#ಕೆರೆಗೆ_ಹಾರ_ಭಾಗಿರಥಿ_ಕಲ್ಲನಹಳ್ಳಿ_ಮಲ್ಲನಗೌಡನ_ಕಿರಿ_ಸೊಸೆ
#ಗಂಡ_ಮಾದೇವ_ದಂಡಿನಲ್ಲಿರುತ್ತಾನೆ
#ನೀರಿಲ್ಲದ_ಕೆರೆಗೆ_ಭಾಗಿರಥಿ_ಹಾರವಾಗುತ್ತಾಳೆ
#ಸತಿಭಕ್ತಿಯಿಂದ_ತನ್ನ_ಜೀವ_ತ್ಯಾಗ_ಮಾಡುವ_ಪತಿ
#ಇಂತಹ_ಅನೇಕ_ಕೆರೆಗೆ_ಹಾರದ_ಜನಪದ_ಕಥೆಗಳಿದೆ
#ಶಿಕಾರಿಪುರದ_ಸಮೀಪದ_ಮದಗದ_ಕೆರೆಗೂ_ಇಂತಹ_ಕಥೆ_ಇದೆ.
#ಮಾಯದಂತ_ಮಳೆ_ಬಂತಮ್ಮ_ಎಂಬ_ಪ್ರಸಿದ್ಧ_ಹಾಡು_ಜನ_ಮಾನಸದಲ್ಲಿದೆ.
ಕೆರೆಗೆ ಹಾರ ಪದ್ಯ ಶಾಲಾ ದಿನದಿಂದಲೂ ಇವತ್ತಿನ ಈ ಕ್ಷಣದಲ್ಲೂ ನೆನೆಪಿಸಿಕೊಂಡರೆ ಕಣ್ಣು ನೀರಾಗದೇ ಇರುವುದಿಲ್ಲ.
ಕಲ್ಲನಹಳ್ಳಿ ಮಲ್ಲನಗೌಡ ಊರ ಜನರಿಗಾಗಿ ಕಟ್ಟಿಸಿದ ಕೆರೆ ನೀರು ತುಂಬುವುದಿಲ್ಲ ಇದಕ್ಕೆ ಪರಿಹಾರ ಮಲ್ಲನಗೌಡನ ಹಿರಿ ಸೊಸೆ ಕೆರೆಗೆ ಹಾರವಾಗಿ ನೀಡಿದರೆ (ಬಲಿ) ಕೆರೆ ತುಂಬುವುದಾಗಿ ಜ್ಯೋತಿಷಿಗಳು ತಿಳಿಸುತ್ತಾರೆ ಆದರೆ ಹಿರಿಸೊಸೆ ಹಾರವಾಗಿ ನೀಡಲು ಕುಟುಂಬದ ಹಿರಿತನ ಅಡ್ಡಿಯಾಗುತ್ತದೆ ಅದರಂತೆ ಕಲ್ಲನಹಳ್ಳಿ ಮಲ್ಲನಗೌಡನ ಕಿರಿ ಸೊಸೆ ಭಾಗೀರಥಿ ಕೆರೆಗೆ ಹಾರವಾಗುತ್ತಾಳೆ.
ಕೆರೆ ತುಂಬುತ್ತದೆ ದೂರದಲ್ಲಿ ಸೈನ್ಯದಲ್ಲಿದ್ದ ಭಾಗೀರಥಿ ಪತಿ ಮಾದೇವನಿಗೆ ದುಃಸ್ವಪ್ನಗಳು ಬೀಳುತ್ತದೆ ಇದರಿಂದ ಆತಂಕಗೊಂಡ ಮಾದೇವ ಗಡಿಬಿಡಿಯಲ್ಲಿ ಜೀನು ಹಾಕದ ಬತ್ತಲೆ ಕುದುರೆ ಏರಿ ಬರುತ್ತಾನೆ ಅಲ್ಲಿ ಮಾದೇವನ ತಾಯಿ ನಿನ್ನ ಪತ್ನಿ ಭಾಗಿರಥಿ ತವರಿಗೆ ಹೋಗಿದಾಳೆಂದು ತಿಳಿಸಿದಾಗ, ಭಾಗಿರಥಿಯ ತವರಿಗೆ ಹೋಗುತ್ತಾನೆ ಅಲ್ಲಿ ಮಾದೇವನ ಅತ್ತೆ ಅವಳು ಗೆಳತಿ ಮನೆಗೆ ಹೋಗಿದ್ದಾಳೆನ್ನುತ್ತಾರೆ.
