Blog number 1218. ಹಿರಿಯ ಮಿತ್ರ ರೈಲ್ವೆ ಕಾಮಿ೯ಕ ನಿವೃತ್ತ - ಸಂತೃಪ್ತ ಜೀವನದಲ್ಲಿ ಭದ್ರಾವತಿಯಲ್ಲಿ ನೆಲೆಸಿರುವ ತಾನೂ ನಗುತ್ತಾ ಎಲ್ಲರನ್ನೂ ನಗಿಸುವ ಆಶು ಕವಿ ಸ್ಯೆಯದ್ ಸಾಲಿ ಬೇಟಿ 30 ವರ್ಷದ ನಂತರ
#ಸ್ಯೆಯದ್_ಸಾಲಿ_ರೈಲ್ವೆ_ಕಾರ್ಮಿಕರು
#ಕಷ್ಟದ_ದಿನಗಳಲ್ಲಿ_ತಮ್ಮ_ಹಾಸ್ಯದ_ಮ್ಯಾನರಿಸಂನಿಂದ_ಎಲ್ಲರ_ಮುಖದಲ್ಲಿ_ನಗು_ತರಿಸುವಾತ,
#ಭದ್ರಾವತಿಯಲ್ಲಿ_ನಿವೃತ್ತ_ಸಂತೃಪ್ತ_ಜೀವನದಲ್ಲಿ
#ಆ_ಕಾಲದ_ರೈಲ್ವೆ_ಕಾರ್ಮಿಕರ_ಸಂಕಷ್ಟ_ಜೀವನ
1990 ರ ವರೆಗೆ ರೈಲ್ವೆ ಕಾರ್ಮಿಕರ ಜೀವನ ಸುಖಮಯ ಆಗಿರಲಿಲ್ಲ, ರೈಲ್ವೆ ಗ್ಯಾಂಗ್ ಮನ್ ಗಳ ಮತ್ತು ಗೇಟ್ ಮನ್ ಗಳ ಸಂಬಳ ಮಾಸಿಕ 11 ಸಾವಿರ ದಾಟಿರಲಿಲ್ಲ.
ಬೆಳಿಗ್ಗೆ ಹೆಗಲ ಮೇಲೆ ದೊಡ್ಡ ಹ್ಯಾಮರ್, ಶಾವೆಲ್, ಸಬ್ಬಲ್ , ಸ್ವಾನರ್ ಗಳನ್ನು ಹೇರಿಕೊಂಡು ತಂಡವಾಗಿ ನಾಲ್ಕು ಕಿಲೋ ಮೀಟರ್ ದೂರದವರೆಗೆ ರೈಲ್ವೆ ಮಾರ್ಗ ಪರಿಶೀಲನೆ, ದುರಸ್ತಿ ಮತ್ತು ಜಲ್ಲಿಕಲ್ಲುಗಳನ್ನು ಸಮತಟ್ಟು ಮಾಡಿ ವಾಪಾಸು 4 ಕಿ.ಮಿ. ನಡೆದು ಬರುವಾಗ ಸಂಜೆ ಆಗುತ್ತಿತ್ತು.
ಹಾಸಿದರೆ ಹೊದೆಯಲು ಇಲ್ಲ ಹೊದೆದರೆ ಹಾಸಲಿಲ್ಲ ಎಂಬ ಜಂಜಾಟದ ಜೀವನ ಅವರದ್ದು, ವಾಸಕ್ಕೆ ಕ್ವಾರ್ಟರ್ಸ್ ಮತ್ತು ಚಿಕಿತ್ಸೆಗೆ ಮೈಸೂರಿನ ರೈಲ್ವೆ ಕಾರ್ಮಿಕರ ಆಸ್ಪತ್ರೆ ಅವರಿಗಿದ್ದ ಅವತ್ತಿನ ಸುದಾರಣೆ ಆಗಿತ್ತು.
ಪ್ರತಿ ತಿಂಗಳು ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ಸಂಬಳ ಆನಂದಪುರಂ ರೈಲ್ವೆ ಸ್ಟೇಷನ್ ಗೆ ಬರುತ್ತಿದ್ದ ವಿಶೇಷ ರೈಲಿನಲ್ಲಿ ಬಟಾವಡೆ ಮಾಡುತ್ತಿದ್ದರು, ದಸರಾದಲ್ಲಿ ಇದೇ ರೀತಿ ಬೋನಸ್ ಸಂಬಳ ಕೂಡ.
