#ಹೆಚ್ಚಿನವರು_ವಾಕಿಂಗ್_ಟ್ರಾಕ್_ನಿಂದ_ವಿಮುಖರಾಗುತ್ತಾರೆ
#ಯಾಕೆ?
#ನನ್ನ_ಅನುಭವದ_ವಾಕಿಂಗ್_ಟಿಪ್ಸ್_ಇಲ್ಲಿದೆ.
#ನನ್ನ_ಸಲಹೆ_ಪಡೆದವರಲ್ಲಿ_ನೂರಕ್ಕೆ_ಒಬ್ಬರೂ_ಅದನ್ನು_ಪಾಲಿಸುವುದಿಲ್ಲ.
#ಪ್ರಾರಂಭದಲ್ಲೆ_ವಿಪರೀತ_ಮಾಡಲು_ಪ್ರಯತ್ನಿಸಿ_ವಿಪಲರಾಗುತ್ತಾರೆ
#ಹತಾಶೆಯನ್ನೆ_ಸಮರ್ಥಿಸುವ_ಮಾತುಗಳು_ವಾಕಿಂಗ್_ಜಾಗ_ಅಕ್ರಮಿಸಿರುತ್ತದೆ.
https://youtu.be/SSd-Dvp-6Yk?feature=shared
ನನ್ನ ತೂಕ 140 ಕಿಲೋ ದಾಟುತ್ತಿರುವಾಗ ನನಗೆ ಯಾವುದರಲ್ಲೂ ಆಸಕ್ತಿ ಕಿಂಚಿತ್ತೂ ಇರಲಿಲ್ಲ ಸ್ಥೂಲಕಾಯ ನಿಯಂತ್ರಣ ತಪ್ಪಿದಾಗ ಇರಲೂ ಸಾಧ್ಯವಿರಲಿಲ್ಲ.
ನನ್ನ ಸ್ವಭಾವ ಅಜಗರ ಪ್ರವೃತ್ತಿ ಏನೆಂದರೆ ಹೆಬ್ಬಾವಿನಂತೆ ಆದ್ದರಿಂದ ತೂಕ ಇಳಿಸಲು ಸುಲಭ ಮಾರ್ಗ ಹುಡುಕುವುದು ಒಂದೆರೆಡು ದಿನ ಮಾಡುವುದು ನಂತರ ಅದನ್ನು ಕೈಬಿಟ್ಟು ನನ್ನದೇ ಆದ ಸಮರ್ಥನೆ ಕೊಟ್ಟು ಕೊಳ್ಳುತ್ತಿದ್ದೆ.
ನಾನು ನನ್ನ ನಿತ್ಯ ಕೆಲಸದಲ್ಲೇ ಕಡಿಮೆ ಓಡಾಡುತ್ತೀನಾ ? ಇದಕ್ಕಿಂತ ಹೆಚ್ಚಿನ ವಾಕಿಂಗ್ ಬೇಕಾ....
ಜರ್ಮನ್ ರಷ್ಯಾದಲ್ಲಿ 150 - 200 ಕಿಲೋ ತೂಕದವರು ಇಲ್ಲವಾ......
ಬೇರೆ ದೇಶಗಳಲ್ಲಿ ಅಂತವರಿಗಾಗಿಯೇ ಎಕ್ಸ್ ಕ್ಲೂಸೀವ್ ಎಕ್ಸಟ್ರಾ ಲಾರ್ಜ್ ರೆಡಿಮೇಡ್ ಶಾಪ್ ಗಳು ಇರುತ್ತದೆ...
ನಾನು ಇರುವುದೇ ಹೀಗೆ ನನಗೆ ಯಾರ ಉಪದೇಶವೂ ಬೇಡ.....
ಇಂತಹ ತೀರ್ಮಾನಕ್ಕೆ ತೂಕ ಇಳಿಸಿಕೊಳ್ಳಲಾಗದ ಹತಾಶೆಯೇ ಕಾರಣವಾದರೂ ಬೇರೆ ವಿತರ್ಕಗಳ ಹೊದಿಕೆ ಹಾಸುತ್ತೇವೆ ಇದು ನನ್ನದು ಮಾತ್ರ ಅನುಭವ ಅಲ್ಲ ಮಧ್ಯ ವಯಸ್ಸು ದಾಟುವ ಎಲ್ಲಾ ಸ್ತ್ರೀ ಪುರುಷರು ಹೊರತಲ್ಲ.
