#ಮಲೆನಾಡಿನ_ಆರಿದ್ರಮಳೆ_ಹಬ್ಬದ_ವಿಶಿಷ್ಟ_ಆಚರಣೆಯ_ಹಿನ್ನೆಲೆ
#ಸಮಾಜಮುಖಿಯಲ್ಲಿ_ಕನ್ನೇಶ್ವರರಾಮ_ಬರೆದ_ಲೇಖನ
#aridranakshatra #malenadu #divaru #kunararama
ಮಲೆನಾಡಿನಲ್ಲಿ ಈ ವರ್ಷ ಆರಿದ್ರಾ ಮಳೆ ಭರಪೂರ ಸುರಿದಿದೆ 4-ಜುಲೈ-2025ಕ್ಕೆ ಆರಿದ್ರ ಮಳೆ ಮುಕ್ತಾಯ ಆಯಿತು ಈಗ ಪುನರ್ವಸು ಮಳೆ ಪ್ರಾರಂಭ ಆಗಿದೆ.
ಆರಿದ್ರ ನಕ್ಷತ್ರದ ಮಳೆಗೆ ಆಡು ಮಾತಿನಲ್ಲಿ ಆದ್ರೆ ಮಳೆ ಎಂಬ ಸಂಕ್ಷಿಪ್ತ ಪದ ಬಳಕೆ ಬಂದಿದೆ.
ಅನೇಕ ಗಾದೆಗಳೂ ಇದೆ ಅದರಲ್ಲಿ "ಆರಿದ್ರ ಮಳೆ ಆಗದೆ ಗುಡುಗಿದರೆ ಆರು ಮಳೆ ಆಗುವುದಿಲ್ಲ"
"ಆರಿದ್ರ ಮಳೆ ಆರದೆ ಹುಯ್ಯುತ್ತದೆ"
" ಆರಿದ್ರ ಇಲ್ಲದಿದ್ದರೆ ದರಿದ್ರ ಖಂಡಿತಾ "
" ಆರಿದ್ರ ಮಳೆಗೆ ಆದವನೆ ಗಂಡ"... ಹೀಗೆ ಹಲವಾರು.
#ಸಮಾಜಮುಖಿಯಲ್ಲಿ_ಕುಮಾರರಾಮರ_ಲೇಖನ
ಬುಡಕಟ್ಟು ರಾಜಪುತ್ರ ಕುಮಾರರಾಮ ತನ್ನ ವೀರತ್ವ,ಧೀರತನ, ಮಹಿಳೆಯರ ಮೇಲಿನ ಗೌರವಾದರಗಳಿಂದ ಇತಿಹಾಸ ಸೇರಿದ ಹೈದರಾಬಾದ್ ಕರ್ನಾಟಕದ ದೊರೆ. ವಿಜಯನಗರ ಸಾಂಮ್ರಾಜ್ಯದ ಮೂಲ ಪುರುಷ ಎಂದು ಗುರುತಿಸಲಾಗುವ ಕುಮಾರ ರಾಮನನ್ನು ಹೈದರಾಬಾದ್ ಕರ್ನಾಟಕ ಜನತೆ ಈಗಲೂ ಗೌರವದಿಂದ ಸ್ಮರಿಸಿ ಆರಾಧಿಸುತ್ತಾರೆ. ಆದರೆ ಇದೇ ಕುಮಾರರಾಮನನ್ನು ಮಲೆನಾಡಿನ ಜನ ಪ್ರತಿವರ್ಷ ಸ್ಮರಿಸಿ, ಪೂಜಿಸುವ ಸಂಪ್ರದಾಯವೊಂದು ಮಲೆನಾಡು ಭಾಗದಲ್ಲಿದೆ.
