Blog number 1979. ಕೆ.ಶಿವರಾಮ್ ನೆನಪುಗಳು ಭಾಗ 2, ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಬಂದದ್ದು ಮತ್ತು ನಮ್ಮ ಆನಂದಪುರಂ ಯುವಜನ ಮೇಳದಲ್ಲಿ ನನ್ನ ಆಯ್ಕೆಯ ತೀರ್ಪುಗಾರರನ್ನೆ ಅನುಮೋದಿಸಿದ ನೆನಪುಗಳು
#ಕೆ_ಶಿವರಾಂ_ನೆನಪುಗಳು_ಭಾಗ_2
#ಶಿವಮೊಗ್ಗ_ಜಿಲ್ಲಾ_ಪಂಚಾಯತ್_ಮುಖ್ಯ_ಕಾರ್ಯನಿರ್ವಹಣಾಧಿಕಾರಿ_ಆಗಿ_ಕೆ_ಶಿವರಾಂ
#ಆನಂದಪುರಂನಲ್ಲಿ_ನಡೆದ_ಯುವಜನ_ಮೇಳದ_ಪ್ರಶಸ್ತಿ_ಪತ್ರದಲ್ಲಿ_ಅವರ_ಸ್ಟಹಸ್ತಾಕ್ಷರ
#ಜಿಲ್ಲಾ_ಮಟ್ಟದ_ಯುವಜನ_ಮೇಳದ_ನೂತನ_ತೀರ್ಪುಗಾರರನ್ನು_ವಿರೋದಿಸಿದ_ಅಧಿಕಾರಿಗಳು
#ನಾನು_ಆಯ್ಕೆ_ಮಾಡಿದ್ದ_ತೀರ್ಪುಗಾರ_ಯುವ_ಮುಂದಾಳುಗಳು_ಈಸೂರು_ಲೋಕೇಶ್_ತಂಡ
#ಹೊನ್ನಾಳಿ_ಚಂದ್ರಶೇಖರ್_ಹೆಚ್_ಬಿ_ರಾಘವೇಂದ್ರ_ಸುನಿಲ್_ಶಿರನೆಲ್ಲಿ
#ತಮ_ನರಸಿಂಹ_ಕಣ್ಣೂರಿನ_ಡೊಳ್ಳಿನ_ಕಲಾವಿದ_ಘಟ್ಟದಮಂಜಪ್ಪ_ಗೆಳೆಯರು
#ನನ್ನ_ಆಯ್ಕೆಯ_ತೀರ್ಪುಗಾರರನ್ನೇ_ಎತ್ತಿ_ಹಿಡಿದ_ಶಿವರಾಂ
ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ (1995 2000) ಕೆ ಶಿವರಾಂ ಅವರು ನಮ್ಮ ಜಿಲ್ಲಾ ಪಂಚಾಯತಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಬರುತ್ತಿದ್ದಾರೆ ಎಂಬ ಸುದ್ದಿ ಬಂತು, ಆಗ ನಮಗೆಲ್ಲ ಕುತೂಹಲ ಏಕೆಂದರೆ ಕನ್ನಡದಲ್ಲಿ ಪ್ರಥಮ ಬಾರಿಗೆ ಐಎಎಸ್ ಮಾಡಿದ ವ್ಯಕ್ತಿ ಅವರು ಹಾಗೆಯೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಕಥೆ ನಿರ್ದೇಶನದಲ್ಲಿ #ಬಾನಲ್ಲೆ_ಮದುಚಂದ್ರಕ್ಕೆ ಎಂಬ ಸಿನಿಮಾ ನಟನೆ ಮಾಡಿ ಪ್ರಸಿದ್ಧರಾದವರು, ಬೆಂಗಳೂರು ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸುವಾಗ ಅತ್ಯಂತ ,ಬಡವರಿಗೆ ದಲಿತರಿಗೆ ನಿವೇಶನಗಳನ್ನು ಮತ್ತು ಮನೆಗಳನ್ನು ಸರ್ಕಾರದಿಂದ ನಿರ್ಮಿಸಿ ಕೊಟ್ಟವರು ಈ ರೀತಿಯ ಸುದ್ದಿಗಳು ಅವರ ಬಗ್ಗೆ ಕೂತೂಹಲ ಹಾಗೂ ಅಭಿಮಾನ ಮೂಡಿಸಿತ್ತು.
ಅವರು ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿ ತಮ್ಮ ಅಧಿಕಾರ ಸ್ವೀಕಾರ ಮಾಡಿ ನಂತರ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ನಮ್ಮನೆಲ್ಲ ಅವರ ಕಚೇರಿಗೆ ಕರೆಸಿ ಪರಸ್ಪರ ಪರಿಚಯಗಳನ್ನು ಮಾಡಿಕೊಂಡರು.
