Blog number 2045. ಕುಚುಲಕ್ಕಿ ಇಂಗ್ಲೀಷ್ ನಲ್ಲಿ ಪ್ಯಾರಾ ಬಾಯಿಲ್ಡ್ ರೈಸ್ 500 ವಷ೯ಗಳ ಹಿಂದೆ ಜಗತ್ತಿಗೆ ಪರಿಚಯಿಸಿದ ಗೇರುಸೊಪ್ಪೆಯ ಜೈನ ರಾಜ ಹೈವರಸ
#ಕುಚುಲಕ್ಕಿ_ಕಂಡು_ಹಿಡಿದ_ದೇಶ_ಭಾರತ
#ಐನೂರು_ವರ್ಷದ_ಹಿಂದೆ_ಗೇರುಸೊಪ್ಪೆ_ಸಾಮ್ರಾಜ್ಯದ_ಹೈವರಸ_ಜಗತ್ತಿಗೆ_ಪರಿಚಯಿಸಿದರು
#ಆದರೆ....
#ಜರ್ಮನ್_ವಿಜ್ಞಾನಿ_ಎರಿಕ್_ಗುಸ್ತಾಂವ್_ಹೆಜ್ಲಾಂಬ್_ಮತ್ತು_ಬ್ರಿಟಿಷ್_ವಿಜ್ಞಾನಿ_ಪ್ರಾನ್ಸಿಸ್_ಹೆರಾನ್_ರೋಜರ್
#ಕುಚುಲಕ್ಕಿ_1910ರಲ್ಲಿ_ಕಂಡು_ಹಿಡಿದ_ದಾಖಲೆ_ಹೊಂದಿದ್ದಾರೆ.
#ನನ್ನ_ಅಜ್ಜಿ_100_ವರ್ಷದ_ಹಿಂದೆ_ಆನಂದಪುರಂನಲ್ಲಿ_ಕುಚುಲಕ್ಕಿ_ಉದ್ಯಮ_ನಡೆಸಿದ್ದರು
#ಎಂಬತ್ತರ_ದಶಕದಲ್ಲಿ_ನಾನು_ಕುಚಲಕ್ಕಿ_ಮಾಡುವುದು_ಕಲಿತಿದ್ದೆ.
ಇವತ್ತಿನ #ಡಿಜಿಟಲ್_ಮಾಧ್ಯಮ ಪ್ರಸಾರ ಮಾಡಿದ ಗೇರುಸೊಪ್ಪೆ ಸಾಮ್ರಾಜ್ಯದ ಇತಿಹಾಸದಲ್ಲಿ ಇತಿಹಾಸ ಸಂಶೋದಕರಾದ ಲೋಕರಾಜ ಜೈನರು ರಾಜ ಹೈವರಸ 500 ವರ್ಷದ ಹಿಂದೆ ಜಗತ್ತಿಗೆ ಕುಚಲಕ್ಕಿ ಪರಿಚಯಿಸಿದವರೆಂದು ತಿಳಿಸಿದ್ದಾರೆ.
ಅದಕ್ಕೆ ಪೂರಕವಾಗಿ ರಾಜ ಹೈವರಸ ಬತ್ತ ಒಣಗಿಸುವ ಕಣಗಳನ್ನು ನಿರ್ಮಿಸಿದ್ದನ್ನು ತೋರಿಸಿದ್ದಾರೆ, ಭಾರತದ ಕರಾವಳಿಯಲ್ಲಿ ಜನ ನಿತ್ಯ ಪ್ಯಾರಾ ಬಾಯಿಲ್ಡ್ ರೈಸ್ ಎಂಬ ಕುಚಲಕ್ಕಿ ಬಳಸುತ್ತಾರೆ.
ರೈಸ್ ಮಿಲ್ ಯುಗ ಪ್ರಾರಂಭಕ್ಕೆ ಮೊದಲು ದೊಡ್ಡ ದೊಡ್ಡ ತಾಮ್ರದ ಹಂಡೆಗಳಲ್ಲಿ ಬತ್ತ ನೆನೆಸಿ ಬೇಯಿಸಿ ನಂತರ ಕಣಗಳಲ್ಲಿ ಹದಕ್ಕೆ ತಕ್ಕವಾಗಿ ಬಿಸಿಲಲ್ಲಿ ಒಣಗಿಸಿ ಒರಳಿನಲ್ಲಿ ಒನಕೆಯಿಂದ ಕುಟ್ಟಿ ನಂತರ ಮರದಲ್ಲಿ ಅದನ್ನು ಕೇರಿ ಅಕ್ಕಿ ಹೊಟ್ಟು ಬೇರೆ ಮಾಡಿ ಸಾಣಿಗೆಯಲ್ಲಿ ಸಾಣಿಸಿ ತುಂಡಕ್ಕಿ ನುಚ್ಚು ಬೇರೆ ಮಾಡಿ ಸೇರಿನಲ್ಲಿ ಅಳೆದು ಕೊಡುವ ಪದ್ಧತಿ ಇತ್ತು.
