Blog number.2020. ಕೊರಾನಾ ನೆನಪುಗಳ ಡೈರಿ ಭಾಗ - 5. ದೇಶದಾದ್ಯಂತ ಲಾಕ್ ಡೌನ್ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಭಾಷಣದ ಪ್ರತಿ.
#ಕೊರಾನಾ_ನೆನಪುಗಳ_ಡೈರಿ_ಭಾಗ_5
#ಇವತ್ತಿಗೆ_ನಾಲ್ಕು_ವರ್ಷದ_ಹಿಂದೆ_ನಾವೆಷ್ಟು_ಭಯದಲ್ಲಿದ್ದೆವು_ಮರೆತು_ಬಿಟ್ಟಿರಾ?
#ಅವತ್ತು_ರಾತ್ರಿ_12ರಿಂದ_ಇಡೀ_ದೇಶದಲ್ಲಿ_ಲಾಕ್_ಡೌನ್_ಘೋಷಣೆ
#ಪ್ರದಾನಮಂತ್ರಿಗಳು_ದೇಶವನ್ನು_ಉದ್ದೇಶಿಸಿ_ಮಾಡಿದ_ಬಾಷಣದ_ಪ್ರತಿ
#ಕೊರಾನಾ_19_ವಿಶ್ವ_ತಾಂತ್ರಿಕ_ಸಲಹಾ_ಮಂಡಳಿ_ಶಿಪಾರಸ್ಸು
#ಕೊರಾನಾ_ವೈರಸ್_ಸರಪಳಿ_ತುಂಡರಿಸಲು_21_ದಿನದ_ಲಾಕ್_ಡೌನ್.
ಅವತ್ತಿಗೆ ಸುಮಾರು 14 ಸಾವಿರ ಜನರು (ಚೀನಾ ಹೊರತು ಪಡಿಸಿ) ವಿಶ್ವದಾದ್ಯಂತ ಕೋವಿಡ್ 19 ವೈರಸ್ಸಿನಿಂದ ಮೃತರಾಗಿದ್ದರು ಮತ್ತು 3 ಲಕ್ಷದ 34 ಸಾವಿರ ಜನರು ಈ ವೈರಸ್ಸಿನ ಸೋಂಕಿನಿಂದ ಬಳಲುತ್ತಿದ್ದರು.
ಮುಂದುವರಿದ ದೇಶಗಳಲ್ಲಿ ಶವ ಸಂಸ್ಕಾರಕ್ಕೆ ಕೆಲವು ದಿನ ಕಾಯಬೇಕಾದಂತ ಪರಿಸ್ಥಿತಿ ಇಂತಹ ಸಂದರ್ಭದಲ್ಲೇ ಭಾರತ ದೇಶದಲ್ಲಿ ಕೋವಿಡ್ 19 ಸೋಂಕು ಹರಡುವ ವೇಗ ದ್ವಿಪಟ್ಟಾಯಿತು ಸತ್ತವರ ಸಂಖ್ಯೆ 490 ದಾಟಿತ್ತು (ಇದು ಸರ್ಕಾರದ ಅಂಕಿ ಅಂಶ).
ವಿಶ್ವ ಆರೋಗ್ಯ ಸಂಸ್ಥೆ ಎಲ್ಲಾ ದೇಶಗಳು ಈ ಸಾಂಕ್ರಮಿಕ ರೋಗದ ವಿರುದ್ದ ಹೋರಾಡಲು ಅನೇಕ ಗೈಡ್ ಲೈನ್ ಗಳನ್ನು ತಾಂತ್ರಿಕ ಸಲಹಾ ಮಂಡಳಿಯ ಶಿಪಾರಸ್ಸುಗಳನ್ನು ನೀಡಿತ್ತು ಆಗ ಕೋರಾನಾ 19 ವೈರಸ್ಸಿಗೆ ಕಾರಣ ಏನು? ಚಿಕಿತ್ಸೆ ಏನು? ಯಾವುದೂ ಗೊತ್ತಿಲ್ಲದ ಅಯೋಮಯದ ಸ್ಥಿತಿ.
21 ದಿನದ ಲಾಕ್ ಡೌನ್ ನಿಂದ ಕೊರಾನಾ 19 ವೈರಸ್ ಸರಪಳಿ ತುಂಡರಿಸಲು ಸಾಧ್ಯವೆಂಬ ಶಿಪಾರಸ್ಸು ಮಾತ್ರ ಆ ತಕ್ಷಣದ ಪರಿಹಾರ ಮತ್ತು ಪರ್ಯಾಯದ ಏಕೈಕ ಮಾರ್ಗವಾಗಿತ್ತು.
ಎಲ್ಲಾ ದೇಶಗಳು ಪ್ಯಾಂಡಮಿಕ್ (ಸಾಂಕ್ರಮಿಕ )ರೋಗದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಅನುಸರಿಸಲೇ ಬೇಕಾದ್ದರಿಂದ ನಮ್ಮ ದೇಶ 24 ಮಾರ್ಚ್ 2020 ರ ಮಧ್ಯರಾತ್ರಿ 12 ರಿಂದ 21 ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿತು ರೈಲು- ವಿಮಾನ ಸಂಚಾರವೂ ಸ್ಥಬ್ದಗೊಳಿಸಲಾಯಿತು ಈ ಬಗ್ಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಬಾಷಣ ಇಡೀ ದೇಶ ಹತಾಷೆಯಿಂದಲೇ ಕೇಳಿತು....
ಆದರೆ ನಾಲ್ಕು ವರ್ಷದಲ್ಲಿ ಸಾವು ನೋವು ನಷ್ಟಗಳನ್ನು ಅನುಭವಿಸಿಯೂ ಅವತ್ತಿನ ಸಂದರ್ಭದ ಸಾವು ಬದುಕಿನ ಅನಿಶ್ಚಿತತೆಯ ಘಟನೆಗಳು ಬಹಳ ಜನ ಮರೆತಿದ್ದಾರೆ ಬಹುಶಃ ಸಮೂಹದ ನೆನಪಿನ ಶಕ್ತಿ ಕಡಿಮೆ (Mass memories always less).
