Skip to main content

Blog number 1494. ಮಂಗಳೂರಿನ ಒಂದು ಕಾಲದ ಪ್ರಖ್ಯಾತ ಅತ್ರಿ ಬುಕ್ ಸೆಂಟರ್ ಅಶೋಕವರ್ಧನರು ಚಂಪಕ ಸರಸ್ಸು ದರ್ಶನ ಮಾಡಿ ನನ್ನ ಕಾದಂಬರಿ ಓದಿ ಅಭಿಪ್ರಾಯಿಸಿದ್ದಾರೆ.


#ಚಂಪಕ_ರಾಣಿ ನನ್ನ ಕಾದಂಬರಿ ಓದಿ ವಿಮಷೆ೯ ಮಾಡಿದವರು ಮಂಗಳೂರಿನ #ಅಶೋಕವರ್ಧನ್ ಇವರು ಬಹು ಮುಖ ಪ್ರತಿಭೆಯ ವಾಸ್ತವವಾದಿ.
  ಸುಮಾರು 36 ವರ್ಷ #ಅತ್ರಿ_ಬುಕ್_ಸೆಂಟರ್ ನಡೆಸಿದವರು, ಎಲ್ಲಾ ಖ್ಯಾತ ಲೇಖಕರ ಒಡನಾಟ ಹೊಂದಿದವರು ಸ್ವತಃ ಬರಹಗಾರರು ಇತ್ತೀಚಿಗೆ ಹೆಗ್ಗೋಡು ನೀನಾಸಂಗೆ ಮೋಟರ್ ಬೈಕ್ ನಲ್ಲಿ ದಂಪತಿಗಳು (ಬಹುಶಃ 60 ವರ್ಷ ಮೀರಿದ ಸೀನಿಯರ್ ಸಿಟಿಜನ್) ಬಂದಾಗ ಅಲ್ಲಿ ಗೆಳೆಯ #ಶೈಲೇಂದ್ರ_ಬಂದಗದ್ದೆ ನೀಡಿದ ಮಾಹಿತಿಯಿಂದ ಸ್ವಯ೦ ಪ್ರೇರಣೆ ಇಂದ ನಮ್ಮ ಊರಿನ ಚಂಪಕ ಸರಸ್ಸುವಿಗೆ ಬೇಟಿ ನೀಡಿ ಪೇಸ್ ಬುಕ್ ನಲ್ಲಿ ಮತ್ತು ಅವರ ಬ್ಲಾಗ್ ನಲ್ಲಿ ಚಿತ್ರ - ವರದಿ ಮಾಡಿದಾಗ ನಾನೇ ಅವರನ್ನು ಸಂಪರ್ಕಿಸಿ ನನ್ನ ಕಾದಂಬರಿ ಅಂಚೆಯಲ್ಲಿ ಕಳಿಸಿದ್ದೆ.
  ತಮ್ಮ ಸದಾ ಪ್ರವಾಸ, ಬರವಣಿಗೆ ಪೋಟೋಗ್ರಪಿಯಲ್ಲಿ ಬಿಡುವಿಲ್ಲದವರಾದ ಈ ಹಿರಿಯರು ನನ್ನಂತ ಸಾಹಿತ್ಯ ಲೋಕದಲ್ಲಿ ಮೊದಲ ಕಾದಂಬರಿ ಬರೆದು ಅಂಬೆಗಾಲು ಇಡುವಂತಹ ನನ್ನ ಕಾದಂಬರಿ ಓದಿ ವಸ್ತುನಿಷ್ಟ ವಿಮಷೆ೯ಯ ಪ್ರತಿ ರೂಪದ ಮಿಂಚಂಚೆ ಪತ್ರದ ಪ್ರತಿ ಇಲ್ಲಿ ಪೋಸ್ಟ್ ಮಾಡಿದ್ದೇನೆ.
