Blog number 1851. ಕಾಗೋಡು ತಿಮ್ಮಪ್ಪರ ಬಗ್ಗೆ ನನ್ನ ಸದ್ಭಾವನೆಗಳು ಅವರು ಅವರ ಹಿಂಬಾಲಕರ ಮಾತು ಕೇಳಿ ನನ್ನ ಸಂಪೂರ್ಣ ನಿರ್ನಾಮ ಮಾಡಿದರೂ ಬದಲಾಗದ ಬಗ್ಗೆ.
#ಕಾಗೋಡು_ತಿಮ್ಮಪ್ಪನವರು_ನನ್ನನ್ನ_ವಿರೋದಿಸಿದರೂ
#ನಾನು_ಅವರನ್ನ_ಶ್ಲಾಘನೆ_ಮಾಡಲು_ಕಾರಣ_ಅವರ_ವ್ಯಕ್ತಿತ್ವ.
#ಮೂಡನಂಬಿಕೆ_ವಿರೋದಿ_ಹೊಗಳಿಕೆ_ಜನರಿಂದ_ದೂರ_ಸ್ವತಃ_ಕಾನೂನು_ತಿಳುವಳಿಕೆ_ಇವರದ್ದು
#ಅಧಿಕಾರಕ್ಕೆ_ಬರುವ_ರಾಜಕಾರಣಿಯ_ಸುತ್ತ_ಹಣ_ಪ್ರಭಾವಕ್ಕೆ_ಕೋಟೆ_ಕಟ್ಟುವ_ಶಿಷ್ಯವೃಂದ.
#ನಾಯಕರ_ಹಾದಿ_ತಪ್ಪಿಸುತ್ತಾರೆ.
#ಪ್ರಜಾಪ್ರಭುತ್ವ_ವ್ಯವಸ್ಥೆಯಲ್ಲಿ_ಇವರಂತವರು_ಇರಬೇಕು.
#ಆದರೆ_ಇವರೇ_ಕೊನೆಯವರು.
ಕಾಗೋಡು ತಿಮ್ಮಪ್ಪನವರು ಲೋಹಿಯ ಚಿಂತನೆಯಲ್ಲಿ, ಶಾಂತವೇರಿ ಗೋಪಾಲಗೌಡರ ಮೂಸೆಯಲ್ಲಿ, ಸೋಷಲಿಸ್ಟ್ ಪಾರ್ಟಿ, ಜನತಾ ಪಾರ್ಟಿಯಿ೦ದ ನಂತರ ಗುಂಡೂರಾಯರ ಪ್ರೇರಣೆಯಿಂದ ಕಾಂಗ್ರೇಸ್ ಸೇರಿ ಸಾರೆಕೊಪ್ಪದ ಬಂಗಾರಪ್ಪನವರ ವಿರುದ್ಧ ರಾಜಕಾರಣ ಮಾಡಿದವರು.
ಬಂಗಾರಪ್ಪನವರು ಇರುವಷ್ಟು ಕಾಲ ಸಾಗರ ತಾಲೂಕಿನಲ್ಲಿ ಬಂಗಾರಪ್ಪನವರ ಬಣ ಮತ್ತು ಕಾಗೋಡು ತಿಮ್ಮಪ್ಪನವರ ಬಣಗಳ ಮೇಲಾಟವಿತ್ತು.
ನಾನು ದೀರ್ಘಕಾಲ ಕಾಗೋಡು ಬಣದಲ್ಲಿದ್ದೆ ನಂತರ ಅಲ್ಲಿಂದ ನನ್ನ ಆ ಗುಂಪಿನವರೇ ದೂರ ಮಾಡಿದ್ದರಿಂದ ಬಂಗಾರಪ್ಪರ ಗುಂಪಿಗೆ ಸೇರಿದೆ.
ಇಲ್ಲಿ ಪೋಸ್ಟ್ ಮಾಡಿದ ಪೋಟೋ 19-8-1996ರಂದು ಆನಂದಪುರ೦ ಕನಕಮ್ಮಾಳ್ ಆಸ್ಪತ್ರೆಗೆ X-ರೇ ಮೆಷಿನ್ ಶಿವಮೊಗ್ಗ ಜಿಲ್ಲಾ ಪಂಚಾಯತ್ ನಿಂದ ಮಂಜೂರು ಮಾಡಿಸಿ ಉದ್ಘಾಟನೆ ಕಾಯ೯ರಂಭದ್ದು ಅವತ್ತು ಕಾಗೋಡು ಶಾಸಕರು, ಬಂಗಾರಪ್ಪನವರು ಲೋಕ ಸಭಾ ಸದಸ್ಯರು ನಾನು ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯ.