ಬನವಾಸಿ,ಸಿದ್ಧಾಪುರ, ಶಿರಸಿ,ಸಾಗರ, ಸೊರಬಾಗಳು ಸೇರಿದಂತೆ ಮಲೆನಾಡಿನ ಬಹುತೇಕ ಕಡೆ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಆಚರಿಸುವ ಹನಿಹಬ್ಬವನ್ನು ಆರಿದ್ರಮಳೆ ಹಬ್ಬ ಎಂದು ಕರೆಯುತ್ತಾರೆ. ಸಿದ್ಧಾಪುರದ ಕೋಲಶಿರ್ಸಿ,ಮನ್ಮನೆ,ಬೇಡ್ಕಣಿ,ಹುಸೂರು,ಅವರಗುಪ್ಪ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಈ ಆಚರಣೆ ವಿಜೃಂಬಣೆಯಿಂದ ನಡೆಯುತ್ತದೆ.
ವಿಜಯನಗರ ಸಾಂಮ್ರಾಜ್ಯ ಮತ್ತು ಅದಕ್ಕಿಂತ ಹಿಂದೆ ಮಲೆನಾಡಿನ ಧೀವರು ಸೈನಿಕರು, ರಾಜರೂ ಆಗಿ ಮೆರೆದವರು. ತಮ್ಮ ಹಳೆಫೈಕ ಸಂಸ್ಕೃತಿ ಮತ್ತು ಸಂಪ್ರದಾಯದ ರೂಢಿಯಂತೆ ಮಳೆಗಾಲದ ಯುದ್ಧವಿರಾಮ ಕಾಲದಲ್ಲಿ ಈ ಸೈನಿಕರ ಪೂರ್ವಜರು ವರ್ಷಕ್ಕೊಮ್ಮೆ ಹನಿ ಹಬ್ಬ ಎಂದು ಆಚರಿಸುತಿದ್ದರಂತೆ. ಪ್ರತಿವರ್ಷ ಆರಿದ್ರ ಮಳೆ ಪ್ರಾರಂಭವಾದ ಕಾಲ ಮತ್ತು ಈ ಆರಿದ್ರ ಮಳೆ ಕಳೆದ ಮೇಲೂ ಮಲೆನಾಡಿನ ಜನ ಆಚರಿಸುವ ಹನಿ ಹಬ್ಬ ಆರಿದ್ರಮಳೆ ಹಬ್ಬ ಎಂದು ಪ್ರಸಿದ್ಧವಾಗಿದೆ. ಯುದ್ಧವಿರಾಮ ಕಾಲದಲ್ಲಿ ಕೃಷಿ ಮಾಡುತಿದ್ದ ಆದಿ ಸೈನಿಕರು ವರ್ಷಕ್ಕೊಮ್ಮೆ ಸೇರಿ ಆಚರಿಸುತಿದ್ದ ಈ ಹನಿ ಅಥವಾ ಮಳೆಹಬ್ಬದಲ್ಲಿ ರಾಮ ಆಥವಾ ಗಾಮ ಎನ್ನಲಾಗುವ ಕುಮಾರರಾಮನ ಮುಖವಾಡವನ್ನು ಪೂಜಿಸುವುದು ವಾಡಿಕೆ.
ಗಾಮನಮುಖ, ಸೈನಿಕರ ಮುಖವಾಡ, ಕುದುರೆ ಹೀಗೆ ಯುದ್ಧ,ಸೈನ್ಯವನ್ನು ಪ್ರತಿನಿಧಿಸುವ ಚಹರೆಗಳು ಈ ಹಬ್ಬದ ಕೇಂದ್ರ ಬಿಂದು. ಯುವಕರು, ನವವಿವಾಹಿತರು ಈ ಮುಖಗಳನ್ನು ಹೊತ್ತು ಗಡಿದೇವರುಗಳನ್ನು ಪೂಜಿಸಿ, ಕೆಂಡದ ಮೇಲೆ ನಡೆಯುವುದು ವಿಶೇಶವಾದರೆ ಹೆಂಗಳೆಯರು ಈ ಸೈನಿಕ ಪುರುಷರ ಕಾಲು ತೊಳೆದು ಗೌರವಿಸುವ ನವಜಾತ ಶಿಶುಗಳಿಗೆ ಆರೋಗ್ಯಕ್ಕಾಗಿ ಹೊತ್ತ ಹರಕೆಯನ್ನು ತೀರಿಸಲು ಈ ಅವಕಾಶವನ್ನು ಉಪಯೋಗಿಸುತ್ತಾರೆ. ಇಂಥ ವೈಶಿಷ್ಟ್ಯಮಯ ಆಚರಣೆ, ರೂಢಿ, ಸಂಪ್ರದಾಯಗಳ ಹಿಂದೆ ಮಲೆನಾಡಿನ ಮೂಲನಿವಾಸಿಗಳು ಶ್ರಮಿಕರು, ಯೋಧರು, ಸಾಹಸಿಗಳು ಎಂದು ನೆನಪಿಸುವ ಆಚರಣೆ. ಈ ಆಚರಣೆಯಲ್ಲಿ ಕುಮಾರರಾಮನ ಸ್ಮರಣೆ, ಆಧರಣೆಕೂಡಾ. ವೀರತನ, ಧೀರತ್ವ, ಮಹಿಳೆಯರ ಬಗೆಗಿನ ಕುಮಾರರಾಮನ ಗೌರವ ಸ್ಮರಿಸಿ, ಗೌರವಿಸುವುದೇ ಈ ಆಚರಣೆಗಳ ಹಿಂದಿನ ಉದ್ದೇಶ.