ಅವರಿಗೆ ಜಿಲ್ಲೆಯ ವಿದ್ಯಾಮಾನ ಮೊದಲೇ ತಿಳಿದಿತ್ತು, ಆಗ ಜೆ ಹೆಚ್ ಪಟೇಲರು ಮುಖ್ಯಮಂತ್ರಿ, ಬಸವಣ್ಣಪ್ಪನವರು ಜಿಲ್ಲಾ ಮಂತ್ರಿ ರ, ಜಿಲ್ಲೆಯಲ್ಲಿ ಶಿಕಾರಿಪುರದಿಂದ ಯಡಿಯೂರಪ್ಪ ಶಾಸಕರಾಗಿ ವಿರೋದ ಪಕ್ಷದ ನಾಯಕರಾಗಿದ್ದರು ಸಾಗರ ತಾಲ್ಲೂಕಿನಿಂದ ಕಾಗೋಡು ತಿಮ್ಮಪ್ಪ, ತೀರ್ಥಹಳ್ಳಿಯಿಂದ ಆರಗ ಜ್ಞಾನೇಂದ್ರ, ಹೊಸನಗರದಿಂದ ಆಯನೂರು ಮಂಜುನಾಥ್, ಭದ್ರಾವತಿಯಿಂದ ಅಪ್ಪಾಜಿಗೌಡರು, ಶಿವಮೊಗ್ಗದಿಂದ ಈಶ್ವರಪ್ಪ, ಸೊರಬ ಕ್ಷೇತ್ರದಿಂದ ಕುಮಾರ್ ಬಂಗಾರಪ್ಪ ಶಾಸಕರುಗಳು ಆಗಿದ್ದರು ಆಗ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಬಲ್ಕೀಶ್ ಬಾನು ಮತ್ತು ಉಪಾಧ್ಯಕ್ಷರು ತಿಪ್ಪಾ ನಾಯಕರು.
ಆಗಲೇ ನಮ್ಮ ಆನಂದಪುರದಲ್ಲಿ ಶಿವಮೊಗ್ಗ ಜಿಲ್ಲಾ ಯುವಜನ ಮೇಳ ನಿಗದಿ ಆಗಿತ್ತು ಇದಕ್ಕಾಗಿ ನಾವೆಲ್ಲಾ ವ್ಯವಸ್ಥೆ ಹಮ್ಮಿಕೊಂಡಿದ್ದೆವು, ಈ ಜಿಲ್ಲಾ ಮಟ್ಟದ ಯುವ ಜನ ಮೇಳಕ್ಕೆ ಶಿವರಾಂರನ್ನು ಆಹ್ವಾನಿಸಿದೆ ಆದರೆ ಶಿವರಾಂ ಅವರು ಆ ದಿನ ಜಿಲ್ಲೆಯಲ್ಲಿ ಲಭ್ಯವಿಲ್ಲದ ಕಾರಣ ಬೇರೆ ಕೆಲಸಗಳು ಇದ್ದ ಕಾರಣ ಅವರು ಭಾಗವಹಿಸಲು ಸಾಧ್ಯವಾಗಲಿಲ್ಲ.
ಆ ಜಿಲ್ಲಾಮಟ್ಟದ ಯುವ ಜನ ಮೇಳ ಆನಂದಪುರಂನ ಪ್ರತಿಷ್ಠಿತ ಕನ್ನಡ ಸಂಘದ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು, ಆಗ ಅದರ ಅಧ್ಯಕ್ಷ ಹಾ.ಮೋ. ಭಾಷಾ ಅವರು ಪ್ರಶಸ್ತಿ ಪತ್ರಗಳನ್ನು ಸ್ಮರಣೀಯವಾಗಿ ಇರಬೇಕೆಂದು ಆಲೋಚಿಸಿ ಸಾಗರದ ಕಲಾವಿದ ಷಣ್ಮುಖಪ್ಪನವರಿಂದ ತುಂಬಾ ಚೆನ್ನಾಗಿ ಮಾಡಿಸಿದ್ದರು.
ಅದರಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕನ್ನಡ ಸಂಘದ ಅಧ್ಯಕ್ಷರು ಮತ್ತು ಸ್ಥಳಿಯ ಜಿಲ್ಲಾ ಪಂಚಾಯತ್ ಸದಸ್ಯನಾದ ನನ್ನ ಸಹಿ ಹಾಕಬೇಕಿತ್ತು.
