ಗೆಳೆಯ Arun Prasad ಬರೆದ ಬೆಸ್ತರರಾಣಿ ಚಂಪಕ ಪುಸ್ತಕದ ಕುರಿತ ನನ್ನ ಇನ್ನೊಬ್ಬ ಹಿರಿಯ ಗೆಳೆಯರಾದ Gangadhara Nayak ತಮ್ಮ ಗೋಡೆಯಲ್ಲಿ ಬರೆದಿದ್ದನ್ನು ನಾನು ಇತ್ತೀಚೆಗೆ ಓದಿದ್ದೆ.
ಅರೆ ಪುಸ್ತಕ ತಂದು ಇಷ್ಟು ದಿನವಾದರೂ ನಾನು ಓದಿಲ್ಲವಲ್ಲ ಅಂದುಕೊಂಡೆ.ನೋಡು ನೋಡುತ್ತಿದ್ದಂತೆ ಆ ಬರಹದ ಮೇಲೆ ಕೆಲವು ಚರ್ಚೆಗಳಾದವು.. ನನ್ನ ಇನ್ನೊಬ್ಬ ಹಿರಿಯ ಮಿತ್ರರಾದ Ganapathikl Ganapathi ಪುಸ್ತಕದಲ್ಲಿ ಐತಿಹಾಸಿಕ ಪ್ರಮಾದಗಳಿವೆ ಎಂದು ಬರೆದರು. ನನ್ನೊಳಗಿನ ಓದುಗ ಇನ್ನು ತಡಮಾಡದೇ ಪುಸ್ತಕವನ್ನು ಓದು ಎಂದು ಬಡಿದೆಬ್ಬಿಸಿದ.
ಗೆಳೆಯ ಅರುಣ್ ಪ್ರಸಾದ್ ತಮ್ಮ ಮೊದಲ ಕಾದಂಬರಿ ' ಬೆಸ್ತರರಾಣಿ ಚಂಪಕ' ವನ್ನು ಓದಲೆಂದು ಬಹು ದಿನಗಳ ಹಿಂದೆಯೇ ಕೊಟ್ಟಿದ್ದರು. ಕಾರ್ಯ ಬಾಹುಳ್ಯದಿಂದ ಓದಲು ಆಗಿಯೇ ಇರಲಿಲ್ಲ. ಕೆಲವು ದಿನಗಳಿಂದ ಅನಾರೋಗ್ಯದ ನಿಮಿತ್ತ ರೆಸ್ಟ ಮಾಡಲೇ ಬೇಕಾದ ಅನಿವಾರ್ಯತೆ. ಟೇಬಲ್ಲಿನ ಮೇಲೆ ಇದ್ದ ಈ ಪುಸ್ತಕವನ್ನು ಓದಿ ಮುಗಿಸಿದೆ...
ಓದಾದ ಬಳಿಕ ದುರಂತ ಅಂತ್ಯಕ್ಕೊಳಗಾದ ಕಥಾ ನಾಯಕಿ ಚಂಪಕಳ ಅಸಹಾಯಕ ಚಿತ್ರ ಮನಸ್ಸಿನಲ್ಲಿ ಉಳಿಯಿತು.. ಸುಂದರವಾಗಿ ರಂಗೋಲಿ ಬರೆಯುವ ಅವಳ ಕಲೆ ಕೆಳದಿ ಅರಸನ ಮನವನ್ನು ಸೆಳೆದು ಆಕೆಯನ್ನು ಓಲಿಸಿಕೊಂಡು ರಾಣಿಯನ್ನಾಗಿಸಿ ಕೊಳ್ಳುತ್ತಾನೆ.. ಆದರೆ ಆಗಿನ ಕಾಲಕ್ಕೆ ಸಮಾಜದ ಕೆಳವರ್ಗಕ್ಕೆ ಸೇರಿದ ಚಂಪಕಳು ಸಮಾಜದ ಅವಕೃಪೆಗೆ, ಅವಮಾನಗಳಿಗೆ ತತ್ತರಿಸಿ ತನ್ನದಲ್ಲದ ತಪ್ಪಿಗೆ ಪರಿತಪಿಸಿ ವಿಷಪ್ರಾಶನ ಮಾಡಿ ಸಾಯುತ್ತಾಳೆ.
