Blog number 1337. ನನ್ನ ಅನುಭವದ ಅತೀಂದ್ರಿಯ ಶಕ್ತಿ ಭಾಗ-1, ಆ ಗಟ್ಟಿ ಮುಟ್ಟಾದ ಮಾವಿನ ಮರ ಮಳೆ -ಗಾಳಿ ಇಲ್ಲದ ಬಿರು ಬೇಸಿಗೆಯಲ್ಲಿ ಬೀಳುತ್ತದೆಂದು ನನ್ನ ಒಳ ಮನಸ್ಸಿನಲ್ಲಿ ಅನ್ನಿಸಿ ಉಸಿರಾಟ ಎದೆ ಬಡಿತ ಜಾಸ್ತಿ ಮಾಡಿತ್ತು ನಂತರ ಮರ ಬಿದ್ದು ಮನಸ್ಸು ಸಹಜ ಸ್ಥಿತಿಗೆ ಬಂತು.
ಅತೀಂದ್ರಿಯ ಅನುಭವ ಭಾಗ -1.
ಎತ್ತರದ ಮಾವಿನ ಮರದ ಕೆಳಗೆ ಕುಳಿತು ಸೆಲ್ ಫೋನಿನಲ್ಲಿ ಸಂಭಾಷಣೆ ಮಾಡುತ್ತಿದ್ದ ಜೆಸಿಬಿ ಯಂತ್ರದ ಸಹ ಚಾಲಕ
ಆ ಮರ ಕೆಲವೇ ಕ್ಷಣದಲ್ಲಿ ಅವನು ಕುಳಿತ ಜಾಗದ ಮೇಲೆ ಬೀಳುತ್ತದೆ ಅಂತ ಮನಸ್ಸು ಹೇಳಲು ಪ್ರಾರಂಬಿಸಿತ್ತು.
ಅಲ್ಲಿ ಸುತ್ತಲು ಬಿದಿರು ಮೆಳೆಗಳು ಪಕ್ಕದ ಜಮೀನಿನಲ್ಲಿ ಚೊಕ್ಕ ಮಾಡಿಸದಿದ್ದರೆ ಬೇಸಿಗೆಯಲ್ಲಿ ರಬ್ಬರ್ ತೋಟಕ್ಕೆ ಅಪಾಯವಾದ್ದರಿಂದ ಬಾಡಿಗೆ ಜೇಸಿಬಿ ಯಂತ್ರ ಒಂದನ್ನು ಗೊತ್ತು ಮಾಡಿಕೊಂಡು ನಾನು ಮತ್ತು ಸಹಾಯಕ ಗೇರುಬೀಸು ಚೆನ್ನಪ್ಪನ ಜೊತೆ ಹೋಗಿದ್ದೆ.
ಚೆನ್ನಪ್ಪ ಬೈಕಲ್ಲಿ ಜೇಸಿಬಿ ಮುಂದೆ ದಾರಿಯಲ್ಲಿ ಹೋದರೆ ನಾನು ಜೇಸಿಬಿಯಲ್ಲಿ ಕುಳಿತು ಪ್ರಯಾಣಿಸಿದ್ದೆ ಈ ಸಂದರ್ಭದಲ್ಲಿ ಈ ಯಂತ್ರದ ಇಬ್ಬರು ಚಾಲಕರು ದೂರದ ಬೆಳಗಾವಿಯಿಂದ ಬಂದವರೆಂದು ಒಬ್ಬನ ಹೆಸರು ಈಶ್ವರ ಮತ್ತೊಬ್ಬ ಮಾರುತಿ.
ಅವರಿಗೆ ಕೆಲಸ ತೋರಿಸಿ ಅವರು ಯಂತ್ರ ಪ್ರಾರಂಬಿಸಿದ ಸಮಯ ಬರೆದು ಕೊಂಡು ಅಲ್ಲೇ ಕುಳಿತುಕೊಂಡಿದ್ದೆ ಸಮೀಪದಲ್ಲಿ ಚೆನ್ನಪ್ಪನೂ ಕುಳಿತಿದ್ದ.
ಸಹ ಚಾಲಕ ಮಾರುತಿ ಮೊಬೈಲ್ ಪೋನ್ ನಲ್ಲಿ ಮಾತಾಡುತ್ತಾ ಹೋಗಿ ಕೆಳಗಿನ ಗದ್ದೆ ಬಯಲಿನ ದೊಡ್ಡ ಮಾವಿನ ಮರದ ನೆರಳಲ್ಲಿ ಕುಳಿತದ್ದು ನೋಡಿದೆ.
