Skip to main content

Blog number 1261. ಅಡಿಕೆ ಯಂತ್ರ ಅವಿಷ್ಕಾರದ ಪಿತಾಮಹ ಮುಂಡಿಗೆಸರದ ಮಂಜಪ್ಪಯ್ಯ.

ಅಡಿಕೆ ಸಿಪ್ಪೆ ಸುಲಿಯುವ ಯಂತ್ರದ ಅವಿಷ್ಕಾರದ ಪಿತಾಮಹ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮುಂಡಿಗೆಸರದ ಮಂಜಪ್ಪಯ್ಯ

1945ರಲ್ಲಿಯೇ ಸಾಗರ ತಾಲ್ಲೂಕಿನ ಮುಂಡಿಗೆಸರದ ಮಂಜಪ್ಪಯ್ಯ ಅಡಿಕೆ ಸುಲಿಯುವ ಯಂತ್ರಕ್ಕೆ ಪ್ರಯತ್ನಿಸಿದ್ದರಿಂದ ಅವರು ಅಡಿಕೆ ಸುಲಿಯುವ ಯಂತ್ರ ಅವಿಷ್ಕಾರದ ಪಿತಾಮಹ ಎಂಬುದು ಉದ್ದೇಶ ಪೂವ೯ಕವಾಗಿ ಮರೆಲಾಚುತ್ತಿದ್ದಾರೆಂದು ಈ ಲೇಖನದಲ್ಲಿದೆ ಮುಂಡಿಗೆಸರದ ಮಂಜಪ್ಪಯ್ಯರ ಪೋಟೋ, ಅಡಿಕೆ ಪತ್ರಿಕೆಯಲ್ಲಿ ಇವರ ಬಗ್ಗೆ ಬಂದ ಲೇಖನ ಯಾರಾದರೂ ನೀಡಲು ಸಾಧ್ಯವೆ?

    ಅಡಿಕೆ ಸುಲಿಯುವ ಯಂತ್ರದ ಸಂಶೋಧಕ ಮುಂಡಿಗೆಸರ ಮಂಜಪ್ಪಯ್ಯನವರ ಪುಣ್ಯ ಸ್ಮರಣೆ.
     ರೈತ ಕುಲದಲ್ಲಿ ನಾವೇ ಶ್ರೇಷ್ಠರೆಂದು ಬೀಗುವ  ಅಡಿಕೆ ಬೆಳೆಗಾರರೂ ಸಹ ಎಲ್ಲಾ ಸಮಾಜದಲ್ಲಿರುವ ಶ್ರೇಷ್ಠತೆಯ ವ್ಯಸನಿಗಳ ಹಾಗೆ ನಯವಂಚನೆ, ಜಾಣ ಕುರುಡುತನದಂತಹ ಆತ್ಮಘಾತುಕುತನ ಬೆಳೆಸಿಕೊಂಡು ಚರಿತ್ರೆಗೆ ದ್ರೋಹವೆಸಗುವವರೆಂದು ಅತ್ಯಂತ ವಿಷಾದದಿಂದ ಹೇಳಬೇಕಾದ ದಿನ ಈ ತಾರೀಕು.