*** **** *** **** ***
#ನಮ್ಮ_ಹೊಸನಗರ_ತಾಲ್ಲೂಕಿನ_ಬರಹಗಾರರಾದ_ಉಮೇಶ್_ಮಳೆಮಟ್_ಲೇಖನ
*ಆದ್ರೆ ಮಳೆ ಹಬ್ಬ*
ಮಳೆಗಾಲದ ಆದ್ರೆ ಮಳೆ ಶುರುವಾಯಿತೆಂದರೆ ಮಲೆನಾಡಿನ ಹೊಸನಗರ ಸಾಗರ ತೀರ್ಥಹಳ್ಳಿ ತಾಲ್ಲೂಕಿನ ಬಹುತೇಕ ದೀವರು ಒಂದು ವಿಶಿಷ್ಠ ವಾದ ಹಬ್ಬ ಆಚರಿಸುತ್ತಾರೆ ...
ಅದೇ ಆರಿದ್ರಾ ,ಅಥವಾ ಆದ್ರೆ ಮಳೆ ಹಬ್ಬ....ಪ್ರಕೃತಿ ಪ್ರಿಯರಾದ ಇವರು ದ್ರಾವಿಡ ಪoರಪರೆಯ ಮೂಲ ಪುರುಷರು. ಗಿಡ, ಮರ ,ಬೆಂಕಿ, ನೀರು ಇವರು ಆರಾಧಿಸುವ ದೇವರುಗಳು...ಈ ಸಮಾಜದ ಹಿಂದಿನ ಇವರ ಪೂರ್ವಜರು ನಾಯಕ, ಸೈನಿಕ,ರಾಜರಾಗಿ ಸತ್ಯ ಧರ್ಮ ,ಹೋರಾಟದ ಮೂಲಕ ಪವಾಡ ಪುರುಷರಾಗಿ ಈ ಜನಾಂಗದವರಿಂದ ದುರ್ಗಿ ಚೌಡಿ ಮಾಸ್ತಿ,ಭೂತ ಜಟಗ,ಕುಮಾರ ರಾಮ ಗಾಮ ಮುಂತಾದ ಹೆಸರಿನಿಂದ ಅರಾಧಿಸಲ್ಪಟ್ಟು ದೇವ ಸ್ವರೂಪಿಯಾಗಿ ಮಾರ್ಪಟ್ಟಿದ್ದಾರೆ...
ಮೂಲತಃ ಕೃಷಿ ಯಿಂದ ಬಂದ ಇವರು ಮಳೆಗಾಲ ಆರಂಭವಾಗಿ ಆದ್ರೆ ಮಳೆಯಲಿ ತಮ್ಮ ಕೃಷಿ ಚಟವಟಿಕೆಗಳಿಗೆ ಮಳೆ ಬೆಳೆ ಸಮೃದ್ಧಿಯಾಗಿ ಬರಲೆಂದು ತಮ್ಮ ಇಷ್ಟ ದೇವರುಗಳನ್ನು ನೆನೆದು ಪೂಜಿಸುವ ಹಬ್ಬವೇ ಆದ್ರೆ ಮಳೆಹಬ್ಬ.....
