#ನಾನು_ಯಾರು?
#ರಾಜಕಾರಣಿ_ಹೋರಾಟಗಾರ_ಕೃಷಿಕ_ವ್ಯಾಪಾರಿ_ಪತ್ರಕತ೯_ಸಾಹಿತಿ_ಇತಿಹಾಸಕಾರ
#ಅಂತೆಲ್ಲ_ಕರೆಸಿಕೊಳ್ಳಲು_ನನಗೆ_ಇಷ್ಟವೂ_ಇಲ್ಲ
#ಅದು_ಕಪಟದ_ಮುಖವಾಡ_ಅಂತ_ಅನ್ನಿಸಿದೆ
#ಸನ್ಮಾನ_ಪ್ರಶಸ್ತಿಗಳೂ_ನನಗೆ_ಇಷ್ಟವಿಲ್ಲ
#ಸಭೆ_ಸಮಾರಂಭದಲ್ಲೂ_ಭಾಗವಹಿಸುವುದಿಲ್ಲ
#ನನ್ನ_ಹೆಸರೂ_ಪ್ರಚಾರಕ್ಕೂ_ಬೇಡವೇ_ಬೇಡ
ಇತ್ತೀಚಿಗೆ ಗೆಳೆಯರು ಅವರ ಗೆಳೆಯರೊಡನೆ ಬಂದಾಗ ನನ್ನನ್ನು ಅವರ ಗೆಳೆಯರಿಗೆ ಪರಿಚಯಿಸುವಾಗ ನನ್ನ ಮೇಲಿನ ಅವತಾರಗಳನ್ನೆಲ್ಲ ಉಪಮೆಗಳ ಜೊತೆ ಅವರಿಗೆ ವಿವರಿಸುವಾಗ ನಾನು ನನ್ನ ತಲೆ ನಕರಾತ್ಮಕವಾಗಿ ತಿರುಗಿಸಿದೆ...
#ಹಾಗಾದರೆ_ನಾನ್ಯಾರು?...
ಜನಪರ ಹೋರಾಟಗಳಲ್ಲಿ ಭಾಗವಹಿಸಿದ್ದು ಹೌದು, ರಾಜಕೀಯ ಪಕ್ಷಗಳ ಸಂಘಟನೆಯಲ್ಲಿ ಇದ್ದಿದ್ದು ಹೌದು, ಜನಪ್ರತಿನಿಧಿ ಆಗಿದ್ದು ಹೌದು, ಪತ್ರಿಕೆಗಳಿಗೆ ವರದಿ ಲೇಖನ ಬರೆದಿದ್ದು ಹೌದು, ಕೃಷಿಯಲ್ಲಿ ತೊಡಗಿದ್ದು ಹೌದು, ವ್ಯವಹಾರದಲ್ಲಿ ಹಲವು ರೂಪಾಂತರದಲ್ಲಿ ತೊಡಗಿದ್ದು ಹೌದು, ಕಥೆ ಕಾದಂಬರಿ ಬರೆದಿದ್ದು ಹೌದು, ಇತಿಹಾಸದ ಓದುಗ ಹೌದು, ನಮ್ಮ ಊರಾದ ಆನಂದಪುರಂ ಇತಿಹಾಸ ಪುಸ್ತಕ ಪ್ರಕಟಿಸಲಿರುವುದೂ ಹೌದು... ಹಾಗಂತ ನಾನು ಅದ್ಯಾವುದೂ ಅಲ್ಲ.
ಎಂತೆಂಥಹ ಸಾಹಿತಿಗಳನ್ನು ಹತ್ತಿರದಿಂದ ನೋಡಿದ್ದೇನೆ ಅವರು ಇಹಲೋಕ ತ್ಯಜಿಸಿದ ಮರುದಿನ ಅವರ ಸಾಹಿತ್ಯ ಸಂಗ್ರಹದ ದೊಡ್ಡ ಶೋಕೇಸ್ ಖಾಲಿ ಮಾಡಿ ಗುಜರಿಗೆ ತೂಕಕ್ಕೆ ಮಾರಿದ್ದನ್ನು ನೋಡಿದ್ದೇನೆ.
ದೊಡ್ಡ ದೊಡ್ಡ ಹೋರಾಟಗಾರರು ಅವರ ಇಳಿ ವಯಸ್ಸಿನಲ್ಲಿ ವೃದ್ಧಾಪ್ಯದಲ್ಲಿ ಅವರ ಹೆಂಡತಿ ಮಕ್ಕಳೇ ಇವರ ಹೋರಾಟದಿಂದ ನಾವು ಈಗ ಇಷ್ಟು ಬವಣೆ ಪಡುತ್ತಿದ್ದೇವೆ ಎಂದು ಆರೋಪಿಸುವುದು ನೋಡಿದ್ದೇನೆ.
ಶ್ರಮದಿಂದ ಜೀವನ ಪರ್ಯಂತ ಸಾಧನೆ ಮಾಡಿ ತೋಟ ಮನೆ, ಆಸ್ತಿ ಮಾಡಿದವರು ಅನಾರೋಗ್ಯಕ್ಕೆ ಒಳಗಾದಾಗಾ ಅವರನ್ನು ಬದುಕಿಸಲು ಅವರ ದುಡಿಮೆಯ ಹಣವನ್ನೆ ವ್ಯಯಿಸದೆ ಅವರು ಸತ್ತ ನಂತರ ಅದ್ದೂರಿಯಿಂದ ತಿಥಿ ಕರ್ಮ ಮಾಡುವವರನ್ನ ನೋಡಿದ್ದೇನೆ.
