#ಜೋಕುಮಾರಸ್ವಾಮಿ
#ಕುಮಾರರಾಮ
#ಬೇರೆ_ಬೇರೆಯಾ?
#ಮಲೆನಾಡಿನಲ್ಲಿ_ದೀವರು_ಆರಿದ್ರಾಮಳೆ_ಹಬ್ಬದಲ್ಲಿ_ಕುಮಾರರಾಮನ_ಪೂಜಿಸುತ್ತಾರೆ
#ಬಯಲು_ಸೀಮೆಯಲ್ಲಿ_ಬೆಸ್ತರು_ಗಣೇಶ_ಚತುರ್ಥಿ_ನಂತರ_ಜೋಕುಮಾರಸ್ವಾಮಿ_ಹಬ್ಬ_ಆಚರಿಸುತ್ತಾರೆ.
#Kumararama #jokumaraswamy #Malenadu #Bayaluseeme
#Divaru #Bestaru.
ಈ ವರ್ಷದ ಆರಿದ್ರಾ ಮಳೆ ಹಬ್ಬದಲ್ಲಿ ಮಲೆನಾಡಿನ ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಸಾಗರ- ಸೊರಬ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಿದ್ದಾಪುರ ತಾಲೂಕಿನ ಭಾಗದಲ್ಲಿನ ಮೂಲ ನಿವಾಸಿಗಳಾದ #ದೀವರ ಸಮಾಜದಲ್ಲಿ ಕುಮಾರ ರಾಮನ ಪೂಜಿಸುವ ಬಗ್ಗೆ ಬರೆದಿದ್ದೆ.
ಈ ಲೇಖನ ಸಾಮಾಜಿಕ ಜಾಲತಾಣದಲ್ಲಿ ಓದಿದ ಉತ್ತರ ಕರ್ನಾಟಕದ ಪೇಸ್ ಬುಕ್ ಗೆಳೆಯರು ಅನೇಕರು ಬಯಲು ಸೀಮೆಯ ಬೆಸ್ತರು ಗಣಪತಿ ಹಬ್ಬದ ನಾಲ್ಕನೆ ದಿನದಿಂದ ಏಳು ದಿನ #ಜೋಕುಮಾರಸ್ವಾಮಿ ಹಬ್ಬ ಆಚರಿಸುವ ಬಗ್ಗೆ ಮಾಹಿತಿ ನೀಡಿದ್ದರು.
ಮಲೆ ನಾಡಿನ ದೀವರು ಪೂಜಿಸುವ ಕುಮಾರ ರಾಮ ಬುಡಕಟ್ಟು ರಾಜಪುತ್ರ ತನ್ನ ದೀರತನ - ವೀರತ್ವ ಮತ್ತು ಮಹಿಳೆಯರ ಮೇಲಿನ ಗೌರವಾದರಗಳಿಂದ ಇತಿಹಾಸ ಸೇರಿದ ಹೈದ್ರಾಬಾದ್ ಕರ್ನಾಟಕದ ದೊರೆ ಅವನನ್ನ ಸೈನಿಕರಾಗಿದ್ದ ದೀವರು ಆರಿದ್ರಾ ಮಳೆ ಹಬ್ಬದಲ್ಲಿ ಪೂಜಿಸುತ್ತಾರೆ.
ಉತ್ತರ ಕರ್ನಾಟಕದ ಬೆಸ್ತರು ಬಾದ್ರಪದ ಚೌತಿಯ ಗಣಪತಿ ಹಬ್ಬದ ನಾಲ್ಕು ದಿನದ ನಂತರ ಬರುವ ಬಾದ್ರಪದ ಅಷ್ಟಮಿಯಂದು ಜೋಕುಮಾರ ಸ್ವಾಮಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ.
ಇಲ್ಲಿ ಪುರಾಣದ ನಂಬಿಕೆಯ ಕಥೆ ಇದೆ ಈ ಬಗ್ಗೆ #ಬೆಸ್ತ_ಸಮೂದಾಯದ_ಅಧ್ಯಯನ ಎಂಬ ಪೇಸ್ ಬುಕ್ ಪೇಜಿನ ಲೇಖನ ಇಲ್ಲಿದೆ ಓದಿ...