ಸಾಮಾನ್ಯ ವಾಗಿ ಈ ಹಬ್ಬವನ್ನು ಕುರಿ ಕೋಳಿ ಯನ್ನು ಬಲಿ ಕೊಡುವ ಮೂಲಕ ತಮ್ಮ ದೈವಗಳನ್ನು ಸಂತೃಪ್ತಿ ಪಡಿಸುತ್ತಾರೆ..ಅಲ್ಲದೆ ಕಾಯಿ ,ಬಾಳೆಗೊನೆ, ಚಿಪ್ಪು ಇಡುವುದರ ಮೂಲಕ ತಮ್ಮ ಯಾತಾನುಶಕ್ತಿಯ ಭಕ್ತಿ ಸಮರ್ಪಿಸುತ್ತಾರೆ...ಅಲ್ಲದೆ ಅಂದು ಮನೆಮಾರು ಸ್ವಚ್ಚ ಗೊಳಿಸಿ ,ಅಡಿಗೆ ಮನೆಯ ಇಡುಕಲು ಮೇಲೆ ತುಂಬಿದ ಕೊಡ ಇಟ್ಟು ದೀಪ ಹಚ್ಚಿ , ಮುಖ್ಯವಾಗಿ ಹಲಸಿನ ಹಣ್ಣಿನ ಕೊಟ್ಟೆ ಕಡುಬು , ಕಡ್ಲೆ ಬೇಳೆ ಪಲ್ಯ ಮತ್ತು ಅಕ್ಕಿಯಿಂದ ದೊಡ್ಡಕ್ಕಿ ಪಾಯಸ ಮಾಡಿ , ತಮ್ಮ ದೈವಗಳ ಲೆಕ್ಕದಲ್ಲಿ ಮೂರು ಐದು ,ಏಳು ಎಡೆ ಇಟ್ಟು ಪೂಜಿಸಿ ಪ್ರಸಾದ ಸ್ವೀಕರಿಸುತ್ತಾರೆ. ಅಲ್ಲದೆ ಕೀಳು ಎಡೆ ಒಂದನ್ನು ಮಾಡಿ ಸತ್ತವರ ನೆನಪಿಗೆ ಹೊರಗೆ ಕಾಗೆಗೆ ಚಪ್ಪರದ ಮೇಲೋ ಅಥವಾ ಬೇಲಿಯ ಮೇಲೆ ಇಟ್ಟು ಬರುತ್ತಾರೆ....
ಅಷ್ಟೊತ್ತಿಗಾಗಲೇ ಮರದ , ಅಥವಾ ಕಟ್ಟೆಯ ಬುಡ ದಲ್ಲಿ ನೆಲೆ ಹಾಕಿದ ದೈವಗಳಿಗೆ ಕುರಿ ಕೋಳಿ ಬಲಿ ಕೊಟ್ಟು ತಮ್ಮ ಹರಕೆ ತೀರಿಸುತ್ತಾರೆ.
ಇದು ನಂಬಿದ ಅವರ ದೈವ ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿ....ದ್ರಾವಿಡ ಸಂಸ್ಕೃತಿಯ ಹೆಗ್ಗುರುತು...ಅವರು ಬದುಕಿ ಬಾಳಿದ ಮಣ್ಣಿನ ವಾಸನೆಯ ಪ್ರತೀಕ....
ಇನ್ನೂ ಹಬ್ಬದ ವಿಶೇಷ ಇರುವುದೇ ಮಧ್ಯಾಹ್ನ ದ ನಂತರ. ಹಬ್ಬಕ್ಕಾಗಿ ಮೊದಲೇ ನೆಂಟರು ದಿಷ್ಟರಿಗೆ ಕರೆಯೋಲೆ ಹೋಗಿರುತ್ತದೆ... ಅಳಿಯ ಮಗಳು , ಬಾವನೆಂಟ ,ಅಜ್ಜ ಮೊಮ್ಮಕ್ಕಳು ಹೀಗೆ ಸಂಜೆ ಕಳ್ಳು ಬಳ್ಳಿ ಸಂಬಂದಗಳ ಕಲರವ...ದೂರದ ಸಂಬಂಧಿಗಳು ಪೇಟೆ ಕಡೆ ಸ್ನೇಹಿತರು ಕೂಡ ಬಿರುಮಳೆ ಬೀಸೋ ಗಾಳಿ ಲೆಕ್ಕಿಸದೆ ಕಾರು ಬೈಕುಗಳಲ್ಲಿ ಬಂದು ಸಂಬಂಧಗಳ ಕುರುಹುಗಳನ್ನು ತೋರ್ಪಡಿಸುತ್ತಾರೆ....