ದೊಡ್ಡ ದೊಡ್ಡ ಇತಿಹಾಸಕಾರ ಸಂಶೋದಕ ಎಂದು ಪ್ರಶಸ್ತಿ ಸನ್ಮಾನ ಖರೀದಿಸುವ ಆದರೆ ತನ್ನ ಮನೆ ಅಂಗಳದಲ್ಲಿ ಅಡ್ಡ ಬಿದ್ದ ಶಿಲಾಶಾಸನ ಎತ್ತಿಡದ, ತನ್ನ ಸ್ವಂತ ಊರಿನ ಇತಿಹಾಸ ತಿಳಿಯದವರು ಇತಿಹಾಸಕಾರರು, ಇಂಗ್ಲೀಷ್ ಭಾಷೆಯಲ್ಲಿ ಬರೆದ ಪುಸ್ತಕದಲ್ಲಿನ ವಿಷಯಗಳನ್ನು - ಇಸವಿಗಳನ್ನು ಸಭೆ ಸಮಾರಂಭದಲ್ಲಿ ಪುಂಖಾನು ಪುಂಕವಾಗಿ ಊದಿ ಶಾಲೂ ಪೇಟದ ಬಳುವಳಿ ಪಡೆಯುವುದೂ ನೋಡಿದ್ದೇನೆ.
ಬೃಹತ್ ಸಾಗರದ ಒಂದು ಬಿಂದುವಿನ ಅಣಿವನಷ್ಟು ನಾನಲ್ಲ, ವಿಶ್ವ ಕೋಶಗಳನ್ನು ಓದಲೂ ಇಲ್ಲ ಅದೆಲ್ಲ ಓದಿ ಮುಗಿಸಲು ಮನುಷ್ಯನ ಆಯಸ್ಸೂ ಸಾಕಾಗುವುದಿಲ್ಲ ಎಂಬ ವಾಸ್ತವ ಗೊತ್ತಿರುವವನು.
ನುಡಿ ಒಂದು ನಡೆ ಬೇರೆ ಎಂಬ ಹಿಪೋಕ್ರಟಿಕ್ ನಾನಲ್ಲ, ಬಹಿರಂಗವಾಗಿ ಮಾತೃದೇವೋ ಭವ, ಮಾತೃ ಭಾಷೆ ಎಂದು ಹೆತ್ತವರನ್ನು ಅನಾಥಾಶ್ರಮಕ್ಕೆ ಸೇರಿಸಿ ಮಕ್ಕಳನ್ನ ಕನ್ನಡೇತರ ಶಿಕ್ಷಣ ಕೊಡಿಸುವ ಕಪಟ ನಾಟಕ ನಾನು ಮಾಡುವುದಿಲ್ಲ.
ಆದರೆ ನಾನು ಇವರಾರು ಆಗಲು ಇಷ್ಟವಿಲ್ಲದವನು....ನಾನು ಇದ್ದಲ್ಲೇ ನನ್ನ ಸ್ವರ್ಗ ಸೃಷ್ಟಿಸಿಕೊಂಡು ನೆಮ್ಮದಿಯ ಜೀವನ ನಡೆಸುವ ಪ್ರಯತ್ನದಲ್ಲಿ ಇರುವವನು, ಸಭೆ - ಸಮಾರಂಭ, ಶಾಲು-ಪ್ರಶಸ್ತಿ-ಸನ್ಮಾನಗಳ ಅಪೇಕ್ಷೆಯೇ ಇಲ್ಲದವನು.
ನನ್ನ ಜೀವಿತಾವಧಿಯ ಸೀಮಿತ ಪರಿದಿ, ಸುಖ ಕಷ್ಟಗಳ ಇತಿಮಿತಿ ಅರಿತಿದ್ದೇನೆ, ಶ್ರೀಮಂತಿಕೆ - ಯೌವನ - ಯಶಸ್ಸು - ಗೌರವ - ಪ್ರಶಸ್ತಿ - ಅಂತಸ್ತುಗಳು ಶಾಶ್ವತವಲ್ಲ ಎಂಬುದರ ವಾಸ್ತವವೂ ತಿಳಿದಿದೆ.
ಇವತ್ತು ನಿನ್ನದು .... ನಾಳೆ ಇನ್ನಾರದೋ ... ಎಂಬ ಭಗವದ್ ಗೀತೆಯ ನುಡಿಯಂತೆ ನಾನು ನಾನಲ್ಲ ಎಂದು ನನಗೆ ನಾನೇ ಸಮಾಧಾನ ಪಡೆದಿದ್ದೇನೆ.
ಏನನ್ನೂ ಆಸೆ ಪಡೆಯದೇ, ಇದ್ದಿದ್ದನ್ನೇ ಸ್ವೀಕರಿಸಿ, ಇರುವಷ್ಟು ದಿನ ನೆಮ್ಮದಿಯ ಜೀವನ ಮಾತ್ರ ನನ್ನದು.
ಆದ್ದರಿಂದ ನನ್ನ ಎದುರಿಗೆ ಹೊಗಳಿದರೂ, ಹಿಂದಿನಿಂದ ತೆಗಳಿದರೂ ಅದು ನನಗೆ ತಾಗುವುದು ಸಾಧ್ಯವಿಲ್ಲ ಇಷ್ಟೆಲ್ಲ ಬರೆಯಲು ಕಾರಣ....
#ನಾನೊಬ್ಬ_ಜನ_ಸಾಮಾನ್ಯ_ಮಾತ್ರ
Comments
Post a Comment