#ಜೋಕುಮಾರಸ್ವಾಮಿ
ಭಾದ್ರಪದ ಮಾಸದ ಚತುರ್ಥಿ ಯಂದು ಗಣೇಶನ ಜನನ ಇದೇ ಭಾದ್ರಪದ ಮಾಸದ ಅಷ್ಟಮಿಯಂದು ಜೋಕುಮಾರ ಸ್ವಾಮಿಯ ಜನನ.
ಶ್ರೀಮಂತರ ದೇವರು ಗಣೇಶ ಬಡವರ ದೇವರು ಜೋಕುಮಾರಸ್ವಾಮಿ.
------------------------------------
ಜೋಕುಮಾರ ಸ್ವಾಮಿ ಜೋಕ ಎಂಬ ಮುನಿ ಹಾಗು ಜೇಷ್ಠಾದೇವಿ( ಎಳೆಗೌರಿ ) ಮಗನೆಂದು ಹೇಳಲಾಗುತ್ತದೆ.
ಜೋಕುಮಾರ ಸ್ವಾಮಿಯ ಆಯಸ್ಸು ಕೇವಲ ಏಳು ದಿವಸಗಳು ಮಾತ್ರ, ಹುಟ್ಟಿನಿಂದಲೇ ಆತ ತನ್ನ ಕಾಮುಕ ಪ್ರವೃತ್ತಿಯಿಂದ ಉಡಾಳಗಿರಿಯಿಂದ ಊರವರಿಗೆಲ್ಲಾ ಹೊರೆಯಾಗಿ ಹೋಗುತ್ತಾನೆ.
ಜೋಕುಮಾರ ಶಿವನ ಗಣಗಳಲ್ಲಿರುವ ಪ್ರಮುಖ.
ಒಂದು ದಿನ ಶಿವ ಪಾರ್ವತಿಯರು ಗಣೇಶನನ್ನು ಭೂಲೋಕಕ್ಕೆ ಕಳಿಸುತ್ತಾರೆ ಅಲ್ಲಿ ಜನರ ಜೀವನ ,ಬೆಳೆ, ಮಳೆ, ಸಮೃದ್ಧಿಯನ್ನು ನೋಡಿ ವರದಿ ಮಾಡಲು ತಿಳಿಸುತ್ತಾರೆ.
ಆದರೆ ಗಣೇಶ ಭೂಲೋಕಕ್ಕೆ ಬಂದಾಗ ಭಕ್ತರು ಆತನನ್ನು ಅದ್ದೂರಿಯಿಂದ ಬರ ಮಾಡಿಕೊಂಡು 9-
ಹಾಗು 11 ದಿವಸದವರೆಗೆ ಅದ್ದೂರಿಯಾದ ಪೂಜೆ ಪುನಸ್ಕಾರ ಸಿಹಿ ತಿಂಡಿ ತಿನ್ನಿಸಿ ಅದ್ದೂರಿಯಾದ ಮೆರವಣಿಗೆಯೊಂದಿಗೆ ಕಳಿಸಿಕೊಡುತ್ತಾರೆ.
ಗಣೇಶ ಶಿವನಿಗೆ ವರದಿ ಮುಟ್ಟಿಸುತ್ತಾನೆ ಭೂಲೋಕದಲ್ಲಿ ಎಲ್ಲರೂ ಆರಾಮವಾಗಿ ಖುಷಿ ಖುಷಿಯಾಗಿದ್ದಾರೆ ಎಂದು.
ನಂತರ ಶಿವ ಪಾರ್ವತಿಯರು ಜೋಕುಮಾರಸ್ವಾಮಿಯನ್ನು ಕಳಿಸುತ್ತಾರೆ, ನೀನು ಭೂಲೋಕಕ್ಕೆ ಹೋಗಿ ಜನ ಜೀವನ ,ಮಳೆ, ಬೆಳೆ ಹೇಗಿದೆ ಎಂದು ನೋಡಿ ವರದಿ ಮಾಡು ಎಂದು.
ಜೋಕುಮಾರ ಸ್ವಾಮಿ ಭೂಲೋಕದಲ್ಲಿ ಬಂದು ನೋಡುತ್ತಾನೆ ಇಲ್ಲಿ ಮಳೆ ಇಲ್ಲ,ಬೆಳೆ ಇಲ್ಲ ಎಲ್ಲವೂ ಬರಡು ಬರಡಾಗಿದೆ.
ಜನ ಜೀವನ ಅಸ್ತವ್ಯಸ್ತವಾಗಿದೆ ಬಡವರು ಬಡವರಾಗಿಯೇ ಇದ್ದಾರೆ ಗ್ರಾಮದಲ್ಲಿ ಬಂದ ಜೋಕುಮಾರಸ್ವಾಮಿ ಅವನು ಎಲ್ಲಾ ತಳವರ್ಗದ ಸಮುದಾಯದ ಓಣಿಗಳಲ್ಲಿ ಸುತ್ತಾಡುತ್ತಾನೆ ಆ ಎಲ್ಲಾ ಊರಿನ ಓಣಿಗಳಲ್ಲಿ ಬಡತನ ಮಳೆ ಇಲ್ಲ ಬೆಳೆ ಇಲ್ಲ ಜನರು ಕಷ್ಟದಲ್ಲಿದ್ದಾರೆ ಎಂದು ಗೊತ್ತಾಗುತ್ತದೆ.
ಹೀಗೆ ಜೋಕುಮಾರಸ್ವಾಮಿ ಕುದುರೆ ಮೇಲೆ ಕುಳಿತುಕೊಂಡು ಭೂಲೋಕದ ಜಮೀನುಗಳಲ್ಲಿ ತಿರುಗಾಡುತ್ತಿರುತ್ತಾನೆ, ಭೂಮಿಯೆಲ್ಲ ಬರಡು ಬರಡಾಗಿದೆ ಆಗ ಜೋಕುಮಾರ ಈ ಪರಿಸ್ಥಿತಿ ನೋಡಲಾಗುವುದಿಲ್ಲ ಆಗ ತನ್ನ ಮೇಲು ಅಂಗಿಯನ್ನು ತೆಗೆದು ಆಕಾಶದ ಕಡೆಗೆ ಬೀಸುತ್ತಾನೆ ಆಗ ಮೋಡ ಮಳೆಯಾಗಿ ಸುರಿದು ಭೂಮಿಯೆಲ್ಲ ಹಚ್ಚಹಸಿರಾಗಿ ಬೆಳೆ ಹುಲುಸಾಗಿ ಬೆಳೆದು ಭೂಲೋಕ ಸಮೃದ್ಧಿಯಾಗುತ್ತದೆ.
ಮುಂಗಾರು ಮಳೆ ಬಂದು ಮುಂಗಾರು ಬೆಳೆ ಸಮೃದ್ಧಿಯಾಗಿ ಬೆಳೆಯುತ್ತದೆ.
ಈ ವರದಿಯನ್ನ ಜೋಕುಮಾರಸ್ವಾಮಿ ಕೈಲಾಸಕ್ಕೆ ಹೋಗಿ ಶಿವನಿಗೆ ಹೇಳುತ್ತಾನೆ, ಬಡವರು ಕಷ್ಟದಲ್ಲಿದ್ದಾರೆ ಮಳೆ ಬಾರದೆ ಬೆಳೆಗಳು ಬೆಳೆಯದೆ ಕಷ್ಟದಲ್ಲಿದ್ದಾರೆ ಎಂದು ವರದಿ ಮುಟ್ಟಿಸುತ್ತಾನೆ.
ಜೋಕುಮಾರ ಸ್ವಾಮಿಯ ಆಯಸ್ಸು ಏಳು ದಿವಸಗಳು ಆದರೂ ಏಳು ಅವತಾರ ಪಡೆದು ಭೂಲೋಕದಲ್ಲಿ ಸ್ತ್ರೀಯರನ್ನು ಮೋಹಿಸುತ್ತಾನೆ.
