#ನನ್ನ_ಮೊದಲ_ಪಾದಯಾತ್ರೆ_ಸಾಗರ_ಟೂ_ನಮ್ಮ_ಊರು
#ಇ೦ದಿರಾಗಾಂಧಿ_ಬಂದಿಸಿದ_ಆ_ದಿನ.
#ಸಾಗರದಿಂದ_ಆನಂದಪುರಂಗೆ_25_ಕಿಮಿ_ನಡೆದು_ಬಂದಿದ್ದೆ.
#ಕಾ೦ಗ್ರೇಸ್_ಇಡೀ_ಸಾಗರ_ಪೇಟೆ_ಬಂದ್_ಮಾಡಿಸಿತ್ತು
#ಕಾಗೋಡು_ನೇತೃತ್ವದಲ್ಲಿ_ಬಂದ್_ವಿರೋದಿಸಿ_ಮೆರವಣಿಗೆ
#ಲಾಠಿ_ಚಾಜ್೯_ಕಾಗೋಡರ_ಕೈಯಿಗೆ_ಪೋಲಿಸರ_ಲಾಠಿಯಿಂದ_ಹಲ್ಲೆ_ಎಂಬ_ಸುದ್ದಿ.
#ಆಗ_ಸಾಗರದ_ಶಾಸಕರು_ಕಾಗೋಡು_ತಿಮ್ಮಪ್ಪನವರು.
#ಸಂಜಯ್_ಗಾಂಧಿ_ಯಂಗ್_ಬ್ರಿಗೇಡ್_ಪಡವಗೋಡು_ಸುಬ್ರಾವ್
#ಅವರ_ಘೋಷಣೆ_ಆದಾ_ರೋಟಿ_ಕಾಯೇoಗೆ_ಇಂದಿರಾ_ಗಾಂಧಿ_ಬಚಾಯೆಂಗೆ.
ಪ್ರತಿದಿನ 5 ನೇ ತರಗತಿಯಿಂದ 7 ನೇ ತರಗತಿಗೆ ನಮ್ಮ ಮನೆ ಯಡೇಹಳ್ಳಿಯಿಂದ ದಾಸಕೊಪ್ಪದ ಪದವಿ ಪೂರ್ವ ಕಾಲೇಜು ಕಟ್ಟಡಕ್ಕೆ ಅಂದಾಜು 2 ಕಿ.ಮಿ. ನಡೆದು ಹೋಗುತ್ತಿದ್ದೆವು ಮಧ್ಯಾಹ್ನ ಊಟದ ಬೆಲ್ ಹೊಡೆದಾಗ 2 ಕಿ.ಮಿ. ಓಡಿ ಮನೆ ಸೇರಿ ಊಟ ಮಾಡಿ ತಿರುಗಿ ಓಡಿ ಶಾಲೆ ಸೇರಿ ಸಂಜೆ ಶಾಲೆ ಮುಗಿದ ಮೇಲೆ 2 ಕಿ.ಮಿ. ವಾಪಾಸು ಬರುವುದು ನಮ್ಮ ಎಲ್ಲಾ ಆಗಿನ ಗೆಳೆಯರ ಅಭ್ಯಾಸ ಸುಮಾರು 8 ಕಿ.ಮಿ. ಸಲೀಸಾಗಿ ಓಡಿ ನಡೆದು ಕ್ರಮಿಸುವ ಪಿಟ್ ನೆಸ್ ನಮ್ಮದು.
ಆನಂದಪುರಂ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ 7ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ 600 ಅ೦ಕಕ್ಕೆ 520 ಅಂಕ ಪಡೆದದ್ದರಿಂದ ನಮ್ಮ ತಂದೆ ನನ್ನನ್ನು 8 ನೇ ತರಗತಿಗೆ ಇಂಗ್ಲೀಷ್ ಮೀಡಿಯಂಗೆ ಸಾಗರದ ಮುನ್ಸಿಪ್ ಹೈಸ್ಕೂಲ್ ಗೆ ಸೇರಿಸಿದ್ದರು.
ಆನಂದಪುರಂನಿಂದ ಪ್ರತಿ ನಿತ್ಯ ರೈಲಿನ ಪ್ರಯಾಣ, ಮೂರು ತಿಂಗಳ ಪ್ರಯಾಣಕ್ಕೆ ವಿದ್ಯಾರ್ಥಿಗಳು ಹತ್ತೊಂಬತ್ತು ರೂಪಾಯಿ ರೈಲ್ವೆ ಇಲಾಖೆಗೆ ಪಾವತಿ ಮಾಡಿ ಪಾಸ್ ಪಡೆಯುತ್ತಿದ್ದೆವು.
