Blog number 2022. ನಮ್ಮ ರಾಜ್ಯದ ವೃತ್ತಿಯಲ್ಲಿ ವೈದ್ಯರಾಗಿರುವ ಬರಹಗಾರರೂ ಆಗಿರುವ ಕಾಗಿನೆಲೆಯ ಡಾಕ್ಟರ್ ಪ್ರಕಾಶ್ ಬಾರ್ಕಿ ಅವರು ನಮ್ಮ ದೇಶದ ನರ್ಮದಾ ನದಿ ಪರಿಕ್ರಮಣ ತಮ್ಮ ಸೈಕಲ್ ಮೇಲೆ ನೆರವೇರಿಸಿದ್ದಾರೆ ಇವರ ಪರಿಕ್ರಮಣದ ಲೇಖನಗಳ ಕಂತುಗಳಾಗಿ ಆಕೃತಿ ಕನ್ನಡ ಡಾಟ್ ಕಾಮ್ ನಲ್ಲಿ ಪ್ರಕಟವಾಗುತ್ತಿದೆ.
ನರ್ಮದಾ_ನದಿ_ಪರಿಕ್ರಮಣ
#ಇದು_ನದಿ_ಪುರಾಣ
#ಕಾಗಿನೆಲೆಯ_ವೈದ್ಯರೂ_ಬರಹಗಾರರಾದ_ಡಾಕ್ಟರ್_ಪ್ರಕಾಶ್_ಬಾರ್ಕಿ_53_ದಿನಗಳಲ್ಲಿ_ಪೂರೈಸಿದ್ದಾರೆ
#ಆಕೃತಿ_ಕನ್ನಡ_ಡಾಟ್_ಕಾಂ_ಇದನ್ನು_ಕಂತುಗಳಾಗಿ_ಪ್ರಕಟಿಸುತ್ತಿದೆ
#ಇವತ್ತಿಗೆ_23ನೇ_ಕಂತು_ಹಿಂದಿನ_ಕಂತುಗಳನ್ನು_ಓದುವ_ಲಿಂಕ್_ನೀಡಿದ್ದಾರೆ.
#ತುಂಬಾ ಕುತೂಹಲಕಾರಿ ಅನುಭವದ ಲೇಖನ ಮಾಲೆ ತಪ್ಪದೆ ಓದಿ
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨೩)
March 24, 2024 aakrutikannada
ಗುಹೆಯ ಒಳಗೆಲ್ಲಾ ತಂಪು ತಂಪು. ಉದ್ದನೆಯ ಗುಹೆ. ಬಾವಲಿಗಳದ್ದೆ ಸಾಮ್ರಾಜ್ಯ. ಬೃಹತ್ ಬಂಡೆಯ ಅಡಿಯ ಗುಹೆಯಲ್ಲಿ “ಮುನಿಗಳು ತಪಸ್ಸು ಮಾಡುತ್ತಿದ್ದ ರೀತಿ ಕಂಚಿನ ಮೂರ್ತಿ ರಚಿಸಲಾಗಿದೆ. ಗುಹೆಯ ಇನ್ನಷ್ಟು ಒಳಗೆ ಹೋದರೆ ತಾಯಿ ನರ್ಮದೆಯ ಮೂರ್ತಿಯಿದ್ಧು ಸದಾ ಪೂಜೆ ಸಲ್ಲುತ್ತಿರುತ್ತೆ. ಮುಂದೇನಾಯಿತು ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾ ಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…
ಅಮರ ಕಂಟಕ್’ದ ಮೃತ್ಯುಂಜಯ ಆಶ್ರಮದಲ್ಲಿ ತುಂಬಾ ಜನ ಪರಿಕ್ರಮವಾಸಿಗಳು ಉಳಿದುಕೊಂಡಿದ್ದರು. ಅದಕ್ಕೆ ಬೆಳಿಗ್ಗೆ 4 ಗಂಟೆಗೆಲ್ಲಾ ಗಲಗಲ ಸದ್ದು. ಎಚ್ಚರವಾಯಿತು..
ಸರಿ.. ಸ್ನಾನಕ್ಕೆ ಅಂತಾ ಹೊರಟಿದ್ದು “ರಾಮ ಘಾಟ್”ಗೆ. ಮೃತ್ಯುಂಜಯ ಆಶ್ರಮದ ಎದುರಿಗಿದ್ದ ಘಾಟ್ ಇದು.