""""""""""''''''''''''''''''

ಪ್ರಿಯ ಅರುಣ ಪ್ರಸಾದ್

   ನನ್ನ ತಿರುಗಾಡಿತನಕ್ಕೆ ಚಂಪಕಸರಸು ಸಿಕ್ಕಿದ್ದು, ನಾನದರ ಬಗ್ಗೆ ಏನೋ ಗೀಚಿದ್ದು ದೊಡ್ಡ ಸಂಗತಿಯಲ್ಲ. ಆ ನೆಪದಲ್ಲಿ ತನ್ನ ಊರು, ಪರಿಸರವನ್ನು ಹೆಚ್ಚು ತಿಳಿದುಕೊಳ್ಳುವ, ಅದರ ಸಾಕ್ಷ್ಯಗಳಿಗೆ ಮುಸುಕಿರುವ ಕಾಲದ ಪರದೆಯನ್ನು (೧೬೨೫, ಸುಮಾರು ಐದು ಶತಮಾನ ಹಿಂದೆ) ಸರಿಸಿ ಇಂದಿಗೂ (೨೦೨೧) ಶಕ್ತಗೊಳಿಸುವ (ಜೀರ್ಣೋದ್ಧಾರ), ಅವುಗಳ ಕುರಿತು ಮರೆವಿಗೆ ಸಂದ ವಿವರಗಳನ್ನು ಉದ್ಧರಿಸಿ ನೆಲೆಗಾಣಿಸುವ (ದಾಖಲೀಕರಣ), ಮತ್ತು ಅವೆಲ್ಲ ಸಾರ್ವಕಾಲಿಕವಾಗಿ ಸಮಾಜವನ್ನು ಪ್ರಭಾವಿಸುವಂತೆ ಪ್ರಚುರಿಸುವ (ಪ್ರಕಟಣೆ) ಅತ್ಯುತ್ಸಾಹಿಯ - ನಿಮ್ಮ, ಪರಿಚಯವಾದದ್ದು ದೊಡ್ಡ ಲಾಭ ಎಂದೇ ಭಾವಿಸುತ್ತೇನೆ. ರಾಜ್ಯದಲ್ಲಿ ಸೂಳೆಕೆರೆಗಳು ಕೆಲವಿವೆ ಮತ್ತೆ ನಮ್ಮೂರಿನದೇ ಸೂಳೆಪದವು (ಅದನ್ನು ಸುಳ್ಯಪದವು ಎನ್ನುವವರಿದ್ದರು. ಹೆಚ್ಚಿನ ‘ಮರ್ಯಾದೆವಂತರು’ ಈಚೆಗೆ ಅದನ್ನು ‘ಈಶ್ವರಮಂಗಲ’ವೆಂದೇ ಚಂದ ಮಾಡಿದ್ದಾರೆ ಬಿಡಿ) ಕೂಡಾ ಇದೆ. ಇವೆಲ್ಲ ಒಂದು ಲೆಕ್ಕದಲ್ಲಿ ಇತಿಹಾಸವನ್ನು ಅಣಕಿಸುವ ಅಥವಾ ಮಹಿಳೆಯರನ್ನು ಕೀಳಾಗಿ ಕಾಣುವ ಭಾವನೆಗಳ ಅಭಿವ್ಯಕ್ತಿ. ಪುರುಷಪ್ರಧಾನ ಜನಪದದಲ್ಲಿ ಹಗುರವಾಗಿ ಬೆಸ್ತರ ಹುಡುಗಿ, ಸೂಳೆ ಎಂದಷ್ಟೇ ಉಲ್ಲೇಖಕ್ಕೆ ಸಿಕ್ಕಿ, ಬಹುತೇಕ ಮಾಸಿಯೇ ಹೋದ ಚಂಪಕಳ ಉದಾತ್ತತೆಯನ್ನು ಎತ್ತಿ ಹಿಡಿದು ರಾಣಿಯೆಂದೇ ಸಾರಿದ ನಿಮ್ಮ ಪ್ರಯತ್ನ ಶ್ಲಾಘನೀಯ. ನಿಮ್ಮ ಕಾಳಜಿ, ಶ್ರಮ, ಸಾಧನೆಗಳಿಗೆ ಅಭಿನಂದನೆಗಳು.
  ಮುರಕಲ್ಲು, ನಿಮ್ಮತ್ತ ಹೇಳುವಂತೆ ಜಂಬಿಟ್ಟಿಗೆಯ ಔಚಿತ್ಯವನ್ನು ಅದರ ಮುಖ್ಯ ವಲಯವೇ ಆದ ಕರಾವಳಿ ವಲಯದಲ್ಲೇ ಈಚೆಗೆ ಅಲಂಕಾರಿಕ ಮಟ್ಟದಲ್ಲೇ ಹೆಚ್ಚು ಬಳಸುವುದನ್ನು ಕಾಣುತ್ತಿದ್ದೇವೆ. ಹಳೆಗಾಲದ ಮುರಕಲ್ಲ ರಚನೆಗಳೇ ಆದ ದೇವಾಲಯಗಳ ಜೀರ್ಣೋದ್ಧಾರದ ಹೆಸರಿನಲ್ಲಿ, ಅದರ ನಿಜ ಸಾಮರ್ಥ್ಯವನ್ನು ಮೀರಿದ ರಚನೆಗಳನ್ನು ಹೇರುತ್ತಿದ್ದಾರೆ. ಅದಕ್ಕೆ ಸರಿಯಾಗಿ ಮೂಲ ಚೌಕಟ್ಟು, ವಿಸ್ತಾರ ಗೋಡೆಗಳೆಲ್ಲ ಕಾಂಕ್ರೀಟಿನಲ್ಲೇ ಆದರೂ ತೋರಿಕೆಗಷ್ಟೇ ತೆಳು ಮುರಕಲ್ಲಿನ ಹಾಳೆಗಳನ್ನು ಅಂಟಿಸಿಬಿಡುತ್ತಾರೆ. (ದೇವಂದ ಬೆಟ್ಟ, ಸೋಮೇಶ್ವರ ದೇವಳ, ಸೂರ್ಯ ದೇವಳ...) ಇನ್ನಷ್ಟು ತಲೆ ಹಾಳಾದವರು ಆ ರಚನೆಗಳ ಜತೆಗೆ ತರಹೇವಾರಿ ಅಮೃತಶಿಲೆ, ಟೈಲ್ಸುಗಳನ್ನೆಲ್ಲ ಬಳಸಿ, ನೋಡಬರುವವರು ನೀರ ಪಸೆಗೆ ಜಾರಿಬೀಳುವಂತೆ, ಬಿಸಿಲಿಗೆ ಕಾಲಡಿಯಲ್ಲಿ ಗುಳ್ಳೆಗಳೇಳುವಂತೆಯೂ ಮಾಡುತ್ತಾರೆ. ಕೆಲವು ಮಹಲುಗಳಲ್ಲಂತೂ ಉದ್ದೇಶಪಟ್ಟ ದೈವೀಭಾವ ಹೋಗಿ, ಪಂಚತಾರಾ ಹೋಟೆಲೋ ಸುಲಭ್ ಶೌಚಾಲಯವನ್ನೋ ಪ್ರವೇಶಿಸಿದಂತಾಗಿ ತೀವ್ರ ವಿಷಾದ ಆವರಿಸುತ್ತದೆ. ವೈಯಕ್ತಿಕವಾಗಿ ನಾನು ದೇವ ನಂಬಿಕೆ ಮತ್ತು ಯಾವುದೇ ಮತೀಯ ಆಚರಣೆಗಳು ಇರುವವನಲ್ಲ. ಆದರೆ ಅನ್ಯರ ಯಾವುದೇ ದೇವವಿಶ್ವಾಸವನ್ನು, ಅದಕ್ಕೆ ಸಂಬಂಧಿಸಿದ ರಚನೆ ಮತ್ತು ಕಲಾಪಗಳನ್ನು ಪೂರ್ಣ ಗೌರವದೊಡನೆ ಒಮ್ಮೆ ಕಾಣಲು ಅವಶ್ಯ ಇಷ್ಟಪಡುತ್ತೇನೆ. (ಪ್ರಾಮಾಣಿಕತೆ, ಸಾತ್ವಿಕತೆ, ಸಾಮಾಜಿಕ ಪ್ರೀತಿ.... ದೇವತ್ವ ಎಂದು ನಂಬಿದವ) ಹಾಗಾಗಿಯೇ ನೋಡಿ (ನೀವು ಓದಿದಂತೆ) ನೀನಾಸಂ ನೆಪದಲ್ಲಿ ನಾನು ಅತ್ತ ಬಂದರೂ ಅವಕಾಶ ಸಿಕ್ಕ ಎಲ್ಲೆಂದರಲ್ಲಿ - ಅಘೋರೇಶ್ವರ ದೇವಳ, ಇಕ್ಕೇರಿ ಕೋಟೆ, ವರದಾಮೂಲ, ನಿಮ್ಮಲ್ಲಿಂದ ಮುಂದೆ ಹೊಂಬುಜ ಮಠ, ಕುಂದಾದ್ರಿ ಇತ್ಯಾದಿ ಹೊಕ್ಕು, ನೋಡಿ, ಸಂತೋಷಪಟ್ಟು ಬಂದಿದ್ದೆ. ಅಂಥಾ ಸಂತೋಷಕ್ಕೆ ಇನ್ನೊಂದು ಕಾರಣವಾದ ಸಂಪಿಗೆ ಕೊಳದ (ಚಂಪಕ ಸರಸು) ವಠಾರ ಹಾಗೂ ಪರಿಸರ. ಅದು  ಪ್ರಕೃತಿವಿದೂರವಾಗದ ಎಚ್ಚರವನ್ನು ನಿಮ್ಮ ಬಳಗ ಮುಂದಕ್ಕೂ ಉಳಿಸಿಕೊಡುತ್ತದೆ ಎನ್ನುವ ವಿಶ್ವಾಸ ನನ್ನದು. ಜೀರ್ಣೋದ್ಧಾರ ಪರಿಪೂರ್ಣವಾಗಿಸಲು ನಿಮ್ಮ ಬಳಗಕ್ಕೆ ಎಲ್ಲಾ ತರದ ಶಕ್ತಿ ಒದಗಲೆಂದು ಹಾರೈಸುತ್ತೇನೆ.
   ಮೈಸೂರು ಹೊರವಲಯದ ಕೆ.