ಇವತ್ತಿಗೆ ನಾಲ್ಕು ವರ್ಷಗಳ ಹಿಂದೆ ಅಂದರೆ 24- ಮಾರ್ಚ್- 2020 ರ ರಾತ್ರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾಡಿದ ಬಾಷಣ ಪ್ರತಿ ಇಲ್ಲಿ ಲಗತ್ತಿಸಿದೆ ಒಮ್ಮೆ ಓದಿ ಬಿಡಿ...
pdf
Submit
ಪ್ರಧಾನ ಮಂತ್ರಿಯವರ ಕಛೇರಿ
COVID-19 ವಿಪತ್ತು ಕುರಿತು ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಭಾಷಣ
Posted On: 24 MAR 2020 8:57PM by PIB Bengaluru
COVID-19 ವಿಪತ್ತು ಕುರಿತು ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಭಾಷಣ
#ನಮಸ್ಕಾರ
ನನ್ನ ಪ್ರೀತಿಯ ದೇಶವಾಸಿಗಳೇ,
ನಾನು ಮತ್ತೊಮ್ಮೆ ಕೊರೋನಾ ಮಹಾಮಾರಿಯ ಬಗ್ಗೆ ಮಾತನಾಡಲು ಬಂದಿದ್ದೇನೆ.
ನಾವು ಮಾರ್ಚ್ 22ರಂದು ಜನತಾ ಕರ್ಫ್ಯೂವಿನ ಸಂಕಲ್ಪ ಮಾಡಿದ್ದೆವು, ನಾವು ಒಂದು ದೇಶವಾಗಿ ಪ್ರತಿಯೊಬ್ಬ ಭಾರತೀಯರ ಜವಾಬ್ದಾರಿಯುತ ಯೋಗದಾನದೊಂದಿಗೆ ಅದನ್ನು ಪೂರ್ಣಗೊಳಿಸಿದೆವು.
ಈ ಸಂಕಷ್ಟದ ಸಮಯದಲ್ಲಿ ಮಕ್ಕಳು, ಹಿರಿಯ ನಾಗರಿಕರು, ಸಣ್ಣ ಮತ್ತು ದೊಡ್ಡವರು, ಬಡವರು, ಮಧ್ಯಮವರ್ಗ ಮತ್ತು ಮೇಲ್ವರ್ಗದವರು ಪ್ರತಿಯೊಬ್ಬರೂ ಒಗ್ಗೂಡಿದರು.
ಜನತಾ ಕರ್ಪ್ಯೂವನ್ನು ಪ್ರತಿಯೊಬ್ಬ ಭಾರತೀಯರೂ ಸೇರಿ ಯಶಸ್ವಿಯೊಳಿಸಿದರು.
ಭಾರತವು ಈ ಒಂದು ದಿನದ ಜನತಾ ಕರ್ಪ್ಯೂವಿನಿಂದ, ಯಾವಾಗ ದೇಶ ಮತ್ತು ಮಾನವಕುಲ ಸಂಕಷ್ಟವನ್ನು ಎದುರಿಸುತ್ತದೆಯೋ ಆಗ ಎಲ್ಲ ಭಾರತೀಯರೂ ಒಗ್ಗೂಡಿ ಅದನ್ನು ನಿಗ್ರಹಿಸುತ್ತಾರೆ ಎಂಬುದನ್ನು ತೋರಿಸಿಕೊಟ್ಟಿತು.
ನೀವೆಲ್ಲರೂ ಈ ಜನತಾ ಕರ್ಪ್ಯೂವಿಗಾಗಿ ಪ್ರಶಂಸಾ ಪಾತ್ರರಾಗಿದ್ದೀರಿ.
ಸ್ನೇಹಿತರೇ,
ಕೊರೋನಾ ಮಹಾ ಮಾರಿಯಿಂದ ವಿಶ್ವಾದಾದ್ಯಂತ ಎದುರಾಗುತ್ತಿರುವ ಪರಿಸ್ಥಿತಿಯನ್ನು ನೀವು ವಾರ್ತೆಗಳಲ್ಲಿ ನೋಡುತ್ತಿದ್ದೀರಿ ಮತ್ತು ಕೇಳುತ್ತಿದ್ದೀರಿ.
ಈ ಮಹಾಮಾರಿಯನ್ನು ಎದುರಿಸುವಲ್ಲಿ ಬಲಿಷ್ಠ ರಾಷ್ಟ್ರಗಳು ಕೂಡ ಹೇಗೆ ಅಸಹಾಯಕವಾಗಿವೆ ಎಂಬುದನ್ನೂ ನೀವು ನೋಡಿದ್ದೀರಿ.
ಅಂದರೆ ಆ ರಾಷ್ಟ್ರಗಳು ಪ್ರಯತ್ನ ಮಾಡಿಲ್ಲ ಅಥವಾ ಅವುಗಳ ಬಳಿ ಸಂಪನ್ಮೂಲದ ಕೊರತೆ ಇದೆ ಎಂದು ಅರ್ಥವಲ್ಲ.
ಆದರೆ, ಅವರ ಎಲ್ಲ ಪ್ರಯತ್ನಗಳ ಹೊರತಾಗಿಯೂ ಈ ಕೊರೋನಾ ವೈರಾಣು ತ್ವರಿತಗತಿಯಲ್ಲಿ ಹರಡುತ್ತಿದೆ ಮತ್ತು ಸವಾಲು ಹೆಚ್ಚಾಗುತ್ತಿದೆ.
ಈ ರಾಷ್ಟ್ರಗಳಲ್ಲಿನ ಎರಡು ತಿಂಗಳುಗಳ ಅಧ್ಯಯನದ ಫಲವಾಗಿ, ಮತ್ತು ತಜ್ಞರು ಹೇಳುತ್ತಿರುವ ರೀತಿಯಲ್ಲಿ, ಕೊರೋನಾ ಮಣಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಏಕೈಕ ಮಾರ್ಗವಾಗಿದೆ.
