#ಶಿವಮೊಗ್ಗದ_ಮಲೆನಾಡು_ಟುಡೇ_ಲೇಖನ_ನೋಡಿದ_ಮೇಲೆ_ಗೊತ್ತಾಗಿದ್ದು.
#ಶಿವಮೊಗ್ಗ_ಜೈಲಿನಲ್ಲಿ_ಸುರೇಶ್_ಆಚಾರ್_ಪ್ರಸಿದ್ದ_ಕಲಾವಿದರಾಗಿದ್ದರು.
#ಅವರು_ಬರೆದ_ಪೆನ್ಸಿಲ್_ಆರ್ಟ್_ದೊಡ್ಡ_ದೊಡ್ಡ_ಸೆಲಿಬ್ರಿಟಿಗಳ_ಮನೆಯಲ್ಲಿದೆ.
#ನಮ್ಮ_ಮಲ್ಲಿಕಾ_ರೆಸ್ಟೋರಾಂಟ್_ಪೀಠೋಪಕರಣ_ಮಾಡಿದ್ದು_ಇವರೆ.
2012ರ ಆಗಸ್ಟ್ ತಿಂಗಳಲ್ಲಿ ನಮ್ಮ ಮಲ್ಲಿಕಾ ವೆಜ್ ನ ಪೀಠೋಪಕರಣ ತಯಾರಿಸಲು ಬಂದ ಕಾರ್ಪೆಂಟರ್ ಸುರೇಶ್ ಆಚಾರ್ ಇವರ ಊರು ನಮ್ಮ ಆನಂದಪುರಂ ಸಮೀಪದ ನವಟೂರು.
ಇದು ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸಮೀಪದ ಊರು, ಈ ಊರಿನ ಮಧ್ಯದಲ್ಲೇ ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ಸಾಗಿ ಹೋಗಿದೆ.
ಈ ಊರಲ್ಲಿನ ವಿಶೇಷ ಅಂದರೆ ವಿಶ್ವಕರ್ಮ ಜನಾಂಗದ ಕುಟುಂಬಗಳ ಹೆಸರುಗಳು ,ರಾಮಾಯಣದ ಪ್ರಸಿದ್ದ ಪುರುಷರದ್ದು, ಬೀಷ್ಮಾಚಾರ್ - ದ್ರೋಣಾಚಾರ್ - ಬೀಮಾಚಾರ್ - ದರ್ಮಾಚಾರ್-ಭದ್ರಾಚಾರ್-ರಾಮಾಚಾರ್- ಲಕ್ಷ್ಮಣಾಚಾರ್..... ಹೀಗೆ ಸಾಲು ಸಾಲು ಮಹಾಬಾರತದ ಹೆಸರುಗಳು,ಈಗಿನ ತಲೆಮಾರಿನವರಲ್ಲಿ ಇದು ಬದಲಾಗಿದೆ.
ಸುರೇಶ್ ಆಚಾರ್ ಆ ಕಾಲದಲ್ಲಿ ಹುಬ್ಬಳ್ಳಿ ಶಹರದಲ್ಲಿ ಕಾರ್ಪೆಂಟರ್ ಕೆಲಸದಲ್ಲಿ ಒಳ್ಳೇ ಹವಾ ಸೃಷ್ಟಿಸಿಕೊ೦ಡಾತ ನಂತರ ವಿಪರೀತ ಕುಡಿತ ಇವರ ಜೀವನೋತ್ಸವವನ್ನೆ ಕೊಂದು ಬಿಟ್ಟಿತ್ತು ಆ ಸಮಯದಲ್ಲಿಯೇ ಇವರು ಇವರ ಚಿಕ್ಕಪ್ಪನ ಮಗ ಮಂಜುನಾಥ ಆಚಾರ್ ಜೊತೆ ನಮ್ಮ ಕೆಲಸಕ್ಕೆ ಬಂದು ಪರಿಚಯ ಆದರು.