ಎರೆಡು ಮಾರು ಗಾತ್ರದ 70-80 ಅಡಿ ಎತ್ತರದ ಗದ್ದೆಗಳ ನಡುವಿನ ಏಕೈಕ ಮಾವಿನ ಮರ ಮಾರುತಿ ಕುಳಿತ ದಿಕ್ಕಿಗೆ ಬಾಗಿತ್ತು ಅದರ ನೆರಳು ಮಾರುತಿ ನೆತ್ತೆಗಿತ್ತು... ಆಗಲೇ ನನಗೆ ವಿಚಿತ್ರ ತಳಮಳ ಪ್ರಾರಂಭ ಆಯಿತು ... ಮಾರುತಿ ಅಲ್ಲಿ ಕುಳಿತದ್ದೇ ಅಪಾಯಕಾರಿ ಜಾಗ... ತಕ್ಷಣ ಅವನನ್ನು ಅಲ್ಲಿಂದ ಸ್ಥಳಾ೦ತರಿಸಲೇ ಬೇಕು....ಏನೋ ಅಪಾಯ ಇದೆ.... ಮಾವಿನ ಮರ ಅವನ ಮೇಲೆ ಬಿದ್ದರೆ..... ಕೆಲವೇ ಕ್ಷಣದಲ್ಲಿ ಮಾವಿನ ಬೀಳಲಿದೆ... ಹೀಗೆ ಭಯ ಪ್ರಾರಂಭ ಆಯಿತು.
ಪಕ್ಕದಲ್ಲಿದ್ದ ಚೆನ್ನಪ್ಪನಿಗೆ ಆ ಮರದ ನೆರಳಲ್ಲಿ ಕುಳಿತ ಮಾರುತಿಗೆ ಬರಲು ಹೇಳು ಇಲ್ಲೇ ಕುಳಿತುಕೊಳ್ಳಲಿ ಅಂದೆ, ಚೆನ್ನಪ್ಪ ಅಲ್ಲಿ ಒಳ್ಳೇ ನೆರಳಿದೆ ಅಲ್ಲೇ ಕುಳಿತಿರಲಿ ಅಂದ.
ಆ ಮರ ಬಿದ್ದು ಗಿದ್ದರೆ ಮರಾಯ ಅಂದಿದ್ದಕ್ಕೆ ಚೆನ್ನಪ್ಪ "ಆ ಮರ ಇನ್ನು 10- 20 ವರ್ಷ ಜುಪ್ಪು ಅನ್ನೊಲ್ಲ" ಅಂದ ನನ್ನ ಒಳ ಮನಸ್ಸು ಮರ ಬೀಳುವ ಸಮಯದ ಕೌಂಟ್ ಡೌನ್ ಪ್ರಾರ೦ಬಿಸಿತ್ತು... ಇನ್ನು ಹೆಚ್ಚು ಸಮಯ ಇಲ್ಲ... ಮಾರುತಿಗೆ ಅಲ್ಲಿಂದ ಎಬ್ಬಿಸಲೇ ಬೇಕು... ಅವನನ್ನ ಎಚ್ಚರಿಸಲೇ ಬೇಕು... ಅಂತ... ನನ್ನ ಎದೆ ಬಡಿತವೂ ಹೆಚ್ಚಾಯಿತು ...
ಏಯ್ ಮಾರುತೀ... ಮಾರುತೀ... ಅಂತ ನಾನು ಕೂಗಿ ಕರೆದರೂ ಮಾರುತಿಗೆ ನಮ್ಮ ಕರೆ ಕೇಳಿಸದಂತೆ ಪೋನಿನಲ್ಲಿ ಮಗ್ನ ಚೆನ್ನಪ್ಪನಿಗೆ ಅವನನ್ನ ಅಲ್ಲಿಂದ ಎಬ್ಬಿಸು ಮರಾಯ ಆ ಮಾವಿನ ಮರ ಬೀಳುತ್ತೆ ಅಂತ ಗಡಿಬಿಡಿ ಮಾಡಿದೆ, ಇದೆಂತ ವಿಚಿತ್ರ ಈ ಮರ ಎಲ್ಲಿ ಬೀಳುತ್ತೆ ಅಂತ ಮನಸ್ಸಿನಲ್ಲಿ ಯೋಚಿಸುತ್ತಾ ಚೆನ್ನಪ್ಪ ಅವನನ್ನ ಕರೆಯಲು ನಿದಾನವಾಗಿ ಹೆಜ್ಜೆ ಹಾಕಿದ.