ಹೆಮ್ಮನಹಳ್ಳಿ ಎಂಬ ಪಕ್ಕಾ ಹಳ್ಳಿಯಲ್ಲಿ ನನ್ನ ತಮ್ಮ - ಅನಂತವರ್ಧನ (ಚಾರ್ಟರ್ಡ್ ಅಕೌಂಟೆಟ್)  ಒಂದು ಸಣ್ಣ ಜಮೀನು ಕೊಂಡಿದ್ದ. ಅದರ ಒತ್ತಿನ ಪುಟ್ಟ ಕಾಡಿನಲ್ಲಿ ಅಕಸ್ಮಾತ್ತಾಗಿ ಇವನ ಕಣ್ಣಿಗೆ ಬಿತ್ತೊಂದು ಪೂರ್ಣ ಶಿಥಿಲವಾದ ಮಹಾಲಿಂಗೇಶ್ವರ ದೇವಸ್ಥಾನ. ಇವನು ಅದರ ಭೂ ದಾಖಲೆಗಳನ್ನು ಪರಿಶೀಲಿಸುವಾಗ,  ಹೊಯ್ಸಳರ ವೀರಬಲ್ಲಾಳನ ಕಾಲದ ರಚನೆ ಎಂದು ತಿಳಿಯಿತು. ಮತ್ತು ಅದರ ನೆಲವಿನ್ನೂ ಸ್ವತಂತ್ರವಾಗಿಯೇ ಉಳಿದಿದೆ ಎಂದೂ ತಿಳಿದಾಗ ಹೆಚ್ಚಿನ ಉತ್ಸಾಹ ತೋರಿದ. ಅದನ್ನು ಹಳ್ಳಿಯ ಸಾಮಾಜಿಕ ಪುನರುತ್ಥಾನದ ಒಂದೇ ದೃಷ್ಟಿ ಇಟ್ಟುಕೊಂಡು ಹಳ್ಳಿಗರನ್ನು ಸಂಘಟಿಸಿ, ಧರ್ಮಸ್ಥಳದ ಸಹಕಾರದೊಡನೆ ಹಳೇ ಕ್ರಮದಂತೇ ಜೀರ್ಣೋದ್ಧಾರ ನಡೆಸಿದ. ಈಗ ವರ್ಷ ಇಪ್ಪತ್ತರ ಮೇಲೂ (ನೋಡಿ: ಮಹಾಲಿಂಗೇಶ್ವರರಿಗೆ ಜಯವಾಗಲಿ https://www.athreebook.com/2012/11/blog-post_16.html) ಅದು ತನ್ನ ನಿರಾಡಂಬರ ಸರಳತೆಯಿಂದ ಆ ಪರಿಸರದ ಹಳ್ಳಿಗರ ಎಲ್ಲ ಕಾರ್ಯಗಳಿಗೂ ಒದಗುವ ಶ್ರದ್ಧಾ ಕೇಂದ್ರವಾಗಿ ನಡೆದಿದೆ. ಜಗತ್ತಿನ ಪ್ರವಾಸಿಗಳನ್ನು ಆಕರ್ಷಿಸುವ ಬೆಡಗಿನ ಮಂದಿರವಾಗಿ ಅಲ್ಲ! ಆ ನಿಟ್ಟಿನಲ್ಲಿ ಚಂಪಕ ಸರಸು ಪರಿಪೂರ್ಣವಾದಂದು, ಅನ್ಯ ಥಳಕುಗಳಿಲ್ಲದೆಯೂ ಊರವರೇನು ಹೊರಗಿನವರನ್ನೂ ಪ್ರಚಾರವಿಲ್ಲದೇ ಆಕರ್ಷಿಸುವ ಸೌಂದರ್ಯ ಅದಕ್ಕಿದೆ ಎಂದು ನಿಸ್ಸಂದೇಹವಾಗಿ ಹೇಳಬಲ್ಲೆ. ಅದನ್ನು ಸಿದ್ಧಿಸುವಲ್ಲಿ ನಿಮ್ಮ ನಾಯಕತ್ವ ಯಶಸ್ವಿಯಾಗಲಿ.
   ‘ಬೆಸ್ತರ ರಾಣಿ ಚಂಪಕ’ ಪುಸ್ತಕ ನಿಮ್ಮ ಅಪಾರ ಕಾಳಜಿಗಳ ಅಭಿವ್ಯಕ್ತಿ ಎನ್ನುವುದರಲ್ಲಿ ಏನೂ ಸಂದೇಹವಿಲ್ಲ. ನೀವು ಅದಕ್ಕಾಗಿ ಸಂಗ್ರಹಿಸಿದ ಐತಿಹಾಸಿಕ ಮತ್ತು ಜನಪದ ವಿವರಗಳು ಸ್ವಲ್ಪವೇನೂ ಅಲ್ಲ. ಆದರೆ ಅವನ್ನೆಲ್ಲ ಧರಿಸುವಲ್ಲಿ ಕಲ್ಪಿಸಿದ ಕಥಾಹಂದರ, ವಿಸ್ತರಿಸುವಲ್ಲಿ ಸಾಹಿತ್ಯಕ ಕಲಾಗಾರಿಕೆ ಸ್ವಲ್ಪ ಸೊರಗಿದೆ. ಕಥಾನಾಯಕಿ ಚಂಪಕಳನ್ನು ಬಹುತೇಕ ಕಥೆಯ ಉದ್ದಕ್ಕೂ ರಂಗೋಲಿ ಕಲಾವಿದೆಯಾಗಿ, ರಾಜನ ಉನ್ನತಿಕೆಗೆ ಹೆದರಿದ ಮುಗ್ದೆಯಾಗಿ ತೋರಿದ್ದೀರಿ. ಆಕೆಯ ಕಣ್ಣಲ್ಲಿ ವೆಂಕಟಪ್ಪನ ರೂಪವನ್ನು ಬಯಕೆಯ ಪುರುಷನನ್ನಾಗಿ ಕಾಣಿಸಿದ್ದು ಸಾಲದು. (ಮುಖ್ಯವಾಗಿ ಮದುವೆಯ ಸಂದರ್ಭದಲ್ಲಿ ನಾನು ತುಂಬ ನಿರೀಕ್ಷಿಸಿದ್ದೆ!) ಹಾಗೇ ವೆಂಕಟಪ್ಪನಿಗೆ ಚಂಪಕಳಲ್ಲಿ ಪಟ್ಟದ ರಾಣಿಯಲ್ಲಿ ಸಿಗದ ಅಥವಾ ಅದನ್ನು