Blog number 2205. ದೇಶದ ಅತ್ಯಂತ ಎತ್ತರದ ನಮ್ಮ ಜಿಲ್ಲೆಯ ಕುಂಚಿಕಲ್ ಪಾಲ್ಸ್ ಗೆ ಹೋಗಲಿರುವ ಅನ್ವೇಷಣಾ ತಂಡಕ್ಕೆ ಪರಿಸರ ಸಂರಕ್ಷಣೆ ಹೆಸರಲ್ಲಿ ಅಡೆತಡೆ ಮಾಡುವವರಿಗೆ
#ಇದು_ಪರೋಪಕಾರ
#ಇದರಲ್ಲಿ_ಅಡಗಿದೆ_ಸ್ವಾರ್ಥ
#ಮುಗ್ದರನ್ನ_ಮುರ್ಖನಾಗಿಸುವ
#ಯುಕ್ತಿ.
#ಇಂತಹದ್ದೇ_ಪರಿಸರ_ಕಾಳಜಿಯ_ಹೆಸರಲ್ಲಿ
#ಕುಂಚಿಕಲ್_ಪಾಲ್ಸ್_ಅನ್ವೇಷಣಾ_ತಂಡಕ್ಕೆ_ತಡೆಯುವವರು.
ನಮ್ಮ ಹಳ್ಳಿಗಳಲ್ಲಿ ಅಡಿಕೆ ತೋಟದ ಸಾಹುಕಾರರು ಅಡಿಕೆ ತೋಟ ಮಾಡಲು ಪ್ರಯತ್ನ ಮಾಡುವವನ ಎದರು ರೋದಿಸುತ್ತಾರೆ... ಈ ಅಡಿಕೆ ತೋಟ ಬೇಡಣ್ಣಾ ಬೇಡ, ಅದರ ರೋಗ ಏನು ಹೇಳಲಿ, ಕೃಷಿ ಮಾಡೊಕೆ -ಕೊಯ್ಲು ಮಾಡೋಕೆ ಜನ ಸಿಗಲ್ಲ.... ಅಡಿಕೆ ರೇಟು ಹೀಗೆ ಇರ್ತದೆ ಅಂತ ಮಾಡಿದಿಯಾ?.. ನೋಡು ಈ ಗೌವನ೯ಮೆಂಟ್ ಗುಟ್ಕಾ ತಿಂದರೆ ಕ್ಯಾನ್ಸರ್ ಬರುತ್ತೆ ಅಂತ ಸುಪ್ರಿಂ ಕೋರ್ಟ್ ಲ್ಲಿ ಅರ್ಜಿ ಹೆಟ್ಟಿಟ್ಟಿದೆ ಇವತ್ತೋ ನಾಳೆ ಗುಟ್ಕಾ ರದ್ದಾದರೆ ನೋಡ್ತಾ ಇರು ಅಡಿಕೆ ಕಾಸಿಗೂ ಕಿಮ್ಮತ್ತಿರಲ್ಲ ಅಂತ.
ಇದರ ಹಿಂದಿನ ಉದ್ದೇಶ ಬೇರೆೇನು ಅಲ್ಲ, ಬೇರೆಯವರು ಅಡಿಕೆ ತೋಟ ಮಾಡಿದರೆ ಎಂಬ ಆತಂಕ ಇದರಲ್ಲಿ ಮುಂದೆ ಆ ಕುಟುಂಬ ಅಡಿಕೆ ಬೆಳೆದು ಆರ್ಥಿಕ ಸಭಲತೆ ಪಡೆದರೆ ತನ್ನ ಕೃಷಿ ಕೆಲಸಕ್ಕೆ ಜನ ಸಿಗುವುದಿಲ್ಲ / ತನ್ನ ಅಂತಸ್ತಿಗೆ ಸವಾಲು / ಸಣ್ಣ ಜಾತಿ ಸಣ್ಣ ಜನ ಹಳ್ಳಿಯಲ್ಲಿ ಸಮಾನತೆ ಪಡೆಯುತ್ತಾನೆ/ ಎಲ್ಲರೂ ಅಡಿಕೆ ಬೆಳೆದರೆ ಅಡಿಕೆ ಬೆಲೆ ಕಡಿಮೆ ಆದೀತು / ಹಳ್ಳಿಯ ಎಲಿಜಂಟ್ ಕ್ಲಾಸ್ ಪಟ್ಟಿ ಪರಿಷ್ಕರಣೆ ಆದೀತು... ಇಂತಹ ಹಿಡನ್ ಅಜೆಂಡಾ ಬಿಟ್ಟರೆ ಬೇರೇನಲ್ಲ.
