#ಶ್ರದ್ಧಾಂಜಲಿಗಳು_ಸಾಗರದ_ಗೋಪಾಲ್_ಅವರಿಗೆ
#ಸದಾ_ಕ್ರೀಯಾಶೀಲ_ಸಾಮಾಜಿಕ_ನ್ಯಾಯದ_ಪ್ರತಿಪಾದಕರಾಗಿದ್ದವರು
#ಜನಪರ_ಹೋರಾಟಗಾರರಿಗೆ_ಸದಾ_ಬೆಂಬಲ
1977-78ರಲ್ಲಿ ನಾನು ಸಾಗರದ ಮುನ್ಸಿಪ್ ಹೈಸ್ಕೂಲ್ ಗೆ ಆನಂದಪುರಂನಿಂದ ಸಾಗರ ಪಟ್ಟಣಕ್ಕೆ ರೈಲಿನಲ್ಲಿ ಹೋಗುತ್ತಿದ್ದೆ ಆಗ ಸಾಗರದ ಮುನ್ಸಿಪ್ ಹೈಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜು ತುಂಬಿ ತುಳುಕುತ್ತಿತ್ತು ವಿದ್ಯಾರ್ಥಿಗಳಿಂದ ಬೆಳಿಗ್ಗೆ 11ರವರೆಗೆ ಕಾಲೇಜು ನಡೆಯುತ್ತಿತ್ತು ನಂತರ ನಮ್ಮ ಹೈಸ್ಕೂಲ್, ಆದ್ದರಿಂದ ಬೆಳಿಗ್ಗೆ 9ಕ್ಕೆ ನಮ್ಮ ರೈಲು ಸಾಗರ ನಿಲ್ದಾಣ ತಲುಪಿದಾಗ ಎರೆಡು ಗಂಟೆ ನಮಗೆ ಸಾಗರದ ಕೋರ್ಟ್ ಎದುರಿನ ಗ್ರಂಥಾಲಯ ನಿತ್ಯ ಪತ್ರಿಕೆ ಪುಸ್ತಕ ಓದುವ ತಾಣ ಆಗಿರುತ್ತಿತ್ತು.
ಅಲ್ಲಿ ನಾವು ಪ್ರತಿ ನಿತ್ಯ ಬೆಳಿಗ್ಗೆ ಗ್ರಂಥಾಲಯದಲ್ಲಿ ಈ ಗೋಪಾಲ್ ರನ್ನ ಮತ್ತು ಅವರ ತಮ್ಮನನ್ನ ನೋಡುತ್ತಿದ್ದೆವು ನಂತರ ಸಂಜೆ ನೆಹರೂ ಮೈದಾನದಲ್ಲಿ ಆ ಕಾಲದ ಸಾಗರದ ಸ್ಟಾರ್ ಕ್ರಿಕೆಟ್ ಆಟಗಾರರ ತಾಲೀಮು ನಡೆಯುವಾಗ ಅವರ ಜೊತೆ ಈ ಗೋಪಾಲ್ ನೋಡುತ್ತಿದ್ದೆ.
ಸಾಗರದ ಮುನ್ಸಿಪ್ ಹೈಸ್ಕೂಲ್ ನಲ್ಲಿ ಬಟ್ಟೆಮಲ್ಲಪ್ಪ ಸಮೀಪದ ನಂದಿಗದ ಗುಂಡಪ್ಪನವರು ಸೂಪರಿಡೆಂಟ್ ಆಗಿದ್ದರು, ಆರು ಅಡಿ ಎತ್ತರದ ಅವರು ಜುಬ್ಬಾ ಕಚ್ಚೆಪಂಜೆ ಧರಿಸಿ ಬರುತ್ತಿದ್ದರು ಬಾಯಿ ತುಂಬಾ ರಸಗವಳ ಅವರು ಶಿಸ್ತಿನ ಸಿಪಾಯಿ ಎಂದೇ ಆ ಕಾಲದ ಪ್ರಸಿದ್ಧರು ಅವರು ನನ್ನ ತಂದೆಯ ಗೆಳೆಯರು.
