Skip to main content

Blog number 1854. ಕಾಡು ಹಂದಿ ವಿಧಾನ ಸಭಾ ಅಧಿವೇಶನದಲ್ಲಿ ಚರ್ಚೆಗೆ ಬಂದಿತು.

#ಪಸಲು_ರಕ್ಷಣೆಗೆ_ಕಾಡು_ಹಂದಿ_ಶಿಕಾರಿಗೆ_ಅವಕಾಶವಿದೆ

#ಆದರೆ_ಕೊಂದ_ಹಾಡುಹಂದಿ_ತಿಂದರೆ_ಅಪರಾದ 

#ಕೊಂದ_24ಗಂಟೆ_ಒಳಗೆ_ಅರಣ್ಯಾಧಿಕಾರಿ_ಗಮನಕ್ಕೆ_ತರಬೇಕು.

#ಅರಣ್ಯ_ಇಲಾಖೆ_ಕಾನೂನು_ರೀತ್ಯಾ_ಸತ್ತ_ಹಂದಿ_ದಪನ_ಮಾಡಬೇಕು.

#ಯೂನಿಯನ್_ಪಾರ್_ಕನ್ಸವೇ೯ಶನ್_ಆಫ್_ನೇಚರ್_ರೆಡ್_ಲೀಸ್ಟಲ್ಲಿ_ಹಂದಿ_ಸೇರಿದೆ.

#ನಮ್ಮ_ಜಿಲ್ಲೆಯ_ಶಾಸಕರಾದ_ಆರಗ_ಜ್ಞಾನೇಂದ್ರ_ಶಿಕಾರಿ_ಮಾಡಿದ
#ಕಾಡು_ಹಂದಿ_ಮಾಂಸ_ತಿನ್ನಲು_ಬೆಳಗಾಂ_ಅಧಿವೇಶನದಲ್ಲಿ_ಪ್ರಸ್ತಾಪಿಸಿದ್ದಾರೆ.
     ಇದು ಅಸಲಿಯತ್ತು ಗೊತ್ತಿಲ್ಲದವರಿಗೆ ಇದೊಂದು ಕ್ಷುಲ್ಲಕ ವಿಚಾರವೇ ಆಗಿದೆ ಆದರೆ ಮಲೆನಾಡಿನ ಕೃಷಿಕರಿಗೆ ಕಾಡು ಹಂದಿ ವನ್ಯ ಜೀವಿ ಸಂರಕ್ಷಣೆ ವ್ಯಾಪ್ತಿಗೆ ತಂದಿರುವ ಕಾರಣದಿಂದ ಆಗಿರುವ ಸಮಸ್ಯೆ ದೊಡ್ಡದಾಗಿದೆ.
   ಸುಗ್ಗಿ ಕಾಲದಲ್ಲಿ ಮುಸ್ಸಂಜೆಯಿಂದ ರಾತ್ರಿ ಎಲ್ಲಾ ಗುಂಪಾಗಿ ಬಂದು ರೈತರ ಕೈಗೆ ಬರಲಿರುವ ಫಸಲು ಬೋಳಿಸುವ ಕಾಡು ಹಂದಿ ಉಪಟಳ ದೊಡ್ಡ ಸಮಸ್ಯೆ.
   ಈ ರೀತಿ ಕಾಡು ಹಂದಿ ಉಪಟಳ ನಿವಾರಣೆಗೆ ತಲೆ ಮಾರುಗಳಿಂದ ಫಸಲು ರಕ್ಷಣೆಗೆ ಬಂದೂಕು ಪರವಾನಿಗೆ ಇದ್ದರೂ ರೈತ ಕಾಡು ಹಂದಿ ಕೊಲ್ಲುವಂತಿಲ್ಲ ಎಂಬ ಕಾನೂನು ರೈತನ ಬೆಳೆ ಸಂರಕ್ಷಣೆಗೆ ತಡೆ ಮಾಡಿದ್ದು 2017ರಲ್ಲಿ ರಾಜ್ಯ ಸರ್ಕಾರ ವಿಶೇಷ ಸಂದರ್ಭದಲ್ಲಿ ಕಾಡು ಹಂದಿ ಶಿಕಾರಿಗೆ ಅನುಮತಿ ನೀಡಿದೆ ಆದರೆ ಕೊಂದ ಕಾಡು ಹಂದಿ ತಿನ್ನುವಂತಿಲ್ಲ ಅದನ್ನು ಕೊಂದ 24 ಗಂಟೆ ಒಳಗೆ ಅವರ ವ್ಯಾಪ್ತಿಯ ಅರಣ್ಯಾಧಿಕಾರಿಗೆ ಮಾಹಿತಿ ನೀಡಬೇಕು, ಸ್ಥಳ ಪರಿಶೀಲನೆ ಮಾಡಿ ಕಾನೂನು ರೀತ್ಯಾ ಕೊಂದಿರುವ ಕಾಡು ಹಂದಿ ಧಪನ ಮಾಡಬೇಕು.
