Blog number 1442. ನಮಾಜು ಮತ್ತು ಉಯ್ಯಾಲೆ ಮರ, ರಹಮತ್ ತರಿಕೆರೆ ಇವರು ಬರೆದ ಲೇಖನ ದಿನಾಂಕ 19- ಏಪ್ರಿಲ್ 2023ರಲ್ಲಿ ಮೈಸೂರಿನ ಆಂದೋಲನ ಪತ್ರಿಕೆಯಲ್ಲಿ ಪ್ರಕಟವಾಗಿದೆ.
#ನಮಾಜು_ಮತ್ತು_ಉಯ್ಯಾಲೆಮರ_ಲೇಖನ_ಮೈಸೂರು_ಆಂದೋಲದಲ್ಲಿ_19_ಏಪ್ರಿಲ್_2023ರಲ್ಲಿ_ಪ್ರಕಟವಾಗಿದೆ.
#ನಮಾಜು_ಮತ್ತು_ಉಯ್ಯಾಲೆಮರ. ರಹಮತ್ ತರೀಕೆರೆ
ನಾನು ಹುಟ್ಟಿದ ಸಮತಳ ಎಂಬ ಹಳ್ಳಿಯಲ್ಲಿ ಸಣ್ಣ ರೈತರು, ಕೂಲಿಕಾರರು, ಸಣ್ಣ ವ್ಯಾಪಾರಸ್ಥರೂ ಆಗಿದ್ದ ಇಪ್ಪತ್ತು ಮುಸ್ಲಿಂ ಮನೆಗಳಿದ್ದವು. ಮಸೀದಿಯಿರಲಿಲ್ಲ. ನಮಾಜನ್ನು ಕಡ್ಡಾಯ ಅರ್ಹತೆಯನ್ನಾಗಿ ವಿಧಿಸಿ ಪರೀಕ್ಷಿಸುವವರೂ ಇರಲಿಲ್ಲ. ಜನ ಧಾರ್ಮಿಕರಾಗಿದ್ದರು. ದುಡಿತದ ತಿರುಗಣಿಯಲ್ಲಿ ಸಿಲುಕಿದ್ದ ಅವರಿಗೆ ಶಾಸ್ತ್ರಬದ್ಧವಾಗಿ ನಮಾಜು ಮಾಡಲು ವೇಳೆಯಿರಲಿಲ್ಲ. ದುಡಿಮೆಯೇ ಪ್ರಾರ್ಥನೆಯಾಗಿತ್ತು. ರಂಜಾನ್ ತಿಂಗಳು ಬಂದಾಗ ಮೊಹರಂ ಪಂಜಾಗಳನ್ನು ಕೂರಿಸುವ ಮಕಾನಿನಲ್ಲೇ ಒಬ್ಬ ಇಮಾಮರನ್ನು ಪೇಟೆಯಿಂದ ಕರೆಸಿಕೊಂಡು ವೇತನ ಊಟ ಕೊಟ್ಟು, ತಿಂಗಳು ಕಾಲ ರಾತ್ರಿ ನಮಾಜು ಪೂರೈಸುತ್ತಿದ್ದರು. ವರುಷಕ್ಕೆ ಎರಡಾವರ್ತಿ ಬ್ರಕೀದ್-ರಂಜಾನ್ ಹಬ್ಬಗಳಲ್ಲಿ ತರೀಕೆರೆಗೆ ಹೋಗಿ ಈದಗಾದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದರು. ನಾವೆಲ್ಲ ಬೆಳಿಗ್ಗೆಯೇ ಎದ್ದು, ಬಚ್ಚಲುಮನೆಯಲ್ಲಿ ಪಾಳಿನಿಂತು, ಜಳಕ ಮುಗಿಸಿ ಹೊಸಬಟ್ಟೆಯುಟ್ಟು, ಶೀರಕುರುಮಾ ತಿಂದು ನಮಾಜಿಗೆ ತಡವಾಗುತ್ತದೆಯೆಂದು ತೇಕುತ್ತ ಮೂರು ಮೈಲಿ ಹೊಲಗಳಲ್ಲಿ ಹಾದ ಹಾದಿಯಲ್ಲಿ ಓಡುತ್ತ ತರೀಕೆರೆ ಮುಟ್ಟುತ್ತಿದ್ದೆವು.