ನನಗೆ ಸಮಾದಾನ ಆಗಲಿಲ್ಲ... ಜೇಸಿಬಿ ಚಾಲನೆ ಮಾಡುತ್ತಿದ್ದ ಈಶ್ವರನಿಗೆ ಯಂತ್ರ ನಿಲ್ಲಿಸಲು ಹೇಳಿದೆ... ಯಂತ್ರ ನಿಲ್ಲಿಸಿದ ಕೂಡಲೇ ಅವನಿಗೆ ಯ೦ತ್ರದ ಹಾರ್ನ್ ಮಾಡಿ ಮಾರುತಿಗೆ ಅಜೆ೯೦ಟ್ ಆಗಿ ಕರಿ... ಆ ಮರ ಬೀಳುತ್ತೆ ಈಗ ಅಂದೆ... ಅವನು ಹಾರ್ನ್ ಮಾಡಲು ಮಾರುತಿ ಈ ಕಡೆ ತಿರುಗಿದ ಈಶ್ವರ ಕೈ ಸನ್ನೆ ಮಾಡಿ ಅರ್ಜಿಂಟ್ ಬಾ ಇಲ್ಲಿ ಅಂದಾಗ ಮಾರುತಿ ಅಲ್ಲಿಂದ ಎದ್ದು ನಮ್ಮ ಕಡೆ ನಡೆದು ಬರಲು ಪ್ರಾರಂಬಿಸಿದ.
"ಸಾಹುಕಾರರೆ ಆ ಮರ ಹೆಂಗೆ ಬೀಳುತೇತರಿ... ಅಷ್ಟು ಗಟ್ಟಿ ಮುಟ್ಟು ಐತಿ... ಮಳೆ ಇಲ್ಲ ಗಾಳಿ ಇಲ್ಲ" ಅನ್ನುತ್ತಿರುವಾಗಲೇ ಆ ಮಾವಿನ ಮರ ದಡಾಲ್ ಎಂದು ಬಿತ್ತು, ಶಬ್ದಕ್ಕೆ ಬೆದರಿ ಹಿಂದೆ ತಿರುಗಿದ ಮಾರುತಿಗೆ ತಾನು ಕುಳಿತ ಜಾಗದಲ್ಲೇ ಕುಳಿತಿದ್ದರೆ ಬದುಕುತ್ತಿರಲಿಲ್ಲ ಅನ್ನಿಸಿ ಗಾಭರಿ ಆಯಿತು.
ಚೆನ್ನಪ್ಪ ಮತ್ತು ಚಾಲಕ ಈಶ್ವರ ನನ್ನನ್ನು ಅಚ್ಚರಿಯಿಂದ ಭಯದಿಂದ ನೋಡುತ್ತಿದ್ದರು, ನನ್ನ ಅಶಾಂತ ಮನಸ್ಸು ಶಾಂತವಾಗುತ್ತಾ ಹೃದಯದ ಬಡಿತದ ಲಯ ಸಾಮಾನ್ಯ ಸ್ಥಿತಿಗೆ ಬಂತು.
ವಿಚಾರ ತಿಳಿದ ಮಾರುತಿಗೆ ಅವನ ಜೀವ ಉಳಿಸಿದ ದೇವರು ನಾನು ಅನ್ನಿಸಿರಬೇಕು ಸಾಷ್ಟಾಂಗ ನಮಸ್ಕಾರ ಮಾಡಿದ.. ಚೆನ್ನಪ್ಪ ಮತ್ತು ಈಶ್ವರ ಮಾತ್ರ ನನ್ನಲ್ಲಿ ದೆವ್ವ ನೋಡಿದಂತೆ ಭಯದಲ್ಲಿದ್ದರು.
ನನಗೆ ಅನೇಕ ಇಂತಹ ಅನುಭವಗಳು ಆಗಿದೆ, ಅತೀಂದ್ರಿಯ ಶಕ್ತಿಯಾ? ಕಾಕತಾಳಿಯವಾ? ಗೊತ್ತಿಲ್ಲ ಆದರೆ ಈ ಶಕ್ತಿ ನನ್ನ ನಿಯಂತ್ರಣದಲ್ಲಿ ಇಲ್ಲ.
ನನ್ನ ರಾಶಿ ಭವಿಷ್ಯ ಮೇಷ ರಾಶಿ ಈ ರಾಶಿಯವರಿಗೆ ಇಂತಹ ಅನುಭವ ಸಹಜ ಅನ್ನುತ್ತಾರೆ.
Comments
Post a Comment