#ನಮ್ಮ_ಊರಿನ_ಸಜ್ಜನ_ಉಪಕಾರಿ_ಸಾಹುಕಾರರಾದ_ಯಾಹ್ಯಾ_ಸಾಹೇಬ್.
#ಅರವತ್ತರ_ದಶಕದಲ್ಲಿ_ಇಡೀ_ಆನಂದಪುರಂ_ಹೋಬಳಿಗೆ_ದೊಡ್ಡ_ವರ್ತಕರು
#ಆ_ಕಾಲದ_ಕೌಬಾಯ್_ಫ್ಯಾಷನ್_ಇವರದ್ದು
#ಆ_ಕಾಲದ_ಹಿಂದಿ_ನಟ_ರಾಜೇಶ್_ಖನ್ನಾ_ರೀತಿ
#ಕುದುರೆ_ಸವಾರಿ_ಶಿಕಾರಿ_ಜೀಪ್_ಬೈಕ್_ಸವಾರಿ_ಕೃಷಿ_ವ್ಯಾಪಾರ_ಇವರದ್ದು
#ರೈಪಲ್_ತೋಟಾ_ಬಂದೂಕು_ರಿವಾಲ್ವಾರ್_ಸಂಗ್ರಹಣೆಯ_ಶೋಕಿ_ಅವರದ್ದು
#ಇವರ_ಅಂಗಡಿಯ_ಕಡು_ನೀಲಿ_ಬಣ್ಣದ_ಸಾಲದ_ಪುಸ್ತಕ_ಸಿಕ್ಕರೆ_ಈಕಾಲದ_ಬ್ಯಾಂಕ್_ಒಡಿ_ಸಿಕ್ಕಿದಂತೆ
#ಸಾಗರ_ಶಿವಮೊಗ್ಗ_ತಾಲ್ಲೂಕು_ಅಂಚಿನ_ಕುಣೇಹೊಸೂರು_ಸಮೀಪದಲ್ಲಿ_ನೂರು_ಎಕರೆ_ಅಡಿಕೆ_ತೋಟ
#ಯಡೇಹಳ್ಳಿಯ_ಆರ್_ಆರ್_ರೈಸ್_ಮಿಲ್_ಇವರದ್ದೆ.
1970 ರಲ್ಲಿ ಅವರಿಗೆ 50 ವಷ೯ ಇರಬಹುದು ನಮಗೆಲ್ಲ 5 ವಷ೯ ಅವರ ದಿನಸಿ ಅಂಗಡಿ ಇಡೀ ಊರಿಗೆ ದೊಡ್ಡದು, ಆ ಕಾಲದಲ್ಲಿ ಹುಬ್ಬಳ್ಳಿಯಿಂದ ಇವರ ಸ್ವಂತ ಲಾರಿಗಳಲ್ಲಿ ದಿನಸಿ ತರಿಸುತ್ತಿದ್ದರು.
ಪೊಟ್ಟಣ ಕಟ್ಟಲು ಹತ್ತಾರು ಸಹಾಯಕರು. ದಿನಸಿ ಪಟ್ಟಿ ಬರೆಯಲು ನಾಕಾರು ರೈಟರು, ಹಣ ಪಡೆಯಲು ಮತ್ತಿಬ್ಬರು ಹೀಗೆ ದೊಡ್ಡ ಪ್ರಮಾಣದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಮಾಲಿಕರು ಮಿರ, ಮಿರ ಮಿಂಚುವ ಜೀಪಿನಲ್ಲಿ ಬರುತ್ತಿದ್ದರು, ನೈಲಾನ್ ಬಟ್ಟಿಯ ಬಣ್ಣದ ಶಟ್೯ ಆ ಕಾಲದ ರಾಜೇಶ್ ಖನ್ನರ ಸ್ಟೈಲ್ ನ ಟೈಟ್ ಪ್ಯಾಂಟ್, ಚೂಪು ಬೂಟು, ಸೊ೦ಟದಲ್ಲಿ ರಿವಾಲ್ವರ್, ಗಮ ಗಮ ಎನ್ನಿಸುವ ಪರಿಮಳ ಸಿಂಪಡಿಸಿಕೊಂಡು ಟಕ್ ಟಕ್ ಎನ್ನುವ ಚೂಪು ತುದಿಯ ಬೂಟಿನ ಸದ್ದಿನೊಂದಿಗೆ ಬಂದು ತಿರುಗುವ ಕುಚಿ೯ಯಲ್ಲಿ ಕುಳಿತು ಪಕ್ಕದಲ್ಲಿನ ದೊಡ್ಡ ಟ್ರಿಜರಿಯ ಬಾಗಿಲು ತೆಗೆದರೆ ಅದರಲ್ಲಿ ಕಂತೆ ಕಂತೆ ನೋಟುಗಳು.