1977 ರ ಅಕ್ಟೋಬರ್ 4 ನೇ ತಾರೀಖು ಮಂಗಳವಾರ ಸಾಗರದಲ್ಲಿ ರೈಲು ಇಳಿದು ಬಸ್ ಸ್ಟಾಂಡ್ ಹತ್ತಿರ ಬ೦ದಾಗಲೇ ಗೊತ್ತಾಗಿದ್ದು ಅವತ್ತು ಸಾಗರ ಪೇಟೆ ಬಂದ್ ಅಂತ, ಎಲ್ಲಾ ಅಂಗಡಿ ಮುಂಗಟ್ಟುಗಳುಗಳು ಬಾಗಿಲು ಮುಚ್ಚಿತ್ತು, ಬಸ್ ಸಂಚಾರ ಇರಲಿಲ್ಲ, ಶಾಲೆ ಹತ್ತಿರ ಹೋದರೆ ಶಾಲೆಗೆ ರಜೆ.
ಹಿಂದಿನ ರಾತ್ರಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಮೊರಾರ್ಜಿ ದೇಸಾಯಿ ಅವರು ಪ್ರದಾನ ಮಂತ್ರಿ ಆಗಿದ್ದ ಜನತಾ ಪಕ್ಷದ ಕೇಂದ್ರ ಸಕಾ೯ರ ಮತ್ತು ಗೃಹ ಸಚಿವ ಚೌದುರಿ ಚರಣ್ ಸಿಂಗ್ ಬಂದಿಸಿದ್ದರಿಂದ ಇದೆಲ್ಲ ಆಗುತ್ತಿದೆ ಅಂತ ಜನರ ಮಾತಿನಲ್ಲಿ ಗೊತ್ತಾಯಿತು.
ಆನಂದಪುರಂನಿಂದ ಸಾಗರಕ್ಕೆ ಬಂದಿದ್ದ ಎಲ್ಲಾ ವಿದ್ಯಾರ್ಥಿ ವೃಂದ ರೈಲ್ವೆ ಸ್ಟೇಷನ್ ನಲ್ಲಿ ಸೇರಿ ವಾಪಾಸ್ ಊರಿಗೆ ಹೋಗುವುದು ಹೇಗೆ ಅಂತ ಚಿಂತಿಸುತ್ತಿದ್ದರು, ತಾಳಗುಪ್ಪದಿಂದ ಸಂಜೆ ವಾಪಾಸು ಬರುವ ರೈಲೂ ಪ್ರಯಾಣ ರದ್ದಾದರೆ ಎಂಬ ಭಯಕ್ಕೆ ಸ್ಟೇಷನ್ ಮಾಸ್ಟರ್ ಕೂಡ ಏನೂ ಹೇಳಲಾಗುವುದಿಲ್ಲ ಅಂತ ಅಂದದ್ದು ಎಲ್ಲರಿಗೂ ಸಂಕಷ್ಟ ತಂದಿತ್ತು.
ಆಗಲೇ ನಾನು ಮತ್ತು ಹಿರಿಯ ಗೆಳೆಯ ಪುಪ್ಪಾ ಯಾನೆ ಸಿಲ್ವಸ್ಟರ್ ಡಿಕಾಸ್ಟ್ ಒಂದು ತೀರ್ಮಾನ ಮಾಡಿದ್ದೆವು, ಸಂಜೆ ತನಕ ಅನಿರ್ದಿಷ್ಟ ಮರು ಪ್ರಯಾಣಕ್ಕೆ ಕಾಯದೆ ನಡೆದುಕೊಂಡೇ ಆನಂದಪುರಂಗೆ ಹೋಗಬಾರದೇಕೆ ಅಂತ.
