Blog number 1860.ಆನಂದಪುರಂನ ಮೂಲ ನಿವಾಸಿಗಳಾದ ಬಾರೂದ್ (ಸಿಡಿಮದ್ದು ತಯಾರಿಸುವ) ಮನೆತನದ ಖಾಸೀಮಣ್ಣರ ಮುವ್ವತ್ತು ವರ್ಷದ ನಂತರದ ನಿನ್ನೆಯ ಬೇಟಿ
#ಮುವ್ವತ್ತು_ವರ್ಷದ_ನಂತರದ_ಮುಖಃತಃ_ಬೇಟಿ
#ಆನಂದಪುರಂನ_ಬಾರೂದ್_ಮನೆತನದ_ಖಾಸಿಮಣ್ಣ
#ಮಗನ_ಮದುವೆಗೆ_ಆಹ್ವಾನಿಸಲು_ಬಂದಿದ್ದರು.
#ಮೋಣು_ಸಾಹೇಬರ_ದ್ವಿತಿಯ_ಪುತ್ರ
#ಆನಂದಪುರಂನ_ಕನ್ನಡ_ಸಂಘದ_ಹಾಮೋ_ಭಾಷಾರ_ಅಣ್ಣ.
ಆನಂದಪುರಂನ ಗರ್ನಾಲ್ ಮೋಣು ಸಾಹೇಬರು ಆ ಕಾಲದ ಸಿಡಿಮದ್ದು - ಕೋವಿ ಮಸಿ ತಯಾರಿಸಿ ಮಾರಾಟ ಮಾಡುವ ಬಾರೂದ್ ಮನೆತನದವರು ಇವರು ನಮ್ಮ ಊರಿನ ಮೂಲ ನಿವಾಸಿಗಳು ಇವರ ಪುತ್ರ ಹಾ.ಮೊ. ಭಾಷಾ ಕನ್ನಡದ ಕಟ್ಟಾಳು ಅವರು ನಡೆಸಿದ ಸಾಂಸ್ಕೃೃತಿಕ ಚಟುವಟಿಕೆಗಳು ಆನಂದಪುರ೦ಗೆ ಹೆಚ್ಚಿನ ಪ್ರಾಮುಖ್ಯತೆ ತಂದು ಕೊಟ್ಟಿತ್ತು.
ಇಂತಹ ಕಲಾವಿದ ಸಂಘಟಕ ಹಾ.ಮೊ. ಭಾಷಾ ನಾಗರ ಹಾವು ಹಿಡಿಯಲು ಹೋಗಿ ಮೃತರಾದರು, ಇವರ ತಮ್ಮ ಶಂಷು KMF ಹಾಲಿನ ಸಾಗಾಣಿಕೆ ವಾಹನದ ಉದ್ಯೋಗದಲ್ಲಿ ಅಪಘಾತದಲ್ಲಿ ಮೃತಪಟ್ಟರು, ಕೆಲವು ವರ್ಷದ ಹಿಂದೆ ಇವರ ಕುಟುಂಬದ ವಿವಾಹ ಕಾರ್ಯಕ್ರಮಕ್ಕೆ ಮದ್ಯಾಹ್ನ ಆನಂದಪುರಂ ಬಿಟ್ಟು ರಾತ್ರಿ ಗೋವಾದಲ್ಲಿ ವಿವಾಹ ಮುಗಿಸಿ ಅವತ್ತೇ ವಾಪಾಸು ಬರುವಾಗ ಮಧ್ಯರಾತ್ರಿ ಹೊನ್ನಾವರದಿಂದ ಗೇರುಸೊಪ್ಪೆ ಮಾರ್ಗಕ್ಕೆ ತಿರುಗಿ ಮುಂದಿನ ತಿರುವಿನಲ್ಲಿ ಇವರ ಸ್ಕಾರ್ಪಿಯೋ ವಾಹನ ಅಪಘಾತಕ್ಕೆ ಈಡಾಗಿ ಹಾ.ಮೊ. ಭಾಷಾರ ಮಡದಿ, ಹಾ.ಮೋ. ಭಾಷಾರ ಸಹೋದರಿ, ಇವರ ಬಾವಾ ಟೈಲರ್ ಚಾಬು ಸಾಹೇಬರು ಸ್ಥಳದಲ್ಲೇ ಸಾವನ್ನಪ್ಪಿದರು ಉಳಿದವರು ವರ್ಷಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬದುಕಿ ಬಂದವರಲ್ಲಿ ಖಾಸಿಮಣ್ಣರೂ ಒಬ್ಬರು ಇವರ ಎಡಗೈ ಈಗಲೂ ಸರಿ ಆಗಿಲ್ಲ.