ಅಂದರೆ ನಿಮ್ಮ ಮನೆಗಳಲ್ಲಿ ಉಳಿಯಿರಿ ಮತ್ತು ಪರಸ್ಪರರಿಂದ ದೂರವಿರಿ.
ಕೊರೋನಾದಿಂದ ಸುರಕ್ಷಿತವಾಗಿರಲು ಇದಕ್ಕಿಂತ ಅನ್ಯ ಮಾರ್ಗವಿಲ್ಲ.
ನಾವು ಕೊರೋನಾ ಹಬ್ಬುವುದನ್ನು ತಡೆಯಬೇಕೆಂದರೆ, ನಾವು ಸೋಂಕಿನ ಸರಪಣಿಯನ್ನು ತುಂಡರಿಸಲೇಬೇಕು.
ಕೋವಿಡ್ -19ರಿಂದ ಬಳಲುತ್ತಿರುವವರು ಮಾತ್ರವೇ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ತಪ್ಪು ಕಲ್ಪನೆಯಲ್ಲಿ ಕೆಲವರು ಇದ್ದಾರೆ.
ಈ ಯೋಚನೆಯೇ ಸರಿಯಲ್ಲ.
ದೇಶದ ಎಲ್ಲ ನಾಗರಿಕರೂ, ಎಲ್ಲ ಕುಟುಂಬಗಳೂ ಮತ್ತು ಕುಟುಂಬದ ಎಲ್ಲ ಸದಸ್ಯರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
ಇಂಥ ನಿರ್ಲಕ್ಷ್ಯತನದ ನಿಮ್ಮ ವರ್ತನೆ, ನಿಮ್ಮ ಮಕ್ಕಳಿಗೆ, ನಿಮ್ಮ ಪಾಲಕರಿಗೆ, ನಿಮ್ಮ ಕುಟುಂಬದವರಿಗೆ, ನಿಮ್ಮ ಸ್ನೇಹಿತರಿಗೆ ಮತ್ತು ಇಡೀ ದೇಶಕ್ಕೇ ಅಪಾಯ ತಂದೊಡ್ಡಬಹುದು.
ಇಂಥ ನಿರ್ಲಕ್ಷ್ಯದ ವರ್ತನೆ ಮುಂದುವರಿದರೆ, ಇದರಿಂದ ಭಾರತ ಎಷ್ಟು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಅಂದಾಜು ಮಾಡುವುದೂ ಕಷ್ಟವಾಗುತ್ತದೆ.
ಕಳೆದ ಎರಡು ದಿನಗಳಿಂದ ದೇಶದ ಹಲವು ಭಾಗಗಳಲ್ಲಿ ಲಾಕ್ ಡೌನ್ ಆಗಿದೆ.
ರಾಜ್ಯ ಸರ್ಕಾರಗಳ ಇಂಥ ಉಪಕ್ರಮಗಳನ್ನು ಗಂಭೀರವಾಗಿ ಪರಿಗಣಿಸಬೇಕು.
ಆರೋಗ್ಯ ತಜ್ಞರ ಅನುಭವದಿಂದ ಮತ್ತು ಇತರ ರಾಷ್ಟ್ರಗಳಿಂದ ಕಲಿತ ಪಾಠದಿಂದಾಗಿ ನಾವು ಇಂದು ಒಂದು ಮಹತ್ವದ ನಿರ್ಧಾರವನ್ನು ಕೈಗೊಳ್ಳುತ್ತಿದ್ದೇವೆ.
ಇಂದು ಮಧ್ಯರಾತ್ರಿ 12 ಗಂಟೆಯಿಂದ ದಯವಿಟ್ಟು ಗಮನವಿಟ್ಟು ಕೇಳಿ, ಇಂದು ಮಧ್ಯರಾತ್ರಿ 12 ಗಂಟೆಯಿಂದ ಇಡೀ ದೇಶ ಸಂಪೂರ್ಣವಾಗಿ ಲಾಕ್ ಡೌನ್ ಆಗಲಿದೆ.
ಭಾರತವನ್ನು ಮತ್ತು ಪ್ರತಿಯೊಬ್ಬ ಭಾರತೀಯರನ್ನು ಕಾಪಾಡಲು, ನಿಮ್ಮ ಮನೆಗಳಿಂದ ಹೊರಗೆ ಬಾರದಂತೆ ಸಂಪೂರ್ಣ ನಿರ್ಬಂಧ ವಿಧಿಸಲಾಗುತ್ತಿದೆ.
ಪ್ರತಿಯೊಂದು ರಾಜ್ಯ, ಪ್ರತಿಯೊಂದು ಕೇಂದ್ರಾಡಳಿತ ಪ್ರದೇಶ, ಪ್ರತಿಯೊಂದು ಜಿಲ್ಲೆ, ಪ್ರತಿಯೊಂದು ಗ್ರಾಮ ಮತ್ತು ಪ್ರತಿ ಬಡಾವಣೆಯೂ ಸಂಪೂರ್ಣ ಲಾಕ್ ಡೌನ್ ಆಗುತ್ತಿದೆ.
ಇದು ಒಂದು ರೀತಿಯಲ್ಲಿ ಕರ್ಫೂ ಆಗಿದೆ.
ಇದು ಜನತಾ ಕರ್ಪ್ಯೂಗಿಂತ ಮಿಗಿಲಾಗಿದೆ ಮತ್ತು ಜನತಾ ಕರ್ಪ್ಯೂಗಿಂತ ಕಠಿಣವಾಗಿರುತ್ತದೆ.
ಕೊರೋನಾ ಮಹಾಮಾರಿಯ ವಿರುದ್ಧದ ಈ ನಿರ್ಣಾಯಕ ಸಮರದಲ್ಲಿ ಇದು ಅತ್ಯಂತ ಅತ್ಯಾವಶ್ಯಕವಾದ ಹೆಜ್ಜೆಯೂ ಆಗಿದೆ.
ನಿಜ. ಈ ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕತೆಗೆ ತೀವ್ರ ಹೊಡೆತ ಬೀಳುತ್ತದೆ.