ಪುಪ್ಪಾ ಪೀಯೂಸಿ ವಿದ್ಯಾರ್ಥಿ ನಾನು 8ನೇ ತರಗತಿ ಆದರೆ ನಮ್ಮಿಬ್ಬರದ್ದು ಗಳಸ್ಯ ಕಂಠಸ್ಯ ಗೆಳೆತನ, ನಮ್ಮಿಬ್ಬರ ತೀರ್ಮಾನಕ್ಕೆ ಆ ದಿನಗಳಲ್ಲಿ ಆನಂದಪುರಂನಿಂದ ಸಾಗರಕ್ಕೆ ಬರುತ್ತಿದ್ದ ಮುವ್ವತ್ತಕ್ಕೂ ಹೆಚ್ಚಿನ ವಿದ್ಯಾರ್ಥಿ ಬಳಗದಲ್ಲಿ ಯಾರಿಗೂ 25 ಕಿಲೋ ಮೀಟರ್ ನಡೆಯುವ ಸಾಹಸ ಪ್ರಾಯಾಸ ಅನ್ನಿಸಿ ಸಂಜೆ ರೈಲಿಗೆ ಕಾಯುವುದಾಗಿ ತಿಳಿಸಿದಾಗ ನಾವಿಬ್ಬರು ಮಾತ್ರ ನಮ್ಮ ಪಾದಯಾತ್ರೆ ಪ್ರಾರಂಬಿಸಿಯೇ ಬಿಟ್ಟೆವು.
ನಮ್ಮ ಮದ್ಯಾಹ್ನದ ಊಟದ ಡಬ್ಬಿ ಹೇಗೂ ಇತ್ತು,ಆಗೆಲ್ಲ ಈಗಿನಂತೆ ನೀರಿನ ಬಾಟಲಿ ಯಾರೂ ಒಯ್ಯುವ ಪ್ರಮೇಯ ಇರಲಿಲ್ಲ ಎಲ್ಲಿ ಬೇಕಾದರೂ ನೀರು ಕುಡಿಯಬಹುದಾಗಿತ್ತು (ನೀರು ಕುಲಷಿತಗೊಂಡಿರಲಿಲ್ಲ).
ಮೊದಲಿಗೆ ನಮ್ಮ ಪಾದಯಾತ್ರೆ ಯೋಜನೆ ರೈಲ್ವೇ ಹಳಿ ಮಾರ್ಗದಲ್ಲೇ ಆನಂದಪುರಂ ಸೇರುವುದು ಕಾರಣ ನಡೆಯಲಾಗದಿದ್ದರೆ ಬಾಳೆಗುಂಡಿ ಅಥವ ಅಡ್ಡೇರಿ ರೈಲು ನಿಲ್ದಾಣದಲ್ಲಿಗೆ ನಮ್ಮ ಪಾದಯಾತ್ರೆ ನಿಲ್ಲಿಸಿ ಸಂಜೆ ಬರುವ (ಗ್ಯಾರ೦ಟಿ ಇಲ್ಲ) ರೈಲಲ್ಲಿ ಊರು ತಲುಪುವುದು ಅಂತ.
ಆದರೆ ಪುಪ್ಪಾ ಯೋಜನೆ ಬದಲಿಸಿದ ಗಂಟೆಗೆ 6 ಕಿಲೋ ಮೀಟರ್ ಅರಾಮಾಗಿ ನಡೆಯಬಹುದು 12 ಗಂಟೆಗೆ ಹೊರಟರೂ ಸಂಜೆ 4-5 ಗಂಟೆಗೆ ಊರು ತಲುಪುತ್ತೇವೆ ದಿನಾ ರೈಲಿನಲ್ಲಿ ನೋಡಿದ ಊರುಗಳಿಗಿಂತ ರಾಜ್ಯ ಹೆದ್ದಾರಿಯ ಮಂಚಾಲೆ - ಉಳ್ಳೂರು - ಕಾಸ್ಪಾಡಿ - ಹೊಸೂರು ನೋಡಬಹುದು ಅಂತ.
ರಸ್ತೆಯ ಮಾರ್ಗದಲ್ಲೇ ನಡೆದು ಹೋಗುವಾಗ ಸಾಗರ ಪೇಟೆ ಜನರೇ ಇಲ್ಲದೆ ಸ್ಮಶಾನ ಮೌನವಾಗಿತ್ತು ಆಗ ಗಾಂದಿ ಮ೦ದಿರದಿಂದ ಇಂದಿರಾ ಗಾಂಧಿ ಬಂಧನ ವಿರೋದಿಸಿ ಹೊರಟಿದ್ದ ಮೆರವಣಿಗೆ ಹಿಂದೆ ನಾವು ಸಾಗಿದೆವು.