ನಾನು ಘಾಟ್’ಗೆ ಹೋಗಿ ತಲುಪುವುದರೊಳಗೆ ಅಲ್ಲಿಯೂ ಸ್ನಾನ ಮಾಡುತ್ತಿದ್ದರು. ಚಳಿ ವಿಪರೀತ. ಆವಾಗ ತಾಪಮಾನ 9 ಡಿಗ್ರಿ. ಚಳಿಗಾಳಿಗೆ ಮೈಯಲ್ಲಿ ಅದುರುವಿಕೆ ಶುರುವಾಗಿತ್ತು. ಹಲ್ಲು ಕಟಕಟಿಸುತ್ತಾ ಪಟ್ ಅಂತ ನದಿಯಲ್ಲಿ ಮುಳುಗಿ ಹಾಕಿ.. ಸ್ನಾನ ಮುಗಿಸಿದೆ. ಸ್ನಾನವಾದ ನಂತರ ಚಳಿಯ ತೀವ್ರತೆ ಕಡಿಮೆಯಾದಂತಾಯಿತು. ಬಿಸಿ, ಬಿಸಿ ಚಹಾ ಕುಡಿಯಲು ಅಂಗಡಿಗೆ ಹೋದೆ. ಚಹಾ ಗಂಟಲಲ್ಲಿ ಇಳಿಯುತ್ತಿದ್ದ ಹಾಗೆ ನವಚೈತನ್ಯ. ಉತ್ತರ ತಟದ ಯಾತ್ರೆ ಸಂಪೂರ್ಣವಾಯಿತೆನು ನಿಜ ಆದರೆ ಕಪಿಲಧಾರಾ, ದೂಧ ದಾರಾ ಹೋಗುವುದು ಬಾಕಿ ಇತ್ತು..
5 ಕಿ.ಮೀ ನಡೆಯುತ್ತಾ ಹೊರಟೆ. ಮೈ ತುಂಬಾ ಸ್ವೇಟರ್, ಕೈಗವಸು, ಟೋಪಿ..ತೊಟ್ಟು ಕಾಡಿನ ಕಾಲುದಾರಿಯಲ್ಲಿ ನಡೆಯತೊಡಗಿದೆ. ಸುತ್ತಲೂ ಗಗನಚುಂಬಿ ಹಳೆಯ ಮರಗಳು, ಒಬ್ಬರು ಅನಾಮತ್ತು ತಬ್ಬಿಕೊಂಡರು ಕೈ ಎಟುಕದ ರೀತಿ ದಪ್ಪಗಿವೆ. ಒತ್ತೊತ್ತಾಗಿ ಬೆಳೆದುದರಿಂದ ಕಾಡು ಗಂಭೀರವಾಗಿದೆ. ಸೂರ್ಯನ ಕಾರಣಗಳು ಭೂಮಿಗೆ ತಿವಿಯುವುದು ಕಷ್ಟ. ಅಷ್ಟು ಹುಲುಸಾಗಿ ಬೆಳೆದ ಕಾಡು.
ತೆಳು ಮಂಜು, ಪಕ್ಷಿಗಳ ಕಲರವ, ಮಂಗಗಳ ಚೇಷ್ಟೆ.. ಇವೆಲ್ಲವುಗಳನ್ನು ನೋಡುತ್ತಾ ಹೊರಟೆ. ಪಕ್ಕಕ್ಕೆ ಹರಿಯುತ್ತಿದ್ದ ತಾಯಿ ನರ್ಮದೆಯ ಧಾರೆ ತೀರಾ ತೆಳುವಾಗಿತ್ತು. ಒಬ್ಬರು ಜಿಗಿದು ಈ ಕಡೆಯಿಂದ ಆ ಕಡೆಗೆ ಹೋಗುವಷ್ಟು ಚಿಕ್ಕದಾದ ಪಾತ್ರ.
ಕಾರಣ..