   ಪ್ರತಿ ಆಗಸ್ಟ್ 28 ರಂದು ಹೀಗೆಯೇ ಸಿಟ್ಟು ಬಂದು ಸಮಾಧಾನಿಸಿಕೊಂಡಿದ್ದಿದೆ. ನಮ್ಮ ಸುತ್ತ ಮುತ್ತಲಿನ ಡಂಬಾಚಾರಿಗಳ ಸನ್ಮಾನ, ಪುಗಸಟ್ಟೆ ಪ್ರಶಸ್ತಿ ಪ್ರತಾಪಿಗಳ ಅಬ್ಬರ ಅಡಿಕೆ ಅಂಗಳಕ್ಕೂ ಕಾಲಿಟ್ಟು ಊಳಿಟ್ಟರೂ ಬಾಯಿಬಿಡದ ಅವಿವೇಕಿ ಬೆಳೆಗಾರರು, ರೈತ ಸಂಘಟನೆಯ ನೇತಾರರು, ಗಜ ಗಾಂಭೀರ್ಯ ಘತ್ತಿನ ಅಡಿಕೆ ಸಹಕಾರಿ ಸಂಘಗಳ ಸೋ ಕಾಲ್ಡ್ ಬಲಿಷ್ಠರು ತುಟಿಪಿಟಕ್ಕೆನ್ನದೇ ಮಳ್ಳರಂತೆ ನುಣಚಿಕೊಳ್ಳುವುದು ನೋಡಿ ಇವರಲ್ಲಿ ಯಾರಾದರೂ ಬೆತ್ತಲಾಗಿ ಸತ್ಯ ಹೊರಬರಲೆಂದು ಚರಿತ್ರೆಯಲ್ಲಿ ಹೂತಿಡಲಾದ ಅನ್ಯಾಯದ ಪುಟವೊಂದನ್ನು, ಒಂದೇ ಒಂದು ಪುಟ ನಿಮ್ಮ ಮುಂದಿಡಲಾಗಿದೆ, ಸಂಕ್ಷಿಪ್ತವಾಗಿದೆ.
    ಸಾಗರ ತಾಲ್ಲೂಕಿನಲ್ಲೇ ಮೊದಲು ಕಾರು ಹೊಂದಿದ್ದ ಕುಟುಂಬದ ಹೆಗ್ಗೋಡು ಸಮೀಪ ಮುಂಡಿಗೆಸರದ M R ಮಂಜಪ್ಪಯ್ಯನವರು...ಹುಟ್ಟಿದ್ದು 26-12-1926. ತಮ್ಮ ಶಾಲಾ ಕಲಿಕೆಗೆ 8ನೇ ತರಗತಿಯಲ್ಲೇ ವಿದಾಯ ಹೇಳಿ ಕೃಷಿಯಲ್ಲಿ ತೊಡಗಿದ್ದರು. ವಿರಳ ಜನಸಂಖ್ಯೆಯ ಮಲೆನಾಡಿಗೆ ಅಂದು ಅಡಿಕೆ ಸುಲಿಯಲು ಬಯಲುನಾಡಿನಿಂದ ಜನರನ್ನು ಕರೆತರಬೇಕಿತ್ತು. ಈ ಕಿರಿಕಿರಿ ಬೇಡವೆಂದು ಮಂಜಪ್ಪಯ್ಯ ತಮ್ಮ ಹದಿನೆಂಟರ ಪ್ರಾಯದಲ್ಲಿ ಅಂದರೆ 1945 ರಲ್ಲೇ ಅಡಿಕೆ ಸುಲಿಯುವ ಯಂತ್ರದ ಅನ್ವೇಷಣೆಗೆ ಶುರುವಿಟ್ಟುಕೊಳ್ಳುತ್ತಾರೆ. (ಇಪ್ಪತ್ತೇಳು ವರ್ಷಗಳ ಹಿಂದಿನ 'ಅಡಿಕೆ ಪತ್ರಿಕೆ '  ನವೆಂಬರ್ 1993 ರ ಲೇಖನವೊಂದನ್ನು ಗಮನಿಸಿ.) 
