜಾಯ, ಕರಾವಳಿಯ ಕೋರಿ ರೊಟ್ಟಿ, ಕೋಳಿ ತಾಳ್ ಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಹಂತ ತಲುಪಿದೆ.   

   ಒಟ್ಟಾರೆ ಕೋಳಿ ಮಾಂಸ ಮೊಟ್ಟೆ ಬಳಕೆ ಮಾತ್ರ ನೂರಾರು ಪಟ್ಟು ಹೆಚ್ಚಾಗಿದ್ದು ಸತ್ಯ.

  ಬತ್ತ ಬೆಳೆದರೆ ನಷ್ಟ ಅಂತಾಗಿದೆ, ಊಟಕ್ಕೆ ತರಹಾವಾರಿ ಅಕ್ಕಿ ಖರೀದಿ ನಡೆದಿದೆ.

   ಒ0ದು ಕಾಲದ ನೆಲ್ಲಕ್ಕಿ, ನುಚ್ಚು ಮತ್ತು ಅಕ್ಕಿ ಪಾಲೀಶು ಮಾಡಿದ ತೌಡು ಈಗಿನ ಹೊಸ ತಲೆಮಾರಿಗೆ ಗೊತ್ತೂ ಇಲ್ಲ.

  ಹಳ್ಳಿಗಳಲ್ಲಿ ಎಲ್ಲೆಂದರಲ್ಲಿ ಕೋಳಿ ಅಂಗಡಿ ತ್ಯಾಜ್ಯ ಎಸೆಯುತ್ತಾರೆ ಅದನ್ನು ತಿಂದು ಬೀದಿಯಲ್ಲಿ ಹೋಗುವವರನ್ನು ಗುರಾಯಿಸುವ ಬೀದಿ ನಾಯಿಗಳೂ ತಂಡ ತಂಡವಾಗಿ ಬಲಿಷ್ಟವಾಗಿ ಮಕ್ಕಳ ಮೇಲೆ ಎರಗುತ್ತಿದೆ.
 
  ಹೀಗೆ ಸಮಾಜದಲ್ಲಿ ಕೋಳಿ ಸಾಕಾಣಿಕೆ ಉದ್ಯಮದ ರೂಪ ಪಡೆಯುವ ಮೊದಲು ಗೃಹ ಬಳಕೆಗಾಗಿ ಸಂಪ್ರದಾಯಿಕ ಕೋಳಿ ಸಾಕಾಣಿಕೆ ಹಳ್ಳಿಯ ಪ್ರತಿ ಮನೆಯ ಆಹಾರ ನಿರ್ವಹಣೆಗೆ, ಹಬ್ಬ ಹರಿದಿನಗಳಲ್ಲಿ ಸಮಾರಾಧನೆಗೆ ಬಳಕೆ ಆಗಿ ಆರ್ಥಿಕ ಸಬಲತೆ ಮತ್ತು  ಆಹಾರ ಸ್ವಾವಲಂಬನೆ ನೀಡಿತ್ತು ಎಂಬುದು ಈಗ ನೆನಪು ಮಾತ್ರ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...