ಅದು ಆಗಿನ ಸಂಜಯ್ ಬ್ರಿಗೇಡ್ (ಈಗಿನ ಯುವ ಕಾಂಗ್ರೇಸ್) ಪ್ರತಿಭಟನೆ ಅದರ ಮುಂದಾಳುಗಳಲ್ಲಿ ಆಕರ್ಷಕ ಗಡ್ಡದಾರಿ ಯುವಕ ನಮಗೆ ಹೆಚ್ಚು ನೆನಪಲ್ಲಿ ಉಳಿಯುವಂತೆ ಹಿಂದಿಯಲ್ಲಿ ಘೋಷಣೆ ಹಾಕುತ್ತಿದ್ದರು.
"ಆದ ರೋಟಿ ಕಾಯೇಂಗೇ ... ಇಂದಿರಾ ಗಾಂಧಿ ಬಚಾಯೆಂಗೆ" ಅಂತ ಮುಂದೆ ಬುದ್ದಿ ಬಂದು ನಾನು ಜನಪರ ಹೋರಾಟ -ರಾಜಕೀಯ ಅಂತ ಬಂದಾಗ ಗೊತ್ತಾಗಿದ್ದು ಅವರು ಪಡವಗೋಡಿನ ಸುಬ್ರಾವ್ ಅನೇಕ ವರ್ಷ ಸಾಗರದ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿದ್ದರು ನನ್ನ ಗೆಳೆಯರೂ ಆದರು.
ಈ ಮೆರವಣಿಗೆ ಶ್ರೀ ಟಾಕೀಸ್ ರಸ್ತೆಗೆ ತಲುಪಿದಾಗ ಆಗಿನ ಶಾಸಕರಾಗಿದ್ದ ಕಾಗೋಡು ತಿಮ್ಮಪ್ಪರ ನಾಯಕತ್ವದಲ್ಲಿ ಆಗಿನ ಕೇಂದ್ರ ಸರ್ಕಾರ ಜನತಾ ಪಕ್ಷದಲ್ಲಿ ವಿಲೀನವಾಗಿದ್ದ ಸಂಯುಕ್ತ ಸಮಾಜವಾದಿ ಪಾರ್ಟಿಯ ಮೆರವಣಿಗೆ ಅದೇ ಮಾರ್ಗದಲ್ಲಿ ಎದುರಾಯಿತು.
ಮುಚ್ಚಿದ ಅಂಗಡಿಗಳನ್ನು ತೆರೆಸುತ್ತಾ ಇಂದಿರಾ ಗಾಂಧಿ ಜೈಲಿಗೆ ಕಳಿಸಿದ ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ ಕ್ರಮ ಸಮರ್ಥಿಸುವ ಘೋಷಣೆಗಳ ಜೊತೆ ಬಂದಿತು.
ವಿದ್ಯಾರ್ಥಿ ಬಾಲಕರಾಗಿದ್ದ ನಮಗೆ ಮುಂದೇನಾಗುತ್ತೆ ಎ೦ಬ ಕುತೂಹಲದ ಅಂತಿಮ ಘಟ್ಟದಲ್ಲಿ ಪೋಲಿಸರ ಲಾಠಿ ಚಾರ್ಜ್ ಆಯಿತು, ನಾವು ಹೇಗೋ ತಪ್ಪಿಸಿಕೊಂಡು ಆನಂದಪುರಂಗೆ ನಡೆದುಕೊಂಡು ರಾತ್ರಿ 9ಕ್ಕೆ ಊರು ಸೇರಿದೆವು, ನಮ್ಮ ಸಂಗಾತಿಗಳೆಲ್ಲ ಸಂಜೆ 7ಕ್ಕೆ ರೈಲಲ್ಲಿ ಊರು ಮುಟ್ಟಿದ್ದರು ಇದು ನನ್ನ ಜೀವನದ ಮೊದಲ 25 ಕಿ.ಮಿ. ಪಾದಯಾತ್ರೆ ನನ್ನ ವಯಸ್ಸು 12.
ಹಾಗೆ ಸಂಜೆಯೇ ರೈಲು ಸಂಚಾರ ಪುನಾರಂಬವಾಗಲು ಕಾರಣ ನವದೆಹಲಿಯ ಚೀಪ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್. ದಯಾಳ್ ತಕ್ಷಣ ಇಂದಿರಾ ಗಾಂಧಿಯವರನ್ನು ಬಿಡುಗಡೆ ಮಾಡಿದ್ದು.