ಆದರೆ ಪ್ರತಿಯೊಬ್ಬ ಭಾರತೀಯರ ಜೀವ ಉಳಿಸುವುದು ನನ್ನ, ಭಾರತ ಸರ್ಕಾರದ, ರಾಜ್ಯ ಸರ್ಕಾರಗಳ ಮತ್ತು ಸ್ಥಳೀಯ ಆಡಳಿತದ ಮೊದಲ ಆದ್ಯತೆಯಾಗಿದೆ.
ಹೀಗಾಗಿ, ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ದೇಶದ ಎಲ್ಲಿ ನೀವಿದ್ದೀರೋ, ಅಲ್ಲಿಯೇ ಇರಿ.
ಪ್ರಸಕ್ತ ಸನ್ನಿವೇಶದ ಹಿನ್ನೆಲೆಯಲ್ಲಿ ಈ ಲಾಕ್ ಡೌನ್ ಅನ್ನು 21 ದಿನಗಳ ಕಾಲ ವಿಧಿಸಲಾಗುತ್ತಿದೆ.
ಅಂದರೆ ಮುಂದಿನ 21 ದಿನಗಳ ಕಾಲದ ಸಮಯ ನಮಗೆ ಅತ್ಯಂತ ಮಹತ್ವದ್ದಾಗಿದೆ.
ವೈದ್ಯಕೀಯ ತಜ್ಞರ ಪ್ರಕಾರ, ಸೋಂಕಿನ ಸರಪಳಿಯನ್ನು ತುಂಡರಿಸಲು 21 ದಿನಗಳು ಅತ್ಯಂತ ಮಹತ್ವಪೂರ್ಣವೂ ಆಗಿರುತ್ತದೆ.
ನಾವು ಮುಂದಿನ 21 ದಿನಗಳ ಒಳಗಾಗಿ ಈ ಮಹಾಮಾರಿಯನ್ನು ನಿರ್ವಹಿಸಲು ಆಗದಿದ್ದಲ್ಲಿ, ನಿಮ್ಮ ಕುಟುಂಬ ಮತ್ತು ದೇಶ 21 ವರ್ಷ ಹಿಂದಕ್ಕೆ ಹೋಗುತ್ತದೆ.
ನಾವು ಮುಂದಿನ 21 ದಿನಗಳನ್ನು ನಿರ್ವಹಣೆ ಮಾಡಲು ಆಗದಿದ್ದಲ್ಲಿ, ಆಗ ಹಲವು ಪರಿವಾರಗಳು ಶಾಶ್ವತವಾಗಿ ನಾಶವಾಗುತ್ತವೆ.
ಹೀಗಾಗಿ, ಕೆಲವು ದಿನಗಳ ಕಾಲ, ಮನೆಯಿಂದ ಹೊರಗೆ ಹೋಗುವುದನ್ನು ಮರೆತುಬಿಡಿ.
ನಿಮ್ಮ ಮನೆಯಲ್ಲಿ ಉಳಿಯಿರಿ ಮತ್ತು ಒಂದು ಕೆಲಸ ಮಾಡಿ. ದಯವಿಟ್ಟು ಮನೆಯಲ್ಲೇ ಉಳಿಯಿರಿ.
ಸ್ನೇಹಿತರೆ,
ದೇಶಾದ್ಯಂತ ಲಾಕ್ ಡೌನ್ ಮಾಡುವ ಇಂದಿನ ನಿರ್ಧಾರ, ನಿಶ್ಚಿತವಾಗಿ ನಿಮ್ಮ ಮನೆಗಳ ಬಾಗಿಲುಗಳ ಮುಂದೆ ಒಂದು ಲಕ್ಷ್ಮಣ ರೇಖೆಯನ್ನು ಎಳೆದಿದೆ.
ನೀವು ಮನೆಗಳಿಂದ ಹೊರಗೆ ಹೋದರೆ, ಕೊರೋನಾದಂಥ ಮಹಾಮಾರಿಯನ್ನು ನಿಮ್ಮ ಮನೆಗೆ ಆಹ್ವಾನಿಸುತ್ತಿದ್ದೀರಿ ಎಂಬುದನ್ನು ಮರೆಯಬೇಡಿ.
ನೀವು ನಿತ್ಯ ಭೇಟಿ ಮಾಡುವ ಮಿತ್ರರು, ನೆರೆಹೊರೆಯವರು, ಬಂಧುಗಳು ಯಾರೇ ಆಗಿರಲಿ ಅವರು ಕೊರೋನಾ ವೈರಾಣು ಹೊತ್ತು ತರುವವರಾಗಿರಬಹುದು.
ಕೊರೋನಾ ವೈರಾಣುವಿನಿಂದ ಸೋಂಕಿತರಾಗುವವರು ಆರಂಭಿಕ ಹಂತದಲ್ಲಿ ಆರೋಗ್ಯವಾಗಿಯೇ ಕಾಣುತ್ತಾರೆ, ಅವರಿಗೆ ತಮಗೆ ಸೋಂಕು ತಗುಲಿದೆ ಎಂಬುದೂ ತಿಳಿದಿರುವುದಿಲ್ಲ.
ಹೀಗಾಗಿ, ಮುನ್ನೆಚ್ಚರಿಕೆ ಕೈಗೊಳ್ಳಿ, ಮನೆಯಲ್ಲೇ ಉಳಿಯಿರಿ.