  ಕಾಡು ಹಂದಿ ಮಾಂಸ ಪ್ರಿಯರಿಗೆ ಇದು ಅಪ್ರಿಯವಾದದ್ದೇ ಗುಟ್ಟಾಗಿ ಶಿಕಾರಿ ಮಾಡಿದವರನ್ನು ಹಳ್ಳಿಯ ಅವರ ಹಿತ ಶತೃಗಳು ಅರಣ್ಯಾಧಿಕಾರಿಗಳಿಗೆ ತಿಳಿಸಿ ಜೈಲಿಗೆ ಕಳಿಸುತ್ತಿದ್ದಾರೆ.
  ಪೋಲಿಸರು ಅರಣ್ಯಾಧಿಕಾರಿಗಳೂ ರೈತರ ಮಕ್ಕಳೇ ಅವರಿಗೆ ಕಾಡು ಹಂದಿ ಉಪಟಳವೂ ಗೊತ್ತು ಆದರೆ ಅವರು ಅಸಹಾಯಕರು.
  ಕಾಡು ಹಂದಿ ಅಮೇರಿಕಾದಲ್ಲಿ 2.5 ಶತ ಕೋಟಿ ಡಾಲರ್ ನಷ್ಟ ಮಾಡುತ್ತದೆ ಎಂಬ ಸಮೀಕ್ಷೆ ವರದಿ ತಿಳಿಸಿದೆ ಆದರೆ ಭಾರತದಲ್ಲಿ ನಿಖರವಾದ ಸಮೀಕ್ಷೆ ಇಲ್ಲ.
   IUCN (ಇಂಡಿಯನ್ ಯೂನಿಯನ್ ಪಾರ್ ಕನ್ಸರ್ವೇಶನ್ ಆಫ್ ನೇಚರ್) ಸಂಸ್ಥೆ ಕಾಡು ಹಂದಿ ರೆಡ್ ಲಿಸ್ಟ್ ಗೆ ಸೇರಿಸಿದೆ,ವಿಶ್ವದಾದ್ಯಂತ ಕಾಡು ಹಂದಿ ಎಲ್ಲಾ ಹವಾಮಾನದಲ್ಲಿ ವಾರ್ಷಿಕವಾಗಿ ಎರೆಡು ಸಾರಿ 12 ಮರಿಗಳನ್ನು ಹಾಕುತ್ತಾ ಗರಿಷ್ಟ ಎತ್ತರ 3 ಅಡಿಗೆ ತಲುಪಿ ಗರಿಷ್ಟ 136 ಕಿಲೋ ತೂಗುತ್ತಾ 10 ರಿಂದ 12 ವರ್ಷ ಕಾಲ ರೈತರ ಫಸಲು ತಿನ್ನುತ್ತಾ ನಷ್ಟ ಮಾಡುತ್ತದೆ, ಬೇರೆ ರಾಷ್ಟ್ರಗಳಲ್ಲಿ ಕಾಡು ಹಂದಿ ಶಿಕಾರಿಗೆ ಮತ್ತು ಕಾಡು ಹಂದಿ ಮಾಂಸ ತಿನ್ನಲು ಬಳಸಲು ನಿಷೇದವಿಲ್ಲ.
  ಆರಗ ಜ್ಞಾನೇಂದ್ರರು ಬೆಳಗಾವಿಯಲ್ಲಿನ ವಿಧಾನ ಸೌಧದ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾವನೆ ಮಾಡಿದ್ದು ಸರಿ ಇದೆ ರಾಜ್ಯ ಸರ್ಕಾರ ಈ ಬಗ್ಗೆ ಸಕಾರಾತ್ಮಕ ನಿರ್ದಾರ ಕೈಗೊಳ್ಳ ಬೇಕು ಇದಕ್ಕೆ ಪಶ್ಚಿಮ ಘಟ್ಟ ಪ್ರದೇಶದ ಶಾಸಕರುಗಳು ಬೆಂಬಲಿಸ ಬೇಕು.
