#ನಾಗರ_ಹಾವೆ_ಹಾವಳು_ಹೂವೆ
#ಬಾಲ್ಯದಲ್ಲಿ_ಬಾಯಿಪಾಠ_ಮಾಡಿ_ಸುಶ್ರಾವ್ಯವಾಗಿ_ಹಾಡುತ್ತಿದ್ದ
#ಪಂಜೆ_ಮಂಗೇಶರಾಯರ_ಮಕ್ಕಳ_ಗೀತೆ.
#Panjemangeshrayaru #Poetry #Nagarahave
#British #Ruler
ನಾಗರಹಾವೆ ಹಾವೊಳು ಹೂವೆ ಪ೦ಜೆ ಮಂಗೇಶರಾಯರ ಪ್ರಸಿದ್ಧ ಬಾಲಗೀತೆ, ಕವಿತೆಯು ಆಂಗ್ಲರನ್ನು ಪ್ರತಿಮಾರೂಪದಿಂದ ಉದ್ದೇಶಿಸಿ ಬರೆದ ಕವಿತೆಯಾಗಿದೆ.
ಬಾಲ್ಯದಲ್ಲಿ ನಮಗೆ ಈ ಪ್ರತಿಮಾರೂಪ ಅರ್ಥವಾಗಿರಲಿಲ್ಲ ಆಗಿನ ನಮ್ಮ ಶಿಕ್ಷಕರೂ ಹೇಳಿರಲಿಲ್ಲ ಆದರೆ ಮಲೆನಾಡಿನ ನಮಗೆ ನಾಗರ ಹಾವು ಹಾವೊಳು ಹೂವಾಗಿ ಕಾಣುತ್ತಿರಲಿಲ್ಲ ಮತ್ತು ಬಾಗಿಲ ಬಿಲದಲ್ಲಿ ಅದು ವಾಸವೂ ಇರಲು ಬಿಡುತ್ತಿರಲಿಲ್ಲ ಆದ್ದರಿಂದ ಈ ಪದ್ಯ ಸುಶ್ರಾವ್ಯವಾಗಿ ಬಾಯಿಪಾಠ ಮಾಡಿ ಕೊಂಡು ಹೇಳುತ್ತಿದ್ದರೂ ಇದರ ಅರ್ಥ ನಮಗೆ ಆಗುತ್ತಿರಲಿಲ್ಲ.
ಪಂಜೆ ಮಂಗೇಶರಾಯರು (ಜನನ: 1874 -ಫೆಬ್ರುವರಿ-22, ನಿಧನ: 1937- ಅಕ್ಟೋಬರ - 24 ). ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲ ಬಾರಿಗೆ ಸಣ್ಣ ಕಥೆಗಳನ್ನು ರಚಿಸಿದ್ದಾರೆ.
ಕವಿಶಿಷ್ಯ ಕಾವ್ಯನಾಮದಿಂದ ಖ್ಯಾತರಾಗಿದ್ದು, ಕನ್ನಡ ಭಾಷೆಯ ಅಧ್ಯಾಪಕರಾಗಿ, ಶಾಲಾ ಇನ್ಸ್‌ಪೆಕ್ಟರಾಗಿ, ಟ್ರೈನಿಂಗ್ ಶಾಲೆಯ ಅಧ್ಯಾಪಕರಾಗಿ, ಪರೀಕ್ಷಾಧಿಕಾರಿಗಳಾಗಿ ದುಡಿದ ಪ್ರಾತಃಸ್ಮರಣೀಯ ಸಾಹಿತಿಗಳು.
ಶಿಶು ಸಾಹಿತ್ಯದಲ್ಲಿ ಅಪಾರ ಮುತುವರ್ಜಿಯ ಸೇವೆ ಸಲ್ಲಿಸಿದವರು.
"ನಾಗರ ಹಾವೆ! ಹಾವೊಳು ಹೂವೆ!" ಎನ್ನುವುದು ಪ್ರಸಿದ್ಧ ಕನ್ನಡ ಕವಿ ಮತ್ತು ಮಕ್ಕಳ ಗೀತೆಗಳ ರಚನೆಕಾರರಾದ ಪಂಜೆ ಮಂಗೇಶರಾಯರು ರಚಿಸಿದ ಹಾವಿನ ಹಾಡಿನ ಒಂದು ಸಾಲು.