ನಿಮ್ಮಲ್ಲಿ ಹಲವರು ಮನೆಗಳಲ್ಲಿದ್ದುಕೊಂಡೇ ನಾವಿನ್ಯಪೂರ್ಣ ರೀತಿಯಲ್ಲಿ ಈ ವಿಚಾರದ ಕುರಿತ ಸಂದೇಶವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ನಾನು ಒಂದು ಬ್ಯಾನರ್ ಅನ್ನು ಇಷ್ಟ ಪಟ್ಟಿದ್ದೇನೆ. ಅದನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಅದೇನೆಂದರೆ ಕೊ.. ರೊ.. ನಾ.. ಕೋಹಿ, ರೋಡ್ ಪರ್ ನ ನಿಕಲೆ. (ಅಂದರೆ ಯಾರೂ ರಸ್ತೆಗೆ ಇಳಿಯಬೇಡಿ ಎಂದು)
ಸ್ನೇಹಿತರೆ,
ತಜ್ಞರು ಹೇಳುವ ಪ್ರಕಾರ ಇಂದು ಒಬ್ಬರಿಗೆ ಕೊರೋನಾ ವೈರಾಣು ಸೋಂಕು ತಗುಲಿದರೆ, ಅದು ತನ್ನ ಲಕ್ಷಣಗಳನ್ನು ಹೊರ ಹಾಕಲು ಹಲವು ದಿನ ತೆಗೆದುಕೊಳ್ಳುತ್ತದೆ.
ಈ ಮಧ್ಯೆ, ನಿಮಗರಿವಿಲ್ಲದೆ ನಿಮ್ಮ ಸಂಪರ್ಕಕ್ಕೆ ಬರುವ ಎಲ್ಲರಿಗೂ ಇದು ಹಬ್ಬಬಹುದು.
ವಿಶ್ವ ಆರೋಗ್ಯ ಸಂಘಟನೆಯ ವರದಿ ಪ್ರಕಾರ, ಈ ಮಾಹಾಮಾರಿಯಿಂದ ಬಾಧಿತರಾಗುವ ಒಬ್ಬ ವ್ಯಕ್ತಿಯು ಇತರ ನೂರಾರು ಜನರಿಗೆ ಒಂದು ವಾರ ಅಥವಾ 10 ದಿನಗಳಲ್ಲಿ ಸೋಂಕುಂಟು ಮಾಡಬಹುದಾಗಿದೆ.
ಅಂದರೆ ಇದು ಕಾಳ್ಗಿಚ್ಚಿನಂತೆ ಹಬ್ಬುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಮತ್ತೊಂದು ಅಂಕಿ ಅಂಶವೂ ಅಷ್ಟೇ ಮಹತ್ವದ್ದಾಗಿದೆ.
ಸ್ನೇಹಿತರೇ,
ವಿಶ್ವದಲ್ಲಿ ಕೊರೋನಾ ಬಾಧಿತರ ಸಂಖ್ಯೆ ಮೊದಲಿಗೆ 1 ಲಕ್ಷ ತಲುಪಲು 67 ದಿನ ತೆಗೆದುಕೊಂಡಿತು.
ಆದರೆ ನಂತರ ಕೇವಲ 11 ದಿನಗಳಲ್ಲಿ ಅದು ಹೆಚ್ಚುವರಿಯಾಗಿ 1 ಲಕ್ಷ ಜನರಿಗೆ ತಗುಲಿತ್ತು.
ಹಾಗೇ ಯೋಚಿಸಿ, ಆರಂಭದಲ್ಲಿ ಒಂದು ಲಕ್ಷ ಜನರಿಗೆ ಸೋಂಕು ತಗುಲಲು 67 ದಿನ ತೆಗೆದುಕೊಂಡಿದ್ದು, ಹೆಚ್ಚುವರಿಯಾಗಿ ಮತ್ತೊಂದು ಲಕ್ಷ ಜನರಿಗೆ ಸೋಂಕು ತಗುಲಲು ತೆಗೆದುಕೊಂಡಿದ್ದು ಕೇವಲ 11 ದಿನ.
ಇನ್ನೂ ಭೀತಿ ಹುಟ್ಟಿಸುವ ವಿಷಯ ಏನೆಂದರೆ, ಅದು 3 ಲಕ್ಷ ಜನರನ್ನು ಸೋಂಕಿನ ಸುಳಿಗೆ ಸಿಲುಕಿಸಲು ತೆಗೆದುಕೊಂಡಿದ್ದು ಕೇವಲ 4 ದಿನ ಮಾತ್ರ.
ಅಂದರೆ ಈ ಕೊರೋನಾ ವೈರಾಣು ಅದೆಷ್ಟು ವೇಗವಾಗಿ ಹಬ್ಬುತ್ತಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬಹುದು.
ಅದು ಪಸರಿಸಲು ಆರಂಭಿಸಿದರೆ, ಅದನ್ನು ತಡೆಯುವುದು ಕಷ್ಟವಾಗುತ್ತದೆ.
ಸ್ನೇಹಿತರೆ,
ಇದೇ ಕಾರಣಕ್ಕಾಗಿಯೇ ಚೈನಾ, ಅಮೆರಿಕಾ, ಫ್ರಾನ್ಸ್, ಜರ್ಮನಿ, ಸ್ಪೇನ್, ಇಟಲಿ ಮತ್ತು ಇರಾನ್ ನಂಥ ರಾಷ್ಟ್ರಗಳಲ್ಲಿ ಪರಿಸ್ಥಿತಿ ಕೈಮೀರಿ ಹೋಯಿತು.
ನೆನಪಿನಲ್ಲಿಡಿ... ಇಟಲಿ ಮತ್ತು ಅಮೆರಿಕದಲ್ಲಿ ಆರೋಗ್ಯ ಸೇವೆಗಳು ವಿಶ್ವದಲ್ಲೇ ಉತ್ತಮ ಸೇವೆಗಳಲ್ಲಿ ಒಂದು ಎನಿಸಿವೆ.
ಇದರ ಹೊರತಾಗಿಯೂ ಈ ರಾಷ್ಟ್ರಗಳಿಗೆ ಕೊರೋನಾ ವೈರಾಣುವಿನ ಪರಿಣಾಮವನ್ನು ತಡೆಯಲಾಗಲಿಲ್ಲ..
ಇದೆಲ್ಲರ ನಡುವೆ ಒಂದು ಆಶಾಕಿರಣ ಎಲ್ಲಿದೆ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಪರಿಹಾರವೇನು? ಇದಕ್ಕೆ ಪರ್ಯಾಯವೇನು?
