Blog number 1043. ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ಗೆ ಮಾತ್ರ ಸೀಮಿತವಾಗಬಾರದು, ಕನ್ನಡದ ಬಗ್ಗೆ ರೋಷಾವೇಷದ ಉದ್ದುದ್ದ ಬಾಷಣ ಮಾಡುವ ಕನ್ನಡದ ಹೋರಾಟಗಾರರೆ ನಿಮ್ಮ ಮಕ್ಕಳಿಗೆ ಕನಿಷ್ಟ ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಣ ಕೊಡಿಸಿದ್ದೀರಾ? ಮಾತಲ್ಲಿ ಕನ್ನಡ ನಡೆಯಲ್ಲಿ ಇಂಗ್ಲೀಷ್ ಹೀಗಾದರೆ ಕನ್ನಡ ಭಾಷೆ ಉಳಿದೀತೆ?, 2022 ರ ಕನ್ನಡ ರಾಜ್ಯೋತ್ಸವ ಸಕಾ೯ರಿ ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಣದ ಅಭಿಯಾನವಾಗಲಿ.
ನನ್ನ ಬಹಳಷ್ಟು ಗೆಳೆಯರು ಕನ್ನಡ ಅಭಿಮಾನಿಗಳು, ಕನ್ನಡ ಕಡ್ಡಾಯ ಅಂತೆಲ್ಲ ಹೋರಾಟ ಮಾಡುವ ವಿಚಾರವಂತರು, ಸಾಹಿತಿಗಳು, ಪತ್ರಕರ್ತರು, ಲೇಖಕರು, ಕನ್ನಡ ಶಾಲೆ ಶಿಕ್ಷಕರು ಅವರೆಲ್ಲರ ಪ್ರಭಾವದಿಂದ ನನ್ನ ಮಕ್ಕಳನ್ನು ಸರ್ಕಾರಿ ಅಂಗನವಾಡಿಯಿಂದ ಪಿಯು ತನಕ ಸರ್ಕಾರಿ ಕನ್ನಡ ಮಾಧ್ಯಮದಲ್ಲೇ ಓದಿಸಿದೆ, ಆದರೆ ಕನ್ನಡದ ಹೋರಾಟಗಾರ ಗೆಳೆಯರು ಖಾಸಾಗಿ ಕಾನ್ವೆಂಟ್ ನಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸಿದರು... ಅಲ್ಲ ನಿಮ್ಮೆಲ್ಲ ಹೋರಾಟ ಕನ್ನಡದ ಅಭಿಮಾನ ಇದೇನಾ? ಅಂದಿದ್ದಕ್ಕೆ ಕನ್ನಡ ಮಾಧ್ಯಮ - ಸರ್ಕಾರಿ ಶಾಲೆಯಲ್ಲಿ ಎಕ್ಸ್ ಪೋಜರ್ ಸಿಗೋದಿಲ್ಲ ಅಂತಾರೆ.
ಇದರಿಂದ ಒಂದು ಅನುಕೂಲ ಆಗಿದೆ ನನ್ನ ಮಕ್ಕಳು ಕನ್ನಡದ ಸಾಹಿತ್ಯ ಎಲ್ಲಾ ಓದುತ್ತಾರೆ ನಾನು ಬರೆದ ಪುಸ್ತಕ ಲೇಖನ ವಿಮರ್ಶೆ ಮಾಡುತ್ತಾರೆ ಆದರೆ ನನ್ನ ಕನ್ನಡ ಅಭಿಮಾನಿ ಇಂಗ್ಲೀಷ್ ಕಾರ್ಯಕಾರಿಣಿ ಮಿತ್ರರ ಮಕ್ಕಳು ಕನ್ನಡ ಸಾಹಿತ್ಯನೂ ಓದುವುದಿಲ್ಲ, ಇಂಗ್ಲೀಷ್ ಸಾಹಿತ್ಯವನ್ನು ಓದುವುದಿಲ್ಲ ಅಷ್ಟೆ ಅಲ್ಲ ಅವರ ಅಪ್ಪಂದಿರ ಪುಸ್ತಕ ಬರಹವೂ ಓದುವುದಿಲ್ಲ!!.
ಹೋರಾಟ ಬಾಯಲ್ಲಿ ಮಾತ್ರ ಮಾಡುವ ಆದರೆ ಕೃತಿಯಲ್ಲಿ ಬೇರೆ ಮಾಡುವ ಓರಾಟಗಾರರ ಬಗ್ಗೆ ಬರೆಯಲೇ ಬೇಕು, ನಮ್ಮ ಕನ್ನಡ ಸಕಾ೯ರಿ ಶಾಲೆ ಶಿಕ್ಷಕರು ಕೂಡ ಅವರೇ ಪಾಠ ಮಾಡುವ ಶಾಲೆಯಲ್ಲಿ ಅವರ ಮಕ್ಕಳನ್ನೆ ಸೇರಿಸುವುದಿಲ್ಲ, ಇದೆಲ್ಲದರಿಂದ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳು ಇಲ್ಲದೆ ಮುಚ್ಚುತ್ತಿದೆ.