" ಅರುಣಾ... ದೇವರು ನಮ್ಮ ಮನೆತನಕ್ಕೆ ಇದೆಂತಾ ಶಿಕ್ಷೆ ವಿಧಿಸಿದ್ದಾನೆ...." ಈ ಪ್ರಶ್ನೆಗೆ ನಾನೂ ಕಣ್ಣೀರಾದೆ ಇವರೆಲ್ಲ ನನ್ನ ಕುಟುಂಬದ ಸ್ನೇಹಿತರು, ಖಾಸಿಮಣ್ಣ ನನ್ನ ದೊಡ್ಡಕ್ಕ ಮತ್ತು ಭಾವನ ಪ್ರೌಢ ಶಾಲಾ ಸಹಪಾಟಿ ಅನೇಕ ವರ್ಷಗಳಿಂದ ಸೌದಿಯಲ್ಲಿ ಉದ್ಯೋಗ ಮಾಡಿ ಬಂದವರು ಈಗ ಸಾಗರದಲ್ಲಿ ನೆಲೆಸಿದ್ದಾರೆ ಪುತ್ರಿ ವಿವಾಹ ಮಾಡಿದ್ದಾರೆ ಈಗ ಸೌದಿಯಲ್ಲಿ ಉದ್ಯೋಗದಲ್ಲಿರುವ ಮಗನಿಗೆ ದಾಂಡೇಲಿಯಲ್ಲಿರುವ ಹಾ.ಮೊ. ಭಾಷನ ಪತ್ನಿ ಅಕ್ಕನ ಮಗಳೊಂದಿಗೆ ವಿವಾಹ ಮಾಡುವ ಮೂಲಕ ಹಾ.ಮೋ ಬಾಷಾರ ಕುಟುಂಬದ ಸಂಬಂದ ಮುಂದುವರಿಸಿದ್ದಾರೆ
ನನ್ನ ಎಲ್ಲಾ ಬ್ಲಾಗ್ ಗಳನ್ನು ಓದುತ್ತಾರೆ ನನ್ನ ಪ್ರಕಟವಾದ ಎರೆಡು ಪುಸ್ತಕ ಕೇಳಿ ಪಡೆದರು ಹೋಗುವಾಗ ನನ್ನ ಮುಂದಿನ ಪ್ರಕಟವಾಗಲಿರುವ #ಆನಂದಪುರಂ_ಇತಿಹಾಸ ಪುಸ್ತಕಕ್ಕೆ ಕಾಯುತ್ತಿರುವುದಾಗಿ ನೆನಪಿಸಿದರು.
