Blog number 2161. ಗೇರುಸೊಪ್ಪೆಯ ಜೈನ ರಾಣಿ ಕಾಳುಮೆಣಸಿನ ರಾಣಿ ಚೆನ್ನಬೈರಾದೇವಿ ಆಡಳಿತ ಪ್ರದೇಶದ ಜೈನರ ಮನೆಗಳ ವಿಶಿಷ್ಟ ರೊಟ್ಟಿ ರೆಸಿಪಿ ಸವಿದು ನೋಡ ಬನ್ನಿ
#ಪಶ್ಚಿಮ_ಘಟ್ಟದ_ಜೈನರು_ತಯಾರಿಸುವ_ವಿಶಿಷ್ಟ_ಅಕ್ಕಿ_ರೊಟ್ಟಿ.
#ಗೇರುಸೊಪ್ಪೆಯ_ಕಾಳುಮೆಣಸಿನ_ರಾಣಿ_ಚೆನ್ನಾಬೈರಾದೇವಿ_ಆಳ್ವಿಕೆ_ಪ್ರದೇಶದಲ್ಲಿ_ಮಾತ್ರ.
#ಇದು_ಅಕ್ಕಿ_ಹಿಟ್ಟಿನಿಂದ_ತಯಾರಾಗುವ_ರೊಟ್ಟಿ_ಅಲ್ಲ
#ನೀರಲ್ಲಿ_ನೆನೆಸಿದ_ಅಕ್ಕಿ_ಒರಳಲ್ಲಿ_ಕಡೆದು_ಹೆಂಚಿನ_ಮೇಲೆ_ತಟ್ಟುವ_ರೊಟ್ಟಿ
#ಇದರ_ರುಚಿ_ಘಮವೇ_ಬೇರೆ.
ಯುರೋಪಿನ ದೇಶಗಳಲ್ಲಿ ಕಾಳು ಮೆಣಸಿನ ರಾಣಿ ಎಂದೇ ಪ್ರಖ್ಯಾತಿ ಪಡೆದಿದ್ದ ಗೇರುಸೊಪ್ಪೆಯ ಜೈನರ ರಾಣಿ ಚೆನ್ನಾಭೈರಾದೇವಿ ಆಳಿದ ಪ್ರದೇಶವಾದ ಸಾಗರ ತಾಲೂಕಿನ ಕರೂರು,ಬಾರಂಗಿ ಹೋಬಳಿಗಳಲ್ಲಿ ಮಾರಿಗೊಂದು ಜೈನ ಬಸದಿಯ ಪಳಯುಳಿಕೆಗಳಿದೆ.
ರಾಣಿಯ ಕಾನೂರು ಕೋಟೆ ಇಲ್ಲೇ ಇತಿಹಾಸದ ಕಥೆ ಹೇಳುತ್ತಿದೆ, ಜೋಗ್ ಜಲಪಾತ ದಾಟಿದರೆ ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪೆಯಲ್ಲಿ ರಾಣಿ ಚೆನ್ನಾ ಬೈರಾದೇವಿ ಪಶ್ಚಿಮ ಘಟ್ಟದಲ್ಲಿ ಸಂಗ್ರಹಿಸಿದ ಕಾಳು ಮೆಣಸು ಯುರೋಪಿಯನ್ನರ, ಅರಬ್ ದೇಶದ ವ್ಯಾಪಾರಿಗಳಿಗೆ ಸೇರಿದ ಹಡಗುಗಳಿಗೆ ತುಂಬುವ ಒಳನಾಡ ಬಂದರಾಗಿತ್ತು.
ಇಲ್ಲಿ ಹರಿಯುವ ನದಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಅಂಬೂ ತೀರ್ಥದಲ್ಲಿ ಹುಟ್ಟುವ ಶರಾವತಿ ನದಿ.