ನದಿ ಹುಟ್ಟಿ ಹರಿಯುವುದು ಇಲ್ಲಿಂದಲೆ, ಆದ್ದರಿಂದ ಧಾರೆ ಚಿಕ್ಕದು. ಇದನ್ನು ತಾಯಿ ನರ್ಮದೆಯ ಬಾಲ್ಯಸ್ವರೂಪ ಎನ್ನಲಾಗುತ್ತೆ. ಮುಂದೆ ಓಂಕಾರೇಶ್ವರದಲ್ಲಿ ನದಿ ಪಾತ್ರ ಭಯಂಕರ ದೊಡ್ಡದು ಅದು ಯೌವ್ವನ ಸ್ವರೂಪ. ನರ್ಮದಾ ನದಿ ಹರಿದುಕೊಂಡು ಬಂದು ಕಾಡಿನ ಮಧ್ಯದೊಳಗೆ ತಿರುವು ತೆಗೆದುಕೊಳ್ಳುತ್ತೆ. ಕಲ್ಲುಬಂಡೆಗಳ ಎತ್ತರ ಜಾಗದಿಂದ ಕೆಳಗೆ ಹರಿದು “ಜಲಪಾತ” ನಿರ್ಮಾಣವಾಗುತ್ತೆ ಅದುವೆ ಕಪಿಲ ಧಾರಾ. ಕಪಿಲ ಮುನಿಯು ಇಲ್ಲಿ ತಪಸ್ಸು ಮಾಡಿದ್ದರಂತೆ.
ಜಲಪಾತ ಎತ್ತರದಿಂದ ಬಿದ್ದು ಹರಿಯುವಾಗ ಸುಂದರ ದೃಶ್ಯ ನಿರ್ಮಾಣವಾಗುತ್ತೆ. ಸೌಮ್ಯವಾಗಿ ಹರಿಯುವ ನರ್ಮದೆ ಇನ್ನೂ ಕೆಳಗೆ ಪ್ರಪಾತದಲ್ಲಿ ಹರಿಯಲು ಪ್ರಾರಂಭಿಸುತ್ತಾಳೆ.
ಮುಂದೆ ಬಂಡೆ ಕಲ್ಲುಗಳ ಮೇಲಿಂದ ಹರಿಯುತ್ತಿರುವಾಗ ಚಿಕ್ಕ ಚಿಕ್ಕ ಜಲಧಾರೆಗಳು ನಿರ್ಮಾಣವಾಗುತ್ತವೆ.
ಸ್ವಚ್ಚ, ನಿಚ್ಚಳ.. ನಿಷ್ಕಲ್ಮಶ ಜಲ..
ಇನ್ನಷ್ಟೂ ಆಳಕ್ಕೆ ಹರಿಯುವ ನದಿ, ಮುಂದೆ ಹರಿಯುತ್ತಾ ಚಿಕ್ಕಚಿಕ್ಕ ಧಾರೆಗಳಾಗಿ ಹರಿಯುತ್ತದೆ…ನೋಡಲು ಹಾಲಿನ ನೊರೆಯಂತೆ ಕಾಣುವುದರಿಂದ “ದೂಧ ಧಾರಾ” ಎಂದು ಹೆಸರು.
ದೂಧ ಧಾರಾದಲ್ಲಿ “ದೂರ್ವಾಸ”ಮುನಿಗಳು ತಪಸ್ಸು ಮಾಡಿದ್ದ ಗುಹೆಯಿದೆ.ಬೆಟ್ಪದ ಅಡಿಗೆ ಸಿಲುಕಿಕೊಂಡ ಬೃಹತ್ ಬಂಡೆಯಲ್ಲಿ “ದೂರ್ವಾಸ ಮುನಿಗಳ” ಗುಹೆಯಿದೆ.
ದಿನದ 24 ಗಂಟೆ ನಿರಂತರ “ಹೋಮ ಕುಂಡದಲ್ಲಿ ಅಗ್ನಿ” (ಧೂನಿ) ಉರಿಯುತ್ತಿರುತ್ತೆ.