   #ಕಾಡು_ಹಂದಿಯ_ನನ್ನ_ಅನುಭವದ_ಹಳೆಯ_ಲೇಖನ_ಇನ್ನೊಮ್ಮೆ_ಇಲ್ಲಿದೆ.

#ನಮ್ಮ_ಊರ_ಶಿಕಾರಿಗಾರರು_ಮತ್ತು_ಅವರ_ಕಥೆ.

 
  80 ವರ್ಷದ ಹಿಂದೆ ನರಭಕ್ಷಕ ಹುಲಿಗಳಿದ್ದ ಪ್ರದೇಶ ನಮ್ಮ ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ಆನಂದಪುರಂ ಎಂಬುದಕ್ಕೆ ಸಾಕ್ಷಿಯಾಗಿ ಪ್ರಸಿದ್ಧ ಬೇಟೆಗಾರ ಕೆನತ್ ಆಂಡರ್ಸನ್ ಬರೆದ #ಬೆಳಂದೂರು_ನರಭಕ್ಷಕ ಪುಸ್ತಕ, ಇದನ್ನು ತೇಜಸ್ವಿಯವರು ಅನುವಾದಿಸಿ ಪ್ರಕಟಿಸಿದ್ದಾರೆ.
  ನಮ್ಮ ಬಾಲ್ಯದಲ್ಲಿ ಹುಲಿ ಶಿಕಾರಿ ಮಾಡಿಸಿ ಅದರ ಮಾಂಸವನ್ನು ಬೇಯಿಸಿ ತಿಂದು ಮೀಸೆ ತಿರುವಿದ ಆ ಕಾಲದ ನಮ್ಮ ಊರಿನ ಡೇರ್ ಡೆವಿಲ್ ನಲ್ಲಪ್ಪನವರ ಹೆಸರು ಚಿರಸ್ಥಾಯಿ ಆಗಿತ್ತು ಇದರಿಂದ ಆ ಕಾಲದಲ್ಲಿ ಹುಲಿ ಮಾಂಸ ಕಹಿ ಅನ್ನುವ ನಂಬಿಕೆ  ಹುಸಿ ಆದ ಘಟನೆ ಇದು.
  ಪಸಲು ರಕ್ಷಣೆಗೆ ಮಸಿ ಬಂದೂಕಿಗೆ ಜಮೀನು ಮಾಲಿಕತ್ವ ಹೊಂದಿದವರಿಗೆ ಮಾತ್ರ ಬಂದೂಕು ಲೈಸೆನ್ಸ್ ಇರುತ್ತಿತ್ತು, ಆಗ ಜಮೀನು ತೋಟಗಳಿದ್ದರು ಜಮೀನು ಹಕ್ಕು ಪತ್ರ ಇಲ್ಲದವರು ತಲತಲಾಂತರದಿಂದ ಗೇಣಿ ಮಾಡುತ್ತಿದ್ದ ರೈತರು ಮಾತ್ರ ಲೈಸೆನ್ಸ್ ಇಲ್ಲದ ಮಸಿ ಬಂದೂಕು ಪಸಲು ರಕ್ಷಣೆಗೆ ಹೊಂದಿರುತ್ತಿದ್ದರು.
  ಆಗ ಆನಂದಪುರಂ ಇಡೀ ಹೋಬಳಿಗೆ ಬಂದೂಕು ಮಸಿ ತಯಾರಿಸಿ ಮಾರುವ ಏಕೈಕ ಬಾರೂದ್ ( ಬಂದೂಕು ಮಸಿ - ಗುಂಡು ಮಾರುವವರಿಗೆ ಈ ಹೆಸರು ಆ ಕಾಲದಲ್ಲಿ) ಮನೆ ಆನಂದಪುರಂ ದೊಡ್ಡಿ ಪಕ್ಕದಲ್ಲಿದ್ದ ಹೊನ್ನಾವರದಿಂದ ವಲಸೆ ಬಂದ ಹಸನಾರ್ ಸಾಬರ ಕುಟುಂಬ.