ಇದು ಪ್ರಸಿದ್ಧವಾದ ಮಕ್ಕಳ ಗೀತೆಯಾಗಿದ್ದು, ಈ ಹಾಡಿನಲ್ಲಿ ನಾಗರ ಹಾವು ಬಾಗಿಲಲ್ಲಿರುವ ಬಿಲದಲ್ಲಿ ತನ್ನ ಸ್ಥಾನವನ್ನು ಹುಡುಕುತ್ತಿದೆ ಎಂದು ಕವಿ ಹೇಳಿದ್ದಾರೆ.
#ಪಂಜೆ_ಮಂಗೇಶರಾಯರ
"ನಾಗರಹಾವೇ ಹಾವೊಳು ಹೂವೇ" ಗೀತೆಯ ಪೂರ್ಣ ಸಾಲುಗಳು ಇಲ್ಲಿವೆ...
ನಾಗರ ಹಾವೆ! ಹಾವೊಳು ಹೂವೆ!
ಬಾಗಿಲ ಬಿಲದಲಿ ನಿನ್ನಯ ಠಾವೆ?
ಕೈಯನು ಮುಗಿವೆ, ಹಾಲನ್ನೀವೆ
ಬಾ, ಬಾ, ಬಾ, ಬಾ!
ಹಳದಿಯ ಹೆಡೆಯನು ಬಿಚ್ಚೋ ಬೇಗಾ!
ಹೊಳಹಿನ ಹೊಂದಲೆ ತೂಗೋ, ನಾಗಾ!
ಕೊಳಲನ್ನೂದುವೆ ಲಾಲಿಸು ರಾಗಾ!
ನೀ, ನೀ, ನೀ, ನೀ!
ಎಲೆ ನಾಗಣ್ಣ ಹೇಳೆಲೋ ನಿನ್ನ
ತಲೆಯಲ್ಲಿರುವ ನಿಜವನ್ನಾ?
ಬಡುಬಗ್ಗರಿಗೆ ಕೊಪ್ಪರಿಗೆಯ ಚಿನ್ನ
ತಾ, ತಾ, ತಾ, ತಾ!
ಬರೀ ಮೈ ಸಣ್ಣಗೆ, ಮೊಗದಲಿ ಬಿಸಿ ಹಗೆ,
ಎರಡೆಳೆ ನಾಲಗೆ ಇದ್ದರೂ ಸುಮ್ಮಗೆ,
ಎರಗುವೆ ನಿನಗೆ ಈಗಲೆ ಹೊರಗೆ!
ಪೋ, ಪೋ, ಪೋ, ಪೋ!
#ಕವಿ_ಪಂಜೆ_ಮಂಗೇಶರಾಯರ_ಮಾಹಿತಿ...
ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಹತ್ತಿರವಿರುವ ಪಂಜ ಎಂಬಲ್ಲಿ ಮಂಗೇಶರಾಯರ ಪೂರ್ವಜರು ವಾಸಿಸುತ್ತಿದ್ದರು. ರಾಯರ ಮುತ್ತಜ್ಜ ದಾಸಪ್ಪಯ್ಯನವರ ಅಕಾಲ ಮರಣದ ನಂತರ ಅವರ ಪತ್ನಿ ತನ್ನ ಕುಟುಂಬದೊಡನೆ ನೇತ್ರಾವತಿ ನದಿಯ ದಡದಲ್ಲಿರುವ ಬಂಟವಾಳದಲ್ಲಿ ಬಂದು ನೆಲೆಸಿದರು.
ಬಳಿಕ ಈ ಕುಟುಂಬದವರನ್ನು ಪಂಜೆ ಎಂದು ಕರೆಯುವದು ರೂಢಿಯಾಯಿತು, ದಾಸಪ್ಪಯ್ಯವರ ಒಬ್ಬನೇ ಮಗ ವಿಟ್ಠಲನವರಿಗೆ ಮೂವರು ಪುತ್ರರು ಅವರ ಲ್ಲೊಬ್ಬರು ರಾಮಪ್ಪಯ್ಯನವರು ಅವರ ಏಳು ಮಂದಿ ಮಕ್ಕಳಲ್ಲಿ ಎರಡನೆಯವರು ಮಂಗೇಶರಾಯರು.
ಬಂಟವಾಳದಲ್ಲಿ ಒಂದು ಮನೆಯಿತ್ತು ಮತ್ತು ವ್ಯವಸಾಯಕ್ಕೆ ಸ್ವಲ್ಪ ಭೂಮಿಯಿತ್ತು.
ಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳದಲ್ಲಿ 1874- ಫೆಬ್ರುವರಿ -22ರಂದು ಜನಿಸಿದರು. ಇವರ ತಾಯಿಯ ಹೆಸರು ಶಾಂತಾದುರ್ಗಾ,
ಬಂಟವಾಳದಲ್ಲಿಯೇ ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು.
ಬಡತನದ ಕಾರಣ ಮಕ್ಕಳ ವಿದ್ಯೆಗಾಗಿ ಅವರ ತಂದೆ ಸಾಲ ಮಾಡಿದ್ದರು,1890ರಲ್ಲಿ ರಾಮಪ್ಪಯ್ಯ ತೀರಿಕೊಂಡಾಗ ಮಂಗೇಶರಾಯರಿಗೆ ಹದಿನಾರು ವರ್ಷದ ಪ್ರಾಯವಾಗಿದ್ದು, ಮಂಗಳೂರಿನಲ್ಲಿ ಓದುತ್ತಿದ್ದರು.
ಅಣ್ಣ ಮದ್ರಾಸ್ (ಈಗಿನ ಚೆನ್ನೈ) ನಲ್ಲಿ ಓದುತ್ತಿದ್ದುದರಿಂದ ಸಂಸಾರದ ಜವಾಬ್ದಾರಿ ಇವರ ಮೇಲೇ ಬಿತ್ತು.
1894ರಲ್ಲಿ ಇವರ ಮದುವೆ ಖ್ಯಾತನಾಮರಾದ ಬೆನಗಲ್ ರಾಮರಾವ್ ಅವರ ತಂಗಿ ಭವಾನಿಬಾಯಿಯವರೊಂದಿಗೆ ಜರುಗಿತು.
ಈಗಿನ ಪಿಯುಸಿ ಎರಡನೆಯ ವರ್ಷಕ್ಕೆ ತತ್ಸಮವಾದ, ಕಾಲೇಜಿನ ಮೊದಲ ವರ್ಷದ ಎಫ್.ಏ.(ಆರ್ಟ್ಸ್) ತರಗತಿಯಲ್ಲಿ ಉತ್ತೀರ್ಣರಾದರು.
ಬಳಿಕ ಇವರು 1896ರಲ್ಲಿ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಕನ್ನಡ ಪಂಡಿತ ಹುದ್ದೆ ಪಡೆದರು.
ಇದಕ್ಕಾಗಿ ಅವರು ಕನ್ನಡ ವಿಶಿಷ್ಟ ಪರೀಕ್ಷೆಯಲ್ಲಿ ಪಾಸಾಗಿದ್ದರು ಇಲ್ಲಿ ನಂದಳಿಕೆ ಲಕ್ಷ್ಮೀನಾರಾಯಣರು (ಮುದ್ದಣ ಕವಿ) ಸಹೋದ್ಯೋಗಿ ಯಾಗಿದ್ದರು.
ಮಂಜೇಶ್ವರದ ಗೋವಿಂದ ಪೈಯವರು ಶಿಷ್ಯರಾಗಿದ್ದರು,
ಬಿ.ಎ ಪದವಿಯನ್ನು ಪಡೆದ ಬಳಿಕ ಮದ್ರಾಸಿನಲ್ಲಿ ಎಲ್ ಡಿ ಪರೀಕ್ಷೆಯಲ್ಲಿ ಉತ್ತೀರ್ಣರಾದರ. ಮರಳಿ ಬಂದು ಮಂಗಳೂರು ಕಾಲೇಜಿನ ಉಪಾಧ್ಯಾಯ ವೃತ್ತಿಯನ್ನು ಮುಂದುವರೆಸಿದರು.
ಅನತಿ ಕಾಲದಲ್ಲೇ ಮಂಗಳೂರಿನ ವಿದ್ಯಾ ಇಲಾಖೆಯಲ್ಲಿ ಸಬ್ ಅಸಿಸ್ಟಂಟ್ ಶಾಲಾ ಇನ್ಸ್‌ಪೆಕ್ಟರಾಗಿ ನೇಮಕಗೊಂಡರು ಆಮೇಲೆ ಟ್ರೈನಿಂಗ್ ಶಾಲೆಯ ಅಧ್ಯಾಪಕರೂ ಆದರು.