ಮೀರಿದ ಆಕರ್ಷಣೆ ಏನೆಂದು ಬಿಂಬಿಸಿದ್ದೂ ಸಾಕಾಗಲಿಲ್ಲ. ಅಂದಿನ ಸಾಮಾಜಿಕ ಕಟ್ಟಳೆಗಳಲ್ಲಿ ಅರಸನಿಗೆ ಎಷ್ಟೂ ಹೆಂಗಸರ, ಬೇರೆ ಬೇರೆ ತರದ ಸಂಬಂಧಗಳಿರುವುದು ವಿಶೇಷವಲ್ಲ (ನೀವೂ ಹೇಳಿದ್ದೀರಿ). ಹಾಗಿರುವಾಗ ಪಟ್ಟದ ರಾಣಿಗೆ ತಿಳಿಸದೆ, ತನ್ನ ಪ್ರಜಾವರ್ಗಕ್ಕೂ ಸ್ಪಷ್ಟೀಕರಿಸದೆ, ಆದರೆ ಚಂಪಕಳನ್ನು ಅಧಿಕೃತವಾಗಿ ಮದುವೆಯೇ ಆಗಿ ರಾಣೀವಾಸಕ್ಕೆ ತಂದುಕೊಳ್ಳುವ ಶ್ರಮವನ್ನು ವೆಂಕಟಪ್ಪ ನಾಯಕ ಯಾಕೆ ವಹಿಸಿದ? ರಾಜಕಾರಣದ ಜಂಜಾಟದಲ್ಲಿ ಸನ್ಯಾಸ ಸ್ವೀಕರಿಸುವ ಮನೋಸ್ಥಿತಿಯಲ್ಲಿದ್ದವ ಇವಳ ಸ್ಮೃತಿಯೊಡನೆ ಜೀವನಾಸಕ್ತಿ ಮತ್ತೆ ಬೆಳೆಸಿಕೊಳ್ಳುವಂತಾಗುವಷ್ಟು ಗುಣ ಈಕೆಯಲ್ಲೇನಿತ್ತು? ಮತ್ತಾ ಆಕರ್ಷಣೆ, ಪಟ್ಟದ ರಾಣಿ ತೀರಿಕೊಂಡ ಮೇಲೂ ಈಕೆಯ ಕೊನೆಯವರೆಗೂ (ರಂಗೋಲಿ ಕಲಾವಿದೆ ಎಂಬುದನ್ನು ಮೀರಿ) ಉಳಿದು ಬಂದುದರ ರಹಸ್ಯವೇನು? ಅಂಥ ಪ್ರೀತಿಯ ಉತ್ಕಟತೆಯೇ ಅಲ್ಲವೇ ಆಕೆಯ ಸ್ಮೃತಿಗಾಗಿ ವಿಶೇಷ ಮಹಲನ್ನೇ ನಿರ್ಮಿಸಿದ್ದು? ಇಂಥಾ ಪ್ರಶ್ನೆಗಳಿಗೆ ನೀವು ಕಾದಂಬರಿಯಲ್ಲಿ ಸ್ವಲ್ಪ ನ್ಯಾಯವನ್ನು ಆಕೆಯ ಮರಣಪತ್ರದಲ್ಲಿ ಕೊಟ್ಟಿದ್ದೀರಿ. ಜನ ಎಣಿಸಿದಂತೆ - ಅವಳು ಅರಸನನ್ನು ಒಳಗೆ ಹಾಕಿಕೊಂಡದ್ದಲ್ಲ. ಅರಸೊತ್ತಿಗೆಗೆ ವರ್ಜ್ಯವೆಂದನ್ನಿಸಿದ ಮಾಂಸ ಮದ್ಯಗಳ ಮೋಹ ಆಕೆ ಆಗಿರಲಿಲ್ಲ. ಅಧಿಕಾರದ ಲಾಲಸೆಯಲ್ಲೋ ಪಟ್ಟದ ರಾಣಿಯ ಮೇಲಿನ ಸ್ಪರ್ದೆಗೋ ಆಕೆ ಬಂದದ್ದೇ ಅಲ್ಲ ಇತ್ಯಾದಿ. ಇನ್ನು ಇತ್ತ ನೋಡಿದರೆ, ಚಂಪಕಳಿಗೆ ಮೊದಲಲ್ಲಿ ವೆಂಕಟಪ್ಪ ನಾಯಕನಲ್ಲಿ, ಸಾಹಿತಿ ಕಲಾವಿದರಿಗೆಲ್ಲ ಇರುವ ‘ರಾಜಮನ್ನಣೆ’ಯ ಬಯಕೆಯನ್ನು ಕಾಣುತ್ತೇವೆ. ಆತನನ್ನು ಪತಿಯಾಗಿ ಪಡೆಯುವ ಮೋಹ ಕಾಣಲಿಲ್ಲ. ಸನ್ನಿವೇಶ ಆಕೆಗೆ ಹೆಚ್ಚಿನದ್ದನ್ನೇ ಒದಗಿಸಿತು. ಆದರೆ ಅದನ್ನು ಒಪ್ಪಿಕೊಂಡ ಮೇಲೂ ಅವಳು ಬಡ ಹಿನ್ನೆಲೆಯೊಡನೆ ರೂಢಿಸಿಕೊಂಡಿದ್ದ ವಿನಯ, ಸರಳತೆಯನ್ನು ಕಳೆದುಕೊಳ್ಳಲಿಲ್ಲ. ಹಿಂದಿನಿಂದ ಊರವರೂ ಏನೇ ಅಪಪ್ರಚಾರ ಮಾಡಿದರೂ ಪ್ರತ್ಯಕ್ಷ ರಾಜ ಈ ಗುಣಗಳನ್ನು ಗುರುತಿಸಿದ್ದಕ್ಕೇ ಹೀಗೊಂದು ಸ್ಮಾರಕ ನಿಲ್ಲಿಸಿರಬೇಕು.
