#ಆನಂದಪುರಂ_ಇತಿಹಾಸ_ಭಾಗ_28
#ಬ್ರಿಟೀಷರ_ಆಡಳಿತದ_ಪಳಿಯುಳಿಕೆಯಂತೆ_ಉಳಿದಿರುವ_ಆನಂದಪುರಂನ_ಪ್ರವಾಸಿ_ಮಂದಿರ.
#ಸುಮಾರು_ಮೂರು_ಶತಮಾನಕ್ಕೂ_ನಂಟು_ಇದೆ.
#ಆನಂದಪುರಂ_ತಾಲ್ಲೂಕ್_ಆಗಿದ್ದಾಗ_ಇದು_ತಾಲ್ಲೂಕ್_ಕಚೇರಿ.
#ಸಾಗರ_ತಾಲ್ಲೂಕಿನ_ಮೊದಲ_ನ್ಯಾಯಾಲಯ_ಕಚೇರಿ_ಇದಾಗಿತ್ತು.
#ಒಂದು_ಕಾಲದ_ಶ್ರೀಮಂತ_ಬ್ರಿಟೀಶ್_ಬಂಗ್ಲೆ
#ಇಲ್ಲಿ_ತಂಗಿದ್ದ_ಮಹನೀಯರು_ಅನೇಕರು.
ಬ್ರಿಟಿಷರು ಯಡೇಹಳ್ಳಿಯ ದಟ್ಟ ಅರಣ್ಯದ ಮಧ್ಯೆ ಎತ್ತರದ ಪ್ರದೇಶದಲ್ಲಿ ಪೂರ್ವಾಭಿಮುಖವಾಗಿ ಕಟ್ಟಿದ ಈ ಸುಸಜ್ಜಿತವಾದ ಬಂಗ್ಲೆ ಆ ಕಾಲದಲ್ಲಿ A ಗ್ರೇಡಿನದ್ದಂತೆ.
ಪೂರ್ವದ ಎಡಗಡೆ ತಾವರೆಕೆರೆ ಬಲ ಬಾಗದಲ್ಲಿ ಶಿವಮೊಗ್ಗ ಕೊಲ್ಲೂರು ಹೆದ್ದಾರಿ ಇದೆ, ಕಾಡುಪ್ರಾಣಿಗಳು ನೀರು ಕುಡಿಯಲು ಬಂದಾಗ ಬ್ರಿಟೀಷ್ ದೊರೆಗಳು ಶಿಕಾರಿ ಮಾಡಲು ಅನುಕೂಲ ಇತ್ತು.
ಸುಮಾರು 5 ಎಕರೆ ಪ್ರದೇಶದ ಮಧ್ಯದಲ್ಲಿ ಅತ್ಯುತ್ತಮ ಎರೆಡು ಬೆಡ್ ರೂಂನ (ಅಟ್ಯಾಚ್ ಟಾಯಲೆಟ್ ಇರುವ) ಸೂರ್ಯೋದಯ ಮತ್ತು ಸೂಯಾ೯ಸ್ಥಗಳ ವೀಕ್ಷಣೆಗೆ ವರಾಂಡಗಳಿರುವ, ಸುಸಜ್ಜಿತ ಅಡುಗೆ ಮನೆ ಮತ್ತು ಹಾವು ಇತ್ಯಾಧಿ ಸರಿಸೃಪಗಳಿಂದ ರಕ್ಷಣೆಗಾಗಿ ಸುಮಾರು 4 ಅಡಿ ಎತ್ತರದ ಅಡಿಪಾಯದ ವಿಷಾಲವಾದ ಮೆಟ್ಟಿಲುಗಳ ಈ ಸುಸಜ್ಜಿತ ಕಟ್ಟಡದ ಉತ್ತರಕ್ಕೆ ತೆರೆದ ಬಾವಿ ಅದರ ಸಮೀಪ ಬಂಗ್ಲೆ ಕಾವಲುಗಾರನ ಮನೆ ನಿರ್ಮಿಸಿದ್ದಾರೆ.
ಇಲ್ಲಿ ತಂಗಿ ವಿಹರಿಸಲು ಬ್ರಿಟಿಷರಿಗೆ ಇದು ಸೊಗಸಾದ ಸುಸಜ್ಜಿತವಾದ ತಂಗುದಾಣವಾಗಿ ನೂರಾರು ವರ್ಷ ಬಳಕೆ ಆಗಿತ್ತು.