ನಂದಿಗ ಗುಂಡಪ್ಪರ ತಮ್ಮನ ಮನೆ ಪೋಲಿಸ್ ಠಾಣೆ ವೃತ್ತದಿಂದ ಸಾಗರದ ಆಸ್ಪತ್ರೆ ರಸ್ತೆಯಲ್ಲಿ ರಾಮ ಭವನದ ಪಕ್ಕದಲ್ಲಿತ್ತು ಅವರ ಮಗನೆ ಗೋಪಾಲ್.
ಸಾಗರದ ತೀ.ನಾ.ಶ್ರೀನಿವಾಸ್ ಮತ್ತು ಶಿವಮೊಗ್ಗದ ಹಿರಿಯ ಸಮಾಜವಾದಿ ಪಿ.ಪುಟ್ಟಯ್ಯರಿಗೆ ಅತ್ಯಂತ ಆಪ್ತರಾಗಿದ್ದ ಗೋಪಾಲ್ ಆಹಾರ ನಿಗಮದ ಗೋದಾಮಿನಲ್ಲಿ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದರು ಇವರ ಪತ್ನಿ ಬೀಮನಕೋಣೆಯ ಭೂ ಅಭಿವೃದ್ಧಿ ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತರಾಗಿದ್ದಾರೆ, ಪುತ್ರಿ ನೆದರ್ಲ್ಯಾಂಡ್ನಲ್ಲಿ ಮಾಸ್ಟರ್ ಡಿಗ್ರಿ ಮಾಡಿ ಉದ್ಯೋಗದಲ್ಲಿದ್ದು ಕೆಲ ವರ್ಷದ ಹಿಂದೆ ವಿವಾಹವಾಯಿತು.
ನಿವೃತ್ತರಾದ ನಂತರ ಗೋಪಾಲ್ ಸ್ವಲ್ಪ ಕಾಲ ನಮ್ಮ ಸಂಸ್ಥೆಯಲ್ಲಿ ಅಡ್ವೈಸರ್ ಆಗಿ ಕಾರ್ಯನಿರ್ವಹಿಸಿದ್ದರು.
ಅನ್ಯಾಯದ ಬಗ್ಗೆ ಸಿಡಿದೇಳುತ್ತಿದ್ದ ಗೋಪಾಲ್ ಜನಪರ ಹೋರಾಟಗಳಿಗೆ ಸದಾ ಬೆಂಬಲಿಸುತ್ತಿದ್ದರು ನಂತರ ಸರ್ಕಾರಿ ಉದ್ಯೋಗದಲ್ಲಿದ್ದಾಗ ಗುಪ್ತವಾಗಿ ತನು-ಮನ-ಧನ ಸಹಾಯ ಮಾಡುತ್ತಿದ್ದವರು.
ಹತ್ತು ವರ್ಷದ ಹಿಂದೆ ತೀವ್ರ ಹೃದಯಾಘಾತವಾದಾಗಲೇ ಗೋಪಾಲ್ ಬದುಕುವುದಿಲ್ಲ ಅನ್ನಿಸಿತ್ತು ಅವರನ್ನ ಮಣಿಪಾಲ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಮಾಡಿಸಿ ಅವರನ್ನ ಜೋಪಾನ ಮಾಡಿದ ಅವರ ಪತ್ನಿ ಬಗ್ಗೆ ಗೋಪಾಲ್ ಯಾವಾಗಲೂ ಸ್ಮರಿಸುತ್ತಿದ್ದರು.
ನಿನ್ನೆ ತಮ್ಮ 71ನೇ ವಯಸ್ಸಲ್ಲಿ ಗೋಪಾಲ್ ತಮ್ಮ ಸಾರ್ಥಕ ಜೀವನ ಮುಗಿಸಿ ಇಹ ಲೋಕ ತ್ಯಜಿಸಿದ್ದಾರೆ ಅವರಿಗೆ ಸದ್ಗತಿ ಸ್ವರ್ಗ ಪ್ರಾಪ್ತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ.
Comments
Post a Comment