ಹೀಗೆ ಬಂದ ಅತಿಥಿಗಳಿಗೆ ಬೆಚ್ಚಗೆ ಮಾಡಲು ಆಲೆಮನೆ ಜಂಡಿನ ಸಾರಾಯಿ ,ಗೌರ್ಮೆಂಟ್ ಎಣ್ಣೆ, ಕೊಟ್ಟು ಮರ ಹತ್ತೋ ಮಂಗಗೆ ಏಣಿ ಕೊಟ್ಟoಗೆ ಮಾಡಿ ಹೀಗೆ ಕುಶಿ ಪಡುತ್ತಾರೆ... ಸುಖ ದುಃಖ ಕೇಳಿ ,ಶುಂಠಿ ನೆಟ್ಟಾಯ್ತ , ಜೋಳ ಹಾಕಿದ್ರ್ಯಾ , ತೋಟಕ್ಕೆ ಕೊಳೆ ಔಷದಿ ಆಯ್ತಾ ಅಂತ ಎಲ್ಲ ಮುಗಿದ
ನಂತರ ಶುರುವಾಗುವುದೇ ಮಲೆನಾಡಿನ ರಂಗಿನ ರಾಜಕಾರಣದ ಚರ್ಚೆ....ಈಗೀಗ ಮಲೆನಾಡಿನ ದೀವರಲ್ಲಿ ಜಾತಿಕಾರಣ ಹೋಗಿ ಎರಡು ಪಕ್ಷಗಳಾಗಿವೆ....ತಮ್ತಮ್ಮ ಪಕ್ಷಗಳ ಪರ ಚರ್ಚೆ ,ಏರುದನಿಯಲ್ಲಿ ಪರಾಕಾಷ್ಠೆಗೆ ತಲುಪಿ ಕುಡಿದ ಅಮಲಿನ ಜೊತೆಗೆ ಇಳಿಯುತ್ತದೆ...
ಕೆಲ ಕಡೆ ಊರುಗಳಲ್ಲಿ ಪ್ರತಿ ಮನೆಯವರು ಬೇರೆ ಬೇರೆ ದಿನಗಳಲ್ಲಿ ಹಬ್ಬ ಇಟ್ಟುಕೊಂಡು ಈ ಮಳೆಯ ಇಡೀ ಹದಿನೈದು ದಿನ ಹಬ್ಬ ಮಾಡಿ ಊರೆಲ್ಲಾ ಉಣಬಡಿಸುತ್ತಾರೆ...
ಬಂದ ನೆಂಟರಿಗೆ ಹಲಸಿನ ಹಣ್ಣಿನ ಕಡುಬು, ಕೊಟ್ಟೆ ಕಡುಬು, ಕೋಳಿ ಕಜ್ಜಾಯ, ಕುರಿ ಕೋಳಿ ಸಾರಿನ ಜೊತೆಗೆ ನೆಂಟರ ಮನೆಯವರಿಗೂ ಪೊಟ್ಟಣ ಕಟ್ಟಿ ಹೋಗುತ್ತದೆ...
ಹೀಗೆ ಪರಿಸಮಾಪ್ತಿಯಾದ ಆದ್ರೆ ಮಳೆ ಹಬ್ಬದ ನೆನಪಿನ ಗಂಟಿ ನೊಂದಿಗೆ ಜನ ಗದ್ದೆ ನಟ್ಟಿಯತ್ತ ಹೊರಳುತ್ತಾರೆ...
✍️ ಉಮೇಶ್ ಮಳೆಮಟ್
Comments
Post a Comment