   1968-69 ರಲ್ಲಿ ಇವರ ಮೊದಲ ಯಂತ್ರ ಅಡಿಕೆ ಸುಲಿಯಲು ಯಶಸ್ವಿಯಾಗಿ ಎಲ್ಲರ ಹುಬ್ಬೇರುವಂತಾಯಿತು. ಇನ್ನಷ್ಟು ಯಶ ಗಳಿಸಲು ಎರಡನೇ ಮಹಾಯುದ್ಧಕ್ಕೆ ಅಣಿಯಾಗುತ್ತಲೇ ಇವರ ಮಗ ರಾಮಮೂರ್ತಿಯವರು ಶಾಲಾ ದಿನಗಳಲ್ಲಿಯೇ ತಂದೆಯೊಂದಿಗೆ ಕೈಜೋಡಿಸಿದ್ದರು. ಇಬ್ಬರೂ ಇಂಜಿನಿಯರಿಂಗ್ ಓದಿಲ್ಲ, ವರ್ಕ್ ಶಾಪ್ ಇಟ್ಟುಕೊಂಡವರಲ್ಲ. ಹಠಕ್ಕೆ ಕೊನೆಯಿದೆ ಎಂದು ನಂಬಿದವರಲ್ಲ. 1984-85 ರಲ್ಲಿ ಇವರು ರುಪಿಸಿದ್ದಂತು ಅದ್ಭುತ ಮಾದರಿ. ಏಕೆಂದರೆ ಇಂದು ನಾವು ನೋಡುತ್ತಿರುವ ವಿವಿಧ ತಯಾರಕರು ಮಾರುತ್ತಿರುವ ಅಡಿಕೆ ಸುಲಿಯುವ ಜನಪ್ರಿಯ ಯಂತ್ರಗಳಿಗೆಲ್ಲಾ ಇದೇ ಬೀಜಾಕ್ಷರ. 
    ಈ ಯಂತ್ರದಲ್ಲಿ ಬಳಸಿದ ತಂತ್ರಜ್ಞಾನದ ಆಧಾರದಲ್ಲೇ  ಬ್ಲೇಡ್ ಮೌಂಟೆಡ್ ಅಲ್ಯೂಮಿನಿಯಮ್ ಚಕ್ರಗಳು ಅಡಿಕೆ ಸುಲಿಯುವ ಕ್ರಮಗಳನ್ನು ವಿವರಿಸಿ ಇವರು ಬರೆದ ಚಿತ್ರ (ಡ್ರಾಯಿಂಗ್) ಗಳನ್ನು ನೋಡಿ ತಾಂತ್ರಿಕ ವರದಿಗೆ ಬಂದ ಇಂಜಿನಿಯರುಗಳು ಮೂಕವಿಸ್ಮಿತರಾದರು. ಈ ಗೀಳಿನಿಂದಾಗಿಯೇ ಮಂಜಪ್ಪಯ್ಯನವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಬಿಟ್ಟಿರುತ್ತದೆ. ಪೇಟೆಂಟ್ ತೆಗೆದುಕೊಳ್ಳಬೇಕೆಂಬ ಹಂಬಲ.... ಕಾಸಿಲ್ಲ. ವಾಣಿಜ್ಯ ಉತ್ಪಾದನೆ ಮಾಡಿ ರೈತರ ಕೈಗಿಡಬೇಕೆಂದು ಆಸೆ...ಯಾರೂ ಸಹಾಯ ಹಸ್ತ ಚಾಚಲಿಲ್ಲ. ಅಸ್ತವ್ಯಸ್ತವಾದ ಬದುಕಿನ ಬಂಡಿ. ಆ ಘಳಿಗೆಗೆ ಹೊಳೆಯುವ ಚಿಕ್ಕ ಪುಟ್ಟ ಮಾರ್ಪಾಡುಗಳಿಗೆ ಕೊನೆಗೂ MAMCOS ನವರು ಕೆಲವು ಸಂಶೋಧಕರಿಗೆ ಪ್ರೋತ್ಸಾಹ ಹಣ ನೀಡುತ್ತೇವೆಂದಾಗ 1995-96 ರಲ್ಲಿ ಅರ್ಜಿ ಹಾಕಿ ಪಡೆಯಬೇಕಾಯಿತು. ಆರೋಗ್ಯ ಹದಗೆಟ್ಟಿದ್ದರಿಂದ ಮತ್ತೊಮ್ಮೆ ಮಗ ರಾಮಮೂರ್ತಿಯವರ ಹೆಸರಿನಲ್ಲಿ ಇದೇ MAMCOS ನವರಿಂದ 2005 ರಲ್ಲಿ ಪ್ರೋತ್ಸಾಹ ಧನ ಪಡೆದು ಸಣ್ಣ ಸಣ್ಣ ಬದಲಾವಣೆ ಮಾಡಿದರೂ ಬೆಂಗಳೂರು, ಚೆನ್ನೈ, ದೆಹಲಿ ಓಡಾಡಿ ಪೇಟೆಂಟ್ ಪಡೆಯಲಾಗಲಿ, ವಾಣಿಜ್ಯ ಉತ್ಪಾದನೆಗೆ ಸಹಾಯವಾಗಲಿ ದೊರೆಯಲಿಲ್ಲ. 