ಪೋಚು೯ಗೀಸರೊಂದಿಗೆ ಯುದ್ದ ಮಾಡಿದ್ದ ದೀರ ರಾಣಿ ಚೆನ್ನಾ ಬೈರಾದೇವಿ ಮುಂದೆ ರಾಜ್ಯ ಕಳೆದು ಕೊಂಡು ಕೆಳದಿ ಅರಸರಾದ ರಾಜಾ ವೆಂಕಟಪ್ಪ ನಾಯಕರಿಂದ ಬಂದನಕ್ಕೆ ಒಳಗಾಗಿ ಇಕ್ಕೇರಿಯ ಕೋಟೆಯಲ್ಲಿನ ಬಂದಿಖಾನೆಯಲ್ಲಿಯೆ ಇಹಲೋಕ ತ್ಯಜಿಸುತ್ತಾರೆ.
ಉತ್ತರ ಕನ್ನಡ ಜಿಲ್ಲೆಯ ನಾಡವರು ಮತ್ತು ಮೀನುಗಾರ ಖಾರ್ವಿ ಜನಾಂಗಗಳು ಚೆನ್ನಾ ಬೈರಾದೇವಿಯನ್ನು ಅವ್ವರಸಿ ಎಂದು ಪೂಜಿಸುತ್ತಾರೆ ಅಲ್ಲಿ ಅವ್ವರಸಿ ದೇವಸ್ಥಾನವಿದೆ ಅವ್ವರಸಿ ವಿಗ್ರಹವೂ ಇದೆ.
ಅವರ ಸಮಾದಿ ಆವಿನಹಳ್ಳಿಯಲ್ಲಿದೆ ಅದು ಜನರ ತಪ್ಪು ಗ್ರಹಿಕೆಯಿಂದ ಕಾಲಾಂತರದಲ್ಲಿ ರಾಣಿ ಸಮಾದಿ ದೇವಸ್ಥಾನವಾಗಿ ಪರಿವರ್ತನೆ ಆಗಿದೆ, ಬೇರೆ ದೇವರ ವಿಗ್ರಹ ಅಲ್ಲಿ ಪ್ರತಿಷ್ಟಾಪಿಸಲಾಗಿದೆ.
ಈಗಲೂ ಈ ಪ್ರದೇಶದ ಜೈನ ಅನುಯಾಯಿಗಳು ಸೂರ್ಯಾಸ್ತದ ಒಳಗೆ ತಮ್ಮ ರಾತ್ರಿ ಊಟ ಮುಗಿಸುತ್ತಾರೆ ಕಾರಣ ಕತ್ತಲಲ್ಲಿ ಕಣ್ಣಿಗೆ ಕಾಣದ ಕ್ರಿಮಿ ಕೀಟಗಳನ್ನು ಹಿಂಸಿಸಬಾರದೆಂಬ ಜೈನ ಧರ್ಮದ ಅಹಿಂಸಾ ಪದ್ದತಿ.
ಈ ಪ್ರದೇಶದಲ್ಲಿ ಬೆಳೆಯುತ್ತಿದ್ದ ಅಕ್ಕಿ, ತೆಂಗಿನಕಾಯಿ, ಹಸಿಮೆಣಸು, ಗೋಕರ್ಣದ ಸಮುದ್ರದ ಉಪ್ಪು ಬಳಸಿ ತಯಾರಿಸುತ್ತಿದ್ದ ಅಕ್ಕಿ ರೊಟ್ಟಿಗೆ ಪಶ್ಚಿಮ ಘಟ್ಟದ ಅಬ್ಬಿ ನೀರು, ಕಾಡಿನ ಕಟ್ಟಿಗೆ ಸಾಕಾಗುತ್ತಿತ್ತು.
ಸಾಮಾನ್ಯವಾಗಿ ರೊಟ್ಟಿ ಮಾಡುವ ವಿಧಾನ ಅಕ್ಕಿಯನ್ನು ಬೀಸುಕಲ್ಲಿನಲ್ಲಿ ಒಣ ಹಿಟ್ಟು ಮಾಡಿ ರೊಟ್ಟಿ ಮಾಡುವುದು ಆದರೆ ಈ ಪ್ರದೇಶದ ಜೈನರು ಮಾತ್ರ ಅಕ್ಕಿ ನೆನಸಿ ರುಬ್ಬುವ ಕಲ್ಲಿನಲ್ಲಿ (ಒರಳು ಕಲ್ಲಿನಲ್ಲಿ) ರುಬ್ಬಿ ಆ ಹಸಿ ಹಿಟ್ಟಿನಿಂದ ರೊಟ್ಟಿ ತಟ್ಟಿ, ಕಟ್ಟಿಗೆಯ ಒಲೆಯ ಮೇಲಿನ ಹೆಂಚಿನಲ್ಲಿ ಬೇಯಿಸಿ ನಂತರ ಕಟ್ಟಿಗೆಯ ಕೆಂಪು ಕೆಂಡದಲ್ಲಿ ಹದವಾಗಿ ಸುಡುತ್ತಾರೆ ಇದರ ಜೊತೆ ತೆಂಗಿನಕಾಯಿ - ಹಸಿಮೆಣಸಿನ ಚಟ್ನಿ ಜೊತೆ ಉಣ ಬಡಿಸುತ್ತಾರೆ.