     ಹಾಳಾದ ಮಸಿ ಬಂದೂಕು ದುರಸ್ತಿ ಮತ್ತು ಹೊಸ ಮಸಿ ಬಂದೂಕು ತಯಾರಿಸುವ ಹೊಸ ನಗರ ತಾಲ್ಲೂಕಿನ ಆಚಾರ್ ಒಬ್ಬರು ಅವರನ್ನು ಬಿಟ್ಟರೆ ಕೊಡೂರಿನ ಆಚಾರರು ಇದ್ದರು, ಶಿಕಾರಿಗಾರರು ಈ ಇಬ್ಬರು ಆಚಾರರನ್ನು ಹೊಗಳುವ ಭರದಲ್ಲಿ ಎರೆಡು ಗುಂಪಾಗುತ್ತಿದ್ದರು.
  ಆಗ ಶಿಕಾರಿಗಾರರಲ್ಲಿ A ಗ್ರೇಡ್ ಶಿಕಾರಿಗಾರರೆಂದರೆ ಅವರ ಸೋಬೇಟೆಯಲ್ಲಿ ಶಿಕಾರಿ ಮಾಂಸ ನೂರು ಪಾಲು ಹಾಕಬೇಕಾದಷ್ಟು ಸೋ ಮಾಡುವ ಜನ, ಶಿಕಾರಿ ನಾಯಿ ಮತ್ತು ಬಂದೂಕುಗಳು ಇರುತ್ತಿದ್ದವು, ಈ ಗುಂಪಿನ ಮುಖ್ಯಸ್ಥ ಸ್ಥಳಿಯ ಅರಣ್ಯ ರಕ್ಷಕರು ಮತ್ತು ಪೋಲಿಸರನ್ನು ಸಂಬಾಳಿಸುವ ಗಟ್ಟಿತನ ಮತ್ತು ಬುದ್ದಿವಂತಿಕೆ ಇದ್ದವ, ಶಿಕಾರಿಗೆ ಮೊದಲೇ ಅವರಿಗೆ ತನ್ನ ಶಿಕಾರಿ ಕ್ಷೇತ್ರ ತಿಳಿಸುತ್ತಿದ್ದರಿಂದ ಅವರ ಇಲಾಖೆಯ ಮೇಲಾದಿಕಾರಿಗಳು ಅಲ್ಲಿಗೆ ಬರದಂತ ವ್ಯವಸ್ಥೆ ಆಗುತ್ತಿತ್ತು ಶಿಕಾರಿ ನಂತರ ಅವರಿಗೆ ಶಿಕಾರಿ ಮಾಂಸ ತಪ್ಪದೇ ತಲುಪಿಸುತ್ತಿದ್ದರು, ಶಿಕಾರಿ ಮಾಂಸ ತಿನ್ನದ ಮನೆಗೆ ನಾಟಿ ಹುಂಜ ಕಳಿಸಿ ಸಂತೃಪ್ತಿ ಮಾಡುವ ಶಿಕಾರಿಗಾರ ತಂಡದ ಮುಖ್ಯಸ್ಥ ಈ ಶಿಕಾರಿಯಲ್ಲಿ ಲೈಸೆನ್ಸ್ ಹೊಂದಿದ ಒ0ದರೆಡು ಬಂದೂಕು ಇರುವಂತೆ ( ಬಾಕಿದೆಲ್ಲ ಲೈಸೆನ್ಸ್ ಇಲ್ಲದ ಹಳ್ಳಿಗರ ಬಾಯಲ್ಲಿ ಕಳ್ಳ ಬಂದೂಕು ) ನೋಡಿಕೊಳ್ಳುತ್ತಿದ್ದರು ಮತ್ತು ಹಾಗಂತ ಪೋಲಿಸರಿಗೆ ಹೇಳುತ್ತಿದ್ದರು ಈ ಮೂಲಕ ತಮ್ಮ ಶಿಕಾರಿ ಕಾನೂನು ಬದ್ದ ಎಂಬಂತೆ ತೋರಿಸಿಕೊಳ್ಳುತ್ತಿದ್ದರು.
  ಇನ್ನು B ವರ್ಗದವರು ಇಂತಹ ಸಂಪರ್ಕ ಇಲ್ಲದ, ಮಾಂಸ ಮಾರಾಟ ಮಾಡುವ ಹೇಗೆಂದರೆ ಹಾಗೆ ಶಿಸ್ತಿಲ್ಲದ ಶಿಕಾರಿಗಾರರು, C ವರ್ಗದವರು ಬಲೆ, ಉರುಳು ಅಥವ  ಬಾಂಬ್ ಹಾಕಿ ಶಿಕಾರಿ ಮಾಡುವವರು.