ಸ್ನೇಹಿತರೆ,
ಒಂದು ಹಂತದವರೆಗೆ ಕೊರೋನಾ ವೈರಾಣುವನ್ನು ನಿಯಂತ್ರಿಸಲು ಶಕ್ತವಾದ ರಾಷ್ಟ್ರಗಳಿಂದ ಒಂದು ಆಶಾಕಿರಣ ಮೂಡಿದೆ.
ಈ ರಾಷ್ಟ್ರಗಳ ಜನರು, ವಾರಗಟ್ಟಲೆ ತಮ್ಮ ಮನೆಗಳಿಂದ ಹೊರಗೇ ಬಂದಿಲ್ಲ. ಈ ದೇಶಗಳ ನಾಗರಿಕರು, ಸರ್ಕಾರದ ನಿರ್ದೇಶನಗಳನ್ನು ಅಕ್ಷರಶಃ ಪಾಲಿಸಿದ್ದಾರೆ ಹೀಗಾಗಿಯೇ ಆ ದೇಶಗಳು ಈ ಮಹಾಮಾರಿಯಿಂದ ಹೊರಬರುವ ನಿಟ್ಟಿನಲ್ಲಿ ದಾಪುಗಾಲಿಟ್ಟಿವೆ.
ನಾವು ಕೂಡ ಈ ಮಾರ್ಗವನ್ನೇ ನಂಬಿ ನಡೆಯಬೇಕಾಗಿದೆ ನಾವೂ ಕೂಡ ಮನೆಗಳಿಂದ ಹೊರಗೆ ಹೆಜ್ಜೆ ಇಡಬಾರದು.
ಏನಾದರೂ ಆಗಲಿ, ನಾವು ಯಾರೂ ಮನೆಗಳಿಂದ ಹೊರಗೆ ಬರಲೇಬಾರದು.
ನಾವು ನಮ್ಮ ಮನೆಯ ಎಲ್ಲೆಯನ್ನು ಯಾವುದೇ ಕಾರಣಕ್ಕೂ ದಾಟಲೇಬಾರದು. ಕೊರೋನಾ ವೈರಾಣುವಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಇದೊಂದೇ ಮಾರ್ಗ.
ಏನಾದರೂ ಆಗಲಿ, ನಾವು ಮನೆಯಲ್ಲೇ ಉಳಿಯೋಣ.
ನಮ್ಮ ಮನೆಯ ಮುಂದೆ ನಾವೇ ಹಾಕಿಕೊಂಡಿರುವ ಲಕ್ಷ್ಮಣ ರೇಖೆಯನ್ನು ದಾಟದಿರುವುದೇ, ಕೊರೋನಾ ವೈರಾಣುವಿನಿಂದ ನಮ್ಮನ್ನು ರಕ್ಷಸಿಕೊಳ್ಳುವ ಏಕೈಕ ಮಾರ್ಗವಾಗಿದೆ.
ನಾವು ಈ ವೈರಾಣು ಸೋಂಕು ಹಬ್ಬದಂತೆ ತಡೆಯಬೇಕಾದರೆ, ಸೋಂಕಿನ ಸರಪಣಿಯನ್ನು ತುಂಡರಿಸಲೇಬೇಕು.
ಸ್ನೇಹಿತರೆ,
ಇಂದು ಭಾರತ ಎಂಥ ಸ್ಥಿತಿಯಲ್ಲಿದೆ ಎಂದರೆ, ನಮ್ಮ ಇಂದಿನ ಕ್ರಮಗಳು ನಮ್ಮ ಸಾಮರ್ಥ್ಯವನ್ನು ದೃಢಪಡಿಸುತ್ತವೆ ಮತ್ತು ಆಗಬಹುದಾದ ಅನಾಹುತದ ಪರಿಣಾಮವನ್ನು ತಗ್ಗಿಸುತ್ತದೆ.
ನಮ್ಮ ಸಂಕಲ್ಪವನ್ನು ಮತ್ತೆ ಮತ್ತೆ ಬಲವರ್ಧಿಸುವ ಸಮಯ ಇದಾಗಿದೆ.
ಪ್ರತಿಯೊಂದು ಹೆಜ್ಜೆಯಲ್ಲೂ ನಮ್ಮ ಸಂಯಮವನ್ನು ಪ್ರದರ್ಶಿಸುವ ಕಾಲವೂ ಇದಾಗಿದೆ.
ಒಂದು ನೆನಪಿನಲ್ಲಿಡಿ ಶ್ವಾಸ ಇದ್ದರೆ, ಆಗ ವಿಶ್ವಾಸ ಇರತ್ತೆ.
ಇದು ಧೈರ್ಯ ಮತ್ತು ಶಿಸ್ತಿನ ಪ್ರದರ್ಶನದ ಸಮಯವಾಗಿದೆ.
ನಮ್ಮ ದೇಶದಲ್ಲಿ ಎಲ್ಲಿಯವರೆಗೆ ಲಾಕ್ ಡೌನ್ ಇರುತ್ತದೋ ಅಲ್ಲಿಯವರೆಗೆ ನಾವು ನಮ್ಮ ಸಂಕಲ್ಪದಂತೆ ನಡೆಯಬೇಕು ಮತ್ತು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. .
ನಾನು ನಿಮಗೆ ಮನವಿ ಮಾಡುವುದೇನೆಂದರೆ, ಮನೆಯಲ್ಲಿ ಉಳಿದಿರುವಾಗ, ತಮ್ಮ ಕರ್ತವ್ಯ ನಿರ್ವಹಣೆಗಾಗಿ ತಮ್ಮ ಜೀವನವನ್ನೇ ಪಣಕ್ಕಿಟ್ಟು ಶ್ರಮಿಸುತ್ತಿರುವವರನ್ನು ನೆನಪಿಸಿಕೊಳ್ಳಿ ಮತ್ತು ಅವರಿಗಾಗಿ ಪ್ರಾರ್ಥನೆ ಮಾಡಿ.