    ಇವರ ಅಸಹಾಯಕತೆ ಒಂದು ಕಡೆ ಮತ್ತೊಂದೆಡೆ ಹೊರೆಯಾಗದಂತೆ ತಂತ್ರಜ್ಞಾನವನ್ನು ರೈತರಿಗೆ ತಲುಪಿಸುವ ಇವರ ಉದಾರತೆಯನ್ನು ವಿಫಲಗೊಳಿಸಲು ಇವರಿಂದಲೇ ಪಡೆದ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವ ದುರುಳರ ಸಂಚು. ರೈತರಿಗಾಗಿ ಹಠ ಬಿಡದಿದ್ದ ಮಂಜಪ್ಪಯ್ಯನವರು ದ್ರೋಹ ಸಹಿಸಿಕೊಳ್ಳಲಾಗದೆ ತಮ್ಮ ಆರು ದಶಕಗಳಿಗೂ ಹೆಚ್ಚು ಕಾಲದ ಸಂಶೋಧನೆಯ ಗೀಳಿಗಾಗಿಯೇ ಜೀವ ಬಿಟ್ಟಿದ್ದು 25 - 08 - 2008. ಈ ದಿನ ಮಾನವಿಟ್ಟುಕೊಳ್ಳಬೇಕೆಂಬ ಅಡಿಕೆ ಬೆಳೆಗಾರರ ಪ್ರಾತಸ್ಮರಣೀಯ ಮುಂಡಿಗೆಸರ ಮಂಜಪ್ಪಯ್ಯನವರ ಪುಣ್ಯ ಸ್ಮರಣೆ. 
      ಪೇಟೆಂಟ್ ಹಾಗೂ ವಾಣಿಜ್ಯ ಉತ್ಪಾದನೆ ಸಾಧ್ಯವಾಗದೆ  ತಮ್ಮ ತಂದೆ ತೀರಿಕೊಂಡ ಬೇಸರದಿಂದ ರಾಮಮೂರ್ತಿ ತನ್ನ ತಂದೆಯವರ ಶ್ರಮಕ್ಕೆ ಸಿಗದ ಪ್ರತಿಫಲ ತನಗೂ ಬೇಡವೆಂದರು. ತಮ್ಮ ಬಳಿಯಿದ್ದ ಎಲ್ಲಾ ಮಾದರಿಯ ಯಂತ್ರಗಳನ್ನು, ಅವುಗಳ ತಾಂತ್ರಿಕ ಮಾಹಿತಿಗಳನ್ನು ಎಲ್ಲರಿಗೂ ಈ ದಿನದವರೆಗೂ ಹಂಚುತಿದ್ದು ಯಾರೂ ದಯವಿಟ್ಟು ಈ ಯಂತ್ರಕ್ಕೆ ಪೇಟೆಂಟ್ ಪಡೆಯಬೇಡಿ ಎಂದು ಅಂಗಲಾಚುತ್ತಾರೆ. ಏಕೆಂದರೆ ಇದರಿಂದ ರೈತರಿಗೆ ಅನ್ಯಾಯವಾಗುತ್ತದೆಂದು. 