ಗೆಳತಿ ಮನೆಯಲ್ಲಿ ತನ್ನ ತಂದೆ ತಾಯಿ ತನ್ನ ಪತ್ನಿ ಭಾಗಿರಥಿಯನ್ನು ಕೆರೆಗೆ ಹಾರವಾಗಿ ಕೊಟ್ಟಿದ್ದು ಕೇಳಿ ಕೆರೆಯ ಸಮೀಪ ಬಂದು ದುಃಖಿತನಾಗಿ ಗೋಳಾಡುತ್ತಾನೆ.
ಮುನ್ನೂರು ವರಹ ಕೊಟ್ಟು ಮಾಡಿಸಿ ತಂದ ಮುತ್ತಿನೋಲೆ ಧರಿಸುವ ಮುತ್ತೈದೆ ಎಲ್ಲಿಗೋದೆ ಎಂದು ಕಣ್ಣೀರು ಸುರಿಸುತ್ತಾ ಮಾದೇವ ತನ್ನ ಪ್ರೀತಿಯ ಪತ್ನಿ ಭಾಗಿರತಿಯು ಹಾರವಾದ ಕೆರೆಗೆ ಹಾರಿ ತನ್ನ ಜೀವವನ್ನು ತ್ಯಾಗ ಮಾಡುತ್ತಾನೆ.
ಕವಿ ಶ್ರೀಯುತ ಬೆಟಗೇರಿ ಕೃಷ್ಣಶರ್ಮರು ಗ್ರಾಮೀಣ ಪ್ರದೇಶವೊಂದರಲ್ಲಿ ಜನಪದ ಕ್ಷೇತ್ರಕಾರ್ಯ ಮಾಡುತ್ತಿರುವಾಗ, ಅಲ್ಲಿ ಒಂದು ಕೋಲಾಟದ ಪದದಿಂದ ಆಕರ್ಷಿತರಾಗಿ, ಅದನ್ನು ಸಂಗ್ರಹಿಸುತ್ತಾರೆ, ದಾಖಲಿಸುತ್ತಾರೆ. ಅದೇ 'ಕೆರೆಗೆಹಾರ' ಕಥನಗೀತೆ. ಈ ಗೀತೆ ಸುಮಾರು ೧೨೦ ಸಾಲುಗಳನ್ನು ಒಳಗೊಂಡಿದೆ ಒಮ್ಮೆ ಓದಿ....
#ಕೆರೆಗೆ_ಹಾರ_ಭಾಗೀರಥಿ
ಸಣ್ಣಸೊಸಿ ಭಾಗೀರತಿ ಜಳಕನ ಮಾಡ್ಯಾಳು
ಜಳಕನ ಮಾಡ್ಯಾಳು ಬಂಗಾರಬುಟ್ಟಿ ತುಂಬ್ಯಾಳು
ಬಂಗಾರಬುಟ್ಟಿ ತುಂಬ್ಯಾಳು ಸಿಂಗಾರಸಿಂಬಿ ಮಾಡ್ಯಾಳು
ಸಿಂಗಾರಸಿಂಬಿ ಮಾಡ್ಯಾಳು ಮುಂದ ಮುಂದ ಹೊಂಟಾಳು
ಮುಂದ ಮುಂದ ಭಾಗೀರತಿ ಹಿಂದಿಂದ ಎಲ್ಲಾರೂ
ಗಂಗಿ ಪೂಜೆ ಮಾಡ್ಯಾರ ಬೆಲಪತ್ರಿ ಏರಿಸ್ಯಾರ
ಬೆಲಪತ್ರಿ ಏರಿಸ್ಯಾರ ಈಬತ್ತೀ ಧರಿಸ್ಯಾರ
ಸೀರಿ ಕುಬುಸ ಏರಿಸ್ಯಾರ ಹೂವಿನ ದಂಡಿ ಮುಡಿಸ್ಯಾರ
ಹೂವಿನ ದಂಡಿ ಮುಡಿಸ್ಯಾರ ನೇವದಿ ಮಾಡ್ಯಾರ
ನೇವದಿ ಮಾಡ್ಯಾರ ಎಲ್ಲಾರು ಉಂಡಾರು