ಕೆಲ ದಿನಗಳು ಸುರೇಶ್ ಆಚಾರ್ ಬರಲೇಇಲ್ಲ ಒಂದು ದಿನ ಇವರ ಚಿಕ್ಕಪ್ಪನ ಮಗ ಮಂಜುನಾಥ ಆಚಾರ್ ಬಂದು ಬಾಕಿ ಉಳಿದ ಕೆಲಸ ಮುಗಿಸಿ ಕೊಡುವ ಮಾತಾಡಿದರು, ಅವರು ಅವತ್ತು ಹೇಳಿದ್ದು ಸುರೇಶ್ ಆಚಾರ್ ಆರೋಗ್ಯ ಸರಿ ಇಲ್ಲ ಆಸ್ಪತ್ರೆ ಸೇರಿದ್ದಾರೆ ಅಂತ, ನಂತರ ಮಂಜುನಾಥ ಆಚಾರ್ ನನ್ನ ಕೆಲಸ ಪೂರ್ತಿ ಮಾಡಿಕೊಟ್ಟ ನಂತರ ಹೇಳಿದ್ದು ಸೂರಿ ಜೈಲಲ್ಲಿದ್ದಾರೆ ಅಂತ. ಸುರೇಶ್ ಆಚಾರ್ ಗಂಡ-ಹೆಂಡತಿ ಜಗಳದಿಂದ ಜೈಲು ಸೇರಿದ್ದು ಅಂತ ಗೊತ್ತಾದಾಗ ನನಗೂ ಬೇಸರ ಆಯಿತು, ಸುರೇಶ್ ಆಚಾರ್ ಕುಡಿತ ಜಗಳ ಬಿಡಿಸಲು ಅವರ ಕುಟುಂಬದವರು ತಕ್ಷಣ ಜಾಮೀನು ಕೊಡದ ತೀರ್ಮಾನ ಮಾಡಿದ್ದಾರೆ ಅಂದಾಗ ನಾನು ಒಪ್ಪಲಿಲ್ಲ ಯಾಕೆಂದರೆ ಅಂತರ್ಮುಕಿ ವ್ಯಕ್ತಿ ಸುರೇಶ್ ಆಚಾರ್ ಜೈಲಿನಲ್ಲಿ ಬೇರೆ ರೀತಿಯ ಕ್ರಿಮಿನಲ್ ಗಳ ಜೊತೆ ಸೇರಿ ಹಾಳಾಗುವ ಸಾಧ್ಯತೆಗಳ ಬಗ್ಗೆ ನಾನು ಮಂಜುನಾಥ ಆಚಾರ್ ಗೆ ಹೇಳಿದ್ದೆ.
ಸಣ್ಣ ಕುಟುಂಬ ವ್ಯಾಜ್ಯದಿಂದ ಜೈಲಿಂದ ಹೊರಬಂದ ನಂತರ ಸುರೇಶ್ ಆಚಾರ್ ಕುಡಿತ ಕಡಿಮೆ ಆಗಲೇ ಇಲ್ಲ, ಪತಿ ಪತ್ನಿ ಒಂದಾಗಲೇ ಇಲ್ಲ ಇದರ ಮಧ್ಯೆ ನಮ್ಮ ಊರಿನ ಶ್ರೀ ವರಸಿದ್ಧಿವಿನಾಯಕ ದೇವಸ್ಥಾನದ ಹುಂಡಿ ಕಳವು ಸುರೇಶ್ ಆಚಾರ್ ಮಾಡಿದ್ದಾರೆಂದು ಪೋಲಿಸರು ಕರೆದುಕೊಂಡು ಬಂದಾಗ ಯಾರೂ ನಂಬಲೇ ಇಲ್ಲ, ರಿಪ್ಪನ್ ಪೇಟೆಯ ಸುತ್ತಮುತ್ತದ ದೇವಸ್ಥಾನದ ಹುಂಡಿ ಕಳವು ಇವರ ಮೇಲೇ ಬಂತು, ಸುರೇಶ್ ಆಚಾರ್ ತನ್ನ ಜೊತೆ ಯಾರು ಇದ್ದರು ಅನ್ನುವುದೂ ಹೇಳಲಿಲ್ಲ, ತಾನು ಕಳ್ಳತನ ಮಾಡಲಿಲ್ಲ ಅಂತ ನಿರಾಕರಿಸಲೂ ಇಲ್ಲ ಒಂದು ರೀತಿ ಸ್ಥಿತಪ್ರಜ್ಞನಾಗಿ ಜೈಲು ಸೇರಿದರು.
ನಮ್ಮ ದೇವಾಲಯದ ಆಡಳಿತ ಮಂಡಳಿಯವರು ಇವರ ವಿರುದ್ದದ ವಿಚಾರಣೆಯಲ್ಲಿ ಸುರೇಶ್ ಆಚಾರ್ ವಿರುದ್ದ ಸಾಕ್ಷಿ ಹೇಳಲೂ ಇಲ್ಲ ಕಾರಣ ಈ ಕಳ್ಳತನ ಸುರೇಶ್ ಆಚಾರಿಯದ್ದು ಎಂದು ಅವರು ನಂಬಲು ಸಾಧ್ಯವಿಲ್ಲದ್ದು.