ಒಮ್ಮೆ ಊರ ಹಳ್ಳದ ಕಡೆ ಹೋಗುತ್ತಿರುವಾಗ ಜೋಕುಮಾರ ಹಳ್ಳದಲ್ಲಿ ಬಟ್ಟೆ ಒಗಿಯುತ್ತಿರುವ ಯುವತಿಯನ್ನು ಮೋಹಿಸುತ್ತಾನೆ ಪರಸ್ಪರ ಇಬ್ಬರು ಮೋಹಿತರಾಗಿರುವುದನ್ನು ಕಂಡು ಯುವತಿಯ ತಂದೆ ಜೋಕುಮಾರಸ್ವಾಮಿ ತಲೆ ಕತ್ತರಿಸಿ ನದಿಯಲ್ಲಿ ಬಿಸಾಡುತ್ತಾನೆ.
ಆ ತಲೆಯು ನದಿ ದಂಡಿಯಲ್ಲಿ ಮೀನು ಹಿಡಿಯಲು ಬಂದ ಒಬ್ಬ ಬೆಸ್ತನಿಗೆ ಸಿಗುತ್ತದೆ ತಮ್ಮ ಬೆಳೆಯನ್ನು ರಕ್ಷಿಸಿ ನಮ್ಮ ಬದುಕಿಗೆ ಆಧಾರವಾದ ಜೋಕುಮಾರಸ್ವಾಮಿಯ ತಲೆಯನ್ನು ಊರಿಗೆ ತಂದು ಊರವರೆಲ್ಲ ಸೇರಿ ಜೋಕುಮಾರನಿಗೆ ಪೂಜೆ ಸಲ್ಲಿಸುತ್ತಾರೆ ಎಂದು ಕಥೆಯಲ್ಲಿ ಹೇಳಲಾಗುತ್ತದೆ.
ಈ ಜೋಕುಮಾರನನ್ನು ಪೂಜಿಸುವ ಪದ್ಧತಿ ಇಂದಿಗೂ ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿಯೂ ನಡೆದುಕೊಂಡು ಬರುತ್ತಿದೆ.
ಗ್ರಾಮದಲ್ಲಿ ತಳವಾರ, ಬೆಸ್ತ, ಕಬ್ಬಲಿಗ, ಅಂಬಿಗ, ಗಂಗಾ ಮತಸ್ಥ ಸಮುದಾಯದವರು ಭಾದ್ರಪದ ಮಾಸದ ಅಷ್ಟಮಿಯಂದು ಹುತ್ತಿನ ಮಣ್ಣು ಮತ್ತು ಎಣ್ಣೆಯಿಂದ ಕುಂಬಾರನ ಹತ್ತಿರ ಜೋಕುಮಾರಸ್ವಾಮಿಯ ಮೂರ್ತಿ ಮಾಡಿಸಿಕೊಂಡು ಬಂದು ಮೂರ್ತಿಯನ್ನು ಒಂದು ಬುಟ್ಟಿಯಲ್ಲಿ ಇಟ್ಟುಕೊಂಡು ಏಳು ದಿವಸಗಳವರೆಗೆ ಗ್ರಾಮದ ಮನೆ ಮನೆಗಳಿಗೂ ತಿರುಗಿ ಜೋಕುಮಾರನ ಜೀವಿತ ಹಾಗೂ ಅವನ ಉಡಾಳಗಿರಿಗೆ ಸಂಬಂಧಿಸಿದ ಹಾಡುಗಳನ್ನು ತಳವಾರ ಮಹಿಳೆಯರು ಹಾಡುತ್ತಾರೆ.
ಪ್ರತಿ ಮನೆಯವರು ಜೋಕುಮಾರಸ್ವಾಮಿಯನ್ನು ಪೂಜಿಸಿ ಮರದ ತುಂಬ ಧನ ಧಾನ್ಯ ಕೊಟ್ಟು ಕಳಿಸುತ್ತಾರೆ.
ಈ ರೀತಿ ಧನ ಧಾನ್ಯ ದಾನದಿಂದ ತಮ್ಮ ಮನೆ ಜಮೀನಿನಲ್ಲಿ ಬೆಳೆ ಸಮೃದ್ಧಿಯಾಗಿ ಬೆಳೆದು ಮನೆಯಲ್ಲಿ ಸಮೃದ್ಧಿ ತುಂಬುತ್ತದೆ ಎಂಬುದು ಪ್ರತಿಯೊಬ್ಬ ಗ್ರಾಮಸ್ಥರ ನಂಬಿಕೆಯಾಗಿದೆ.