ನಿತ್ಯ ಅನೇಕರು ತಮ್ಮ ತಮ್ಮ ಸ್ಥೂಲಕಾಯ ನಿವಾರಣೆಗಾಗಿ ನನ್ನನ್ನು ಸಂಪರ್ಕಿಸಿ ಸಲಹೆ ಪಡೆಯುತ್ತಾರೆ ಅವರಿಗೆ ನಾನು ನನ್ನ ಅನುಭವ ಎಲ್ಲಾ ಹೇಳಿ ಈ ಬಗ್ಗೆ ಬರೆದ ಬ್ಲಾಗ್ ಲೇಖನಗಳನ್ನು ಪಾರ್ವರ್ಡ್ ಮಾಡುತ್ತೇನೆ.
ಇಂತವರಲ್ಲಿ ನೂರರಲ್ಲಿ ಒಬ್ಬರೂ ಪಾಲಿಸುತ್ತಾರೆಂದು ನಂಬಲು ಸಾಧ್ಯವಿಲ್ಲ, ಸ್ಥೂಲ ಕಾಯದಿಂದ ಪರಿತಪಿಸುವವರು ಅದನ್ನು ನಿವಾರಿಸಿಕೊಳ್ಳಲು ಪಡೆಯುವುದು ಸಲಹೆ ಮಾತ್ರ ಆದರೆ ಆಚರಣೆ ಶೂನ್ಯ.
ನಾನು ನನ್ನ 54ನೇ ವಯಸ್ಸಿನಲ್ಲಿ ನನ್ನ ಮಿತಿಮೀರಿದ ತೂಕ, ನಿಯಂತ್ರಣ ತಪ್ಪಿದ ಡಯಾಬಿಟೀಸ್, ಹೈ ಬಿಪಿ, ಹರ್ನಿಯಾ, ಪ್ರಾಸ್ಟೇಟ್ ಎನ್ ಲಾರ್ಜ್ ಹೀಗೆ ಇದನ್ನೆಲ್ಲ ಸುಸ್ಥಿತಿಗೆ ತರಲು ಸಾದ್ಯವೇ ಇಲ್ಲ ಎಂದು ತೀಮಾನಿಸಿ ಮೇಲಿನ ವಿತರ್ಕಗಳ ಸಮರ್ಥನೆಗೆ ಇಳಿದಿದ್ದೆ.
ನಂತರವೇ ನಾನು ದೃಡ ನಿರ್ಧಾರ ಮಾಡಿದೆ, ಅವಸರದ ವಾಕಿಂಗ್ -ವಿಪರೀತ ವ್ಯಾಯಾಮ - ಅವೈಜ್ಞಾನಿಕ ಡಯಟ್ ಯಾವಕಾರಣಕ್ಕೂ ಮಾಡಬಾರದೆಂದು, ನನ್ನ ಒಳಗೆ ನಾನು ಒಂದು ಚೌಕಟ್ಟು ಹಾಕಿ ಕೊಂಡೆ ನನ್ನ ದೇಹದಲ್ಲಿ ಖಾಯಂ ಜಾಗ ಪಡೆದು ವಾಪಾಸು ಹೋಗಲು ನಿರಾಕರಿಸುತ್ತಿರುವ ಆನಪೇಕ್ಷಿತ ಕೊಬ್ಬಿನ ಅತಿಥಿಯನ್ನು ಹೊಡೆದೊಡಿಸಲು ಪಂಚವಾರ್ಷಿಕ ಯೋಜನೆ ಹಾಕಿ ಕೊಂಡೆ.
