#ಕಳೆದು_ಹೋಗಿದ್ದ_ತಳಿ_ಬೀಜ_ನೆರೆರಾಜ್ಯದಿಂದ_ಬಂದಿದೆ.
ಕೇರಳ ರಾಜ್ಯದ ಕೃಷಿಕರಿಂದ ರಾಜ್ಯಕ್ಕೆ ಪರಿಚಯಸಲ್ಪಟ್ಟ ರಗೋಡಿ ಮತ್ತು ಹಿಮಾಚಲ ಶುಂಠಿ ತಳಿಗಳಿಂದ ನಮ್ಮ ಭಾಗದ ಪುರಾತನ ದೇಸಿ ಶುಂಠಿ ಕ್ರಮೇಣ ನಾಪತ್ತೆ ಆಗಿಬಿಟ್ಟಿತ್ತು.
ಹೆಚ್ಚು ರಾಸಾಯನಿಕ ಗೊಬ್ಬರ ಮತ್ತು ತೀಕ್ಷ್ಣ ಕ್ರಿಮಿನಾಶಕದ ಬಳಕೆಯಿಂದ ಹೆಚ್ಚು ಬೆಳೆ ಮತ್ತು ಹೆಚ್ಚು ಆದಾಯ ಈ ಹೊಸ ತಳಿಗಳನ್ನ ಜನಪ್ರಿಯಗೊಳಿಸಿತ್ತು.
ಹಸಿ ಶುಂಠಿ ನಿತ್ಯ ತರಕಾರಿ ಮಾರುಕಟ್ಟೆಗೆ ಹೋದರೆ, ಒಣಗಿಸಿ ಗಂದಕದ ಹೊಗೆ ಹಾಕುತ್ತಿದ್ದ ಒಣ ಶುಂಠಿ ಔಷದ ತಯಾರಿಕೆ, ಸಾಂಬಾರ್ ಪುಡಿಗಳಿಗೆ ಮತ್ತು ಸೌದಿ ದೇಶಗಳಿಗೆ ಹೆಚ್ಚು ಹೋಗುತ್ತಿತ್ತು.
ರಗೋಡಿ ಮತ್ತು ಹಿಮಾಚಲ ಶುಂಠಿಗಳಲ್ಲಿ ಶುಂಠಿಯ ಹೊರ ಭಾಗ ಮಾತ್ರ ಗಟ್ಟಿ, ಒಳ ತಿರಳು ಮೃದು ಮತ್ತು ಹಾಗೆಯೇ ತಿನ್ನಬಹುದು ಆದರೆ ನಮ್ಮ ನಾಟಿ ತಳಿ ಸಿಪ್ಪೆ ತೆಳು ಒಳ ಭಾಗದ ತಿರುಳು ನಾರು ಮತ್ತು ಬರಿ ಬಾಯಿಯಲ್ಲಿ ತಿನ್ನಲಾರದಷ್ಟು ಖಾರ.
ಈಗ ಪುನಃ ಹಳೆಯ ನಾಟಿ ತಳಿ (ಜವಾರಿ) ಗೆ ಮಾರುಕಟ್ಟೆಯಲ್ಲಿ ಬೆಲೆ ಬರುತ್ತಿದೆ, ಇದಕ್ಕೆ ರೋಗ ಕಡಿಮೆ ಆದ್ದರಿಂದ ಕ್ರಿಮಿನಾಶಕ ಬಳಕೆ ಬೇಕಾಗಿಲ್ಲ ಮತ್ತು ರಾಸಾಯನಿಕ ಗೊಬ್ಬರ ಇಲ್ಲದೆ ಹೆಚ್ಚು ಇಳುವರಿ ಸಾಧ್ಯವಿರುವುದರಿಂದ ಮಹಾರಾಷ್ಟ್ರ ಮತ್ತು ಗುಜರಾತಿನ ರೈತರು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ.
ಇದನ್ನು ಇಲ್ಲಿಗೆ ತಂದು ಒಣಗಿಸಿ ಒಣ ಶುಂಠಿ ಮಾಡಲು ನಮ್ಮ ಭಾಗದ ರೈತರು ದೊಡ್ಡ ಪ್ರಮಾಣದಲ್ಲಿ ಈ ಶುಂಠಿ ತರಿಸುತ್ತಿದ್ದಾರೆ.
ಮಹಾರಾಷ್ಟ್ರ ಮತ್ತು ಗುಜರಾತಿಗೆ ಹೋಗಿ ಅಲ್ಲಿನ ರೈತರನ್ನ ನೇರ ಸಂಪಕಿ೯ಸಿ ಒಣ ಶುಂಠಿ ಮಾಡಲು ಅಲ್ಲಿಂದ ಶುಂಠಿ ಖರೀದಿಸಿ ತರುವ ನಮ್ಮ ಊರಿನ ತಿಪ್ಪಿನಜೆಡ್ಡಿನ ಗಣಪತಿ ಗೌಡರು ನನಗೆ ಸುಮಾರು 5 ಕೆಜಿ ಅಲ್ಲಿನ ನಾಟಿ ತಳಿ ಶುಂಠಿ ಕಳಿಸಿದ್ದರು ನಾನು ಕೃಷಿ ತಜ್ಞ ನಾಗೇಂದ್ರ ಸಾಗರರಿಗೆ, ಶಿವರಾಂ ಪಾಟೀಲರಿಗೆ ಕಳಿಸಿದ್ದೇನೆ.
Comments
Post a Comment