    ಚಂಪಕಳಿಗೆ ಬಯಸದ ಭಾಗ್ಯ ರಾಣೀತನವನ್ನು ಕೊಟ್ಟಿತು. ಆದರೆ (ನೀವೇ ಪೌರಾಣಿಕವಾಗಿ ಗುರುತಿಸಿದಂತೆ) ‘ಮಹಾಭಾರತ’ ಮೂಲದ ಬೆಸ್ತರ ಕನ್ಯೆಯ  ರಾಜಕೀಯ ಚಾಣಾಕ್ಷತನ ಚಂಪಕಳಲ್ಲಿರಲಿಲ್ಲ. ತನಗೆ ಮಕ್ಕಳಾಗಬೇಕು, ಅವರು ಪಟ್ಟದ ಹಕ್ಕುದಾರರಾಗಬೇಕು ಎಂಬಿತ್ಯಾದಿ ಪ್ರಸ್ತಾವಗಳು ಕಾದಂಬರಿಯಲ್ಲಿ ಬರುವುದೇ ಇಲ್ಲ. ಕಾಲದ ಪಿತೂರಿಯಲ್ಲಿ ಎರಡೂ ಯುವರಾಜರು, ಪಟ್ಟದ ರಾಣಿ ಅಳಿದೇ ಹೋದರು. ಈಕೆ ಬಯಸದೇ ಅರಸೊತ್ತಿಗೆ ಇವಳ ಮಡಿಲಿಗೆ ಬಿದ್ದಾಗಲೂ ಅದನ್ನು ಬಳಸುವ ಮಹತ್ವಾಕಾಂಕ್ಷೆ ಚಂಪಕಳಲ್ಲಿ ಮೂಡಲೇ ಇಲ್ಲ. ಬದಲಿಗೆ ಎಲ್ಲಕ್ಕೂ ತನ್ನನ್ನೇ ದೋಷಿಯೆಂದು ಭ್ರಮಿಸುವ ಮುಗ್ಧತೆಯಲ್ಲೇ ಆಕೆ ಕೊರಗುತ್ತಾಳೆ. ಯಾವ ಬಾಹ್ಯ ಪ್ರೇರಣೆಗಳೂ ಇಲ್ಲದೆ ಪ್ರಾಣತ್ಯಾಗ ಮಾಡುತ್ತಾಳೆ. ಈ ದೊಡ್ಡ ಗುಣ ವೆಂಕಟಪ್ಪನಾಯಕನನ್ನೇನು ನಿರ್ಭಾವ ಓದುಗರನ್ನೂ ಕರಗಿಸುತ್ತದೆ, ಆಕೆಯನ್ನು ಸ್ಮರಣೆಗೆ ಅರ್ಹಳನ್ನಾಗಿಸುತ್ತದೆ. ಇವೆಲ್ಲ ಕಾದಂಬರಿಯ ಮೈಯಲ್ಲಿ ಪುಷ್ಟವಾಗಿ ವಿಕಸಿಸಿ, ಮರಣ ಪತ್ರ ಕೇವಲ ಸೂಚ್ಯವಾಗಿ ಬಂದಿದ್ದರೆ ಓದಿನ ಸುಖ ಹೆಚ್ಚುತ್ತಿತ್ತು, ನಿಮ್ಮ ಪ್ರಯತ್ನ ಇನ್ನಷ್ಟು ದೊಡ್ಡ ಯಶ ಕಾಣುತ್ತಿತ್ತು ಎಂದೇ ನನಗನ್ನಿಸಿತು.
    ಬಿದನೂರಿನಿಂದ ಬೇಕಲ, ಕೊಲ್ಲೂರು, ಗೋವೆ, ವಿಜಯನಗರಗಳಲ್ಲೆಲ್ಲ ಓದುಗನನ್ನು ಸುತ್ತಾಡಿಸಿದ್ದೀರಿ. ಮರಸುಯುದ್ಧ ಪ್ರವೀಣರು, ಕೋಟೆಗಾರರು, ಬೋವಿಗಳು, ಬೆಸ್ತರೇ ಮೊದಲಾದ ಮೂಲವಾಸಿಗಳನ್ನು ಪರಿಚಯಿಸಿದ್ದೀರಿ. ಆ ಕಾಲದ ವ್ಯಾಪಾರ ವಹಿವಾಟುಗಳ ಮತ್ತು ರಾಜಕೀಯ ಮೇಲಾಟಗಳನ್ನು ಅಲ್ಲಿ ಇಲ್ಲಿ  ಚಿತ್ರಿಸಿದ್ದೀರಿ. ಆದರೆ ಇವನ್ನೆಲ್ಲ ನೀವು ಖಚಿತ ದೇಶ ಮತ್ತು ಕಾಲ ಮಿತಿಗಳನ್ನು ನೋಡಿಕೊಂಡು ಹೆಣೆದಂತೆ ಕಾಣುವುದಿಲ್ಲ. [ಒಂದು ಸಣ್ಣ ಉದಾ: ಇಂದಿನ ಅಳತೆಯಲ್ಲಿ ಕೊಲ್ಲೂರು ಆನಂದಪುರಕ್ಕೆ ಸುಮಾರು ಎಂಬತ್ತು ಕಿಮೀ ದೂರದಲ್ಲಿದೆ. ಅಲ್ಲಿಂದ ನಿತ್ಯ ಮುಂಜಾನೆ ದೇವಳದ ಪ್ರಸಾದ ಬಂದ ಮೇಲೇ ವೆಂಕಟಪ್ಪ ಉಪಾಹಾರ ಸೇವಿಸುತ್ತಿದ್ದ ಎನ್ನುವ ಮಾತು ಸರಿಯಾದ ದಾರಿ, ವೇಗದ ವಾಹನ ಇಲ್ಲದ ಕಾಲಕ್ಕೆ ಸರಿ ಹೊಂದೀತೇ? ಪುರಾಣಗಳಲ್ಲಿ, ಭೀಷ್ಮನಿಗೆ ಎಂಟ್ನೂರು ವರ್ಷ ವಯಸ್ಸೆಂದರೆ ಒಪ್ಪಬಹುದು, ಐತಿಹಾಸಿಕವಾಗಿ ಕಷ್ಟವಲ್ಲವೇ?] ಮತ್ತೆ ಆ ವಿವರಗಳನ್ನೆಲ್ಲ ನಿಮ್ಮ ಕಾದಂಬರಿಯ ಆಶಯಕ್ಕೆ ಪೂರಕವಾಗುವಂತೆ ಅಳವಡಿಸುವಲ್ಲಿ, ಅಂದರೆ ಚಂಪಕರಾಣಿಯ ಏಳುಬೀಳುಗಳ ಪೋಷಕಾಂಶವಾಗಿ ಕಾಣಿಸುವಲ್ಲಿ ನಿಮ್ಮ ಕಸಬುದಾರಿಕೆಯೂ ಸಾಕಾಗಲಿಲ್ಲ. ಇದು ಇತಿಹಾಸದ ಟಿಪ್ಪಣಿಗಳೇ ಕಾದಂಬರಿಯೇ ಎನ್ನುವ ಗೊಂದಲ ನನ್ನನ್ನು ಅಲ್ಲಲ್ಲಿ ಕಾಡಿತು. 