ತೂಕ ಇಳಿಸುವ ಪ್ರಯತ್ನ ಪ್ರಾರಂಬಿಸಿ ಒಂದು ವರ್ಷದ ನಂತರವೇ ತೂಕ ಪರಿಶೀಲಿಸ ಬೇಕು ಕಾರಣ ಅನೇಕ ಸಂದರ್ಭದಲ್ಲಿ ಅನೇಕರು ಪದೇ ಪದೇ ತೂಕ ನೋಡಿ ಕೊಳ್ಳುವ ಅವಸರದಲ್ಲಿ ತೂಕ ಇಳಿದಿಲ್ಲ ಎಂದು ತಕ್ಷಣ ಆ ಪ್ರಯತ್ನದಿಂದ ವಿಮುಖರಾಗುತ್ತಾರೆ ಇದು ನನ್ನ ಸ್ವಂತ ಅನುಭವ ಕೂಡ.
ಮೊದಲ 15 ದಿನ ದಿನಕ್ಕೆ 5 ನಿಮಿಷ ವಾಕಿಂಗ್ ನಂತರ 10 ನಿಮಿಷ ಹೀಗೆ 15 ದಿನಕ್ಕೆ 5 ನಿಮಿಷ ವಿಸ್ತರಿಸುತ್ತಾ ಒಂದು ಗಂಟೆ ಅವಧಿಯ ವಾಕಿಂಗ್ ದೃಡತೆ ತಲುಪುವುದು ಅಲ್ಲಿಗೆ ಕನಿಷ್ಟ ಮೂರು ತಿಂಗಳು ಆಗಿರುತ್ತದೆ ಅಂದರೆ ಯಾವುದೇ ಅಭ್ಯಾಸ ನಿರಂತರ ಮೂರು ತಿಂಗಳು ಮಾಡಿದರೆ ಅದು ನಮ್ಮ ಜೀವನದ ನಿತ್ಯ ಕ್ರಮವಾಗಿ ಬಿಡುತ್ತದೆ ಆ ನಂತರ ಆ ಅಭ್ಯಾಸ ತ್ಯಜಿಸಲು ಸಾಧ್ಯವಾಗುವುದಿಲ್ಲ.
ನನ್ನ ಜೀವನದಲ್ಲಿ ನೂರಾರು ಬಾರಿ ಈ ರೀತಿ ವಾಕಿಂಗ್ ಅಭ್ಯಾಸ ಪ್ರಾರಂಬಿಸಿ ಮಧ್ಯದಲ್ಲೇ ತ್ಯಜಿಸಿದ್ದೇನೆ ಕಾರಣ ವಾಕಿಂಗ್ ಪ್ರಾರಂಬಿಸಿದ ಒಂದೆರೆಡು ದಿನದಲ್ಲೇ ವಾಕಿಂಗ್ ಅವದಿ ಒಂದು ಗಂಟೆಗೆ ವಿಸ್ತರಿಸುತ್ತಿದ್ದೆ ಇದನ್ನು ವಾಕಿಂಗ್ ಮಾಡದವರ ಎದುರು ಹೆಮ್ಮೆಯಿಂದ ಕೊಚ್ಚಿಕೊಂಡು ಅವರ ಹೊಟ್ಟೆ ಉರಿಸುತ್ತಿದ್ದೆ ಮರುದಿನವೇ ನನ್ನ ದೇಹ ವಾಕಿಂಗ್ ಮಾಡಲು ನಿರಾಕರಿಸುತ್ತಿತ್ತು... ಆಗ ಮತ್ತೆ ನನ್ನ ಕುತರ್ಕದ ಮೆರವಣಿಗೆ ಶುರುವಾಗುತ್ತಿತ್ತು.
ವಾಕಿಂಗ್ ಟ್ರಾಕ್ ಸರಿ ಇಲ್ಲ, ಟ್ರಾಕ್ ಶೂ ಸರಿಯಾದ್ದು ಖರೀದಿಸಬೇಕು, ಟ್ರಾಕಿಂಗ್ ಸೂಟ್ ಬೇಕು, ಟ್ರೆಡ್ ಮಿಲ್ ತಂದ ಮೇಲೆ ವಾಕಿಂಗ್ ಮಾಡುತ್ತೇನೆ ಅಂತೆಲ್ಲ ಮುಂದೂಡುವ ಸಬೂತುಗಳು.