ನೂರು ವಷ೯ದ ಹಿಂದೆ ನನ್ನಜ್ಜಿ ಅಬ್ಬಕ್ಕ ಈ ರೀತಿ ಉದ್ಯಮ ನಡೆಸುತ್ತಾ ಸ್ಥಳಿಯರಿಗೆ ಕೆಲಸ ನೀಡಿದ್ದರೆಂದು ನನ್ನ ಬಾಲ್ಯದಲ್ಲಿ ಗುತ್ಯಕ್ಕಜ್ಜಿ, ಶಂಷು ಸಾಹೇಬರು, ಗನ್ನಿಸಾಹೇಬರು, ಆನಮೇರಿ ಬಾಯಮ್ಮ, ಸುಶೀಲ್ ಬಾಯಮ್ಮ ಮುಂತಾದವರು ಹೇಳುವುದು ಕೇಳಿದ್ದೆ... ಬಹುಶುಃ ನಮ್ಮ ಆನಂದಪುರಂನ ಮೊದಲ ಅಕ್ಕಿ ತಯಾರಿಸುವ ಉದ್ಯಮ ನನ್ನ ಅಜ್ಜಿಯದ್ದೆ.
ನೂರು ವರ್ಷದ ಹಿಂದೆ ನನ್ನ ಅಜ್ಜಿ ಅಬ್ಬಕ್ಕ ಬತ್ತ ಖರೀದಿಸಿ ಕುಚಲಕ್ಕಿ ಮಾಡಿ ಮಾರಾಟ ಮಾಡುತ್ತಿದ್ದರಂತೆ ನನ್ನ ಬಾಲ್ಯದಲ್ಲಿ ಅವರ ಉದ್ಯಮದ ಉಳಿದ ಪರಿಕರಗಳಾದ ಹತ್ತಾರು ರೀತಿಯ ಒನಕೆಗಳು, ಬತ್ತ ಅಳೆಯುವ ಕೊಳಗಗಳು, ಅಕ್ಕಿ ಅಳೆಯುವ ಸೇರು - ಪಾವು - ಚಟಾಕುಗಳ ದೊಡ್ಡ ಸಂಗ್ರಹವೇ ಮನೆಯ ಅಟ್ಟದಲ್ಲಿತ್ತು.
ಹೊಸ ಹೆಂಚಿನ ಮನೆಗೆ ಬದಲಾಗುವಾಗ ದನಗಳ ಕೊಟ್ಟಿಗೆ ಅಟ್ಟ ಸೇರಿದವು ಕಾಲ ಕ್ರಮೇಣ ಅದನ್ನು ಸಂರಕ್ಷಿಸಿಟ್ಟುಕೊಳ್ಳಬೇಕಾದ ತಿಳುವಳಿಕೆ ಇಲ್ಲದೆ ಎಲ್ಲಾ ಕಳೆದು ಹೋಯಿತು ಅದರಲ್ಲಿ ಒಂದು ಹಿತ್ತಾಳೆ ಸೇರು 1929ನೇ ಇಸವಿಯ ಮೈಸೂರು ರಾಜ್ಯದ ಅಳತೆ ಇಲಾಖೆ ಮೊಹರು ಹಾಕಿದ್ದು ನನ್ನ ಅಜ್ಜಿ ನೆನಪಿಗಾಗಿ ನನ್ನಲ್ಲಿ ಉಳಿದಿದೆ.
ಆದರೆ ವಿಪರ್ಯಾಸ ಎಂದರೆ ಈ ಪ್ಯಾರಾ ಬಾಯಿಲ್ಡ್ ರೈಸ್ (ಕುಚಲಕ್ಕಿ) ಕಂಡು ಹಿಡಿದ ದಾಖಲೆ ಜರ್ಮನ್ ವಿಜ್ಞಾನಿ ಎರಿಕ್ ಗುಸ್ತಾಂವ್ ಹೆಜ್ಲಾಂಬ್ ಮತ್ತು ಬ್ರಿಟೀಶ್ ವಿಜ್ಞಾನಿ ಪ್ರಾನ್ಸಿಸ್ ಹೆರಾನ್ ರೋಜರ್ ಅವರ ಹೆಸರಲ್ಲಿದೆ ಅದು 1910ರಲ್ಲಿ ಇದನ್ನು ಅವರು ಕಂಡು ಹಿಡಿದಿದ್ದಾರೆ.