ಇವರು ಸಂಪ್ರದಾಯಿಕ ಸುಲಭ ವಿಧಾನ ಅಕ್ಕಿಹಿಟ್ಟು ಬಳಸದೇ ಇರಲು ಜೈನರ ಆಹಿಂಸಾ ತತ್ವಗಳು ಕಾರಣ ಎಂಬ ನಂಬಿಕೆ ಇದೆ ಆದರೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ಜೈನರು ಜೋಳದ ಹಿಟ್ಟಿನಿಂದ ರೊಟ್ಟಿ ಮಾಡಿ ತಿನ್ನುತ್ತಾರೆ, ಶ್ರವಣ ಬೆಳಗೋಳದ ಭಾಗದ ಜೈನರು ರಾಗಿ ಹಿಟ್ಟಿನಿಂದ ತಯಾರಿಸುವ ರೊಟ್ಟಿ ತಿನ್ನುತ್ತಾರಾದ್ಧರಿಂದ ಈ ಪ್ರದೇಶದ ಜೈನರ ಈ ಪ್ರಕಾರದ ರೊಟ್ಟಿ ತಯಾರಿಕೆಗೆ ಜೈನ ಧರ್ಮದ ಅಹಿಂಸಾ ತತ್ವದ ಕಾರಣ ಇರಲಾರದೆಂದು ಅನ್ನಿಸುತ್ತದೆ.
ಬಹುಶಃ ಈ ಭಾಗದ ವಿಪರೀತ ಮಳೆಗಳು, ದಟ್ಟ ಅರಣ್ಯಗಳ ಪ್ರಕೃತಿಯ ಜೊತೆ ಇದು ಅವರ ಸಂಪ್ರದಾಯಿಕ ಶೈಲಿಯ ಆಹಾರ ತಯಾರಿ ಕ್ರಮ ಆಗಿರಬಹುದು.
ಜೋಳದ ರೊಟ್ಟಿ, ರಾಗಿ ರೊಟ್ಟಿ ಉತ್ತರ ಕನಾ೯ಟಕದ ನಿತ್ಯದ ಮೆನು ಅಲ್ಲಿನ ಊಟದಲ್ಲಿ ಈಗಲೂ ಮುಂದುವರಿದಿದೆ, ಮಲೆನಾಡಿನ ಅಕ್ಕಿ ರೊಟ್ಟಿಗಳಲ್ಲಿ ಹಲವು ವಿದವಿದೆ.
ಇವತ್ತಿಗೂ ನನಗೆ ಹೆಚ್ಚು ಇಷ್ಟ ಆಗಿರುವುದು ಮಲೆನಾಡಿನ ಪಶ್ಚಿಮ ಘಟ್ಟದ ಸಾಗರ ತಾಲ್ಲೂಕಿನ ಅರಲಗೋಡಿನಿಂದ ಕೋಗಾರ್ ವರೆಗಿನ ಜೈನರ ಮನೆಗಳಲ್ಲಿ ತಯಾರಿಸುವ ಈ ಅಕ್ಕಿ ರೊಟ್ಟಿಗಳು!