   ಶಿಕಾರಿಗಾರರಲ್ಲಿ ಬಾಡು ಮಾಂಸಕ್ಕಾಗಿ ಒಗ್ಗಟ್ಟು ಇರುತ್ತಿತ್ತು, ನಮ್ಮ ಊರಿನ ಸಮೀಪದ ಸರಗುಂದದಲ್ಲಿ #ದಂಡಿಗೆಸರದ_ಸಣ್ಣಣ್ಣ ಎಂಬ ಸಂಬಾವಿತ ಕೃಷಿಕರು ಸೊ ಬೇಟೆಯಲ್ಲಿ ಗುಂಡಿನಿಂದ ಗಾಯಗೊಂಡ ಹಂದಿ ಇವರನ್ನು ಸೀಳಿಸಿ ಸಾಯಿಸಿದ್ದ ದುಃಖಕರ ಘಟನೆ ಆಗಿತ್ತು.
   1995ರಲ್ಲಿ ಮಾರ್ಕ್ - 4 ಡಿಸೇಲ್ ಅಂಬಾಸಡರ್ ಕಾರು ಸಾಗರದಲ್ಲಿ ಟ್ಯಾಕ್ಸಿ ಆಗಿ ವ್ಯವಹಾರ ಮಾಡಲು ಬ್ಯಾಂಕಿನಲ್ಲಿ ಸಾಲ ಮಾಡಿ ಬೆಂಗಳೂರಿನ ಸೇಂಟ್ ಮಾರ್ಕ್ ರಸ್ತೆಯ ಹಿಂದೂಸ್ತಾನ ಶೋ ರೂಂ ಗೆ DD ಕೊಟ್ಟು 10 ತಿಂಗಳು ಕಾಯುವಿಕೆ ನಂತರ ದೂರದ ಕಲ್ಕತ್ತಾದಿಂದ ರಸ್ತೆಯಲ್ಲಿ ಓಡಿಸಿ ತಂದು ಪ್ರನಃ ಸರ್ವಿಸ್ ಮಾಡಿ ಬೆಂಗಳೂರಲ್ಲಿ ಡಿಲವರಿ ಕೊಟ್ಟಿದ್ದ ಕಾರು ಮನೆಗೆ ಬಂದಿತ್ತು ಇದು ಸುತ್ತಾ 16 ಹಳ್ಳಿಗೆ ಸುದ್ದಿ ಆಗಿತ್ತು, ಇನ್ನೂ ರಿಜಿಸ್ಟ್ರೇಷನ್ ಆಗಿರಲಿಲ್ಲ.
   ಒಂದು ಬೇಸಿಗೆಯ ಮಧ್ಯಾಹ್ನ ಸೈಕಲ್ ನಲ್ಲಿ ಬಂದ ಇಬ್ಬರು ಕಾರು ಬಾಡಿಗೆಗೆ ಬೇಕು ಅಂದರು, ಇಲ್ಲ ಇನ್ನೂ ರಿಜಿಸ್ಟ್ರೇಷನ್ ಆಗಿಲ್ಲ, ನನಗೆ ಡ್ರೈವಿಂಗ್ ಬರುವುದಿಲ್ಲ ಮತ್ತು ಡ್ರೈವರ್ ಯಾರೂ ಇಲ್ಲ ಅಂದೆ ಅವರು ವಾಪಾಸ್ಸು ಹೋದರು, ಪುನಃ ಇದೇ ರೀತಿ ಬೇರೆಯವರು ಬರುವುದು ಕಾರು ಕೇಳುವುದು ಏಕೆಂದರೆ ಸತ್ಯ ಹೇಳದೇ ವಾಪಾಸು ಹೋಗುವ ಜನ ನಮ್ಮ ಊರಿನ ಸಮೀಪದ ಇರುವಕ್ಕಿ ಎಂಬ ಗ್ರಾಮದ ಕುಂಬಾರರು ಅಂತ ಗೊತ್ತಾಗಿ ಅವರನ್ನು ಒತ್ತಾಯ ಮಾಡಿದ ಮೇಲೆ ಗುಟ್ಟಾಗಿ ಅವರು ಉಸಿರಿದ್ದು ಶಿಕಾರಿಗಾರರ ಮುಖಂಡ ದೊಡ್ಡ ಜಮೀನುದಾರ ಆ ಕಾಲದ SSLC ಪಾಸು ಮಾಡಿದ #ಕುಂಬಾರ_ಬಸಣ್ಣನಿಗೆ ಶಿಕಾರಿಯಲ್ಲಿ ಗುಂಡು ತಾಗಿದೆ ಅಂತ.