ಎಲ್ಲಾರು ಉಂಡಾರು ಉಳಿದದ್ದು ತುಂಬ್ಯಾರು
ಉಳಿದದ್ದು ತುಂಬ್ಯಾರು ಬಂಗಾರಬುಟ್ಟಿ ಹೊತ್ತಾರು
ಬುಟ್ಟಿ ಹೊತ್ತು ನಡೆದಾರು ಬಂಗಾರ ಬಟ್ಲ ಮರತರು
"ಗಂಗವ್ವ ನೀ ಹೋಗ! ಗವರವ್ವ ನೀ ಹೋಗ"
ಗಂಗವ್ವ 'ನಾವೂಲ್ಲೆ' ಗವರವ್ವ 'ನಾವೂಲ್ಲೆ'
ನಿಂಗವ್ವ ನೀ ಹೋಗ ನೀಲವ್ವ ನೀ ಹೋಗ
ನಿಂಗವ್ವ 'ನಾವೂಲ್ಲೆ' ನೀಲವ್ವ 'ನಾವೂಲ್ಲೆ'
'ಸಣ್ಣಸೊಸಿ ಭಾಗೀರತಿ ನೀ ತರ ಹೋಗವ್ವ'
ಸಣ್ಣ ಸೊಸಿ ಭಾಗೀರತಿ ಬಿರಿ ಬಿರಿ ನಡೆದಾಳು
ಬಿರಿ ಬಿರಿ ಹೋದಾಳು ಬಂಗಾರ ಬಟ್ಲ ತೊಗೊಂಡಳು
ಒಂದು ಮೆಟ್ಲೇರುದಕ ಪಾದಕೆ ಬಂದಳು ಗಂಗಿ
ಎರಡು ಮೆಟ್ಲೇರುದಕ ಪಾದ ಮುಣಿಗಿಸ್ಯಾಳು ಗಂಗಿ
ಮೂರು ಮೆಟ್ಲೇರುದಕ ವೊಣಕಾಲಿಗೆ ಬಂದಾಳು ಗಂಗಿ
ನಾಕು ಮೆಟ್ಲೇರುದಕ ನಡುಮಟ್ಟ ಬಂದಳು ಗಂಗಿ
ಐದು ಮೆಟ್ಲೇರುದಕ ತುಂಬಿ ಹರಿದಾಳು ಗಂಗಿ
ಸಣ್ಣ ಸೊಸಿ ಭಾಗೀರತಿ ಕೆರೆಗ್ಹಾರವಾದಳು
ಗಂಡ ಮಾದೇವರಾಯ ದಂಡಿನಾಗೈದಾನು
ದಂಡಿನಾಗೈದಾನು ಕಂಡನು ಕೆಟ್ಟ ಕನಸ
ಸೆಲ್ಯ ಸುಟ್ಟಾಂಗಾತು ಕೋಲು ಮುರಿದಂಗಾತು
ಕಟ್ಟಿಸಿದ ಮಾಲೆಲ್ಲ ತಟ್ಟನೆ ಬಿದ್ದಂಗಾತು
ಗಂಡ ಮಾದೇವರಾಯ ಹತ್ತಿದ ಬತ್ತಲೆಗುದುರಿ
ಹತ್ತಿದ ಬತ್ತಲೆಗುದುರಿ ಒತ್ತಾರ ಬಂದಾನ ಮನೆಗೆ
ಬಂದ ಮಾದೇವನ ತಂದೆತಾಯಿ ನೋಡಿದರು
"ಗಂಗವ್ವ ನೀರು ಕೊಡ ಗವರವ್ವ ನೀರು ಕೊಡ
"ಗಂಗವ್ವ ನೀರು ಕೊಡುದ್ಯಾಕ ಗವರವ್ವ ನೀರು ಕೊಡುದ್ಯಾಕ"
'ನನ ಮಡದಿ ಭಾಗೀರತಿ ಎಲ್ಲಿಗ್ಹೋಗ್ಯಾಳವ್ವ?'