ಅವರಿಗೆ ಶಿವಮೊಗ್ಗ ಸಾಗರ ತಾಲೂಕಿನ ಗಡಿಯಾದ ಕುಣೇಹೊಸೂರು ಸಮೀಪದ ದಟ್ಟ ಕಾಡಿನ ಮಧ್ಯದ ಬೆಟ್ಟಗಳ ಪ್ರದೇಶವಾದ ಉದನೂರು ಎಂಬಲ್ಲಿ ನೂರಾರು ಎಕರೆ ಜಮೀನು, ಅಲ್ಲಿ ಕಾಡು ಪ್ರಾಣಿ ಶಿಕಾರಿ ಮಾಡುವ ಹವ್ಯಾಸ ಅದಕ್ಕಾಗಿ ತರಹೇವಾರಿ ಬಂದೂಕುಗಳು, ತಿರುಗಾಡಲು ಅತ್ಯುತ್ತಮ ತಳಿಯ ಕುದುರೆ ಮತ್ತು ಕುದುರೆ ಗಾಡಿ, ಆ ಕಾಲದ ಕೆಂಪು ಬುಲೆಟ್ ಬೈಕ್, ಮಿಲ್ಟ್ರಿ ಜೀಪ್, ಅತ್ಯುತ್ತಮ ದರ್ಜೆಯ ಉಡುಪು, ಬೂಟು, ಕೈ ಗಡಿಯಾರ, ಪರಿಮಳ ದ್ರವ್ಯಗಳು ಅವರನ್ನು ಆ ಕಾಲದ ಯಂಗ್ ಅಂಡ್ ಎನಜ೯ಟಿಕ್ ಹೀರೋ ಮಾಡಿತ್ತು, ಹೀಗೆ ಯಾಹ್ಯಾ ಸಾಹೇಬರದ್ದು ರಾಜಾ ಠೀವಿ.
ಯಾರ ಜೊತೆಯೂ ಜಗಳವಿಲ್ಲ, ಎಲ್ಲರ ಜೊತೆ ಬೆರೆಯುತ್ತಿರಲಿಲ್ಲ ಅವರ ಸಿಬ್ಬಂದಿಗಳ ಮೂಲಕವೆ ಇವರನ್ನು ಸಂಪರ್ಕಿಸ ಬೇಕಾಗಿತ್ತು.
ಇವರ ಅಂಗಡಿಯಲ್ಲಿ ನೀಲಿ ಬಣ್ಣದ ಸಾಲದ ಪುಸ್ತಕ ಸಿಕ್ಕಿದವರ ಮನೆಯಲ್ಲಿ ಆ ಕಾಲದಲ್ಲಿ ಹಸಿವು ಇರುತ್ತಿರಲಿಲ್ಲ, ಆದರೆ ಅದು ಸುಲಭವಾಗಿ ಸಿಗುವುದಲ್ಲ ಈಗೆಲ್ಲ ಬ್ಯಾಂಕಿನಲ್ಲಿ OD ಸಿಕ್ಕ೦ತೆ, ಆಗ ಬಡತನ ಹೆಚ್ಚು ಒಂದು ಹೊತ್ತು ಇದ್ದರೆ ಇನ್ನೊಂದು ಹೊತ್ತು ಇಲ್ಲ.
ನಮ್ಮ ತಂದೆ ಇವರ ಅಂಗಡೀಯಲ್ಲಿ ಸಾಲದ ಖಾತೆ ಹೊಂದಿದ್ದರು ಹಾಗಾಗಿ ನಮ್ಮ ಮನೇಲೂ ಒಂದು ನೀಲಿ ಬಣ್ಣದ ಸಾಲದ ಪುಸ್ತಕ ಇತ್ತು ಅದನ್ನ ತೆಗೆದುಕೊಂಡು ದಿನಸಿ ತರಲು ನಮ್ಮ ಅಣ್ಣನೊಂದಿಗೆ ಇವರ ಅಂಗಡಿಗೆ ಹೋಗುತ್ತಿದ್ದೆ ಆಗೆಲ್ಲ ಯಾಹ್ಯಾ ಸಾಹೇಬರನ್ನೆ ಅಚ್ಚರಿಯಿ೦ದ ನೋಡುವುದೇ ನಮಗೆಲ್ಲ ಸಂಭ್ರಮ ಆಗಿತ್ತು.
ಅಬ್ಬುಲ್ ಯಾಹ್ಯಾ ಸಾಹೇಬರು ಇಹ ಲೋಕ ತ್ಯಜಿಸಿ ಏಳು ವರ್ಷಗಳಾಯಿತು (13 - ಡಿಸೆಂಬರ್ -2016) ಇವರ ಮೊದಲ ಪುತ್ರ ಅಬೀಬುಲ್ಲಾ ಸಾಹೇಬರೂ ಈಗಿಲ್ಲ, ಎರಡನೆ ಪುತ್ರ ರಹಮತುಲ್ಲಾ ಮತ್ತು ಕೊನೆಯ ಪುತ್ರರು ರೈಸ್ ಮಿಲ್ ಮತ್ತು ತೋಟ ನೋಡಿಕೊಳ್ಳುತ್ತಿದ್ದಾರೆ.
Comments
Post a Comment