ಹಾಗಂತ ಹಳ್ಳಿಯ ಅಡಿಕೆ ತೋಟದ ಸಾಹುಕಾರ ಮಾತ್ರ ತನ್ನ ಬ್ಯಾಣ ಗಿಣ ಎಲ್ಲಾ ಹೊಸದಾಗಿ ಅಡಿಕೆ ತೋಟ ವಿಸ್ತಾರ ಮಾಡುತ್ತಾನೆ ಇರುತ್ತಾನೆ.
ಇದೇ ರೀತಿ ಕಂಡವರ ಮಕ್ಕಳಿಗೆ ಸರ್ಕಾರಿ ಕನ್ನಡ ಶಾಲೆಗೆ ಸೇರಿಸಲು ಉದ್ದುದ್ದ ಬಾಷಣ ಅವರ ಮಕ್ಕಳು ಮೊಮ್ಮಕ್ಕಳನ್ನ ಇಂಗ್ಲೀಷ್ ಕಾನ್ವೆಂಟ್ ಗೆ ಕಳಿಸಿ ಡಾಕ್ಟರ್ ಇಂಜಿನಿಯರ್ ಮಾಡಿ ಅಮೇರಿಕಾ ಇಂಗ್ಲೇಂಡ್ ಕಳಿಸೋದು ಇದೆಲ್ಲ ಅಸಲಿಯತ್ತು ಈಗೆಲ್ಲ ಅವರ ಮನೆ ಕೂಲಿ ಮಾಡೋರಿಗೂ ಗೊತ್ತಾಗಿದೆ.
ಇದೆಲ್ಲ ಯಾಕೆ ಬರೆದೆ ಎಂದರೆ ನಮ್ಮ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡುಗೋಡು ಸಮೀಪದ ವರಾಹಿ ನದಿಯ #ಕುಂಚಿಕಲ್_ಅಬ್ಬಿ_ಪಾಲ್ಸ್ ಒಂದು ಸಾರ್ವಜನಿಕರ ವೀಕ್ಷಣೆಗೆ ಸಾಧ್ಯವಿಲ್ಲದ ಅಭೇದ್ಯ ಕಾಡಿನಲ್ಲಿದೆ ಅದು ಜೋಗ ಜಲಪಾತಕ್ಕಿಂತ ದೊಡ್ಡದು ತಾನು ತನ್ನಜ್ಜನ ಜೊತೆ ಒಮ್ಮೆ ನೋಡಿದ್ದೆ ಅಲ್ಲಿಗೆ ಯಾರೂ ಹೋಗಬಾರದು ಅಂತ ತಮ್ಮ ಹಿರಿಯರು ತಾಕೀತು ಮಾಡ್ತಾರೆ ಅಂತ ಸಾವೆಹಕ್ಲು ಡ್ಯಾಂ ಕಟ್ಟಿದ್ದ ಜಾಗದಲ್ಲಿ ಭೂಮಿ ತೋಟ ಕಳೆದು ಕೊಂಡು ನಮ್ಮ ಊರಿನ ಸಮೀಪ ನೆಲೆಸಿದ್ದ ಕುಣುಬಿ ಸಮಾಜದ ಹಿರಿಯರಾದ #ಕಂಚಿನಕಲ್_ಈರಪ್ಪಣ್ಣ ಹೇಳುತ್ತಿದ್ದ ಕಥೆಯೇ ನನಗೆ ಈ ಜಲಪಾತಕ್ಕೆ ಹೋಗಲು ಹುರಿದುಂಬಿಸಿತ್ತು.
1990 ರಿಂದ 1993ರ ವರೆಗೆ ನಾನೊಂದು ತಂಡ ತಯಾರಿ ಮಾಡಿದೆ, ಆಗ ವಿಡಿಯೋ ಗ್ರಾಪರ್ ಅಂದರೆ ವಿರಳಾತಿ ವಿರಳ ಒಬ್ಬನನ್ನ ಒಪ್ಪಿಸಿದೆವು, ಕಾಡು ಪ್ರಾಣಿ ರಕ್ಷಣೆಗೆ ಸ್ಥಳಿಯ ಬಂದೂಕು ದಾರರು (ಕಳ್ಳ ಬಂದೂಕೆ ಇರಬೇಕು) ಆದರೆ ನಾವು ಹೊರಡುವ ಸಂದರ್ಭದಲ್ಲಿ ಕಾಳಿಂಗ ಸರ್ಪ ಮರಿ ಮಾಡುವ ಕಾಲ ತುಂಬಾ ಜಾಗರೂಕರಾಗಿ ಹೋಗಬೇಕು, ದರಗಲು ಎಲೆ ಗುಡ್ಡೆ ಮಾಡಿ ಮೊಟ್ಟೆ ಇಟ್ಟು ಕಾವು ಕೊಡುತ್ತಾವೆ ಅಂತ ಈರಪ್ಪಣ್ಣ ಹೇಳಿದ್ದೇ ಇಡೀ ತಂಡ ಬರ್ಖಾಸ್ತಿಗೆ ಕಾರಣ ಆಯಿತು ಆದರೂ ನನಗೆ ಕುಂಚಿಕಲ್ ಪಾಲ್ಸ್ ಆಸಕ್ತಿ ಮಾತ್ರ ಕಡಿಮೆ ಆಗಿಲ್ಲ.