#ಈ_ಕುಟುಂಬದ_ಬಗ್ಗೆ_ಈ_ಹಿಂದೆ_ನಾನು_ಬರೆದ_ಲೇಖನದ_ಆಯ್ದ_ಭಾಗ_ಇಲ್ಲಿದೆ
ಒಂದು ಕಾಲದಲ್ಲಿ ಮಲೆನಾಡಿನಲ್ಲಿ ಸುತ್ತ ನೂರಾರು ಹಳ್ಳಿಗಳ ಮಧ್ಯೆ ಒಂದು ಪೇಟೆ ಸೃಷ್ಟಿ ಆಗುತ್ತಿತ್ತು, ಆ ಪೇಟೆಯಲ್ಲಿ ಸುತ್ತ ಹಳ್ಳಿಯ ಜನರ ಕೃಷಿ ಉಪಕರಣ ತಯಾರಿಸುವ, ದುರಸ್ತಿ ಮಾಡುವ ವಿಶ್ವಕರ್ಮಿಯರ ಕುಲುಮೆಗಳು, ಕ್ಷೌರಿಕರ ಅಂಗಡಿಗಳು, ಪಂಡಿತರುಗಳು, ನಿತ್ಯ ಉಪಯೋಗಿ ಹಿತ್ತಾಳೆ ಪಾತ್ರೆಗಳಿಗೆ ಕಲಾಯಿ ಹಾಕುವವರು, ಜೋಡು ಹೊಲೆದು ಕೊಡುವವರು, ದಿನಸಿ ಮಾರಾಟ ಮಾಡುವವರು, ಕಂಬಳಿ ಮಾರುವವರು, ಕುಂಬಾರರ ಮನೆಗಳು, ಪುರೋಹಿತರು, ಡಬ್ಬ - ಛತ್ರಿ- ಟಾರ್ಚ್ ದುರಸ್ತಿಗಾರರ ಮತ್ತು ಪಸಲು ರಕ್ಷಣೆಗಾಗಿ - ಶಿಕಾರಿಗಾಗಿ ಬಳಸುವ ಬಂದೂಕುಗಳಿಗೆ ಮದ್ದು ತಯಾರಿಸುವ ಬಾರೂದ್ ಮನೆತನಗಳು ಇದ್ದರೆ ಮಾತ್ರ ಅದು ಪೇಟೆಯ ಅರ್ಹತೆ ಪಡೆಯುತ್ತಿತ್ತು.
ಇಂತಹ ಪೇಟೆಗಳಲ್ಲೆ ಬ್ರಿಟೀಷ್ ಆಡಳಿತದ ಪೋಲಿಸ್ ಠಾಣೆ ಇತ್ಯಾದಿಗಳು ಬಂದವು.
ಆನಂದಪುರಂ ಇಂತಹ ಪೇಟೆ ಆಗಿ ಹೋಬಳಿ ಆಗಿ ನಂತರ ತಾಲ್ಲೂಕ್ ಕೂಡ ಕೆಲ ದಶಕ ಕಾಲ ಆಗಿದ್ದು ಇತಿಹಾಸ.
ಆನಂದಪುರಂ ಸುತ್ತಮುತ್ತ ದಟ್ಟ ಅರಣ್ಯದಿಂದ ರೈತರ ಪಸಲು ರಕ್ಷಣೆಗಾಗಿ ಮದ್ದುಗುಂಡುಗಳನ್ನು ತಯಾರಿಸಿ ಕೊಡುವ ಉದ್ಯೋಗ ಮಾಡಲು ದೂರದ ಹೊನ್ನಾವರದಿಂದ ಬಂದ ಬಾರೂದ್ ಮೊಯಿದ್ದೀನ್ ಸಾಹೇಬರ ಕುಟುಂಬವೇ ಮೂಲವೋ ಅಥವ ಅದಕ್ಕಿಂತ ಮೊದಲೇ ಅವರ ಕುಟುಂಬದವರು ಬಂದಿದ್ದರಾ ಎಂಬ ನಿಖರ ಮಾಹಿತಿ ಈ ಕುಟುಂಬದ ಈಗಿನ ತಲೆಮಾರಿನವರಿಗೆ ಇಲ್ಲ.
ಮದ್ದು ಗುಂಡು ತಯಾರಿಸಿ ಮಾರಾಟ ಮಾಡಲು ಬ್ರಿಟಿಷರ ಕಾಲದಲ್ಲಿ ಲೈಸೆನ್ಸ್ ಪಡೆದು ಈ ಕುಟು೦ಬ ಆನಂದಪುರಂನ ಆ ಕಾಲದ ಸರ್ ಮಿರ್ಜಾ ಇಸ್ಮಾಯಿಲ್ ತಂಗುದಾಣದ (ನಂತರ ಇದು ದೊಡ್ಡಿ ಆಯಿತು) ಪಕ್ಕದಲ್ಲಿ ಆಗಿನ ಪುರ ಪ್ರಮುಖರಾದ ಅಯ್ಯಂಗಾರ್ ಕುಟುಂಬದ ಅನುಮತಿಯಿಂದ ಈ ಕುಟುಂಬ ಆನಂದಪುರಂ ಕೆರೆ ಪಕ್ಕದಲ್ಲಿ ನೆಲೆಸಿತ್ತು.