400 ವರ್ಷದ ಹಿಂದೆಯೇ ಕುಂದಾಪುರದ ಬಸ್ರೂರಿನ ಬಂದರಿನಿಂದ ಇಟಲಿಗೆ ಈ ಪ್ಯಾರಾ ಬಾಯಿಲ್ಡ್ ರೈಸ್ (ಕುಚಲಕ್ಕಿ) ಅಲ್ಲಿನ ನಿವಾಸಿಗಳು ಸೂಪ್ ತಯಾರಿಗೆ ಹೋಗುತ್ತಿದ್ದ ದಾಖಲೆ ಇದೆ.
ಗೇರುಸೊಪ್ಪೆಯ ಜೈನ ರಾಜ ಹೈವರಸ 500 ವರ್ಷದ ಹಿಂದೆ ದೊಡ್ಡ ಪ್ರಮಾಣದಲ್ಲಿ ಕುಚಲಕ್ಕಿ ತಯಾರಿಸುತ್ತಿದ್ದರು ಇದಕ್ಕಾಗಿ ದೊಡ್ಡ ಕಣಗಳನ್ನು ನಿರ್ಮಿಸಿದ ಇತಿಹಾಸ ಇದೆ.
ನನ್ನ ಮತ್ತು ಕುಚಲಕ್ಕಿ ಸಂಬಂದ 1980 ರಿಂದ 1990 ರವರೆಗೆ ನಮ್ಮ ಸಣ್ಣ ಪ್ರಮಾಣದ ಕೊಟ್ಟಣದ ಅಕ್ಕಿ (ಟಾಣದಿಂದ ತಂದಿದ್ದ) ಯಂತ್ರದಲ್ಲಿ ನಂತರ ನಮ್ಮ ಮಿನಿ ಬಿನ್ನಿ ಮಿಲ್ ನಲ್ಲಿ ನಂತರ ನಮ್ಮ ದೊಡ್ಡ ಅಕ್ಕಿ ಗಿರಣಿ ದಾಂಡೇಕರ್ 6ನೆ ನಂಬರ್ ಮಿಲ್ಲಿನಲ್ಲಿ ರೈತರ ಬತ್ತ ಕುಚುಲಕ್ಕಿ ತಯಾರಿಸಿ ಅಕ್ಕಿ ಮಾಡಿ ಕೊಡುತ್ತಿದ್ದೆವು.
ಈ ಕೆಲಸ ನಾನು ಮತ್ತು ನಮ್ಮಣ್ಣ ಪ್ರತಿ ಬೇಸಿಗೆ ಕಾಲದಲ್ಲಿ ಮಾಡುತ್ತಿದ್ದೆವು, ಈ ರೀತಿ ಸ್ವತಃ ನಾನೇ ಬತ್ತ ಬೇಯಿಸಿ ಕುಚುಲಕ್ಕಿ ಮಾಡುವ ವಿಧ್ಯೆ ಕಲಿತಿದ್ದೆ.
ಇದೆಲ್ಲ ಇವತ್ತಿನ ಡಿಜಿಟಲ್ ಮಾಧ್ಯಮದಲ್ಲಿ ನಿರಂತರವಾಗಿ ಬರುತ್ತಿರು ಗೇರುಸೊಪ್ಪೆಯ ಕಾಳುಮೆಣಸಿನ ರಾಣಿ ಚೆನ್ನಬೈರಾದೇವಿ ಇತಿಹಾಸದ ಎಪಿಸೋಡ್ 6 ರಲ್ಲಿ ಸಂಶೋದಕರಾದ ಲೋಕರಾಜ ಜೈನರು ರಾಜ ಹೈವರಸ 500 ವರ್ಷದ ಹಿಂದೆ ಕುಚಲಕ್ಕಿ ದೊಡ್ಡ ಪ್ರಮಾಣದಲ್ಲಿ ತಯಾರಿಸುವ ಇತಿಹಾಸ ವಿವರಿಸಿದ್ದು ನೋಡಿ ನೆನಪಾಯಿತು.
ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಇದನ್ನು ನೋಡಿ
https://youtu.be/FkadbaDJGpk?feature=shared
Comments
Post a Comment