ಮಕ್ಕಳಾಗದ ಮಹಿಳೆಯರು ಜೋಕುಮಾರನನ್ನು ಭಯ ಭಕ್ತಿಯಿಂದ ಪೂಜಿಸಿದರೆ ತಮಗೆ ಮಕ್ಕಳಾಗುತ್ತವೆ ಎಂದು ಆ ಭಾಗದಲ್ಲಿ ನಂಬುತ್ತಾರೆ.
ಜೋಕುಮಾರ ಸ್ವಾಮಿ ಹುಟ್ಟಿದ ಏಳು ದಿವಸಗಳ ವರೆಗೆ ಮನೆ ಮನೆ ತಿರುಗಿ ಮನೆಯ ಕಟ್ಟೆ, ಜಗಲಿ ಮೇಲೆ ಕುಳಿತುಕೊಂಡು "ಅಡ್ಡಡ್ಡ ಮಳೆಯಾಗಿ ಗೊಡ್ಡೆಮ್ಮೆ ಹೈನಾಗಿ" ಎಂದು ಹಾಡು ಹಾಡುತ್ತಾ ಆ ಮನೆಯವರು ಕೊಟ್ಟ ಧನ ,ಧಾನ್ಯದಲ್ಲಿ ಐದಾರು ಕಾಳು ಹಾಗೂ ಬೇವಿನ ಎಲೆ ಹಿಂತಿರುಗಿ ಅವರ ಮರದಲ್ಲಿ ಹಾಕಿ ಆ ಕಾಳುಗಳನ್ನು ಹಾಗೂ ಬೇವಿನ ಎಲೆಗಳನ್ನು ತಮ್ಮ ಮನೆಯಲ್ಲಿರುವ ಧಾನ್ಯದ ಕಣಜಗಳಲ್ಲಿ, ಚೀಲಗಳಲ್ಲಿ ಹಾಕಿದರೆ ಧಾನ್ಯ ಸಮೃದ್ಧಿಯಾಗುತ್ತದೆ, ಜಮೀನುಗಳಲ್ಲಿ ಬೆಳೆ
ಹುಲುಸಾಗಿ ಬೆಳೆಯುತ್ತದೆ ಹಾಗೂ ಜಮೀನುಗಳ ಫಸಲುಗಳಿಗೆ ಹುಳು ಆಗುವುದಿಲ್ಲ ಎಂದು ರೈತರ ನಂಬಿಕೆಯಾಗಿದೆ.
ಜೋಕುಮಾರ ಸ್ವಾಮಿಯ ಪೂಜೆಯಿಂದ ಸಮೃದ್ಧವಾಗಿ ಮಳೆ ಬಂದು ಮುಂಗಾರು ಬೆಳೆ ಹುಲಸಾಗಿ ಬೆಳೆಯುತ್ತದೆ ಎಂದು ರೈತರಲ್ಲಿ ನಂಬಿಕೆ ಇರುವುದರಿಂದ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳ ಹಳ್ಳಿಗಳಲ್ಲಿ ಈ #ಜೋಕುಮಾರಸ್ವಾಮಿಯನ್ನು ಭಯ ಭಕ್ತಿಯಿಂದ ಪೂಜಿಸುತ್ತಾರೆ.
ಅದು ವಿಶೇಷವಾಗಿ ಬೆಸ್ತರು ವಿಶಿಷ್ಟವಾಗಿ ಈ ಜೋಕುಮಾರ ಸ್ವಾಮಿಯ ಪೂಜೆಯ ಉಸ್ತುವಾರಿಯನ್ನು ವಹಿಸಿಕೊಂಡಿರುತ್ತಾರೆ.
ಆರಿದ್ರಾ ಮಳೆ ಹಬ್ಬದಲ್ಲಿ ಪೂಜಿಸುವ
#ಕುಮಾರರಾಮ ಸಮಾಜ ಮುಖಿ ಜಾಲತಾಣದಲ್ಲಿನ ಲೇಖನದಲ್ಲಿ....