ಆದ್ದರಿಂದ 2019ರಿಂದ ಬೆಳಿಗ್ಗೆ ಕೇವಲ 5 ನಿಮಿಷದ ವಾಕಿಂಗ್ ಶುರು ಮಾಡಿದಾಗ 140 ಕಿಲೋ ದಾಟಿದ್ದ ನನ್ನ ದೇಹ ಸಹಕರಿಸಲು ನಿರಾಕರಿಸಿತ್ತು... ಐದು ನಿಮಿಷ ಕೂಡ ನಡೆಯಲು ಅಸಾಧ್ಯ ಎನ್ನಿಸುವಂತ ಪರಿಸ್ಥಿತಿ ಒಂದು ತಿಂಗಳಲ್ಲಿ 10 ನಿಮಿಷಕ್ಕೆ ವಿಸ್ತರಿಸಿ ತಿಂಗಳು ಎರೆಡು ದಾಟುವಾಗ 30 ನಿಮಿಷ ಸರಾಗವಾಗಿ ನಡೆಯಲು ಸಾಧ್ಯವೆಂದು ದೈಯ೯ ನೀಡಿತು ಇದು 3 ರಿಂದ 4 ತಿಂಗಳು ದಾಟುವಾಗ ಒಂದು ಗಂಟೆ ಅವದಿಯ 7000 ಹೆಜ್ಜೆಗೆ ತಲುಪಿತು.
ವಾಕಿಂಗ್ ನಿತ್ಯ ಅಭ್ಯಾಸವಾಗಿ ಕ್ರಮೇಣ ತೂಕ ನಿವಾರಣೆ ಪ್ರಾರಂಭವಾಯಿತು ಜೊತೆಗೆ ರಾತ್ರಿ ಊಟ ತ್ಯಜಿಸಿದ್ದರಿಂದ ಸ್ಥೂಲ ಕಾಯ ನಿವಾರಣೆ ಪ್ರಗತಿ ಪಡೆಯಿತು ಸುಮಾರು 40 ಕಿಲೊ ತೂಕ ಇಳಿಯಿತು ಇದರಿಂದ ಅನಿಯಂತ್ರಿತ ಡಯಾಬಿಟೀಸ್, ಬಿಪಿ ನಿಯಂತ್ರಣಕ್ಕೆ ಬಂದಿತು, ಹರ್ನಿಯಾ ಆಪರೇಷನ್ ಇಲ್ಲದೆ ನಾಪತ್ತೆ ಆಯಿತು.
ನಿತ್ಯ ನಡಿಗೆ ಜೊತೆ ಕೆಲ ಕೈ ಮತ್ತು ತೋಳಿನ ವ್ಯಾಯಾಮ ಕೂಡ ಅಳವಡಿಸಿ ಕೊಂಡರೆ ಅದು ನಮ್ಮ ಪಿಟ್ ನೆಸ್ ಗೆ ಸಹಕಾರಿ, ಇಷ್ಟಾದರೂ ಹೊಟ್ಟೆ ಇಳಿದಿಲ್ಲ ಎನ್ನುವುದು ಸತ್ಯ ಯಾಕೆಂದರೆ ಸ್ಥೂಲಕಾಯ ನಿವಾರಣೆಯ ಅಂತಿಮ ಹಂತವೇ ಹೊಟ್ಟೆಯ ಕೊಬ್ಬು ನಿವಾರಣೆ, ಅದು ಮೊದಲ ಹಂತದಲ್ಲಿ ಹೊಟ್ಟೆ ಕೊಬ್ಬು ಕರಗಲು ಬಿಡುವುದಿಲ್ಲ ಮುಂದಿನ ಕೆಲ ವರ್ಷಗಳಲ್ಲಿ ಹೊಟ್ಟೆ ಕರಗೀತು, ಕರಗದಿದ್ದರೂ ಬೇಸರ ಇಲ್ಲ ತೂಕ ಇಳಿದಿದ್ದು ಆರೋಗ್ಯ ಸುಧಾರಿಸಿದ್ದು, ಪಿಟ್ನೆಸ್ ಮರಳಿ ಪಡೆದದ್ದೇ ನನ್ನ ಸಾಧನೆ.
Comments
Post a Comment