ಬಹುತೇಕ ಕುಟುಂಬಗಳು ಚಿಳ್ಳೆಪಿಳ್ಳೆಗಳಿಗೆ ಒಂದೇ ಥಾನಿನಿಂದ ಬಟ್ಟೆ ಹರಿಸಿ ಹೊಲಿಸುತ್ತಿದ್ದರು. ಸಮವಸ್ತ್ರ ಧರಿಸಿದಂತೆ, ಹಿರಿಯರ ಹಿಂದೆ ಮಕ್ಕಳು ಮೊಮ್ಮಕ್ಕಳು ಈದಗಾಕ್ಕೆ ಹೋಗುವಾಗ, ತಾಯಿ ಕೋಳಿಯ ಹಿಂದೆ ಹೂಮರಿಗಳು ಹೋಗುವಂತೆ ತೋರುತ್ತಿತ್ತು. ಆಗ ರೆಡಿಮೇಡ್ ಬಟ್ಟೆ ಕಡಿಮೆ. ಕೆಲವರು ನಮಾಜಿನ ಹೊತ್ತಾಗುತ್ತಿದ್ದರೂ ಟೈಲರನ ಬಳಿ ಗೋಗರೆಯುತ್ತ ಕೂತಿರುತ್ತಿದ್ದರು. ಹಬ್ಬದ ಮುನ್ನಾ ದಿನವೇ ಕೊಡುತ್ತೇನೆಂದು ರಾಜಕಾರಣಿಗಳಂತೆ ಆಶ್ವಾಸನೆ ಕೊಟ್ಟಿದ್ದ ದರ್ಜಿಗಳು, ಹಗಲೂ ರಾತ್ರಿ ಮೆಶಿನನ ಮೇಲೆ ಕೂತಿರುತ್ತಿದ್ದರು. ಅಮ್ಮ ಟೈಲರನಿಂದ ಬಂದ ಹೊಸಬಟ್ಟೆಯನ್ನು ದೊಡ್ಡ ಬುಟ್ಟಿಯ ಮೇಲೆ ಹರವಿ, ಕೆಳಗೆ ಕೆಂಡದಲ್ಲಿ ಲೋಬಾನ ಹಾಕಿ ಘಮಘಮ ಮಾಡುತ್ತಿದ್ದಳು. ಅಪ್ಪ ಅತ್ತರನ್ನು ಬಟ್ಟೆಗೆ ಪೂಸುವನು. ಅಕ್ಕ ಕಡ್ಡಿಯಲ್ಲಿ ಸುರಮಾ ಕಪ್ಪುಪುಡಿಯನ್ನು ಅದ್ದಿ ಕಣ್ಣಿನ ಕೆಳರೆಪ್ಪೆಯ ದಂಡೆಗೆ ನಾಜೂಕಾಗಿ ಕಾಡಿಗೆಯಂತೆ ಹಚ್ಚುವಳು. ಹೀಗೆ ಸರ್ವಾಲಂಕಾರ ಭೂಷಿತರಾಗಿ ಈದಗಾಕ್ಕೆ ಓಡೋಡಿ ಹೋಗುವಾಗ ನಾವು ಬಿದ್ದೆದ್ದು, ಮಳೆಗಾಲದ ಕೆಸರನ್ನು ಸಿಡಿಸಿಕೊಂಡು ವರ್ಣರಂಜಿತರಾಗಿ ಮರಳುತ್ತಿದ್ದೆವು.