ಹಿಂದಿನ ದಿನ ಸಂಜೆ ಅಂದರೆ 3 ಅಕ್ಟೋಬರ್ 1977 ರಲ್ಲಿ ಇಂದಿರಾ ಗಾಂಧಿ ಮತ್ತು ಅವರ ಸಂಪುಟದಲ್ಲಿ ಮಂತ್ರಿಗಳಾಗಿದ್ದ ಕೆ.ಡಿ. ಮಾಳವೀಯ, ಹೆಚ್.ಆರ್.ಗೋಕಲೆ, ಪಿ.ಸಿ. ಸೇತಿ, ಡಿ.ಪಿ. ಚಟ್ಟೋಪಾಧ್ಯಯರನ್ನು ತುರ್ತು ಪರಿಸ್ಥಿತಿಯಲ್ಲಿ ಬಾರೀ ಭ್ರಷ್ಟಾಚಾರ ಮಾಡಿದ್ದಾರೆಂದು ಬಂದನ ಮಾಡಿ ಒಂದು ರಾತ್ರಿ ದೆಹಲಿಯ ನ್ಯೂ ಪೋಲಿಸ್ ಟವನ್ ಕಿಂಗ್ಸ್ ವೇ ಕ್ಯಾ೦ಪ್ ನ ಗೆಜೆಟಿಯರ್ ಆಪೀಸರ್ ಮೆಸ್ ನಲ್ಲಿ ಉಳಿಸಿದ್ದರು ಇದು ವಿಶ್ವದಾದ್ಯಂತ ಸುದ್ದಿ ಆಯಿತು ಮತ್ತು ಇಂದಿರಾ ಅಭಿಮಾನಿಗಳು ರೊಚ್ಚಿಗೆಬ್ಬಿಸಿತು ಈ ಬಂಧನ ಮು೦ದೆ ಇಂದಿರಾ ಗಾಂಧಿಗೆ ಅನುಕಂಪವೂ ದೊರಕಿತು.
ಮರುದಿನ ನವ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ನ ಚೀಪ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎದರು ಹಾಜರು ಪಡಿಸುತ್ತಾರೆ, ಕೋರ್ಟ್ ನ ಹೊರಗೆ ಭಾರೀ ಸಂಖ್ಯೆಯ ಜನಸ್ತೋಮ ಸೇರಿರುತ್ತಾರೆ.
ಮರುದಿನ ಸಾಗರದಲ್ಲಿ ಹಬ್ಬಿದ ಸುದ್ದಿ ಪೋಲಿಸರಲ್ಲಿ ಒಬ್ಬ ಶಾಸಕರಾಗಿದ್ದ ಕಾಗೋಡರ ಕೈಗೆ ಲಾಠಿಯಿಂದ ಹೊಡೆದ ಎಂದು ಮತ್ತೆ ಕೆಲವರು ಇದು ಸುಳ್ಳು ಸುದ್ದಿ ಅಂತ, ಆಗ ನಮಗೆ ತುಂಬಾ ಬೇಸರದ ಸುದ್ದಿ ಕಾಂಗ್ರೇಸ್ ಯಂಗ್ ಬ್ರಿಗೇಡನ ಪಡವಗೋಡು ಸುಬ್ರಾವ್ ಮತ್ತಿತರರನ್ನು ಜೈಲಿಗೆ ಹಾಕಿದ್ದಾರೆ ಇತ್ಯಾದಿ.
ನಂತರ ಅವರನ್ನೆಲ್ಲ ಜೈಲಿಂದ ಕೋರ್ಟಿಗೆ ಮತ್ತು ಕೋರ್ಟಿನಿಂದ ಜೈಲಿಗೆ ಪೋಲಿಸರು ಕರೆದೊಯ್ಯುವಾಗಲೂ ಅದೇ ಹಿಂದಿ ಬಾಷಾ ಘೋಷಣೆ "ಆದಾ ರೋಟಿ ಕಾಯೇಂಗೆ ... ಇಂದಿರಾ ಗಾಂಧಿ ಬಚಾಯೆಂಗೆ " ನಮಗೆಲ್ಲ ರೋಮಾಂಚನ ಉಂಟು ಮಾಡುತ್ತಿತ್ತು.
ಈ ಘಟನೆ ನಡೆದದ್ದು 46 ವರ್ಷದ ಹಿಂದೆ.
Comments
Post a Comment