  ಕುಂಬಾರ ಬಸಣ್ಣ ನನ್ನ ತಂದೆಗೆ ಆಪ್ತರೂ ಆಗಿದ್ದರಿಂದ ಅವರು ಆಗ ಚಕ್ರಾ ಡ್ಯಾಂ ನಲ್ಲಿ ಕೆಪಿಸಿ ಲಾರಿ ಡ್ರೈವರ್ ಆಗಿದ್ದ ಲೋಬಣ್ಣ ರಜೆಗೆ ಮನೆಗೆ ಬಂದಿದ್ದಾರೆ ಅವರ ಮನೆಗೆ ಹೋಗಿ ಅವರಿಗೆ ನಾನು ಹೇಳಿದಿನಿ ಅಂತ ಹೇಳು ಮತ್ತು ಯಾರಿಗೂ ಗೊತ್ತಾಗದಂತೆ ಅವರಿಗೆ ಬಸಣ್ಣನನ್ನ ಆಸ್ಪತ್ರೆಗೆ ಒಯ್ಯಬೇಕು ಅಂತ ಹೇಳಿ ಕರೆತಾ ಅಂದರು, ನಾನು ಓಡಿ ಅವರ ಮನೆಗೆ ಹೋಗಿ ಮಧ್ಯಾಹ್ನ ಮಲಗಿದ್ದ ಲೋಬಣ್ಣರನ್ನು ಎಬ್ಬಿಸಿ ಸುದ್ದಿ ಕೊಟ್ಟಾಗ ಬನಿಯನ್ ಧರಿಸಿದ್ದ ಲೋಬಣ್ಣ ಹಾಗೆಯೇ  ಓಡಿ ಬಂದು ನನ್ನ ಹೊಸ ಕಾರು ಚಾಲು ಮಾಡಿದರು.
   ನಾವಿಬ್ಬರು ಅವರ ಊರಿನಿಂದ ಬಂದವರನ್ನು ಕೂರಿಸಿಕೊಂಡು ಇರುವಕ್ಕಿಯ ಬಸಣ್ಣರ ಮನೆಗೆ ಹೋದಾಗ ಅಲ್ಲಿ ಇಡೀ ಊರೇ ಶೋಕದಲ್ಲಿ ಸೇರಿತ್ತು, ಕಾರಿನ ಶಬ್ದ ಕೇಳಿ ಕೆಲವರು ಕಾಡು ಬಿದ್ದಿದ್ದರಂತೆ (ಓಡಿ ಹೋಗಿದ್ದು) ಎದೆ, ಹೊಟ್ಟೆ ಮತ್ತು ಕುತ್ತಿಗೆಗೆ ಗುಂಡು ಹೊಕ್ಕಿದ್ದ ಬಸಣ್ಣ ಮತ್ತು ಜೊತೆಗೆ ಅವರ ಪತ್ನಿಯನ್ನು ಕರೆದುಕೊಂಡು ಸಾಗರದ ಸರ್ಕಾರಿ ಆಸ್ಪತ್ರೆಯ ಎದುರಿನ ಯಳಮಳಲಿ ನರ್ಸಿಂಗ್ ಹೊಂಗೆ ಅಡ್ಮಿಟ್ ಮಾಡಿದೆವು ತಕ್ಷಣ ವೈದ್ಯರು ಪರೀಕ್ಷಿಸಿ ಮೂರು ಗುಂಡು ತೆಗೆದರು ಅದೃಷ್ಟದಿಂದ ಶ್ವಾಸ ಕೋಶ ಮತ್ತು ಲಿವರ್ ಗೆ ಗುಂಡು ತಾಗಿಲ್ಲ ಅಂದಾಗ ಎಲ್ಲರೂ ನಿರಾಳರಾದರು.