ಅಲ್ಲಿನ ಸನ್ಯಾಸಿಗೆ ವಿನಂತಿಸಿಕೊಂಡಾಗ ಗುಹೆಯ ಪ್ರವೇಶ ದೊರೆಯಿತು. ಗುಹೆಯ ಒಳಗೆಲ್ಲಾ ತಂಪು ತಂಪು. ಉದ್ದನೆಯ ಗುಹೆ. ಬಾವಲಿಗಳದ್ದೆ ಸಾಮ್ರಾಜ್ಯ. ಬೃಹತ್ ಬಂಡೆಯ ಅಡಿಯ ಗುಹೆಯಲ್ಲಿ “ಮುನಿಗಳು ತಪಸ್ಸು ಮಾಡುತ್ತಿದ್ದ ರೀತಿ ಕಂಚಿನ ಮೂರ್ತಿ ರಚಿಸಲಾಗಿದೆ. ಗುಹೆಯ ಇನ್ನಷ್ಟು ಒಳಗೆ ಹೋದರೆ ತಾಯಿ ನರ್ಮದೆಯ ಮೂರ್ತಿಯಿದ್ಧು ಸದಾ ಪೂಜೆ ಸಲ್ಲುತ್ತಿರುತ್ತೆ.
ಗುಹೆಯಲ್ಲಿ ಇನ್ನೊಂದಿಷ್ಟು ಗುಪ್ತ ಮಾರ್ಗಗಳಿವೆ. ಇಲ್ಲಿ ಹಲವು ಸಂತರು ಇಂದಿಗೂ ಧ್ಯಾನದಲ್ಲಿ ಮಗ್ನರಾಗಿದ್ದಾರೆ ಎಂಬುದು ಇಲ್ಲಿಯ ಸನ್ಯಾಸಿ ಮಾತು. ಗುಹೆಯಲ್ಲಿ ಪ್ರವೇಶ ಮಾಡಿ ವಿಕ್ಷಿಸಿದ್ದಾಯಿತು. ಪೂಜೆ ಕೈಗೊಂಡು ಹೊರಗೆ ಬಂದೆ. ಅಲ್ಲಿಂದ ಮತ್ತೆ ಮೃತ್ಯುಂಜಯ ಆಶ್ರಮಕ್ಕೆ ಬಂದವನೆ, ನಂದಿಯನ್ನು ತಳ್ಳಿಕೊಂಡು ಹೊರಟೆ. ಇಂದಿಗೆ “ತಾಯಿ ನರ್ಮದೆಯ ಉತ್ತರ ತಟದ ಯಾತ್ರೆ ನಿರ್ವಿಘ್ನವಾಗಿ ಕೊನೆಯಾಯಿತು. ಆದ್ದರಿಂದ ನದಿಯ ಉದ್ಗಮ ಸ್ಥಾನಕ್ಕೆ ಹೋಗಿ ತಟ ಪರಿವರ್ತನೆ ಮಾಡಿ ದಕ್ಷಿಣ ತಟಕ್ಕೆ ಬರುವುದಿತ್ತು.
ನಂದಿಯನ್ನು ಓಡಿಸಕೊಂಡು, ಒಂದಿಷ್ಟು ಎತ್ತರ ಏರಿ “ಮಾಯಿ ಕಿ ಬಗಿಯಾ” ಎನ್ನುವ ಸ್ಥಳಕ್ಕೆ ಬಂದೆ. ನರ್ಮದಾ ನದಿ ಇಲ್ಲಿಯ ಒಂದು ಚಿಕ್ಕ ಕುಂಡದಲ್ಲಿ ಉದ್ಭವವಾಗಿದ್ದಾಳೆ.
“ಮಾಯಿ ಕಿ ಬಗಿಯಾ”ಸ್ಥಳದಲ್ಲಿ ನಂದಿಯನ್ನು ಉತ್ತರ ತಟದಿಂದ, ದಕ್ಷಿಣ ತಟಕ್ಕೆ ಕರೆದುಕೊಂಡು ಬಂದೆ…. ಒಂದಿಷ್ಟು ಶಾಸ್ತ್ರೋಕ್ತ ಪೂಜೆಯ ನಂತರ.