     ಕನ್ನಡದ ಬಹುತೇಕ ಖ್ಯಾತ ಐತಿಹಾಸಿಕ ಕಾದಂಬರಿಕಾರರು - ಗಳಗನಾಥ, ಬಿ. ವೆಂಕಟಾಚಾರ್ಯ, ಅನಕೃ, ತರಾಸು, ಬಸವರಾಜ ಕಟ್ಟೀಮನಿ, ಶ್ರೀನಿವಾಸ ರಾವ್ ಕೊರಟಿ ಮೊದಲಾದವರು ಬಹುತೇಕ ಮುಟ್ಟದ ವಸ್ತು ಸಂಪತ್ತು ಈ ಇಕ್ಕೇರಿ ಸುತ್ತಮುತ್ತ ಧಾರಾಳ ಇರುವುದನ್ನು ಕೇಳಿದ್ದೇನೆ, ಕೆಲವನ್ನು ಕಂಡಿದ್ದೇನೆ. ನೀವಂತೂ ಅದರ ನಡುವೆಯೇ ಇದ್ದೀರಿ ಮತ್ತು ಆಸಕ್ತಿ ಸಂಗ್ರಹ ಅಧ್ಯಯನಗಳ ಹುಚ್ಚನ್ನೂ ಸಾಕಷ್ಟು ಹಚ್ಚಿಕೊಂಡಿದ್ದೀರಿ. (ನಮ್ಮ ಮಾಜಿ ವಿದ್ಯಾಮಂತ್ರಿ ಬದರೀ ನಾರಾಯಣ ಅಯ್ಯಂಗಾರರ ಕುಲೇತಿಹಾಸದ ನಿಮ್ಮ ಸ್ವಾರಸ್ಯಕರ ಉತ್ಖನನ ನೋಡುತ್ತಿದ್ದೇನೆ) ಅವನ್ನು ಬಳಸಿಕೊಳ್ಳುವಲ್ಲಿ ಮೇಲೆ ಹೇಳಿದ ಖ್ಯಾತನಾಮರನ್ನು ಓದಿ (ಮೊದಲೇ ಓದಿದ್ದರೆ, ಈಗ ಚಿಕಿತ್ಸಕವಾಗಿ ನೋಡಿ) ಇನ್ನೂ ಭವ್ಯ ಕೃತಿಯನ್ನು ನೀವು ತರುವಂತಾಗಬೇಕು. ನಿಮ್ಮ ವಲಯದ್ದೇ ವಿಸ್ತರಣೆ ಎಂಬಂತೆ ಈಗ ತಾನೇ ಗಜಾನನ ಶರ್ಮರು ಚೆನ್ನಭೈರಾದೇವಿಯ ಮೇಲೊಂದು ಕಾದಂಬರಿಯನ್ನು ತಂದ ಸುದ್ಧಿ ಕೇಳಿದ್ದೇನೆ. (ಕೊರೋನಾ ಕಾರಣದಿಂದ ನನಗಿನ್ನೂ ಸಂಗ್ರಹಿಸಿ ಓದುವುದಾಗಿಲ್ಲ. ಅವಶ್ಯ ಓದುತ್ತೇನೆ) ಅವರು ಹಿಂದೆ ಜೋಗದ ವಿದ್ಯುದಾಗರ ಬಂದಾಗ ನಡೆದ ಸಾಮಾಜಿಕ ತಲ್ಲಣವನ್ನು ಬಹಳ ಸುಂದರವಾಗಿ ‘ಪುನರ್ವಸು’ ಎಂಬ ಕಾದಂಬರಿಯಲ್ಲಿ ಕೊಟ್ಟು ನಮ್ಮೆಲ್ಲರನ್ನೂ ಗೆದ್ದಿದ್ದಾರೆ. (ನೋಡಿ: ಜೋಗದ ಗಜಾನನ ಶರ್ಮರಿಗೊಂದು ಪತ್ರ https://www.athreebook.com/2020/04/blog-post_7.html) ಅಂಥವುಗಳಿಗೆ ಹೆಗಲು ಮುಟ್ಟಿಸಿ ನಿಲ್ಲುವಂತೆ ವೆಂಕಟಪ್ಪ ನಾಯಕನ ಚರಿತ್ರೆಯನ್ನು ನೀವು ಬರೆಯುವಂತಾಗಲಿ ಎಂದು ಆಶಿಸುತ್ತೇನೆ. ಅಂಥ ಒಂದು ಮಹತ್ಕೃತಿಗೆ ‘ಬೆಸ್ತರ ರಾಣಿ ಚಂಪಕ’ವೆಂಬ ಸಣ್ಣ ಪುಸ್ತಕ  ಒಂದು ಅಡಿಗಲ್ಲು ಎಂದು