  ಕೆಲ ವರ್ಷದ ನಂತರ ಇದೇ ತಂಡ ಒಂದೆರೆಡು ಹಂದಿ ಹೊಡೆದು ಜೋಷಿನಲ್ಲಿದ್ದಾಗ ಮೂರನೇ ಹಂದಿ ಗುಂಡೇಟು ತಿಂದು ತಪ್ಪಿಸಿಕೊಂಡಾಗ ಸೋಬೇಟೆಯಲ್ಲಿದ್ದ ಯುವಕನಿಗೆ ಹಾವು ಕಚ್ಚಿತ್ತು ಬಾಡಿನ ಆಸೆಯ ತಂಡದವರು ಅವನ ಇಲಾಜಿನ ಬಗ್ಗೆ ನಿರ್ಲಕ್ಷ್ಯ ವಹಿಸಿ ಹಂದಿ ಹುಡುಕಾಟಕ್ಕೆ ಪ್ರಾಶಸ್ತ್ಯ ನೀಡಿದ್ದರು, ಹಾವು ಕಚ್ಚಿಸಿ ಕೊಂಡಾತ ಜೊತೆಗಾರನೊಬ್ಬನನ್ನ ಕರೆದು ಕೊಂಡು ನನ್ನ ಹತ್ತಿರ ಬಂದಾಗ ನಾನು ಅವನ ಇಷ್ಟದಂತೆ ವ್ಯಾನಿನಲ್ಲಿ ಗೆಣಸಿನಕುಣಿಯ ನಾಗಭೂಷಣ ಹೆಗ್ಗಡೆ ಹತ್ತಿರ ಕಳಿಸಿದ್ದೆ (ಈ ಬಾಗದಲ್ಲಿ ಅನೇಕರು ಹಾವಿನ ಕಡಿತಕ್ಕೆ ಚಿಕಿತ್ಸೆಗೆ ಇವರ ಹತ್ತಿರ ಹೋಗುತ್ತಾರೆ) ಇವತ್ತಿಗೂ ನನಗ ಆಶ್ಚಯ೯ ಇದು 3 ಇಂಚಿಗೂ ಹೆಚ್ಚಿನ ಅಂತರದ ಹೆಚ್ಚು ಆಳವಾದ ಹಾವಿನ ಹಲ್ಲಿನ ಕಡಿತ ನಾನು ನೋಡಿದ್ದು ಮೊದಲು ಮತ್ತು ಹಾವು ಕಡಿತಕ್ಕೆ ಒಳಗಾದವನೂ ಹಾವು ನೋಡಿರಲಿಲ್ಲ ಆದರೆ ಚಿಕಿತ್ಸೆಗೆ ಹೋದಾದ ಜೀವಂತ ಮರಳಲಿಲ್ಲ,ನನಗೆ ಅಸಹ್ಯ ಅನ್ನಿಸಿದ್ದು ಈ ಶಿಕಾರಿಗಾರ ಬಾಡು ತಿನ್ನುವ ದುರಾಸೆ.
  ಜೊತೆಗಾರ ಸತ್ತರೂ ಕೇರ್ ಮಾಡದೆ ಹಂದಿ ಹಸಿಗೆ ಮಾಡಿ, ನಲ್ಲೆ ಮಾಡಿ (ಮಾ೦ಸ ಸ್ಥಳದಲ್ಲಿ ಬೇಸಿ ತಿಂದು) ಮಾಂಸ ಹಂಚಿಕೊಂಡು ಮಾಂಸ ತಿಂದರಂತೆ.
  ಇನ್ನೋಂದು ಘಟನೆ ಇದೇ ಊರಿನ #ಕುಂಬಾರ_ನಾಗಪ್ಪ ಮತ್ತು ನನ್ನ ಕ್ಲಾಸ್ ಮೇಟ್ #ಕುಂಬಾರ_ತಿಮ್ಮಪ್ಪನ ಬೇಲಿ ಗಡಿ ಜಗಳ ವಿಕೋಪಕ್ಕೆ ಹೋಗಿ ಇಬ್ಬರೂ ಕಳ್ಳ ಬಂದೂಕನ್ನು ಜಳಪಿಸಿದ್ದಾರೆ ಅಂತಿಮವಾಗಿ ನಾಗಪ್ಪ ತಿಮ್ಮನ ತಲೆ ಮೇಲಿಂದ ಹೆದರಿಸಲು ಗುಂಡು ಹಾರಿಸಿದ್ದಾನೆ ಅದರ ಚರೆ ಒಂದು ತಿಮ್ಮನ ಮೂಗು ಸವರಿ ಹೋಗಿತ್ತು.