ಆಗ ಅದು ದೇಶದ ಅತ್ಯಂತ ಎತ್ತರದ ಜಲಪಾತ ಎಂದು ಅಧಿಕೃತ ಆಗಿರಲಿಲ್ಲ ಆದರೆ ನಮಗೆ ಜಿಲ್ಲೆಯ ಜೋಗ್ ಜಲಪಾತಕ್ಕಿಂತ ದೊಡ್ಡದಾದ ನಿಗೂಡ ಜಲಪಾತ ಕುಂಚಿಕಲ್ ಪಾಲ್ಸ್ ಅಂತ ಪ್ರಪಂಚಕ್ಕೆ ಸಾರಿ ಹೇಳಬೇಕು ಮತ್ತು ಆ ಕೆಲಸ ಮೊದಲು ಮಾಡಿದ ಸಾಹಸಿಗಳು ಅಂತ ನಮ್ಮ ಬೆನ್ನು ನಾವೇ ತಟ್ಟಿ ಕೊಳ್ಳುವ ತವಕ ನಮ್ಮದಾಗಿತ್ತು ಅವತ್ತಿಗೆ.
ಈಗ ಈ ಜಲಪಾತ ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತದಲ್ಲಿ ಅಗ್ರಸ್ಥಾನ ಪಡೆದಿದೆ ಆದರೂ ಇದು ಇನ್ನೂ ಅಪರಿಚಿತವಾಗಿದೆ, ಪಶ್ಚಿಮ ಘಟ್ಟದ ಮಲೆನಾಡಿನ ಈ ಪ್ರದೇಶ ಆಪ್ರಿಕಾದ ಕಪ್ಪು ಖಂಡದಂತೆ ಅನ್ನಿಸಿ ಬಿಟ್ಟಿದೆ.
ಇದನ್ನು ಕೆಲವು ಸಾಹಸಿಗಳು ನೋಡಿದ್ದಾರೆ ಆದರೆ ಪೂರ್ತಿ ನೋಡಿಲ್ಲ, ಅದು ಅಷ್ಟು ಸುಲಭವೂ ಆಗಿಲ್ಲ ಮಳೆಗಾಲದ ನಂತರ ದೇಶದ ಅತ್ಯಂತ ಎತ್ತರದ ಜಲಪಾತ ಅನ್ವೇಷಣೆಗೆ ಒಂದು ಸುಸಜ್ಜಿತ ತಂಡ ತಯಾರಾಗುತ್ತಿದೆ ಮತ್ತು ಹೋಗಿ ಬರಲಿದೆ.
ಇದರ ಮಧ್ಯೆ ಕೆಲವರ ತಕರಾರು ಪ್ರಾರಂಭವಾಗಿದೆ "ನಿಮ್ಮ ಈ ಎಲ್ಲಾ ಕುಂಚಿಕಲ್ ಪಾಲ್ಸ್ ಮಾಹಿತಿ ಬರವಣಿಗೆಗಳಿಂದ ಈಗ ಪರಿಶುದ್ಧವಾಗಿರುವ ಈ ಕುಂಚಿಕಲ್ ಪಾಲ್ಸ್ ಮುಂದೆ ಮಲೀನ ಆಗಲಿದೆ, ಬಾಟಲಿ ಪ್ಲಾಸ್ಟಿಕ್ ಬೀಳಲಿದೆ ಆದ್ದರಿಂದ ಈ ರೀತಿ ಮಾಹಿತಿ ಚಿತ್ರ ಹಂಚ ಬೇಡಿ, ಈ ಜಲಪಾತ ಹೀಗೆಯೇ ನಿಗೂಡ ಆಗಿರಲಿ"... ಅಂತ.
