Blog number 1987. ಪ್ರತಿ ಶಿವರಾತ್ರಿ ದಿನ ನನಗೆ ಸ್ಮರಣೀಯ ದಿನವಾಗಿದೆ ಐದು ವರ್ಷದ ಹಿಂದೆ ಶಿವರಾತ್ರಿ ದಿನದಿಂದ ರಾತ್ರಿ ಊಟ ತ್ಯಜಿಸಿ ಇವತ್ತಿಗೆ ಐದು ವರ್ಷ ಆಯಿತು.
#ಪ್ರತಿ_ಶಿವರಾತ್ರಿ_ನನಗೆ_ಸ್ಮರಣೀಯ_ದಿನ
#ಐದು_ವರ್ಷದ_ಹಿಂದೆ_ಶಿವರಾತ್ರಿ_ದಿನದಿಂದಲೇ
#ನಾನು_ರಾತ್ರಿ_ಊಟ_ತ್ಯಜಿಸಿದ್ದು
#ನಮ್ಮಲ್ಲಿರುವುದ_ಬಿಟ್ಟು_ಬೇರೆಲ್ಲೋ_ಹುಡುಕುವ_ಸಹಜ_ಬುದ್ಧಿ_ಬದಲಿಸಿಕೊಂಡು
#ಪ್ರಕೃತಿಯ_ಜೊತೆ_ಮನೆಯಲ್ಲೇ_ಖರ್ಚಿಲ್ಲದೆ_ಸ್ಥೂಲಕಾಯ_ನಿವಾರಣೆಗೆ
#ದೃಡ_ನಿರ್ಧಾರ_ತೆಗೆದು_ಕೊಂಡ_ವಿಶೇಷ_ದಿನ
2019 ಫೆಬ್ರುವರಿ 23ಕ್ಕೆ ಅಂದರೆ ಐದು ವರ್ಷದ ಹಿಂದೆ ಶಿವರಾತ್ರಿ ದಿನ ಅವತ್ತೇ ತೀಮಾ೯ನ ಮಾಡಿದ್ದೆ ಮುಂದಿನ ವರ್ಷದ ಶಿವರಾತ್ರಿ ತನಕ ರಾತ್ರಿ ಊಟ ಬಿಡುವುದಂತ ಅವತ್ತು ನನ್ನ ತೂಕ ಬರೋಬ್ಬರಿ 140 ಮತ್ತು ಆಗಾಗ್ಗೆ 145 ಕ್ಕೂ ಜಂಪ್ ಮಾಡುತ್ತಾ 150 ದಾಟುವ ಹಂತ...
ನಮ್ಮ ತಂದೆ ಕೂಡ ರಾತ್ರಿ ಊಟ ಮಾಡುತ್ತಿರಲಿಲ್ಲ ಮಲಗುವಾಗ ಒಂದು ಲೋಟ ರಾಗಿ ಅಂಬಲಿ ಮತ್ತು ಹಾಲು ಮಾತ್ರ ಅವರ ದೈನಂದಿನ ಆಹಾರ ಪದ್ಧತಿ ಆಗಿತ್ತು.
ಇದರ ಹಿಂದಿನ ವರ್ಷ 2018 ಜನವರಿಯಲ್ಲಿ ಶಿವಮೊಗ್ಗದ ಡಾಕ್ಟರ್ ಪ್ರೀತಂ (ನಮ್ಮ ಕುಟುಂಬ ವೈದ್ಯರು) ತಪಾಸಣೆಗೆ ಹೋದಾಗ ಡಯಾಬಿಟೀಸ್ ಖಾಲಿ ಹೊಟ್ಟೆಯಲ್ಲಿ 240 ಊಟದ ನಂತರ 300 ರ ಸಮೀಪ ಇರುತ್ತಿತ್ತು, ಹೊಟ್ಟೆ ಗುಡಾಣ ಆಗಿತ್ತು ಅದರ ಮಧ್ಯೆ ಹೊಕ್ಕುಳ ಹತ್ತಿರ ಹನಿ೯ಯಾ ಬೇರೆ.
ಹತ್ತಿಪ್ಪತ್ತು ಹೆಜ್ಜೆ ನಡೆಯಲು ಆಯಾಸ,ಇದು ನನ್ನ ದೇಹದ ಒಳಗಿನ ಬಯಾಲಾಜಿಕಲ್ ಕ್ಲಾಕ್ ಅಲಾರಂ ಮಾಡುತ್ತಿತ್ತು "#ನಿನ್ನ_ಆರೋಗ್ಯ_ಹದಗೆಟ್ಟಿದೆ_ಎಚ್ಚರ " ಅಂತ.
1995 ರ ತನಕ ನನ್ನ 35 ವರ್ಷದ ತನಕ ನನಗೆ ತೂಕದ ಸಮಸ್ಯೆ ಇರಲಿಲ್ಲ ನಂತರವೇ ಪ್ರಾರಂಭ ಆದ ತೂಕದ ಏರುಗತಿ 2001ರಲ್ಲಿ 120 ದಾಟಿ ಅಲ್ಲೇ ನಿಂತಿದ್ದು 2015ಕ್ಕೆ ಪುನಃ ತನ್ನ ಏರುಗತಿ ಪ್ರಾರಂಬಿಸಿತ್ತು.