    ರೈತ ವಿಜ್ಞಾನಿ ;ತಂತ್ರಜ್ಞಾನಿ ಅಪ್ಪ ಮಕ್ಕಳು ದಡ್ಡರಲ್ಲ. ಆದರೇನು ದುಷ್ಟರಲ್ಲವಲ್ಲ? ಇವರ ಅನ್ವೇಷಣೆಯನ್ನು ತಮ್ಮದೆಂದು ಪೇಟೆಂಟ್ ಪಡೆಯಲು ಅರ್ಜಿ ಗುಜರಾಯಿಸಿದ ಪುಂಗ್ಲಿಗಳಿಗೆ ತಮ್ಮೆದುರೇ ಸನ್ಮಾನ ನಡೆದಾಗಲೂ ಸ್ಥಿತಪ್ರಜ್ನೆ ಮೆರೆದ ರಾಮಮೂರ್ತಿ ಯಾರೆಂದರೆ ಮಂಜಪ್ಪಯ್ಯನವರ ಮಗನೇ ಹೌದು. 
    ನೇಪಥ್ಯದಲ್ಲಿ ಪ್ರಶಸ್ತಿಗೆ ಶಿಫಾರಸು ಮಾಡುವ ನೇತಾಗಳು, ಅದನ್ನು ನೋಡಿ ಚಪ್ಪರಿಸಿ ಚಪ್ಪಾಳೆ ತಟ್ಟುವ ರೈತ ನೇತಾಗಳು ಯಾರ ಯಾರ ಮಕ್ಕಳು? ವಿಮಾನವನ್ನು ಮೊದಲ ಬಾರಿಗೆ ಕೆಲವೇ ಮೀಟರುಗಳಷ್ಟು ದೂರ ಹಾರಿಸಿದ್ದಷ್ಟೆ. ಈಗ ಐದು ಹತ್ತು ಸಾವಿರ ಕಿಲೋಮೀಟರುಗಳ ದೂರ ಹಾರುವ ವಿಮಾನಗಳನ್ನು ತಯಾರಿಸಿದ್ದರೂ ಮೊದಲು ಹಾರಿಸಿದ ರೈಟ್ ಸಹೋದರರ ಹೆಸರನ್ನೇ ಹೇಳುತ್ತಾರಲ್ಲವೆ? ಅಡಿಕೆ ಸುಲಿಯುವ ಯಂತ್ರವನ್ನು ಪರಿಪೂರ್ಣವಾಗಿ ಸಿದ್ಧಗೊಳಿಸಿ ಯಶಸ್ವಿಯಾದ ಮಂಜಪ್ಪಯ್ಯನವರ ಹೆಸರು ಬಿಟ್ಟು ಬೇರೆಯವರ ಹೆಸರು ಹೇಳುವುದನ್ನು ಬಾಯಿ ಹಾದರ ಎನ್ನಬೇಕಲ್ಲವೇ?

- ತಿರುಮಲ,  ನಾನು ಒಬ್ಬ ಸಾಮಾನ್ಯ ಅಡಿಕೆ ಬೆಳೆಗಾರ,   ಸತ್ಯ ಹೇಳಬೇಕು ಅನಿಸಿತು ಅದಕ್ಕೆ ಬರೆದೆ  ನಿಮಗೇನಾದರು ಸತ್ಯಪರಿಶಿಲಿಸಬೇಕು ಎಂದರೆ ಮ್ಯಾಗಸೆ ಪ್ರಶಸ್ತಿಯ ಕೆ.ವಿ.ಸುಬ್ಬಣ್ಣ ರವರ ಊರಿಗೆ ಹೋಗಿ  ವಿಚಾರಿಸಿ.  ಕ್ರಾಸ್ ಚೆಕ್ ಮಾಡಿಕೊಳ್ಳಿ,    ನಿಜವಾದ ಸದಾಕರ ಹೆಸರು ಇತಿಹಾಸದ ಪುಟ ಸೇರಲಿ ಎಂಬುದು ನನ್ನ ಕಾಳಜಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...