1970ರವರೆಗೆ ಇದೊಂದು ಪ್ರೇಕ್ಷಣಿಯ ಸ್ಥಳ ಆಗಿತ್ತು. ಸುತ್ತಲೂ ಮಣ್ಣಿನ ಅಂಗಳ, ಕಾವಲುಗಾರರ ಮನೆತನಕ ರಸ್ತೆಯ ಇಕ್ಕೆಲದಲ್ಲಿ ನಾಗಸಂಪಿಕೆ ಮರ, ಬಂಗಲೆ ಎದುರಲ್ಲಿ ಸಣ್ಣ ಗಾಳಿಮರದ ತೋಪು ಅದರ ಮಧ್ಯ ಆನಂದಪುರಂನ ಕೋಟೆ ಒಳಗಿನ ಪಿರಂಗಿ, ವಿಗ್ರಹ ಇತ್ಯಾದಿ ಜೋಡಿಸಿಟ್ಟಿದ್ದರು.
ಶರಾವತಿ ವಿದ್ಯುತ್ ಉತ್ಪಾದನೆ ಶುರು ಮಾಡುವಾಗ ಮಳೆ ಮಾಪಕ ಯ೦ತ್ರ ಇಲ್ಲಿ ಸ್ಥಾಪಿಸಿದ್ದರು.
ಇಲ್ಲಿನ ಸುಂದರವಾದ ಉದ್ಯಾನವನ ನಿರ್ವಣೆಯ ಮಾಲಿ ಕೆಲಸ ಇಲ್ಲಿನ ಮೇಟಿಯದ್ದೇ ಆಗಿತ್ತು, ಬಾವಿಯಿಂದ ಗಿಡಗಳಿಗೆ ನೀರುಣಿಸಲು ಇಂಗ್ಲೆಂಡ್ ನಿಂದ ತಂದಿದ್ದ ಒಂಟಿ ಚಕ್ರದ ಕೈಗಾಡಿ ಇತ್ತು.
ಸಂಜೆಯ ಹೊತ್ತಲ್ಲಿ ಮತ್ತು ಬೆಳಗಿನ ಸೂಯೋ೯ದಯದಲ್ಲಿ ವಾಯುವಿಹಾರಕ್ಕೆ ಹೇಳಿ ಮಾಡಿಸಿದ ಸ್ಥಳ ಇದಾಗಿತ್ತು.
ನಂತರ ಇಲ್ಲಿ ಇಟ್ಟಿದ್ದ ಪಿರಂಗಿ ಇತ್ಯಾದಿಗಳು ಕಳ್ಳರಿಂದ ರಕ್ಷಿಸಲಿಕ್ಕಾಗಿ ಸಾಂಗ್ಲಿಯಾನರು SP ಆಗಿದ್ದಾಗ ಶಿವಮೊಗ್ಗದ ಜಿಲ್ಲಾ ಪೋಲಿಸ್ ಕಚೇರಿ ಎದರು ತೆಗೆದುಕೊಂಡು ಸ್ಥಾಪಿಸಿದ್ದಾರೆ.
ಸಾಗರ ತಾಲ್ಲೂಕ್ ಕೇಂದ್ರವಾಗಿ ಬೆಳೆಯುತ್ತಾ ಇಲ್ಲಿನ ಬ್ರಿಟೀಷರ ಈ ಬಂಗ್ಲೆ ನಿರಾಸಕ್ತಿಗೆ ಒಳಗಾಗಿ ಹಿಂದಿನ ಎಲ್ಲಾ ವಿಜೃಂಬಣೆ ಕಳೆದುಕೊಂಡು ಒಂದು ಕಟ್ಟಡದ ರೀತಿ ಉಳಿದಿದೆ, ಆಗಾಗ್ಗೆ ದುರಸ್ತಿ ಇತ್ಯಾದಿ ನಡೆಯುತ್ತದೆ ಆದರೆ ಬ್ರಿಟೀಷರ ದೂರದೃಷ್ಠಿ ಇಲ್ಲದ ಸ್ವಾತಂತ್ರ ಭಾರತದ ಸರ್ಕಾರಿ ಇಂಜಿನಿಯರ್ ಗಳಿಂದ ಸುಂದರವಾಗಿದ್ದ ಇದರ ಸೌಂದರ್ಯ ಈಗ ಉಳಿದಿಲ್ಲ.
1890ರಲ್ಲಿ ಆನಂದಪುರಂ ತಾಲ್ಲೂಕ್ ಆಗಿತ್ತು (ಈಗ ಸಾಗರ ತಾಲ್ಲೂಕ್ ಸೇರಿದ ಹೋಬಳಿ) ಆಗ ಈ ಬಂಗ್ಲೆ ತಾಲ್ಲೂಕ್ ಕಚೇರಿ ಆಗಿತ್ತು.
ನಂತರ ಇದು ಸಾಗರ ತಾಲ್ಲೂಕಿನ ಮೊದಲ ನ್ಯಾಯಾಲಯ ಆಗಿ ಕಾರ್ಯನಿರ್ವಹಿಸಿತ್ತು.