ಪ್ರತಿ 3 ತಿಂಗಳಿಗೆ ತೊಡುವ ಬಟ್ಟೆ ಅಳತೆ ಬದಲಾಗಿ ಹೊಸ ಬಟ್ಟೆ ಬೇಕಾಗಿತ್ತು, ಬೇರಿಯಾಟ್ರಿಕ್ ಸಜ೯ರಿ ಮಾಡಿಸಿಕೊಳ್ಳುವ ಮನಸ್ಸೂ ಮಾಡಿದ್ದೆ ನಮ್ಮಲ್ಲಿಗೆ ಬೇಟಿ ನೀಡಿದ್ದ, ಬೇರಿಯಾಟ್ರಿಕ್ ಸರ್ಜರಿ ಮಾಡಿಸಿಕೊಂಡಿದ್ದ ರವಿ ಬೆಳಗೆರೆ, ಚಿತ್ರ ನಟ ದೊಡ್ಡಣ್ಣ ತಮ್ಮ ಬೇರಿಯಾಟ್ರಿಕ್ ಸಜ೯ರಿ ಯಶಸ್ಸಾಗಿದೆ ಅನ್ನುತ್ತಿದ್ದರು ಬೇರೆ.
ಎಲ್ಲಾ ರೀತಿಯ ಡಯಟ್, ಕ್ರಾಶ್ ಡಯಾಟ್- ಅಮೆರಿಕನ್ ಡಯಟ್ ಹೀಗೆ ಸಾಲು ಸಾಲು ತೂಕ ಇಳಿಸಿಕೊಳ್ಳುವ ಪ್ರಯತ್ನ ಸ್ವಲ್ಪವೂ ಫಲ ನೀಡಲೇ ಇಲ್ಲ.
ರಾತ್ರಿ ಚಪಾತಿ ತಿನ್ನುವುದು, ಬೆಳಿಗ್ಗೆ ಬಿಸಿ ನೀರಲ್ಲಿ ನಿಂಬೆರಸ ಜೇನು ತುಪ್ಪ, ಸಿರಿ ಧಾನ್ಯ ಇಂತಹ ಎಲ್ಲಾ ಪ್ರಯತ್ನವೂ ನನ್ನ ದೇಹದ ತೂಕ ನಿಯಂತ್ರಿಸಲು ಸಾಧ್ಯವೇ ಆಗಲಿಲ್ಲ.
2006 ರಿಂದ ತಪ್ಪದೇ ಸಿದ್ದ ಸಮಾದಿ ಯೋಗ ಸಂಸ್ಥೆಯ ಯೋಗಾಸನ, ಪ್ರಾಣಯಾಮ ಮತ್ತು ಧ್ಯಾನ ಇವತ್ತಿನ ದಿನದ ತನಕವೂ ತಪ್ಪಿಸಿಲ್ಲ ಆದರೆ ಅದು ತೂಕದ ಸುದ್ದಿಗೆ ಹೋಗಲಿಲ್ಲ.
ನನ್ನ ದೇಹ ನನ್ನ ಎಲ್ಲಾ ತೂಕ ಇಳಿಸುವ ಪ್ರಯತ್ನಕ್ಕೆ ಸೆಡ್ಡು ಹೊಡೆದು ಮುಖ ತಿರುಗಿಸಿತ್ತು.
ಹನಿ೯ಯಾಗೆ ಶಸ್ತ್ರಚಿಕಿತ್ಸೆ ಅನಿವಾಯ೯ ಅನ್ನುವ ಸಂದರ್ಭದಲ್ಲೇ 2019ರ ಶಿವರಾತ್ರಿ ದಿನ ತೆಗೆದುಕೊಂಡ ತೀಮಾ೯ನ ಒಂದು ವರ್ಷದಲ್ಲಿ ಸುಮಾರು 20 ಕೇಜಿ ತೂಕ ಇಳಿಸಿತು, ಹರ್ನಿಯಾ ನಾಪತ್ತೆ ಆಯಿತು, ಡಯಾಬಿಟಿಸ್ ಖಾಲಿ ಹೊಟ್ಟೆಯಲ್ಲಿ ನೂರರ ಒಳಗೆ ಊಟದ ನಂತರ 130 ದಾಟಲಿಲ್ಲ, ಪ್ರತಿದಿನ ಆಯಾಸ ಇಲ್ಲದೇ 2 ಗಂಟೆ ಸತತ ನಡೆಯುವ ಶಕ್ತಿಗಳೆಲ್ಲ ದೇಹ ಪಡೆದಿದೆ.
ಮದ್ಯಾಹ್ನದ ಊಟ ಯಾವುದೂ ಬಿಡಲಿಲ್ಲ, ಹಾಲು- ತುಪ್ಪ -ಬೆಣ್ಣೆ ಬೇಕಾದಷ್ಟು ತಿನ್ನುತ್ತೇನೆ ಇದೆಲ್ಲ ಏಕೆ ಹೇಳುತ್ತೇನೆಂದರೆ ಡಯಟ್ ತಜ್ಞರು ಇದನ್ನೆಲ್ಲ ಬಳಸಬಾರದೆಂದು ಹೇಳುತ್ತಾರೆ.
ಸ್ವತಃ ಪ್ರಯೋಗ ಮಾಡಿ ನೋಡದ ಎಲ್ಲಾ ಪುಸ್ತಕದ ಬದನೆಕಾಯಿಯಂತ ಪ್ರಕೃತಿಗೆ ವಿರುದ್ದವಾದ ಡಯಟ್ ಪಾಲನೆ ಕಷ್ಟಸಾಧ್ಯ, ಪ್ರಾರಂಭದಲ್ಲಿ ಇರುವ ಉತ್ಸಾಹ ನಂತರ ನಾಲಿಗೆ ನಮ್ಮ ಮಾತು ಕೇಳುವುದಿಲ್ಲ ಇದರಿಂದ ಉತ್ಸಾಹ ಕಳೆದುಕೊಂಡವರ,ಬೋನಸ್ ತೂಕ ಪಡೆದವರ ನೂರಾರು ಕಥೆ ನನ್ನ ಸುತ್ತಲಿನವರದ್ದು.
2019ರಲ್ಲಿ ನನ್ನ ಪೋಟೋ ನೋಡಿ ನನ್ನ ಮುಖ ಹಿತ್ತಾಳೆ ಚೆಂಬಿನಂತೆ ಅಗಲ ಆಗುತ್ತಿತ್ತು ಇವತ್ತು ಕೊಬ್ಬು ಕರಗಿ ಬದಲಾಗಿರುವುದು ನೋಡಬಹುದು.
ಈ ರೀತಿ ವರ್ಷದಿಂದ ವರ್ಷದ ಶಿವರಾತ್ರಿಗೂ ನನ್ನ ಈ ಡಯಟ್ ಮುಂದುವರಿದಿದೆ ಈ ವರ್ಷ ಇವತ್ತಿಗೆ ಐದು ವರ್ಷ ತುಂಬಿದೆ ನನಗೆ ರಾತ್ರಿ ಊಟ ಜೀವಮಾನ ಪೂರ್ತಿ ಬೇಕಾಗಿಲ್ಲ ಅದು ಅಬ್ಯಾಸ ಆಗಿದೆ.
ನಮ್ಮಲ್ಲಿರುವುದ ಮರೆತು ಬೇರೆಲ್ಲೊ ಹುಡುಕುವ ನಮ್ಮ ಸಹಜ ಬುದ್ದಿ ಬದಲಾಯಿಸಿ ಕೊಂಡು ಪ್ರಕೃತಿಯ ಜೊತೆಗೆ ಮನೆಯಲ್ಲೇ ಯಾವುದೇ ಖಚಿ೯ಲ್ಲದೆ ಸ್ಥೂಲಕಾಯ ನಿವಾರಿಸಿಕೊಳ್ಳುವ ಸುಲಭ ಮಾರ್ಗಗಳಿದೆ.
ಆದರೆ ನಿಮ್ಮ ಪ್ರಯತ್ನಕ್ಕೆ ಕನಿಷ್ಟ ಒಂದು ವರ್ಷದ ಕಾಲಾವಕಾಶ ಇಟ್ಟುಕೊಳ್ಳಬೇಕು, ಎರಡೇ ದಿನದಲ್ಲಿ ತೂಕ ಪರೀಕ್ಷಿಸಿಕೊಂಡರೆ ಹತಾಷೆ ಗ್ಯಾರಂಟಿ.
ನಾನು ಪ್ರಾರಂಭದ ಆರು ತಿಂಗಳು ತೂಕ ಪರೀಕ್ಷೆ ಮಾಡಲೇ ಇಲ್ಲ ಇವತ್ತಿನ ತೂಕ 108 kg, ನನಗೆ ಶೀಘ್ರ ತೂಕ ನಿವಾರಣೆ ಇಷ್ಟವೂ ಇಲ್ಲ ಸುಮಾರು 40 ಕಿಲೋ ತೂಕದ ಚೀಲ ತಲೆ ಮೇಲಿಂದ ನಿವಾರಿಸಿಕೊಂಡ ನಿರಾಳತೆ ಹೊಸ ಜೀವನದ ಜೀವನೋತ್ಸವ ಲವಲವಿಕೆ ಹೆಚ್ಚಾಗಿರುವುದೇ ಸಮಾದಾನ.
ಹಾಗಾಗಿ ಪ್ರತಿ ವರ್ಷದ ಶಿವರಾತ್ರಿ ನನಗೆ ನನ್ನ ಜೀವನದ ಆರೋಗ್ಯ ಬಾಗ್ಯದ ದೃಡ ನಿರ್ಧಾರದ ತಿರುವು ತೆಗೆದು ಕೊಂಡ ದಿನವಾದ್ದರಿಂದ ಶಿವರಾತ್ರಿ ವಿಶೇಷ ದಿನವಾಗಿದೆ.
Comments
Post a Comment