ಬುಡಕಟ್ಟು ರಾಜಪುತ್ರ ಕುಮಾರರಾಮ ತನ್ನ ವೀರತ್ವ,ಧೀರತನ, ಮಹಿಳೆಯರ ಮೇಲಿನ ಗೌರವಾದರಗಳಿಂದ ಇತಿಹಾಸ ಸೇರಿದ ಹೈದರಾಬಾದ್ ಕರ್ನಾಟಕದ ದೊರೆ. ವಿಜಯನಗರ ಸಾಂಮ್ರಾಜ್ಯದ ಮೂಲ ಪುರುಷ ಎಂದು ಗುರುತಿಸಲಾಗುವ ಕುಮಾರ ರಾಮನನ್ನು ಹೈದರಾಬಾದ್ ಕರ್ನಾಟಕ ಜನತೆ ಈಗಲೂ ಗೌರವದಿಂದ ಸ್ಮರಿಸಿ ಆರಾಧಿಸುತ್ತಾರೆ.
ಆದರೆ ಇದೇ ಕುಮಾರರಾಮನನ್ನು ಮಲೆನಾಡಿನ ಜನ ಪ್ರತಿವರ್ಷ ಸ್ಮರಿಸಿ, ಪೂಜಿಸುವ ಸಂಪ್ರದಾಯವೊಂದು ಮಲೆನಾಡು ಭಾಗದಲ್ಲಿದೆ.
ಬನವಾಸಿ,ಸಿದ್ಧಾಪುರ, ಶಿರಸಿ,ಸಾಗರ, ಸೊರಬಾಗಳು ಸೇರಿದಂತೆ ಮಲೆನಾಡಿನ ಬಹುತೇಕ ಕಡೆ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಆಚರಿಸುವ ಹನಿಹಬ್ಬವನ್ನು ಆರಿದ್ರಮಳೆ ಹಬ್ಬ ಎಂದು ಕರೆಯುತ್ತಾರೆ.
ಸಿದ್ಧಾಪುರದ ಕೋಲಶಿರ್ಸಿ,ಮನ್ಮನೆ,ಬೇಡ್ಕಣಿ,ಹುಸೂರು,ಅವರಗುಪ್ಪ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಈ ಆಚರಣೆ ವಿಜೃಂಬಣೆಯಿಂದ ನಡೆಯುತ್ತದೆ.
ವಿಜಯನಗರ ಸಾಂಮ್ರಾಜ್ಯ ಮತ್ತು ಅದಕ್ಕಿಂತ ಹಿಂದೆ ಮಲೆನಾಡಿನ ಧೀವರು ಸೈನಿಕರು, ರಾಜರೂ ಆಗಿ ಮೆರೆದವರು.
ತಮ್ಮ ಹಳೆಫೈಕ ಸಂಸ್ಕೃತಿ ಮತ್ತು ಸಂಪ್ರದಾಯದ ರೂಢಿಯಂತೆ ಮಳೆಗಾಲದ ಯುದ್ಧವಿರಾಮ ಕಾಲದಲ್ಲಿ ಈ ಸೈನಿಕರ ಪೂರ್ವಜರು ವರ್ಷಕ್ಕೊಮ್ಮೆ ಹನಿ ಹಬ್ಬ ಎಂದು ಆಚರಿಸುತಿದ್ದರಂತೆ.
ಪ್ರತಿವರ್ಷ ಆರಿದ್ರ ಮಳೆ ಪ್ರಾರಂಭವಾದ ಕಾಲ ಮತ್ತು ಈ ಆರಿದ್ರ ಮಳೆ ಕಳೆದ ಮೇಲೂ ಮಲೆನಾಡಿನ ಜನ ಆಚರಿಸುವ ಹನಿ ಹಬ್ಬ ಆರಿದ್ರಮಳೆ ಹಬ್ಬ ಎಂದು ಪ್ರಸಿದ್ಧವಾಗಿದೆ.
ಯುದ್ಧವಿರಾಮ ಕಾಲದಲ್ಲಿ ಕೃಷಿ ಮಾಡುತಿದ್ದ ಆದಿ ಸೈನಿಕರು ವರ್ಷಕ್ಕೊಮ್ಮೆ ಸೇರಿ ಆಚರಿಸುತಿದ್ದ ಈ ಹನಿ ಅಥವಾ ಮಳೆಹಬ್ಬದಲ್ಲಿ ರಾಮ ಆಥವಾ ಗಾಮ ಎನ್ನಲಾಗುವ ಕುಮಾರರಾಮನ ಮುಖವಾಡವನ್ನು ಪೂಜಿಸುವುದು ವಾಡಿಕೆ.