ಈ ಕಾರಣದಿಂದ ರೈಲ್ವೆ ಕಾರ್ಮಿಕರಿಗೆ ಆನಂದಪುರಂ ದಿನಸಿ ವ್ಯಾಪಾರಿಗಳು, ಸೆಲೂನ್ ನವರು, ಬಟ್ಟೆ ಅಂಗಡಿಯಲ್ಲಿ, ಕುರಿ ಮಾಂಸದ ಅಂಗಡಿಯಲ್ಲಿ, ಸರಾಯಿ ಅಂಗಡಿಯಲ್ಲಿ ಬರಪೂರ ಸಾಲ ಸೌಲಭ್ಯವೂ ದೊರಕುತ್ತಿತ್ತು.
ಆದರೆ ಅವರೆಲ್ಲ ರೈಲ್ವೆ ಕಾರ್ಮಿಕರ೦ತೆ ಸಂಬಳದ ರೈಲು ಕಾಯಬೇಕಿತ್ತು ತಪ್ಪಿದರೆ ಅವರ ಸಾಲದ ಮರುಪಾವತಿಗೆ ಮುಂದಿನ ತಿಂಗಳ ಸಂಬಳದ ರೈಲು ಗತಿಯಾಗುತ್ತಿತ್ತು.
ಶ್ರಮದ ಕೆಲಸ, ತುಂಬು ಕುಟುಂಬದ ಪಾಲನೆ, ಕುಡಿತ- ಜುಗಾರಿ ವ್ಯಸನಗಳಿಂದ ಇವರೆಲ್ಲರ ಜೀವನ ಕಲ್ಲು ಮುಳ್ಳಿನಂತ ಜೀವನದ ದಾರಿ ಆಗಿತ್ತು ಅದನ್ನು ಮರೆಯಲು ಸರಾಯಿ ಒಂದೇ ಮನೋರಂಜನೆ ಇವರಿಗೆ.
ಇವರೆಲ್ಲ ನನ್ನ ಆತ್ಮೀಯರಾಗಿದ್ದರು ನಾನು ಅವರ ಕಷ್ಟಕ್ಕೆ ಸ್ಪಂದಿಸುತ್ತಿದ್ದರಿಂದ 1985 ರಿಂದ 2000ದವರೆಗಿನ ಆನಂದಪುರಂನ ರೈಲ್ವೆ ಸಿಬ್ಬಂದಿಗಳು ನನಗೆ ಆಪ್ತರು.
ಇವರಲ್ಲಿ ಈ ಭದ್ರಾವತಿಯ ಸಾಲಿ ವಿಶಿಷ್ಟ ವ್ಯಕ್ತಿ, ನಿತ್ಯದ ಬದುಕಿನಲ್ಲಿ ಇಡೀ ಸಿಬ್ಬಂದಿಗಳು ಸಾಲ-ಸೋಲ - ಕಷ್ಟ-ನಷ್ಟ - ಅವಮಾನಗಳಿಂದ ಕುಗ್ಗುತ್ತಿದ್ದರು ಆದರೆ ಸಾಲಿ ಮಾತ್ರ ಸ್ವತಃ ಅದೇ ಕಷ್ಟದಲ್ಲಿದ್ದರೂ ಜೋಕುಗಳು, ಹಾಡುಗಳು, ರಾಮಾಯಣ, ಮಹಾಭಾರತದ ಹಾಡುಗಳನ್ನು ಹಾಡುತ್ತಾ ಇಡೀ ಗುಂಪಿನ ದುಃಖಗಳನ್ನು ನಗುವಾಗಿಸಿ ಹಗುರಾಗಿಸುವ ಸಂಪನ್ನ ವ್ಯಕ್ತಿ.
ಮೊನ್ನೆ ನನ್ನ ಕಲ್ಯಾಣ ಮಂಟಪದಲ್ಲಿ ಅವರ ಸಂಬಂದಿ ಮದುವೆಗೆ ಬಂದಾಗ ಸುಮಾರು 30 ವರ್ಷದ ನಂತರ ಬೇಟಿ ಆಯಿತು, ಇಬ್ಬರು ಗಂಡು ಮಕ್ಕಳೂ ಮದುವೆ ಆಗಿದ್ದಾರೆ ಅಂದಾಗ ಸೊಸೆಯಿಂದಿರು ಚೆನ್ನಾಗಿ ನೋಡಿಕೊಳ್ತಾರ? ಅಂದದ್ದಕ್ಕೆ ಆಶು ಕವಿ ಸಾಲಿ ಒಂದು ಹಾಡೇ ಹೇಳಿದರು ಅದನ್ನು ಇನ್ನೊಮ್ಮೆ ಹೇಳಿಸಿ ಮಾಡಿದ ವಿಡಿಯೋ ಇಲ್ಲಿದೆ.
ನಾನು ಬರೆದ ಕಥೆ - ಕಾದಂಬರಿ ತೆಗೆದುಕೊಂಡು ಹೋಗಿದ್ದಾರೆ ಓದಿ ಪೋನ್ ಮಾಡುತ್ತಾರಂತೆ.
Comments
Post a Comment