ಶಾಲಾ ಇನ್ಸ್‌ಪೆಕ್ಟರಾಗಿದ್ದಾಗ ಉಪಾಧ್ಯಾಯರನ್ನು ಗೌರವದಿಂದ ಬಹುವಚನದಲ್ಲಿ ಮಾತಾಡಿಸಿ, ಮಕ್ಕಳ ಮನಸ್ಸನ್ನು ಆಕರ್ಷಿಸುವ ರೀತಿಯಲ್ಲಿ ಪಾಠ ಹೇಳುವ ಕ್ರಮವನ್ನು ನಯವಾಗಿ ತಿಳಿಹೇಳುವ ಅವರ ಕ್ರಮವೇ ಹೊಸ ತರಹದ್ದಾಗಿದ್ದು, ಇನ್ಸ್‌ಪೆಕ್ಟರ್ ಅಂದರೆ ಕಳ್ಳತನವನ್ನು ಪತ್ತೆಹಚ್ಚಲು ಬರುವ ಪೊಲೀಸರಲ್ಲ ಎಂದು ಉಪಾಧ್ಯಾರ ಮನೋಭಾವನೆ ಬದಲಾಯಿತು.
ಅವರ ಆಗಮನವನ್ನು ಎದುರು ನೊಡುವ, ತಮ್ಮಲ್ಲಿನ ಸಂದರ್ಶನದ ಬಳಿಕ ಮುಂದಿನ ಊರಿಗೆ ಅವರನ್ನು ಮುಟ್ಟಿಸುವ ಉತ್ಸಾಹ ಉಪಾಧ್ಯಾಯರಲ್ಲಿ ಕಾಣಿಸತೊಡಗಿತು.
1921ರಲ್ಲಿ ಅವರನ್ನು ಕೊಡಗಿನ ಶಾಲಾ ಇನ್ಸ್‌ಪೆಕ್ಟರಾಗಿ ವರ್ಗಾಯಿಸಿದಾಗ ತಮ್ಮವರಂತೆ ಹಾಗೂ ಆಗಿದ್ದ ಆಂಗ್ಲರಂತೆ ಸೂಟು-ಬೂಟು ಧರಿಸದ, ಕಟ್ಟುನಿಟ್ಟಿನ ಶಿಸ್ತಿಲ್ಲದ ವಿದ್ಯಾಧಿಕಾರಿಯೆಂದು ತುಸು ಅಸಡ್ಡೆಯಿಂದ ಕೊಡಗಿನ ಜನತೆ ಕಂಡರು.
ಇನ್ಸ್‌ಪೆಕ್ಟರ್ ಜೆ ಎ ಯೇಟ್ಸನ ಹೊಸ ರೀತಿಯ ಪಾಠಕ್ರಮವನ್ನು ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯಗತ ಮಾಡುವದರಲ್ಲಿ ಹೆಚ್ಚಿನ ಶ್ರಮವಹಿಸಿದರು.
ಎರಡು ವರ್ಷಗಳ ನಂತರ ಮಡಿಕೇರಿಯ ಸೆಂಟ್ರಲ್ ಹೈಸ್ಕೂಲಿನ ಮುಖ್ಯೋಪಾಧ್ಯಾರನ್ನಾಗಿ ಪಂಜೆಯವರನ್ನು ನೇಮಿಸಲಾಯಿತು.
ಅದುವರೆಗೆ ಆ ಶಾಲೆಯ ಮುಖ್ಯೋಪಾಧ್ಯಾರಾಗಿ ಆಂಗ್ಲರೇ ಇದ್ದು ಈಗ ಬಂದ ದೇಶೀಯನನ್ನು ಸ್ಥಳೀಯ ಸಹೋದ್ಯೋಗಿಗಳು ತಾತ್ಸಾರದಿಂದ ಕಂಡರು.
1929ವರೆಗೆ ಅವರು ಈ ಹುದ್ದೆಯಲ್ಲಿದ್ದು ನಿವೃತ್ತರಾದಾಗ 22 ವರ್ಷಗಳ ಕಾಲ ಜನಸೇವೆ ಸಂದಿತ್ತು.
Comments
Post a Comment