ಕಾಗೋಡು ತಿಮ್ಮಪ್ಪನವರ ವಿರುದ್ಧ 1999ರ ವಿಧಾನ ಸಭಾ ಚುನಾವಣೆಯಲ್ಲಿ ನಾನು ಪಕ್ಷೇತರನಾಗಿ ಸ್ಪದಿ೯ಸಿ ಶೇಕಡ 10 ಮತ ಪಡೆದದ್ದರಿಂದ ನನ್ನ ಮೇಲೆ 22 ಕೇಸುಗಳು, ಗೂಂಡಾ ಕಾಯ್ದೆಯಲ್ಲಿ ಅವರು ನನ್ನನ್ನ ಸಿಲುಕಿಸಿದರೂ ಅವರ ಬಗ್ಗೆ ನನ್ನ ಅಭಿಪ್ರಾಯ ಬದಲಾಗಲಿಲ್ಲ.
ನಾನು ಅವರನ್ನು ಎಲ್ಲೂ ಕೆಟ್ಟದಾಗಿ ಬಿಂಬಿಸಲಿಲ್ಲ, ಸಾರ್ವಜನಿಕ ಸಭೆಗಳಲ್ಲಿ ಕೂಡ ಅವರನ್ನು ಗೌರವಯುತವಾಗಿಯೇ ವಿರೋದಿಸಿದ್ದೇನೆ.
ಅವರಿಗೆ ಬಡವರ, ರೈತರ ಬಗ್ಗೆ ನೈಜ ಕಾಳಜಿ ಇದೆ, ಮೂಗಿಗೆ ತುಪ್ಪ ಹಚ್ಚುವ ಈಗಿನ ರಾಜಕಾರಣದಂತೆ ಅವರ ರಾಜಕಾರಣ ಇರಲಿಲ್ಲ, ನಿತ್ಯ ಎಲ್ಲಾ ಪತ್ರಿಕೆ ಸ್ವತಃ ಓದುತ್ತಾರೆ, ಹೊಗಳಿದರೆ ಉಬ್ಬುವುದಿಲ್ಲ, ಮಲೆನಾಡಿನ ರೈತರ ಸಮಸ್ಯೆ ಇವರಿಗೆ ಅರ್ಥವಾದಂತೆ ಬೇರೆಯವರಿಗೆ ಅಥ೯ವಾಗುವುದಿಲ್ಲ.
ಭ್ರಷ್ಟಾಚಾರಿ ಆಗಲಿಲ್ಲ,ಪರಿಸರ ವಿರೋದಿ ಅಲ್ಲ, ಲಂಚಕ್ಕೆ ಬೆಂಬಲ ಇಲ್ಲ, ರೈತನನ್ನ ಅವನು ಊಳುವ ಜಮೀನಿನಿಂದ ಒಕ್ಕಲೆಬ್ಬಿಸುವುದಕ್ಕೆ ಅವರ ವಿರೋದ ಯಾವತ್ತೂ ಇದೆ.
ಬಂಗಾರಪ್ಪನವರು ರಾಜ್ಯದಲ್ಲಿ ಬಗರ್ ಹುಕುಂ ಜಾರಿಗೊಳಿಸಿದಾಗ ರಾಜ್ಯದ ಮೊದಲ ಬಗರ್‌ಹುಕುಂ ಜಮೀನು ಹಕ್ಕು ಪತ್ರ ನನ್ನ ಊರಲ್ಲಿ ನೀಡಲು ಕಾಗೋಡು ತಿಮ್ಮಪ್ಪನವರು ನೀಡಿದ ಪ್ರೋತ್ಸಾಹ ನಾನು ಯಾವತ್ತೂ ಮರೆಯಲಾರೆ.