ಗಾಮನಮುಖ, ಸೈನಿಕರ ಮುಖವಾಡ, ಕುದುರೆ ಹೀಗೆ ಯುದ್ಧ,ಸೈನ್ಯವನ್ನು ಪ್ರತಿನಿಧಿಸುವ ಚಹರೆಗಳು ಈ ಹಬ್ಬದ ಕೇಂದ್ರ ಬಿಂದು.
ಯುವಕರು, ನವವಿವಾಹಿತರು ಈ ಮುಖಗಳನ್ನು ಹೊತ್ತು ಗಡಿದೇವರುಗಳನ್ನು ಪೂಜಿಸಿ, ಕೆಂಡದ ಮೇಲೆ ನಡೆಯುವುದು ವಿಶೇಷವಾದರೆ, ಹೆಂಗಳೆಯರು ಈ ಸೈನಿಕ ಪುರುಷರ ಕಾಲು ತೊಳೆದು ಗೌರವಿಸುವ ನವಜಾತ ಶಿಶುಗಳಿಗೆ ಆರೋಗ್ಯಕ್ಕಾಗಿ ಹೊತ್ತ ಹರಕೆಯನ್ನು ತೀರಿಸಲು ಈ ಅವಕಾಶವನ್ನು ಉಪಯೋಗಿಸುತ್ತಾರೆ.
ಇಂಥ ವೈಶಿಷ್ಟ್ಯಮಯ ಆಚರಣೆ, ರೂಢಿ, ಸಂಪ್ರದಾಯಗಳ ಹಿಂದೆ ಮಲೆನಾಡಿನ ಮೂಲನಿವಾಸಿಗಳು ಶ್ರಮಿಕರು, ಯೋಧರು, ಸಾಹಸಿಗಳು ಎಂದು ನೆನಪಿಸುವ ಆಚರಣೆ.
ಈ ಆಚರಣೆಯಲ್ಲಿ ಕುಮಾರರಾಮನ ಸ್ಮರಣೆ, ಆಧರಣೆಕೂಡಾ. ವೀರತನ, ಧೀರತ್ವ, ಮಹಿಳೆಯರ ಬಗೆಗಿನ ಕುಮಾರರಾಮನ ಗೌರವ ಸ್ಮರಿಸಿ, ಗೌರವಿಸುವುದೇ ಈ ಆಚರಣೆಗಳ ಹಿಂದಿನ ಉದ್ದೇಶ.
ಇಲ್ಲಿ ಕುಮಾರರಾಮ ಮತ್ತು ಜೋಕುಮಾರ ಸ್ವಾಮಿ ಬೇರೆ ಬೇರೆಯಾ? ಎಂಬ ಪ್ರಶ್ನೆ ಮೂಡುತ್ತದೆ ಕಾರಣ ಈ ಹಬ್ಬದ ಆಚರಣೆಯ ಮೂರ್ತಿ -ಕುದುರೆ ಮತ್ತು ಪೂಜೆಗಳಲ್ಲಿ ಸಾಮ್ಯತೆ ಇದೆ.
ಆರಿದ್ರಾ ಮಳೆ ಸಂದರ್ಭ ಮಲೆನಾಡಿನ ದೀವರು ಪೂಜಿಸುವ ಕುಮಾರ ರಾಮ ಅರಸನಾದರೆ ಬಾದ್ರಪದ ಅಷ್ಟಮಿಯಲ್ಲಿ ಬಯಲು ಸೀಮೆಯ ಬೆಸ್ತರು ಪೂಜಿಸುವ ಜೋಕುಮಾರ ಶಿವನ ಗಣ.
ಈ ಬಗ್ಗೆ ಸಂಶೋದಕರು ಸಂಶೋಧನೆ ಮಾಡಿ ಹೆಚ್ಚಿನ ಮಾಹಿತಿ ನೀಡಬಹುದಾಗಿದೆ.
ಕಾಮೆಂಟ್ ಲಿಂಕ್ ನಲ್ಲಿ ಮೂಲ ಲೇಖನಗಳಿದೆ.
Comments
Post a Comment