ಇಂತಹ ಮಾತೃ ಬಾಷಾ ನಿರಾಸಕ್ತಿ ತಮಿಳು, ಮಲೆಯಾಳ, ತೆಲಗು ಮತ್ತು ಮರಾಠಿ ಬಾಷಾ ಕುಟುಂಬದಲ್ಲಿ ಕಂಡುಬರುವುದಿಲ್ಲ ಅವರು ವಿದೇಶದಲ್ಲಿದ್ದರು ಮಾತೃ ಬಾಷೆಯಲ್ಲಿಯೇ ಅಕ್ಷರಬ್ಯಾಸ ಮಾಡಿಸುತ್ತಾರೆ.
1997ರಲ್ಲಿ ಸುವರ್ಣ ಸ್ವಾತಂತ್ಯ ಆಚರಣೆಯ ಸ್ಮರಣೆಗೆ ಸರ್ಕಾರ ನಮ್ಮ ಜಿಲ್ಲೆಯಲ್ಲಿ ಪ್ರತಿ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒ0ದು ಸರ್ಕಾರಿ ಶಾಲೆ ಅಂತೆ 27 ಹೊಸ ಶಾಲೆ ಪ್ರಾರಂಬಿಸಲು ಅನುಮತಿ ನೀಡಿತು ಆದರೆ ಬಹಳಷ್ಟು ಸದಸ್ಯರು ನಿರಾಸಕ್ತಿ ತೋರಿದರು ಆದರೆ ನಾನು ಅವರ ಅನುದಾನವೂ ಬಳಸಿ ನನ್ನ ಕ್ಷೇತ್ರದಲ್ಲಿ 10 ಕ್ಕೂ ಹೆಚ್ಚು ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಪ್ರಾರಂಬಿಸಿದೆ ಈಗ ಇದರಲ್ಲಿ ಎರೆಡು ಶಾಲೆಗಳು ವಿದ್ಯಾರ್ಥಿಗಳು ಇಲ್ಲದೆ ರದ್ದಾಗಿದೆ ಕಾರಣ ಕಾನ್ವೆಂಟ್ ಮೋಹ.
ಕನ್ನಡ ಹೋರಾಟಗಾರರು ಈ ರೀತಿ ದ್ವಿಮುಖ ನೀತಿಗಿಂತ ಎಲ್ಲರೂ ಕನ್ನಡ ಬಾಷೆ ಒದುವುದು ಬರೆಯವುದು ಬೇಡ ನಮ್ಮದು ರಾಜಕಾರಣಕ್ಕೆ ಸೀಮಿತ ಕನ್ನಡದ ಹೋರಾಟ ಅಂತ ಹೇಳಿಕೊಳ್ಳುವುದು ಒಳಿತು.
ಇಲ್ಲಿ ಕನ್ನಡದ ಬಗ್ಗೆ ಪ್ರತಿಕ್ರಿಯಿಸುವವರು ತಮ್ಮ ಮಕ್ಕಳನ್ನು ಯಾವ ಶಾಲೆಯಲ್ಲಿ ಓದಿಸುತ್ತೀರಿ ಎಂಬುದು ತಿಳಿಸಬಹುದಾ?.
ನಮ್ಮ ಹಳ್ಳಿಯಲ್ಲಿ ಧರ್ಮಸ್ಥಳ ಸಂಘದವರು ಆಗಾಗ್ಗ ಮದ್ಯ ವರ್ಜನ ಶಿಭಿರ ಮಾಡುತ್ತಾರೆ ಕಾಯ೯ಕ್ರಮ ಆಯೋಜಿಸಿದವರು ಮತ್ತು ಫಲಾನುಭವಿಗಳು ನನ್ನ ಶಿಷ್ಯರೇ ಆಗಿರುತ್ತಾರೆ, ಉದ್ಘಾಟನೆ ಮಾಡಿಸುವುದು ಶ್ರೀಮಂತರು ಪ್ರಸಿದ್ದರಾದವರಿ೦ದ (ಅವರೂ ನಿತ್ಯ ಗುಟ್ಟಾಗಿ ಮಧ್ಯಪಾನ ಮಾಡುವವರೆ) ಇದರಿಂದ ನೈತಿಕ ಪಾಠ ಏನು ಕಲಿಯಬಹುದು?.
ಇದರ ಮದ್ಯದಲ್ಲಿ ಯಾರೋ ಒಬ್ಬರು ಅನ್ಯ ರಾಜ್ಯದ ಬ್ಯಾಂಕ್ ಸಿಬ್ಬಂದಿಗೆ ಕನ್ನಡದಲ್ಲಿ ಚೆಕ್ ಬರೆಯುವುದು ಅದನ್ನೇ ದೊಡ್ಡ ರಾದ್ಧಾಂತ ಮಾಡುವುದು, ಅದನ್ನು ಮಾಧ್ಯಮದವರು ಬೂತ ಕನ್ನಡಿಯಲ್ಲಿ ತೋರಿಸುವುದು ಮಾಡುತ್ತಾರೆ ಅಥವ ಹೊಟ್ಟೆಪಾಡಿಗಾಗಿ ಬೇರೆ ರಾಜ್ಯದಿಂದ ಬಂದ ಕೂಲಿ ಕಾರ್ಮಿಕರಿಗೆ ಕನ್ನಡದಲ್ಲಿ ಮಾತಾಡೆಂದು ದಮಕಿ ಹಾಕುತ್ತಾರೆ.
.
ರಾಷ್ಟ್ರಕವಿ ಕುವೆಂಪು ಎಲ್ಲರೂ ನೆನಪಾಗುತ್ತಾರೆ
Comments
Post a Comment