ಅವಳ ಬಗ್ಗೆ ಪೂರ್ವಾಗ್ರಹ ಪೀಡಿತ ಸಮಾಜ ಆಕೆಗೆ ವೇಶ್ಯೆಯ ಪಟ್ಟ ಕಟ್ಟಿರುತ್ತದೆ.. ಆ ಚಾಳಿಯು ಪ್ರಸ್ತುತದಲ್ಲೂ ಮುಂದುವರೆದು ಚಂಪಕಳ ನೆನಪಿನಲ್ಲಿ ಅರಸು ಕಟ್ಟಿಸಿದ ಚಂಪಕಸರಸ್ಸಿನ ಬಗ್ಗೆ ಬರೆದ ಪತ್ರಿಕೆಯಲ್ಲಿ ಚಂಪಕಳನ್ನು ಮತ್ತದೇ ವೇಶ್ಯೆ ಎಂದು ಕರೆದ ಕಾರಣದ ಪ್ರತಿಭಟನೆಯ ಪ್ರತಿರೂಪವೇ ಈ ಪುಸ್ತಕ ಎಂದು ಹೇಳಬಹುದು.. ಆ ನಿಟ್ಟಿನಲ್ಲಿ ಗೆಳೆಯ ಅರುಣ್ ಪ್ರಸಾದರ ಅಂತರಂಗದ ಕಾಳಜಿಯನ್ನ, ಅಸಮಾನತೆಯ ಮನಸ್ಥಿತಿಯ ವಿರೋಧಿ ಗುಣವನ್ನ ನಾನು ಮೆಚ್ಚಿದ್ದೇನೆ.. ಮಹಿಳೆಯ ಕುರಿತಾದ ಸಮಾಜದ ಈ ವಿಕೃತ ಮನಸ್ಥಿತಿಯನ್ನು ಕೇವಲ ಮಾತಿನ ಉತ್ತರ, ಸಮಜಾಯಿಷಿಗೆ ಮಿತಗೊಳಿಸದೇ ಸಾರ್ವಕಾಲಿಕ ದಾಖಲೆಯಾಗಿ ಪುಸ್ತಕ ರೂಪದಲ್ಲಿ ತಂದ ಅರುಣ್ ಪ್ರಸಾದ ಒಳಗಿರುವ ಈ ಕೆಚ್ಚು ಖುಷಿ ಕೊಟ್ಟಿತು..
ಈ ಐತಿಹಾಸಿಕ ಕಾದಂಬರಿ ರಚನೆಯ ಹಿಂದೆ ಅವರ ಶ್ರದ್ಧೆ ಎದ್ದು ಕಾಣುತ್ತದೆ.. ವಿಷಯ ಸಂಗ್ರಹಣೆ, ಐತಿಹಾಸಿಕ ಸಂಗತಿಗಳ ಕಲೆ ಹಾಕುವಿಕೆ.. ಘಟನಾವಳಿಗಳ ಜೋಡಣೆ.. ಆಗಿನ ಕಾಲದ ಜನರ ಮನಸ್ಥಿತಿ, ಸಮಾಜದ ನಡವಳಿಕೆಗಳ ಬಗ್ಗೆ ಗಂಭೀರವಾಗಿ ಚಿಂತಿಸಿ ಬರೆದಿದ್ದಾರೆ.. ಶೋಷಿತ ಮಹಿಳೆಯೊಬ್ಬಳಿಗೆ ಗೌರವ ದೊರಕಿಸಿಕೊಡಬೇಕು ಎನ್ನುವ ಅವರ ಹಂಬಲ ಕೇವಲ ಉದ್ವೇಗ ಮತ್ತು ಸಿಟ್ಟಿನ ತಳಹದಿಯ ಮೇಲೆ ರೂಪುಗೊಳ್ಳಲಿಲ್ಲ ಎನ್ನುವುದೂ ಗಮನಾರ್ಹ.
ಈಗ ಇತಿಹಾಸಜ್ಞರು ಆ ಕಾಲದ ಕೆಳದಿ ಅರಸ ವೆಂಕಟಪ್ಪ ನಾಯಕನ ಕಾಲದಲ್ಲಿ ಇಂತಹದ್ದೊಂದು ಪ್ರಕರಣ ನಡೆದ ದಾಖಲೆಗಳಿಲ್ಲ ಎಂದು ಹೇಳುತ್ತಿದ್ದಾರೆ.. ಆ ಸಂಗತಿಯನ್ನು ಬದಿಗಿರಿಸಿಯೂ ಪುಸ್ತಕವು ಆ ಕಾಲದ ಚಿತ್ರಣಗಳನ್ನು, ಸಾಮಾಜಿಕ ಸ್ಥಿತಿಗತಿಗಳನ್ನು ಎತ್ತಿ ತೋರಿಸಿದೆ.. ಅಂತೆಯೇ ಬರವಣಿಗೆಯಲ್ಲಿ ಕೊಂಚ ಆತುರವೂ ಇದ್ದಂತೆ ಕಂಡಿತು..
Comments
Post a Comment