ಇಲ್ಲಿಗೆ ನದಿಯ ಒಂದು ದಂಡೆಯಿಂದ ಇನ್ನೊಂದು ದಂಡೆಗೆ ಬಂದೆ ಆದರೆ ನದಿಯನ್ನು ನಡುವೆ ಪಾರು ಮಾಡದೆಯೇ. ದಕ್ಷಿಣ ತಟದಲ್ಲಿ “ಮಾಯಿ ಕಿ ಬಗಿಯಾ” ಸ್ಥಳದಿಂದ ನೇರವಾಗಿ “ನರ್ಮದಾ ಕುಂಡ”ಕ್ಕೆ ಬಂದೆ. ನದಿ ಇಲ್ಲಿ ಸಹ ಉದ್ಭವವಾಗುತ್ತದೆ ಎಂಬ ಮಾತಿದೆ ಆದ್ದರಿಂದ ಎರಡು ಕಡೆ ಪೂಜೆ ಕಡ್ಡಾಯ.
“ಮಾಯಿ ಕಿ ಬಗಿಯಾ” ಮತ್ತು “ನರ್ಮದಾ ಕುಂಡ” ಎರಡೂ ಪೂಜನೀಯ ಸ್ಥಳಗಳು. ನರ್ಮದಾ ಕುಂಡ ಹೊಂದಿದ ದೇವಸ್ಥಾನ ಸಂಕೀರ್ಣ ಒಟ್ಟು 9 ಚಿಕ್ಕಪುಟ್ಟ ದೇವಸ್ಥಾನಗಳನ್ನು ಹೊಂದಿದೆ. ಕಾಡಿನ ನಡುವೆ ನಿರ್ಮಿತವಾದ ದೇವಸ್ಥಾನಗಳಿವು. ರಮಣೀಯ ಕ್ಷೇತ್ರ. ನರ್ಮದಾ ಕುಂಡ ನೋಡಿಕೊಂಡು “ಶ್ರೀ ಯಂತ್ರ ಮಹಾಮೇರು”ವಿಗೆ ಹೋದೆ. ಅಮರಕಂಟಕ್’ನಲ್ಲಿ ಅತೀ ಹೆಚ್ಚು ಜನ ಪ್ರವಾಸಿಗರು ಇಲ್ಲಿಗೆ ಬರುವವರು. ಇದು ಅಮರಕಂಟಕ್’ನ ಮುಖ್ಯ ಗುರುತು ಸಹ ಹೌದು. ಬ್ರಹ್ಮನನ್ನು ಹೋಲುವ ಮೂರ್ತಿ ಕಳಶವಾಗಿದೆ.
ಸುತ್ತಲೂ ವಿವಿಧ ಬಗೆಯ ವಿನ್ಯಾಸಗಳ ಮೂರ್ತಿಗಳಿವೆ. ಮಂದಿರದೊಳಗೆ ದೇವಿಯ ಮೂರ್ತಿ ರಾರಾಜಿಸುತ್ತದೆ. ಅಲ್ಲಿಂದ.. ಸೋನ ನದಿಯನ್ನು ನೋಡಿಕೊಂಡು….
ಮತ್ತೆ..
ಕಾಡಿನ ಮಧ್ಯದಲ್ಲಿನ ಟಾರು ರೋಡಿನಲ್ಲಿ ಪ್ರಯಾಣ ಶುರುವಾಯಿತು. ಸುತ್ತ ಮುತ್ತ ಕಾಡು. ಇಳಿಜಾರಿಗಿಂತ ಹೆಚ್ಚು ಏರುಗಳಿದ್ದವು. ಎಲ್ಲವನ್ನೂ ಪಾರು ಮಾಡುವುದರಲ್ಲಿ ಸಂಜೆಯಾಗತೊಡಗಿತು. ಅನೂಪಪುರ ಜಿಲ್ಲೆಯ “ಗಡಸರಯಿ”ಎಂಬ ಊರಿನ “ರೇವಾ ಧರ್ಮಶಾಲೆಯಲ್ಲಿ” ಉಳಿದುಕೊಂಡಿರುವೆ.
ಹಿಂದಿನ ಸಂಚಿಕೆಗಳು :
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೩)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೪)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೫)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ –೬)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೭)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೮)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೯)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೦)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೧)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೨)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೩)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೪)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೫)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೬)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೭)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೮)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೯)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨೦)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨೧)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨೨)
ಡಾ. ಪ್ರಕಾಶ ಬಾರ್ಕಿ – ವೈದ್ಯರು, ಲೇಖಕರು, ಕಾಗಿನೆಲೆ.
Comments
Post a Comment