ತರೀಕೆರೆಯ ಸರ್ವ ದಿಕ್ಕಿನ ಮಸೀದಿಗಳಿಂದ ಜನ ತಕಬೀರ್ ಹಾಡುತ್ತ ಈದಗಾಕ್ಕೆ ಹೋಗುತ್ತಿದ್ದರು. ತಕಬೀರಿನ "ಅಲ್ಲಾಹು ಅಕಬರ್, ಲಾಯಿಲಾಹ ಇಲ್ಲಲ್ಲಾಹು ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ವಲಿಯುಲ್ಲ ಹಮ್ದ್" ಪಂಕ್ತಿಯನ್ನು ಮುಂದಿನವರು ಹೇಳಿದ ಬಳಿಕ ಹಿಂದಿನವರು ಪುನರುಕ್ತಿಸಬೇಕು. ಅದೊಂದು ಲಯಬದ್ಧವಾದ ಘೋಷ. ಮನೆ ಅಂಗಡಿ ಜಗಲಿಗಳಲ್ಲಿ ಜನ ನಿಂತು ನಮ್ಮಮಾರ್ಗ ಸಂಚಲನವನ್ನು ನೋಡುತ್ತಿದ್ದರು. ನಮ್ಮ ಸಹಪಾಠಿಗಳು ನಮ್ಮನ್ನು ಗುರುತಿಸಿ ಹೆಸರು ಹಿಡಿದು ಕೂಗುತ್ತಿದ್ದರು. ನಾವು ಮೆರವಣಿಗೆಯಿಂದಲೇ ಕೈಬೀಸುತ್ತಿದ್ದೆವು. ಈದಗಾಕ್ಕೆ ಹೋಗಿ ಆದಷ್ಟು ನೆರಳಿರುವ ಜಾಗವನ್ನು ಹಿಡಿದು, ಮನೆಯಿಂದ ಒಯ್ದ ಜಮಖಾನೆ ಹಾಸಿ, ಅಪ್ಪನ ಆಜುಬಾಜು ಕೂರುತ್ತಿದ್ದೆವು. ಚಿಕ್ಕವರಾದ ನಮಗೆ ನಮಾಜಿಗಳು ಧರಿಸಿದ ವಿವಿಧ ವೇಷಗಳನ್ನೂ ಪೇಟ ಟೋಪಿ ರುಮಾಲುಗಳನ್ನೂ ನೋಡುವುದೇ ಕೆಲಸ. ಕೆಲವರು ಆಗಷ್ಟೇ ಅರಬಸ್ಥಾನದಿಂದ ಬಂದವರಂತೆ ಉದ್ದನೆಯ ಗೌನು ಧರಿಸಿ ತಲೆಗೆ ಕಟ್ಟಿದ ಬಿಳಿ ರುಮಾಲಿನ ಮೇಲೆ ಕರಿಯಹಗ್ಗ ಸುತ್ತಿರುತ್ತಿದ್ದರು. ಕೆಲವರು ಚೌಕಳಿ ರುಮಾಲು ಸುತ್ತಿ ಹಿಂದೆ ಜಡೆಯಂತೆ ಕುಚ್ಚು. ಪೇಟೆಯ ಸಾಹುಕಾರರು ಹತ್ತಾರು ಗುಂಡಿಗಳಿರುವ ನಿಲುವಂಗಿ ತೊಟ್ಟು ಕಪ್ಪುಚಷ್ಮ ಹಾಕಿ, ತಮ್ಮ ದಿರಿಸನ್ನು ಪ್ರದರ್ಶಿಸುತ್ತ ಮೌಲಾನ ಅಬ್ದುಲ್ ಕಲಾಂ ಆಜಾದ್ ಆಗಿರುತ್ತಿದ್ದರು. ತರೀಕೆರೆಯ ಅಂಗಡಿ ಹೋಟೆಲುಗಳ ಬ್ಯಾರಿಗಳು ಮಾಪ್ಲಾಗಳು ಬಿಳಿಮುಂಡು ಸುತ್ತಿಕೊಂಡು ಬಿಳಿಯ ತಲೆವಸ್ತ್ರದಲ್ಲಿರುತ್ತಿದ್ದರು. ನಮಗೆ ' ಅಯ್ಯಪ್ಪ, ಮುಸ್ಲಿಮರೂ ಅಡ್ಡಪಂಚೆ ಉಡುತ್ತಾರಲ್ಲ' ಎಂದು ಆಶ್ಚರ್ಯ.
ತರೀಕೆರೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸುತ್ತಮುತ್ತಲ ಹಳ್ಳಿಯವರು ಬರುವನಕ ಶುರುವಾಗುತ್ತಿರಲಿಲ್ಲ. ಜಮಾಯತಿನ ಮುಖಂಡನೊಬ್ಬ ಎದ್ದುನಿಂತು ಸುತ್ತಮುತ್ತಲಿನ ಒಂದೊಂದೇ ಹಳ್ಳಿಯ ಹೆಸರು ಕೂಗಿ 'ಬಂದರೇನಪ್ಪಾ?' ಎಂದು ಕೇಳುವರು. ಆಗ ನಮ್ಮೂರಿನ ಹಿರಿಯರು ಬಂದಿದ್ದೇವೆಂದು ಸಾಬೀತುಪಡಿಸಲು ಟವೆಲ್ಲನ್ನು ಗಾಳಿಯಲ್ಲಿ ಬೀಸುವರು. ಇಮಾಮರು ಎದ್ದು ನಿಂತು ನಿಮ್ಮ ಪಂಕ್ತಿಗಳನ್ನು ಸರಿಮಾಡಿಕೊಳ್ಳಿ ಎನ್ನುವರು. ನಮಾಜಿಗೆ ನಿಂತಾಗ ಅಕ್ಕಪಕ್ಕದವರ ಭುಜ ಪರಸ್ಪರ ಸ್ಪರ್ಶಿಸುತ್ತಿರಬೇಕು. ನಡುವೆ ಜಾಗಬಿಟ್ಟರೆ ಅದರೊಳಗೆ ಸೈತಾನ ಬಂದು ನಿಲ್ಲುತ್ತಾನೆಂದು ನಂಬಿಕೆ. ಮುಂದಿನ ಪಂಕ್ತಿಯಲ್ಲಿ ಮಂಡಿಯೂರಿ ವೀರಾಸನದಲ್ಲಿ ಕುಳಿತ ನಮಾಜಿಗಳ ಪಾದದ ಕೆಳಭಾಗಗಳು ಜೋಡಿಸಿಟ್ಟ ಹೆಂಚುಗಳಂತೆ ಕಾಣುತ್ತಿದ್ದವು. ಚಪ್ಪಲಿ ಇಲ್ಲದವರ ಕಾಲಸೀಳುಗಳನ್ನು ಎಣಿಸಬಹುದಿತ್ತು. ಅವುಗಳ ಬಣ್ಣ ಮೃದುತ್ವ ಸೀಳುಗಳನ್ನು ನೋಡಿ, ಅವುಗಳ ಮಾಲಕರ ವರ್ಗವನ್ನು ಊಹಿಸಬಹುದಿತ್ತು.
ಹಬ್ಬದ ವಿಶೇಷ ನಮಾಜನ್ನು ಹೇಗೆ ಮಾಡಬೇಕೆಂದು ಇಮಾಮರು ಸೂಚನೆ ಕೊಡುತ್ತಿದ್ದರು. ಆದರೂ ಬಹಳಷ್ಟು ಜನರಲ್ಲಿ ಕೈಗಳನ್ನೆತ್ತಿ ಇಳಿಸಿ ಎದೆಗೆ ಕಟ್ಟಿಕೊಳ್ಳುವ, ಮೊಣಕಾಲ ಮೇಲಕೈಯೂರಿ ಬಾಗುವ, ನೆಲಕೆ ಹಣೆಹಚ್ಚಿ ಸಿಜ್ದಾ ಮಾಡುವ ಸಂಖ್ಯೆಯ ವಿಷಯದಲ್ಲಿ ಗೊಂದಲ ಉಳಿದಿರುತ್ತಿತ್ತು. ಅಂಥವರು ಸರಳವಾಗಿ ಮುಂದಿನವರ ಇಲ್ಲವೇ ಅಕ್ಕಪಕ್ಕದವರನ್ನು ಕಿರುಗಣ್ಣಲ್ಲಿ ಗಮನಿಸುತ್ತ ಅನುಸರಣೆ ಮಾಡುತ್ತಿದ್ದರು. ನಮಾಜು ಮುಗಿದ ಬಳಿಕ ದೀರ್ಘ ದುವಾ ಕಾರ್ಯಕ್ರಮ, ಈಗ ಇಮಾಮರು ಅರಬಿ ಮಂತ್ರಗಳಿಂದ ಉರ್ದುವಿಗೆ ಜಿಗಿಯುತ್ತಿದ್ದರು. ನಾವು ಎರಡೂ ಕೈಗಳನ್ನು ಜೋಡಿಸಿ ಬೊಗಸೆಯನ್ನು ಆಗಸಮುಖಿಯಾಗಿ ಹಿಡಿಯುತ್ತಿದ್ದೆವು. "ಯಾ ಅಲ್ಲಾ, ನೀನು ಕರುಣಾಮಯಿ, ಸರ್ವಶಕ್ತ, ನಿನಗೆ ಗೊತ್ತಿಲ್ಲದ್ದು ಯಾವುದು? ನಾವು ಪಾಪಿಗಳು, ಅಸಹಾಯಕರು, ನಮ್ಮ ಮೇಲೆ ನಿನ್ನ ಕರುಣೆಯಿರಲಿ, ಸತ್ತ ಹಿರಿಯರಿಗೆ ಸ್ವರ್ಗ ಪ್ರಾಪ್ತಿಯಾಗಲಿ, ಅವರಿಗೆ ಸಮಾಧಿ ಹಿಂಸೆಯಿಂದ ವಿಮೋಚನೆ ಸಿಗಲಿ, ನಮಾಜು ಮಾಡುವ ಶ್ರದ್ಧೆ ದಯಪಾಲಿಸು, ಬಡವರಿಗೆ ಸಹಾಯ ಮಾಡುವ ಹೃದಯವಂತಿಕೆ ಕೊಡು, ಕಿರಿಯರಿಗೆ ಹಿರಿಯರನ್ನು ಗೌರವಿಸುವ ಬುದ್ಧಿಕೊಡು. ಹಿರಿಯರಿಗೆ ಕಿರಿಯರನ್ನು ಪ್ರೀತಿಸುವ ಔದಾರ್ಯ ನೀಡು. ಹಜ್ ಯಾತ್ರೆಯ ಬಯಕೆ ಇಟ್ಟುಕೊಂಡವರನ್ನು ಕರೆಸಿಕೊ, ನಮ್ಮ ದುಡಿಮೆಯಲ್ಲಿ ಬರಕತ್ ಬರಲಿ, ಕಾಯಿಲೆ ಬಿದ್ದಿರುವವರು ಗುಣಮುಖರಾಗಲಿ, ನಮ್ಮ ಅಕ್ಕತಂಗಿಯರಿಗೆ ಮದುವೆಯ ಅವಕಾಶವಾಗಲಿ- ಅದೊಂದು ನಿಡಿದಾದ ಬೇಡಿಕೆ ಪಟ್ಟಿ. ಪ್ರತಿ ಬೇಡಿಕೆ ಸಭೆ ಆಮೀನ್ ಎನ್ನುತ್ತಿತ್ತು. ಸಾವಿರಾರು ಸ್ವರಗಳು ಒಂದೇ ಸಲ ಉಚ್ಚರಿಸುವಾಗ ವಿಶಿಷ್ಟ ಮಾಧುರ್ಯ ಹೊಮ್ಮುತ್ತಿತ್ತು. ಉದ್ಯೋಗ ಮದುವೆ ಆರೋಗ್ಯದ
ವಿಷಯ ಬಂದಾಗ 'ಆಮೀನ್' ಘೋಷದ ಸ್ವರ ಎರಡು ಗೆರೆಯೇರಿ ಹೊಮ್ಮುತ್ತಿತ್ತು. ಕೆಲವೊಮ್ಮೆ ದುವಾ ನಡೆಸಿಕೊಡುವ ಇಮಾಮರು ನಡುನಡುವೆ ಬಿಕ್ಕುತ್ತಿದ್ದುದುಂಟು. ಆಗ ಜನರ ಕಣ್ಣಲ್ಲೂ ನೀರು.