ಭಾವಿಸಿದರೆ ತಪ್ಪಾಗದು. ಚಂಪಕ ಸರಸುವಿನಂಥ ಹಲವು ಸಾಧನೆಗಳಿಗೆ ಕಾರಣೀಪುರುಷನಾದ ‘ಇಕ್ಕೇರಿ ಕುಲಶೇಖರ ವೆಂಕಟಪ್ಪ ನಾಯಕ’,  ಎಂಬ ದೊಡ್ಡ ಸಿನಿಮಾಕ್ಕೂ ಮೊದಲು ಬಂದ ಟ್ರೇಲರ್ ಈ ಪುಸ್ತಕ ಎಂದೂ ಭಾವಿಸುತ್ತೇನೆ. ನನ್ನೀ ಪತ್ರವನ್ನು ಕೇವಲ ನಿಮಗೆ ಮಾತ್ರ ಕಳಿಸುತ್ತಿದ್ದೇನೆ. (ಸಾರ್ವಜನಿಕ ಪ್ರಕಟಣೆಗಲ್ಲ) ನಾನೇನೋ ದೊಡ್ಡ ವಿಮರ್ಶಕ ಎಂಬ ಭ್ರಮೆ ನನಗಿಲ್ಲ. ನನಗೆ ಅನಿಸಿದ್ದನ್ನು ಪ್ರಾಮಾಣಿಕವಾಗಿ ನಿಮಗೆ ಹೇಳಿ, ನಿಮಗೆ ಹೆಚ್ಚಿನದ್ದಕ್ಕೆ ಪ್ರೇರಣೆ ಕೊಡುವುದಷ್ಟೇ ನನ್ನ ಉದ್ದೇಶ. ಬೇಸರವಾದರೆ ಕ್ಷಮಿಸಿ, ಮರೆತುಬಿಡಿ. ನಿಮಗೆ ಅನಂತ ಶುಭಾಶಯಗಳು.

ಇಂತು ವಿಶ್ವಾಸಿ

ಅಶೋಕವರ್ಧನ 
+++++++++++++++

ಅಶೋಕವರ್ಧನ್ ರ ಈ-ಮೈಲ್ ಗೆ ನನ್ನ ವಂದನಾರ್ಪಣೆ👇

ದನ್ಯವಾದಗಳು ನಿಮ್ಮ ವಸ್ತುನಿಷ್ಟ ವಿಮಷೆ೯ಗೆ, ಇದು ಹತ್ತು ವರ್ಷದ ಹಿಂದೆ ಬರೆದ ಕಾದಂಬರಿ.
  ಬಿದನೂರು ನಗರ ಕೊಲ್ಲೂರಿನಿಂದ 40 km, ಆಗೆಲ್ಲ ಅಶ್ವರೋಹಿಗಳು ಗಂಟೆಗೆ 50 ಕಿ.ಮಿ. ಕ್ರಮಿಸುತ್ತಿದ್ದರಂತೆ ಹೇಗೆಂದರೆ ಕುದುರೆ ತನ್ನ ವೇಗ ಕಳೆದುಕೊಳ್ಳುವ ಸ್ಥಳದಲ್ಲಿ ಇನ್ನೊಂದು ಕುದುರೆ ಅಶ್ವರೋಹಿ ತಯಾರಾಗಿ ಇರುತ್ತಿದ್ದ ಅವನು ಇನ್ನೊಂದು ನಿಲ್ದಾಣಕ್ಕೆ ಅದೇ ವೇಗದಲ್ಲಿ ಸಾಗುತ್ತಾನೆ ಇದ ಆ ಕಾಲದ ಸುದ್ದಿ ಕಳಿಸಲು ಕೂಡ ಬಳಕೆ ಆಗುತ್ತಿತ್ತು ನಂತರ ಭಾರತದ ಅಂಚೆಯಲ್ಲೂ ಇದನ್ನು ಬಳಸಿದ್ದರೆಂದು ಕೇಳಿದ್ದೆ ಹಾಗಾಗಿ ಪ್ರತಿ ನಿತ್ಯ ಕೊಲ್ಲೂರಿನಿಂದ ಪ್ರಸಾದ ಬರುವುದು. ಶರಾವತಿ ಮುಳುಗಡೆ ಆಗದ ಆ ಕಾಲದಲ್ಲಿ ಇಕ್ಕೇರಿ ಕೊಲ್ಲೂರು ಮಾರ್ಗ ಕೂಡ ಸಮೀಪ.
 ಏನೇ ಆಗಲಿ ನೀವು ಓದಿ ಬರೆದ ಈ ವಿಮಷೆ೯ ಸಂತೋಷ ತಂದಿದೆ, ದನ್ಯವಾದಗಳು

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