ಪ್ರತಿಯೊಬ್ಬರ ಪ್ರಾಣ ಉಳಿಸಲು ಆಸ್ಪತ್ರೆಗಳಲ್ಲಿ ಹಗಲಿರುಳು ದುಡಿಯುತ್ತಿರುವ ವೈದ್ಯರು, ಶುಶ್ರೂಷಕರು, ಅರೆ ವೈದ್ಯಕೀಯ ಸಿಬ್ಬಂದಿ, ರೋಗ ಶಾಸ್ತ್ರಜ್ಞರ ಬಗ್ಗೆಯೂ ಯೋಚಿಸಿ.
ಆಸ್ಪತ್ರೆಗಳ ಆಡಳಿತ ವರ್ಗದ ಬಗ್ಗೆಯೂ ಯೋಚಿಸಿ, ಈ ಕಠಿಣ ಪರಿಸ್ಥಿತಿಯಲ್ಲಿಯೂ ಮತ್ತೊಬ್ಬರ ಸೇವೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಆಂಬುಲೆನ್ಸ್ ಚಾಲಕರು, ವಾರ್ಡ್ ಬಾಯ್ ಗಳು, ನೈರ್ಮಲ್ಯ ಕಾರ್ಯಕರ್ತರ ಬಗ್ಗೆಯೂ ಚಿಂತಿಸಿ,
ನಿಮ್ಮ ಸಮಾಜವನ್ನು, ನಿಮ್ಮ ನೆರೆಹೊರೆಯನ್ನು, ನಿಮ್ಮ ರಸ್ತೆಗಳನ್ನು ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡಲು ಮತ್ತು ವೈರಾಣುವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಶ್ರಮಿಸುತ್ತಿರುವ ನೈರ್ಮಲ್ಯ ಕಾರ್ಯಕರ್ತರಿಗಾಗಿಯೂ ಪ್ರಾರ್ಥಿಸಿ.
ನಿಮಗೆ ನಿಖರ ಮಾಹಿತಿ ನೀಡಲು ಆಸ್ಪತ್ರೆಗಳಲ್ಲಿ ಮತ್ತು ರಸ್ತೆಗಳಲ್ಲಿ ಈ ಮಹಾಮಾರಿಯ ಅಪಾಯದ ನಡುವೆಯೂ ದಿನದ 24 ಗಂಟೆಯೂ ಶ್ರಮಿಸುತ್ತಿರುವ ಮಾಧ್ಯಮದ ಸ್ನೇಹಿತರ ಬಗ್ಗೆಯೂ ನೀವು ಯೋಚಿಸಿ.
ತಮ್ಮ ಕುಟುಂಬದ ಜನರ ಬಗ್ಗೆ ಚಿಂತೆಯನ್ನೂ ಮಾಡದೆ, ಹಗಲಿರುಳು ನಿಮ್ಮನ್ನು ರಕ್ಷಿಸಲು ಶ್ರಮಿಸುತ್ತಿರುವ ಮತ್ತು ಕೆಲವರ ಕೋಪಕ್ಕೂ ತುತ್ತಾಗುತ್ತಿರುವ ಪೊಲೀಸರ ಬಗ್ಗೆಯೂ ಸ್ವಲ್ಪ ಯೋಚಿಸಿ.
ಕೊರೋನಾ ಮಹಾಮಾರಿಯಿಂದ ಉದ್ಭವವಾಗಿರುವ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತ್ವರಿತವಾಗಿ ಶ್ರಮಿಸುತ್ತಿವೆ.
ದೈನಂದಿನ ಜೀವನಕ್ಕೆ ತೊಂದರೆ ಆಗದ ರೀತಿಯಲ್ಲಿ ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ.
ನಾವು ಅತ್ಯಾವಶ್ಯಕ ವಸ್ತುಗಳ ಪೂರೈಕೆಯ ಖಾತ್ರಿ ಪಡಿಸಿಕೊಳ್ಳಲು ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ.
ಇದು ಬಡ ಜನರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ ಎಂಬುದು ದುರ್ದೈವ ಹಾಗೂ ವಾಸ್ತವ ಕೂಡ.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಸಾಮಾಜಿಕ ಸಂಘಟನೆಗಳು ಮತ್ತು ನಾಗರಿಕ ಸಮಾಜ, ಬಡ ಜನರ ಸಂಕಷ್ಟವನ್ನು ತಗ್ಗಿಸಲು ಶ್ರಮಿಸುತ್ತಿವೆ.
ಹಲವಾರು ಜನರು ಅವರಿಗೆ ನೆರವಾಗಲು ಮುಂದೆ ಬರುತ್ತಿದ್ದಾರೆ.
ಸ್ನೇಹಿತರೆ,
ನಾವು ನಿತ್ಯದ ಬದುಕಿಗೆ ಏನೆಲ್ಲಾ ಅಗತ್ಯವೋ ಅದನ್ನು ಪೂರೈಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ, ಇದರ ಜೊತೆಗೆ ಜೀವ ಉಳಿಸುವುದು ಅತ್ಯಗತ್ಯವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ, ವೈದ್ಯಕೀಯ ಮತ್ತು ವೈಜ್ಞಾನಿಕ ಸಂಸ್ಥೆಗಳು ಮತ್ತು ವೈದ್ಯಕೀಯ ತಜ್ಞರ ಸಲಹೆ ಮತ್ತು ಸೂಚನೆಗಳ ಮೇರೆಗೆ ಸರ್ಕಾರ ನಿರ್ಧಾರಗಳನ್ನು ಕೈಗೊಂಡಿದೆ.
ಈಗ ಕೇಂದ್ರ ಸರ್ಕಾರ, ಕೊರೋನಾ ವೈರಾಣು ಪೀಡಿತ ರೋಗಿಗಳ ಚಿಕಿತ್ಸೆಗಾಗಿ ದೇಶದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು 15 ಸಾವಿರ ಕೋಟಿ ರೂಪಾಯಿ ಹಂಚಿಕೆ ಮಾಡಿದೆ.