ಪರಿಶಿಷ್ಟ ಜಾತಿಯವರಿಗೆ, ಅಲೆಮಾರಿ ಕೊರಮರು, ಕುಂಬಾರರು, ಹಿಂದುಳಿದ ವರ್ಗದವರು, ಮುಸ್ಲಿಂ, ಕ್ರಿಶ್ಚಿಯನ್, ಲಿಂಗಾಯಿತರು, ಬ್ರಾಹ್ಮಣರು ಸೇರಿ ಎಲ್ಲಾ ಜಾತಿಯವರಿಗೆ ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬಗರ್ ಹುಕುಂ ಹಕ್ಕು ಪತ್ರ ಪಡೆಯುವಂತಾಯಿತು ಆಗ ಹಕ್ಕು ಪತ್ರ ಈಗಿನಷ್ಟು ಸರಳ ಪ್ರಕ್ರಿಯೆಯಲ್ಲಿ ನೀಡುವಂತಿರಲಿಲ್ಲ ಮೊದಲೆ ನಿಗದಿತ ಶುಲ್ಕ ತಾಲೂಕು ಟ್ರಿಜರಿಯಲ್ಲಿ ಪಾವತಿ ಮಾಡಬೇಕು ಮುಂತಾದ ನಿಯಮಗಳು ಇದ್ದಿತ್ತು ಆದ್ದರಿಂದ ತಾಲ್ಲೂಕಿನ ಬೇರೆ ಭಾಗದಲ್ಲಿ ಬಗರ್ ಹುಕುಂ ಸಮಿತಿಗೆ ಇದೆಲ್ಲ ಸಾಧ್ಯವಾಗಿರಲಿಲ್ಲ.
1984-85 ರಲ್ಲಿ ಬಗರ್ ಹುಕುಂ ಹಕ್ಕು ಪತ್ರಕ್ಕಾಗಿ ಸಾಗರ ತಾಲೂಕಿನ ದಲಿತ ಸಂಘರ್ಷ ಸಮಿತಿ, ರೈತ ಸಂಘರ್ಷ ಸಮಿತಿ ಮೂಲಕ 48 ದಿನ ನಿರಂತರ ಸಾಗರ AC ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದಾಗ ನಮ್ಮ ಭಾಗದ ಬಗರ್ ಹುಕುಂ ರೈತರು ನನ್ನ ನೇತೃತ್ವದಲ್ಲಿ 13 ದಿನ ಧರಣಿ ಸತ್ಯಾಗ್ರಹ ನಡೆಸಿದ್ದರು ಆದ್ದರಿಂದ ಹೇಗಾದರೂ ಮಾಡಿ ಈ ಸದಾವಕಾಶ ಬಳಸಿಕೊಂಡು ನಮ್ಮ ಗ್ರಾಮ ಪಂಚಾಯಿತಿ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ಕೊಡಿಸಲೇ ಬೇಕೆಂಬುದು ನನ್ನ ನಿರ್ದಾರ ಆಗಿತ್ತು.
ಈ ನನ್ನ ಕೆಲಸ ಅವರಿಗೆ ಖುಷಿ ತಂದಿತ್ತು ಆದ್ದರಿಂದ ಕಾಗೋಡುತಿಮ್ಮಪ್ಪ ಸಭೆ ಸಮಾರಂಭಗಳಲ್ಲಿ ನನ್ನನ್ನು ಹೊಗಳುತ್ತಿದ್ದರು ಇದು ಜನ ಸಾಮಾನ್ಯರಿಗೆ ನನ್ನ ಸಹಪಾಟಿ ಗೆಳೆಯರಿಗೆ ಹರುಷ ತರುತ್ತಿತ್ತು.
ಆದರೆ ಕಾಗೋಡು ತಿಮ್ಮಪ್ಪರ ಸುತ್ತಲಿದ್ದ ಅವರ ಅಧಿಕಾರದ ಲಾಭ ಪಡೆಯುತ್ತಿದ್ದ ಗುಂಪಿಗೆ ಕಾಗೋಡು ತಿಮ್ಮಪ್ಪರ ಈ ಪ್ರಶಂಸೆಗಳು ಇಷ್ಟವಾಗಲಿಲ್ಲ ಆದ್ದರಿಂದ ಅವರುಗಳು ನಮ್ಮಿಬ್ಬರ ಮಧ್ಯ ಕಂದಕ ತೋಡಲು ಪ್ರಾರಂಬಿಸಿದರು.
ಬಗಲಿಗಳು ಪಿಟ್ಟಿ೦ಗ್ ಇಟ್ಟು ನನ್ನ ದೂರ ಮಾಡಿದರು ಈ ಗುಂಪಿಗೆ ಕಾಗೋಡು ತಿಮ್ಮಪ್ಪರ ಸ್ವಂತ ಅಣ್ಣನ ಮಗ ಅಣ್ಣಾಜಿ ಅವರ ಬೆಂಬಲ ಮತ್ತು ಸಹಾಯವೂ ದೊರೆಯಿತು ಇದರಿಂದ ಅವರ ಬದ್ಧ ದ್ವೇಷದ ರಾಜಕಾರಣದ ಫಲಾನುಭವಿ ನಾನು ಆಗ ಬೇಕಾಯಿತು.