  ಇಬ್ಬರೂ ಬಂದಿದ್ದರು ನಾವೆಲ್ಲ ಸೇರಿ ಒಂದು ಪಂಚಾಯಿತಿ ಮಾಡಿದೆವು ಏನೆಂದರೆ ತಪ್ಪು ಒಪ್ಪಿಕೊಂಡ (ಪೋಲಿಸರ ಭಯದಿಂದ) ನಾಗಪ್ಪ ಪಂಚಾಯತಿದಾರರ ತೀರ್ಮಾನಕ್ಕೆ ಬದ್ದ ಎಂದಾಗ ನನ್ನ ಕ್ಲಾಸ್ ಮೇಟ್ ತಿಮ್ಮನ ಕಾಳಜಿಯಿಂದ ನಾಗಪ್ಪನಿಗೆ 15 ಸಾವಿರ ದಂಡ, ಗುಂಡು ಹೊಡೆದ ಕಳ್ಳ ಬಂದೂಕು ತಿಮ್ಮನಿಗೆ ಸಮರ್ಪಣೆ  ಮತ್ತು ತಿಮ್ಮನು ಒತ್ತುವರಿ ಮಾಡಿದ ನಾಗನ ಜಾಗ ತಿಮ್ಮನಿಗೆ ಎಂದು ಸರ್ವಾನುಮತದ ತೀರ್ಮಾನ ಆಗಿತ್ತು.
  ಆಗಷ್ಟೆ ರಾಮಕೃಷ್ಣ ಹೆಗ್ಡೆಯವರ ಆಡಳಿತ ವಿಕೇ೦ದ್ರಿಕರಣದಿಂದ ಹಳ್ಳಿಯಲ್ಲೆಲ್ಲ ಯಾವತ್ತೂ ಇರದ ರಾಜಕೀಯದ ಮೇಲಾಟ ಪ್ರಾರಂಭವಾಗಿದ್ದರಿಂದ ಅವರ ಜಾತಿಯ ಯುವ ಮುಂದಾಳು ಒಬ್ಬ ರಾಜಿ ಪಂಚಾಯಿತಿ ಮುರಿದು ತಿಮ್ಮನಿಗೆ ಆಸ್ಪತ್ರೆ ಸೇರಿಸಿ  ಪೋಲಿಸ್ ಕಂಪ್ಲೆಂಟು ನೀಡಿ ಕೇಸ್ ಮಾಡಿದ್ದ.
  ಎಷ್ಟೋ ದಿನದ ನಂತರ ಬಂದ ತಿಮ್ಮ ನೀವೆಲ್ಲ ಮಾಡಿದ ಪಂಚಾಯತಿ ಚೆನ್ನಾಗಿತ್ತು ಆದರೆ ಈಗ ನೋಡಿ ನಾಗಪ್ಪ ನಿರೀಕ್ಷಣ ಜಾಮೀನು ತಂದು ಅರಾಮಿದ್ದಾನೆ, ನನಗೆ ಹಣನೂ ಸಿಗಲಿಲ್ಲ, ಅವನ ಬಂದೂಕು ಸಿಗಲಿಲ್ಲ ನಾಗ ಪೋಲಿಸರಿಗೆ ಸರಿ ಮಾಡಿ ನನ್ನ ಜಮೀನು (ಖಾತೆ ಅಲ್ಲದ ಬಗರ್ ಹುಕುಂ ) ಎರೆಡು ಎಕರೆ ಒಳ ಮಾಡಿಕೊಂಡಿದ್ದಾನೆ ಅಂತಿದ್ದ.
  ಮೊನ್ನೆ ನಾಗಪ್ಪ ಮಗನ ಮದುವೆಗೆ ಆಹ್ವಾನ ನೀಡಲು ಬಂದಾಗ ನೆನಪಾಯಿತು ಮತ್ತು ತೀರ್ಥಹಳ್ಳಿಯ ಆರಗ ಸಮೀಪದ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಂದಿ ಶಿಕಾರಿಗೆ  ಹೋಗಿ ಗುಂಡಿಗೆ ಬಲಿಯಾದ ವರದಿ #ಲಕ್ಷೀಷ್_ವಾರಪತ್ರಿಕೆಯಲಿ ಓದಿದಾಗ ನಮ್ಮ ಊರಿನ ಈ ಶಿಕಾರಿಗಾರರ ಬಗ್ಗೆ ಬರೆಯಬೇಕೆನ್ನಿಸಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...