ಈ ನಿಧಿಯನ್ನು ಬಳಸಿಕೊಂಡು ನಾವು ತಪಾಸಣೆ ಸೌಲಭ್ಯ, ವ್ಯಕ್ತಿಗತ ಸಂರಕ್ಷಣಾ ಸಾಧನಗಳು, ಪ್ರತ್ಯೇಕ ವಾರ್ಡ್ ಗಳು, ಐ.ಸಿ.ಯು ಹಾಸಿಗೆಗಳು, ವೆಂಟಿಲೇಟರ್ ಗಳು ಮತ್ತು ಇತರ ಅಗತ್ಯ ಸಾಧನ ಸಲಕರಣೆಗಳ ಸಂಖ್ಯೆಯನ್ನು ಹೆಚ್ಚಿಸಬಹುದಾಗಿದೆ.
ಇದರ ಜೊತೆಗೆ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿಯನ್ನೂ ನೀಡಲಾಗುವುದು.
ಈ ಸಂದರ್ಭದಲ್ಲಿ ಪ್ರಾಥಮಿಕ ಆದ್ಯತೆ ಕೇವಲ ಆರೋಗ್ಯ ಸೇವೆ ಮಾತ್ರವೇ ಆಗಿರಲಿ ಎಂದು ನಾನು ರಾಜ್ಯ ಸರ್ಕಾರಗಳಿಗೆ ಮನವಿ ಮಾಡುತ್ತೇನೆ.
ಈ ಮಹಾಮಾರಿ ಮತ್ತು ಸಂಕಷ್ಟದ ಸಂದರ್ಭದಲ್ಲಿ ಖಾಸಗಿ ವಲಯ ಕೂಡ ಹೆಗಲಿಗೆ ಹೆಗಲುಕೊಟ್ಟು ಜನರೊಂದಿಗೆ ನಿಂತಿದೆ ಎಂಬುದು ನನಗೆ ಸಂತೋಷ ತಂದಿದೆ.
ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ಪ್ರಯೋಗಾಲಯಗಳು ಈ ಸವಾಲಿನ ಸನ್ನಿವೇಶದಲ್ಲಿ ಸರ್ಕಾರದೊಂದಿಗೆ ಜೊತೆಗೂಡಿ ಕೆಲಸ ಮಾಡಲು ಮುಂದೆ ಬಂದಿವೆ.
ಆದರೆ, ಸ್ನೇಹಿತರೆ, ನೀವು ಕೂಡ ಎಚ್ಚರಿಕೆಯಿಂದ ಇರಲೇಬೇಕು. ಇಂಥ ಸಂದರ್ಭದಲ್ಲಿ ತಿಳಿದೋ ತಿಳಿಯದೆಯೋ ಅನೇಕ ವದಂತಿಗಳು ಹಬ್ಬಿ ಬಿಡುತ್ತವೆ.
ಇಂಥ ವದಂತಿಗಳು ಮತ್ತು ಮೂಢನಂಬಿಕೆಗಳನ್ನು ನಂಬದಂತೆ ನಾನು ನಿಮ್ಮೆಲ್ಲರಿಗೂ ಮನವಿ ಮಾಡಿಕೊಳ್ಳುತ್ತೇನೆ.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ವೈದ್ಯಕೀಯ ಸಮುದಾಯ ನೀಡುವ ಸಲಹೆ ಮತ್ತು ಸೂಚನೆಗಳನ್ನು ಪಾಲನೆ ಮಾಡುವುದು ಅತ್ಯಗತ್ಯವಾಗಿದೆ.
, ಈ ಕಾಯಿಲೆಯ ಯಾವುದೇ ಲಕ್ಷಣ ನಿಮ್ಮಲ್ಲಿ ಕಂಡು ಬಂದಲ್ಲಿ, ವೈದ್ಯರನ್ನು ಸಂಪರ್ಕಿಸದೆ, ನೀವೇ ಸ್ವತಃ ಯಾವುದೇ ಔಷಧವನ್ನು ತೆಗೆದುಕೊಳ್ಳಬೇಡಿ ಎಂದು ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ
ಇಂಥ ಬೇಜವಾಬ್ದಾರಿತನ, ನಿರ್ಲಕ್ಷ್ಯವು ನಿಮ್ಮ ಜೀವವನ್ನು ಹೆಚ್ಚು ಅಪಾಯಕ್ಕೆ ಸಿಲುಕಿಸುತ್ತದೆ.
ಸ್ನೇಹಿತರೆ,
ಈ ಸಂಕಷ್ಟದ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕರೂ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳ ಸೂಚನೆಗಳನ್ನು ಮತ್ತು ನಿರ್ದೇಶನಗಳನ್ನು ಪಾಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ.
21 ದಿನಗಳ ಲಾಕ್ ಡೌನ್ ದೀರ್ಘ ಸಮಯ ಎಂಬುದು ನಿಜ., ಆದರೆ, ನಿಮ್ಮ ಸುರಕ್ಷತೆಗಾಗಿ ಮತ್ತು ನಿಮ್ಮ ಕುಟುಂಬದ ಸುರಕ್ಷತೆಗಾಗಿ ಇದು ಅತ್ಯಂತ ಮಹತ್ವದ್ದಾಗಿದೆ.
ಭಾರತ ಈ ಸವಾಲನ್ನು ಯಶಸ್ವಿಯಾಗಿ ಮೆಟ್ಟಿ ನಿಲ್ಲುವುದಷ್ಟೇ ಅಲ್ಲ, ಅದು ಸಂಕಷ್ಟದ ಸಮಯದಲ್ಲಿ ವಿಜಯಿಯಾಗಿ ಹೊರಹೊಮ್ಮುತ್ತದೆ ಎಂಬ ವಿಶ್ವಾಸವೂ ನನಗಿದೆ.
ನೀವು ನಿಮ್ಮ ಬಗ್ಗೆ ಕಾಳಜಿ ವಹಿಸಿ, ನಿಮ್ಮ ಆಪ್ತರ ಬಗ್ಗೆಯೂ ಕಾಳಜಿ ವಹಿಸಿ.
ಜೈ ಹಿಂದ್.
Comments
Post a Comment