"ನಿನ ಮಡದಿ ಭಾಗೀರತಿ ತವರಿಗೆ ಹೋಗ್ಯಾಳಪ್ಪ"
ಗಂಡ ಮಾದೇವರಾಯ ಹತ್ತಿದ ಬತ್ತಲೆಗುದುರಿ
ಹತ್ತಿದ ಬತ್ತಲೆಗುದುರಿ ಹೊಂಟಾನತ್ತೆ ಮನೆಗೆ
ಬಂದಿರು ಅಳಿಯನ ನೋಡಿ ಅಂದಳು ಅತ್ತೇವ್ವ
"ನಿಂಬೆವ್ವ ನೀರ್ ಕೊಡ ನೀಲವ್ವ ನೀರ್ ಕೊಡ!"
"ನಿಂಬೆವ್ವ ನೀರ್ ಕೊಡುದ್ಯಾಕ ನೀಲವ್ವ ನೀರ್ ಕೊಡುದ್ಯಾಕ?"
ನನ ಮಡದಿ ಭಾಗೀರತಿ ಎಲ್ಲಿಗ್ಹೋಗ್ಯಾಳತ್ತಿ?
"ನಿನ ಮಡದಿ ಭಾಗೀರತಿ ಗೆಣತಿ ಮನೆಗೆ ಹೋಗ್ಯಾಳಪ್ಪ!"
ಗಂಡ ಮಾದೇವರಾಯ ಹತ್ತಿದ ಬತ್ತಲೆಗುದುರಿ
ಹತ್ತಿದ ಬತ್ತಲೆಗುದುರಿ ಗೆಣತಿ ಮನೆಗೆ ಸ್ವಾರಿ
ಬಂದಿರು ಮಾದೇವನ ಕಂಡಾಳು ಗೆಣತೆವ್ವ
"ಬಾಳವ್ವ ನೀರ್ ಕೊಡ ಬಸವ್ವ ನೀರ್ ಕೊಡ"
"ಬಾಳವ್ವ ನೀರ್ ಕೊಡುದ್ಯಾಕ ಬಸವ್ವ ನೀರ್ ಕೊಡುದ್ಯಾಕ!
'ನನ ಮಡದಿ ಭಾಗೀರತಿ ಎಲ್ಲಿಗ್ಹೋಗ್ಯಾಳಕ್ಕ?"
"ನಿನ ಮಡದಿ ಭಾಗೀರತಿದು ಏನು ಹೇಳಲಿ ಸೋರಿ
ನಿಮ್ಮಪ್ಪ ನಿಮ್ಮವ್ವ ಕೆರೆಗ್ಹಾರ ಕೊಟ್ಟರಂತ"
ಗಂಡ ಮಾದೇವರಾಯ ಹತ್ತಿದ ಬತ್ತಲೆಗುದುರಿ
ಹತ್ತಿದ ಬತ್ತಲೆಗುದುರಿ ಹೊಂಟಾನು ಹೌಹಾರಿ;
ಕೆರೆಯ ದಂಡೆಗೆ ಬಂದು ಕಣ್ಣೀರು ಇಟ್ಟಾನು
ಕಣ್ಣೀರು ಇಟ್ಟಾನು ನಿಟ್ಟುಸಿರು ಬಿಟ್ಟಾನು;
"ಸಾವಿರ ವರಹ ಕೊಟ್ಟರೂ ಸಿಗಲಾರದ ಸತಿ ನೀನು
ಸಿಗಲಾರದ ಸತಿ ನೀನು ನನ ಬಿಟ್ಟು ಎಲ್ಲಿ ಹೋದೆ?
ಮುನ್ನೂರು ವರಹ ಕೊಟ್ಟು ಮುತ್ತಿನೋಲೆ ಮಾಡಿಸಿದ್ದೆ
ಮುತ್ತಿನೋಲೆ ಇಟ್ಟುಗೊಳ್ಳೊ ಮುತ್ತೈದೆ ಎಲ್ಲಿಗ್ಹೋದೆ"
ಇಟ್ಟು ಮಾತಾಡಿ ಮಾದೇವ ಬಿಟ್ಟಾನು ಕಣ್ಣೀರು
ಬಿಟ್ಟಾನು ಕಣ್ಣೀರು ಹಾರಿದ ಕೆರೆ ನೀರಾಗ.
Comments
Post a Comment