ಇದನ್ನ ಮೊದಲು ನಾನು ನೋಡಿದ್ದು, ಸವಿದದದ್ದು ಅರಲುಗೋಡು ಸಮೀಪದ ಬಿದರೂರಿನ ಶಶಿಕಾಂತ ಜೈನ್ ರ ಮನೆಯಲ್ಲಿ, ಅದೇ ರೀತಿ ಕೊಗಾರಿನ ಆಲೆಮನೆ ಸಂತೋಷ್ ಕುಮಾರ್ ಜೈನ್ ರ ಮನೇಯಲ್ಲಿ ಅವರ ಸಂಪ್ರದಾಯಿಕ ಪದ್ದತಿಯಲ್ಲಿ ಅಕ್ಕಿ ನೆನಸಿ ನಂತರ ಒರಳಿನಲ್ಲಿ ಅರೆದು ಅದರಿಂದ ರೊಟ್ಟಿ ಹೆ೦ಚಿನಲ್ಲಿ ಹುರಿದು, ಕೆಂಡದಲ್ಲಿ ಸುಟ್ಟು,ತೆಂಗಿನ ಕಾಯಿ ಹಸಿಮೆಣಸಿನ ಚಟ್ನಿಯೊ೦ದಿಗೆ ಸವಿದರೆ ಮಾತ್ರ ಪಶ್ಚಿಮ ಘಟ್ಟದ ಜೈನರ ರೊಟ್ಟಿಯ ಘಮ ಮತ್ತು ರುಚಿ ಗೊತ್ತಾಗುತ್ತದೆ.
ನಾವೇ ಬೆಳದ ಅಕ್ಕಿ, ಕಾಯಿ, ಮೆಣಸು ಮನೆಯಲ್ಲೇ ತಯಾರಾದ ಎಮ್ಮೆ ಹಾಲಿನ ಬೆಣ್ಣೆ, ಬಿಸಿ ಬಿಸಿಯಾದ ಪಿಲ್ಟರ್ ಕಾಫಿಯ ಜೊತೆ ಮುಂಗಾರು ಮಳೆಯ ಪ್ರಾರ೦ಭದ ಮುಂಜಾನೆ ಉಪಹಾರದಲ್ಲಿ ಇದೆಲ್ಲ ನೆನಪಾಯಿತು.
ಇತಿಹಾಸ ಸಂಶೋದಕ ಲೋಕರಾಜ ಜೈನರು ಅವರ ಪದ್ದತಿಯ ಈ ಅಕ್ಕಿ ರೊಟ್ಟಿ ವಿದಾನ ತಿಳಿಸಿದ್ದಾರೆ ನೋಡಿ....
Arun Prasad ಸರ್ ಬೆಳತಿಗೆ ಅಕ್ಕಿ ಜೊತೆ ಸ್ವಲ್ಪ ಕುಚ್ಚಲಕ್ಕಿ ಹಾಕಿ ನೆನೆಸ್ಥಾರೆ ಅದನ್ನು ರುಬ್ಬವ ಕಲ್ಲಿಗೆ ಹಾಕುವುದರಿಂದ ತಿರ್ಸಕ್ಕಿ ಅಥವಾ ತಿರುವಕ್ಕಿ ರೊಟ್ಟಿ ಎನ್ನತ್ತಾರೆ. ಅದರಲ್ಲೂ ದಪ್ಪ ಅಕ್ಕಿ ಅಂದರೆ ಕೊರೆಯಗ್ಗೆ ಅಕ್ಕಿ ಹಾಗು ಮೊಳ್ಳಗೆ ಅಕ್ಕಿ ಅವು ರುಚಿಯನ್ನು ಇಮ್ಮಡಿ ಮಾಡುತ್ತವೆ. ಬಣ್ಣವೂ ಸಂಪೂರ್ಣ ಕಂದು ರುಚಿಯು ತುಂಬಾ ವಿಶೇಷ. ನಮ್ಮಲ್ಲಿ ಮೊದಲು ಒನಕೆಯಿಂದ ಕುಟ್ಟಿದ ಅಕ್ಕಿ ಬಳಸಿ ರೊಟ್ಟಿ ಮಾಡಲಾಗುತ್ತಿತ್ತು. ಈಗ ಆ ಜಾತಿಯ ಭತ್ತ ಬೆಳೆಯುವವರೇ ಇಲ್ಲ.
ರತ್ನಚೂಡಿ, ಕಳವೆ, ಜಿರಿಸಾಲೆ, ದಬ್ಬಣಸಾಲೆ, ಕೋಯಿಮುತೃ, ಮುಂತಾದವುಗಳು ಈಗ ನೆನಪಷ್ಟೆ ಸರ್.
Comments
Post a Comment