ಅನಂದಪುರಂನ ಕ್ರಿಸ್ತ ಅನುಯಾಯಿಗಳ ಭಾನುವಾರದ ಪ್ರಾರ್ಥನೆಯ ತಾತ್ಕಾಲಿಕ ಚರ್ಚ್ ಕೂಡ ಇದೇ ಆಗಿತ್ತು (ಚರ್ಚ್ ನಿರ್ಮಾಣದ ತನಕ) .
ಇದೇ ಕಟ್ಟಡ ಶರಾವತಿ ನದಿ ಮುಳುಗಡೆ ರೈತರ ಪರಿಹಾರದ ವಿಶೇಷ ಕೋಟ್೯ ಆಗಿತ್ತು.
ಆಗ ರೈತರ ಪರಿಹಾರ ನಿಧಿಗಾಗಿ ಬಂಗಾರಪ್ಪನವರು (ಮಾಜಿ ಮುಖ್ಯಮಂತ್ರಿ) ಕೆಲ ಕಾಲ ಕೋರ್ಟ್ ಕಲಾಪದಲಿ ವಕೀಲರಾಗಿ ಭಾಗವಹಿಸಿದ್ದರು, ಆಗ ಅವರು ಕಣ್ಣೂರಿನ ಅಡಿಗೆ ಮನೆಯವರಲ್ಲಿ (ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಕೆ.ಟಿ.ತಿಮ್ಮೇಶ್ ರ ಮೂಲ ಮನೆ) ಅತಿಥಿ ಆಗಿ ಉಳಿದಿದ್ದರು ಮತ್ತು ಆಗ ಅವರ ಸವಾರಿ ಹೊಸ ಸೈಕಲ್ ನಲ್ಲಿ ಅಂತ ನೋಡಿದ ಹಿರಿಯರು ನೆನಪಿಸುತ್ತಾರೆ.
ಇಲ್ಲಿ ಪ್ರಖ್ಯಾತ ನರಭಕ್ಷಕ ಶಿಕಾರಿಗಾರ ಮತ್ತು ಬರಹಗಾರ ಕೆನೆತ್ ಅಂಡರ್ಸನ್, ದೀವಾನರಾಗಿದ್ದ ವಿಶ್ವೇಶ್ವರಯ್ಯ ಆದಿ ಆಗಿ ಅನೇಕ ನಾಡಿನ ಪ್ರಖ್ಯಾತರು ಇಲ್ಲಿ ವಿಶ್ರಮಿಸಿದ್ದ ದಾಖಲೆ ಹೊಂದಿದ ಈ ಬ್ರಿಟೀಷ್ ಬ೦ಗ್ಲೆ ನಂತರ ಅಧಿಕಾರಿಗಳಿಗೆ ಅವರ ಸರ್ಕಾರಿ ಕಾರ್ಯ ನಿಮಿತ್ತದ ಮಧ್ಯೆವಿಶ್ರಾಂತಿ ಪಡೆಯಲು ತಂಗಲು ಇನ್ಸ್‌ಪೆಕ್ಷನ್ ಬಂಗ್ಲೆ ಆಗಿ ನಂತರ PWD ಇಲಾಖೆ ಪ್ರವಾಸಿ ಮಂದಿರ ಆಗಿ ಪರಿವರ್ತಿಸಿದೆ.
ನಂತರ ಇದರ ಎದುರೆ ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ಆಯಿತು, ಅದರ ಇನ್ನೊಂದು ಭಾಗದಲ್ಲಿ ಕ್ಯಾಥೋಲಿಕ್ ಚರ್ಚ್ ಆಯಿತು, ಆನಂದಪುರಂ ಹೊಸನಗರ ರಸ್ತೆ ಡಾಂಬರೀಕರಣ ಆಯಿತು, ಎದುರಿಗೆ ಯಡೇಹಳ್ಳಿ ಗ್ರಾ.ಪಂ. ಕಚೇರಿ ಆಗಿದೆ, ಸುತ್ತಲೂ ಜನ ವಸತಿ ಬೆಳೆದು ಆ ಕಾಲದ ಏಕಾಂತತೆ, ವಾಯು ವಿಹಾರ ತಾಣ, ಉದ್ಯಾನವನ ಯಾವುದು ಈಗ ಇಲ್ಲವಾಗಿದೆ ಆ ಕಾಲದ ರಾಜ ವೈಭೋಗ ನೋಡಿದವರಿಗೆ ಕೇಳಿದವರಿಗೆ ಬ್ರಮನಿರಸನ ಆಗುವಂತ ಒಂದು ಸರ್ಕಾರಿ ಕಟ್ಟಡ ಇರುವ ಪ್ರದೇಶ ಆಗಿದೆ.
Comments
Post a Comment