ನನ್ನ ಉದ್ದೇಶ ನಮ್ಮ ಜಿಲ್ಲೆಯ ಈ ಜಲಪಾತ ದೇಶದ ಜಲಪಾತದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ, 1493 ಅಡಿ ಎತ್ತರದ ಇನ್ನೊಂದು ಜಲಪಾತ ದೇಶದಲ್ಲಿ ಇನ್ನೊಂದು , ಇದು ನಮ್ಮ ಜಿಲ್ಲೆಗೆ ರಾಜ್ಯಕ್ಕೆ ಹೆಮ್ಮೆ ತರುವ ವಿಚಾರ ಆದರೆ ಇದು ನಮ್ಮ ರಾಜ್ಯ ಬಿಡಿ, ಜಿಲ್ಲೆಯವರಿಗೂ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಅಂದರೆ?...
ಆದ್ದರಿಂದಲೇ ತಜ್ಞರ ತಂಡ ಅಲ್ಲಿಗೆ ಹೋಗಲಿದೆ, ನಾವೊಂದಿಷ್ಟು ಪ್ರೇರಕರು ಈ ತಂಡಕ್ಕೆ ಸ್ಪಾನ್ಸರ್ ಮಾಡುತ್ತೇವೆ, ನಾವು ಅವರ ಜೊತೆ ಜಲಪಾತದ ಹತ್ತಿರ ಹೋಗುವುದಿಲ್ಲ ಕಾರಣ 1990ರ ಉತ್ಸಾಹದ ದೇಹದ ಕಸುವು ಈಗ 2024 ರಲ್ಲಿ ನನಗೆ ಇಲ್ಲ ಆದ್ದರಿಂದ ಮಾಸ್ತಿಕಟ್ಟೆಯಿಂದ ಬೀಳ್ಕೊಟ್ಟು ಅವರ ಕೆಲಸ ಯಶಸ್ವಿ ಆಗಿ ಮುಗಿಸಿ ಬಂದಾಗ ಸ್ವಾಗತಿಸಲು ನಾವೆಲ್ಲ ಅಲ್ಲಿರುತ್ತೇವೆ.
ಅಷ್ಟಕ್ಕೂ ಕುಂಚಿಕಲ್ ಪಾಲ್ಸ್ ನೋಡಲು ಅರಣ್ಯ ಇಲಾಖೆ ಮತ್ತು KPC ಅನುಮತಿ ಬೇಕೇ ಬೇಕು ಅವರ ಅನುಮತಿ ಇಲ್ಲದೆ ಹೋದರೆ ಕಾನೂನು ಕಾಯ್ದೆ ಪ್ರಕಾರ ಕೇಸು ಬಂದನ ಖಾಯಂ ಆದ್ದರಿಂದ ಇಷ್ಟ ಬಂದ ಹಾಗೆ ಅಲ್ಲಿ ಹೋಗಲು ಅನುಮತಿ ಇಲ್ಲ.
ಸ್ಥಳಿಯರ ಮಾರ್ಗದರ್ಶನ ಇಲ್ಲದೆ ಹೋದರೆ ಅರಣ್ಯದಲ್ಲಿ ಕಳೆದು ಹೋಗುತ್ತಾರೆ, ಅಲ್ಲಿ ಕಾಡು ಪ್ರಾಣಿಗಳು ಇದೆ, ವರ್ಷ ಪೂರ್ತಿ ಜಿಗಣೆ ಕಾಟ, ಮಧ್ಯಾಹ್ನ 3ಕ್ಕೆ ದಟ್ಟ ಮಂಜು ಆವರಿಸುತ್ತದೆ, ಮಳೆಗಾಲದಲ್ಲಿ ಹೋದರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಆದ್ದರಿಂದ ಎಣ್ಣೆ ಗಿರಾಕಿಗಳು ಪೋಲಿ ಪುಂಡುತನದ ಚಾರಣಿಗರಿಗೆ ಕುಂಚಿಕಲ್ ಪಾಲ್ಸ್ ಅಷ್ಟು ಸುಲಭ ದರ್ಶನ ಆಗುವುದಿಲ್ಲ.
ಇಷ್ಟಾದರೂ ನೀವು ಪರಿಸರದ ಹೆಸರಲ್ಲಿ ಮತ್ತೆ ಮತ್ತೆ ಹೀಗೇ ವಿರೋದಿಸುತ್ತೀರಾ ಅಂದರೆ... ನೀವು ನಮ್ಮ ಹಳ್ಳಿಯ ಅಡಿಕೆ ತೋಟದ ಸಾಹುಕಾರರು ಇದ್ದಂತೆ ಅಂತ ಭಾವಿಸಿ ನಿಮ್ಮನ್ನ ನಿರ್ಲಕ್ಷಿಸುತ್ತೇನೆ ಕ್ಷಮಿಸಿ.
Comments
Post a Comment