ಮದ್ದುಗುಂಡು ಮಾರಾಟ ಮಾಡುವವರಿಗೆ ಬಾರೂದ್ ಮನೆತನ ಎಂಬ ಅಡ್ಡಹೆಸರು ಇರುತ್ತಿತ್ತು, ವರ್ಷ ಪೂರ್ತಿ ಮದ್ದುಗುಂಡು ಅರೆದು ತಯಾರಿಸಿ ಮಾರಾಟ, ಹಬ್ಬ ಹರಿದಿನದಲ್ಲಿ ಆ ಕಾಲದ ದೇಸಿ ಸಿಡಿ ಮದ್ದು ಗರ್ನಾಲು ಇತ್ಯಾದಿ ಮಾರಾಟದಿಂದ ಅವರದ್ದು ಶ್ರೀಮಂತ ಜೀವನವೇ ಆಗಿತ್ತು.
ಹೊನ್ನಾವರದ ಬಾರೂದ್ ಮೊಯಿದೀನ್ ಸಾಬ್ ರಿಗೆ ಐವರು ಮಕ್ಕಳು ಹಸನಾರ್, ಅಮೀನಾಬಿ, ಹಮೀದ್ ಸಾಬ್, ಆಹ್ಮದ್ ಖುನ್ನಿ, ಮತ್ತು ಇಬ್ರಾಹಿಂ.
ಮನೆತನದ ಉದ್ಯೋಗವನ್ನು ಹಸನಾರ್ ಸಾಬ್ ಮತ್ತು ಹಮೀದ್ ಸಾಹೇಬರು ಮುಂದುವರೆಸುತ್ತಾರೆ, ಉಳಿದವರು ಸಾಗರ ಮತ್ತು ಗೋವಾದಲ್ಲಿ ಉದ್ಯೋಗ ಮಾಡುತ್ತಾರೆ, ಅಮೀನಾಬಿಯವರನ್ನು ಚಾಬು ಸಾಹೇಬರಿಗೆ ವಿವಾಹ ಮಾಡುತ್ತಾರೆ.
ಹಸನಾರ್ ಸಾಬ್ ಮತ್ತು ಶ್ರೀಮತಿ ಖತಿಜಾಬಿ ದಂಪತಿಗಳಿಗೆ ಬಾಬು (ಅಬ್ದುಲ್ ಖಾದರ್ ), ಖಾಸಿಂ, ಹಾ. ಮೊ. ಬಾಷಾ ಮತ್ತು ಷ೦ಷು ಎಂಬ ನಾಲ್ಕು ಗಂಡು ಮಕ್ಕಳು. ಜಾಯಿರಾಬಿ, ಆಲೀಮಾ, ಪಾತೀಮಾ ಮತ್ತು ನೇಬಾನು ಎಂಬ ನಾಲ್ಕು ಹೆಣ್ಣು ಮಕ್ಕಳು.
ಇವರಲ್ಲಿ ಹಾ.ಮೊ. ಬಾಷಾ ಕನ್ನಡದ ಕಟ್ಟಾ ಅಭಿಮಾನಿ, ಸಂಘಟನಾ ಚತುರ, ಪ್ರಖರ ವಾಗ್ಮಿ, ಕಲಾವಿದರೂ ಆಗಿದ್ದರು.
ವಿಷದ ಹಾವು ಹಿಡಿದು ಕಾಡಿಗೆ ಬಿಡುತ್ತಿದ್ದರು ಈ ಹವ್ಯಾಸವೇ ಇವರ ಅಕಾಲಿಕ ಮೃತ್ಯುವಿಗೆ ಕಾರಣವಾಯಿತು ಎಂಬುದು ವಿಷಾದನೀಯ ಸಂಗತಿ.
ಇವರ ಪತ್ನಿ ಕೂಡ ಇತ್ತೀಚಿಗೆ ಅಪಘಾತದಲ್ಲಿ ಮೃತರಾಗಿದ್ದಾರೆ ಇವರ ಮಗಳು ಮತ್ತು ಮಗ ಸಂಬಂದಿಕರ ನೆರವಿನಿಂದ ವಿದ್ಯಾಬ್ಯಾಸ ಮುಂದುವರಿಸಿದ್ದಾರೆ.
Comments
Post a Comment