ಸಾವಿರಾರು ಪ್ರಶಸ್ತಿ ಪತ್ರಕ್ಕೆ ಸಹಿ ಹಾಕುವುದು ದೊಡ್ಡ ಮಟ್ಟದ ಅಧಿಕಾರಿಗಳಿಗೆ ಕಷ್ಟ ಕೂಡ ಆಗ ಶಿವರಾಂ ಅವರು ತಮ್ಮ ಸಹಿ ಇರುವ ರಬ್ಬರ್ ಸ್ಟಾಂಪ್ ಬಳಸಿಕೊಳ್ಳಬಹುದು ಎಂದರು ಆದರೆ ನಾನು ಒಪ್ಪಲಿಲ್ಲ, ಕನ್ನಡದಲ್ಲಿ ಮೊದಲ ಐಎಎಸ್ ಮಾಡಿದ ವ್ಯಕ್ತಿ ನೀವು, ಚಲನಚಿತ್ರ ನಟರು ಆದ ನೀವು ಈಗ ನಮ್ಮ ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹಣಾಧಿಕಾರಿಯಾಗಿ ಬಂದಿದ್ದೀರಿ ಆದ್ದರಿಂದ ಜಿಲ್ಲಾ ಯುವಜನ ಮೇಳದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಗಳಿಗೆ ನಿಮ್ಮ ಸ್ವಂತ ಹಸ್ತಾಕ್ಷರ ಇರುವ ಪ್ರಶಸ್ತಿ ಪತ್ರ ಸಿಗಲೇ ಬೇಕು ಎಂದು ಒತ್ತಾಯಿಸಿದೆ.
ನಂತರ ಅವರಿಂದ ಸಹಿ ಹಾಕಿಸುವ ಜವಾಬ್ದಾರಿ ಗೆಳೆಯ ಅಂಬಲಿಗೋಳದ ಕಲಾವಿದ ಗೆಳೆಯ ಹನೀಪರಿಗೆ ವಹಿಸಿದೆ ಅವರು ಶಿವರಾಮದಿಂದ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬಲ್ಕೀಶ್ ಭಾನು ಅವರಿಂದ ಎಲ್ಲಾ ಪ್ರಶಸ್ತಿ ಪತ್ರಗಳಿಗೆ ಸಹಿ ಹಾಕಿಸಿ ತಂದರು.
ಜಿಲ್ಲಾ ಮಟ್ಟದ ಯುವಜನ ಮೇಳಕ್ಕೆ ತೀರ್ಪುಗಾರರಾಗಿ ಹೊಸ ಸಮರ್ಥ ಮುಖಗಳನ್ನು ಪರಿಚಯಿಸಲು ನಾನು ಮುಂದಾದೆ ಆಗಿನ ಯುವ ಮುಂದಾಳುಗಳಾಗಿದ್ದ ಈಸೂರು ಲೋಕೇಶ್, ಹೊನ್ನಾಳಿ ಚಂದ್ರು, ಸುನಿಲ್ ಶಿರನೆಲ್ಲಿ, ತ.ಮ. ನರಸಿಂಹ, ಕಣ್ಣೂರಿನ ಡೊಳ್ಳಿನ ಕಲಾವಿದ ಘಟ್ಟದ ಮಂಜಪ್ಪ, ಸಾಗರದ ಹೆಚ್.ಬಿ.ರಾಘವೇಂದ್ರ ಮುಂತಾದ ಗೆಳೆಯರನ್ನು ನೇಮಿಸಿದೆ ಆದರೆ ಜಡ್ಡು ಕಟ್ಟಿದ ಯುವಜನ ಇಲಾಖೆ ಪಟ್ಟಭದ್ರ ಹಿತಾಸಕ್ತಿಯ ಮತ್ತು ಪಕ್ಷಪಾತದ ತೀರ್ಪು ನೀಡುವ ಹಳೆಯ ತೀರ್ಪುಗಾರರಿಗೇ ಅವಕಾಶ ನೀಡಬೇಕೆಂದು ಗುಲ್ಲೆಬ್ಬಿಸಿದರು ಮತ್ತು ನಾನು ಆಯ್ಕೆ ಮಾಡಿದ ತೀರ್ಪುಗಾರರನ್ನು ಬದಲಿಸಬೇಕೆಂದು ಒತ್ತಡ ತಂದರು.
ಇದನ್ನು ಕೆ ಶಿವರಾಂ ಅವರ ಗಮನಕ್ಕೆ ತರಲಾಯಿತು ಅವರು ಅಧಿಕಾರಿಗಳ ಮಾತಿಗೆ ಮಣೆ ಹಾಕದೆ ನನ್ನ ಆಯ್ಕೆಯ ಜಿಲ್ಲೆಯ ಯುವ ಮುಂದಾಳುಗಳ ತೀರ್ಪುಗಾರರನ್ನು ಮುಂದುವರಿಸಲು ನನಗೆ ಅವಕಾಶ ನೀಡಿದರು.
ಹೀಗೆ ಜಿಲ್ಲೆಗೆ ಬಂದ ಐಎಎಸ್ ಶಿವರಾಂ ನನಗೆ ಆಪ್ತರಾದರು.
Comments
Post a Comment