ಮೊನ್ನೆ ಸುರೇಶ್ ಆಚಾರ್ ಚಿಕ್ಕಪ್ಪನ ಮಗ ಮಂಜುನಾಥ ಆಚಾರ್ "ಸೂರಿ ರೈಲಿಗೆ ಸಿಕ್ಕಿ ಸತ್ತು ಹೋದ"ಅಂತ ದುಃಖದಿಂದ ಹೇಳಿದಾಗಲೇ ಬೇಸರ ಆಯಿತು.
ಯಾಕಾಗಿ ಆತ್ಮಹತ್ಯೆಗೆ ಶರಣಾದರು ಅನ್ನುವುದಕ್ಕೆ ಉತ್ತರ ಇಲ್ಲ ಆದರೆ ಇವತ್ತು ಶಿವಮೊಗ್ಗದ #ಮಲೆನಾಡು_ಟುಡೇ ಸಾಮಾಜಿಕ ಜಾಲ ತಾಣದ ಸುದ್ದಿ ಸಂಸ್ಥೆಯ ಸುದ್ದಿಯ ತಲೆ ಬರಹ "ಹೊಸನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಈ ಅಪರಿಚಿತ ಎಂತಹ ಸೆಲೆಬ್ರಿಟಿ ಗೊತ್ತಾ? ಈತನಿಗಿತ್ತು ವಿವಿಐಪಿಗಳ ಪ್ಯಾನ್ ಪಾಲೋವಿಂಗ್ " ಜೆಪಿ ಅನ್ನುವವರು ಬರೆದದ್ದು ಓದಿದಾಗಲೇ ಗೊತ್ತಾಗಿದ್ದು ಸೂರಿ 2 ವರ್ಷ ಜೈಲಿನಲ್ಲಿ ಇದ್ದದ್ದು, ಅಲ್ಲಿ ಜೈಲು ಶಿಕ್ಷಕಿ ಲೀಲಾ ಮೇಡಂ ಸೂರಿಗೆ ಸೂಕ್ತ ತರಬೇತಿ ಆತ್ಮವಿಶ್ವಾಸಗಳನ್ನು ತುಂಬಿ ಸೂರಿಯಲ್ಲಿದ್ದ ಅತ್ಯುತ್ತಮ ಕಲಾಕಾರಿಕೆಯನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದ್ದರ ವಿವರ.
ಪೆನ್ಸಿಲ್ ಆರ್ಟ್ ಮೂಲಕ ಸೂರಿ ದೇವರು, ದೇಶಭಕ್ತರು, ಸ್ವಾತಂತ್ಯ ಹೋರಾಟಗಾರರು, ನಾಡಿನ ಗಣ್ಯರಾಜಕಾರಣಿಗಳು, ಪೋಲಿಸ್ ಅಧಿಕಾರಿಗಳ ಚಿತ್ರ ಬಿಡಿಸಿದ್ದಾರೆ ಅದನ್ನು ಅನೇಕ ಗಣ್ಯರಿಗೆ ಜೈಲು ಅಧಿಕಾರಿಗಳು ನೆನಪಿನ ಕಾಣಿಕೆ ಆಗಿ ನೀಡಿದ್ದಾರೆ, ಜೈಲಿನ ಸೆಲ್ ಗಳಲ್ಲಿ ಸೂರಿ ಬರೆದ ದೇವರ ಚಿತ್ರ ಸಹ ಖೈದಿಗಳು ನಿತ್ಯ ಪೂಜೆಗೆ ಇಟ್ಟುಕೊಂಡಿದ್ದಾರೆ, ಸೂರಿ ಬರೆದ ಚಿತ್ರ ಪ್ರದಶ೯ನ ಜೈಲಿನಲ್ಲಿ ಮಾಡಿದ್ದಾರೆ ಆದರೆ ಇದಾವುದೂ ಅವರ ಮನೆಯವರಿಗಾಗಲೀ, ಊರವರಿಗಾಗಲೀ ಗೊತ್ತಾಗಿದ್ದು ಸೂರಿ ಆತ್ಮಹತ್ಯೆ ನಂತರ ನಿನ್ನೆ ಬಂದ ಈ ಸಚಿತ್ರ ವರದಿಯಿಂದ, ಸೂರಿಯ ಇನ್ನೊಂದು ಕಲಾವಿದನ ಮುಖ ಪರಿಚಯಿಸಿದ ಈ #ಮಲೆನಾಡು_today ಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ.
ಇಲ್ಲಿ ಕ್ಲಿಕ್ ಮಾಡಿ https://malenadutoday.com/jp-writes-the-story-of-the-life-of-a-man-who-committed-suicide-in-hosanagara
Comments
Post a Comment