ನಮಾಜ್ ಬಳಿಕ ಈದ್ ಮುಬಾರಕ್ ವಿನಿಮಯ. ನಾವು ಅಪ್ಪನಿಗೆ ಮೊದಲು ವಂದಿಸುತ್ತಿದ್ದೆವು. ಸಮವಯಸ್ಕರ ಜತೆ ಅಪ್ಪುಗೆಯಾದರೆ, ಹಿರಿಯರ ಕೈಗಳಲ್ಲಿ ಕೈಸೇರಿಸಿ ಶುಭಾಶಯ ಸಲ್ಲಿಕೆ ಮಾಡುತ್ತಿದ್ದೆವು. ನಮಾಜು ಓದಿಸಿದ ಇಮಾಮರ ಮುಂಗೈಗೆ ಚುಂಬಿಸುತ್ತಿದ್ದೆವು. . ಮನೆಗೆ ಬಂದರೆ ಹೆಣ್ಣುಮಕ್ಕಳು ಬಣ್ಣದ ನೀರನ್ನು ತಟ್ಟೆಯಲ್ಲಿ ತುಂಬಿ ಗಂಡಸರ ದೃಷ್ಟಿ ತೆಗೆಯುವವರು. ಆಗ ಹಬ್ಬದ ಸಂಭಾವನೆ ಸಂದಾಯ ಮಾಡಬೇಕಿತ್ತು. ನಾವು ಅಮ್ಮನಿಗೂ, ಅಪ್ಪನಿಗೂ ಕಾಲುಮುಟ್ಟಿ ನಮಸ್ಕರಿಸುತ್ತಿದ್ದವು. ಕೆಲವು ಹಿರಿಯರು 'ಅಲ್ಲಾನಿಗೆ ಬಿಟ್ಟು ಬೇರೆ ಯಾರಿಗೂ ಬಾಗಬಾರದು' ಎಂದು ಕಾಲಿಗೆ ಬೀಳಿಸಿಕೊಳ್ಳುತ್ತಿರಲಿಲ್ಲ. ಅಮ್ಮ ಸೆರಗುಹೊತ್ತು ಕಣ್ಣುಮುಚ್ಚಿ ತಲೆಯನ್ನು ಮುಟ್ಟಿ 'ಸೌಸಾಲ್ ಜೀಯೊ ಮೇರೆ ಬಚ್ಚೆ. ಅಲ್ಲಾ ತುಮೆ ಹಯಾತಿ ದೆ, ಕಮಾಯಿಮೇ ಬರ್ಕತ್ ದೇ, ತನ್ ದುರಸ್ತಿ ದೇ' ಎಂದು ಹರಸುತ್ತಿದ್ದಳು.
ನಮಾಜು, ಧಾರ್ಮಿಕ ಪ್ರವಚನ, ದುವಾಗಳ ಒಂದು ಗಂಟೆ ಕಾರ್ಯಕ್ರಮ ಸಮಾಪ್ತಿಯಾಗುವುದಕ್ಕೆ ಕೆಲವರು ಚಡಪಡಿಸುತ್ತಿದ್ದರು. ಅದರಲ್ಲೂ ಕಸಾಯಿಖಾನೆಯವರು ಕೊನೆಯ ಪಂಕ್ತಿಯಲ್ಲಿ ಕೂತಿದ್ದು ದುವಾಗೂ ಕಾಯದೆ ಅಂಗಡಿಗಳಿಗೆ ದೌಡುತ್ತಿದ್ದರು. ನಮಾಜು ಮುಗಿಯಿತೊ ಹೊಸಬಟ್ಟೆಯ ಸರಸರ, ಖುರ್ಬಾನಿಯ ಪ್ರಾಣಿಬಲಿ, ಅದರ ಹಸಿಗೆ, ಮಾಂಸದಾನ, ಒಲೆಹೂಡಿಕೆ, ಅಡುಗೆ, ಊಟ, ಬಂಧುಗಳ ಭೇಟಿ ಶುರು. ಬಕ್ರೀದಿನಲ್ಲಿ ಇಡೀ ದಿನ, ಖುರ್ಬಾನಿಯ ಮಾಂಸದ ಪ್ಯಾಕೇಟುಗಳನ್ನು ಸ್ವೀಕರಿಸುವುದೇ ಒಂದು ಕಾರ್ಯಕ್ರಮ. ಶುಭಾಶಯ ಕೋರಲು ಹೋಗುವ ಬಂಧುಗಳ ಮನೆಯಲ್ಲಿ ತುತ್ತಾದರೂ ಬಿರಿಯಾನಿ, ಚಮಚೆಯಾದರೂ ಸಿಹಿ ತಿನ್ನಬೇಕು.