ಇದರಿಂದ ಪೋಲಿಸ್ ಕೇಸು, ಗೂಂಡಾ ಕಾಯ್ದೆ, 107 ಕೇಸುಗಳು, ಸುಳ್ಳು ಕೊಲೆ ಕೇಸಿಗೂ ಸೇರಿಸುವ ಪ್ರಯತ್ನಗಳು, ನಮ್ಮ ಸಂಘಟನೆ ಒಡೆಯಲಾಯಿತು, ಸಾಗರದ ನನ್ನ ಕಛೇರಿ ಪುಡಿ ಪುಡಿ ಮಾಡಿದರು, ನನಗೆ ಯಾರೂ ಬಾಡಿಗೆಗೆ ಕಛೇರಿ ನೀಡದಂತೆ ಮಾಡಲಾಯಿತು, ನನ್ನ ಸ್ವಂತ ವ್ಯವಹಾರಗಳಿಗೆ ಕಲ್ಲು ಹಾಕಲಾಯಿತು, ನನ್ನ ಅಡಿಕೆ ತೋಟ, ಗೇರು ತೋಟಗಳು ಬೆಂಕಿ ಹಾಕಿ ಸುಡಲಾಯಿತು ಇದೆಲ್ಲ ಕಾಗೋಡು ತಿಮ್ಮಪ್ಪನವರಿಗೆ ಗೊತ್ತಾಯಿತೋ ಅಥವ ಗೊತ್ತಾಗಲಿಲ್ಲವೋ ಗೊತ್ತಿಲ್ಲ.
ಒಬ್ಬ ರಾಜಕಾರಣಿ ಎಷ್ಟೇ ಪ್ರಾಮಾಣಿಕರು ಆಗಿದ್ದರೂ ಹಣ, ಅಧಿಕಾರ ಮತ್ತು ಪ್ರಭಾವಗಳಿಗಾಗಿ ಜನಪ್ರತಿನಿದಿ ಸುತ್ತ ಕೋಟೆ ಕಟ್ಟುವ ಶಿಷ್ಯ ವ್ಯಂದ,ನಾಯಕನ ಹಾದಿ ತಪ್ಪಿಸುವ ನೈಜ ಘಟನೆಗಳಿಗೆ ಕಾಗೋಡು ಉಧಾಹರಣೆ ಆದರು.
ಏನೇ ಆಗಲಿ ವಯೋವೃದ್ದ ಸಮಾಜವಾದಿ ಸಿದ್ದಾಂತದ ಕಾಗೋಡು ತಿಮ್ಮಪ್ಪರನ್ನ ಗೌರವಿಸಲು ಸಾವಿರಾರು ಕಾರಣ ಇದೆ, ಮೂಡನಂಬಿಕೆ ವಿರೋದಿ, ಹೊಗಳಿಕೆ ಜನರಿಂದ ದೂರ, ಸ್ವತಃ ಕಾನೂನು ತಿಳುವಳಿಕೆ ಇವರಿಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಗೋಡು ತಿಮ್ಮಪ್ಪರಂತಹ ವ್ಯಕ್ತಿತ್ವದವರು ಜನಪ್ರತಿನಿದಿಗಳಾಗಿ ಬರಬೇಕು ಆದರೆ ಪ್ರಸಕ್ತ ರಾಜಕಾರಣದ ವಾಸ್ತವದಲ್ಲಿ ಕಾಗೋಡು ತಿಮ್ಮಪ್ಪನವರೇ ಕೊನೆಯವರು ಅನ್ನಿಸುತ್ತದೆ.
ರಾಜಕಾರಣಿಗಳಿಗೆ ತಮ್ಮ ಸುತ್ತ ಅವರಿಸುವ ವಿಷವರ್ತುಲದ ಅರಿವಿರಬೇಕು ಈ ಕ್ಯಾಕ್ಟಸ್ ನಿವಾರಿಸಿಕೊಳ್ಳದಿದ್ದರೆ ಅವರ ಹಿಂಬಾಲಕರು ತಮ್ಮ ದ್ವೇಷ ಸಾಧನೆಗೆ ಅವರ ನಾಯಕರನ್ನೆ ದುರ್ಬಳಕೆ ಮಾಡಿಕೊಳ್ಳುತ್ತಾರೆ.
Comments
Post a Comment