ನಾವು ಹುಡುಗರು ಹಿರಿಯರಿಂದ ಹಬ್ಬದ ಕಾಣಿಕೆ ವಸೂಲಿಗೆ ಹೊರಡುತ್ತಿದ್ದೆವು. ಎರಡು ರೂಪಾಯಿ ತನಕ ಕಲೆಕ್ಷನ್ ಆಗುತ್ತಿತ್ತು. ಅದರಲ್ಲಿ ಮಧ್ಯಾಹ್ನದ ಮ್ಯಾಟಿನಿ ಆಗಬೇಕು. ನಮ್ಮೂರ ಟಾಕೀಸುಗಳಲ್ಲಿ ಹಬ್ಬದ ಪ್ರಯುಕ್ತ ಮುಸ್ಲಿಮರ ಕುಟುಂಬ ಕಥೆಯನ್ನು ಆಧರಿಸಿದ 'ದಯಾರೆ ಮದೀನಾ' 'ಮೇರೆ ಮೆಹಬೂಬ್' ಮುಸ್ಲಿಂಪುರಾಣ ಆಧರಿತ 'ಸಾತ್ ಸವಾಲ್ ಹಾತಿಂತಾಯ್' ಮೊದಲಾಗಿ ಉರ್ದು ಸಿನಿಮಾ ಹಾಕಲಾಗುತ್ತಿತ್ತು. ಥಿಯೇಟರ್ ತುಂಬ ಇಡಿಕಿರಿದ ಸೆಂಟಿನ ಪರಿಮಳ, ಗದ್ದಲ. ರೊಕ್ಕವೆಲ್ಲ ಖರ್ಚಾದ ಬಳಿಕವೇ ಮನೆಯತ್ತ ಮುಖ ಮಾಡುತ್ತಿದ್ದೆವು.
ನಮಾಜು ಮುಗಿಸಿ ಹಳ್ಳಿಗೆ ಬಂದರೆ, ಉಯ್ಯಾಲೆ ಆಟಕ್ಕೆ ಹುಡುಗರು ಹುಡುಗಿಯರು ಸಜ್ಜಾಗಿರುತ್ತಿದ್ದರು. ಗಲ್ಲಿಯಲ್ಲಿ ಪುರಾತನ ಕಾಲದ ಬೇವಿನಮರ. ಅದರಲ್ಲಿ ಸೂಫಿಗಳ ಹೆಸರಲ್ಲಿ ಹಸಿರು ಬಾವುಟ ಏರಿಸುತ್ತಿದ್ದರಿಂದ ಝಂಡೇಕಾಝಾಡ್ ಎನ್ನಲಾಗುತ್ತಿತ್ತು. ಅದರ ಕಟ್ಟೆಯ ಮೇಲೆ ಮಕ್ಕಳು ಆಡುತ್ತಿದ್ದವು. ಮುದುಕರು ಅಡ್ಡಾಗಿರುತ್ತಿದ್ದರು. ಚಿಕ್ಕಮಕ್ಕಳನ್ನು ಸೊಂಟದಲ್ಲೆತ್ತಿಕೊಂಡು ಮಹಿಳೆಯರು ಬಂದು ಹಕ್ಕಿಪಕ್ಕಿ ತೋರುತ್ತಿದ್ದರು. ಅದರ ನೆರಳಲ್ಲಿ ಬಡಗಿಗಳು ನೇಗಿಲ ಕೆತ್ತುವ, ಕುಂಟೆ ಕೂರಿಗೆ ಜೋಡಿಸುವ ಕಾಮಗಾರಿ ನಡೆಸುತ್ತಿದ್ದರು. ಪ್ರಾಯದ ಹುಡುಗ ಹುಡುಗಿಯರು ಬೇವಿನ ಮರಕ್ಕೆ ಉಯ್ಯಾಲೆ ಹಾಕಿ ಜೀಕುತ್ತಿದ್ದರು. ಉಯ್ಯಾಲೆಯ ಒಂದು ತುದಿಗೆ ಹೆಂಗಳೆಯರಿಗೆ ಪ್ರಿಯನಾಗಿದ್ದ ಅನ್ವರ್ ಚಿಕ್ಕಪ್ಪ ಬೈಸಕಿ ಹೊಡೆದು ಜೀಕಿದನೆಂದರೆ, ಇನ್ನೊಂದು ತುದಿ ಆಗಸಕ್ಕಡರುತ್ತಿತ್ತು. ಹೆಂಗಳೆಯರು 'ಅಮ್ಮಾ ಮೈ ಮರೀಗೇ' ಎಂದು ಸಂತೋಷದಿಂದ ಕಿರುಚುತ್ತಿದ್ದರು. 'ನಕ್ಕೊರೆ ಡರತೀ ಛೊಕರಿಯ್ಞಾ' ಎಂದು ಅಂಗಳದಲ್ಲಿ ಕೂತು ನೋಡುತ್ತಿದ್ದ ಹಿರಿಯರು ಕೂಗಿ ಹೇಳುತ್ತಿದ್ದರು.
ಇದೇ ಬೇವಿನ ಮರದಡಿ ಅತಿಹೆಚ್ಚು ಹೊತ್ತು ಮೊಹರಂ ಮೆರವಣಿಗೆ ನಿಲ್ಲುತ್ತಿತ್ತು. ಪಾಳೇಗಾರ ಸೋಗಿನ ಸನ್ನಿಪೀರಣ್ಣನ ಕುಣಿದಾಟ ಚಾಟಿಹೊಡೆದಾಟ ಪ್ರದರ್ಶನ ಇರುತ್ತಿತ್ತು. ಒಂದು ದಿನ ಗಲ್ಲಿಯಲ್ಲಿದ್ದ ಹುಲ್ಲಿನ ಮನೆಗಳಿಗೆ ಬೆಂಕಿಬಿದ್ದಿತು. ನನಗೆ ನೆನಪಿದೆ:ದೀಪಾವಳಿಯ ಪಟಾಕಿ ಹೊಡೆದಂತೆ, ಛಾವಣಿಗೆ ಹಾಕಿದ್ದ ಬಿದಿರ ಗಂಟುಗಳು ಸಿಡಿದ್ದಿದ್ದು. ಜ್ವಾಲೆಗೆ ಸಿಲುಕಿ ಹಬ್ಬದ ದಿನ ಉಯ್ಯಾಲೆ ಹಾಕುತ್ತಿದ್ದ ಬೇವಿನಮರ ಸುಟ್ಟು ಹೋಯಿತು. ಅದು ಸುಟ್ಟಿದ್ದೇ ಗಲ್ಲಿಯ ಲಕ್ಷಣ ಹೋಯಿತು. ಹೊಸ ಬೇವಿನ ಸಸಿಯೊಂದನ್ನು ತಂದು ನೆಡಲಾಯಿತು. ಅದು ಬೆಳೆದು ಬಲವಾಗುವ ಹೊತ್ತಿಗೆ ಅದರಡಿ ನಡೆಯುತ್ತಿದ್ದ ಉಯ್ಯಾಲೆ, ಮೊಹರಂ ಕುಣಿತಗಳೆಲ್ಲ ನಿಂತುಹೋದವು. ಕಾರಣ, ನಮ್ಮೂರ ಧಾರ್ಮಿಕತೆಯ ಕಲ್ಪನೆಯೇ ಬದಲಾಗಿತ್ತು
ಆಕರ : ಆಂದೋಲನ ಮೈಸೂರು ೧೯.೪.೨೦೨೩
Comments
Post a Comment